ಓದದೆಯೇ ಪರೀಕ್ಷೆನಲ್ಲಿ ಪಾಸಾಗ್ಬಹುದಾ?

 

ಓದದೆಯೇ ಪರೀಕ್ಷೆಯಲ್ಲಿ ಪಾಸ್ ಆಗಬಹುದೇ ಎಂದು ಒಬ್ಬ ವಿದ್ಯಾರ್ಥಿಯ ಪ್ರಶ್ನೆಯನ್ನು ಉತ್ತರಿಸುತ್ತಾ ಸದ್ಗುರುಗಳು ಪ್ರಥಮವಾಗಿ ಪಾಸ್ ಅಥವಾ ಫ಼ೈಲ್ ಆಗುವ ಉದ್ದೇಶ ಏನು ಎಂದು ವಿಶ್ಲೇಷಿಸುತ್ತಾರೆ.

Odadeye pareeksheyalli paasagbahuda?

ಲಿಪ್ಯಂತರ:

ಪ್ರಶ್ನೆ: ನನ್ ಹೆಸ್ರು ನರೇಂದ್ರಸಿಂಗ್. ನನ್ನ ಪ್ರಶ್ನೆ ಏನಂದ್ರೆ ಓದ್ದೇನೇ ಪರೀಕ್ಷೆನಲ್ ಪಾಸಾಗೋದ್ ಹೇಗೆ?

(ಜೋರಾದ ನಗು/ಚಪ್ಪಾಳೆ).

ಸದ್ಗುರು: [Sadhguru - ಓ.. ನರೇಂದ್ರಸಿಂಗ್ (ನಗು)!] ಓದದೆ ಪರೀಕ್ಷೆನಲ್ ಪಾಸಾಗೋದ್ ಹೇಗೆ (ನಗು)? [Sadhguru - "My wish, and my blessing is... My wish and my blessing is, you should not pass"] ನನ್ನ ಹಾರೈಕೆ ಮತ್ತು ಆಶೀರ್ವಾದ ಏನಂದ್ರೆ ನೀನು ಪಾಸ್ ಆಗ್ಬಾದ್ರು (ನಗು ಚಪ್ಪಾಳೆ). ಯಾಕಂದ್ರೆ ನೀನು ಓದ್ದೇನೇ ಪರೀಕ್ಷೆನಲ್ ಪಾಸಾಗೋದ್ ಹೇಗೆ ಅಂತ ಹೇಳ್ದಾಗ ನೀನ್ ಹೇಳ್ತಾ ಇರೋದು ಏನಂದ್ರೆ, ಯಾವ್ದೇ ವಿಷಯದ ಬಗ್ಗೆ ಏನೂ ಗೊತ್ತಿಲ್ದೇನೇ ಪ್ರಮಾಣ ಪತ್ರ ಪಡ್ಕೊಳೋದು ಹೇಗೆ ಅಂತ. ಒಂದ್ ವೇಳೆ ನೀನ್ ಡಾಕ್ಟ್ರಾಗ್ ಬಿಟ್ರೆ, ಅದ್ರ್ ಬಗ್ಗೆ ಏನ್ ತಿಳ್ಕೊಳ್ಬೇಕೋ ಅದನ್ನ ತಿಳ್ಕೊಳ್ದೇನೇ ನೀನು ಪಾಸಾಗಿ ಡಾಕ್ಟ್ರಾಗ್ ಬಿಟ್ರೆ - ನೀನು ಎಷ್ಟು ಜೀವಗಳನ್ನ ತೆಗೀತೀಯಾ ಯಾರಿಗ್ಗೊತ್ತು (ನಗು). ಓದ್ದೇನೇ, ಏನ್ ತಿಳ್ಕೊಳ್ಬೇಕೋ ಅದನ್ನ ತಿಳ್ಕೊಳ್ದೇನೇ, ನೀನು ಇಂಜಿನೀಯರ್ ಆಗ್ಬಿಟ್ಟೆ, ಕೋಲ್ಕತ್ತ ಬ್ರಿಡ್ಜ್ ನ ಕಟ್ಟಿದೆ (ನಗುತ್ತ), ಯಾರದ್ರು ಆ ಸೇತುವೆ ದಾಟೋದಿಕ್ಕಿಂತ ಮುಂಚೇನೇ ಅದು ಜನ್ರ ತಲೆ ಮೇಲೆ ಕುಸಿದು ಬಿದ್ದು ಪ್ರಾಣಗಳನ್ನ ತೆಗಿಯುತ್ತೆ. ಬೇರೆ ಯಾವ್ ವಿಪ್ಪತ್ತುಗಳಿಗೆ ನೀನ್ ಕಾರಣನಾಗ್ತೀಯೋ ನಮಗ್ ಗೊತ್ತಿಲ್ಲ.

ಈಗ ನಿನಗ್ ಆಗಿರೋದ್ ಏನೂಂದ್ರೆ ಇಷ್ಟೆ ನೀನು ನಿನ್ ಅಹಂಕಾರಕ್ಕೆ ಪುಷ್ಟಿನೀಡಿದೀಯಾ ಮತ್ತು ನಿನ್ನ ಆಸೆಗಳನ್ನ ಹೆಚ್ಚಿಸ್ಕೊಂಡಿದ್ದೀಯಾ. ಇಲ್ಲ. ನೀನ್ ಮಾಡಬೇಕಾಗಿರೋದ್ ಏನೂಂದ್ರೆ ನೀನು ನಿನ್ ಬುದ್ಧಿಗೆ ಪುಷ್ಟಿನೀಡ್ಬೇಕು ಮತ್ತು ನಿನ್ ಪ್ರಾವೀಣ್ಯತೆಯನ್ನ ಹೆಚ್ಚಿಸ್ಕೋಬೇಕು. ಇದು ನೀನು ಮಾಡ್ಬೇಕಾಗಿರೋದು. ಶಿಕ್ಷಣ ಅಂದ್ರೆ ಇದೇ, ಜೀವನ ಅಂದ್ರೆ ಇದೇ. ಆದ್ರೆ ದುರಾದೃಷ್ಟದಿಂದ ಪರೀಕ್ಷೆನಲ್ ಪಾಸಾಗೋದೇ ಶಿಕ್ಷಣ ಅಂತ ಅಂದ್ಕೊಂಡಿದೀಯ. ಶಿಕ್ಷಣ ಅಂದ್ರೆ ಪರೀಕ್ಷೆನಲ್ ಪಾಸಾಗೋದಲ್ಲ, ಶಿಕ್ಷಣ ಅಂದ್ರೆ ಕಲಿಯುವಿಕೆ. ಜಗತ್ತು ಇದನ್ನ ಮರೆತಿರೋ ಹಾಗೆ ಕಾಣ್ಸುತ್ತೆ.

ಯಾರು ಓದ್ದೇ ಪರೀಕ್ಷೆಯಲ್ ಪಾಸಾಗ್ಬೇಕು ಅಂತ ಬಯಸ್ತಾರೋ, ಯಾರು ಆಟವನ್ನು ಆಡ್ದೇ ಗೆಲ್ಬೇಕು ಅಂತ ಬಯಸ್ತಾರೋ, ಯಾರು ತಾವು ಮಾಡ್ದೇ ಇರೋ ಕೆಲ್ಸಕ್ಕೆ ಗೌರವವನ್ನ ಬಯಸ್ತಾರೋ, ಇಂತ ಜನ್ರು ಒಂದನ್ನಂತೂ ಸಾಧಿಸ್ತಾರೆ [Sadhguru - "They will die without living"] ಅವ್ರು ಜೀವನವನ್ನ ಜೀವಿಸ್ದೇನೇ ಸಾಯ್ತಾರೆ (ಚಪ್ಪಾಳೆಗಳು). ಇದೊಂದನ್ನ ಅವ್ರು ಸಾಧಿಸ್ತಾರೆ. ಯಾಕಂದ್ರೆ ನೀವು ಜೀವಿಸ್ಬೇಕು ಅಂದ್ರೆ ಜೀವನ್ದಲ್ಲಿ ನಿಮ್ಮನ್ನ ತೊಡಗಿಸ್ಕೊಬೇಕು, ನಿಮ್ಮ ಬುದ್ಧಿ ಮತ್ತು ಕೌಶಲಗಳಿಗೆ ಪುಷ್ಟಿ ನೀಡ್ಬೇಕು. ಯಾವ್ದಾದ್ರೂ ಕೆಲಸವನ್ನ ನಿಮ್ ಸಾಮರ್ಥ್ಯ ಮೀರಿ ಮಾಡೋದು ಇದ್ರಲ್ಲಿ ಸಾರ್ಥಕತೆ ಇದೆ, ಇದ್ರಲ್ಲಿ ಆನಂದ ಇದೆ, ಇದ್ರಲ್ಲಿ ಜೀವ್ನ ಇದೆ. ಓದ್ದೇನೇ ಪರೀಕ್ಷೆ ಪಾಸಾಗೋದ್ರಲ್ಲಿ, ಆಟವಾಡ್ದೇ ಗೆಲ್ಲೋದ್ರಲ್ಲಿ, ಅರ್ಹತೆ ಇಲ್ದೇ ಗೌರವ ಪಡೆಯೋದ್ರಲ್ಲಿ ಬರೀ ಅಹಂಕಾರ ತೃಪ್ತಿಗೊಳ್ಳುತ್ತೆ ಅಷ್ಟೆ. ನಿಮ್ ಸುತ್ತ ಯಾರೆಲ್ಲಾ ಫೇಲ್ ಆಗಿದಾರೋ ಅವ್ರನ್ ನೋಡ್ತಾ ನಾನ್ ಅವ್ರಿಗಿಂತ ಸ್ವಲ್ಪ ಹೆಚ್ಚು ಅಂತ ಅಂದ್ಕೊಳ್ತೀರಾ ಅಷ್ಟೆ. ನಾನಾಗ ಹೇಳ್ದಂಗೆ, ಖಂಡಿತ್ವಾಗ್ಲೂ ನೀವು ಜೀವನವನ್ನ ಜೀವಿಸ್ದೇನೇ ಸಾಯ್ತೀರಾ.

ಓದದೇ ಪರೀಕ್ಷೆನಲ್ ಪಾಸಾಗೋದು ಯಶಸ್ಸು ಅಂತ ನೀವ್ ಅನ್ಕೊಂಡಿದ್ರೆ, ಜೀವನವನ್ನ ಜೀವಿಸ್ದೇ ಸಾಯೋದು ಖಂಡಿತವಾಗ್ಲೂ ಮಹಾ ಯಶಸ್ಸು ಮತ್ತು ಅದ್ರಲ್ ನೀವ್ ಯಶಸ್ವಿ ಆಗ್ತೀರಿ ಕೂಡಾ. ಏನು, ನರೇಂದ್ರಸಿಂಗ್ ಧೋನಿ? (ನಗುತ್ತ) ಅಥವಾ ಮೋದಿನಾ (ನಗುತ್ತ)? ಇಲ್ಲ, ಇದು ಎಲ್ಲದ್ರಲ್ಲಿ ಚಾಂಪಿಯನ್ ಆಗಿದ್ದಂಗೆ. ಯಾರು ಓದದೇ ಪರೀಕ್ಷೆಯಲ್ ಪಾಸಾಗೋದಿಕ್ ಬಯಸ್ತಾರೋ, ಅವ್ರು ಎಲ್ಲದ್ರಲ್ಲಿ ಚಾಂಪಿಯನ್ ಆಗಿದ್ದಂಗೆ. ನೀವು ಎಲ್ಲದ್ರಲ್ಲಿ ಚಾಂಪಿಯನ್ ಆಗಿದ್ರೆ ನೀವೊಬ್ಬ ಪೆಂಗ ಅಂತರ್ಥ. ಯಾವುದೋ ಒಂದ್ ವಿಷ್ಯದಲ್ ಚಾಂಪಿಯನ್ ಆಗಿದ್ರೆ, ಅದರ್ ಹಿಂದೆ ಅಗಾಧವಾದ ಪ್ರಯತ್ನ, ಶ್ರಮ ಇರುತ್ತೆ. ಆದ್ರೆ ನೀವು ಎಲ್ಲದ್ರಲ್ಲಿ ಚಾಂಪಿಯನ್ ಆಗಿದ್ರೆ ನೀವೊಬ್ಬ ಪೆಂಗ ಅಷ್ಟೆ. ನೀವು ಎಲ್ಲದ್ರಲ್ಲಿ ಚಾಂಪಿಯನ್ ಆಗ್ಬಿಟ್ಟಾಗ, ನಿಮಗ್ ಏನೂ ಮಾಡೋದಿಕ್ ಬರಲ್ಲ ಅಂತರ್ಥ! ಅಲ್ವಾ? ನಿಮಗ್ ಏನೂ ಮಾಡೋದಿಕ್ ಬರಲ್ಲ. [Sadhguru - (ನಗು) ನರೇಂದ್ರಸಿಂಗ್...] ನನ್ ಹಾರೈಕೆ ಮತ್ತು ಆಶೀರ್ವಾದ ಏನಂದ್ರೆ, ಓದದೇ ಇರೋರೆಲ್ಲಾ ಫೇಲ್ ಆಗಬೇಕು, ಆಟ ಆಡಲು ಗೊತ್ತಿಲ್ದೇ ಇರೋರೆಲ್ಲಾ ಸೋಲ್ಬೇಕು. ಹೌದ್ ತಾನೇ?

ಸಭಿಕರು: ಹೌದು.

ಸದ್ಗುರು: ಅರ್ಹತೆಯಿಲ್ದೇ ಇರೋ ಯಾರೂ ಕೂಡ ಈ ಜಗತ್ನಲ್ಲಿ ಸನ್ಮಾನಿಸಲ್ಪಡ್ಬಾರ್ದು. ಇದೇ ನನ್ ಹಾರೈಕೆ. ಇದೇ ನನ್ ಅಶೀರ್ವಾದ. ನೀನು ತಪ್ಪು ವ್ಯಕ್ತಿಯ ಹತ್ತಿರ ಬಂದ್ಬಿಟ್ಟಿದೀಯ (ನಗುತ್ತಾ). ಇದಾರೆ ಆಶೀರ್ವಾದ ನೀಡೋವಂತಾವ್ರು "ಚಿಂತಿಸ್ಬೇಡ, ಓದ್ಬೇಡ... ನನ್ ಆಶೀರ್ವಾದ ಇದೆ, ನೀನ್ ಪಾಸಾಗ್ತಿ" (ನಗುತ್ತ) ನಾನ್ ಆ ತರದವ್ನಲ್ಲ. ನೀನು ತಪ್ಪಾದ್ ಜಾಗಕ್ ಬಂದಿದೀಯಾ (ನಗು). ಏನು? ಎಲ್ಲದ್ರಲ್ಲು ಚಾಂಪಿಯನ್ ಆಗ್ಬೇಕಾ? ಮ್? ಚ್. ಹಂಗಾದ್ರೆ ಒಂದ್ ತರ ಒಳ್ಳೇದೇ. ನೀನ್ ಎಲ್ಲದ್ರಲ್ಲೂ ಚಾಂಪಿಯನ್ ಆಗೋದಿಕ್ ನೋಡಿದ್ರೆ, ಜೀವ್ನ ನಿನ್ನನ್ನ ಎಷ್ಟೊಂದ್ ರೀತಿಗಳಲ್ಲಿ ಸಿಕ್ ಹಾಕ್ಸುತ್ತೆ. ನೀವು ಸೋಲನ್ನ ಅನುಭವಿಸಿದ್ರೆ, ಅದು ಒಳ್ಳೇದು. ಕನಿಷ್ಟ ಪಕ್ಷ ಮುಂದಿನ್ ಹೆಜ್ಜೆ ಇಡೋದಿಕ್ಕೆ ನೀವು ಸಾಕಷ್ಟು ಸಮರ್ಥರಿಲ್ಲ ಅಂತ ನಿಮಗ್ ಗೊತ್ತಾಗುತ್ತೆ. ಹೌದ್ ತಾನೇ? ನೀವು ಒಂದ್ ಆಟದಲ್ಲಿ ಸೋತ್ರೆ, ನೀವ್ ಅದ್ರಲ್ಲಿ ಸಾಕಷ್ಟು ಸಮರ್ಥರಿಲ್ಲ ಅಂತ ನಿಮಗ್ ಗೊತ್ತಾಗುತ್ತೆ. ಹೌದ್ ತಾನೇ?

ಸಭಿಕರು: ಹೌದು...

ಸದ್ಗುರು: ಇದೇ ಸೋಲಿನ್ ಉದ್ದೇಶ. ಇದೇ ಪಾಸ್ ಮತ್ತು ಫೇಲ್ ಆಗೋದ್ರ್ ಹಿಂದಿನ್ ಉದ್ದೇಶ ನಾನು ಮುಂದಿನ್ ಹೆಜ್ಜೆ ಇಡೋದಿಕ್ಕೆ ಸಮರ್ಥನಾಗಿದೀನೋ ಇಲ್ವೋ ಅಂತ ತಿಳ್ಕೊಳೋದು, ಸುಮ್ನೆ ಜಗತ್ತನ್ನ ಮೋಸ ಮಾಡೋದಲ್ಲ. ನೀವು ಜಗತ್ತನ್ನ ಮೂರ್ಖನನ್ನಾಗಿಸ್ಬಹುದು, ಆದ್ರೆ ತೊಂದ್ರೆ ಏನೂಂದ್ರೆ, ನೀವು ಯಾವ್ ತರದ್ ಎಕ್ಸ್ಪರ್ಟ್ ಆಗ್ತೀರಾ ಅಂದ್ರೆ, ಕೊನೆಯಲ್ಲಿ ನಿಮ್ಮನ್ನೇ ದೊಡ್ಡ ಮೂರ್ಖರನ್ನಾಗಿಸ್ಕೊಳ್ತೀರಾ ಅಷ್ಟೆ. ಅದೇ ದೊಡ್ ತೊಂದ್ರೆ. ಹಾಗಾಗಿ, ನರೇಂದ್ರ ಸಿಂಗ್, ಚೆ, ಧೋನಿಯಲ್ಲ, ಮೋದಿಯಲ್ಲ (ನಗು). ಅಗಾಧವಾದ ಶ್ರಮ ಇದೆ ಈ ಹೆಸರುಗಳ ಹಿಂದೆ (ನಗು). ಇದನ್ನಿಲ್ಲೇ ಬಿಟ್ ಬಿಡೋಣ. ಇಲ್ಲಾಂದ್ರೆ, ನಾನಿನ್ನೂ ಕಠಿಣವಾಗ್ ಮಾತಾಡ್ತೀನಿ (ನಗು). ಯಾಕಂದ್ರೆ, ಓದ್ದೇ ಪಾಸಾಗೋವ್ರು ನನಗ್ ಇಷ್ಟ ಇಲ್ಲ (ನಗು).