Maunavannu saadhisuvudu hege?

ಲಿಪ್ಯಂತರ:

ನೀವು ಆಧ್ಯಾತ್ಮಿಕತೆ ಅಂತ ಏನನ್ನ ಕರೀತೀರೋ ಅದೇನು ಮಾನಸಿಕ ಪ್ರಕ್ರಿಯೆ ಅಲ್ಲ. ಇದಕ್ಕೂ ನಿಮ್ ನೆನಪಿನ ಶಕ್ತಿಗೂ ಏನೂ ಸಂಬಂಧ ಇಲ್ಲ. ಇದು ಜೀವಚೈತನ್ಯಕ್ಕೆ ಸಂಬಂಧಪಟ್ಟದ್ದು; ಇದೊಂದು ಮೂಲಭೂತ ಪ್ರಕ್ರಿಯೆ. ಜೀವದ ಒಂದ್ ತುಣುಕಾಗಿರುವ ನಿಮ್ಗೆ, ಹಾಗೇ ಇರೋದಕ್ಕೆ ನೀವು ಅನುಮತಿ ಕೊಟ್ಕೊಂಡ್ರೆ ಮಾತ್ರ ಇದು ಆಗಲು ಸಾಧ್ಯ. ಇದನ್ನ ಮಾಡಕ್ಕೆ, ನಾವು ಇಲ್ಲಿ ಅನೇಕ ಸಂಗತಿಗಳನ್ನ ಕೈಗೊಳ್ತೀವಿ, ನೀವ್ ನೋಡಿರಬಹುದು, ಆಶ್ರಮದಲ್ಲಿ  ಜನ್ರು orange tags-ನ ಹಾಕ್ಕೊಂಡ್ ಓಡಾಡ್ತಿರೋದನ್ನ. ನೀವು ಈ silence tag ಹಾಕ್ಕೊಳಿ, ಮತ್ತು ಸುಮ್ನೆ ಬಾಯಿ ಮುಚ್ಚಿ. ನಿಮ್ ಬಾಯಿನ ಮುಚ್ಚೋದು ಕೇವಲ ಅರ್ಧದಷ್ಟು ಕೆಲ್ಸ ಮಾತ್ರ; ಮೌನವಾಗಿರೋದು ಯಾವಾಗ್ ಸಾಧ್ಯ ಅಂದ್ರೆ, ನಿಮ್ ಬಗ್ಗೆ ನೀವು ಜಾಸ್ತಿ ಅಂದ್ಕೊಳ್ದೇ ಇದ್ದಾಗ ಮಾತ್ರ. ನಿಮ್ ಬಗ್ಗೆ ನೀವು ಏನಾದ್ರೂ ಅಂದ್ಕೊಂಡ್ರೆ,  “ನಾನು ಜಾಣ” ಅಂತ ನೀವ್ ಅಂದ್ಕೊಂಡ್ರೆ, ಸುಮ್ನೆ ಇರಕ್ ಹೇಗ್ ಸಾಧ್ಯ ನಿಮ್ಗೆ? – ನೀವೆ ಹೇಳಿ. ನೀವ್ “ನಾನು ಜಾಣ” ಅಂತ ಅಂದ್ಕೊಂಡ್ರೆ, ಸುಮ್ನೆ ಇರಕ್ ಹೇಗ್ ಸಾಧ್ಯ? ನೀವು ನಿಜ್ವಾಗ್ಲೂ ಮೂರ್ಖರು, ಈ ಅಸ್ತಿತ್ವದಲ್ಲಿರೋ ಯಾವದ್ರ್ ಬಗ್ಗೆನೂ ನಿಮ್ಗೆ ಏನೂ ಗೊತ್ತಿಲ್ಲ ಅಂತ ನಿಮ್ಗೆ ಮನವರಿಕೆ ಆದ್ರೆ, ಆವಾಗ.... (ಕೈ ಸನ್ನೆ ಮಾಡುತ್ತ) ಹೌದಲ್ವಾ? ಅವಾಗ, ನೀವು ಜೀವನವನ್ನ ಸುಮ್ನೆ ನೋಡಬಹುದು, ಮಹದಾಶ್ಚರ್ಯದ ದೃಷ್ಟಿಯಿಂದ , ನಿಮ್ ಮನಸ್ಸಿನಲ್ಲಿ ಒಂದೇ ಒಂದು ಯೋಚನೇನೂ ಬರ್ದೆ. ನೀವು ಎಲ್ಲಾದರಲ್ಲೂ ಜಾಣ್ರು ಅಂತ ಅಂದ್ಕೊಂಡಿದ್ರೆ, ನಿಮ್ ತಲೇನಲ್ಲಿ ವಿವರಣೆ, ಲೆಕ್ಕಾಚಾರ, ಇನ್ನೇನೊ ಅಸಂಬದ್ಧವಾದದ್ದು ನಡೀತಾನೇ ಇರತ್ತೆ. ಏನಾದ್ರೂ ಒಂದನ್ನ ನೋಡಿದ್ರೆ, ಸಾವಿರ ಯೋಚನೆಗಳು ಬಂದ್ ಬಿಡುತ್ವೆ, ಹೌದಲ್ವಾ?

ಈ ಸತ್ಸಂಗದಲ್ಲಿ ನೀವು ಸಂಪೂರ್ಣವಾಗಿ ಮೌನವಾಗೇನೂ ಕೂತ್ಕೊಂಡಿಲ್ಲ; ನನ್ ಜೊತೆ ಸಮ್ಮತಿಸ್ತಾ ಇದೀರಿ, ಅಸಮ್ಮತಿಸ್ತಾ ಇದೀರಿ, ನಿಮ್ಮೊಳಗೆ ಏನೋ ಟೀಕೆ ಮಾಡ್ತ ಇದೀರಿ, ಯಾರೋ ನಿಮ್ ಪಕ್ಕ ಕೂತ್ಕೊಂಡಿರೋವ್ರು ಹಾಕ್ಕೊಂಡಿರೋ ಬಟ್ಟೆ ಬಗ್ಗೆ ಟೀಕೆ ಮಾಡ್ತ ಇದೀರಿ, ಅದನ್ನ ಮೆಚ್ತಾ ಇದೀರಿ, ಜರೀತ ಇದೀರಿ, ಎಲ್ಲಾನೂ ನಡೀತ ಇದೆ. ನಾನ್ ಹೇಳ್ತ ಇರೋದು ತಪ್ಪಾ? ಯಾಕಂದ್ರೆ, ಯಾವಾಗ ನೀವು, ನೀವ್ ಯೋಚಿಸೋದಿಕ್ಕೆ ಬೆಲೆ ಇದೆ ಅಂತ ಅಂದ್ಕೋತೀರೋ, ಆಮೇಲೆ ನಿಮ್ಗೆ ಅದನ್ನ ನಿಲ್ಸಕ್ಕಾಗಲ್ಲ; ಏನ್ ಮಾಡಿದ್ರೂ ನಿಲ್ಸಕ್ಕಾಗಲ್ಲ. ಅದು ಹಾಗೆ ಓಡ್ತಾನೇ ಹೋಗುತ್ತೆ. ನಿಮ್ ಜೀವಚೈತನ್ಯದ ದೃಷ್ಟಿಯಿಂದ ನಿಮ್ ಯೋಚನಾ ಪ್ರಕ್ರಿಯೆಗೆ ಏನೇನು ಬೆಲೆ ಇಲ್ಲ ಅಂತ ನೀವ್ ನೋಡ್ದಾಗ... ಅದು ಬರೀ ನೆನಪುಗಳ ಮರುಸಂಸ್ಕರಣೆ; ಅದು ಬರೀ ಅದೇ ಹಳೇ ಅಸಂಬದ್ಧ ಮರುಸಂಸ್ಕರಣೆ ಆಗ್ತ ಇರೋದು.... ಆದ್ರೆ ನೀವ್ ಅದರಲ್ಲಿ ಉತ್ಸುಕರಾದ್ರೆ, ಈ ಮರುಸಂಸ್ಕರಣೆಗೆ ನೀವು ವ್ಯಾಮೋಹಿತರಾದ್ರೆ, ಇದು ಅದ್ಭುತ ಅಂತ ಅಂದ್ಕೊಂಡ್ರೆ, ನಿಮ್ಗೆ ಅದನ್ನ ನಿಲ್ಸಕ್ಕಾಗಲ್ಲ. ಅದರ ಪುನರಾವರ್ತನೆಯ ಶೈಲಿಯನ್ನ ನೀವ್ ನೋಡಿದ್ರೆ, ಅದರ ಮೂರ್ಖತನವನ್ನ ನೀವ್ ನೋಡಿದ್ರೆ, ಹಾಗೆ ನಿಧಾನವಾಗಿ ಅದರಿಂದ ದೂರ ಅಗ್ತೀರ, ಮತ್ ಅದು ಬಿದ್ದೋಗತ್ತೆ. ಯಾಕಂದ್ರೆ ಗಮನ ಸಿಗ್ಲಿಲ್ಲ ಅಂದ್ರೆ ಅದಿಕ್ಕೆ ಮುಂದೆ ಹೋಗ್ಲಿಕ್ಕಾಗಲ್ಲ.