ನಮ್ಮ ಪರಮಸ್ಥಿತಿಯನ್ನು ತಲುಪಲು, ಅಂದರೆ "ಯೋಗ" ವನ್ನು ಸಾಧಿಸಲು, ಆಸನಗಳು ಹೇಗೆ ನಮಗೆ ಸಾಧನಗಳಾಗಬಲ್ಲವು ಎಂಬುದನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ನಾವು ಎಲ್ಲ ಆಸನಗಳನ್ನು ಅಭ್ಯಸಿಸುವ ಅಗತ್ಯವಿಲ್ಲ, ಕೇವಲ ಒಂದು ಆಸನವನ್ನು ಸಿದ್ಧಿಸಿಕೊಂಡರೂ ಅದು ನಮಗೆ ಬ್ರಹ್ಮಾಂಡದೊಡಗಿನ ನಮ್ಮ ಐಕ್ಯತೆಯನ್ನು ಸಾಕ್ಷಾತ್ಕರಿಸಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸುತ್ತಾರೆ.

Kevala ondu Yogasana Badalisaballadu Nimma Jeevanavannu!

ಲಿಪ್ಯಂತರ:

ಸದ್ಗುರು: ಈ ಎಂಭತ್ನಾಲ್ಕು ಆಸನಗಳು ಮೂಲಭೂತ ಯೋಗಾಸನಗಳು. ಇವು ಶರೀರವನ್ನ ಮುಕ್ತಿಯ ಸಾಧನವನ್ನಾಗಿಸಲು ಎಂಭತ್ನಾಲ್ಕು ದಾರಿಗಳು. ಪ್ರತಿಯೊಬ್ಬರೂ ಈ ಎಲ್ಲ ಎಂಭತ್ನಾಲ್ಕು ಆಸನಗಳನ್ನು ಮಾಡಬೇಕಾದ ಅವಶ್ಯಕತೆಯಿಲ್ಲ. ಅವರು ಒಂದನ್ನೆ ಮಾಡಿದ್ರೂ ಸಾಕು. ಸಾಮಾನ್ಯವಾಗಿ ಹಠಯೋಗಿಗಳು, ಹಠಯೋಗವನ್ನು ಆತ್ಮ ವಿಮೋಚನೆಯ ಮಾರ್ಗವನ್ನಾಗಿ ತೆಗೆದುಕೊಳ್ಳುವಂತಹ ಹಠಯೋಗಿಗಳು, ಕೇವಲ ಒಂದೇ ಆಸನವನ್ನು ಅಭ್ಯಾಸ ಮಾಡುತ್ತಾರೆ. ಒಂದೇ ಆಸನ. ತಾರ್ಕಿಕ ಮನಸ್ಸಿಗೆ ಇದನ್ನ ಅರ್ಥ ಮಾಡ್ಕೊಳೋದು ಕಷ್ಟ. ಯಾಕೆ ಯಾರಾದರೂ ತಮ್ಮ ಇಡೀ ಜೀವನವನ್ನ ಒಂದು ನಿರ್ದಿಷ್ಟ ಸ್ಥಿತಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸ್ತಾ ಕಳೀತಾರೆ ಅಂತ. ಆದರೆ ನೀವು ಸರಿಯಾಗಿ ಕುಳಿತುಕೊಳ್ಳಲು ಕಲಿತ್ರೆ, ನೀವು ನಿಮ್ಮ ದೇಹವನ್ನು ಸರಿಯಾಗಿ ಇಟ್ಟುಕೊಳ್ಳಲು ಕಲಿತ್ರೆ, ಈ ಬ್ರಹ್ಮಾಂಡದಲ್ಲಿ ತಿಳ್ಕೊಳ್ಬೇಕಾದ ಪ್ರತಿಯೊಂದನ್ನೂ ನೀವು ತಿಳ್ಕೊಳ್ಬಹುದು. ಇದನ್ನ.... ಆಸನಸಿದ್ಧಿ ಅಂತ ಕರೀತಾರೆ. ನೀವು ಒಂದೇ ಸ್ಥಿತಿಯಲ್ಲಿ ಸ್ಥಿರವಾಗಿ ಮತ್ತು ಆರಾಮವಾಗಿ ಎರಡುವರೆ ಘಂಟೆಗಳ ಕಾಲ ಕುಳಿತುಕೊಂಡರೆ ನೀವು ಆ ಆಸನವನ್ನ ಸಿದ್ಧಿಸಿಕೊಂಡಿದೀರಿ ಅಂತರ್ಥ. ಆ ನಿರ್ದಿಷ್ಟವಾದ ಆಸನದಲ್ಲಿ ನೀವು ಸಂಪೂರ್ಣವಾಗಿ ಆರಾಮವಾಗಿ, ಅನಾಯಾಸವಾಗಿದೀರಿ ಅಂತರ್ಥ. ಅದೇ ಆಸನಸಿದ್ಧಿ. ಇದನ್ನ ನೀವು ಸಾಧಿಸಿದ್ರೆ ನೀವು ತಿಳ್ಕೊಳ್ಬೇಕಾದ ಎಲ್ಲವನ್ನು ಆಂತರಿಕವಾಗಿ ತಿಳ್ಕೊಳ್ಬಹುದು.

ಇದು ಹೇಗೆ ಸಾಧ್ಯ? ಬರೀ ಕುಳಿತುಕೊಳ್ಳೋದ್ರಿಂದ ಹೇಗೆ ತಿಳ್ಕೊಳ್ಬೇಕಾದ ಎಲ್ಲವನ್ನು ನೀವು ತಿಳ್ಕೊಳ್ಬಹುದು? ಉದಾಹರಣೆಗೆ ಟಿವಿ ತಗೊಳಿ. ಟಿವಿ ಸ್ವಲ್ಪ ಎಲೆಕ್ಟ್ರಾನಿಕ್ಸ್ ಗಳಿಂದ ಕೂಡಿದಂತಹ ಒಂದು ಪೆಟ್ಟಿಗೆ. ಆದರೆ ಅದೇ ಒಂದ್ ಜಗತ್ತಾಗ್ ಬಿಡತ್ತೆ. ಇಡೀ ಜಗತ್ತೇ ಅದ್ರೊಳಗೆ ಹರಿದುಬರುತ್ತೆ. ಈ ಟೆಲಿವಿಶನ್ ಒಳಗೆ. ನಾವು ಟೆಲಿವಿಶನ್ ಅಂತ ಕರಿಯೋ ಈ ಪಟ್ಟಿಗೆ ಒಳಗೆ. ಯಾಕಂದ್ರೆ ಅದಕ್ಕೆ ಸ್ವೀಕರಿಸುವ ಒಂದು ಶಕ್ತಿಯಿದೆ.

ನೀವು ಆಂಟೇನಾವನ್ನು ಸರಿಯಾಗಿ ಇಟ್ರೆ, ಅದನ್ನ ಸರಿಯಾಗಿ adjust ಮಾಡಿದ್ರೆ... ಇಡೀ ಜಗತ್ತೆ ಹರಿದ್ ಬರುತ್ತೆ ನೀವಿರೋ ಸ್ಥಳಕ್ಕೆ, ಅಂದ್ರೆ ಈ ಪೆಟ್ಟಿಗೆಯೊಳಗೆ. ಆದ್ರೆ ಆಂಟೇನಾ ಸರಿಯಾಗಿಟ್ಟಿಲ್ಲ ಅಂದ್ರೆ, ಅದೇ ಉಪಕರಣ, ಎಲ್ಲಾ ಇದೆ ಅದ್ರೊಳಗೆ, ಆದ್ರೆ ಅದಿಕ್ ಏನೂ ಮಾಡಕಾಗಲ್ಲ.

ಮನುಷ್ಯ ಕೂಡ ಹೀಗೆನೇ... ಒಬ್ಬ ಮನುಷ್ಯ... ಒಬ್ಬ ವ್ಯಕ್ತಿ ತಾನು ಹೇಗಿದಾನೋ ಹಾಗಿರೋದಿಕ್ಕೆ ಕಾರಣ ಆತ ಏನನ್ನ ಗ್ರಹಿಸ್ತಾನೋ ಅದು. ಮನುಷ್ಯ ತಾನು ಏನನ್ನ ಗ್ರಹಿಸ್ತಾನೋ ಕೇವಲ ಅದರಂತೆಯೇ ಆಗ್ತಾನೆ ಅಥವಾ ಆಗ್ತಾಳೆ ಅಷ್ಟೆ. ಈಗ ನೀವೇನಾಗಿದೀರೋ ಹಾಗಿರೋದಿಕ್ಕೆ ಕಾರಣ ನೀವು ಇಲ್ಲಿಯವರೆಗೂ ನಿಮ್ಮ ಜೀವನದಲ್ಲಿ ಗ್ರಹಿಸಿರುವ ವಿಷಯಗಳು ಅಷ್ಟೆ. ಮತ್ತು ಮುಂದೆ ನೀವು ಹೇಗಿರ್ತೀರೋ ಅದಿಕ್ಕೆ ಕಾರಣ ನೀವು ಭವಿಷ್ಯದಲ್ಲಿ ಏನನ್ನ ಗ್ರಹಿಸ್ತೀರೋ ಅದು. ನೀವು ಏನನ್ನ ಗ್ರಹಿಸ್ತೀರೋ ನೀವು ಹಾಗಾಗ್ತೀರ ಅಷ್ಟೆ.

ಆದ್ದರಿಂದ ಯೋಗದ ಸಂಪೂರ್ಣ ವಿಜ್ಞಾನವು ಗ್ರಹಣಶಕ್ತಿಯನ್ನು ಹೆಚ್ಚಿಸುವುದರಲ್ಲಿ ಆಸಕ್ತಿ ಹೊಂದಿದೆ. ಹಾಗಾಗಿ ನೀವು ಆಸನದಲ್ಲಿ ಸರಿಯಾಗಿ ಕುಳಿತರೆ, ಸರಿಯಾದ ಸ್ಥಿತಿಯಲ್ಲಿದ್ದರೆ, ಆ ನಿಮ್ಮ ಸ್ಥಿತಿ ಒಂದು ರೀತಿಯಲ್ಲಿ ಬ್ರಹ್ಮಾಂಡದ ಜೋಡಣೆಯ ಜೊತೆ ಹೊಂದಿಕೊಳ್ಳುತ್ತದೆ. ಆ ರೀತಿ ಎಂಭತ್ನಾಲ್ಕು ಭಂಗಿಗಳಿವೆ.

ಯಾರಾದರೂ ಈ ಎಂಭತ್ನಾಲ್ಕು ಆಸನಗಳನ್ನು ಅಭ್ಯಸಿಸಿದರೆ, ಅಥವಾ ಕೇವಲ ಒಂದು ಆಸನವನ್ನು ಸಿದ್ಧಿಸಿಕೊಂಡು ಅದರ ಮೂಲಕ ಉಳಿದ ಎಂಭತ್ಮೂರು ಆಸನಗಳನ್ನು ಸಾಧಿಸಿದರೆ, ಈ ಕ್ಷಣದವರೆಗೂ ಜಗತ್ತಿನಲ್ಲಿ ನಡೆದಿರುವ ಎಲ್ಲವನ್ನು ನೀವು ತಿಳಿಯಬಹುದು. ಯಾಕೆಂದರೆ ಆ ಎಲ್ಲದರ ನೆನಪು ನಿಮ್ಮ ವ್ಯವಸ್ಥೆಯಲ್ಲಿಯೇ ಇದೆ. ಕಂಪ್ಯೂಟರ್ ನಲ್ಲಿರೋ ಕೋಡ್ ಗಳ ರೀತಿಯಲ್ಲಿದೆ. ಅದು ನಿಮ್ಮ ಹೊರಗಿನ ಮತ್ತೊಂದು ಆಯಾಮವನ್ನು ಸ್ಪರ್ಶಿಸುವಂತಾದರೆ, ನೀವದನ್ನು ಕ್ರಿಯಾಶೀಲಗೊಳಿಸಬಹುದು.

ಹೀಗಾಗಿ ಆಸನಗಳು ಪ್ರಬಲವಾದ ಸಾಧನಗಳು. ಹೆಚ್ಚಿನದನ್ನು ಸಂಪರ್ಕಿಸಲು ಯೋಗಾಸನಗಳು ಪ್ರಬಲ ಸಾಧನಗಳಾಗಿವೆ. ನೀವು, ನೀವು ಯೋಗದ ಮೂಲ ಅರ್ಥವನ್ನು ಮರೆಯಬಾರದು. ಯೋಗವೆಂದರೆ ಕೂಡುವಿಕೆ; ಕೂಡುವಿಕೆ ಎಂದರೆ ಎರಡು ಒಂದಾಗುವುದು. ಎರಡು ಅಂದರೆ ಇಷ್ಟೆ. ಅಸ್ತಿತ್ವದಲ್ಲಿ ಇರೋದು ಕೇವಲ ಎರಡು. ನೀವು ಮತ್ತು ಉಳಿದ ಜಗತ್ತು. ಉಳಿದ ಜಗತ್ತಿನಲ್ಲಿ ನೀವು ಇದು, ಅದು, ಅದು ಅಂತ ಗುರುತಿಸಬಹುದು. ಆದರೆ ಮೂಲಭೂತವಾಗಿ ಇರೋದು ಕೇವಲ ಎರಡು. ನೀವು ಮತ್ತು ಉಳಿದ ಜಗತ್ತು. ಯಾಕೆಂದರೆ ನಿಮ್ಮೊಳಗೆ ಕೇವಲ ಎರಡು ರೀತಿಯ ಅನುಭವಗಳಿವೆ. ನಿಮಗ್ಗೊತ್ತಿಲ್ಲ ಮೇಲೆ ಕೆಳಗೆ ಯಾವುದು ಈ ಬ್ರಹ್ಮಾಂಡದಲ್ಲಿ ಅಂತ. ಈ ಬ್ರಹ್ಮಾಂಡದಲ್ಲಿ ಮುಂದೆ ಹಿಂದೆ ಯಾವುದು ಅಂತ ನಿಮಗ್ಗೊತ್ತಿಲ್ಲ. ಇದ್ಯಾವುದೂ ನಿಮಗ್ಗೊತ್ತಿಲ್ಲ. ಇದನ್ನೆಲ್ಲಾ ನಾವು ನಮ್ಮ ಅನುಕೂಲಕ್ಕಾಗಿ ಮಾಡ್ಕೊಂಡಿದ್ದೇವೆ ಅಷ್ಟೆ. ಈಗ ಒಂದೇ ಅನುಭವಪೂರ್ವಕವಾದ ವಾಸ್ತವತೆಯೇನಂದ್ರೆ - ಹೊರಗಡೆ ಅಂತ ಏನೋ ಇದೆ, ಒಳಗಡೆ ಅಂತ ಏನೋ ಇದೆ. ಇವು ನಮ್ಮ ಅನುಭವದ ಎರಡು ಆಯಾಮಗಳು. ಆಂತರಿಕ ಮತ್ತು ಬಾಹ್ಯ.

ಹೀಗಾಗಿ ಯೋಗ ಅಂದ್ರೆ ಈ ಒಳ ಮತ್ತು ಹೊರಗನ್ನು ಒಂದಾಗಿಸಿವುದು. ನೀವು ಮತ್ತು ಉಳಿದದ್ದನ್ನು. ನೀವು ಮತ್ತು ಅದನ್ನು. ಯಾವಾಗ ನೀವು ಮತ್ತು ಅದು ಅಂತ ಇರೋದಿಲ್ವೋ, ಕೇವಲ ನೀವು ಮತ್ತು ನೀವು ಮಾತ್ರ ಇರ್ತೀರೋ, ಅದು ಯೋಗ.

ಆಸನಗಳು ಇದನ್ನು ಭೌತಿಕವಾಗಿ ಸಾಧಿಸುವ ವಿಧಾನಗಳು. ಈ ಪರಮ ಕೂಡುವಿಕೆಯನ್ನು ಸಾಧಿಸುವ ಭೌತಿಕ ರೂಪ. ಭೌತಿಕ ಶರೀರವು ಸಂಬಾಳಿಸಲು ಅತ್ಯಂತ ಸುಲಭವಾದದ್ದು. ನೀವು ನಿಮ್ ಮನಸ್ಸಿನ್ ಜೊತೆ ಏನಾದರೂ ಮಾಡೋದಿಕ್ಕೆ ಯತ್ನಿಸಿದರೆ ಅದು ಏನೇನೋ ಆಟಗಳನ್ನು ಆಡುತ್ತೆ. ಆದರೆ ಶರೀರದ ವಿಷ್ಯದಲ್ಲಿ, ನಿಮಗ್ಗೊತ್ತಾಗುತ್ತೆ, ಅದು ಸರಿಯಾಗಿ ಮಾಡ್ತಿದ್ಯಾ ಇಲ್ವಾ ಅಂತ, ಅದು ಸಹಕರಿಸ್ತಾ ಇದ್ಯಾ ಇಲ್ವಾ ಅಂತ. ಮನಸ್ಸು, ಅದಕ್ಕೆ ಸ್ವಲ್ಪ ಒತ್ತಡ ತಂದ್ರೆ, ಅದು ಏನೇನೋ ಆಟಗಳನ್ನು ಆಡುತ್ತೆ ನಿಮ್ ಜೊತೆ. ಇವತ್ತು ಏನೇನೋ ಹೇಳಿ ನಂಬ್ಸಿ ಮರುದಿನ ಕೈ ಕೊಡುತ್ತೆ. ಆದರೆ ದೇಹ ಹಾಗಲ್ಲ. ಅದು ವಿಶ್ವಾಸಾರ್ಹ. ನೀವದನ್ನ ಸರಿಯಾಗಿ ನಡ್ಸ್ ಕೊಂಡ್ರೆ, ಯೋಗಾಸನಗಳು ಖಂಡಿತವಾಗಿಯೂ ನಿಮ್ಮನ್ನು ಆ ಪರಮ ಒಂದಾಗುವಿಕೆಯ ಸ್ಥಿತಿಯ ಸಾಧ್ಯತೆಯತ್ತ ಕೊಂಡು ಹೋಗುತ್ವೆ.

ಅದರ ಜೊತೇನೇ, ಆಸನಗಳನ್ನು ಮಾಡೋದ್ರಿಂದ, ಆ ಪರಮ ಸ್ಥಿತಿ ಉಂಟಾಗುವುದಕ್ಕೆ ಮೊದಲು, ನಿಮ್ಮ ಆಂತರ್ಯದಲ್ಲಿ ಹೊಂದಾಣಿಕೆಗಳಾಗಿ ಸಹಜವಾಗಿಯೇ ನಿಮ್ಮಲ್ಲಿ ಆರೋಗ್ಯದ, ಉತ್ಸಾಹದ, ಆನಂದದ, ಮತ್ತು ಸಮತೋಲನದ ಒಂದು ವ್ಯವಸ್ಥೆ ಏರ್ಪಡುತ್ತೆ. ಸಮತೋಲನವನ್ನು ಆಧುನಿಕ ಸಮಾಜಗಳು ಅಸಡ್ಡೆಮಾಡಿವೆ ಮತ್ತು ಅದಕ್ಕೆ ಇಂದು ದೊಡ್ಡ ಬೆಲೆಯನ್ನೇ ತೆರ್ತಿದೆ. ನಿಮ್ಮ ಬುದ್ಧಿವಂತಿಕೆ ಏನೇ ಇರಲಿ, ನಿಮ್ಮ ಸಾಮರ್ಥ್ಯ, ಶಿಕ್ಷಣ ಮತ್ತು ವಿದ್ಯಾರ್ಹತೆಗಳು ಏನೇ ಇರಲಿ, ನಿಮ್ಮಲ್ಲಿ ಸಮತೋಲನ ಇಲ್ದೇ ಹೋದ್ರೆ ನೀವು ಯಶಸ್ವಿಯಾಗೋದಿಲ್ಲ, ನೀವು ನಿಮ್ ಜೀವನದಲ್ಲಿ ತುಂಬಾ ಮುಂದೆ ಹೋಗಲ್ಲ.

ಆದ್ದರಿಂದ ಯಶಸ್ವಿಯಾಗಲು ಬಯಸ್ತಿರೋ ವ್ಯಕ್ತಿಗಳಿಗೆ ಅತ್ಯಂತ ಮುಖ್ಯವಾದ ವಿಷ್ಯ, ಅವರು ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡೋರಾಗಿರ್ಲಿ, ರಾಜಕೀಯದವರಾಗಿರ್ಲಿ, ಮಿಲಟರಿಯವರಾಗಿರ್ಲಿ ಅಥವಾ ಏನೇ ಆಗಿರ್ಲಿ, ಅತ್ಯಂತ ಪ್ರಮುಖವಾದ ವಿಷ್ಯ ಸಮತೋಲನ. ಬಾಹ್ಯ ಸನ್ನಿವೇಶಗಳಿಂದ ವಿಚಲಿತವಾಗದಂತಹ ಸಮತೋಲನ ನಿಮ್ಮಲ್ಲಿದ್ರೆ ಮಾತ್ರ, ನೀವು ನಿಮ್ಮೊಳಗಿನ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಸರಿಯಾಗಿ ಉಪಯೋಗಿಸೋದಿಕ್ಕಾಗುತ್ತೆ. ಇಲ್ಲದಿದ್ದರೆ ನೀವು ಹೊಂದಿರೋ ಅತ್ಯದ್ಭುತವಾದ ಗುಣಗಳೂ ಕೂಡ ವ್ಯರ್ಥವಾಗುತ್ತವೆ, ಈ ಸಮತೋಲನದ ಕೊರತೆಯಿಂದಾಗಿ. ಮತ್ತು ಹಠಯೋಗ ಎಂದರೆ ಸಮತೋಲನ.