Kaamasutravu ashleelateye?

ಲಿಪ್ಯ೦ತರ:

ಪ್ರಶ್ನೆ: ಪ್ರಪಂಚದಲ್ಲಿ ಎಲ್ಲ ಕಡೆ ಕಾಮಸೂತ್ರದ ಬಗ್ಗೆ ತುಂಬ ಮಾತುಗಳಾಗುತ್ವೆ. ಅದು ಒಂದು ವಿಜ್ಞಾನಾನಾ? ದೈಹಿಕ ಸುಖವನ್ನು ಮೀರಿದ್ದು ಅದರಲ್ಲಿ ಏನಾದ್ರೂ ಇದ್ಯಾ? 


ಸದ್ಗುರು: ಈಗ ವಿಷ್ಯ ಏನಂದ್ರೆ, ನೀವು ಈ ಸಂಸ್ಕೃತೀನ ಸರಿಯಾಗಿ ಅರ್ಥ ಮಾಡ್ಕೋಬೇಕು. ದುರಾದೃಷ್ಟವಶಾತ್, ಈಗದನ್ನ ಪೂರ್ತಿಯಾಗಿ ಗೋಜಲುಗೊಳಿಸಿ ಕೆಡಿಸ್ ಬಿಟ್ಟಿದಾರೆ. ನಮ್ದು ದೇವರೇ ಇಲ್ಲದ ಒಂದು ದೇಶ. ಮತ್ತು ಯಾವ್ದೇ ನೈತಿಕ ಕಟ್ಟುಪಾಡುಗಳು ಇಲ್ದೇ ಇರೋ ದೇಶ. ಈ ದೇಶದಲ್ಲಿ ನೈತಿಕತೆ ಅನ್ನೋದೇ ಇಲ್ಲ. ನಾವು ಆ ಥರ ಇದ್ದು, ಬಹಳ ಚೆನ್ನಾಗೇ ಇರೋದಿಕ್ಕೆ ಸಾಧ್ಯವಾಯ್ತು, ಯಾಕಂದ್ರೆ ಜನರ ಪ್ರಜ್ಞೆ ಉತ್ತುಂಗಕ್ಕೆ ಏರಿತ್ತು. ಎಲ್ಲವನ್ನೂ ಅದು ಇದ್ದ ಹಾಗೆ ನೋಡ್ತಿದ್ರು. ಜನರನ್ನ ಆಳ್ತಾ ಇದ್ದಿದ್ದು ಅವರ ಪ್ರಜ್ಞೆ, ನೈತಿಕತೆಯಲ್ಲ, ಶಿಕ್ಷೆಗೊಳಗಾಗೋ ಭಯ ಅಲ್ಲ, ಜೀವನದ ಸಹಜ ಪ್ರಜ್ಞೆ ಅಷ್ಟೆ. ಸಮಾಜ ಈ ಥರ ಇದ್ದಿದ್ರಿಂದ, ಏನನ್ಬೇಕಾದ್ರೂ ಎಲ್ಲಿ ಬೇಕಾದ್ರೂ ಮಾತಾಡ್ಬೋದಿತ್ತು, ಏನೂ ಸಮಸ್ಯೆ ಇರ್ಲಿಲ್ಲ. ಈವಾಗ ಪರಿಸ್ಥಿತಿ ಹಾಗಿಲ್ಲ, ಅದು ಬೇರೆ ವಿಷ್ಯ. ಆದ್ರೆ ಈ ಸಂಸ್ಕೃತಿ ಹಾಗೂ ದೇಶ ಬೆಳೆದ್ಬಂದಿದ್ದು ಹಾಗೆ. ಸಾವಿರಾರು ವರ್ಷಗಳ ಕೆಲ್ಸ ನಡ್ದಿದೆ, ಈ ಜನರ್ನ ಆ ಒಂದು ಸ್ಥಿತಿಗೆ ತರೋದಿಕ್ಕೆ.

ಆದ್ರೆ ಕ್ರಮೇಣ, ಇದೆಲ್ಲ ಬದಲಾಗ್ತಿದೆ. ಯಾಕಂದ್ರೆ ನಾವೀಗ ಪಾಶ್ಚಾತ್ಯರ ನೈತಿಕತೆಯನ್ನ ತೆಗೆದ್ ಕೊಂಡ್ ಬಿಟ್ಟಿದೀವಿ, ಇದ್ರಲ್ಲಿ ಒಂದು ಒಳ್ಳೇದು, ಮತ್ತೊಂದು ಕೆಟ್ಟದ್ದು, ಒಂದು ದೈವ ಮತ್ತೊಂದು ದೆವ್ವ, ಒಂದು ಉಚ್ಚ, ಮತ್ತೊಂದು ನೀಚ, ಒಂದು ಪವಿತ್ರ ಮತ್ತೊಂದು ಅಪವಿತ್ರ. ಈ ಸಂಸ್ಕೃತಿಯಲ್ಲಿ ಅಂತದ್ದೇನು ಇರ್ಲಿಲ್ಲ. ನಾವು ಜೀವನವನ್ನ ಅದು ಹೇಗಿದ್ಯೋ ಹಾಗೆ ನೋಡ್ತಿದ್ವಿ. ಯಾವುದನ್ನ ಎಷ್ಟು ಮಾಡ್ಬೇಕು, ಅನ್ನೋದು ವೈಯಕ್ತಿಕ ಆಯ್ಕೆ. ಯಾಕಂದ್ರೆ ನಾವು ಮನುಷ್ಯನ ಮನಸ್ಸಿನ ಸ್ವಭಾವವನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ವಿ. ಈ ಮನಸ್ಸಿಗೆ ನೀವು, "ಇದು ಕೆಟ್ಟದ್ದು, ಇದರ ಬಗ್ಗೆ ಯೋಚನೆ ಮಾಡ್ಬೇಡ" ಅಂತ ಹೇಳಿದ್ರೆ, ಅದನ್ನ ಯೋಚ್ನೆ ಮಾಡೋದೇ fulltime ಕೆಲ್ಸ ಆಗ್ಬಿಡತ್ತೆ, ನಿಮ್ ಸ್ನೇಹಿತ್ರ ಮನಸ್ಸುಗಳಲ್ಲಿ (ನಗು). ಯಾವ್ದೆ ಮನಸ್ಸಿಗೆ "ಇದರ ಬಗ್ಗೆ ಯೋಚಿಸ್ಬೇಡ" ಅಂತ ಅಂದ್ರೆ, ಅವ್ರು ಅದನ್ನೇ ಯೋಚಿಸ್ತಾರೆ.

ಮನುಷ್ಯನ ಮನಸ್ಸಿನ ಸ್ವಭಾವಾನಾ ಅರ್ಥ ಮಾಡ್ಕೊಳ್ದಿದ್ದವ್ರು ನೈತಿಕತೇನ ತಂದ್ರು. ಮನಸ್ಸನ್ನ ಅದು ಇರೋ ಹಾಗೇನೆ ಅರ್ಥ ಮಾಡ್ಕೊಂಡವ್ರು... ಈ ಸಂಸ್ಕೃತಿಯಲ್ಲಿ ನಾವ್ ಯಾವತ್ತೂ ಯಾವುದನ್ನೂ ಕೆಟ್ಟದ್ದು ಅಥವಾ ಒಳ್ಳೇದು ಅಂತ ಅನ್ಲಿಲ್ಲ. "ಇದು ಇರೋದು ಹೀಗೆ" ಅಂತಷ್ಟೇ ಹೇಳ್ತಿದ್ವಿ. ಜೀವನ್ದಲ್ಲಿ ಯಾವುದನ್ನ ಎಷ್ಟು ಮಾಡ್ತೀರಿ ಅನ್ನೋದು ವೈಯ್ಯಕ್ತಿಕವಾದ್ದು. ಈ ವ್ಯಕ್ತಿ ಎಷ್ಟು ತಿಂತಾನೆ, ಆ ವ್ಯಕ್ತಿ ಎಷ್ಟು ತಿಂತಾನೆ ಅನ್ನೋದು ವೈಯ್ಯಕ್ತಿಕವಾದ್ದು. ಆದ್ರೆ ಈಗ ಪಾಶ್ಚಾತ್ಯ ಡಾಕ್ಟ್ರುಗಳು ಹೇಳ್ತಾರೆ, ಎಲ್ಲರೂ ಇಷ್ಟು ಕ್ಯಾಲೋರಿ ತಿನ್ನಲೇ ಬೇಕು ಅಂತ, ಇದು ಅಸಂಬದ್ಧ. ದೇಹ ಕೆಲಸ ಮಾಡೋದು ಹಾಗಲ್ಲ. ನೀವಿಬ್ರು ಒಂದ್ವೇಳೆ 1kg ಯಷ್ಟು ಆಹಾರವನ್ನ ತಿಂದ್ರಿ ಅನ್ಕೋಳಣ, ಒಂದೇ ತರದ್ದು ಊಟ, ಒಂದೇ ತರದ್ ಪೋಷಣೆ. ನಿಮ್ಮಿಬ್ಬರ ತೂಕ ಒಂದೇ ಅನ್ಕೋಳಣ. ಸದ್ಯಕ್ಕೆ ಅನ್ಕೋಳಣ. ನಿಮ್ಮಿಬ್ಬರ ತೂಕ ಒಂದೇ, ನೀವಿಬ್ರು 1kg ಊಟ ಮಾಡಿದ್ರಿ, ಇಬ್ರಲ್ಲೂ ಒಂದೇ ತರ ಜೀರ್ಣವಾಗಲ್ಲ. ಒಬ್ಬರಿಗೆ ಈ ಊಟ ಸರಿಹೋಗ್ಬೋದು. ಮತ್ತೊಬ್ಬರಲ್ಲಿ ಬರೀ ಅರ್ಧ KG ಜೀರ್ಣ ಆದ್ರೂನು, ದೇಹದ ತೂಕ ಹಾಗೇ ಇರುತ್ತೆ. ಇದು ವಾಸ್ತವ. ಪ್ರಯೋಗ ಮಾಡ್ ನೋಡಿ ಹತ್ತು ಜನರ ಮೇಲೆ. ಇದು ವಾಸ್ತವ. ಆದ್ರೆ ಈಗ ಅವ್ರು ಹೇಳ್ತಿದ್ದಾರೆ, ಎಲ್ಲವನ್ನ ಸಾಮೂಹಿಕ ಮಾಡ್ಬಿಟ್ಟಿದಾರೆ, ಪ್ರತಿಯೊಬ್ರು ಇಷ್ಟು ಕ್ಯಾಲೊರಿ ಊಟ ಮಾಡ್ಲೇ ಬೇಕು, ಆಗ ಮಾತ್ರ ಇಷ್ಟು ಶಕ್ತಿ ಬರತ್ತೆ ಅಂತ. ಇದು ಪೆದ್ದು ಅಸಂಬದ್ಧ. ವಿಶೇಷವಾಗಿ ನಾವು ವೈಯಕ್ತಿಕ ಆಯಾಮಗಳ ಬಗ್ಗೆ ಮಾತಾಡ್ದಾಗ, ಎಲ್ಲರೂ ಇದನ್ನೇ ಮಾಡ್ಬೇಕು, ಎಲ್ಲರೂ ಅದನ್ನೇ ಮಾಡ್ಬೇಕು ಅನ್ನೋ ನೀತಿಗಳು ಎಂದಿಗೂ ಕೆಲಸ ಮಾಡಿಲ್ಲ. ಬೇರೆ ಬೇರೆ ವ್ಯಕ್ತಿಗಳ ಅಗತ್ಯ ಬೇರೆ ಬೇರೆಯಾಗಿರ್ತವೆ.

ಜಗತ್ತಿನಲ್ಲಿ ಈಗ ನಾವು ಬಹಳಷ್ಟು ವಿಕೃತ ಮನಸ್ಸಿನ ಜನರನ್ನ ಸೃಷ್ಟಿಸ್ಬಿಟ್ಟಿದೀವಿ, ಬರೀ "ಇದು ತಪ್ಪು, ಇದರ ಬಗ್ಗೆ ಯೋಚನೆ ಮಾಡ್ಬೇಡಿ" ಅಂತ ಹೇಳಿದ್ರಿಂದ. ಹಾಗೆ ಸುಮ್ನೆ ಬಿಟ್ರೆ, ಜನನಾಂಗಗಳು ನಿಮ್ಮ ಒಂದು ಸಣ್ಣ ಭಾಗ ಅಷ್ಟೆ. ಆದ್ರೆ, ಜನನಾಂಗದಲ್ಲಿರ್ಬೇಕಾಗಿರೋದನ್ನ ಬಹಳ ಸಮರ್ಥವಾಗಿ ತಲೆಯಲ್ಲಿ ಎತ್ತಿ ಕೂರ್ಸಿದ್ದಾರೆ. ಈಗ ಲೈಂಗಿಕತೆ ಅವರ್ ದೇಹದಲ್ಲಿ ನಡೀತಾ ಇಲ್ಲ, ಅದು ಅವರ್ ತಲೆಯಲ್ಲಿ ಸದಾಕಾಲ ನಡೀತಿರುತ್ತೆ. ದೇಹದಲ್ಲಿ ಅದೊಂದು ಸ್ವಾಭಾವಿಕ ಕ್ರಿಯೆ. ಅದೇ ತಲೇನಲ್ಲಿದ್ರೆ ಅದೊಂದು ಖಾಯಿಲೆ. ಅಲ್ವೇ? ದೇಹದಲ್ಲಿ ಅದೊಂದು ಸ್ವಾಭಾವಿಕ ಕ್ರಿಯೆ. ನಾವೆಲ್ಲಾ ಹುಟ್ಟಿರೋದು ಹಂಗೇನೆ. ಅದ್ರಲ್ಲಿ ಸರಿ ತಪ್ಪು ಅಂತೇನೂ ಇಲ್ಲ. ಅದು ನಮ್ಮ ಬದುಕಿನ ಸಣ್ಣದೊಂದು ಅಂಗ ಅಷ್ಟೆ. ನಾವದನ್ನ ವಿರೋಧಿಸಿದ್ರೆ, ತಲೆಗೆ ಹತ್ತಿ ಕೂರತ್ತೆ. ಆಗ ಅದೇ ಇಡೀ ಜೀವನ ಅಂತ ಅನ್ಸತ್ತೆ. ಈವತ್ತು ನನ್ ಪ್ರಕಾರ - ನೀವೇ ಹೇಳಿ ಇದು ಉತ್ಪ್ರೇಕ್ಷೆನಾ ಅಂತ - ಈವತ್ತು ನನ್ ಪ್ರಕಾರ, ಮನುಷ್ಯನ ಶಕ್ತಿಯ 95 ಪರ್ಸೆಂಟ್, ಹೋಗ್ತಿರೋದು ಬರೀ ಸೆಕ್ಸ್ ಮತ್ತು ಹಣದಲ್ಲೇ, ಹೌದೋ ಅಲ್ವೋ? ಇವು ನಿಮ್ಮ ಬದುಕಿನ ಎರಡು ಸಣ್ಣ ಸಂಗತಿಗಳು. ಒಂದು ನಿಮ್ಮ ಹೊಟ್ಟೆಪಾಡಿಗೆ ಸಂಬಂಧಿಸಿದ್ದು, ಮತ್ತೊಂದು ನಿಮ್ಮ ಶರೀರದ ಒಂದು ಅಂಶ ಅಷ್ಟೆ. ಈಗವು ಎಷ್ಟು ದೊಡ್ಡ ಸಂಗತಿಗಳಾಗೋಗಿವೆ, ಏಕೆಂದ್ರೆ ಯಾರೋ ಹೇಳಿದ್ರು ಇವೆರಡು ’ತಪ್ಪು’ ಅಂತ.

ನಾವದನ್ನ ಯಾವತ್ತೂ ಹಾಗೆ ನೋಡ್ಲಿಲ್ಲ. ಹಾಗಾಗಿ, ಯಾರೋ ಇದರ ಬಗ್ಗೆ ಒಂದು ಪುಸ್ತಕ ಬರೆದ್ರು - ಅದು ಯಾವ ತರದಲ್ಲೆಲ್ಲಾ ಆಗತ್ತೆ, ಮನುಷ್ಯರಲ್ಲಿ ಯಾವ್ಯಾವ ತರದ ದೇಹಗಳು ಇವೆ, ಇಬ್ಬರು ವ್ಯಕ್ತಿಗಳ ನಡುವಿನ ಹೊಂದಾಣಿಕೆಗಳು, ಹೀಗೆ ಎಲ್ಲವನ್ನು ಮುಚ್ಚುಮರೆಯಿಲ್ದೆ ಯಾರೋ ಬರೆದ್ರು, ಯಾಕಂದ್ರೆ ಅವ್ರು ಅನ್ಕೋಳ್ಳೇ ಇಲ್ಲ. ಅವ್ರು ಇದನ್ನ ಹಾಗೆ ನೋಡ್ಲಿಲ್ಲ, ಅವ್ರು ಇದನ್ನ ಅಶ್ಲೀಲತೆ ಅಂತ ನೋಡ್ಲಿಲ್ಲ, ಅರ್ಥ ಆಯ್ತಾ? ಅವ್ರು ಸುಮ್ನೆ ಬದುಕನ್ನ ಅದು ಇದ್ದ ಹಾಗೆ ವರ್ಣಿಸಿದ್ದಾರೆ. ಆದ್ರೆ ಇವತ್ತಿನ ಕಣ್ಣುಗಳು ಕಾಮಸೂತ್ರವನ್ನ ಅಶ್ಲೀಲತೆಯ ದೃಢೀಕರಣ ಅನ್ನೋ ತರ ನೋಡ್ತಿವೆ. ಅಲ್ಲ, ಅದು ಹಾಗಲ್ಲ. ಅವ್ರು ಬೇರೆ ಎಲ್ಲದರ ಬಗ್ಗೆ ಮಾತಾಡಿದಂಗೆ ಇದ್ರ್ ಬಗ್ಗೇನೂ ಮಾತಾಡ್ತಿದ್ದಾರೆ ಅಷ್ಟೆ. ಯಾಕಂದ್ರೆ ಇದೂ ಒಂದ್ ವಿಷ್ಯ ಅಷ್ಟೆ. ಅವ್ರು ಇದೇ ಎಲ್ಲಾ ಅನ್ಕೋಳ್ಳಿಲ್ಲ. ಇದೂ ಕೂಡ ಒಂದು ವಿಷ್ಯ ಅಂತ ನೋಡಿದ್ರು ಅಷ್ಟೆ, ಅದಕ್ಕೆ ಅದರ ಬಗ್ಗೆ ಬರೆದ್ರು. ನಿಮ್ಮ physics ಅಥವಾ chemistry textbook ತರ. ಅದೇ ತರ ಒಂದು sex textbook ಬರೆದ್ರು (ನಗು). ಅವ್ರು ಅದನ್ನ ದೊಡ್ಡ ಸುದ್ದಿಯೇನೂ ಮಾಡ್ಲಿಲ್ಲ. ಆದ್ರೆ ಇವತ್ತಿನ ಪ್ರಪಂಚದಲ್ಲಿ, ಈಗ ಜನ ಅವ್ರಲ್ಲಿರುವ ಎಲ್ಲಾ ತರದ ವಿಕೃತಿಗಳಿಗೆ ಅದನ್ನ ಒಂದ್ ತರದ್ ಅನುಮೋದನೆ ಅನ್ನೋ ರೀತಿನಲ್ಲಿ ನೋಡ್ತಿದ್ದಾರೆ (ನಗು).