Janaru Antaare "Yenu Maadli Naanirode Hege?" - Idu Nijave?(Guru Pournimeya Sandesha)

ಲಿಪ್ಯಂತರ:


ಸದ್ಗುರು: ಪ್ರತಿಯೊಂದು ಹುಣ್ಣಿಮೆಯ ದಿನಕ್ಕೂ – ಒಂದ್ ವರ್ಷದಲ್ಲಿ ಬರೋ ೧೨ – ೧೩ ಹುಣ್ಣಿಮೆಗಳಲ್ಲಿ – ಪ್ರತಿಯೊಂದಕ್ಕೂ ಅದರದ್ದೇ ಆದ ವೈಶಿಷ್ಟ್ಯತೆ ಇದೆ. ನಗರಗಳಲ್ಲಿರೊ ಬಹಳಷ್ಟು ಜನಗಳಿಗೆ ಚಂದ್ರ ಈಗ ಯಾವ್ ಪಕ್ಷದಲ್ಲಿ ಇದ್ದಾನೆ ಅನ್ನೋದ್ ಗೊತ್ತಿಲ್ಲ, ಪೂರ್ತಿಯಾಗಿ ಮರೆತ್ಬಿಟ್ಟಿದ್ದಾರೆ. ಇವತ್ತು ಅಮಾವಾಸ್ಯೆ, ಮೇಲ್ ನೋಡ್ಬೇಡಿ, ಇವತ್ತು ಚಂದ್ರ ಕಾಣಲ್ಲ. (ನಗು) ಯಾಕಂದ್ರೆ ಇವತ್ತು ಅಮಾವಾಸ್ಯೆ... ಅಮೇರಿಕದಲ್ಲಿ ಇದನ್ನು no moon day ಅಂತ ಕರೀತಾರೆ, ಅಕ್ಷರಶಃ. (ನಗು) ಚಂದ್ರ ಯಾವ್ ಪಕ್ಷದಲ್ಲಿ ಇದ್ದಾನೆ ಅನ್ನೋದು ಹೆಚ್ಚಿನ ಜನಕ್ಕೆ ಗೊತ್ತಿಲ್ಲ, ಯಾಕಂದ್ರೆ ಕಣ್ಣು ಕುಕ್ಕೋ ದೀಪಗಳು, ಅಬ್ಬರದ ಶಬ್ದಗಳು, ಅದು, ಇದು. ಯಾರೂ ಗಮನಾನೇ ಕೊಡಲ್ಲ, ಆಕಾಶದ್ ಕಡೆಗೆ, ಮತ್ತು ತಮ್ ಶರೀರದ್ ಕಡೆಗೆ ಕೂಡ. ನೀವ್ ತಲೆ ಎತ್ತಿ ಆಕಾಶದ್ ಕಡೆಗೆ ನೋಡಿದ್ರೆ, ನಿಮ್ಗೆ ಖಂಡಿತವಾಗ್ಲೂ ಗೊತ್ತಾಗತ್ತೆ, ಅಥವಾ ಕಣ್ಮುಚ್ಚಿ ನಿಮ್ಮನ್ನೆ ಗಮನಿಸಿದ್ರೆ ನಿಮ್ಗೆ ಗೊತ್ತಾಗತ್ತೆ ಚಂದ್ರ ಯಾವ ಹಂತದಲ್ಲಿದಾನೆ ಅಂತ, ಯಾಕಂದ್ರೆ ಚಂದ್ರನ ಗತಿಯ ಪ್ರತಿ ಹಂತದಲ್ಲೂ ಮನುಷ್ಯನ ವ್ಯವಸ್ಥೆ ಅದಕ್ಕನುಸಾರವಾಗಿ ಸ್ವಲ್ಪ ವಿಭಿನ್ನವಾಗಿ ವರ್ತಿಸುತ್ತೆ. ನಿಮ್ಗಿಷ್ಟಂತೂ ಗೊತ್ತಿದೆ, ಹುಣ್ಣಿಮೆ ಹಾಗೂ ಅಮಾವಾಸ್ಯೆಯಂದು, ನೀವೇನಾದರೂ ನಾವಿಕರಾಗಿದ್ದರೆ, ನಿಮಗೆ ಖಂಡಿತವಾಗಲೂ ಗೊತ್ತಿರುತ್ತೆ ನಿಮ್ ಸುತ್ಮುತ್ತಲು ಏನಾಗ್ತಿದೆ ಅಂತ, ಯಾಕಂದ್ರೆ, ಸಮುದ್ರಗಳೇ ಮೇಲೇಳ್ತಿರುತ್ವೆ ಈ ದಿನದಂದು. ಅಷ್ಟೊಂದು ಅಗಾಧವಾದ ಜಲಾಶಯ, ಮೇಲೇರ್ತಿರುತ್ತೆ.

ನೀವು ಈ ಭೂಮಿಯನ್ನ ಒಂದ್ ಶರೀರದ್ ತರ ನೋಡಿದ್ರೆ, ನಾವು ಸಮುದ್ರ ಅಂತ ಕರಿಯೋ ಈ ಜಲಾಶಯ ಏನಿದೆ, ಅದು, ಶೇಕಡ 70ಕ್ಕೂ ಹೆಚ್ಚು ಭೂ ಭಾಗವನ್ನ ಅಥವಾ ವಿಸ್ತೀರ್ಣವನ್ನ ಆವರಿಸಿದೆ. ಅದೇ ರೀತಿ, ನೀವು ಈ ಶರೀರವನ್ನ ನೋಡಿದ್ರೆ, ಇಲ್ಲಿ ಕೂಡ, ಶೇ. 70ಕ್ಕೂ ಹೆಚ್ಚು ನೀರೇ – ಆಕಸ್ಮಿಕವಾಗೇನೂ ಅಲ್ಲ, ಹಾಗೇ ರಚನೆ ಮಾಡಿರೋದು (ನಗು). ಸಮುದ್ರಗಳೇ ಮೇಲೇರುತ್ವೆ ಅಂದ್ರೆ, ನಿಮ್ ಶರೀರದಲ್ಲಿರೋ ನೀರು ಮೇಲೇರಲ್ಲ ಅನ್ಕೊಂಡಿದ್ದೀರ? ಸಮುದ್ರದಲ್ಲಿರೋ ನೀರು ಉಪ್ಪಿನಿಂದ ತುಂಬ್ಕೊಂಡಿದೆ. ಉಪ್ಪು ಅಂದ್ರೆ ನಾವ್ ಉಪ್ಯೋಗಿಸೋ ಉಪ್ಪು ಮಾತ್ರ ಅಲ್ಲ, ನಾವು ಉಪ್ಪಿನ್ ತರ ನೋಡೋ ಹಲವಾರು ಪದಾರ್ಥಗಳು. ಆದ್ರೆ ಇಲ್ಲಿರೋ ನೀರು (ತಮ್ಮನ್ನೇ ಉಲ್ಲೇಖಿಸುತ್ತಾ) ಹೆಚ್ಚು ಸಂಕೀರ್ಣವಾದ ಮಿಶ್ರಣವನ್ನ ಹೊಂದಿದೆ. ಸಮುದ್ರದ್ ಸೂಪ್-ಗಿಂತ ಹಚ್ಚು ಸಂಕೀರ್ಣವಾದ ಸೂಪ್ ಇದು. ನೀವು ನಿಮ್ಮನ್ನ ಚೆನ್ನಾಗಿರೋ ಸೂಪ್ ಮಾಡ್ಕೊಂಡಿದೀರೋ ಕಳಪೆಯಾದ ಸೂಪ್ ಮಾಡ್ಕೊಂಡಿದೀರೋ, ಅದು ನಿಮಗೆ ಬಿಟ್ಟಿದ್ದು, ಆದ್ರೆ ಅದು ಬಹಳ ಸಂಕೀರ್ಣವಾದ ಸೂಪ್.

ಅಲ್ಲಿ ಬರೀ ಉಪ್ಪಿನ ನೀರು ಮೇಲೇರುತ್ತೆ. ಇದ್ರಿಂದ ಹಡುಗುಗಳು ಹೋಗ್ತವೆ, ನಾವೆಗಳನ್ನ ಸಮುದ್ರದಲ್ಲಿ ಬಿಡ್ತಾರೆ, ಇನ್ನೂ ಬಹಳ ಸಂಗ್ತಿಗಳಾಗಿತ್ವೆ, ಮತ್ತು ಸಮುದ್ರದಲ್ಲಿ ಜೀವರಾಶಿಗಳು ಸಾಕಷ್ಟು ಬದಲಾವಣೆಯನ್ನು ಹೊಂದುತ್ವೆ, ಇವತ್ತು ಮತ್ತು ಹುಣ್ಣಿಮೆಯಂದು. ಅದೇ ಇಲ್ಲೂ ಆಗತ್ತೆ. ಆದ್ರೆ ಹೆಚ್ಚಿನವ್ರು ನಾವಿಕರಲ್ಲ. ನಾವಿಕ ಅಂದ್ರೆ... ಹೊಸ ಜಾಗಕ್ಕೆ ಹೋಗಲು ಯಾವಾಗಲೂ ಹಾತೊರೆಯುತ್ತಿರುವವನು ಅಂತ.

ಆದ್ದರಿಂದ, ನೀವು ಆಧ್ಯಾತ್ಮಿಕ ಸಾಧಕರಾಗಿದ್ರೆ, ನೀವು ಒಬ್ಬ ನಾವಿಕನ್ ತರ, ಯಾವಾಗ್ಲೂ ಹೊಸ ಜಾಗಕ್ಕೆ ಹೋಗೋದಿಕ್ ಬಯಸ್ತೀರ. ಈಗ್ ಇರೋ ಜಾಗ ಕೆಟ್ಟದಾಗಿದೆ ಅಂತ ಅಲ್ಲ, ಆದ್ರೆ, ನಿಮ್ಗೆ ಒಂದ್ ಹೊಸ ಜಾಗಕ್ಕೆ ಹೋಗ್ಬೇಕು, ನಿಮ್ಮೊಳಗೆ. ನಮಗ್ ಇಷ್ಟ್ ಗೊತ್ತಿದೆ... ನಮಗ್ ಇಷ್ಟ್ ಪ್ರಬುದ್ಧತೆ ಇದೆ, ನಾವು ಬರೀ ಈ ಜಾಗದಿಂದ ಇನ್ನೊಂದ್ ಜಾಗಕ್ಕೆ ಭೌಗೋಳಿಕವಾಗಿ ಹೋದ್ರೆ, ನಮ್ ಜೀವನ ಏನೂ ಬದಲಾಗಲ್ಲ ಅಂತ. ಹಾಗಾಗಿ ನಮಗರ್ಥ ಆಯ್ತು, ನಮ್ಮೊಳಗೇನೆ ಒಂದ್ ಹೊಸ ಜಾಗಕ್ಕೆ ಹೋಗ್ಬೇಕು ಅಂತ. ಹೀಗೆ ಒಂದ್ ರೀತಿಯಲ್ಲಿ ನೀವು ನಾವಿಕರೆ. ನೀವು ನಾವಿಕರಾಗಿದ್ರೆ, ಹುಣ್ಣಿಮೆ ಹಾಗೂ ಅಮಾವಾಸ್ಯೆ ನಿಮ್ಗೆ ಬಹಳ ಮಹತ್ವವಾದದ್ದು. ಅದ್ ಬರ್ಲಿ ಅಂತ ನೀವ್ ಕಾಯ್ತ ಇರ್ತೀರ. ಆ ದಿನ, ನೀವು ನಿಮ್ ಹೊಸ ಹಡುಗನ್ನ ಸಮುದ್ರಕ್ಕೆ ಬಿಡೋದಕ್ಕೆ ಕಾಯ್ತಿರ್ತೀರ. (ನಗು) ಹಾಗಾಗಿ, ಪೌರ್ಣಮಿ ಅಂದ್ರೆ ನಿಮ್ಮೊಳಗೆ ಹೊಸ ಸಂಗ್ತಿಗಳನ್ನ ಶುರು ಮಾಡೋ ದಿನ. ಯೋಗದಲ್ಲಿ ಒಂದು ಸಂಪೂರ್ಣ ವಿಜ್ಞಾನಾನೇ ಇದೆ, ಚಂದ್ರನ ಚಲನೆ ಹಾಗೂ ಸೂರ್ಯನ ಚಲನೆಗಳಿಗೆ ಅನುಸಾರವಾಗಿ ವ್ಯವಸ್ಥಿತಗೊಳಿಸಿರೋವಂತದು, ನಾವು ಅದನ್ನ ಉಪಯೋಗಪಡಿಸಿಕೊಳ್ಲಿ ಅಂತ. ನಾವು ಪ್ರಕೃತಿಯ ಸಹಾಯವನ್ನ ಬಳಸಿಕೊಳ್ಲಿ ಅಂತ. ನಾನ್ ಹೇಳಿದ್ ಹಾಗೆ, ಈ ೧೨, ೧೩... ೧೨ ರಿಂದ ೧೩ ಹುಣ್ಣಿಮೆಗಳು, ಪ್ರತಿಯೊಂದೂ ಬೇರೆ ಬೇರೆ ಗುಣಗಳನ್ನ ಹೊಂದಿದೆ. ಆದ್ದರಿಂದ, ಅವುಗಳನ್ನ ಅದಕ್ಕೆ ತಕ್ಕಂತೆ ಗುರುತಿಸಲಾಗಿದೆ, ನಂಗ್ ಅನ್ಸತ್ತೆ, ಚೀನಾದಲ್ಲಿಯೂ ಏನೋ ಮಹತ್ವ ಇದೆ – ಅಲ್ಲ, ಬಹುಶಃ ಜಪಾನಿನಲ್ಲಿ. August ನ ಹುಣ್ಣಿಮೆ – ಏನಾದರೂ ಮಹತ್ವ ಇದ್ಯ ಅದಕ್ಕೆ, hmm?

ಪ್ರೇಕ್ಷಕರು: ಹೌದು

ಸದ್ಗುರು: ಇದೆ? ಆ ಮಹತ್ವ ಏನೇ ಇರಲಿ, ಅದು ನನಗ್ ಗೊತ್ತಿಲ್ಲ. ಆದ್ರೆ ಮೂಲಭೂತವಾಗಿ, ಬೇಸಿಗೆಯ ಅಯನ ಸಂಕ್ರಾಂತಿ ಮತ್ತು ಚಳಿಗಾಲದ ಅಯನ ಸಂಕ್ರಾಂತಿ ಆದ್ ತಕ್ಷಣ ಬರುವ ಮೊದಲ್ನೇ ಹುಣ್ಣಿಮೆಗಳಿಗೆ ಒಂದು ಮಹತ್ವ ಇದೆ. ಈ ಸಲ, ಗುರು ಪೌರ್ಣಮಿ ಎರಡನೆ ಹುಣ್ಣಿಮೆ, ಮೊದಲ್ನೇದಲ್ಲ - ಖಗೋಳ ವಿಜ್ಞಾನದ ಏನೋ ಲೆಕ್ಕಾಚಾರದಿಂದಾಗಿ, ಇದನ್ನು ಎರಡನೇ ಹುಣ್ಣಿಮೆಗೆ ಮುಂದೂಡಲಾಗಿದೆ – ಇಲ್ಲದಿದ್ದರೆ ಇದು ಬೇಸಿಗೆಯ ಅಯನ ಸಂಕ್ರಾಂತಿಯ ನಂತರದ ಮೊದಲ್ನೇ ಹುಣ್ಣಿಮೆ. ಚಳಿಗಾಲದ ಅಯನ ಸಂಕ್ರಾಂತಿಯ ನಂತರ ಬರುವ ಹುಣ್ಣಿಮೆಯನ್ನ ಧನ್ಯ ಪೌರ್ಣಮಿ ಅಂತ ಕರೀತಾರೆ. ಇದನ್ನ ಸಾರ್ಥಕತೆಯ ದಿನ ಅಂತ ಪರಿಗಣಿಸ್ತಾರೆ. ಹಾಗೂ ತಮಿಳನಾಡ್ನಲ್ಲಿ ಇದನ್ನ ಆಚರಿಸ್ತಾರೆ... ಥೈಪುಸಮ್? ಅಲ್ವಾ? ಅದು ಸ್ವಲ್ಪ ದಿನದ್ ನಂತರ ಬರುತ್ತಾ? ಸರಿ. ಇದನ್ನ ಧನ್ಯ ಪೌರ್ಣಮಿ ಅಂತಾರೆ, ಹಾಗೂ ಇದನ್ನ ವಿವಿಧ ರೀತಿಗಳಲ್ಲಿ ಆಚರಿಸ್ತಾರೆ, ಆದ್ರೆ ಮೂಲಭೂತವಾಗಿ ಅದರರ್ಥ ಸಾರ್ಥಕತೆಯ ದಿನ ಅಂತ.

ಈ ಗುರು ಪೌರ್ಣಮಿ, ಅಂದ್ರೆ ಬೇಸಿಗೆಯ ಅಯನ ಸಂಕ್ರಾಂತಿಯ ನಂತರದ ಹುಣ್ಣಿಮೆ, ಐತಿಹಾಸಿಕವಾಗಿ ಹಾಗೂ ಗ್ರಹನಕ್ಷತ್ರಗಳ ಸ್ಥಾನಗಳ ಪ್ರಕಾರ ಕೂಡ, ಮಹತ್ವಪೂರ್ಣವಾದದ್ದು, ಯಾಕಂದ್ರೆ, ಈ ದಿನ ಆದಿಯೋಗಿ ಆದಿಗುರು ಆಗೋ ನಿರ್ಧಾರ ತಗೊಂಡ. ಮೊಟ್ಟಮೊದಲನೇ ಯೋಗಿ, ಮೊಟ್ಟಮೊದಲನೇ ಗುರುವಾಗಲು ನಿರ್ಧರಿಸಿದ್ದು, ಹದಿನೈದು ಸಾವಿರ ವರ್ಷಗಳ ಹಿಂದೆ, ಈ ದಿನದಂದೆ. ಈಗ ಅದನ್ನ ಗುರು ಪೌರ್ಣಮಿ ಅಂತೀವಿ. ಇದು ಪ್ರಥಮ ಗುರವಿನ ಜನನದ ದಿನ. ಹಾಗೂ ಈ ದಿನ ಅವನು ಮಾನವತೆಗೆ, ಹಿಂದೆಂದೂ ಹೇಳಲ್ಪಡದ, ಅತ್ಯಂತ ಮಹತ್ವವಾದ ಸಂದೇಶವನ್ನ ಪ್ರಸರಿಸಲು ಪ್ರಾರಂಭಿಸಿದ. ಏನಂದ್ರೆ, ಅವನು ಅವರಿಗೆ ಅರ್ಥ ಮಾಡಿಸಿದ, ನೀವು ಪ್ರಯತ್ನಹಾಕೋದಿಕ್ಕೆ ಸಿದ್ಧರಾಗಿದ್ದರೆ, ಪ್ರಕೃತಿ ನಿಮ್ಮ ಮೇಲೆ ಹಾಕಿರುವ ಎಲ್ಲ ಮಿತಿಗಳನ್ನು ನೀವು ದಾಟಬಹುದು ಅಂತ. ನೀವು ನಿಮ್ಮ ಸದ್ಯದ ಮಿತಿಗಳನ್ನು ಮೀರಿ ಬೆಳೆಯಬಹುದು - ನೀವು ಪ್ರಯತ್ನಹಾಕೋದಿಕ್ಕೆ ಹಾಗೂ ಅಗತ್ಯವಾದ ವಿಷಯಗಳನ್ನ ಮಾಡೋದಿಕ್ಕೆ ತಯಾರಾಗಿದ್ರೆ, ನಿಮ್ಮ ಅಂತರಂಗದಲ್ಲಿ. ಅಲ್ಲಿ ತನಕ... ಇವಾಗ ಕೂಡ, ಬಹಳಷ್ಟು ಜನರು ನಂಬೋದ್ ಏನಂದ್ರೆ “ನನ್ನನ್ನ ಮಾಡಿರೋದೇ ಹೀಗೆ. ಇದು ದೇವ್ರ ಇಚ್ಛೆ ಅಥವಾ ನನ್ನ್ ತಂದೆಯ ತಪ್ಪು (ನಗು) ಆದ್ರೆ ನಾನ್ ಇರೋದೆ ಹೀಗೆ. ಇದ್ರ ಬಗ್ಗೆ ನಂಗೇನು ಮಾಡ್ಲಿಕಾಗಲ್ಲ." 

ಈ ದಿನದಂದು, ಆದಿಯೋಗಿ ಮಾನವತೆಗೆ ಈ ಸಾಧ್ಯತೆಯನ್ನ ಪರಿಚಯಿಸ್ದ, ಮತ್ತು ಹೇಳ್ದ “ನೀವು ಪ್ರಯತ್ನಹಾಕೋದಕ್ಕೆ ಸಿದ್ಧರಾಗಿದ್ರೆ, ನಾನು ನಿಮಗೊಂದು ವಿಜ್ಞಾನವನ್ನು ಕೊಡುತ್ತೇನೆ. ಅದರಿಂದ ನೀವು ಮನುಷ್ಯನ ಮಿತಿಗಳು ಅಂತ ಪರಿಗಣಿಸುವ ಎಲ್ಲಾ ಮಿತಿಗಳನ್ನು ಮೀರಿ ಹೋಗಬಹುದು”

ಇಂದೂ ಕೂಡ, ಜನರು ಮನುಷ್ಯ ಅನ್ನೊ ಪದವನ್ನ ಬಳಸಿದಾಗ – ಹೆಚ್ಚಿನ ಸರ್ತಿ - ಜನರು ಮನುಷ್ಯ ಅನ್ನೊ ಪದವನ್ನ ಬಳಸಿದಾಗ, ಅವರು ಮನುಷ್ಯ ಜೀವದ ಅಗಾಧತೆಯನ್ನ ಸೂಚಿಸ್ತಿರೋದಿಲ್ಲ, ಅಥವಾ ಮನುಷ್ಯರ ಸಾಮರ್ಥ್ಯದ ಬಗ್ಗೆ, ಮನುಷ್ಯರಿಗಿರೋ ಸಾಧ್ಯತೆಯ ಬಗ್ಗೆ. ಅವರು ಮಾನವರ ಮಿತಿಗಳ ಬಗ್ಗೆ ಮಾತಾಡ್ತಿರ್ತಾರೆ ಅಷ್ಟೆ. ಯಾರಾದರು “ಓಹ್! ನಾನೊಬ್ಬ ಮನುಷ್ಯ ಅಷ್ಟೆ” ಅಂತ ಹೇಳಿದ್ರೆ, ಅವರು ಮಾತಾಡ್ತಿರೋದು ಅವರ ಮಿತಿಗಳ ಬಗ್ಗೆ. ಬಹಳ ಅಪರೂಪವಾಗಿ ಯಾರೋ ಕೆಲವರು “ನಾನು ಮಾನವ” ಅನ್ನೋದನ್ನ ಒಂದು ದೊಡ್ಡ ಸಾಧ್ಯತೆಯ ರೂಪದಲ್ಲಿ ನೋಡ್ತಾರೆ. ಯಾಕಂದ್ರೆ ಇನ್ನೂನೂ ಹೆಚ್ಚಿನ ಜನ ನಂಬಿರೋದು ಏನಂದ್ರೆ “ದೇವ್ರ ಇಚ್ಛೆ ಅಥವಾ ನನ್ ಹೆತ್ತವ್ರ ತಪ್ಪಿನಿಂದಾಗಿ ನಾನ್ ಹೀಗಿದೀನಿ. ನನ್ ಕೈಯಲ್ ಇಷ್ಟೆ ಮಾಡಕ್ ಆಗೋದು”.

ನಿಮ್ಗೆ ಇಲ್ಲೇ ಪುನರ್ಜನ್ಮವಾದ್ರೆ, ನೀವು ಸಂಪೂರ್ಣ ರೂಪಾಂತರಣೆಯನ್ನ ನಿಮಗೆ ಸಾಧ್ಯವಾಗಿಸ್ಕೊಂಡ್ರೆ, ಸಹಜವಾಗಿಯೇ ನೀವು ಇಡೀ ಪ್ರಪಂಚ ಅದನ್ನ ತಿಳ್ಕೋಬೇಕು ಅಂತ ಪ್ರಯತ್ನಿಸ್ತೀರ. ಏನಂದ್ರೆ, ಅವರು ಪ್ರಯತ್ನಿಸಲು ಸಿದ್ಧರಾದ್ದರೆ, ಅವರು ಎಲ್ಲಾ ಮಿತಿಗಳನ್ನು ದಾಟಬಹುದು - ಅವರೇ ಸ್ವತಃ ಸೃಷ್ಟಿಸ್ಕೊಂಡಿದ್ದು, ಅನುವಂಶಿಕವಾದದ್ದು, ಮತ್ತು ಪ್ರಕೃತಿ ಹೇರಿರುವುದನ್ನು ಸಹ – ಈ ಮಿತಿಗಳನ್ನೂ ನೀವು ದಾಟಿಹೋಗಬಹುದು. ಜೀವನ್ಮರಣದ ಮಿತಿಗಳನ್ನ ನೀವು ದಾಟಬಹುದು, ನೀವು ಅದಕ್ಕಾಗಿ ಶ್ರಮಿಸಲು ಸಿದ್ಧವಿದ್ದರೆ.

ಹಾಗಾಗಿ ಗುರು ಪೌರ್ಣಮಿಯ ಈ ದಿನದಂದು ಈ ಸಂದೇಶವನ್ನು ಸಾರಲಾಯಿತು. ಇದು ಬಹಳ ಬಹಳ ಮಹತ್ವದ್ದು. ಏಕಂದ್ರೆ, ಇದು ಮಾನವ ಜನ್ಮವನ್ನ ಒಂದು ಸಾಧ್ಯತೆಯನ್ನಾಗಿಸಿತು, ಒಂದು ಅಪರಿಮಿತ ಸಾಧ್ಯತೆ. ನಾವು ಭೂಮಿ ಮೇಲೆ ಬರೀ ಮತ್ತೊಂದು ತರದ್ ಪ್ರಾಣಿ ಅಷ್ಟೆ ಅನ್ನೋ ಬಲೆಯಿಂದ ಹೊರಗೆ ತರ್ತು. ಆದ್ದರಿಂದ ನಾವಿದನ್ನ ಹಬ್ಬವಾಗಿ ಆಚರಿಸಬೇಕು.