ಅಪೋಲೋ ಆಸ್ಪತ್ರೆಗಳ ಸಂಸ್ಥಾಪಕರಾದ ಪಿ ಸಿ ರೆಡ್ಡಿಯವರು ಸದ್ಗುರುಗಳನ್ನು ಒಳ್ಳೆ ಆರೋಗ್ಯದ ಸೂತ್ರವೇನು ಎಂದು ಕೇಳುತ್ತಾರೆ. ಉತ್ತರವಾಗಿ ಸದ್ಗುರು, ರೋಗಗಳನ್ನು ಸಾಂಕ್ರಾಮಿಕ ಮತ್ತು ದೀರ್ಘಕಾಲಿಕ ಎಂದು ವಿಂಗಡನೆ ಮಾಡುತ್ತಾರೆ. ಹೊರಗಿನಿಂದ ಬರುವಂತಹ ಸಾಂಕ್ರಾಮಿಕ ರೋಗಗಳನ್ನು ನಿವಾರಿಸಲು ನಾವು ವೈದ್ಯಕೀಯ ವಿಜ್ಞಾನದ ಸಹಾಯವನ್ನು ಪಡೆಯಬೇಕು. ಆದರೆ ದೀರ್ಘಕಾಲಿಕ (ಕ್ರಾನಿಕ್) ಖಾಯಿಲೆಗಳು ಉಂಟಾಗುವುದು ನಮ್ಮೊಳಗಿನಿಂದಲೇ. ಆದ್ದರಿಂದ, ಅವುಗಳನ್ನು ಸರಿಪಡಿಸಲು ನಾವು ಹೋಗಬೇಕಾಗಿರುವುದು ನಮ್ಮ ದೇಹವನ್ನು ನಿರ್ಮಿಸುವ ನಮ್ಮೊಳಗಿನ manufacturer ಹತ್ತಿರ, ಯಾವುದೋ ಲೋಕಲ್ ಮೆಕ್ಯಾನಿಕ್ ಹತ್ತಿರ ಅಲ್ಲ ಎಂದು ಹಾಸ್ಯಪೂರ್ವಕವಾಗಿ ಮನವರಿಕೆ ಮಾಡುತ್ತಾರೆ.

Olleya Aarogyada Guttenu?

ಲಿಪ್ಯಂತರ:

ಡಾ. ಪ್ರತಾಪ್ ರೆಡ್ಡಿ: ತುಂಬಾ ಅದ್ಭುತ, ಸದ್ಗುರೂಜೀ. ನಂಗ್ ಗೊತ್ತು, ಈ ಸುಂದರ ಸಭಾಂಗಣದಲ್ಲಿರೋ ಎಲ್ಲರೂ ಹಾಗೂ ಸಾವಿರಾರ್ ಜನ ಇಂಟರ್ ನೆಟ್ ನಲ್ಲಿ ಲೈವ್ ಆಗಿ ನೋಡ್ತಿರೋರು ತಿಳ್ಕೊಳೋದಿಕ್ ಬಯಸ್ತಿದಾರೆ ಅಂತ ಒಳ್ಳೆಯ ಆರೋಗ್ಯಕ್ಕಾಗಿ ಯಾವ್ದಾದ್ರೂ ಪ್ರಿಸ್ಕ್ರಿಪ್ಶನ್ ಇದ್ಯಾ (ನಗು), ಆಧ್ಯಾತ್ಮಿಕತೆ, ಯೋಗ, ಧ್ಯಾನ. (ನಗು).

ಯಾಕಂದ್ರೆ ನಾನ್ ನೋಡಿದೀನಿ ಕೆಲವ್ರಿಗೆ ಹುಶಾರ್ ಇಲ್ದಿದ್ದಾಗ ನೀವು ಅಸಾಧ್ಯವಾದದ್ದನ್ನು ಮಾಡಿರೋದನ್ನ. ಅದಕ್ಕಿಂತ ಮುಖ್ಯವಾಗಿ ನಿಮ್ಗೇ ಆರೋಗ್ಯ ತಪ್ದಾಗ, ಯಾವ್ ಡಾಕ್ಟರ್ಗೂ, ಯಾವುದೇ ಮೆಡಿಕಲ್ ಪುಸ್ತಕಕ್ಕೂ ಕೂಡಾ ಅದೇನೂಂತ ಕಂಡ್ ಹಿಡಿಯಕ್ಕಾಗ್ಲಿಲ್ಲ. ಆದ್ದರಿಂದ ಆರೋಗ್ಯವಾಗಿರೋದಿಕ್ಕೆ ಬೇರೆ ಏನಾದರೂ ಇದ್ಯೆ? ಅರುಂಧತಿಯವರು ನಿಮ್ ಜೀವನಚರಿತ್ರೆಯಲ್ಲಿ ಸುಂದರವಾಗಿ ಬರೆದಿದ್ದನ್ನು ಓದಿದ್ದೀನಿ. ಅವರು ಹೇಳ್ತಾರೆ, ನೀವು ವಿಸ್ಮಯಕಾರೀ ಯೋಗಿ ಅಂತ, ಯಾಕಂದ್ರೆ ಕಂಡುಹಿಡಿಯಲಾಗದ ಕಾಯಿಲೆ ಇದ್ದು, ಅದರಿಂದ ಗುಣಮುಖರಾಗಿದ್ರಿ.

ಸದ್ಗುರು: ನೋಡಿ ... ಇಡೀ ...

ಡಾ. ಪ್ರತಾಪ್ ರೆಡ್ಡಿ: (ಪ್ರೇಕ್ಷಕರನ್ನು ಉದ್ದೇಶಿಸಿ) ನಿಮ್ಗೂ ನಿಮ್ ಆರೋಗ್ಯದ ಬಗ್ಗೆ ಇದೇ ಪ್ರಶ್ನೆ ಇದೆ ಅಂತ ಭಾವಿಸುತ್ತೇನೆ, ನಿಮ್ಗೆ ಆರೋಗ್ಯವಾಗ್ ಇರ್ಬೇಕು, ತಾನೆ?

ಪ್ರೇಕ್ಷಕರು: ಹೌದು

ಡಾ. ಪ್ರತಾಪ್ ರೆಡ್ಡಿ: ನಂಗ್ ಗೊತ್ತು, ಇಲ್ಲಿರೋ ಎಲ್ರೂ ಡಾ. ರೆಡ್ಡಿ ಈ ಪ್ರಶ್ನೆ ಕೇಳ್ದ್ರಾ ಅಂತ ಅನ್ಕೊತಾರೆ. (ನಗು) ಅವರು ನನ್ನ್ ಹತ್ರ ಬರ್ಬೇಕು, ಆದರೆ, ನನಗ್ ಅವರು ಆರೋಗ್ಯವಾಗೂ ಇರ್ಬೇಕು, ಸ್ವಾಮಿ.

ಸದ್ಗುರು: ವಿಷ್ಯ ಏನಂದರೆ, ನಾವು ಈ ದೇಹವನ್ನು ನಿರ್ಮಿಸಿದ್ದು ಒಳಗ್ನಿಂದ. ಅಂದ್ರೆ, ಈ ದೇಹದ manufacturer ಒಳಗಿದ್ದಾನೆ. ಹಾಗಿದ್ರೆ, ನಿಮ್ಗೆ ಇದ್ರಲ್ಲಿ ರಿಪೇರಿ ಕೆಲ್ಸ ಇದ್ರೆ, manufacturer ಹತ್ರ ಹೋಗ್ತೀರಾ ಅಥವಾ ಲೋಕಲ್ ಮೆಕ್ಯಾನಿಕ್ ಹತ್ರ ಹೋಗ್ತೀರಾ? (ನಗು, ಚಪ್ಪಾಳೆ). ನಿಮಗ್ ಹೋಗೋದಿಕ್ ಸಾಧ್ಯವಿದ್ರೆ, ನೀವು manufacturer ಹತ್ರನೇ ಹೋಗ್ಲಿಕ್ ಇಷ್ಟ ಪಡ್ತೀರ; ಹೋಗೋದಿಕ್ ಗೊತ್ತಿಲ್ಲ ಅಂದ್ರೆ ಮೆಕ್ಯಾನಿಕ್ ಹತ್ರ ಹೋಗಿ ಅದು ಇದು ಮಾಡಿಸ್ಕೋತೀರ.

ಇವಾಗ್ ಇರೋಂತ ವೈದ್ಯಕೀಯ ವಿಜ್ಞಾನ ಇಲ್ದೆ ಇದ್ದಿದ್ರೆ, ನನ್ ಪ್ರಕಾರ ಅರ್ಧದಷ್ಟು ಜನರು ಸತ್ತೋಗಿರೋರು, ಇಲ್ಲಿರೋವ್ರಲ್ಲಿ. ಹೌದು. 1947 ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 28 ವರ್ಷಗಳು. ಇಂದು ಅದು 64ಕ್ಕೆ ಏರಿಕೆಯಾಗಿದೆ. ಅದಿಕ್ಕೆ ಒಂದ್ ಮುಖ್ಯ ಕಾರಣ ಇಂದು ಇರೋಂತ ವೈದ್ಯಕೀಯ ವಿಜ್ಞಾನ. ಹಾಗಾಗಿ ನಾನೇನು ವೈದ್ಯಕೀಯ ವಿಜ್ಞಾನವನ್ನ ಅಲಕ್ಷೆ ಅಥವಾ ಪರಿಹಾಸ್ಯ ಮಾಡ್ತಿಲ್ಲ. ಅದು ಬಹಳ ಮಹತ್ವದ್ದು; ಕಳೆದ 30 ರಿಂದ 40 ವರ್ಷಗಳಲ್ಲಿ ಏನು ಸಾಧಿಸಲಾಗಿದೆಯೋ ಅದು ಅಪೂರ್ವವಾದ್ದು. ಆದರೆ ಪ್ರಶ್ನೆ ಏನಂದ್ರೆ ಶರೀರವನ್ ನಿರ್ಮಿಸಿದಂತ ಆ ಮೂಲದ್ ಬಳಿಗ್ ಹೋಗೋದಿಕ್ಕೆ ನಿಮಗ್ ಗೊತ್ತಿದ್ರೆ, ಖಂಡಿತವಾಗ್ಲೂ ಶರೀರದೊಳಗೆ ನೀವೇ ಸೃಷ್ಟಿಸಿಕೊಳ್ಳೋ ಎಲ್ಲಾ ಸಮಸ್ಯೆಗಳನ್ನು ನೀವೇ ನಿಭಾಯಿಸಬಹುದು.

ಎರಡು ರೀತಿಯ ಕಾಯಿಲೆಗಳಿವೆ - ಸಾಂಕ್ರಾಮಿಕ ಮತ್ತು ದೀರ್ಘಕಾಲಿಕ. ಸೋಂಕಿನ ಕಾಯಿಲೆಗಳ್ ನಮ್ಗಾಗೋದು ಹೊರಗಿನ ವೈರಾಣುಗಳ ಆಕ್ರಮಣದಿಂದಾಗಿ. ಅದಿಕ್ಕೆ ಡಾಕ್ಟರ್ ಹತ್ರ ಹೋಗ್ಲೇಬೇಕು. ಅದ್ರ್ ಮೇಲೆ ಧ್ಯಾನ ಮಾಡೋ ಪ್ರಯತ್ನ ಮಾಡಬೇಡಿ. (ನಗು) ಆದರೆ ಭೂಮಿಯ ಮೇಲಿನ 70% ಕಾಯಿಲೆಗಳು ಸ್ವಯಂಕೃತವಾದವುಗಳು. ಯಾಕ್ ಹೀಗ್ ಹೇಳ್ತಿದೀನಿ ಅಂದ್ರೆ ಆ ಕಾಯಿಲೆ ಶುರು ಆಗಿದ್ದು ನಿಮ್ಮೊಳಗಿಂದನೇ. ಹಾಗಾಗಿ, ನಿಮ್ಮೊಳಗ್ ಏನಾಗ್ತ ಇದೆಯೊ, ಅದನ್ನು ನಿಮ್ಮೊಳಗೇನೇ ಸುಲಭವಾಗಿ ಪರಿಹರಿಸಬಹುದು. ಆಚೆಯಿಂದ ಏನಾದ್ರು ಬಂದ್ರೆ, ಅದಕ್ಕೆ ಹೊರಗಿನಿಂದ ಸಹಾಯ ಬೇಕು. ಆದ್ದರಿಂದ, ವೈರಾಣುಗಳ ಜೊತೆ ಹೋರಾಡೋದಕ್ಕೆ ನಿಮಗೆ ಔಷಧಿ ಬೇಕಾಗುತ್ತೆ.

ಉಳಿದ ಇತರ ಕಾಯಿಲೆಗಳು, ಸುಮಾರು 70% ಸ್ವಯಂಕೃತವಾದವುಗಳು. ನಿಮ್ ದೇಹ ನಿಮ್ಮ ವಿರುದ್ಧಾನೇ ಯಾಕ್ ಕೆಲಸ ಮಾಡುತ್ತೆ? ಈ ದೇಹವು ಮೂಲಭೂತವಾಗಿ program ಆಗಿರೋದು ಆರೋಗ್ಯಕ್ಕೆ. ಈ ದೇಹದ ಪ್ರತಿ ಕಣವೂ ಆರೋಗ್ಯಕ್ಕೇ program ಆಗಿದೆ. ಅದು ಯಾಕ್ ನಿಮಗ್ ವಿರುದ್ಧವಾಗತ್ತೆ? ಯಾಕಂದ್ರೆ, ಎಲ್ಲೋ ನೀವ್ ಅದನ್ನು ಸಂತೋಷವಾಗಿಟ್ಟಿಲ್ಲ. ತುಂಬ ಸರಳವಾಗಿ ಹೇಳ್ಬೇಕಂದರೆ ನಿಮ್ ಸ್ವಂತ ಕುಟುಂಬ ನಿಮ್ ವಿರುದ್ಧ ಯಾಕ್ ತಿರುಗುತ್ತೆ? ನಿಮ್ ಜೊತೆ ಅವರು ಏನಕ್ಕೋ ಖುಷಿಯಾಗಿಲ್ಲ ಅಂತರ್ಥ, ಅಲ್ಲವೆ? (ನಗು) ಹೌದೊ, ಅಲ್ಲವೋ? ನೀವ್ ಮಾಡ್ತಿರೋ ಏನೋ ಒಂದ್ ಅವರಿಗೆ ಇಷ್ಟ ಆಗ್ತ ಇಲ್ಲ. ಹಾಗೆಯೇ, ದೇಹದಲ್ಲಿ ಕೆಲವು ಜೀವಕಣಗಳು, ಕೆಲವು ಭಾಗಗಳು, ಯಾವುದೋ ಕಾರಣಕ್ಕೆ ನಿಮ್ ಜೊತೆ ಸಂತೋಷವಾಗಿಲ್ಲ. ನೀವ್ ಸ್ವಲ್ಪ ಹೆಚ್ಚು ಗಮನ ನೀಡ್ಬೇಕು. ಅದಕ್ಕ್ ಒಂದ್ ವಿಧಾನ ಇದೆ, ವ್ಯವಸ್ಥಿತವಾದ್ ಒಂದ್ ವಿಧಾನ ಇದೆ, ಇದ್ರ್ ಕಡೆಗೆ ಗಮನ ಕೊಡೋದಿಕ್ಕೆ. ಯಾಕಂದ್ರೆ, ಈ ದೇಹದಲ್ಲಿರೋ ಎಲ್ಲವನ್ನೂ ಒಳಗಿನಿಂದ ರಚಿಸಲಾಗಿದೆ. ಹಾಗಿದ್ಮೇಲೆ, ಒಳಗಿಂದ ಸರಿ ಮಾಡಕ್ ಆಗಲ್ವಾ?

ಆದ್ದರಿಂದ ಇದೇನ್ ಪವಾಡ ಅಲ್ಲ. ಜನರಿಗ್ ಅರ್ಥ ಆಗ್ಬೇಕು, ಇದು ಪವಾಡ ಅಲ್ಲ ಅಂತ. ಪವಾಡ ಅಂದ್ರೆ... ಒಂದ್ ವೇಳೆ ನಿಮಗೆ ವಿದ್ಯುತ್ ಅಂದ್ರೆ ಏನೂಂತ ಗೊತ್ತಿಲ್ಲ. ನಾನ್ ಇಲ್ಲಿ ಬರ್ತೀನಿ, ಆ ಗೋಡೆ ಮೇಲೆ ಒಂದ್ ಕಡೆ ಒತ್ ತ್ತೀನಿ, ಲೈಟ್ ಆನ್ ಆಗತ್ತೆ. ಆಗ ನೀವು ನಾನು ಯಾರು ಅಂತ ಭಾವಿಸ್ತೀರ? ಒಂದ್ ಸಾವಿರ ವರ್ಷದ್ ಹಿಂದೆ ನನ್ ಹತ್ರ ಒಂದ್ ಮೊಬೈಲ್ ಇತ್ತು ಅಂದ್ಕೊಳ್ಳಿ. ನಾನು ಜೋಬ್ನಿಂದ ಮೊಬೈಲ್ ತೆಗ್ದು ಅಮೇರಿಕದಲ್ಲಿರೋರ್ ಹತ್ರ ಮಾತಾಡಿದ್ರೆ, ನೀವು ನನ್ನನ್ನ ದೇವ್ರು ಅಂತ ಅಂದ್ಕೋತಿದ್ರಿ, ಅಲ್ವಾ?

ಹಾಗಾಗಿ ನಿಮಗ್ ಏನ್ ಅರ್ಥ ಆಗಲ್ವೊ ಅದು ಪವಾಡ ಅನ್ಸ್ಕೊಳತ್ತೆ. ನಿಮ್ ತರ್ಕದ್ ಗ್ರಹಿಕೆಗೆ ಸಿಕ್ಕದೆ ಇರೋದು, ನಿಮಗೆ ಪವಾಡದ್ ತರ ಕಾಣತ್ತೆ. ನಿಮ್ ಬುದ್ಧಿ ಮುಂದ್ ವರ್ದಂತೆ, 100 ವರ್ಷದ್ ಹಿಂದೆ ಪವಾಡವಾಗಿದ್ದಂತ ಎಷ್ಟೊಂದ್ ವಿಷ್ಯ್ ಗಳು ಇವತ್ತು ಸಾಮಾನ್ಯ ದಿನನಿತ್ಯದ ವಿಷಯಗಳಾಗಿವೆ, ಅಲ್ವಾ? ಹಾಗಾಗಿದೆ ಅಲ್ವಾ? ಆದ್ರಿಂದ ಇದು ಪವಾಡವಲ್ಲ. ಇದು ಒಂದು ಆಳವಾದ ತಿಳುವಳಿಕೆ ಅಷ್ಟೆ. ನೀವು ಹೇಗೆ ರಚಿಸಲ್ಪಟ್ಟಿದೀರಿ ಅನ್ನೋದ್ರ್ ಬಗ್ಗೆ. ಹಾಗಾಗಿ ನಾವು ಇದರ ಮೇಲೆ ಗಮನ ಕೊಡ್ಬೇಕು.