ಪ್ರಶ್ನೆ: ಯೋಗದ ಸಂಪೂರ್ಣ ಉದ್ದೇಶ ಮುಕ್ತಿ ಅಥವಾ ಮೋಕ್ಷ ಎಂದು ನಾನು ಭಾವಿಸಿದ್ದೆ, ಆದರೆ ಆದಿಯೋಗಿಯಾದ ಶಿವನನ್ನು ವಿನಾಶಕ ಎಂದು ಏಕೆ ಕರೆಯಲಾಗುತ್ತದೆ? ಅವನು ಏನನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾನೆ?
ಸದ್ಗುರು: ಬೇರೊಂದು ಗ್ರಹದಿಂದ ಬೇರೆ ರೀತಿಯ ಜೀವಿ ಬರುತ್ತಿದೆ ಎಂದು ಯಾರಾದರೂ ನಿಮಗೆ ಹೇಳಿದರೆ ನೀವು ಏನು ಯೋಚಿಸುತ್ತೀರಿ? "ಅದಕ್ಕೆ ಬಹುಶಃ ಎಂಟು ಕೈಗಳಿರಬಹುದೇ, ನಾಯಿಯಂತೆ ಅಥವಾ ಆನೆಯಂತೆ ಕಾಣುತ್ತಾನೆಯೇ?" ನಿಮ್ಮ ಎಲ್ಲ ಯೋಚನಾ ಪ್ರಕ್ರಿಯೆಯೂ ನೀವು ಇದುವರೆಗೆ ಅನುಭವಿಸಿದ್ದರಿಂದ ಮಾತ್ರ ಹುಟ್ಟುತ್ತದೆ. ಆದ್ದರಿಂದ ನಾವು ಇನ್ನೂ ಅನುಭವಿಸದಿರುವುದನ್ನು ತಿಳಿಯಲು ಸಾಧ್ಯವಿಲ್ಲವಾದ್ದರಿಂದ ಮುಕ್ತಿ ಅಥವಾ ಮೋಕ್ಷ ಏನೆಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ಮೊದಲು ನಾವು ಬಂಧನ ಎಂದರೇನು ಎಂದು ಅರ್ಥಮಾಡಿಕೊಳ್ಳೋಣ. ನೀವು ಬಂಧನ ಎಂದರೇನು ಎಂದು ಅರ್ಥಮಾಡಿಕೊಂಡು ಅದನ್ನು ನಿರ್ಮೂಲನೆ ಮಾಡುವ ಕೆಲಸ ಮಾಡಿದರೆ, ಅದೇ ಮುಕ್ತಿ. ಹಾಗೆ ನೋಡಿದರೆ, ಆಧ್ಯಾತ್ಮಿಕ ಪ್ರಕ್ರಿಯೆ ಒಂದು ನಕಾರಾತ್ಮಕ ಕೆಲಸ. ಅದಕ್ಕಾಗಿಯೇ ಭಾರತದಲ್ಲಿ, ನಾವು ಯಾವಾಗಲೂ ಶಿವನನ್ನು ಲಯಕಾರಕನಾಗಿ ಪೂಜಿಸಿದ್ದೇವೆ. ಏಕೆಂದರೆ ಅದು ನಿಮ್ಮನ್ನು ನೀವೇ ನಾಶಗೊಳಿಸುವ ಒಂದು ಮಾರ್ಗ. ಈಗ ನೀವು ನಿಮ್ಮ ವ್ಯಕ್ತಿತ್ವದ ರೂಪದಲ್ಲಿ ನಿಮಗಾಗಿ ಸೃಷ್ಟಿಸಿಕೊಂಡಿರುವ ಸೀಮಿತ ಪ್ರಮಾಣವನ್ನು - ನೀವು ನಿಮ್ಮನ್ನು ಏನೆಂದು ಪರಿಗಣಿಸುತ್ತೀರೋ ಅದನ್ನು, ನೀವು ನಿರ್ನಾಮ ಮಾಡಬಹುದಾದರೆ, ಅದೇ ಮುಕ್ತಿ.
‘ನಿಮ್ಮ ಬಗ್ಗೆ ನೀವು ಏನು ಯೋಚಿಸುತ್ತೀರಿ’ ಎಂಬ ನಿಮ್ಮ ಇಡೀ ವ್ಯಕ್ತಿತ್ವ ಮತ್ತು ‘ನೀವು ಏನಾಗಿದ್ದೀರಿ’ ಎಂದು ನೀವು ನಂಬಿರುವುದೆಲ್ಲವೂ ನಿಮಗೆ ಬಂದಿರುವುದು ದೇಹ ಮತ್ತು ಮನಸ್ಸಿನೊಂದಿಗಿನ ನಿಮ್ಮ ಆಳವಾದ ಗುರುತಿಸುವಿಕೆಯಿಂದ ಮಾತ್ರ. ಈ ಗುರುತಿಸುವಿಕೆ ಇಷ್ಟು ಬಲವಾಗಿರುವುದಕ್ಕೆ ಕಾರಣ ನೀವು ಜೀವನವನ್ನು ಅನುಭವಿಸುವ ಏಕೈಕ ಮಾರ್ಗ ಐದು ಇಂದ್ರಿಯಗಳ ಮೂಲಕ ಮಾತ್ರ. ಐದು ಇಂದ್ರಿಯಗಳು ನಿದ್ರಿಸಿದರೆ, ನಿಮ್ಮ ಅನುಭವದಲ್ಲಿ ನೀವಾಗಲಿ, ಜಗತ್ತಾಗಲಿ ಅಸ್ತಿತ್ವದಲ್ಲಿರುವುದಿಲ್ಲ.
ಈಗ, ಇಂದ್ರಿಯ ಗ್ರಹಿಕೆಯ ಸೀಮಿತ ಅನುಭವವು ನಿಮ್ಮ ಸುತ್ತಲಿನ ಜಗತ್ತನ್ನು ಮತ್ತು ನಿಮ್ಮೊಳಗಿರುವುದನ್ನು ಅನುಭವಿಸಲು ನೀವು ಹೊಂದಿರುವ ಏಕೈಕ ಮಾರ್ಗವಾಗಿದೆ. ಆದ್ದರಿಂದ ನಿಮ್ಮ ಮೊದಲ ಕೆಲಸವೆಂದರೆ ನಿಮ್ಮ ದೇಹ ಮತ್ತು ಮನಸ್ಸಿನಿಂದ ನಿಮ್ಮನ್ನು ನೀವು ಗುರುತಿಸಿಕೊಳ್ಳುವುದನ್ನು ಬಿಡುವುದು ಮತ್ತು ಯೋಗವು ಮಾಡುವುದೂ ಇದನ್ನೇ. ಯೋಗದ ಮೊದಲ ಹೆಜ್ಜೆ ಯಾವಾಗಲೂ ಇಂದ್ರಿಯಗಳ ಅನುಭವವನ್ನು ಮೀರಿ ಹೋಗುವುದರ ಬಗ್ಗೆ ಇರುತ್ತದೆ. ಒಮ್ಮೆ ನೀವು ಇಂದ್ರಿಯಗಳ ಅನುಭವಕ್ಕಿಂತ ಮಿಗಿಲಾದ ಜೀವನವನ್ನು ಅನುಭವಿಸಲು ಪ್ರಾರಂಭಿಸಿದಾಗ, ಸ್ವಾಭಾವಿಕವಾಗಿ ದೇಹ ಮತ್ತು ಮನಸ್ಸಿನೊಂದಿಗಿನ ಗುರುತಿಸುವಿಕೆಯು ಕಡಿಮೆಯಾಗುತ್ತದೆ ಮತ್ತು ನಿಧಾನವಾಗಿ ಇಲ್ಲದಾಗುತ್ತದೆ.
ಯೋಗದ ಆದಿ ಗುರುವಾದ ಶಿವನನ್ನು ವಿನಾಶಕನೆಂದು ವರ್ಣಿಸಲಾಗಿದೆ ಏಕೆಂದರೆ ನೀವು ನಿಮ್ಮ ಗುರುತುಗಳನ್ನು ನಾಶಮಾಡದೆ, ಅಂದರೆ ನಿಮಗೆ ಅತ್ಯಮೂಲ್ಯವಾದದ್ದನ್ನು, ನೀವು ನಾಶಪಡಿಸದ ಹೊರತು, ಅದನ್ನು ಮೀರಿ ಏನಿದೆಯೋ ಅದು ಸಂಭವಿಸುವುದಿಲ್ಲ; ಅದೊಂದು ದೊಡ್ಡ ಅಡ್ಡಿಯಾಗುತ್ತದೆ. ಅದು ನೀವು ಹೊರಬರಲು ಹಿಂಜರಿಯುವ ಒಂದು ಗುಳ್ಳೆಯಾಗಿದೆ. ಅದು ಒಡೆದುಹೋಬಹುದೇನೋ ಎನ್ನುವುದು ನಿಮ್ಮ ಭಯ. ಆದರೆ ಅದೇ ಸಮಯದಲ್ಲಿ, ಅಮಿತವಾಗಲು ಬಯಸುವ ಏನೋ ಒಂದು ನಿಮ್ಮೊಳಗೆ ಇದೆ.
ನೀವು ಆಧ್ಯಾತ್ಮಿಕತೆ ಎಂದು ಯೋಚಿಸುವುದು, ಅಸೀಮಿತ ಗುಳ್ಳೆಯನ್ನು ಹೊಂದಿರುವುದರ ಬಗ್ಗೆ. ವಾಸ್ತವವಾಗಿ ಅಸೀಮಿತ ಗುಳ್ಳೆ ಎಂಬುದು ಇಲ್ಲವೇ ಇಲ್ಲ. ನಿಜವಾದ ವಿಷಯವೆಂದರೆ ಗುಳ್ಳೆಯನ್ನು ಒಡೆಯುವುದು. ಈ ಗುಳ್ಳೆಯನ್ನು ದೊಡ್ಡದಾಗಿ ಊದಿ ಅದು ಇಡೀ ಅಸ್ತಿತ್ವವನ್ನು ಒಳಗೊಳ್ಳುವಂತೆ ಮಾಡಬೇಕಾಗಿಲ್ಲ. ನೀವು ಅದನ್ನು ಒಡೆದರೆ, ನೀವು ಅಸೀಮಿತರಾಗುತ್ತೀರಿ. ಎಲ್ಲ ಮಾಯವಾಗುತ್ತವೆ.
ದೇಹ ಮತ್ತು ಮನಸ್ಸಿನೊಂದಿಗೆ ಗುರುತಿಸಿಕೊಳ್ಳದೆ ಇರುವುದು ಎಂದರೆ ಚಿಂದಿ ಬಟ್ಟೆಗಳನ್ನು ಧರಿಸುವುದು, ಸ್ನಾನ ಮಾಡದೆ ದುರ್ವಾಸನೆ ಬೀರುವುದು ಮತ್ತು ನಿಮ್ಮ ಸುತ್ತಲಿನ ಎಲ್ಲರಿಗೂ ಸಮಸ್ಯೆಗಳನ್ನು ಸೃಷ್ಟಿಸುವುದು ಎಂದು ಜನರು ಭಾವಿಸುತ್ತಾರೆ. ಇಲ್ಲ. ಗುರುತಿಸಿಕೊಳ್ಳದೇ ಇರುವುದು ಒಂದು ವಿಷಯ; ಅದರ ಆರೈಕೆ ಮಾಡದೆ ಇರುವುದು ಮತ್ತೊಂದು ವಿಷಯ. ನೀವು ಅದರೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಆದರೆ ಅದಕ್ಕೆ ಅಗತ್ಯವಿರುವ ಎಲ್ಲವನ್ನೂ ಮಾಡುತ್ತೀರಿ. ನೀವು ಹೀಗಿದ್ದರೆ ದೇಹ ಮತ್ತು ಮನಸ್ಸಿನ ಪ್ರಕ್ರಿಯೆಯಿಂದ ಮುಕ್ತರಾಗುತ್ತೀರಿ. ನಿಮ್ಮ ಜೀವನದಲ್ಲಿ ಇವು ಮಾತ್ರ ಎರಡು ಮಿತಿಗಳು ಅಥವಾ ಬಂಧನಗಳು. ಈ ಎರಡನ್ನು ದಾಟಿದರೆ, ನೀವು ಅಸೀಮಿತರಾಗುತ್ತೀರಿ. ನೀವು ನಿಮ್ಮನ್ನು ಮಿತಿಯಿಲ್ಲದ ಜೀವಿಯಾಗಿ ಅನುಭವಿಸಿದರೆ, ನಿಮ್ಮನ್ನು ನೀವು ಮುಕ್ತರು ಎಂದು ಕರೆಯುವುದಿಲ್ಲವೇ?