ಮಹಾಶಿವರಾತ್ರಿ ಆಚರಣೆ 2022
“ನಿಮ್ಮ ಗ್ರಹಣಶೀಲತೆಯನ್ನು ವರ್ಧಿಸಿಕೊಳ್ಳಲು ಮತ್ತು ಜೀವನವನ್ನು ಇನ್ನೂ ಆಳವಾಗಿ ಆಸ್ವಾದಿಸಲು ಈ ಮಹಾಶಿವರಾತ್ರಿಯನ್ನು ನೀವು ಬಳಸಿಕೊಳ್ಳಬೇಕೆನ್ನುವುದು ನನ್ನ ಹಾರೈಕೆ ಮತ್ತು ಆಶೀರ್ವಾದ.” – ಸದ್ಗುರು
ಭಾರತದ ಪವಿತ್ರ ಭೂಮಿಯಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಮಹಾಶಿವರಾತ್ರಿಯು ತನ್ನ ಶಕ್ತಿ ಸಾಮರ್ಥ್ಯದಲ್ಲಿ ಅಗ್ರಗಣ್ಯವಾಗಿದೆ. ಈ ರಾತ್ರಿಯಲ್ಲಿ ಉಂಟಾಗುವ ಗ್ರಹಗಳ ವಿಶಿಷ್ಟ ಸ್ಥಾನಗಳು, ರಾತ್ರಿಯಿಡಿ ಬೆನ್ನುಹುರಿಯನ್ನು ನೇರವಾಗಿಟ್ಟುಕೊಂಡು ಜಾಗರಣೆ ಮಾಡುವವರಿಗೆ ಅಸಾಧಾರಣವಾದ ಭೌತಿಕ ಮತ್ತು ಆಧ್ಯಾತ್ಮಿಕ ಲಾಭಗಳನ್ನು ದಯಪಾಲಿಸುತ್ತದೆ.
ಪ್ರತಿ ಚಾಂದ್ರಮಾನ ತಿಂಗಳಿನ ಹದಿನಾಲ್ಕನೇ ರಾತ್ರಿ ಅಥವಾ ಅಮಾವಾಸ್ಯೆಯ ಹಿಂದಿನ ರಾತ್ರಿಯನ್ನು ಶಿವರಾತ್ರಿಯೆಂದು ಕರೆಯಲಾಗುತ್ತದೆ. ಆಧ್ಯಾತ್ಮಿಕ ಪಥದಲ್ಲಿರವವರು, ಸಾಮಾನ್ಯವಾಗಿ ಈ ರಾತ್ರಿಯಂದು ವಿಶೇಷ ಮಹತ್ವವುಳ್ಳ ಸಾಧನೆಗಳನ್ನು ಮಾಡುತ್ತಾರೆ. ವರ್ಷದಲ್ಲಿರುವ ಹನ್ನೆರಡು ಶಿವರಾತ್ರಿಗಳಲ್ಲಿ, ಚಾಂದ್ರಮಾನ ಪಂಚಾಂಗದ ಮಾಘ ಮಾಸದಲ್ಲಿ ಬರುವ ಶಿವರಾತ್ರಿಯು ಅತ್ಯಂತ ಶಕ್ತಿಯುತವಾದ್ದರಿಂದ, ಅದನ್ನು ಮಹಾಶಿವರಾತ್ರಿಯೆನ್ನುತ್ತಾರೆ.