logo
logo
Tantric symbolisme of Kali killing Shiva and putting her feet on him

ಶಿವ ಮತ್ತು ಕಾಳಿ: ತಂತ್ರದ ಸಾಂಕೇತಿಕತೆ

ಶಿವನ ಎದೆಯ ಮೇಲೆ ನಿಂತಿರುವ ಕಾಳಿಯ ಚಿತ್ರಣದ ಮಹತ್ವವನ್ನು ಸದ್ಗುರುಗಳು ವಿವರಿಸುತ್ತಾರೆ. ಒಮ್ಮೆ ಕಾಳಿ ಶಿವನನ್ನು ಹೇಗೆ ಕೊಂದಳು ಮತ್ತು ಇದು ಏನನ್ನು ಸೂಚಿಸುತ್ತದೆ ಎಂಬ ಕಥೆಯನ್ನು ನಮ್ಮ ಮುಂದಿಡುತ್ತಾರೆ.

ಪ್ರಶ್ನೆ: ಸದ್ಗುರು, ಶಿವನ ಶವದ ಎದೆಯ ಮೇಲೆ ನಿಂತಿರುವ ಕಾಳಿಯ ಅನೇಕ ಚಿತ್ರಗಳನ್ನು ನಾನು ನೋಡಿದ್ದೇನೆ. ಈ ದೃಶ್ಯದ ಮಹತ್ವವೇನು?

ಕಾಳಿ ಶಿವನನ್ನು ಹೇಗೆ ಕೊಂದಳು

ಸದ್ಗುರು: ಸೃಷ್ಟಿಯಲ್ಲಿ ಸ್ತ್ರೀ ಶಕ್ತಿಯ ಆಯಾಮವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಚಿತ್ರಿಸಲು ಪ್ರಯತ್ನಿಸುವ ಒಂದು ನಿರ್ದಿಷ್ಟ ಕಥೆ ಇದು. ಒಂದೊಮ್ಮೆ, ಹಲವಾರು ರಾಕ್ಷಸರು ಜಗತ್ತನ್ನು ಆಳತೊಡಗಿದರು. ಅನೇಕ ದುಷ್ಟ ಶಕ್ತಿಗಳು ಜಗತ್ತನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದವು. ಆಗ ಕಾಳಿ ರೌದ್ರ ರೂಪ ತಾಳಿದಳು. ಅವಳು ಉನ್ಮತ್ತಳಾದಾಗ, ಅವಳನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅವಳು ಹೋಗಿ ಎಲ್ಲವನ್ನೂ ಸಂಹರಿಸಿದಳು.

ಅವಳ ರೌದ್ರತೆಯು ನಿಲ್ಲಲಿಲ್ಲ. ಅದು ವಿವೇಕದ ಎಲ್ಲೆ ಮೀರಿ, ಆ ಪರಿಸ್ಥಿತಿಗೆ ಅಗತ್ಯವಿದ್ದ ಕಾರ್ಯವನ್ನು ಮೀರಿ, ಎಲ್ಲವನ್ನೂ ಮೀರಿ ಸಾಗಿತ್ತು. ಅವಳ ರೌದ್ರತೆಯು ಆವೇಗವನ್ನು ಪಡೆದುಕೊಂಡು  ಶಾಂತವಾಗದೇ ಆಕೆ ಸಂಹಾರವನ್ನು ಮುಂದುವರಿಸುತ್ತಿದ್ದುದರಿಂದ, ಯಾರೂ ಅವಳನ್ನು ತಡೆಯಲು ಧೈರ್ಯ ಮಾಡಲಿಲ್ಲ. ಅವರು ಶಿವನ ಬಳಿ ಹೋಗಿ, "ಅವಳು ಹೀಗೆ ಮುಂದುವರಿಯುತ್ತಿದ್ದಾಳೆ. ಅವಳು ನಿಮ್ಮ ಮಡದಿ. ದಯವಿಟ್ಟು ಅವಳನ್ನು ನಿಯಂತ್ರಿಸಲು ಏನಾದರೂ ಮಾಡಿ." ಎಂದರು.

 ಶಿವನು, ತನಗೆ ಆಕೆ ಗೊತ್ತಿರುವ ರೀತಿಯಲ್ಲಿ ಸಹಜವಾಗಿ ಸಮೀಪಿಸಿದನು . ಅವನು ಶಾಂತಚಿತ್ತನಾಗಿ, ಸುಮ್ಮನೆ ಅವಳ ಬಳಿ ಹೋದನು, ಯುದ್ದದ ಮನೋಭಾವದಿಂದಲ್ಲ. ಆದರೆ ಕಾಳಿಯ ಶಕ್ತಿ ಎಂತಹ ಮಟ್ಟಕ್ಕೆ ತಲುಪಿತ್ತೆಂದರೆ, ಅದು ಶಿವನನ್ನೇ ಕೆಳಗೆ ಉರುಳಿಸಿತು. ಅವಳು ಶಿವನ  ಮೇಲೆ ನಿಂತಾಗ ಮಾತ್ರ ಆಕೆಗೆ ತಾನು ಏನು ಮಾಡಿದ್ದೇನೆ ಎಂಬುದರ ಅರಿವಾಯಿತು. ನಂತರ ಅವಳು ನಿಧಾನಗೊಂಡು ಮತ್ತೆ ಅವನಲ್ಲಿ ಜೀವ ತುಂಬಿದಳು.

ದೇವಿ ತನ್ನದೇ ಶಿರಚ್ಛೇಧನ ಗೈಯುತ್ತಾಳೆ!

ಈ ನಿರ್ದಿಷ್ಟ ಘಟನೆಯ ಮೇಲೆ ಆಧಾರಿತವಾದ ವಿವಿಧ ತಾಂತ್ರಿಕ ಪ್ರಕ್ರಿಯೆಗಳಿವೆ. ತಮ್ಮದೇ  ರುಂಡವನ್ನು ತೆಗೆದು, ಅದನ್ನು ಕೈಯಲ್ಲಿ ಹಿಡಿದು ನಡೆಯುತ್ತಿರುವ ತಾಂತ್ರಿಕರ ಚಿತ್ರಗಳನ್ನು ಮತ್ತು ಪೇಂಟಿಂಗ್‌ಗಳನ್ನು ನೀವು ನೋಡಿರಬಹುದು. ಅಥವಾ ದೇವಿಯು ತನ್ನ ತಲೆಯನ್ನು ತೆಗೆದು, ಅದನ್ನು ತನ್ನ ಕೈಯಲ್ಲಿ ಹಿಡಿದು ನಡೆಯುವುದನ್ನು ಚಿತ್ರಿಸಿರುವುದನ್ನು ನೀವು ನೋಡಿರಬಹುದು. ಜನರು ನಿಜವಾಗಿಯೂ ತಮ್ಮ ರುಂಡವನ್ನು ಕತ್ತರಿಸಿಕೊಂಡು ಮತ್ತೆ ಜೋಡಿಸುವ ವಿವಿಧ ತಾಂತ್ರಿಕ ಪ್ರಕ್ರಿಯೆಗಳಿವೆ. ಇದನ್ನು ಮಾಡಲು ಕೆಲವು ನಿರ್ದಿಷ್ಟ ವಿಧಿಗಳಿವೆ.

ತಂತ್ರ: ಜೀವದ ಜೋಡಣೆ ಮತ್ತು ಮರುಜೋಡಣೆಯ ಪ್ರಕ್ರಿಯೆ

ಇಂದು ಹೆಚ್ಚಿನ ಜನರು ತಂತ್ರ ಎಂದರೆ ನಿರ್ಬಂಧವಿಲ್ಲದ ಕಾಮುಕತೆ ಅಂದುಕೊಂಡಿದ್ದಾರೆ. ಇದಕ್ಕೆ ಕಾರಣ, ತಂತ್ರದ ಬಗ್ಗೆ ಈಗಿರುವ ಹೆಚ್ಚಿನ ಪುಸ್ತಕಗಳನ್ನು ಅಮೇರಿಕನ್ನರು ಬರೆದಿರುವುದು ಮತ್ತು ಜನರು  ತಂತ್ರದ ಬಗ್ಗೆ ಪತ್ರಿಕೆಗಳು, ಪುಸ್ತಕಗಳಿಂದ ಓದಿ ತಿಳಿದಿರುವುದು. ತಂತ್ರ ಎಂದರೆ ಕಾಮುಕತೆ ಅಲ್ಲ. ತಂತ್ರ ಎಂದರೆ ತೀವ್ರ ಶಿಸ್ತು. ತಂತ್ರ ಎಂದರೆ ಒಂದು ತಂತ್ರಜ್ಞಾನ, ಒಂದು ವಿಧಾನ, ಜೀವವನ್ನು ಕಳಚಿ ಮತ್ತೆ ರಚನೆ ಮಾಡುವ ಸಾಮರ್ಥ್ಯ. ತಂತ್ರ ಎಂದರೆ ಜೀವವ್ಯವಸ್ಥೆಯ ಮೇಲೆ ಅಂತಹ ಪ್ರಭುತ್ವ ಹೊಂದುವುದು, ಅದರಿಂದ ನೀವು  ಜೀವವನ್ನು ಸಂಪೂರ್ಣವಾಗಿ ಬಿಚ್ಚಿ ಮತ್ತೆ ಜೋಡಿಸಬಹುದು.

ಕಾಳಿಯು ಶಿವನನ್ನು ಕೊಲ್ಲುವುದರ ಸಾಂಕೇತಿಕತೆ

ನೀವು ಜೀವಪ್ರಕ್ರಿಯೆಯ ಮೇಲೆ ಅಂತಹ ಪ್ರಭುತ್ವವನ್ನು ಹೊಂದಬಹುದು, ಅದು ಎಷ್ಟರ ಮಟ್ಟಿಗೆ ಎಂದರೆ ಜೀವನ ಮತ್ತು ಮರಣ ಎರಡೂ ಸಂಪೂರ್ಣವಾಗಿ ನಿಮ್ಮ ಹಿಡಿತದಲ್ಲಿರುತ್ತದೆ. ನೀವು ಜೀವವನ್ನು ತೆಗೆದು ಮತ್ತೆ ಜೀವವನ್ನು ತುಂಬ ಬಹುದು. ನೀವು ಬೇಕೆಂದರೆ ದೈವವನ್ನು ಸಹ ಕೊಂದು ಮತ್ತೆ ಬದುಕಿಸಬಹುದು . ಇದು ಯಾರಿಗೋ ತೋರಿಸಲು, ಆಡಂಬರಕ್ಕಾಗಿ ಮಾಡುವ  ಸಾಧನೆಯಲ್ಲ. ಇದನ್ನು ಮಾಡುವುದು ಜೀವಪ್ರಕ್ರಿಯೆಯ ಮೇಲೆ ಅಂತಹ ಪ್ರಭುತ್ವವನ್ನು ಹೊಂದಲು ಬಯಸುವುದರಿಂದ.

ಜೀವಪ್ರಕ್ರಿಯೆಯ ಮೇಲೆ ಒಂದಿಷ್ಟು ಪ್ರಭುತ್ವ ಸಾಧಿಸುವವರೆಗೂ, ನೀವು  ಏನನ್ನೂ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಜೀವಪ್ರಕ್ರಿಯೆಯ ಮೇಲೆ  ಒಂದಿಷ್ಟು ಪ್ರಭುತ್ವ ಇದೆ. ಇಲ್ಲದಿದ್ದರೆ, ನೀವು ಏನು ಮಾಡಬಹುದಿತ್ತು? ನೀವು ಹೊಂದಿರುವ ಪ್ರಭುತ್ವದ ಮಟ್ಟವು ನೀವು ಏನು ಮಾಡಬಲ್ಲಿರಿ ಎಂಬುದನ್ನು ನಿರ್ಧರಿಸುತ್ತದೆ.

ಶಿವನ ಮೇಲೆ ನಿಂತಿರುವ ಕಾಳಿಯ ಚಿತ್ರವು ಮೂಲತಃ ಜೀವಪ್ರಕ್ರಿಯೆಯ ಮೇಲೆ ಸಂಪೂರ್ಣ ಪ್ರಭುತ್ವ ಹೊಂದಿರುವುದನ್ನು ಸೂಚಿಸುತ್ತದೆ. ನೀವು ದೇವರನ್ನೇ ಕೊಲ್ಲಬಹುದು ಮತ್ತು ನಂತರ ಅವನಿಗೆ ಜೀವವನ್ನು ಮತ್ತೆ ಹಿಂತಿರುಗಿಸಬಹುದು ಎಂದು ಇದರ ಅರ್ಥ. ಕಡುಧೈರ್ಯ ಎಂದರೆ ಇದು, ಅಲ್ಲವೇ? ತಂತ್ರದ ತಂತ್ರಜ್ಞಾನ ಹೀಗಿದೆ.

    Share

Related Tags

Get latest blogs on Shiva