logo
logo
Drawing of Vishnu offering his eye and lotus flowers to Linga.

3 ವಿಷ್ಣು ಮತ್ತು ಶಿವನ ಕಥೆಗಳು

ಶಿವ ಮತ್ತು ವಿಷ್ಣುವಿನ ಪುರಾಣಗಳಿಂದ ಮೂರು ಆಸಕ್ತಿದಾಯಕ ಕಥೆಗಳು: ಶಿವನು ತನ್ನ ಮನೆಯನ್ನು ವಿಷ್ಣುವಿಗೆ ಕಳೆದುಕೊಂಡ ಸಮಯ, ವಿಷ್ಣು ಶಿವನನ್ನು "ರಕ್ಷಿಸಿದ" ಸಮಯ ಮತ್ತು ಕೊನೆಯದಾಗಿ, ಶಿವನ ಮೇಲೆ ವಿಷ್ಣುವಿನ ಭಕ್ತಿಯ ಮನಮುಟ್ಟುವ ಕಥೆ.

ಶಿವ ಮತ್ತು ವಿಷ್ಣು - ಬದರಿನಾಥದ ಬಗೆಗಿನ ದಂತಕಥೆ

ಬದರಿನಾಥದ ಬಗೆಗೆ ಒಂದು ದಂತಕಥೆಯಿದೆ. ಇಲ್ಲಿ ಶಿವ ಮತ್ತು ಪಾರ್ವತಿ ವಾಸಿಸುತ್ತಿದ್ದರು. ಇದು ಹಿಮಾಲಯದಲ್ಲಿ ಸುಮಾರು 10,000 ಅಡಿ ಎತ್ತರದಲ್ಲಿರುವ ಅದ್ಭುತ ಸ್ಥಳ. ಒಂದು ದಿನ, ನಾರದ ವಿಷ್ಣುವಿನ ಬಳಿಗೆ ಹೋಗಿ, "ನೀವು ಮಾನವಕುಲಕ್ಕೆ ಕೆಟ್ಟ ಉದಾಹರಣೆ. ಎಲ್ಲಾ ಸಮಯದಲ್ಲೂ ನೀವು ಆದಿಶೇಷನ ಮೇಲೆ ಮಲಗಿರುತ್ತೀರಿ, ಮತ್ತು ನಿಮ್ಮ ಪತ್ನಿ ಲಕ್ಷ್ಮಿ ನಿಮಗೆ ನಿರಂತರವಾಗಿ ಸೇವೆ ಮಾಡುತ್ತಾ ನಿಮ್ಮನ್ನು ಹಾಳುಮಾಡುತ್ತಿದ್ದಾರೆ. ನೀವು ಭೂಮಿಯ ಮೇಲಿನ ಇತರ ಜೀವಿಗಳಿಗೆ ಒಳ್ಳೆಯ ಉದಾಹರಣೆಯಲ್ಲ. ಸೃಷ್ಟಿಯಲ್ಲಿರುವ ಎಲ್ಲಾ ಇತರ ಜೀವಿಗಳಿಗಾಗಿ, ನೀವು ಹೆಚ್ಚು ಅರ್ಥಪೂರ್ಣವಾದದ್ದನ್ನು ಮಾಡಬೇಕು." ಎಂದರು. 

ಈ ಟೀಕೆಯಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಸ್ವಂತ ಉನ್ನತೀಕರಣಕ್ಕಾಗಿ ಕೆಲಸ ಮಾಡಲು, ವಿಷ್ಣು ತನ್ನ ಸಾಧನೆಗೆ ಸರಿಯಾದ ಸ್ಥಳವನ್ನು ಹುಡುಕುತ್ತಾ ಹಿಮಾಲಯಕ್ಕೆ ಬಂದ. ಅವನಿಗೆ ಬದರಿನಾಥ ಸಿಕ್ಕಿತು, ಒಂದು ಚೆಂದದ ಚಿಕ್ಕ ಮನೆ, ಎಲ್ಲವೂ ಅವನು ಯೋಚಿಸಿದಂತೆಯೇ ಇತ್ತು - ಸಾಧನೆಗೆ ಆದರ್ಶ ಸ್ಥಳ. ಅವನು ಅಲ್ಲಿ ಒಂದು ಮನೆಯನ್ನು ಕಂಡು ಅದರೊಳಗೆ ಹೋದ. ಆದರೆ ನಂತರ ಅವನಿಗೆ ಅರಿವಾಯಿತು ಇದು ಶಿವನ ನಿವಾಸವೆಂದು - ಮತ್ತು ಆ ವ್ಯಕ್ತಿ ಅಪಾಯಕಾರಿ. ಅವನು ಕೋಪಗೊಂಡರೆ, ನಿಮ್ಮ ಕುತ್ತಿಗೆಯನ್ನು ಮಾತ್ರವಲ್ಲ, ತನ್ನ ಸ್ವಂತ ಕುತ್ತಿಗೆಯನ್ನೂ ಕತ್ತರಿಸಬಲ್ಲ ವ್ಯಕ್ತಿ. ಆ ವ್ಯಕ್ತಿ ಬಹಳ ಅಪಾಯಕಾರಿ.

ಆದ್ದರಿಂದ, ವಿಷ್ಣು ತನ್ನನ್ನು ಒಂದು ಚಿಕ್ಕ ಮಗುವಾಗಿ ಪರಿವರ್ತಿಸಿಕೊಂಡು ಮನೆಯ ಮುಂದೆ ಕುಳಿತ. ವಿಹಾರಕ್ಕೆ ಹೋಗಿದ್ದ ಶಿವ ಮತ್ತು ಪಾರ್ವತಿ ಮನೆಗೆ ಹಿಂತಿರುಗಿದರು. ಅವರು ಬಂದಾಗ, ಒಂದು ಚಿಕ್ಕ ಮಗು ಅವರ ಮನೆಯ ಪ್ರವೇಶದ್ವಾರದಲ್ಲಿ ಅಳುತ್ತಿತ್ತು. ಹೃದಯ ಒಡೆಯುವಂತೆ ಅಳುತ್ತಿರುವ ಈ ಮಗುವನ್ನು ನೋಡಿ, ಪಾರ್ವತಿಯ ಮಾತೃ ವಾತ್ಸಲ್ಯ ಪುಟಿದು ಮಗುವನ್ನು ಎತ್ತಿಕೊಳ್ಳಲು ಬಯಸಿದಳು. ಶಿವನು ಅವಳನ್ನು ತಡೆದು, "ಆ ಮಗುವನ್ನು ಮುಟ್ಟಬೇಡ" ಎಂದ. ಪಾರ್ವತಿ, "ಎಷ್ಟು ಕ್ರೂರ. ನೀವು ಹೇಗೆ ಹಾಗೆ ಹೇಳಬಹುದು?" ಎಂದು ಪ್ರತಿಕ್ರಿಯಿಸಿದಳು.

ಶಿವನೆಂದ, "ಇದು ಒಳ್ಳೆಯ ಮಗುವಲ್ಲ. ಏಕೆ ಇದು ತಾನಾಗಿಯೇ ನಮ್ಮ ಮನೆ ಬಾಗಿಲಿಗೆ ಬಂದಿದೆ? ಸುತ್ತಲೂ ಯಾರೂ ಇಲ್ಲ, ಹಿಮದಲ್ಲಿ ಪೋಷಕರ ಹೆಜ್ಜೆ ಗುರುತುಗಳೂ ಇಲ್ಲ. ಇದು ಮಗುವಲ್ಲ". ಆದರೆ ಪಾರ್ವತಿ, "ನನಗದೆಲ್ಲಾ ಗೊತ್ತಿಲ್ಲ! ನನ್ನೊಳಗಿನ ತಾಯಿ ಮಮತೆ ಮಗುವನ್ನು ಹೀಗೆ  ಬಿಟ್ಟು ಹೋಗಲು ಬಿಡುವುದಿಲ್ಲ," ಎಂದು ಹೇಳಿ  ಮಗುವನ್ನು ಮನೆಯೊಳಗೆ ತಂದಳು. ಮಗು ಬಹಳ ಆರಾಮವಾಗಿ, ಅವಳ ತೊಡೆಯ ಮೇಲೆ ಕುಳಿತು, ಶಿವನತ್ತ ಸಂತೋಷದಿಂದ ನೋಡುತ್ತಿತ್ತು. ಶಿವನಿಗೆ ಇದರ ಪರಿಣಾಮ ತಿಳಿದಿತ್ತು ಆದರೆ ಅವನು, "ಸರಿ, ಏನಾಗುತ್ತದೆ ನೋಡೋಣ" ಎಂದ.

ಪಾರ್ವತಿ ಮಗುವನ್ನು ಸಂತೈಸಿ ಊಟ ಕೊಟ್ಟು, ಮನೆಯಲ್ಲಿ ಬಿಟ್ಟು ಶಿವನೊಂದಿಗೆ ಹತ್ತಿರದ ಬಿಸಿನೀರಿನ ಬುಗ್ಗೆಗಳಲ್ಲಿ ಸ್ನಾನಕ್ಕೆ ಹೋದಳು. ಅವರು ಹಿಂತಿರುಗಿ ಬಂದಾಗ, ಬಾಗಿಲು ಒಳಗಿನಿಂದ ಬೀಗ ಹಾಕಲಾಗಿತ್ತು. ಪಾರ್ವತಿ ಆಘಾತಗೊಂಡಳು. "ಯಾರು ಬಾಗಿಲು ಮುಚ್ಚಿದ್ದು?" ಶಿವನು ಹೇಳಿದ, "ನಾನು ನಿನಗೆ ಹೇಳಿದ್ದೆ, ಈ ಮಗುವನ್ನು ಎತ್ತಿಕೊಳ್ಳಬೇಡ ಎಂದು. ನೀನು ಮಗುವನ್ನು ಮನೆಯೊಳಗೆ ತಂದೆ ಮತ್ತು ಈಗ ಅದು ಬಾಗಿಲು ಬೀಗ ಹಾಕಿದೆ."

ಪಾರ್ವತಿ ಕೇಳಿದಳು, "ನಾವು ಏನು ಮಾಡೋಣ?"

ಶಿವನಿಗೆ ಎರಡು ಆಯ್ಕೆಗಳಿದ್ದವು: ಒಂದು ತನ್ನ ಮುಂದಿರುವ ಎಲ್ಲವನ್ನೂ ಸುಟ್ಟುಹಾಕುವುದು. ಇನ್ನೊಂದು ಬೇರೆ ದಾರಿ ಹುಡುಕಿ ಹೋಗುವುದು. ಆದ್ದರಿಂದ ಅವನು ಹೇಳಿದ, "ನಾವು ಬೇರೆ ಕಡೆಗೆ ಹೋಗೋಣ. ಏಕೆಂದರೆ ಅದು ನಿನ್ನ ಪ್ರಿಯ ಮಗು, ನಾನು ಅದನ್ನು ಮುಟ್ಟಲಾರೆ."

ಹೀಗೆ ಶಿವನು ತನ್ನ ಸ್ವಂತ ಮನೆಯನ್ನೇ ಕಳೆದುಕೊಂಡ ಮತ್ತು ಶಿವ-ಪಾರ್ವತಿ "ಅಕ್ರಮ ವಲಸಿಗರಾದರು"! ಅವರು ವಾಸಿಸಲು ಆದರ್ಶ ಸ್ಥಳವನ್ನು ಹುಡುಕುತ್ತಾ ಸುತ್ತಾಡಿ ಕೊನೆಗೆ ಕೇದಾರನಾಥದಲ್ಲಿ ನೆಲೆಸಿದರು. ಅವನಿಗೆ ಗೊತ್ತಿರಲಿಲ್ಲವೇ ಎಂದು ನೀವು ಕೇಳಬಹುದು. ನಿಮಗೆ ಅನೇಕ ವಿಷಯಗಳು ತಿಳಿದಿರುತ್ತವೆ, ಆದರೂ ನೀವು  ಅವುಗಳನ್ನು ನಡೆಯಲು ಬಿಡುತ್ತೀರಿ.

ವಿಷ್ಣು ಶಿವನನ್ನು "ರಕ್ಷಿಸಿದ" ಸಮಯ


ಯೋಗ ಪರಂಪರೆಯಲ್ಲಿ ಶಿವನ ಕರುಣೆ ಮತ್ತು ಭಕ್ತರ ಹಂಬಲಕ್ಕೆ ಅವನ ಮಗುವಿನಂತಹ ಪ್ರತಿಕ್ರಿಯೆಯನ್ನು ವಿವರಿಸುವ ಅನೇಕ ಕಥೆಗಳಿವೆ. ಒಮ್ಮೆ, ಗಜೇಂದ್ರ ಎಂಬ ಒಬ್ಬ ಅಸುರನಿದ್ದ. ಗಜೇಂದ್ರನು ಅನೇಕ ತಪಸ್ಸುಗಳನ್ನು ಮಾಡಿ ಶಿವನಿಂದ ಒಂದು ವರವನ್ನು ಪಡೆದ - ಅವನು ಯಾವಾಗ ಕರೆದರೂ, ಶಿವನು ಅವನ ಜೊತೆಯಲ್ಲಿರಬೇಕೆಂದು. ಗಜೇಂದ್ರನು ತನ್ನ ಜೀವನದ ಪ್ರತಿಯೊಂದು ಚಿಕ್ಕ ವಿಷಯಕ್ಕೂ ಶಿವನನ್ನು ಕರೆಯುತ್ತಿರುವುದನ್ನು ನೋಡಿ, ಸದಾ ಚೇಷ್ಟೆ ಮಾಡುವ ಮೂರು ಲೋಕಗಳ ಋಷಿ ನಾರದರು, ಗಜೇಂದ್ರನೊಂದಿಗೆ ಒಂದು ಚೇಷ್ಟೆಯನ್ನಾಡಿದರು.

ಅವರು ಗಜೇಂದ್ರನಿಗೆ ಹೇಳಿದರು, "ಏಕೆ ನೀನು ಶಿವನನ್ನು ಆಗೀಗ ಕರೆಯುತ್ತಿರುವೆ? ಅವನು ನಿನ್ನ ಪ್ರತೀ ಕರೆಗೂ ಸ್ಪಂದಿಸುತ್ತಿದ್ದಾನೆ. ಅವನನ್ನು ನಿನ್ನೊಳಗೆ ಪ್ರವೇಶಿಸಿ ಯಾವಾಗಲೂ ಅಲ್ಲಿಯೇ ಇರಬೇಕೆಂದು ಏಕೆ ಕೇಳಬಾರದು? ಹೀಗಾದರೆ ಅವನು ಯಾವಾಗಲೂ ನಿನ್ನವನಾಗಿರುತ್ತಾನಲ್ಲವೇ?" ಗಜೇಂದ್ರನಿಗೆ ಇದು ಒಳ್ಳೆಯ ವಿಚಾರ ಎಂದೆನಿಸಿತು ಮತ್ತು ಅದರಂತೆಯೇ ಅವನು ಶಿವನನ್ನು ಆರಾಧಿಸಿದ. ಶಿವನು ಅವನ ಮುಂದೆ ಪ್ರತ್ಯಕ್ಷನಾದಾಗ, ಅವನು "ನೀನು ನನ್ನೊಳಗೆ ಇರಬೇಕು. ನೀನು ಎಲ್ಲಿಗೂ ಹೋಗಬಾರದು."  ಎಂದು ಕೇಳಿಕೊಂಡ. ಶಿವನು ತನ್ನ ಮಗುವಿನಂತಹ ಪ್ರತಿಕ್ರಿಯೆಯಲ್ಲಿ ಲಿಂಗ ರೂಪದಲ್ಲಿ ಗಜೇಂದ್ರನ ಒಳಗೆ ಪ್ರವೇಶಿಸಿ ಅಲ್ಲಿಯೇ ಉಳಿದ.

ಸಮಯ ಕಳೆದಂತೆ, ಇಡೀ ಬ್ರಹ್ಮಾಂಡಕ್ಕೆ ಶಿವನ ಕೊರತೆ ಕಾಡತೊಡಗಿತು. ಅವನು ಎಲ್ಲಿದ್ದಾನೆಂದು ಯಾರಿಗೂ ತಿಳಿದಿರಲಿಲ್ಲ. ಎಲ್ಲಾ ದೇವತೆಗಳು ಮತ್ತು ಗಣಗಳು ಶಿವನನ್ನು ಹುಡುಕಲು ಆರಂಭಿಸಿದರು. ಬಹಳ ಹುಡುಕಾಟದ ನಂತರವೂ, ಅವನು ಎಲ್ಲಿದ್ದಾನೆಂದು ಯಾರಿಗೂ ಕಂಡುಹಿಡಿಯಲಾಗದಾಗ, ಅವರು ಪರಿಹಾರಕ್ಕಾಗಿ ವಿಷ್ಣುವಿನ ಬಳಿಗೆ ಹೋದರು. ವಿಷ್ಣು ಪರಿಸ್ಥಿತಿಯನ್ನು ನೋಡಿ ಹೇಳಿದ, "ಅವನು ಗಜೇಂದ್ರನೊಳಗಿದ್ದಾನೆ." ನಂತರ ದೇವತೆಗಳು ಗಜೇಂದ್ರನಿಂದ ಶಿವನನ್ನು ಹೇಗೆ ಹೊರತರಬಹುದೆಂದು ಕೇಳಿದರು, ಏಕೆಂದರೆ ಶಿವನನ್ನು ತನ್ನೊಳಗೆ ಹೊಂದಿದ್ದ ಗಜೇಂದ್ರ ಅಮರನಾಗಿದ್ದ.

ಎಂದಿನಂತೆ, ವಿಷ್ಣು ಸರಿಯಾದ ತಂತ್ರವನ್ನು ಹೂಡಿದ. ದೇವತೆಗಳು ಶಿವಭಕ್ತರ ವೇಷ ಧರಿಸಿ ಗಜೇಂದ್ರನ ರಾಜ್ಯಕ್ಕೆ ಬಂದು ಅತ್ಯಂತ ಭಕ್ತಿಯಿಂದ ಶಿವನ ಸ್ತುತಿಗಳನ್ನು ಹಾಡಲು ಆರಂಭಿಸಿದರು. ಶಿವನ ಮಹಾ ಭಕ್ತನಾಗಿದ್ದ ಗಜೇಂದ್ರನು, ಈ ಜನರನ್ನು ತನ್ನ ಆಸ್ಥಾನದಲ್ಲಿ ಬಂದು ಹಾಡಿ ನೃತ್ಯ ಮಾಡಲು ಆಹ್ವಾನಿಸಿದನು. ಶಿವಭಕ್ತರ ವೇಷದಲ್ಲಿದ್ದ ಈ ದೇವತೆಗಳ ಗುಂಪು ಬಂದು ಅತ್ಯಂತ ಭಾವುಕತೆಯಿಂದ, ಮಹಾ ಭಕ್ತಿಯಿಂದ ಹಾಡಿ, ಆರಾಧಿಸಿ, ಶಿವನಿಗಾಗಿ ನೃತ್ಯ ಮಾಡಿದರು. ಗಜೇಂದ್ರನ ಒಳಗೆ ಕುಳಿತಿದ್ದ ಶಿವನಿಗೆ ತನ್ನನ್ನು ತಾನು ತಡೆಯಲಾಗಲಿಲ್ಲ, ಅವನು ಸ್ಪಂದಿಸಲೇಬೇಕಾಯಿತು. ಹೀಗೆ ಅವನು ಗಜೇಂದ್ರನನ್ನು ತುಂಡುತುಂಡಾಗಿ ಸೀಳಿಕೊಂಡು ಹೊರಬಂದ!

ಶಿವನ ಮೇಲೆ ವಿಷ್ಣುವಿನ ಭಕ್ತಿ

ಶಿವನನ್ನು ದೇವತೆಗಳು, ರಾಕ್ಷಸರು,ಅಸುರರು, ಉಚ್ಚ, ನೀಚ - ಎಲ್ಲರೂ ಆರಾಧಿಸುತ್ತಾರೆ. ಅವನು ಎಲ್ಲರಿಗೂ ದೇವಾಧಿದೇವ. ವಿಷ್ಣು ಕೂಡ ಅವನನ್ನು ಆರಾಧಿಸುತ್ತಿದ್ದರು. ವಿಷ್ಣು ಎಷ್ಟರ ಮಟ್ಟಿಗೆ ಶಿವನ ಭಕ್ತನಾಗಿದ್ದ ಎಂಬುದನ್ನು ವಿವರಿಸುವ ಒಂದು ಅತ್ಯಂತ ಸುಂದರವಾದ ಕಥೆ ಇದೆ.

ಒಮ್ಮೆ, ವಿಷ್ಣು ಶಿವನಿಗೆ 1008 ಕಮಲಗಳನ್ನು ಅರ್ಪಿಸುವುದಾಗಿ ಮಾತುಕೊಟ್ಟ. ಅವನು ಕಮಲ ಹೂಗಳನ್ನು ಹುಡುಕಲು ಹೋದ, ಮತ್ತು ಇಡೀ ಜಗತ್ತನ್ನು ಹುಡುಕಿದ ನಂತರ, ಕೇವಲ 1007 ಕಮಲದ ಹೂಗಳು ಮಾತ್ರ ಸಿಕ್ಕವು. ಒಂದು ಕಡಿಮೆ ಇತ್ತು. ಅವನು ಎಲ್ಲವನ್ನೂ ತಂದು ಶಿವನ ಮುಂದೆ ಇಟ್ಟ. ಶಿವನು ತನ್ನ ಕಣ್ಣುಗಳನ್ನು ತೆರೆಯಲಿಲ್ಲ, ಕೇವಲ ನಗುತ್ತಿದ್ದ ಏಕೆಂದರೆ ಒಂದು ಕಮಲ ಕಡಿಮೆ ಇತ್ತು. ನಂತರ ವಿಷ್ಣು, "ನನ್ನನ್ನು ಕಮಲ ನಯನ ಎಂದು ಕರೆಯುತ್ತಾರೆ, ಅಂದರೆ ಕಮಲ ನೇತ್ರನಾದ ದೇವರು. ನನ್ನ ಕಣ್ಣುಗಳು ಕಮಲದಷ್ಟೇ ಸುಂದರವಾಗಿವೆ. ಆದ್ದರಿಂದ ನಾನು ನನ್ನ ಒಂದು ಕಣ್ಣನ್ನು ಅರ್ಪಿಸುತ್ತೇನೆ", ಎಂದ ಮತ್ತು ತಕ್ಷಣವೇ ತನ್ನ ಬಲಗಣ್ಣನ್ನು ಕಿತ್ತು ಲಿಂಗದ ಮೇಲೆ ಇಟ್ಟ. ಈ ರೀತಿಯ ಅರ್ಪಣೆಯಿಂದ ಸಂತುಷ್ಟನಾದ ಶಿವನು ವಿಷ್ಣುವಿಗೆ ಪ್ರಸಿದ್ಧವಾದ ಸುದರ್ಶನ ಚಕ್ರವನ್ನು ನೀಡಿದನು.

    Share

Related Tags

Get latest blogs on Shiva