logo
logo

ಶಿವನ ನೀಲಿ ಕಂಠ

ಶಿವ - ಆದಿಯೋಗಿಯು ಕರೆಯಲ್ಪಡುವ ಅನೇಕ ಹೆಸರುಗಳಲ್ಲಿ ನೀಲಕಂಠ ಅಥವಾ ನೀಲಿ ಕಂಠವುಳ್ಳವನು ಎಂಬುದೂ ಒಂದು. ಶಿವನ ನೀಲಿ ಕಂಠದ ಹಿಂದಿನ ಸಾಂಕೇತಿಕತೆಯನ್ನು ಸದ್ಗುರುಗಳು ವಿವರಿಸುತ್ತಾರೆ.

ಪ್ರಶ್ನೆ: ಶಿವನ ನೀಲಿ ಕಂಠದ ಸಾಂಕೇತಿಕತೆ ಏನು?

ಸದ್ಗುರು: ಯೋಗ ಪರಂಪರೆಯಲ್ಲಿ ಒಂದು ಕಥೆಯಿದೆ. ದೇವತೆಗಳು ಮತ್ತು ರಾಕ್ಷಸರ ನಡುವೆ ನಿರಂತರ ಸಂಘರ್ಷ ನಡೆಯುತ್ತಿತ್ತು. ಪದೇ ಪದೇ ಸಂಘರ್ಷಗಳು ನಡೆದು ಅನೇಕರು ಕೊಲ್ಲಲ್ಪಟ್ಟಾಗ, ಅವರು ಸಮುದ್ರದಲ್ಲಿ ಅಡಗಿರುವ ಅಮೃತವನ್ನು ಅಥವಾ ಜೀವನಾಮೃತವನ್ನು ಹೊರತಂದು  ತಮ್ಮೊಳಗೆ ಹಂಚಿಕೊಳ್ಳಲು ನಿರ್ಧರಿಸಿದರು, ಇದರಿಂದ ಎರಡೂ ಕಡೆಯುವರೂ ಅಮರರಾಗುತ್ತಾರೆ ಮತ್ತು ಆಗ ಸಂತೋಷದಿಂದ ಯುದ್ಧ ಮಾಡಬಹುದು. ಯುದ್ಧವು ಭಯಾನಕವಾದುದು ಏಕೆಂದರೆ ಅದು ಬಹಳಷ್ಟು ಸಾವಿಗೆ ಕಾರಣವಾಗುತ್ತದೆ. ಸಾವಿಲ್ಲದಿದ್ದರೆ, ಯುದ್ಧವು ಅದ್ಭುತವಾದ ವಿಷಯ.

ಅವರು ಪಾಲುದಾರಿಕೆಯಲ್ಲಿ ಸಮುದ್ರ ಮಥನ ಮಾಡಲು ನಿರ್ಧರಿಸಿದರು. ಪುರಾಣದ ಪ್ರಕಾರ, ಅವರು ಮೇರು ಎಂಬ ಶಿಖರವನ್ನು ತೆಗೆದುಕೊಂಡು, ದೊಡ್ಡ ಸರ್ಪವನ್ನು ಹಗ್ಗವಾಗಿ ಬಳಸಿ ಸಮುದ್ರವನ್ನು ಕಡೆಯಲು ಪ್ರಾರಂಭಿಸಿದರು. ಮೊದಲು, ಅವರು ಕಡೆಯಲು ಪ್ರಾರಂಭಿಸಿದಾಗ, ಅಮೃತದ ಬದಲು, ಸಾಗರದ ತಳದಿಂದ ಮಾರಕ ವಿಷ ಹೊರಬಂತು. ಇದನ್ನು ಹಾಲಾಹಲ ಎಂದು ಕರೆಯಲಾಯಿತು. ಈ ಮಾರಕ ವಿಷವು ದೊಡ್ಡ ಪ್ರಮಾಣದಲ್ಲಿ ಹೊರಬಂತು. ಇಷ್ಟು ವಿಷ ಹೊರಬಂದರೆ ಇಡೀ ಜಗತ್ತನ್ನೇ ನಾಶ ಮಾಡಬಹುದು ಎಂದು ಎಲ್ಲ ದೇವತೆಗಳು ಭಯಪಟ್ಟರು. ಮತ್ತು ಇದರ ಬಗ್ಗೆ ಏನನ್ನಾದರೂ ಮಾಡಬಲ್ಲವರು ಯಾರೂ ಇರಲಿಲ್ಲ.

ಎಂದಿನಂತೆ, ಯಾರೂ ಅದರ ಬಗ್ಗೆ ಏನೂ ಮಾಡಲು ಸಿದ್ಧರಿಲ್ಲದಿದ್ದಾಗ, ಶಿವನೇ ಸರಿಯಾದ ವ್ಯಕ್ತಿ ಎಂದು ಭಾವಿಸಿ, ಅವರು ಶಿವನನ್ನು ಕರೆದು ಹೊರಬರುತ್ತಿರುವ ವಿಪರೀತ ಪ್ರಮಾಣದ ವಿಷವನ್ನು ತೋರಿಸಿದರು. "ಇದು ಹರಡಿದರೆ, ಸೃಷ್ಟಿಯನ್ನೇ ನಾಶ ಮಾಡುತ್ತದೆ. ನೀನು ಏನಾದರೂ ಮಾಡಲೇಬೇಕು." ಎಂದರು. ಯಥಾಪ್ರಕಾರ, ತನ್ನ ಯೋಗಕ್ಷೇಮದ ಬಗ್ಗೆ ಯಾವುದೇ ಚಿಂತೆ ಇಲ್ಲದೆ, ಶಿವ ಆ ವಿಷವನ್ನೆಲ್ಲ ಕುಡಿದುಬಿಟ್ಟ. ಇದನ್ನು ನೋಡಿದ ಅವನ ಪತ್ನಿ ಪಾರ್ವತಿ ಹೋಗಿ ಅವನ ಕಂಠವನ್ನು ಹಿಡಿದಳು, ಆಗ ವಿಷ ಕಂಠದಲ್ಲಿಯೇ ನಿಂತುಹೋಯಿತು ಮತ್ತು ಅವನ ಕಂಠವು ನೀಲಿ ಬಣ್ಣವಾಯಿತು.

'ಪೂರ್ವಾಗ್ರಹ'ದ ವಿಷ ಮತ್ತು ಶಿವನ ನೀಲಿ ಕಂಠದ ಸಂಕೇತಾರ್ಥ


ಇದು ಬಹಳ ಮಹತ್ವದ ಕಥೆ ಹಾಗೂ ಪ್ರತಿಯೊಬ್ಬ ಮನುಷ್ಯನ ವಿಷಯದಲ್ಲೂ ನಿಜ. ನೀವು ಪ್ರತಿಯೊಬ್ಬ ಮನುಷ್ಯನ ಆಳಕ್ಕೆ ಹೋದರೆ, ಅಲ್ಲಿ ಒಂದೇ ಒಂದು ವಿಷಯವಿದೆ, ನಿರಂತರವಾಗಿ ವಿಸ್ತರಿಸುತ್ತಿರುವ ಜೀವ. ಅವರು ಅದರೊಂದಿಗೆ ಗುರುತಿಸಿಕೊಂಡರೆ, ಅವರ ಮನಸ್ಸು ಮತ್ತು ಭಾವನೆಗಳು ಸಹ ಅದೇ ರೀತಿ ಕಾರ್ಯನಿರ್ವಹಿಸುತ್ತವೆ. ಆದರೆ ನೀವು ಅವರನ್ನು ಮೇಲ್ಮೈಯಲ್ಲಿ ಸ್ಪರ್ಶಿಸಿದರೆ, ಇವಳು ಹೆಣ್ಣು, ಇವನು ಗಂಡು, ಇವನು ಅಮೇರಿಕನ್, ಇವನು ಭಾರತೀಯ ಹೀಗೆ ಅನೇಕ ವಿಷಯಗಳು. ಈ ಪೂರ್ವಾಗ್ರಹವೇ ವಿಷ. ಅವರ ಮೇಲ್ಮೈಯನ್ನು ಕಡೆದಾಗ, ಜಗತ್ತಿನ ವಿಷ ಹೊರಬರುತ್ತದೆ. ಯಾರೂ ವಿಷವನ್ನು ಮುಟ್ಟಲು ಬಯಸದ ಕಾರಣ ಎಲ್ಲರೂ ಓಡಿಹೋದರು. ಶಿವನು ಜಗತ್ತಿನ ವಿಷವನ್ನು ಕುಡಿದು, ಅದು ಅವನ ಕಂಠದಲ್ಲಿಯೇ ನಿಂತುಹೋಯಿತು. ಅದು ಒಳಗೆ ಹೋಗಿದ್ದರೆ, ಅವನಿಗೆ ವಿಷ ಏರಿರುತ್ತಿತ್ತು. ಆದರೆ ಅದು ಕಂಠದಲ್ಲಿ ನಿಂತಿದ್ದರಿಂದ, ಅವನು ಬಯಸಿದಾಗ ಉಗುಳಬಹುದಾಗಿತ್ತು. ಅದು ನಿಮ್ಮ ಕಂಠದಲ್ಲಿದ್ದರೆ, ನೀವು ಅದನ್ನು ಉಗುಳಬಹುದು. ಅದು ನಿಮ್ಮ ದೇಹದೊಳಗೆ ಹೋದರೆ, ಅದನ್ನು ಹೊರತೆಗೆಯಲಾಗುವುದಿಲ್ಲ. ಈಗ, ನಿಮ್ಮ ರಾಷ್ಟ್ರೀಯತೆ, ಲಿಂಗ, ಕುಟುಂಬ, ಆನುವಂಶಿಕ ಗುರುತುಗಳು, ಜನಾಂಗೀಯ ಗುರುತುಗಳು, ಧರ್ಮ, ಇವುಗಳು ನಿಮ್ಮ ಕಂಠದಲ್ಲಿ ನಿಲ್ಲದೆ ನಿಮ್ಮ ದೇಹದ ಪ್ರತಿಯೊಂದು ಕಣಕ್ಕೂ ಹೋಗಿವೆ. ಈಗ ಮಾಡಬೇಕಾದದ್ದು ಅದನ್ನು ಕಡೆದು ಮೇಲಕ್ಕೆ ತರುವುದು, ಆಗ ನೀವು ಅದನ್ನು ಉಗುಳಿ ಕೇವಲ ಸೃಷ್ಟಿಯ ಒಂದು ಅಂಶವಾಗಿ ಇಲ್ಲಿ ಬದುಕಬಹುದು.

ಇದು ಶಿವನಿಗಿರುವ ನೀಲಿ ಕಂಠದ ಸಂಕೇತಾರ್ಥ. ಅವನು ಜಗತ್ತಿನ ವಿಷವನ್ನು ತನ್ನ ಕಂಠದಲ್ಲಿ ಸಂಗ್ರಹಿಸಿದ್ದಾನೆ, ಹೊರತೆಗೆಯಬೇಕಾದಾಗ ಉಗುಳಲು ಸಿದ್ಧವಾಗಿದೆ. ಅದು ಅವನ ದೇಹದೊಳಗೆ ಹೋದರೆ, ಅದನ್ನು ಹೊರತೆಗೆಯಲು ಯಾವುದೇ ಮಾರ್ಗವಿರುವುದಿಲ್ಲ. ಆಧ್ಯಾತ್ಮಿಕ ಪ್ರಕ್ರಿಯೆಯೆಂದರೆ ಒಂದು ರೀತಿಯಲ್ಲಿ, ನಿಮ್ಮ ಎಲ್ಲ ಪೂರ್ವಾಗ್ರಹಗಳು ಮೇಲೆ ಬರುವಂತೆ ಕಡೆಯುವುದು ಮತ್ತು ಒಂದು ದಿನ ನಾವು ನಿಮ್ಮಿಂದ ಅದನ್ನು ಉಗುಳಿಸಬಹುದು. ಅದು ಆಳವಾಗಿದ್ದರೆ, ಹೇಗೆ ಹೊರತೆಗೆಯುವುದು? ನಿಮ್ಮ ಪೂರ್ವಾಗ್ರಹಗಳಲ್ಲಿ ಒಂದನ್ನು ಹೊರತೆಗೆಯಲು ಪ್ರಯತ್ನಿಸಿದರೆ, ನಿಮ್ಮ ಅನುಭವದಲ್ಲಿ ನಿಮ್ಮ ಜೀವವನ್ನೇ ಹೊರತೆಗೆಯುತ್ತಿರುವಂತೆ ಅನಿಸುತ್ತದೆ. ನಿಮ್ಮ ಲಿಂಗ, ಮಕ್ಕಳು, ಪೋಷಕರು ಅಥವಾ ರಾಷ್ಟ್ರದೊಂದಿಗಿನ ನಿಮ್ಮ ಗುರುತುಗಳನ್ನು ತೆಗೆದುಹಾಕಲು ಪ್ರಯತ್ನಿಸಿದರೆ, ನಿಮ್ಮ ಜೀವವನ್ನೇ ಹೊರತೆಗೆಯುತ್ತಿರುವಂತೆ ಅನಿಸುತ್ತದೆ. ಇಲ್ಲ, ಪೂರ್ವಾಗ್ರಹದ ವಿಷವನ್ನು ಮಾತ್ರ ಹೊರತೆಗೆಯಲಾಗುತ್ತಿದೆ. ಆದ್ದರಿಂದ ಪೂರ್ವಾಗ್ರಹದ ವಿಷವನ್ನು ಉಗುಳುವ ಸಮಯ ಬಂದಿದೆ.

    Share

Related Tags

Get latest blogs on Shiva