logo
logo

Forms of Shiva

ಶಿವನ ರೂಪಗಳು



ಮಾನವರ ಮನಸ್ಸಿಗೆ ಊಹಿಸಲು ಸಾಧ್ಯವಾದ ಮತ್ತು ಸಾಧ್ಯವಾಗದ ಪ್ರತಿಯೊಂದು ಸಂಭಾವ್ಯ ಗುಣಗಳನ್ನೊಳಗೊಂಡಿರುವ ಹಲವು ರೂಪಗಳನ್ನು ಶಿವ ಹೊಂದಿದ್ದಾನೆ. ಅವುಗಳಲ್ಲಿ ಕೆಲವು ವಿಚಿತ್ರ ಮತ್ತು ಉಗ್ರ ರೂಪಗಳು. ಕೆಲವು ನಿಗೂಢವಾದವು. ಇನ್ನು ಕೆಲವು ಪ್ರೀತಿಯುತ ಮತ್ತು ಆಕರ್ಷಕವಾದವು. ಮುಗ್ಧ ಭೋಲೇನಾಥನಿಂದ ಭಯಂಕರ ಕಾಲಭೈರವನವರೆಗೂ, ಸುಂದರವಾದ ಸೋಮಸುಂದರನಿಂದ ಘೋರವಾದ ಅಘೋರ ರೂಪದವರೆಗೂ - ಶಿವ ಎಲ್ಲಾ ಸಾಧ್ಯತೆಗಳನ್ನೂ ಬರಮಾಡಿಕೊಳ್ಳುತ್ತಾನೆ, ಅದರೂ ಆ ರೂಪಗಳಿಂದ ನಿರ್ಲಿಪ್ತನಾಗಿರುತ್ತಾನೆ. ಇವುಗಳಲ್ಲಿ, ಐದು ಮೂಲಭೂತ ರೂಪಗಳಿವೆ. ಈ ಲೇಖನದಲ್ಲಿ, ಅವುಗಳು ಯಾವುವು ಮತ್ತು ಅವುಗಳ ಹಿಂದಿನ ಮಹತ್ವ ಮತ್ತು ವಿಜ್ಞಾನವೇನೆಂಬುದನ್ನು ಸದ್ಗುರುಗಳು ವಿವರಿಸುತ್ತಾರೆ.

ಯೋಗ ಯೋಗ ಯೋಗೇಶ್ವರಾಯ
ಭೂತ ಭೂತ ಭೂತೇಶ್ವರಾಯ
ಕಾಲ ಕಾಲ ಕಾಲೇಶ್ವರಾಯ
ಶಿವ ಶಿವ ಸರ್ವೇಶ್ವರಾಯ
ಶಂಭೋ ಶಂಭೋ ಮಹಾದೇವಾಯ

ಯೋಗೇಶ್ವರ

ಸದ್ಗುರು: ನಿಮಗೆ ಭೌತಿಕವಾಗಿರುವುದರ ಮಿತಿಯ ಅನುಭವವಾಗಿದ್ದರೆ, ಈ ವಿಶಾಲ ಬ್ರಹ್ಮಾಂಡದಲ್ಲೂ ನಿಮಗೆ ಇತಿಮಿತಿಯ ಅನುಭವವಾಗಿ ಭೌತಿಕತೆಯನ್ನು ಮೀರಿ ಹೋಗುವ ಅಗತ್ಯತೆಯನ್ನು ಅನುಭವಿಸುತ್ತಿರುವ ಹಂತಕ್ಕೆ ನೀವು ನಿಮ್ಮ ಜೀವನದಲ್ಲಿ ಬಂದಿದ್ದೀರೆಂದರೆ ನೀವು ಯೋಗದ ಪಥದಲ್ಲಿದ್ದೀರ ಎಂದರ್ಥ. ನಿಮ್ಮನ್ನೊಂದು ಸಣ್ಣ ಮಿತಿಯಿಂದ ನಿಗ್ರಹಿಸಬಹುದಾದರೆ, ಮುಂದೆ ಒಂದು ಹಂತದಲ್ಲಿ ನಿಮ್ಮನ್ನು ದೊಡ್ಡ ಮಿತಿಯಿಂದಲೂ ನಿಗ್ರಹಿಸಲ್ಪಡಬಹುದು ಎನ್ನುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ಇದನ್ನು ಅನುಭವಿಸಲು ನೀವು ಈ ಜಗತ್ತಿನ ಉದ್ದಗಲಕ್ಕೂ ಪರ್ಯಟನೆ ಮಾಡುವುದೇನು ಬೇಡ. ಇಲ್ಲೇ ಕುಳಿತು, ಈ ಗಡಿಯು ನಿಮ್ಮನ್ನ ನಿಗ್ರಹಿಸುತ್ತದೆ ಎಂದಾದರೆ, ಸ್ವಲ್ಪ ಸಮಯದ ನಂತರ, ನೀವು ವಿಶ್ವದಲ್ಲೆಡೆ ಓಡಾಡಿದರೂ, ಅದೂ ನಿಮ್ಮನ್ನು ನಿಗ್ರಹಿಸುತ್ತದೆಯೆಂದು ನಿಮಗೆ ತಿಳಿಯುತ್ತದೆ - ಇದು ಕೇವಲ ದೂರವನ್ನು ಕ್ರಮಿಸುವ ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಒಂದು ಬಾರಿ ನಿಮ್ಮೀ ಸಾಮರ್ಥ್ಯವನ್ನು ವರ್ಧಿಸಿಕೊಂಡರೆ, ಯಾವುದೇ ಪರಮಿತಿಯು ನಿಮಗೆ ನಿರ್ಬಂಧವಾಗುತ್ತದೆ. ನಿಮಗಿದು ಅರ್ಥವಾಯಿತೆಂದರೆ, ಭೌತಿಕ ಸೃಷ್ಟಿಯನ್ನು ಹತೋಟಿಯಲ್ಲಿಟ್ಟುಕೊಂಡು ನೀವು ಈ ಹಾತೊರೆತವನ್ನು ಈಡೇರಿಸಿಕೊಳ್ಳಲಾಗದೆಂದು ಒಮ್ಮೆ ಅನುಭವಕ್ಕೆ ಬಂದರೆ, ಇದಕ್ಕೆ ಉತ್ತರ ಯೋಗವೆಂದು ನಿಮಗೆ ತಿಳಿಯುತ್ತದೆ. ಭೌತಿಕ ಸೃಷ್ಟಿಯ ಗಡಿಯನ್ನು ಒಡೆಯುವುದೇ ಯೋಗ. ಅಸ್ತಿತ್ವದ ಭೌತಿಕತೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದಷ್ಟನ್ನೇ ನೀವು ಪ್ರಯತ್ನಿಸಬಾರದು, ನೀವು ಅದರ ಗಡಿಯನ್ನು ಉಲ್ಲಂಘಿಸಿ, ಭೌತಿಕವಲ್ಲದಿರುವ ಆಯಾಮವನ್ನು ಮುಟ್ಟವ ಪ್ರಯತ್ನ ಮಾಡಬೇಕು. ಮಿತಿಯೊಳಗಿರುವುದನ್ನು ಅನಂತದೊಡನೆ ಒಟ್ಟಾಗಿಸಬೇಕು. ನೀವು ಗಡಿಯನ್ನು ಅಸ್ತಿತ್ವದ ಮಿತಿಯಿಲ್ಲದ ಸ್ವರೂಪದಲ್ಲಿ ಕರಗಿಸಬೇಕು. ಹಾಗಾಗಿ, ಯೋಗೇಶ್ವರ.

ಭೂತೇಶ್ವರ

ಭೌತಿಕ ಸೃಷ್ಟಿ - ನಾವು ನೋಡುವುದು, ಕೇಳುವುದು, ಆಘ್ರಾಣಿಸುವುದು, ರುಚಿ ನೋಡುವುದು ಮತ್ತು ಸ್ಪರ್ಶಿಸುವುದೆಲ್ಲವೂ - ಶರೀರ, ಗ್ರಹ, ವಿಶ್ವ, ಬ್ರಹ್ಮಾಂಡ - ಎಲ್ಲವೂ ಐದು ಅಂಶಗಳ ಆಟ. ಕೇವಲ ಐದು ಅಂಶಗಳಿಂದ, "ಸೃಷ್ಟಿ" ಎನ್ನುವ ಭವ್ಯವಾದ ತುಂಟಾಟ! ಕೇವಲ ನಿಮ್ಮ ಒಂದು ಕೈಎಣಿಕೆಯಷ್ಟು ಅಂಶಗಳಿಂದ, ಅದೆಷ್ಟು ಸಂಗತಿಗಳನ್ನು ಸೃಷ್ಟಿಸಲಾಗುತ್ತಿದೆ! ಸೃಷ್ಟಿಗೆ ಇದಕ್ಕಿಂತ ಹೆಚ್ಚು ಸಹಾನೂಭೂತಿಯಿರಲು ಸಾಧ್ಯವಿಲ್ಲ. ಐದು ಕೋಟಿ ಅಂಶಗಳಿದ್ದರೆ, ನೀವು ಕಳೆದುಹೋಗಿಬಿಟ್ಟಿರುವಿರಿ.

ಪಂಚಭೂತಗಳೆಂದು ಕರೆಯಲಾಗುವ ಈ ಐದು ಅಂಶಗಳ ಮೇಲೆ ಹತೋಟಿಯನ್ನು ಸಾಧಿಸಿದರೆ ಎಲ್ಲವನ್ನೂ ಸಾಧಿಸಿದಂತೆ - ನಿಮ್ಮ ಆರೋಗ್ಯ, ನಿಮ್ಮ ಒಳಿತು, ಜಗತ್ತಿನಲ್ಲಿ ನಿಮ್ಮ ಶಕ್ತಿ ಮತ್ತು ನಿಮಗೆ ಬೇಕಿರುವುದನ್ನು ಸೃಷ್ಟಿಸುವ ನಿಮ್ಮ ಸಾಮರ್ಥ್ಯವನ್ನು ಕೈವಶ ಮಾಡಿಕೊಂಡಂತೆ. ತಿಳಿದೋ ಅಥವಾ ತಿಳಿಯದೆಯೋ, ಅರಿವಿದ್ದೋ ಅಥವಾ ಅರಿವಿಲ್ಲದೆಯೋ, ಈ ಪಂಚಭೂತಗಳ ಮೇಲೆ ವ್ಯಕ್ತಿಗತವಾಗಿ ಜನರು ಒಂದು ಮಟ್ಟದ ನಿಯಂತ್ರಣ ಅಥವಾ ಹತೋಟಿಯನ್ನು ಸಾಧಿಸುತ್ತಾರೆ. ಯಾವ ಮಟ್ಟದ ನಿಯಂತ್ರಣ ಅಥವಾ ಹತೋಟಿಯಿದೆಯೆನ್ನುವುದು ಅವರ ಶರೀರ ಮತ್ತು ಮನಸ್ಸಿನ ಸ್ವರೂಪವನ್ನು, ಅವರು ಮಾಡುವ ಕೆಲಸದ ಸ್ವರೂಪವನ್ನು ಮತ್ತು ಅದನ್ನವರು ಎಷ್ಟು ಯಶಸ್ವಿಯಾಗಿ ಮಾಡುತ್ತಾರೆ, ಅವರ ದೂರ ದೃಷ್ಟಿ - ಎಲ್ಲವನ್ನೂ ನಿರ್ಧರಿಸುತ್ತದೆ. ಭೂತ ಭೂತ ಭೂತೇಶ್ವರಾಯ ಎನ್ನುವುದರ ಅರ್ಥವಿದು: ಯಾರು ಪಂಚಭೂತಗಳನ್ನು ಹತೋಟಿಯಲ್ಲಿಟ್ಟುಕೊಂಡಿರುತ್ತಾರೋ, ಅಂತಹವರು ಕಡೆ ಪಕ್ಷ ಭೌತಿಕ ಆಯಾಮದಲ್ಲಾದರೂ ತಮ್ಮ ಜೀವನದ ವಿಧಿಯನ್ನು ನಿರ್ಧರಿಸುತ್ತಾರೆ.

ಕಾಲೇಶ್ವರ

ಕಾಲ ಅಥವಾ ಸಮಯ. ನೀವು ಪಂಚಭೂತಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದರೂ, ನೀವು ಅನಂತದೊಡನೆ ಒಂದಾಗಿದ್ದರೂ ಅಥವಾ ನೀವು ಬಂಧವಿಮುಕ್ತರಾಗಿದ್ದರೂ - ನೀವು ಎಲ್ಲಿಯವರೆಗೆ ಇಲ್ಲಿರುವಿರೋ, ಕಾಲವು ಕಳೆದು ಹೋಗುತ್ತಿರುತ್ತದೆ. ಕಾಲದ ಮೇಲೆ ಹತೋಟಿಯನ್ನು ಸಾಧಿಸುವುದು ಒಂದು ಸಂಪೂರ್ಣವಾಗಿ ಬೇರೆಯೇ ಆಯಾಮವೇ ಹೌದು. ಕಾಲವೆನ್ನುವುದರ ಅರ್ಥ ಕೇವಲ ಸಮಯವೆಂದಲ್ಲ, ಅದಕ್ಕೆ ಅಂಧಕಾರವೆನ್ನುವ ಅರ್ಥವೂ ಇದೆ. ಸಮಯವೆಂದರೆ ಅಂಧಕಾರ. ಸಮಯವು ಬೆಳಕಾಗಿರಲು ಸಾಧ್ಯವಿಲ್ಲ, ಏಕೆಂದರೆ ಬೆಳಕು ಸಮಯದಲ್ಲಿ ಪಯಣಿಸುತ್ತದೆ. ಬೆಳಕು ಸಮಯದ ಅಡಿಯಾಳು. ಬೆಳಕಿಗೆ ಆದಿ ಮತ್ತು ಅಂತ್ಯವಿದೆ. ಕಾಲವು ಅಂತಹ ಸಂಗತಿಯಲ್ಲ. ಹಿಂದೂಗಳು ಕಾಲದ ಅತ್ಯಂತ ಪ್ರೌಢ ತಿಳುವಳಿಕೆಯನ್ನು ಹೊಂದಿದ್ದಾರೆ; ಕಾಲವನ್ನು ಆರು ವಿಭಿನ್ನ ಆಯಾಮಗಳಾಗಿ ನೋಡಲಾಗುತ್ತದೆ. ನಿಮಗೆ ತಿಳಿದಿರಬೇಕಾದ ಒಂದು ವಿಷಯವಿದು - ನೀವಿಲ್ಲಿ ಕುಳಿತಿರುವ ಹಾಗೆಯೇ ನಿಮ್ಮ ಕಾಲ ಕಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಸಾವನ್ನು ವ್ಯಕ್ತಪಡಿಸುವ ರೀತಿ ತುಂಬಾ ಸೊಗಸಾಗಿದೆ - "ಅವರು ಕಾಲವಾದರು".

ಇಂಗ್ಲಿಷ್-ನಲ್ಲೂ ನಾವು ಹಿಂದೆ ಇಂತಹದೇ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದೆವು - "ಹಿ ಎಕ್ಸ್-ಪೈರ್ಡ್". ಒಂದು ಔಷಧಿಯ ತರಹ, ಒಬ್ಬ ಮನುಷ್ಯನು ಕೂಡ ತನ್ನ ಎಕ್ಸ್-ಪೈರಿ ದಿನದೊಂದಿಗೆ ಬರುತ್ತಾನೆ. ನೀವು ಅನೇಕ ಸ್ಥಳಗಳಿಗೆ ಹೋಗುತ್ತಿದ್ದೀರೆಂದು ನೀವು ಎಣಿಸಬಹುದು. ಇಲ್ಲ, ನಿಮ್ಮ ದೇಹದ ದೃಷ್ಟಿಯಿಂದ ನೋಡಿದರೆ, ಅದು ಒಂದು ಕ್ಷಣವೂ ಆಚೀಚೆ ಹೋಗದೇ ನೇರವಾಗಿ ಮಣ್ಣಿನೊಂದಿಗೆ ಸೇರಲು ಹೋಗುತ್ತಿದೆ. ಅದರ ಗತಿಯನ್ನು ನೀವು ನಿಧಾನಿಸಬಹುದು, ಆದರೆ ಅದು ತನ್ನ ದಿಕ್ಕನ್ನು ಬದಲಿಸುವುದಿಲ್ಲ. ನಿಮಗೆ ವಯಸ್ಸಾಗುತ್ತಿದಂತೆ, ನೀವೇ ನೋಡುವ ಹಾಗೆ, ನಿಧಾನವಾಗಿ ಭೂಮಿಯ ನಿಮ್ಮನ್ನ ಎಳೆದುಕೊಳ್ಳಲು ಪ್ರಯತ್ನಿಸುತ್ತದೆ. ಜೀವನವು ಅದರ ಸರದಿಯನ್ನು ಮುಗಿಸುತ್ತದೆ.

ಕಾಲ ಜೀವನದ ವಿಶೇಷ ಆಯಾಮವಾಗಿದೆ - ಇದು ಇತರ ಮೂರು ಆಯಾಮಗಳೊಂದಿಗೆ ಸರಿಹೊಂದುವುದಿಲ್ಲ. ವಿಶ್ವದಲ್ಲಿನ ಎಲ್ಲಾ ವಿಷಯಗಳಗೆ ಹೋಲಿಸಿದಲ್ಲಿ, ಇದು ನಿಲುಕದಿರುವ ಸಂಗತಿಯಾಗಿದೆ. ನಿಮಗಿದನ್ನು ಕಟ್ಟಿಹಾಕಲು ಸಾಧ್ಯವಿಲ್ಲ, ಏಕೆಂದರೆ ಅದು ಇಲ್ಲದ ಸಂಗತಿ. ಅದು ನಿಮಗೆ ತಿಳಿದಿರುವ ಅಸ್ತಿತ್ವದ ಯಾವುದೇ ರೂಪದಲ್ಲಿಲ್ಲ. ಅದು ಇಡೀ ವಿಶ್ವವನ್ನು ಹಿಡಿದಿಟ್ಟಿರುವ ಸೃಷ್ಟಿಯ ಅತ್ಯಂತ ಶಕ್ತಿಶಾಲಿ ಆಯಾಮವಾಗಿದೆ. ಈ ಕಾರಣದಿಂದಾಗಿಯೇ ಆಧುನಿಕ ಭೌತಶಾಸ್ತ್ರಕ್ಕೆ ಗುರುತ್ವಾಕರ್ಷಣೆಯು ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಯಾವುದೇ ಸುಳಿವಿಲ್ಲ, ಏಕೆಂದರೆ ಗುರುತ್ವಾಕರ್ಷಣೆ ಎನ್ನುವುದಿಲ್ಲ. ಎಲ್ಲವನ್ನೂ ಹಿಡಿದಿಟ್ಟಿರುವುದು ಕಾಲ.


ಶಿವ – ಸರ್ವೇಶ್ವರಾಯ – ಶಂಭೋ

ಶಿವ ಎಂದರೆ "ಯಾವುದಿಲ್ಲವೋ ಅದು; ಯಾವುದು ವಿಲೀನವಾಗಿದೆಯೋ ಅದು." “ಯಾವುದಿಲ್ಲವೋ ಅದು” ಎಲ್ಲದರ ತಳಹದಿಯಾಗಿದೆ. ಮತ್ತದುವೇ ಅಪರಿಮಿತ ಸರ್ವೇಶ್ವರ. ಶಂಭೋ ಎನ್ನುವುದು ಒಂದು ಕೀಲಿಕೈ, ಒಂದು ಮಾರ್ಗವಷ್ಟೆ. ನಿಮ್ಮ ದೇಹವು ಛಿದ್ರವಾಗುವ ಹಾಗೆ ನೀವದನ್ನು ಉಚ್ಛರಿಸಿದರೆ, ಅದೊಂದು ಮಾರ್ಗವಾಗುತ್ತದೆ.

ನಿಮಗೆ ಎಲ್ಲ ಅಂಶಗಳನ್ನು ಕರಗತ ಮಾಡಿಕೊಂಡು ಅಲ್ಲಿಗೆ ತಲುಪಬೇಕಿದ್ದರೆ, ಬಹಳ ಸಮಯ ಬೇಕಾಗುತ್ತದೆ. ನಿಮಗೆ ಸುಮ್ಮನೆ ಅಲ್ಲಿಗೆ ತಲುಪಬೇಕಿದ್ದರೆ, ನೀವು ಈ ಎಲ್ಲಾ ಅಂಶಗಳನ್ನು, ಅವುಗಳನ್ನು ಕರಗತ ಮಾಡಿಕೊಳ್ಳದೆಯೇ, ಸುಮ್ಮನೆ ನುಸುಳಿಕೊಳ್ಳುವ ಮೂಲಕ ಅತಿಶಯಿಸಬಹುದು.

ನಾನು ಚಿಕ್ಕ ಹುಡುಗನಾಗಿದ್ದಾಗ, ಮೈಸೂರು ಮೃಗಾಲಯದಲ್ಲಿ ನನಗೆ ಸ್ನೇಹಿತರಿದ್ದರು. ಭಾನುವಾರವೆಂದರೆ ನನ್ನ ಜೇಬಿನಲ್ಲಿ ಎರಡು ರೂಪಾಯಿಗಳಿರುತ್ತಿದ್ದವು ಎಂದರ್ಥ. ಇದನ್ನು ತಗೆದುಕೊಂಡು ನಾನು ಮೀನಿನ ಮಾರುಕಟ್ಟೆಗೆ, ಅರ್ಧ ಕೊಳೆತಿರುವ ಮೀನುಗಳನ್ನು ಮಾರುತ್ತಿರುವ ತೀರ ಒಳಗಿರುವ ಜಾಗಕ್ಕೆ ಹೋಗುತ್ತಿದ್ದೆ. ಕೆಲವು ಬಾರಿ, ಎರಡು ರೂಪಾಯಿಗೆ ಎರಡು ಅಥವಾ ಮೂರು ಕೆ.ಜಿ. ಮೀನು ಸಿಗುತ್ತಿತ್ತು. ಅದನ್ನೊಂದು ಪ್ಲಾಸ್ಟಿಕ್ ಚೀಲದೊಳಗೆ ಹಾಕಿಕೊಂಡು ಮೃಗಾಲಯಕ್ಕೆ ಹೋಗುತ್ತಿದ್ದೆ. ಆದರೆ ನನ್ನ ಬಳಿ ಮೃಗಾಲಯದೊಳಗೆ ಹೋಗಲು ಹಣವಿರುತ್ತಿರಲಿಲ್ಲ. ನಿಮಗೆ ಗೇಟಿನ ಮೂಲಕ ಹೋಗಬೇಕೆಂದಿದ್ದರೆ ಆ ಸಮಯದಲ್ಲಿ ಟಿಕೆಟ್ಟಿನ ಬೆಲೆ ಒಂದು ರೂಪಾಯಿ ಆಗಿತ್ತು. ಅಲ್ಲಿ ಸುಮಾರು ಎರಡು ಅಡಿ ಎತ್ತರದ ತಡೆಗೋಲು ಇತ್ತು. ನೀವು ಅದರ ಕೆಳಗೆ ತೆವಳಿಕೊಂಡು ಹೋಗಲು ಸಿದ್ಧರಿದ್ದರೆ, ಪ್ರವೇಶ ಉಚಿತ! ತೆವಳಲು ನನಗೇನೂ ಸಮಸ್ಯೆಯಿರಲಿಲ್ಲ, ನಾನು ತೆವಳಿಕೊಂಡು ಒಳಹೋಗುತ್ತಿದ್ದೆ. ಇಡೀ ದಿನವನ್ನು ನನ್ನ ಸ್ನೇಹಿತರಿಗೆ ಕೊಳೆತ ಮೀನನ್ನು ತಿನ್ನಿಸುತ್ತಾ ಅಲ್ಲೇ ಕಳೆಯುತ್ತಿದ್ದೆ.

ನೀವು ನೇರವಾಗಿ ನಡೆದು ಹೋದರದು ಕಷ್ಟಕರವಾದ ಮಾರ್ಗ - ಬಹಳ ಕೆಲಸ ಮಾಡಬೇಕಾಗುತ್ತದೆ. ನೀವು ತೆವಳಲು ಸಿದ್ಧರಿದ್ದರೆ, ಸುಲಭವಾದ ಮಾರ್ಗಗಳಿವೆ. ತೆವಳಲು ಸಿದ್ಧವಿರುವವರು ಯಾವುದನ್ನೂ ಕರಗತ ಮಾಡಿಕೊಳ್ಳುವ ಬಗ್ಗೆ ಚಿಂತಿಸಬೇಕಿಲ್ಲ. ಬದುಕಿರುವಷ್ಟು ದಿನ ಬದುಕಿ. ನೀವು ಸತ್ತಾಗ, ನಿಮ್ಮ ಪರಮಸತ್ಯವನ್ನು ತಲುಪುವಿರಿ.

ಕರಗತ ಮಾಡಿಕೊಳ್ಳುವುದರಲ್ಲಿ - ಅದು ಅತ್ಯಂತ ಸರಳ ವಿಷಯವೇ ಆಗಿದ್ದರೂ - ಒಂದು ವಿವರಿಸಲಾಗದ ಸೌಂದರ್ಯವಿದೆ. ಚೆಂಡನ್ನು ಒದೆಯುವ ಉದಾಹರಣೆಯನ್ನು ನೋಡಿ. ಅದನ್ನೊಂದು ಮಗುವೂ ಮಾಡಬಹುದು. ಆದರೆ, ಯಾರಾದರೂ ಅದನ್ನು ಕರಗತ ಮಾಡಿಕೊಂಡರೆ, ಅದರಲ್ಲಿ ಇದ್ದಕ್ಕಿದಂತೆ ಇಡೀ ವಿಶ್ವವು ಎದ್ದು ನಿಂತು ನೋಡುವಂತಹ ಸೌಂದರ್ಯವಿರುತ್ತದೆ. ನಿಮಗೆ ಅಂತಹ ನೈಪುಣ್ಯಯನ್ನು ತಿಳಿಯಬೇಕಿದ್ದಲ್ಲಿ, ಅದರ ಸೌಂದರ್ಯವನ್ನು ಆನಂದಿಸಬೇಕಿದ್ದಲ್ಲಿ, ಅದನ್ನು ಸಾಧಿಸಲು ಕೆಲಸ ಮಾಡಬೇಕಾಗುತ್ತದೆ. ಆದರೆ, ನೀವು ತೆವಳಲು ಸಿದ್ಧರಿದ್ದರೆ, ಸರಳವಾಗಿ ಶಂಭೋ ಎಂದರೆ ಸಾಕು.

    Share

Related Tags

ಶಿವ ತತ್ವ

Get latest blogs on Shiva

Related Content

Adiyogi – The First Yogi: More Than a Man