ಸದ್ಗುರುಗಳು ಬದರೀನಾಥದ ದಂತಕಥೆಯನ್ನು ವಿವರಿಸುತ್ತಾ ವಿಷ್ಣು ಉಪಾಯದಿಂದ ಶಿವ ಮತ್ತು ಪಾರ್ವತಿಯರನ್ನು ಹೇಗೆ ಅವರ ವಾಸಸ್ಥಳದಿಂದ ಹೊರಹೋಗುವಂತೆ ಮಾಡಿದ ಅನ್ನೋದನ್ನು ಹೇಳುತ್ತಾರೆ.
ಸದ್ಗುರು : ಬದರೀನಾಥದ ಬಗ್ಗೆ ಒಂದು ದಂತಕಥೆ ಇದೆ. ಶಿವ ಮತ್ತು ಪಾರ್ವತಿ ವಾಸವಾಗಿದ್ದಿದ್ದು ಅಲ್ಲೇ. ಅದು ಹಿಮಾಲಯದಲ್ಲಿ ಸುಮಾರು 10,000 ಅಡಿಗಳಷ್ಟು ಎತ್ತರದಲ್ಲಿರುವ ಒಂದು ರಮಣೀಯವಾದ ಸ್ಥಳ. ಒಂದು ದಿನ, ನಾರದರು ವಿಷ್ಣುವಿನ ಬಳಿ ಹೋಗಿ “ನೀನು ಮನುಕುಲಕ್ಕೆ ಒಂದು ಕೆಟ್ಟ ಉದಾಹರಣೆಯಾಗಿದ್ದೀಯ. ನೀನು ಯಾವಾಗಲೂ ಆದಿಶೇಷನ ಮೇಲೆ ಮಲಗಿಕೊಂಡಿರುತ್ತೀಯ. ಮತ್ತೆ ನಿನ್ನ ಹೆಂಡತಿ, ಲಕ್ಷ್ಮಿ, ಯಾವಾಗಲೂ ನಿನ್ನ ಸೇವೆ ಮಾಡುತ್ತಾ ನಿನ್ನನ್ನು ಇನ್ನಷ್ಟು ಕೆಡಿಸುತ್ತಾ ಇದ್ದಾಳೆ. ನೀನು ಭೂಮಿಯ ಇತರೆ ಜೀವಿಗಳಿಗೆ ಒಂದು ಒಳ್ಳೆಯ ಮಾದರಿಯಲ್ಲ. ಎಲ್ಲಾ ಜೀವಿಗಳಿಗೋಸ್ಕರ ನೀನು ಏನಾದರೂ ಮಾಡಬೇಕು.” ಅಂದರು.
ಈ ಟೀಕೆಯಿಂದ ಪಾರಾಗಲು ಮತ್ತು ತನ್ನ ಉನ್ನತಿಗಾಗಿ ಸಾಧನೆಯನ್ನು ಮಾಡಲು ಒಂದು ಒಳ್ಳೆಯ ಸ್ಥಳವನ್ನ ಹುಡುಕಿಕೊಂಡು ವಿಷ್ಣುವು ಹಿಮಾಲಯಕ್ಕೆ ಬರುತ್ತಾನೆ. ಅವನು ಬದರೀನಾಥಕ್ಕೆ ಬರುತ್ತಾನೆ. ಅದು ಅವನು ಬಯಸಿದಂತೆ ಅಗತ್ಯವಾದ ಸವಲತ್ತುಗಳನ್ನು ಹೊಂದಿದ ಒಂದು ಸುಂದರವಾದ ವಾಸಸ್ಥಾನವಾಗಿತ್ತು – ಸಾಧನೆಗೆ ಎಲ್ಲಾ ರೀತಿಯಲ್ಲೂ ಅನುಕೂಲಕರವಾದಂತಹ ಜಾಗ ಅದಾಗಿತ್ತು.
ಅವನಿಗೆ ಅಲ್ಲೊಂದು ಮನೆ ಕಂಡಿತು ಮತ್ತು ಅವನು ಅದರೊಳಗೆ ಹೋದ. ಆದರೆ ಆಮೇಲೆ ಅದು ಶಿವನ ವಾಸಸ್ಥಳ ಅನ್ನುವುದು ಅವನಿಗೆ ಗೊತ್ತಾಯಿತು – ಮತ್ತೆ ಆ ಮನುಷ್ಯ ಬಹಳ ಅಪಾಯಕಾರಿ ಬೇರೆ. ಅವನಿಗೇನಾದರೂ ಕೋಪ ಬಂದರೆ, ಬೇರೆಯವರ ಕುತ್ತಿಗೆಯಷ್ಟೇ ಅಲ್ಲ, ತನ್ನ ಕುತ್ತಿಗೆ ತಾನೇ ಕೊಯ್ದು ಹಾಕುವಂತವನು. ಅವನು ಬಹಳ ಅಪಾಯಕಾರಿ.
ಹಾಗಾಗಿ, ನಾರಾಯಣನು ಒಂದು ಚಿಕ್ಕ ಮಗುವಿನ ರೂಪತಾಳಿ ಆ ಮನೆಯ ಮುಂದೆ ಕುಳಿತ. ಹೊರಗೆ ವಿಹಾರಕ್ಕೆ ಅಂತ ಹೋಗಿದ್ದ ಶಿವ ಮತ್ತು ಪಾರ್ವತಿ ಮನೆಗೆ ಹಿಂತಿರುಗಿ ಬಂದರು. ಅವರು ಮನೆಯ ಹತ್ತಿರ ಬಂದು ನೋಡಿದಾಗ ಅಳುತ್ತಿದ್ದ ಒಂದು ಮಗು ಕಂಡಿತು. ಮನಕರಗುವಂತೆ ಅಳುತ್ತಿದ್ದ ಮಗುವನ್ನ ನೋಡಿ ಪಾರ್ವತಿಯಲ್ಲಿ ಮಾತೃತ್ವದ ಭಾವನೆಗಳು ಜಾಗೃತವಾದವು. ಆಕೆ ಹೋಗಿ ಆ ಮಗುವನ್ನ ಎತ್ತಿಕೊಳ್ಳಲು ಮುಂದಾದಳು. ಅವಳನ್ನು ಶಿವ ತಡೆದು, “ಆ ಮಗುವನ್ನ ಮುಟ್ಟಬೇಡ” ಅಂದ. ಪಾರ್ವತಿ “ಎಂತಹ ಕ್ರೂರತೆ, ಹಾಗೆ ಹೇಳಲು ನಿಮಗೆ ಹೇಗೆ ಸಾಧ್ಯ?” ಎಂದು ಕೇಳಿದಳು.
ಶಿವ ಹೇಳಿದ, “ಅದು ಒಳ್ಳೆಯ ಮಗುವಲ್ಲ. ಅದು ಹೇಗೆ ತನ್ನಷ್ಟಕ್ಕೆ ತಾನು ನಮ್ಮ ಮನೆಯ ಬಾಗಿಲಿಗೆ ಬಂದಿದೆ? ಸುತ್ತಲೂ ಯಾರೂ ಇಲ್ಲ. ಈ ಹಿಮದಲ್ಲಿ ಅದರ ತಂದೆತಾಯಿಗಳ ಹೆಜ್ಜೆಗುರುತೂ ಇಲ್ಲ. ಅದು ಮಗುವಲ್ಲ.” ಆದರೆ ಪಾರ್ವತಿ, “ನೀವು ಸುಮ್ಮನಿರಿ! ನನ್ನಲ್ಲಿರುವ ತಾಯ್ತನವು ಒಂದು ಮಗುವನ್ನು ಈ ರೀತಿ ಬಿಟ್ಟುಬಿಡಲು ಒಪ್ಪುವುದಿಲ್ಲ” ಎಂದು ಹೇಳಿದವಳೇ ಮಗುವನ್ನು ಎತ್ತಿಕೊಂಡು ಮನೆಯೊಳಕ್ಕೆ ಹೋದಳು. ಮಗುವು ಪಾರ್ವತಿಯ ತೊಡೆಯ ಮೇಲೆ ಸುಖವಾಗಿ ಕುಳಿತು, ಶಿವನನ್ನು ಹಿಗ್ಗಿನಿಂದ ನೋಡುತ್ತಿತ್ತು. ಶಿವನಿಗೆ ಇದರ ಪರಿಣಾಮ ಗೊತ್ತಾಯಿತು, ಆದರೂ “ಸರಿ, ಏನಾಗುತ್ತೋ ನೋಡೋಣ” ಅಂದುಕೊಂಡ.
ಪಾರ್ವತಿ ಮಗುವನ್ನು ಮುದ್ದು ಮಾಡುತ್ತಾ ಆಹಾರ ತಿನ್ನಿಸಿ, ಮನೆಯಲ್ಲೇ ಬಿಟ್ಟು ಶಿವನೊಂದಿಗೆ ಹತ್ತಿರದ ಬಿಸಿನೀರ ಚಿಲುಮೆಗೆ ಸ್ನಾನಕ್ಕಾಗಿ ಹೋದಳು. ಅವರು ಹಿಂತಿರುಗಿ ಬಂದಾಗ, ಮನೆಯ ಬಾಗಿಲು ಒಳಗಿನಿಂದ ಚಿಲಕ ಹಾಕಲ್ಪಟ್ಟಿತ್ತು. ಪಾರ್ವತಿಗೆ ಅಘಾತವಾಯಿತು. “ಬಾಗಿಲನ್ನು ಮುಚ್ಚಿದವರು ಯಾರು?” ಎಂದು ಕೇಳಿದಳು, “ನಾನು ಹೇಳಿದೆ, ಆ ಮಗುವನ್ನು ಎತ್ತಿಕೊಳ್ಳಬೇಡ ಎಂದು. ನೀನು ಮಗುವನ್ನು ಮನೆಗೆ ತಂದೆ, ಅದೀಗ ಬಾಗಿಲು ಹಾಕಿಕೊಂಡಿದೆ.” ಅಂದ ಶಿವ.
ಪಾರ್ವತಿ ಹೇಳಿದಳು, “ನಾವೀಗ ಏನು ಮಾಡೋದು?”
ಶಿವನಿಗೆ ಎರಡು ಆಯ್ಕೆಗಳಿದ್ದವು : ಒಂದು, ತನ್ನ ಮುಂದಿರುವುದೆಲ್ಲವನ್ನೂ ಸುಟ್ಟುಹಾಕುವುದು. ಇನ್ನೊಂದು, ಬೇರೆ ಜಾಗ ಹುಡುಕಿಕೊಂಡು ಹೋಗುವುದು. ಹಾಗಾಗಿ ಅವನು ಹೇಳಿದ, “ನಾವು ಬೇರೆ ಎಲ್ಲಾದರೂ ಹೋಗೋಣ. ಯಾಕೆಂದರೆ ಅದು ನಿನ್ನ ಮುದ್ದಿನ ಮಗು, ನಾನದಕ್ಕೆ ಹಾನಿಯುಂಟು ಮಾಡಲಾರೆ”
ಹೀಗೆ ಶಿವನು ತನ್ನ ಮನೆಯನ್ನು ಕಳೆದುಕೊಂಡ ಮತ್ತು ಶಿವ ಮತ್ತು ಪಾರ್ವತಿಯರು “ಅಕ್ರಮ ವಲಸಿಗ”ರಾದರು! ಒಂದು ಒಳ್ಳೆಯ ಸ್ಥಳವನ್ನು ಅರಸುತ್ತಾ ಸುತ್ತಾಡಿದ ಅವರು ಕೊನೆಗೆ ಕೇದಾರನಾಥದಲ್ಲಿ ನೆಲೆಸಿದರು. ಅವನಿಗೆ ಇದೆಲ್ಲಾ ಮೊದಲೇ ಗೊತ್ತಾಗಲಿಲ್ಲವೇ ಎಂದು ನೀವು ಕೇಳಬಹುದು. ನಿಮಗೆ ಹಲವಾರು ಸಂಗತಿಗಳು ತಿಳಿದಿರುತ್ತದೆ, ಆದರೂ ಅವುಗಳನ್ನು ಆಗಲು ಬಿಡುತ್ತೀರಿ.