logo
logo

Nandi - The Meditative Bull

ನಂದಿಯನ್ನು ಧ್ಯಾನಮಗ್ನವಾಗಿಸುವುದು ಏನು?



ಸದ್ಗುರುಗಳು ಮತ್ತು ಶೇಖರ್ ಕಪೂರ್ ಶಿವನ ವಾಹನವಾದ ನಂದಿಯ ಮಹತ್ವ ಮತ್ತು ಅದರ ಸಾಂಕೇತಿಕತೆಯನ್ನು ಚರ್ಚಿಸುತ್ತಾರೆ.

ಶೇಖರ್ ಕಪೂರ್: ನಂದಿಯು ಶಿವನ ವಾಹನ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಶಿವ ಹೊರಬಂದು ಏನಾದರೂ ಹೇಳಲು ಅವನು ಕಾಯುತ್ತಿದ್ದಾನೆಯೇ? ನಂದಿಯ ಬಗ್ಗೆ ಇನ್ನಷ್ಟು ಹೇಳಿ.

ಸದ್ಗುರು: ಶಿವನು ಹೊರಬಂದು ಅವನಿಗೆ ಏನಾದರೂ ಹೇಳತ್ತಾನೆಂದು ಅವನು ಕಾಯುತ್ತಿಲ್ಲ. ಅವನು ಕಾಯುತ್ತಿದ್ದಾನಷ್ಟೆ. ನಂದಿಯು ನಿರಂತರ ಕಾಯುವಿಕೆಯ ಸಾಂಕೇತಿಕತೆ. ಏಕೆಂದರೆ, ಭಾರತೀಯ ಸಂಸ್ಕೃತಿಯಲ್ಲಿ ಕಾಯುವಿಕೆಯನ್ನು ಅತ್ಯುತ್ತಮ ಗುಣವೆಂದು ಪರಿಗಣಿಸಲಾಗುತ್ತದೆ. ಸುಮ್ಮನೆ ಕುಳಿತು ಕಾಯುವುದು ಹೇಗೆ ಎಂದು ತಿಳಿದಿರುವವರು ಸಹಜವಾಗಿ ಧ್ಯಾನಸ್ಥರಾಗಿರುತ್ತಾರೆ. ಅವನು ಶಿವ ನಾಳೆ ಹೊರಬರುತ್ತಾನೆಂಬ ನಿರೀಕ್ಷೆಯಲ್ಲಿಲ್ಲ. ಅವನು ಎಂದೆಂದಿಗೂ ಕಾಯುತ್ತಲೇ ಇರುವನು. ಆ ಗುಣವು ಗ್ರಹಣಶೀಲತೆಯ ಸಾರಸತ್ವ.

ನಂದಿ ಶಿವನ ಅತ್ಯಂತ ನಿಕಟ ಸಹಾಯಕ, ಏಕೆಂದರೆ ಅವನು ಗ್ರಹಣಶೀಲತೆಯ ಸಾರಸತ್ವ. ನೀವು ದೇವಾಲಯಕ್ಕೆ ಹೋಗುವ ಮುನ್ನ, ನಿಮ್ಮಲ್ಲಿ ನಂದಿಯ ಗುಣವಿರಬೇಕು - ಸುಮ್ಮನೆ ಕೂರುವ ಗುಣ. ನೀವು ಸ್ವರ್ಗಕ್ಕೆ ಹೋಗಲು ಪ್ರಯತ್ನಿಸುತ್ತಿಲ್ಲ, ಇದನ್ನೋ ಅದನ್ನೋ ಪಡೆಯಲು ಪ್ರಯತ್ನಿಸುತ್ತಿಲ್ಲ - ಒಳಗೆ ಹೋಗಿ, ಸುಮ್ಮನೆ ಕೂರುವಿರಿ. ಹಾಗಾಗಿ, ಅವನಿಲ್ಲಿ ಕುಳಿತು, "ನೀವು ಒಳಗೆ ಹೋದಾಗ, ನೀವು ಮಾಡುವ ಖಯಾಲಿ ಸಂಗತಿಗಳನ್ನು ಮಾಡಬೇಡಿ. ಇದು ಬೇಕು, ಅದು ಬೇಕು ಎಂದು ಬೇಡಬೇಡಿ. ಸುಮ್ಮನೆ ಹೋಗಿ ನಾನು ಕೂತಿರುವ ಹಾಗೆ ಕುಳಿತುಕೊಳ್ಳಿ." ಎಂದು ನಿಮಗೆ ಹೇಳುತ್ತಿದ್ದಾನೆ.

ಶೇಖರ್ ಕಪೂರ್: ಕಾಯುವಿಕೆ ಮತ್ತು ಎದುರು ನೋಡುವಿಕೆ ಎರಡು ಬೇರೆ ಬೇರೆ ವಿಷಯಗಳು ಎಂದು ನನ್ನ ಊಹೆ. ಸರಿಯೇ?

ಸದ್ಗುರು: ಅವನು ಯಾರನ್ನೂ ಎದುರು ನೋಡುತ್ತಿಲ್ಲ ಅಥವಾ ನಿರೀಕ್ಷಿಸುತ್ತಿಲ್ಲ. ಅವನು ಸಮ್ಮನೆ ಕಾಯುತ್ತಿರುವನಷ್ಟೆ. ಅದು ಧ್ಯಾನ - ಸುಮ್ಮನೆ ಕುಳಿತಿರುವುದು. ನಿಮಗೆ ಅವನ ಸಂದೇಶವಿದು: ಒಳಗೆ ಹೋಗಿ, ಸುಮ್ಮನೆ ಕೂರಿ. ಎಚ್ಚರವಾಗಿರಿ, ಮಲಗದಿರಿ.

ಶೇಖರ್ ಕಪೂರ್: ನಾವು ಧ್ಯಾನವೆಂದು ಏನನ್ನು ಕರೆಯುತ್ತೀವೋ, ನಂದಿಯು ಆ ರೀತಿಯಲ್ಲಿ ಕುಳಿತಿದ್ದಾನೆಯೇ?
ಸದ್ಗುರು: ಧ್ಯಾನವೆಂದರೆ ಒಂದು ರೀತಿಯ ಚಟುವಟಿಕೆಯೆಂದು ಯಾವಾಗಲೂ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ತಪ್ಪು, ಅದೊಂದು ಗುಣ. ಪ್ರಾರ್ಥನೆಗೂ ಮತ್ತು ಧ್ಯಾನಕ್ಕೂ ಇರುವ ಮೂಲಭೂತ ವ್ಯತ್ಯಾಸವು ಇದೇ. ಪ್ರಾರ್ಥನೆಯೆಂದರೆ, ನೀವು ದೇವರೊಂದಿಗೆ ಮಾತಾಡಲು ಪ್ರಯತ್ನಿಸುತ್ತಿದ್ದೀರೆಂದು. ಅವನಿಗೆ ನಿಮ್ಮ ಶಪಥಗಳು, ನಿಮ್ಮ ನಿರೀಕ್ಷೆಗಳು, ಅಥವಾ ಇನ್ನೇನನ್ನೋ ಹೇಳಲು ಪ್ರಯತ್ನಿಸುತ್ತಿದ್ದೀರಿ. ಧ್ಯಾನವೆಂದರೆ, ನೀವು ಅಸ್ತಿತ್ವವನ್ನು, ಸೃಷ್ಟಿಯ ಪರಮ ಸ್ವರೂಪವನ್ನು ಆಲಿಸಲು ಸಿದ್ಧರಿದ್ದೀರಿ ಎಂದು. ನಿಮ್ಮ ಬಳಿ ಹೇಳಲು ಏನೂ ಇರುವುದಿಲ್ಲ, ನೀವು ಸುಮ್ಮನೆ ಆಲಿಸುವಿರಿ. ಅದು, ನಂದಿಯ ಗುಣ - ಅವನು ಎಚ್ಚರದಿಂದ ಕುಳಿತ್ತಿದ್ದಾನಷ್ಟೆ. ಇದು ಬಹಳ ಮುಖ್ಯ: ಅವನು ಎಚ್ಚರದಿಂದಿದ್ದಾನೆ, ಅವನು ಮಲಗಿಲ್ಲ ಅಥವಾ ಅನಾಸಕ್ತನಾಗಿ ಕುಳಿತಿಲ್ಲ. ಅವರು ಸಕ್ರಿಯನಾಗಿ, ಬಹಳ ಜಾಗೃತನಾಗಿ ಮತ್ತು ಜೀವಂತವಾಗಿ ಕುಳಿತಿದ್ದಾನೆ, ಆದರೆ, ಯಾವುದೇ ನಿರೀಕ್ಷೆಯಿಲ್ಲದೆ. ಧ್ಯಾನವೆಂದರೆ ಅದು - ಕೇವಲ ಕಾಯುವಿಕೆ, ಯಾವುದೋ ನಿರ್ದಿಷ್ಟ ವಿಷಯಕ್ಕಾಗಿ ಕಾಯುವುದಲ್ಲ.

ನಿಮ್ಮದೇ ಏನೋ ಒಂದನ್ನು ಮಾಡದೇ, ನೀವು ಸುಮ್ಮನೆ ಕಾದರೆ, ಅಸ್ತಿತ್ವವು ತನ್ನ ಕೆಲಸವನ್ನು ಮಾಡುತ್ತದೆ. ಮೂಲತಃ ಧ್ಯಾನವೆಂದರೆ, ವ್ಯಕ್ತಿಯು ತನ್ನದೇ ಏನೋ ಒಂದನ್ನು ಮಾಡುತ್ತಿಲ್ಲ ಎಂದರ್ಥ. ಅವನು ಅಲ್ಲಿ ’ಇದ್ದಾ’ನಷ್ಟೆ. ಒಮ್ಮೆ ನೀವು ಸುಮ್ಮನೆ ಅಲ್ಲಿದ್ದರೆ, ಯಾವಾಗಲೂ ಕ್ರಿಯೆಯಲ್ಲಿ ತೊಡಗಿರುವ ಅಸ್ತಿತ್ವದ ದೊಡ್ಡ ಆಯಾಮದ ಬಗ್ಗೆ ನಿಮಗೆ ಅರಿವಾಗುವುದು. ನೀವೂ ಅದರ ಭಾಗವೆಂದು ನಿಮಗೆ ಅರಿವಾಗುವುದು. ಈಗಲೂ ಸಹ, ನೀವು ಅದರ ಭಾಗವೇ. ಆದರೆ "ನಾನೂ ಅದರ ಭಾಗವೇ" ಎಂಬ ಅರಿವಾಗುವುದೇ ಧ್ಯಾನ. ನಂದಿ ಅದರ ಸಾಂಕೇತಿಕತೆ. "ನೀವೆಲ್ಲರೂ ನನ್ನಂತೆ ಕೂರಬೇಕು." ಎಂದು ಅವನು ಎಲ್ಲರಿಗೂ ನೆನಪಿಸುತ್ತಾನೆ.

ಶೇಖರ್ ಕಪೂರ್: ಆದಿಯೋಗಿಯ ಬಳಿಯಲ್ಲಿರುವ ನಂದಿಯನ್ನು ಯಾವುದರಿಂದ ಮಾಡಲಾಗಿದೆ? ಅದು ಲೋಹವೆಂದು ನನಗೆ ಕಾಣಿಸುತ್ತದೆ, ಅದನ್ನು ಉಕ್ಕಿನಿಂದ ಮಾಡಲಾಗಿದೆಯೇ?

ಸದ್ಗುರು: ಪ್ರಾಯಶಃ ಹೀಗೆ ವಿಶಿಷ್ಟವಾದ ರೀತಿಯಲ್ಲಿ ಮಾಡಲಾಗಿರುವ ಒಂದೇ ನಂದಿ ಇವನು. ಆರು ಅಥವಾ ಒಂಬತ್ತು ಇಂಚುಗಳಿಗಿಂತ ದೊಡ್ಡದಾಗಿರದ ಲೋಹದ ಸಣ್ಣ ತುಂಡುಗಳಿಂದ ಇದರ ಮೇಲ್ಮೈಯನ್ನು ನಿರ್ಮಿಸಲಾಗಿದೆ. ಇದನ್ನು ಎಳ್ಳು, ಅರಿಶಿನ, ವಿಭೂತಿ, ಕೆಲ ವಿಧದ ಎಣ್ಣೆಗಳು, ಸ್ವಲ್ಪ ಮರಳು ಮತ್ತು ಒಂದಷ್ಟು ಬಗೆಯ ಮಣ್ಣಿನಿಂದ ತುಂಬಿಸಲಾಗಿದೆ. ಇದನ್ನು ತುಂಬಲು ಸುಮಾರು 20 ಟನ್ ಸಾಮಗ್ರಿಗಳು ಬೇಕಾದವು. ನಂತರ ಇದನ್ನು ಮುಚ್ಚಲಾಯಿತು. ಇದರಲ್ಲಿ ತುಂಬಲಾಗಿರುವ ಮಿಶ್ರಣವನ್ನು ನಿರ್ದಿಷ್ಟವಾದ ರೀತಿಯಲ್ಲಿ ತಯಾರಿಸಲಾಗಿದೆ. ಈ ಮಿಶ್ರಣದ ಕಾರಣದಿಂದ, ನಂದಿಯು ಒಂದು ರೀತಿಯ ಶಕ್ತಿಯ ಪ್ರಭೆಯನ್ನು ಹೊರಹೊಮ್ಮುತ್ತದೆ.

    Share

Related Tags

ಶಿವಭಕ್ತರು

Get latest blogs on Shiva

Related Content

Forms of Shiva