logo
logo
The Story of Shiva’s Third Eye and Its Hidden Symbolism

ಶಿವನ ಮೂರನೇ ಕಣ್ಣಿನ ಕಥೆ ಮತ್ತು ಅದರ ಹಿಂದಿನ ಸಾಂಕೇತಿಕತೆ

ಸದ್ಗುರುಗಳು ಶಿವನ ಮೂರನೇ ಕಣ್ಣಿನ ಸಾಂಕೇತಿಕತೆಯನ್ನು ಮತ್ತು ಮೂರನೇ ಕಣ್ಣು ತೆರೆದಾಗ ಹೇಗೆ ಸ್ಪಷ್ಟತೆ ಮತ್ತು ಗ್ರಹಣಶಕ್ತಿ ಮೂಡುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಶಿವನು ತನ್ನ ಮೂರನೇ ಕಣ್ಣಿನಿಂದ ಹೇಗೆ ‘ಕಾಮ’ನನ್ನು ಸುಟ್ಟುಹಾಕಿದ ಎನ್ನುವುದಕ್ಕೆ ಸಂಬಂಧಿಸಿದ ಒಂದು ಕಥೆಯನ್ನು ಹೇಳುತ್ತಾರೆ.

ಶಿವನು ತನ್ನ ಮೂರನೇ ಕಣ್ಣನ್ನು ತೆರೆದಾಗ


ಶಿವನು ತನ್ನ ಮೂರನೇ ಕಣ್ಣನ್ನು ತೆರೆದ ಬಗ್ಗೆ ಒಂದು ಕಥೆಯಿದೆ. ಭಾರತದಲ್ಲಿ, ಕಾಮದೇವ ಎಂದು ಕರೆಯಲ್ಪಡುವ ಕಾಮ ಮತ್ತು ಪ್ರೇಮದ ದೇವತೆಯಿದ್ದಾನೆ. ಕಾಮವೆಂದರೆ ಲೈಂಗಿಕತೆ. ಬಹುತೇಕ ಜನರು ಲೈಂಗಿಕತೆಯ ವಿಷಯದಲ್ಲಿ ನೇರವಾಗಿ ವ್ಯವಹರಿಸಲಾರರು. ನಿಮಗೆ ಅದರ ಸುತ್ತ ಸ್ವಲ್ಪ ಅಲಂಕಾರ ಬೇಕು, ಹಾಗಾಗಿ ನೀವದನ್ನು ಪ್ರೇಮವಾಗಿಸುವಿರಿ! ಈ ಕಥೆಯಲ್ಲಿ ಕಾಮದೇವನು ಒಂದು ಮರದ ಹಿಂದೆ ಅವಿತುಕೊಂಡು ಶಿವನ ಎದೆಗೆ ಒಂದು ಬಾಣವನ್ನು ಬಿಡುತ್ತಾನೆ. ಶಿವನು ಸ್ವಲ್ಪ ವಿಚಲಿತನಾಗುತ್ತಾನೆ. ಹಾಗಾಗಿ ಅವನು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ, ಅದು ಬೆಂಕಿಯ ಕಣ್ಣಾಗಿದ್ದರಿಂದ ಕಾಮದೇವನು ಸುಟ್ಟು ಬೂದಿಯಾಗುತ್ತಾನೆ. ಈ ಕಥೆಯನ್ನು ಸಾಮಾನ್ಯವಾಗಿ ಎಲ್ಲರಿಗೂ ಹೇಳಲಾಗಿರುತ್ತದೆ.

ಆದರೆ ನೀವು ನಿಮ್ಮನ್ನು ಕೇಳಿಕೊಳ್ಳಿ, ನಿಮ್ಮ ಕಾಮ ಅಥವಾ ಲೈಂಗಿಕ ಆಕಾಂಕ್ಷೆ ನಿಮ್ಮೊಳಗಿಂದ ಹುಟ್ಟುತ್ತದೋ ಅಥವಾ ಮರದ ಹಿಂದೆಯೋ? ಅದು ನಿಮ್ಮೊಳಗಿನಿಂದ ಹುಟ್ಟುತ್ತದೆ, ಕಾಮ ಎನ್ನುವುದು ಕೇವಲ ವಿರುದ್ಧ ಲಿಂಗದ ಕುರಿತಾದದ್ದಷ್ಟೇ ಅಲ್ಲ. ಪ್ರತಿಯೊಂದು ಬಯಕೆಯೂ ಕಾಮವೇ, ಅದು ಲೈಂಗಿಕತೆಯಾಗಿರಬಹುದು, ಅಧಿಕಾರ ಅಥವಾ ಹುದ್ಧೆಯಾಗಿರಬಹುದು. ಸಾರಭೂತವಾಗಿ ಕಾಮ ಎಂದರೆ ನಿಮ್ಮೊಳಗೆ ಒಂದು ಅಪೂರ್ಣತೆಯ ಭಾವನೆ ಇದೆ, ‘ನನಗೆ ಅದು ಸಿಗದಿದ್ದರೆ ನಾನು ಪರಿಪೂರ್ಣನಲ್ಲ’ ಎನ್ನುವ ಹಂಬಲ.

ಶಿವನ ಮೂರನೇ ಕಣ್ಣು : ಯೋಗದ ಆಯಾಮದಲ್ಲಿ..

ಇದನ್ನು ಆಧರಿಸಿ, ಶಿವ ಮತ್ತು ಕಾಮನ ಕಥೆಗೆ ಒಂದು ಯೋಗದ ಆಯಾಮವಿದೆ. ಶಿವನು ಯೋಗಸಾಧನೆಯನ್ನು ಮಾಡುತ್ತಿದ್ದ, ಅಂದರೆ ಅವನು ಕೇವಲ ಪರಿಪೂರ್ಣತೆಗಾಗಿಯಷ್ಟೇ ಅಲ್ಲದೇ ಅನಂತತೆಯನ್ನು ಪಡೆಯಲು ಸಾಧನೆಯನ್ನು ಮಾಡುತ್ತಿದ್ದ. ಶಿವನು ತನ್ನ ಮೂರನೇ ಕಣ್ಣನ್ನು ತೆರೆದ ಮತ್ತು ಕಾಮನನ್ನು ನೋಡಿದ, ಅದು ಅವನದೇ ಕಾಮ, ಮೇಲೇರುತ್ತಿತ್ತು ಮತ್ತು ಅದನ್ನು ಅವನು ಸುಟ್ಟುಹಾಕಿದ. ನಿಧಾನವಾಗಿ ಅವನ ಶರೀರದಿಂದ ಬೂದಿಯು ಹೊರಬಂತು, ಅವನೊಳಗಿನ ಎಲ್ಲವೂ ಶಾಶ್ವತವಾಗಿ ವಿಶ್ರಾಂತವಾಗಿದೆ ಎನ್ನುವುದನ್ನು ಅದು ತೋರಿಸುತ್ತಿತ್ತು. ಮೂರನೇ ಕಣ್ಣನ್ನು ತೆರೆಯುವ ಮೂಲಕ, ಅವನು ತನ್ನೊಳಗೆ ಭೌತಿಕತೆಯನ್ನು ಮೀರಿದ ಆಯಾಮವನ್ನು ಗ್ರಹಿಸಿದ ಮತ್ತು ಭೌತಿಕತೆಯ ಎಲ್ಲಾ ನಿರ್ಬಂಧಗಳೂ ಕಳಚಿಹೋದವು.

ಶಿವನ ಮೂರನೇ ಕಣ್ಣು ಎಂದರೇನು?

ಮೂರನೇ ಕಣ್ಣು ಎಂದರೆ ಭೌತಿಕವಲ್ಲದ ತತ್ವವನ್ನು ನೋಡಬಲ್ಲ ಸಾಮರ್ಥ್ಯ. ನೀವು ನಿಮ್ಮ ಕೈಯನ್ನು ನೋಡಿದರೆ, ನೀವದನ್ನು ನೋಡಲು ಸಾಧ್ಯವಾಗುವುದು ಅದು ಬೆಳಕನ್ನು ತಡೆದು ಪ್ರತಿಫಲಿಸುವುದರಿಂದ. ನೀವು ಗಾಳಿಯನ್ನು ನೋಡಲಾಗುವುದಿಲ್ಲ ಏಕೆಂದರೆ ಅದು ಬೆಳಕನ್ನು ತಡೆಯುವುದಿಲ್ಲ. ಆದರೆ ಗಾಳಿಯಲ್ಲಿ ಸ್ವಲ್ಪ ಹೊಗೆಯಿದ್ದರೆ, ನೀವದನ್ನು ನೋಡಲು ಸಾಧ್ಯವಾಗುತ್ತದೆ ಏಕೆಂದರೆ ನೀವು ಬೆಳಕನ್ನು ತಡೆಯುವ ವಸ್ತುವನ್ನು ಮಾತ್ರ ನೋಡಲು ಸಾಧ್ಯ. ಬೆಳಕು ತೂರಿಹೋಗುವ ಯಾವುದನ್ನೂ ನೀವು ನೋಡಲಾರಿರಿ. ಅದೇ ನಮ್ಮ ಎರಡು ಕಣ್ಣುಗಳ ಗುಣ.

ನಮ್ಮ ಕಣ್ಣುಗಳು ಭೌತಿಕವಾದದ್ದನ್ನು ಗ್ರಹಿಸಬಲ್ಲವು. ಪ್ರಕೃತಿಯಲ್ಲಿ ನೀವು ಭೌತಿಕವಲ್ಲದ್ದನ್ನು ನೋಡಲು ಬಯಸಿದರೆ, ಒಳಕ್ಕೆ ನೋಡುವುದೊಂದೇ ದಾರಿ. ನಾವು “ಮೂರನೇ ಕಣ್ಣು” ಎಂದಾಗ, ನಾವು ಸಾಂಕೇತಿಕವಾಗಿ ನಮ್ಮ ಎರಡು ಕಣ್ಣುಗಳು ನೋಡಲು ಸಾಧ್ಯವಿಲ್ಲದ್ದನ್ನು ನೋಡುವ ಬಗ್ಗೆ ಮಾತನಾಡುತ್ತಿದ್ದೇವೆ.

ನಮ್ಮ ದೈಹಿಕ ಕಣ್ಣುಗಳು ಬಹಿರ್ಮುಖ ಅಂಗಗಳಾಗಿವೆ. ಮೂರನೇ ಕಣ್ಣು ಆಂತರ್ಯವನ್ನು ನೋಡುವಂತಹದಾಗಿದೆ – ನಿಮ್ಮ ಮತ್ತು ನಿಮ್ಮ ಅಸ್ತಿತ್ವದ ಸ್ವರೂಪವನ್ನು ತಿಳಿಯುವುದಾಗಿದೆ. ಅದೇನೂ ಒಂದು ಹೆಚ್ಚುವರಿ ಅಂಗವಲ್ಲ ಅಥವಾ ನಿಮ್ಮ ಹಣೆಯ ಮೇಲಿನ ಬಿರುಕಲ್ಲ. ಭೌತಿಕದ ಆಚೆಗಿನದ್ದನ್ನು ತಿಳಿಯುವ ಗ್ರಹಿಕೆಯ ಆಯಾಮವನ್ನು ಮೂರನೇ ಕಣ್ಣು ಎಂದು ಹೇಳಲಾಗುತ್ತದೆ.

ಮೂರನೇ ಕಣ್ಣಿನಿಂದ ಜೀವನವನ್ನು ನೋಡುವುದು

ಇನ್ನೊಂದು ವಿಷಯವೆಂದರೆ ನಮ್ಮ ಕಣ್ಣುಗಳು ಕರ್ಮದಿಂದ ಬಹಳ ಆಳವಾಗಿ ಕಲುಷಿತಗೊಂಡಿರುತ್ತವೆ. ಕರ್ಮವೆಂದರೆ ಹಿಂದಿನ ಕ್ರಿಯೆಗಳ ನೆನಪಿನ ಉಳಿಕೆ. ನೀವು ನೋಡುವ ಎಲ್ಲವೂ ಈ ಕರ್ಮದ ನೆನಪಿನಿಂದ ಪ್ರಭಾವಿತಗೊಳ್ಳುತ್ತದೆ. ಅದರ ಕುರಿತು ನೀವೇನೂ ಮಾಡಲಾಗದು. ನೀವು ಯಾರನ್ನಾದರೂ ನೋಡಿದರೆ, “ಅವನು ಒಳ್ಳೆಯವನು, ಅವನು ಒಳ್ಳೆಯವನಲ್ಲ, ಇವನು ಹಾಗೆ, ಅವನು ಹೀಗೆ” ಎಂದೆಲ್ಲಾ ಯೋಚಿಸುತ್ತೀರಿ. ಯಾವುದನ್ನೇ ಆಗಲಿ ಅದು ಇರುವಂತೆಯೇ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ ಏಕೆಂದರೆ ಕರ್ಮದ ನೆನಪು ಈ ದೃಷ್ಟಿ ಮತ್ತು ನಿಮ್ಮ ನೋಡುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಅದು ಎಲ್ಲವನ್ನೂ ನಿಮ್ಮ ಕರ್ಮದಂತೆ, ನಿಮ್ಮ ಗತಕಾಲದ ನೆನಪುಗಳನ್ನು ಆಧರಿಸಿ ತೋರಿಸುತ್ತದೆ.

ಎಲ್ಲವನ್ನೂ ಅದು ಇರುವಂತೆಯೇ ಕಾಣಬೇಕಾದರೆ, ನೆನಪುಗಳಿಂದ ಪ್ರಭಾವಿತಗೊಳ್ಳದ ಆಳವಾದ ದೃಷ್ಟಿಯುಳ್ಳ ಒಂದು ಕಣ್ಣು ತೆರೆದುಕೊಳ್ಳಬೇಕು. ಭಾರತದಲ್ಲಿ ಸಾಂಪ್ರದಾಯಿಕವಾಗಿ, ತಿಳಿಯುವುದು ಎಂದರೆ ಪುಸ್ತಕಗಳನ್ನು ಓದುವುದೋ, ಪ್ರವಚನಗಳನ್ನು ಕೇಳುವುದೋ ಅಥವಾ ಮಾಹಿತಿಯನ್ನು ಸಂಗ್ರಹಿಸುವುದೋ ಅಲ್ಲ. ತಿಳಿಯುವುದು ಎಂದರೆ ಜೀವನದ ಬಗ್ಗೆ ಹೊಸ ದೃಷ್ಟಿಕೋನ ಅಥವಾ ಅಂತರ್ದೃಷ್ಟಿಯನ್ನು ಹೊಂದುವುದು. ಎಷ್ಟೇ ಚಿಂತನೆ ಮಾಡಿದರೂ ಮತ್ತು ಸಿದ್ಧಾಂತಗಳನ್ನು ಮಂಡಿಸಿದರೂ ಅದರಿಂದ ನಿಮ್ಮ ಮನಸ್ಸಿಗೆ ಸ್ಪಷ್ಟತೆ ಬರುವುದಿಲ್ಲ. ನೀವು ಸೃಷ್ಟಿಸಿಕೊಂಡ ತಾರ್ಕಿಕ ಸ್ಪಷ್ಟತೆ ಬಹಳ ಸುಲಭವಾಗಿ ವಿರೂಪಗೊಳ್ಳುತ್ತದೆ. ಕಷ್ಟಕರ ಸನ್ನಿವೇಶಗಳು ಅದನ್ನು ಪೂರ್ತಿಯಾಗಿ ಅಸ್ತವ್ಯಸ್ತಗೊಳಿಸುತ್ತವೆ.

ಒಳಗಿನ ದೃಷ್ಟಿ ತೆರೆದಾಗ ಮಾತ್ರ ಪರಿಪೂರ್ಣ ಸ್ಪಷ್ಟತೆ ಮೂಡುತ್ತದೆ. ಈ ಸ್ಪಷ್ಟತೆಯನ್ನು ಪ್ರಪಂಚದ ಯಾವುದೇ ವ್ಯಕ್ತಿ ಅಥವಾ ಸನ್ನಿವೇಶ ನಿಮ್ಮೊಳಗಿನ ಈ ಸ್ಪಷ್ಟತೆಯನ್ನು ವಿರೂಪಗೊಳಿಸಲಾಗುವುದಿಲ್ಲ. ನಿಜವಾದ ತಿಳುವಳಿಕೆ ಮೂಡಬೇಕಾದರೆ, ಮೂರನೇ ಕಣ್ಣು ತೆರೆಯಬೇಕು.

ಸಂಪಾದಕರ ಟಿಪ್ಪಣಿ: ಈ ಲೇಖನದಲ್ಲಿ, ಸದ್ಗುರುಗಳು ಮೂರನೇ ಕಣ್ಣನ್ನು ತೆರೆಯಲು ಇರುವ ಎರಡು ವಿಧಾನಗಳ ಬಗ್ಗೆ ಮಾತನಾಡುತ್ತಾರೆ.

    Share

Related Tags

ಆದಿಯೋಗಿ

Get latest blogs on Shiva

Related Content

Forms of Shiva