ಸದ್ಗುರು: ಕೆಲವು ದಿನಗಳ ಹಿಂದೆ ಯಾರೋ ನನ್ನನ್ನು ಕೇಳಿದರು, "ನೀವು ಆದಿಯೋಗಿಯಾದ ಶಿವನ ಅಭಿಮಾನಿಯೇ?" ಅಭಿಮಾನಿಗಳ ಸಂಘ ಪ್ರಾರಂಭವಾಗುವುದು ಜನರ ಭಾವನೆಗಳು ಯಾರೊಂದಿಗಾದರೂ ಸಿಕ್ಕು ಸಿಕ್ಕಾಗಿ, ಗೋಜಲಾಗಿ ಹೆಣೆದುಕೊಂಡಾಗ. ನಾನು ಖಂಡಿತವಾಗಿಯೂ ಅವನ ಅಭಿಮಾನಿ ಅಲ್ಲ. ಹಾಗಾದರೆ ಏನಿದು? ನಿಜವಾದ ವಿಷಯ ಬೇರೆಯೇ ಇದೆ, ಆದರೆ ನಾನು ಇದನ್ನು ತರ್ಕದ ಮೂಲಕ ನಿಮ್ಮೊಂದಿಗೆ ಚರ್ಚಿಸುತ್ತೇನೆ.
‘ಒಬ್ಬ ವ್ಯಕ್ತಿ’ಯನ್ನು ಯಾವುದೇ ಪೀಳಿಗೆಯಲ್ಲಿ ಗೌರವಿಸುವುದು, ಆ ಪೀಳಿಗೆಗೆ ಅಥವಾ ಮುಂದಿನ ಪೀಳಿಗೆಗಳಿಗೆ ‘ಆ ವ್ಯಕ್ತಿ’ ನೀಡಿದ ಕೊಡುಗೆಗಾಗಿ. ಈ ಭೂಮಿಯ ಮೇಲೆ ಇತರರ ಜೀವನಕ್ಕೆ ಹಲವು ರೀತಿಯಲ್ಲಿ ಕೊಡುಗೆ ನೀಡಿದ ಅನೇಕ ಅದ್ಭುತ ಜನರು ಬಂದು ಹೋಗಿದ್ದಾರೆ. ಒಬ್ಬರು ಪ್ರೀತಿಯ ಅಲೆಯನ್ನು ತಂದರು, ಇನ್ನೊಬ್ಬರು ಧ್ಯಾನದ ಅಲೆಯನ್ನು ತಂದರು, ಮತ್ತೊಬ್ಬರು ಆರ್ಥಿಕ ಯೋಗಕ್ಷೇಮದ ಅಲೆಯನ್ನು ತಂದರು – ಅಂದಿನ ಅವಶ್ಯಕತೆಗೆ ಅನುಗುಣವಾಗಿ.
ಉದಾಹರಣೆಗೆ, ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ತಮ್ಮ ವಿಧಾನಗಳಿಂದ, ತಮ್ಮ ರೀತಿಯಿಂದ, ಮತ್ತು ತಮ್ಮ ಕಾರ್ಯನಿರ್ವಹಣೆಯಿಂದ ಒಂದು ನಿರ್ದಿಷ್ಟ ಮಟ್ಟಕ್ಕೆ ಏರಿದರು. ಅವರ ಬಗ್ಗೆ ನಮಗೆ ಸಂಪೂರ್ಣ ಗೌರವವಿದೆ, ಮತ್ತು ಅವರು ಆ ಕಾಲಕ್ಕೆ ಸರಿಯಾದ ವ್ಯಕ್ತಿಯಾಗಿದ್ದರು ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡಿದರು - ಆದರೆ ಅವರು ಯಾವಾಗಲೂ ಪ್ರಸ್ತುತರಾಗಿರಲಾರರು. ಅದೇ ರೀತಿ ಮಾರ್ಟಿನ್ ಲೂಥರ್ ಕಿಂಗ್, ಆ ಕಾಲದಲ್ಲಿ ತಾರತಮ್ಯವಿದ್ದ ಕಾರಣ ಬಹಳ ಮಹತ್ವದವರಾಗಿದ್ದರು, ಆದರೆ ಸಮಾಜದಲ್ಲಿ ಅಂತಹ ಸಮಸ್ಯೆಗಳೇ ಇಲ್ಲದಿದ್ದರೆ, ಅವರು ಕೇವಲ ಇನ್ನೊಬ್ಬ ಸಾಮಾನ್ಯ ವ್ಯಕ್ತಿಯಾಗಿರುತ್ತಿದ್ದರು.
ನೀವು ಇತಿಹಾಸದ ಪುಟಗಳಲ್ಲಿ ಹಿಂದೆ ಹೋದರೆ, ಅನೇಕ ಮಹಾನ್ ವ್ಯಕ್ತಿಗಳು ಬಂದು ಹೋಗಿದ್ದಾರೆ, ಆದರೆ ಅವರು ಹೆಚ್ಚಾಗಿ ಅಂದಿನ ಅವ್ಯವಸ್ಥೆಗಳು, ಅವಶ್ಯಕತೆ, ಅಥವಾ ಅಂದಿನ ಒಂದು ನಿರ್ದಿಷ್ಟ ದುರ್ಬಲತೆಯಿಂದಾಗಿ ಮಹತ್ವದವರಾಗಿದ್ದರು. ನೀವು ಗೌತಮ ಬುದ್ಧನನ್ನು ನೋಡಿದರೆ, ಅಂದಿನ ಸಮಾಜ ಧಾರ್ಮಿಕ ಆಚರಣೆಗಳಿಂದ ತುಂಬಿಹೋಗಿತ್ತು, ಗೌತಮ ಬುದ್ಧ ಯಾವುದೇ ಆಚರಣೆಯಿಲ್ಲದ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ತಂದಾಗ, ಅದು ತಕ್ಷಣ ಜನಪ್ರಿಯವಾಯಿತು. ಅದು ಹೆಚ್ಚು ಆಚರಣೆಗಳಿಲ್ಲದ ಸಮಾಜವಾಗಿದ್ದಿದ್ದರೆ, ಈ ಪ್ರಕ್ರಿಯೆ ಯಾವುದೇ ರೀತಿಯಲ್ಲಿ ಹೊಸದಾಗಿರುತ್ತಿರಲಿಲ್ಲ ಮತ್ತು ಅಷ್ಟು ಮಹತ್ವದ್ದೂ ಆಗಿರುತ್ತಿರಲಿಲ್ಲ.
ಹಲವು ವಿಧಗಳಲ್ಲಿ, ಕೃಷ್ಣ ಹೆಚ್ಚಿನ ಮಹತ್ವದವನಾಗಿದ್ದ. ಆದರೂ, ಆ ಸಮಾಜದಲ್ಲಿ ಯಾವುದೇ ಕಲಹವಿಲ್ಲದಿದ್ದರೆ, ಪಾಂಡವರು ಮತ್ತು ಕೌರವರ ನಡುವೆ ಹೋರಾಟವಿಲ್ಲದಿದ್ದರೆ, ಅವನು ಕೇವಲ ಆ ಸ್ಥಳದಲ್ಲಿ ಪ್ರಭಾವಿಯಾಗಿರುತ್ತಿದ್ದ. ಅವನು ಅಷ್ಟು ದೊಡ್ಡವನಾಗುತ್ತಿರಲಿಲ್ಲ. ಅಥವಾ ರಾಮ - ಅವನ ಹೆಂಡತಿಯ ಅಪಹರಣವಾಗದಿದ್ದರೆ, ಅವನು ಇನ್ನೊಬ್ಬ ರಾಜ, ಬಹುಶಃ ಒಳ್ಳೆಯ ರಾಜ ಎಂದು ನೆನಪಿಸಿಕೊಳ್ಳಲ್ಪಡುತ್ತಿದ್ದ, ಮತ್ತು ಸ್ವಲ್ಪ ಸಮಯದ ನಂತರ ಜನರ ನೆನಪಿನಿಂದ ಮರೆಯಾಗುತ್ತಿದ್ದ. ಇಡೀ ಯುದ್ಧ ಮತ್ತು ಲಂಕಾ ದಹನ ಸಂಭವಿಸದಿದ್ದರೆ, ಅವನ ಜೀವನ ಹೆಚ್ಚು ಪ್ರಸ್ತುತವಾಗುತ್ತಿರಲಿಲ್ಲ.
ಆದಿಯೋಗಿಯಾದ ಶಿವನ ಮಹತ್ವ ಇದೇ – ಅಂತಹ ಯಾವುದೇ ಘಟನೆ ನಡೆಯಲಿಲ್ಲ. ಯಾವುದೇ ಯುದ್ಧವಿರಲಿಲ್ಲ, ಯಾವುದೇ ಸಂಘರ್ಷವಿರಲಿಲ್ಲ. ಅವನು ಅಂದಿನ ಅವಶ್ಯಕತೆಗಳನ್ನು ಪೂರೈಸಲಿಲ್ಲ. ಮಾನವ ಪ್ರಜ್ಞೆಯನ್ನು ಹೆಚ್ಚಿಸುವ ಸಾಧನಗಳು ಮತ್ತು ವಿಧಾನಗಳನ್ನು ಒದಗಿಸಿದ, ಅವು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಆಹಾರ, ಪ್ರೀತಿ, ಅಥವಾ ಶಾಂತಿಯಿಂದ ಜನರು ವಂಚಿತರಾಗಿದ್ದಾಗ ನೀವು ಅವರಿಗೆ ಅದನ್ನು ಒದಗಿಸಿದರೆ, ನೀವು ಆ ದಿನದ ವಿದ್ಯಮಾನವಾಗಬಹುದು. ಆದರೆ ಅಂತಹ ಕೊರತೆ ಇಲ್ಲದಿದ್ದಾಗ, ಮನುಷ್ಯರಿಗೆ ಪ್ರಸ್ತುತವಾಗುವುದು ತನ್ನನ್ನು ತಾನು ಹೇಗೆ ಅತ್ಯುತ್ತಮವಾಗಿ ವೃದ್ಧಿಗೊಳಿಸಿಕೊಳ್ಳುವುದು ಎಂಬುದು.
ನಾವು ಮಹಾದೇವ ಎಂಬ ಬಿರುದನ್ನು ಕೇವಲ ಅವನಿಗೆ ನೀಡಿದ್ದೇವೆ, ಏಕೆಂದರೆ ಅದರ ಹಿಂದಿನ ಬುದ್ಧಿವಂತಿಕೆ, ದೃಷ್ಟಿ, ಮತ್ತು ತಿಳುವಳಿಕೆ ಅತೀತವಾದುವು. ನೀವು ಎಲ್ಲೇ ಹುಟ್ಟಿದ್ದರೂ, ನೀವು ಯಾವುದೇ ಜಾತಿ, ಮತ, ಪಂಥಕ್ಕೆ ಸೇರಿದ್ದರೂ, ಪುರುಷ ಅಥವಾ ಮಹಿಳೆ ಯಾರೇ ಆಗಿದ್ದರೂ - ಈ ವಿಧಾನಗಳನ್ನು ಎಂದೆಂದಿಗೂ ಬಳಸಿಕೊಳ್ಳಬಹುದು. ಜನ ಅವನನ್ನು ಮರೆತರೂ ಸಹ, ಅವರು ಇದೇ ವಿಧಾನಗಳನ್ನು ಬಳಸಬೇಕಾಗುತ್ತದೆ ಏಕೆಂದರೆ ಅವನು ಮಾನವ ಯಂತ್ರದ ಕಾರ್ಯವಿಧಾನದಲ್ಲಿ ಯಾವುದನ್ನೂ ಅನ್ವೇಷಿಸದೆ ಬಿಡಲಿಲ್ಲ. ಅವನು ಬೋಧನೆ ನೀಡಲಿಲ್ಲ. ಅವನು ಆ ಸಮಯಕ್ಕೆ ಒಂದು ಪರಿಹಾರ ನೀಡಲಿಲ್ಲ. ಜನರು ಅಂತಹ ಸಮಸ್ಯೆಗಳೊಂದಿಗೆ ಅವನ ಬಳಿಗೆ ಬಂದಾಗ, ಅವನು ಕೇವಲ ಕಣ್ಣು ಮುಚ್ಚಿ ಸಂಪೂರ್ಣ ನಿರ್ಲಕ್ಷ್ಯ ತೋರಿದ.
ಮನುಷ್ಯರ ಸ್ವಭಾವವನ್ನು ಗ್ರಹಿಸುವ ವಿಷಯದಲ್ಲಿ, ಪ್ರತಿಯೊಬ್ಬರಿಗೂ ಒಂದು ಮಾರ್ಗವನ್ನು ಕಂಡುಹಿಡಿಯುವ ವಿಷಯದಲ್ಲಿ, ಇದು ಅಕ್ಷರಶಃ ಶಾಶ್ವತ ಕೊಡುಗೆಯಾಗಿದೆ; ಇದು ಆ ‘ಕಾಲದ’ ಅಥವಾ ಆ ‘ಕಾಲಕ್ಕೆ’ ಕೊಡುಗೆಯಲ್ಲ. ಸೃಷ್ಟಿ ಎಂದರೆ - 'ಏನೂ ಅಲ್ಲದ್ದು', ಒಂದರೊಳಗೊಂದು ಗಂಟಾಗಿ 'ಏನೋ' ಆಯಿತು. ಈ ಸೃಷ್ಟಿಯನ್ನು ಸೃಷ್ಟಿಯಲ್ಲದ ಸ್ಥಿತಿಗೆ, ಅಂದರೆ, 'ಏನೂ ಅಲ್ಲದ' ಸ್ಥಿತಿಗೆ - ಗಂಟು ಬಿಡಿಸುವ ಮಾರ್ಗವನ್ನು ಅವನು ಕಂಡುಹಿಡಿದ.
ಇದಕ್ಕಾಗಿಯೇ ನಾವು ಅವನಿಗೆ ಶಿ-ವ ಎಂಬ ಹೆಸರನ್ನು ನೀಡಿದ್ದೇವೆ – ಅಂದರೆ 'ಏನೂ ಅಲ್ಲದ್ದು’. 'ಏನೂ ಅಲ್ಲದ್ದು’ ‘ಏನೋ’ ಅಥವಾ ‘ಏನೋ ಇರುವುದು’ ಆದಾಗ, ನಾವು ಆ ಆಯಾಮವನ್ನು ಬ್ರಹ್ಮ ಎಂದು ಕರೆದಿದ್ದೇವೆ. ಶಿವನನ್ನು ಶಿ-ವ ಎಂದು ಕರೆಯಲಾಯಿತು ಏಕೆಂದರೆ ಅವನು ಒಂದು ವಿಧಾನ, ಒಂದು ರೀತಿ – ಕೇವಲ ಒಂದಲ್ಲ, ಅಂತಿಮ ಮುಕ್ತಿ ಪಡೆಯಲು ಸಾಧ್ಯವಾಗಿಸುವ ಪ್ರತಿಯೊಂದು ಮಾರ್ಗವನ್ನು ಒದಗಿಸಿದ, ಅಂದರೆ ಈಗ 'ಏನೋ' ಆಗಿ ಇರುವುದು ನಂತರ 'ಇಲ್ಲದ್ದಾಗಿ' ಹೋಗುವುದು ಅಥವಾ 'ಏನೂ ಅಲ್ಲದ್ದು’ ಆಗುವುದು.
ಶಿವ ಎಂದರೆ ಒಂದು ಹೆಸರಲ್ಲ, ಅದು ಒಂದು ವಿವರಣೆ. ಯಾರಾದರೂ ಡಾಕ್ಟರ್, ಲಾಯರ್ ಅಥವಾ ಎಂಜಿನಿಯರ್ ಎಂದು ಹೇಳುವ ಹಾಗೆ, ನಾವು ಅವನನ್ನು ಶಿವ ಎಂದು ಹೇಳುತ್ತೇವೆ, ಜೀವನದ 'ಗಂಟು ಬಿಡಿಸಿದವ'. ಇದನ್ನು ಜೀವನದ ವಿನಾಶಕ ಎಂದು ಸ್ವಲ್ಪ ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಒಂದು ರೀತಿಯಲ್ಲಿ ಅದು ಸರಿ. ನೀವು "ವಿನಾಶಕ" ಎಂಬ ಪದವನ್ನು ಬಳಸಿದಾಗ, ಜನರು ಅದನ್ನು ನಕಾರಾತ್ಮಕವಾಗಿ ಗ್ರಹಿಸುತ್ತಾರೆ. ಯಾರಾದರೂ "ವಿಮೋಚಕ" ಎಂದು ಹೇಳಿದ್ದರೆ, ಅದನ್ನು ಸಕಾರಾತ್ಮಕವಾಗಿ ಗ್ರಹಿಸಲಾಗುತ್ತಿತ್ತು. ನಿಧಾನವಾಗಿ, "ವಿಮೋಚಕ"ನು "ವಿನಾಶಕ"ನಾದನು ಮತ್ತು ಜನರು ಅವನನ್ನು ನಕಾರಾತ್ಮಕ ಎಂದು ಭಾವಿಸಲು ಪ್ರಾರಂಭಿಸಿದರು. ಅವನನ್ನು ಏನೇ ಕರೆದರೂ, ಅವನು ತಲೆಕೆಡಿಸಿಕೊಳ್ಳುವುದಿಲ್ಲ - ಇದು ಬುದ್ಧಿವಂತಿಕೆಯ ಸ್ವಭಾವ.
ನಿಮ್ಮ ಬುದ್ಧಿವಂತಿಕೆ ಒಂದು ನಿರ್ದಿಷ್ಟ ಮಟ್ಟಕ್ಕೆ ಏರಿದರೆ, ನಿಮಗೆ ಯಾವುದೇ ನೈತಿಕತೆಯ ಅಗತ್ಯವಿರುವುದಿಲ್ಲ. ಬುದ್ಧಿವಂತಿಕೆಯ ಕೊರತೆಯಿದ್ದಾಗ ಮಾತ್ರ, ಜನರಿಗೆ ಏನು ಮಾಡಬಾರದು ಎಂದು ಹೇಳಬೇಕಾಗುತ್ತದೆ. ಯಾರದ್ದಾದರೂ ಬುದ್ಧಿವಂತಿಕೆ ನಿರ್ದಿಷ್ಟ ಮಟ್ಟಕ್ಕೆ ಏರಿದ್ದರೆ, ಅವರಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಹೇಳುವ ಅಗತ್ಯವಿಲ್ಲ. ಅವನು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಒಂದು ಪದವನ್ನೂ ಉಚ್ಚರಿಸಲಿಲ್ಲ. ಯೋಗ ಪದ್ಧತಿಯ ಯಮ ಮತ್ತು ನಿಯಮಗಳು ಪತಂಜಲಿಯ ಸೃಷ್ಟಿ, ಆದಿಯೋಗಿಯದಲ್ಲ. ಪತಂಜಲಿ ಬಹಳ ಕಾಲದ ನಂತರ ಬಂದವರು.
ಪತಂಜಲಿ ನಮಗೆ ಪ್ರಸ್ತುತರಾಗಿರುವುದು ಏಕೆಂದರೆ ಯೋಗ ಹಲವು ಶಾಖೆಗಳಾಗಿ ವಿಭಜನೆಗೊಂಡಿತ್ತು, ಹಾಸ್ಯಾಸ್ಪದ ಎನ್ನಿಸುವ ಮಟ್ಟಕ್ಕೆ. 25 - 30 ವರ್ಷಗಳ ಹಿಂದೆ, ನಿಮಗೆ ವೈದ್ಯಕೀಯ ಪರೀಕ್ಷೆ ಬೇಕಾದರೆ, ಕೇವಲ ಒಬ್ಬ ವೈದ್ಯರ ಅಗತ್ಯವಿತ್ತು. ಇಂದು ನಿಮಗೆ 12 ರಿಂದ 15 ವೈದ್ಯರ ಅಗತ್ಯವಿದೆ – ಒಬ್ಬರು ನಿಮ್ಮ ಮೂಳೆಗೆ, ಒಬ್ಬರು ನಿಮ್ಮ ಮಾಂಸಕ್ಕೆ, ಒಬ್ಬರು ನಿಮ್ಮ ರಕ್ತಕ್ಕೆ, ಒಬ್ಬರು ನಿಮ್ಮ ಹೃದಯಕ್ಕೆ, ಒಬ್ಬರು ನಿಮ್ಮ ಕಣ್ಣಿಗೆ – ಇದು ಇನ್ನೂ ಹೀಗೇ ಮುಂದುವರಿಯುತ್ತದೆ.
ಇನ್ನೊಂದು ನೂರು ವರ್ಷಗಳಲ್ಲಿ, ನಾವು ಇನ್ನೂ ಹೆಚ್ಚು 'ವಿಶೇಷ’ತೆಗೆ ಹೋಗಿದ್ದರೆ, ನಿಮಗೆ ವೈದ್ಯಕೀಯ ಪರೀಕ್ಷೆ ಬೇಕಾದಾಗ, 150 ವೈದ್ಯರ ಅಗತ್ಯವಿದೆ ಎಂದುಕೊಳ್ಳೋಣ. ಆಗ ನೀವು ಹೋಗಲು ಬಯಸುವುದಿಲ್ಲ, ಏಕೆಂದರೆ ನೀವು 150 ಅಪಾಯಿಂಟ್‌ಮೆಂಟ್‌ಗಳನ್ನು ಪಡೆದು, ಅವುಗಳನ್ನು ಮುಗಿಸಿ, 150 ಅಭಿಪ್ರಾಯಗಳನ್ನು ಲೆಕ್ಕಾಚಾರ ಮಾಡುವ ಹೊತ್ತಿಗೆ, ಅದು ಯೋಗ್ಯವಾಗಿರುವುದಿಲ್ಲ. ಆಗ ಯಾರಾದರೂ ಇದನ್ನೆಲ್ಲಾ ಒಟ್ಟುಗೂಡಿಸಿ, ಅವರನ್ನು ಕುಟುಂಬ ವೈದ್ಯರನ್ನಾಗಿ ಮಾಡುವ ಬಗ್ಗೆ ಮಾತನಾಡುತ್ತಾರೆ. ಪತಂಜಲಿ ಮಾಡಿದ್ದು ಇದನ್ನೇ.
ಆ ಸಮಯದಲ್ಲಿ ಸುಮಾರು 1800 ಯೋಗದ ಶಾಖೆಗಳಿದ್ದವು ಎಂದು ಹೇಳುತ್ತಾರೆ. ನೀವು ಇಡೀ ಪದ್ದತಿಯನ್ನು ಕಲಿಯಬೇಕಾದರೆ, ನೀವು 1800 ಶಾಲೆಗಳಿಗೆ ಹಾಜರಾಗಬೇಕಾಗಿತ್ತು ಮತ್ತು 1800 ವಿವಿಧ ರೀತಿಯ ಯೋಗಗಳನ್ನು ಮಾಡಬೇಕಾಗಿತ್ತು. ಅದು ಸಾಧ್ಯವಾಗದ್ದು ಮತ್ತು ಹಾಸ್ಯಾಸ್ಪದವಾಯಿತು. ಆದ್ದರಿಂದ ಪತಂಜಲಿ ಬಂದು ಎಲ್ಲವನ್ನೂ 200 ಸೂತ್ರಗಳಲ್ಲಿ ಸೇರಿಸಿ, ಯೋಗದ ಅಭ್ಯಾಸ ಮಾಡಲು ಸಾಧ್ಯವಾಗುವಂತೆ, ಎಂಟು ಅಂಗಗಳಾಗಿ ಮಾಡಿದರು. ಅಂತಹ ಪರಿಸ್ಥಿತಿ ಇಲ್ಲದಿದ್ದರೆ, ಪತಂಜಲಿ ಪ್ರಸ್ತುತವಾಗುತ್ತಿರಲಿಲ್ಲ. ಆದಿಯೋಗಿ ಅಥವಾ ಶಿವನ ವಿಷಯದಲ್ಲಿ ಹಾಗಲ್ಲ ಏಕೆಂದರೆ ಯಾವುದೇ ಜೀವನ ಪರಿಸ್ಥಿತಿಯಲ್ಲಿ, ಅವನು ಯಾವಾಗಲೂ ಪ್ರಸ್ತುತನಾಗಿರುತ್ತಾನೆ. ಅದಕ್ಕಾಗಿಯೇ ಅವನು ಮಹಾದೇವ.