ಶಿವ ಪುರಾಣವು ಮೂಲಭೂತ ವಿಜ್ಞಾನದ ಹಲವಾರು ಅಂಶಗಳನ್ನೊಳಗೊಂಡಿರುವುದಲ್ಲದೆ ಮಿತಿಗಳನ್ನು ಅತಿಶಯಿಸುವುದಕ್ಕೆ ಪ್ರಬಲ ಸಾಧನೆಯನ್ನೂ ಹೊಂದಿದೆಯೆಂದು ಸದ್ಗುರುಗಳು ವಿವರಿಸುತ್ತಾರೆ.
ಪ್ರಶ್ನೆ: ಸದ್ಗುರು, ನೀವು ಶಿವನಿಗೆ ಅಪಾರವಾದ ಪ್ರಾಮುಖ್ಯತೆಯನ್ನು ನೀಡುತ್ತೀರಿ. ಜೆನ್ ಗುರುಗಳಂತಹ ಬೇರೆ ಗುರುಗಳ ಬಗ್ಗೆ ನೀವು ಅಷ್ಟಾಗಿ ಮಾತನಾಡುವುದಿಲ್ಲವೇಕೆ?
ಸದ್ಗುರು: ನಾವು ಶಿವ ಎಂದು ಉಲ್ಲೇಖಿಸುವ ಈ ಅಗಾಧವಾದ ಶೂನ್ಯತೆಯು ಶಾಶ್ವತ ಮತ್ತು ನಿರಂತರವಾದ ಅಪರಿಮಿತ ನಾಸ್ತಿತ್ವ. ಆದರೆ ಮಾನವ ಗ್ರಹಿಕೆಯು ಸೀಮಿತವಾಗಿರುವುದರಿಂದ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ನಾವು ಶಿವನಿಗೆ ಹಲವಾರು ಅದ್ಭುತ ರೂಪಗಳನ್ನು ಸೃಷ್ಟಿಸಿದೆವು. ನಿಗೂಢ ಮತ್ತು ಗ್ರಹಿಕೆ ಸಿಗದ ಈಶ್ವರ; ಶುಭಕರ ಶಂಭೋ; ಮುಗ್ಧ ಭೋಲೇನಾಥ; ವೇದ, ಶಾಸ್ತ್ರ ಮತ್ತು ತಂತ್ರಗಳ ಗುರುವಾದ ದಕ್ಷಿಣಾಮೂರ್ತಿ; ಕ್ಷಮಾಮಯಿ ಅಶುತೋಷ; ಸೃಷ್ಟಿಕರ್ತನ ರಕ್ತದಿಂದ ಅಪಕೀರ್ತಿ ಹೊತ್ತ ಭೈರವ; ತಟಸ್ಥನಾದ ಅಚಲೇಶ್ವರ; ನೃತ್ಯ ಪ್ರವೀಣನಾದ ನಟರಾಜ - ಹೀಗೆ ಜೀವನಕ್ಕೆ ಎಷ್ಟು ಅಂಶಗಳಿವೆಯೋ, ಅಷ್ಟೂ ಅಂಶಗಳನ್ನೂ ಅವನಾಗಿ ರೂಪಿಸಲಾಗಿದೆ.
ಸಾಮಾನ್ಯವಾಗಿ, ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ, ಜನರು ದೈವೀಕ ಎಂದು ಉಲ್ಲೇಖಿಸುವ ಏನನ್ನಾದರನ್ನೂ ಯಾವಾಗಲೂ ಒಳ್ಳೆಯದು ಎಂದು ನೋಡಲಾಗುತ್ತದೆ. ಆದರೆ, ನೀವು ಶಿವ ಪುರಾಣವನ್ನು ಓದಿದರೆ, ನಿಮಗೆ ಶಿವನನ್ನು ಒಳ್ಳೆಯವನು ಅಥವಾ ಕೆಟ್ಟವನು ಒಂದು ಗುರುತಿಸಲಾಗುವುದಿಲ್ಲ. ಅವನು ಸರ್ವಗುಣ ಸಂಪನ್ನನು - ಅವನು ಅತ್ಯಂತ ಭಯಂಕರನೂ ಹೌದು, ಅತ್ಯಂತ ಸುಂದರನೂ ಹೌದು. ಅವನು ಉತ್ತಮನು ಮತ್ತು ಅಧಮನೂ ಕೂಡ. ಅವನು ಅತ್ಯಂತ ಶಿಸ್ತುಗಾರನು ಮತ್ತು ಕುಡಕನೂ ಸಹ. ದೇವತೆಗಳು, ಅಸುರರು ಮತ್ತು ಜಗತ್ತಿನ ಎಲ್ಲಾ ರೀತಿಯ ಜೀವಿಗಳೂ ಅವನನ್ನು ಪೂಜಿಸುತ್ತಾರೆ. ನಾಗರೀಕತೆಯು ಜೀರ್ಣಿಸಿಕೊಳ್ಳಲಾಗದ ಶಿವನ ಕಥೆಗಳನ್ನೆಲ್ಲ ಅನುಕೂಲಕರವಾಗಿ ವರ್ಜಿಸಿದೆ, ಆದರೆ ಶಿವನ ಮೂಲತತ್ವವಿರುವುದು ಅದರಲ್ಲಿಯೇ. ಜೀವನದ ಸಂಪೂರ್ಣ ವಿರೋಧಾತ್ಮಕ ಅಂಶಗಳನ್ನು ಶಿವನ ವ್ಯಕ್ತಿತ್ವದಲ್ಲಿ ರಚಿಸಲಾಗಿದೆ. ಅಸ್ತಿತ್ವದ ಎಲ್ಲಾ ಗುಣಗಳ ಇಂತಹ ಸಂಕೀರ್ಣ ಸಂಯೋಜನೆಯನ್ನು ಒಬ್ಬ ವ್ಯಕ್ತಿಯನ್ನಾಗಿ ಮಾಡಲಾಗಿದೆ - ಏಕೆಂದರೆ, ನೀವು ಈ ಒಬ್ಬನನ್ನು ಅಂಗೀಕರಿಸಿದರೆ, ನೀವು ಜೀವನವನ್ನು ಅತಿಶಯಿಸಿದಂತೆ. ನಾವು ಯಾವಾಗಲೂ ಯಾವುದು ಚೆಂದ, ಯಾವುದು ಚೆಂದವಿಲ್ಲ, ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಆರಿಸಲು ಪ್ರಯತ್ನಿಸುತ್ತಿರುವುದೇ ಜೀವನದ ಒಂದು ದೊಡ್ಡ ಹೆಣಗಾಟ. ಜೀವನದಲ್ಲಿ ಇರುವಂತಹುದೆಲ್ಲದರ ಸಂಕೀರ್ಣ ಸಂಯೋಜನೆಯಾದ ಇಂತಹ ವ್ಯಕ್ತಿಯನ್ನು ನೀವು ಒಪ್ಪಿಕೊಂಡರೆ ಮಾತ್ರ, ನಿಮಗೆ ಯಾರೊಂದಿಗೂ ತೊಂದರೆಯಿರುವುದಿಲ್ಲ.
ಶಿವ ಪುರಾಣದಲ್ಲಿನ ಕಥೆಗಳನ್ನು ನೀವು ಗಮನವಿಟ್ಟು ಓದಿದರೆ, ಸಾಪೇಕ್ಷತಾ ಸಿದ್ಧಾಂತ, ಕ್ವಾಂಟಮ್ ಮೆಕ್ಯಾನಿಕ್ಸ್ - ಇಡೀ ಆಧುನಿಕ ಭೌತಶಾಸ್ತ್ರವನ್ನು ಇದರಲ್ಲಿ ಕಥೆಗಳ ಮೂಲಕ ಸುಂದರವಾಗಿ ವ್ಯಕ್ತಪಡಿಸಲಾಗಿದೆ. ನಮ್ಮದು ತತ್ವ ಜಿಜ್ಞಾಸೆಯ ಸಂಸ್ಕೃತಿ; ವಿಜ್ಞಾನವನ್ನು ಕಥೆಗಳ ಮೂಲಕ ವ್ಯಕ್ತಪಡಿಸಲಾಗುತ್ತಿತ್ತು. ಇಲ್ಲಿ ಎಲ್ಲವನ್ನೂ ಮೂರ್ತೀಕರಿಸಲಾಗಿದೆ. ಆದರೆ, ಕಾಲಾನುಕ್ರಮದಲ್ಲಿ ಜನರು ವಿಜ್ಞಾನವನ್ನು ಬಿಟ್ಟು ಕೇವಲ ಕಥೆಗಳನ್ನು ಇರಿಸಿಕೊಂಡರು, ಮತ್ತು ತಲೆಮಾರಿನಿಂದ ತಲೆಮಾರಿಗೆ ಈ ಕಥೆಗಳು ಹಾಸ್ಯಾಸ್ಪದವಾಗುವಷ್ಟರ ಮಟ್ಟಿಗೆ ಉತ್ಪ್ರೇಕ್ಷಿತವಾದವು. ನೀವು ಕಥೆಗಳಲ್ಲಿ ಮತ್ತೆ ವಿಜ್ಞಾನವನ್ನು ತುಂಬಿದರೆ, ವಿಜ್ಞಾನವನ್ನು ವ್ಯಕ್ತಪಡಿಸಲು ಇದೊಂದು ಸುಂದರವಾದ ದಾರಿಯೆಂದು ಕಾಣುತ್ತೀರಿ.
ಶಿವ ಪುರಾಣವು ಮಾನವ ಸ್ವರೂಪವನ್ನು ಪ್ರಜ್ಞೆಯ ಉತ್ತುಂಗಕ್ಕೆ ಏರಿಸುವ ಅತ್ಯುನ್ನತ ವಿಜ್ಞಾನವಾಗಿದೆ; ಇದನ್ನು ಅದರಲ್ಲಿ ಅತ್ಯಂತ ಸುಂದರವಾದ ಕಥೆಯ ರೂಪದಲ್ಲಿ ವ್ಯಕ್ತಪಡಿಸಲಾಗಿದೆ. ಅದೇ ಯೋಗಸೂತ್ರವನ್ನು ಕಥೆಗಳನ್ನು ಸೇರಿಸದೆಯೇ ವಿಜ್ಞಾನದ ರೂಪದಲ್ಲಿ ವ್ಯಕ್ತಪಡಿಸಲಾಗಿದೆ. ಆದರೆ ನೀವು ಆಳವಾಗಿ ನೋಡಿದ್ದೇ ಆದರೆ, ಯೋಗ ಮತ್ತು ಶಿವ ಪುರಾಣವನ್ನು ಪ್ರತ್ಯೇಕಿಸಲಾಗದು. ಒಂದು ಕಥೆಗಳನ್ನು ಇಷ್ಟ ಪಡುವವರಿಗಾದರೆ, ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವವರಿಗೆ ಇನ್ನೊಂದು - ಆದರೆ ಇವೆರಡರ ಮೂಲತತ್ವವೂ ಒಂದೇ ಆಗಿದೆ.
ಇಂದು, ವಿಜ್ಞಾನಿಗಳು ಆಧುನಿಕ ಶಿಕ್ಷಣದ ಸ್ವರೂಪದ ಬಗ್ಗೆ ಬಹಳಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಅವರು ಹೇಳುತ್ತಿರುವ ಒಂದು ವಿಷಯವೇನೆಂದರೆ, ಒಂದು ಮಗು 20 ವರ್ಷದ ಶಿಕ್ಷಣವನ್ನು ಪಡೆದುಕೊಂಡರೆ, ಆ ಮಗುವಿನ ಬುದ್ಧಿಶಕ್ತಿಯ ದೊಡ್ಡ ಪ್ರಮಾಣ ಸರಿ ಪಡಿಸಲಾಗದಷ್ಟು ಹಾಳಾಗುತ್ತದೆಯೆಂದು. ಅವನು ಚೆನ್ನಾಗಿ ಓದಿರುವ ಮೂರ್ಖನಾಗಿ ಹೊರ ಬರುತ್ತಾನೆಂದು ಇದರರ್ಥ. ಕಲಿಕೆಯನ್ನು ಕಥೆಗಳು ರೂಪದಲ್ಲೋ ಅಥವಾ ನಾಟಕಗಳ ರೂಪದಲ್ಲೋ ನೀಡುವುದು ಅತ್ಯುತ್ತಮ ವಿಧಾನಗಳಲ್ಲೊಂದು ಎಂದವರು ಸೂಚಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಸ್ವಲ್ಪ ಪ್ರಯತ್ನ ನಡೆದಿದ್ದರೂ, ಜಗತ್ತಿನ ಅಧಿಕತಮ ಶಿಕ್ಷಣ ವ್ಯವಸ್ಥೆಯು ಇನ್ನೂ ಬಹಳ ಮಟ್ಟಿಗೆ ಹತ್ತಿಕ್ಕುವ ಸ್ವಭಾವದ್ದು. ನೀವದಕ್ಕೊಂದು ರೂಪ ಕೊಡದ ಹೊರತು, ಬೃಹತ್ ಪ್ರಮಾಣದ ಮಾಹಿತಿ ನಿಮ್ಮ ಬುದ್ಧಿಶಕ್ತಿಯನ್ನು ಹತ್ತಿಕ್ಕುತ್ತದೆ. ಕಥೆ ರೂಪದ ಕಲಿಕೆಯು ಶಿಕ್ಷಣದ ಅತ್ಯುತ್ತಮ ಮಾರ್ಗವಾಗಬಹುದು. ಈ ಸಂಸ್ಕೃತಿಯಲ್ಲಿ ಇದನ್ನೇ ಮಾಡಿದ್ದು. ಅದ್ಭುತ ಕಥೆಗಳ ರೂಪದಲ್ಲಿ ವಿಜ್ಞಾನದ ಅತ್ಯುನ್ನತ ತತ್ವಗಳನ್ನು ಕಲಿಸಲಾಗುತ್ತಿತ್ತು.