logo
logo
Drawing of Shiva and Parvati sitting next each other

ಶಿವ ಮತ್ತು ಪಾರ್ವತಿಯ ಒಂದು ವಿಶಿಷ್ಟ ವಿವಾಹ

ಪಾರ್ವತಿ ಒಬ್ಬ ರಾಜಕುಮಾರಿಯಾಗಿದ್ದ ಕಾರಣ ಶಿವಪಾರ್ವತಿಯರ ವಿವಾಹವು ಒಂದು ರಾಜವೈಭವದ ಸಮಾರಂಭವಾಗಿತ್ತು. ಆ ನಂತರ ವರನ ರೂಪದಲ್ಲಿ ಜಟಾಧಾರಿಯಾದ ಶಿವನು ಆಗಮಿಸಿದನು…

 ಸದ್ಗುರು: ಯೋಗ ಪರಂಪರೆಯಲ್ಲಿ ಒಂದು ಸುಂದರವಾದ ಕಥೆ ಇದೆ. ಆದಿಯೋಗಿಯಾದ ಶಿವ ಮತ್ತು ಪಾರ್ವತಿಯ ವಿವಾಹವು ಒಂದು ಭವ್ಯ ಸಮಾರಂಭವಾಗಿತ್ತು. ಪಾರ್ವತಿ ಒಬ್ಬ ರಾಜಕುಮಾರಿಯಾಗಿದ್ದಳು, ಆದ್ದರಿಂದ ಪ್ರದೇಶದ ಪ್ರಸಿದ್ಧರೆಲ್ಲ ಆಹ್ವಾನಿಸಲ್ಪಟ್ಟಿದ್ದರು - ರಾಜ ರಾಣಿಯರು, ದೇವ ದೇವಿಯರು, ಪ್ರತಿಯೊಬ್ಬರೂ ತಮ್ಮ ಸೊಗಸಾದ ಉಡುಗೆತೊಡುಗೆಯಲ್ಲಿ, ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಸುಂದರವಾಗಿ ಆಗಮಿಸಿದ್ದರು.

ಆ ನಂತರ ವರನಾಗಿ - ಭಯಂಕರವಾಗಿ ಜಟಾಧಾರಿಯಾದ, ತಲೆಯಿಂದ ಕಾಲ್ಬೆರಳಿನವರೆಗೂ ಬೂದಿ ಬಳಿದುಕೊಂಡಿದ್ದ, ಒಂದು ಆನೆಯ ರಕ್ತ ತೊಟ್ಟಿಕ್ಕುತ್ತಿದ್ದ ತಾಜಾ ಚರ್ಮವನ್ನು ಧರಿಸಿದ, ಸಂಪೂರ್ಣವಾಗಿ ಅಮಲೇರಿಸಿಕೊಂಡು ಪರಮಾನಂದದ ಸ್ಥಿತಿಯಲ್ಲಿ - ಶಿವ ಅಲ್ಲಿಗೆ ಆಗಮಿಸಿದ. ಅವನ ಪರಿವಾರದವರೆಲ್ಲರೂ ವಿಕೃತವಾದ ವಿಶಿಷ್ಟ ಜೀವಿಗಳಾಗಿದ್ದರು. ಅವರು ಯಾರೂ ಮಾನವ ರೂಪದಲ್ಲಿರದೆ ಅರ್ಥ ಮಾಡಿಕೊಳ್ಳಲಾಗದ ಭಾಷೆಯಲ್ಲಿ ತಮ್ಮ ತಮ್ಮೊಳಗೆ ಬಗೆ ಬಗೆಯ ಶಬ್ದಗಳನ್ನು ಮಾಡುತ್ತಿದ್ದರು.

ಪಾರ್ವತಿಯ ತಾಯಿ ಮೀನಾ, ಈ ‘ವರ’ನನ್ನು ನೋಡಿ ಮೂರ್ಛೆಹೋದಳು! ಪಾರ್ವತಿ ಹೋಗಿ ಶಿವನನ್ನು ಬೇಡಿಕೊಂಡಳು, "ನೀನು ಯಾವುದೇ ರೂಪದಲ್ಲಿದ್ದರೂ ನನಗೆ ಅಭ್ಯಂತರವಿಲ್ಲ, ನನಗೆ ಬೇಕಿರುವುದು ನೀನಷ್ಟೇ, ಯಾವುದೇ ರೂಪದಲ್ಲಿದ್ದರೂ ಸಹ. ಆದರೆ ನನ್ನ ತಾಯಿಗೋಸ್ಕರ, ನಿನ್ನ ಸ್ವಲ್ಪ ಮೋಹಕವಾದ ರೂಪವನ್ನು ತೋರಿಸು.”

ಶಿವ ಒಪ್ಪಿಕೊಂಡು ತನ್ನ ಅತ್ಯಂತ ಸುಂದರವಾದ ರೂಪವನ್ನು ಧರಿಸಿ, ಚೆನ್ನಾಗಿ ಸಜ್ಜುಗೊಂಡು ಮತ್ತೆ ವಿವಾಹಕ್ಕೆ ಬಂದನು. ಶಿವನ ಈ ಪರಿವರ್ತಿತ ರೂಪವನ್ನು ನೋಡಿ, ಜನರು ಅವನನ್ನು “ಸುಂದರಮೂರ್ತಿ” ಎಂದು ಕರೆದರು. ಅಂದರೆ ಅತ್ಯಂತ ಸುಂದರನಾದ ವ್ಯಕ್ತಿ. ಅವನ ಎತ್ತರ ಒಂಬತ್ತು ಅಡಿಗಳಷ್ಟಿತ್ತು. ಜನರ ಪ್ರಕಾರ ಶಿವನು ನಿಂತಾಗ, ಒಂದು ಕುದುರೆಯ ತಲೆಯ ಎತ್ತರಕ್ಕೆ ಸಮನಾಗಿದ್ದನು. ಅವನು ದಕ್ಷಿಣ ಭಾರತಕ್ಕೆ ಬಂದಾಗ, ಇಲ್ಲಿನ ಸಾಮಾನ್ಯವಾಗಿ ನಾಲ್ಕೂವರೆಯಿಂದ ಐದು ಅಡಿ ಎತ್ತರದ ಮಹಿಳೆಯರಿಗಿಂತ ಎರಡು ಪಟ್ಟು ಎತ್ತರದಲ್ಲಿದ್ದನು. ಅತ್ಯಂತ ಸುಂದರ ಪುರುಷನಾಗಿ ಬಂದಿದ್ದ ಅವನ ಉಪಸ್ಥಿತಿಯಿಂದ ಎಲ್ಲರೂ ವಿಸ್ಮಿತರಾಗಿದ್ದರು.

ಶಿವ ಮತ್ತು ಪಾರ್ವತಿ: ತಪಸ್ವಿಯೊಬ್ಬ ರಾಜಕುಮಾರಿಯನ್ನು ವರಿಸಿದಾಗ

ಶಿವ ವಿವಾಹಕ್ಕೆಂದು ಕೆಳಗೆ ಕುಳಿತನು. ಭಾರತದಲ್ಲಿ, ಈ ರೀತಿಯ ವಿವಾಹದಲ್ಲಿ, ವಧು ಮತ್ತು ವರನ ಪೂರ್ವಾಪರಗಳನ್ನು ಬಹಳ ಹೆಮ್ಮೆಯಿಂದ ಘೋಷಿಸಲಾಗುತ್ತದೆ. ಅವರ ವಂಶಾವಳಿ, ಅವರು ಎಲ್ಲಿಂದ ಬಂದವರು ಮತ್ತು ಸಂಪೂರ್ಣ ಕುಲವೃಕ್ಷದ ಬಗ್ಗೆ ಪರಿಚಯಿಸಲಾಗುತ್ತದೆ.

ವಧುವಿನ ಕಡೆಯಿಂದ, ಪಾರ್ವತಿಯ ತಂದೆ ಹಿಮಾವತ ಹಿಮಾಲಯ ಪರ್ವತ ಪ್ರದೇಶದ ರಾಜ. ವಧುವಿನ ವಂಶಾವಳಿಯ ಕುರಿತು ಅನೇಕ ಅದ್ಭುತವಾದ ವಿಷಯಗಳನ್ನು ಹೇಳಲಾಯಿತು. ನಂತರ ಅವರು "ವರನ ಬಗ್ಗೆ ಹೇಳಿ" ಎಂದರು.

ಶಿವ ಸುಮ್ಮನೆ ಶಾಂತವಾಗಿ ಕುಳಿತಿದ್ದ, ಮೌನವಾಗಿದ್ದ. ಅವನು ಏನನ್ನೂ ಹೇಳಲಿಲ್ಲ. ಅವನ ಜೊತೆಗಿದ್ದ ಯಾರಿಗೂ ಗುರುತಿಸಬಹುದಾದ ಯಾವುದೇ ಭಾಷೆ ಮಾತನಾಡಲು ಬರುತ್ತಿರಲಿಲ್ಲ. ಅವರು ಕರ್ಕಶವಾದ ಶಬ್ದಗಳನ್ನು ಮಾಡುತ್ತಿದ್ದರು. ಮದುಮಗಳ ತಂದೆಗೆ ಇದರಿಂದ ಅವಮಾನವಾಯಿತು: "ಪೂರ್ವಾಪರಗಳಿಲ್ಲದ ಮನುಷ್ಯ. ಅವನು ನನ್ನ ಮಗಳನ್ನು ಹೇಗೆ ಮದುವೆಯಾಗುತ್ತಾನೆ? ಅವನು ಎಲ್ಲಿಂದ ಬಂದ, ಅವನ ತಂದೆತಾಯಿ ಯಾರು, ಅವನ ವಂಶಾವಳಿ ಏನು ಎಂಬುದು ಯಾರಿಗೂ ತಿಳಿದಿಲ್ಲ. ನಾನು ನನ್ನ ಮಗಳನ್ನು ಈ ಮನುಷ್ಯನಿಗೆ ಹೇಗೆ ಕೊಡಲಿ?" ಅವನು ಕೋಪದಿಂದ ಮೇಲೆದ್ದನು.

ಆಗ ಮದುವೆಗೆ ಅತಿಥಿಯಾಗಿ ಬಂದಿದ್ದ ನಾರದ ಮುನಿಗಳು, ತನ್ನ ಏಕತಾರ ಎಂಬ ಏಕತಂತಿಯ ವೀಣೆಯೊಂದಿಗೆ ಮುಂದೆ ಬಂದರು. ಅವರು ಆ ತಂತಿಯನ್ನು, “ ಟಂಗ್, ಟಂಗ್, ಟಂಗ್” ಎಂದು ಮೀಟಿದರು.

ರಾಜನಿಗೆ ಇನ್ನೂ ಹೆಚ್ಚು ಕೋಪ ಬಂತು. "ಏಕತಾರವನ್ನು ಏಕೆ ನುಡಿಸುತ್ತಿದ್ದೀರಿ?"

ನಾರದರೆಂದರು, "ಇದು ಅವನ ಪೂರ್ವಾಪರ. ಅವನಿಗೆ ತಂದೆಯಿಲ್ಲ, ತಾಯಿಯಿಲ್ಲ."

"ಹಾಗಾದರೆ ಅವನ ಮೂಲ ಏನು?"

"ಟಂಗ್… ಶಬ್ದ, ಪ್ರತಿಧ್ವನಿಯೇ ಅವನ ಮೂಲ. ಅವನು ಪ್ರತಿಧ್ವನಿಯಿಂದ ಹುಟ್ಟಿದವನು. ಅವನಿಗೆ ತಂದೆತಾಯಿ ಇಲ್ಲ, ಪೂರ್ವಾಪರಗಳಿಲ್ಲ, ವಂಶಾವಳಿ ಇಲ್ಲ. ಅವನು ಸ್ವಯಂಭೂ - ಸ್ವತಃ ಸೃಷ್ಟಿಯಾದವನು, ಪೂರ್ವಾಪರಗಳಿಲ್ಲದ ಜೀವಿ."

ರಾಜನಿಗೆ ಇದು ವಿಚಿತ್ರವೆನಿಸಿದರೂ, ಮದುವೆ ನಡೆಯಿತು.

ಶಿವ ಮತ್ತು ಪಾರ್ವತಿಯ ವಿವಾಹ: ಕಥೆಯ ಪ್ರತೀಕಾತ್ಮಕ ಅರ್ಥ

ಈ ಕಥೆಯು ನಮಗೆ ನೆನಪಿಸುವುದೇನೆಂದರೆ, ನಾವು ಆದಿಯೋಗಿಯ ಬಗ್ಗೆ ಮಾತನಾಡುವಾಗ, ಸಭ್ಯ,  ಸುಸಂಸ್ಕೃತ ಮನುಷ್ಯನ ಬಗ್ಗೆ ಮಾತನಾಡುವುದಿಲ್ಲ, ಬದಲಿಗೆ ಜೀವನದೊಂದಿಗೆ ಸಂಪೂರ್ಣ ಏಕತ್ವದಲ್ಲಿರುವ ಮೂಲ ರೂಪದ ಬಗ್ಗೆ ಮಾತನಾಡುತ್ತಿದ್ದೇವೆ. ಅವನು ಶುದ್ಧ ಚೈತನ್ಯ, ಕೃತಕತೆಯಿಲ್ಲದವನು, ಎಂದಿಗೂ ಪುನರಾವರ್ತನೆಯಾಗದವನು,  ಸದಾ ಸ್ವಾಭಾವಿಕ, ಅನವರತ ಆವಿಷ್ಕಾರಶೀಲ, ಸತತ ಸೃಜನಶೀಲ. ಅವನು ಸರಳವಾಗಿ ಜೀವನವೇ ಆಗಿದ್ದಾನೆ.

ಇದೇ ಆಧ್ಯಾತ್ಮಿಕ ಪ್ರಕ್ರಿಯೆಯ ಮೂಲಭೂತ ಅಗತ್ಯವಾಗಿದೆ. ನೀವು ಇಲ್ಲಿ ಕೇವಲ ಒಂದು ಆಲೋಚನೆಗಳ, ನಂಬಿಕೆಗಳ ಮತ್ತು ಅಭಿಪ್ರಾಯಗಳ ಮೂಟೆಯಾಗಿ ಕುಳಿತರೆ - ಅಂದರೆ, ಹೊರಗಿನಿಂದ ಪಡೆಯಲಾಗಿದ್ಧ ಮೆಮೊರಿ ಸ್ಟಿಕ್ಕೊಂದಿಗೆ - ನೀವು ಮನೋ ಪ್ರಕ್ರಿಯೆಗೆ ಗುಲಾಮನಾಗಿದ್ದೀರಿ. ಆದರೆ ನೀವು ಇಲ್ಲಿ ಜೀವನದ ಒಂದು ಭಾಗವಾಗಿ ಕುಳಿತರೆ, ನೀವು ಅಸ್ತಿತ್ವದ ಪ್ರಕ್ರಿಯೆಯೊಂದಿಗೆ ಒಂದಾಗಿ ಬಿಡುವಿರಿ.ನೀವು ಸಿದ್ಧವಾಗಿದ್ದರೆ, ಸಂಪೂರ್ಣ ಬ್ರಹ್ಮಾಂಡವನ್ನೇ ಪ್ರವೇಶಿಸಬಹುದು.

ಜೀವನವು ಎಲ್ಲವನ್ನೂ ನಿಮಗಾಗಿ ಮುಕ್ತವಾಗಿ ಇಟ್ಟಿದೆ. ಅಸ್ತಿತ್ವವು ಯಾರಿಗೂ ಏನನ್ನೂ ನಿರ್ಬಂಧಿಸಿಲ್ಲ. ಹೀಗೆ ಹೇಳಲಾಗಿದೆ, "ತಟ್ಟಿ ಮತ್ತು ಅದು ತೆರೆಯಲ್ಪಡುವುದು." ನೀವು ತಟ್ಟುವ ಅವಶ್ಯಕತೆಯೇ ಇಲ್ಲ ಏಕೆಂದರೆ ಅಲ್ಲಿ ಯಾವ ನಿಜವಾದ ಬಾಗಿಲೂ ಇಲ್ಲ. ನೆನಪಿನ ಮತ್ತು ಪುನರಾವರ್ತನೆಯ ಜೀವನವನ್ನು ಹೇಗೆ ಪಕ್ಕಕ್ಕೆ ಇಡಬೇಕೆಂದು ನಿಮಗೆ ತಿಳಿದಿದ್ದರೆ, ನೀವು ನೇರವಾಗಿ ನಡೆದುಹೋಗಬಹುದು. ಅರಿವಿನ ಮಾರ್ಗವು ವಿಶಾಲವಾಗಿ ತೆರೆದಿದೆ.

    Share

Related Tags

Get latest blogs on Shiva