logo
logo

Presence of Shiva

ಶಿವನ ಸನ್ನಿಧಿಗಳು – ಮೊದಲ ಯೋಗಿಯ ಜಾಡಿನಲ್ಲಿ


ಸದ್ಗುರುಗಳು ಶಿವನು ಕಾಲ ಕಳೆದ ನಾಲ್ಕು ಮಹತ್ವಪೂರ್ಣವಾದ ಸ್ಥಳಗಳ ಬಗ್ಗೆ ಹೇಳುತ್ತಾ ಆ ಸ್ಥಳಗಳ ಶಕ್ತಿ ಮತ್ತು ಸಾಮರ್ಥ್ಯವನ್ನು ವಿವರಿಸುತ್ತಾರೆ.

ಸದ್ಗುರು : ಯೋಗ ಸಂಸ್ಕೃತಿಯಲ್ಲಿ, ಶಿವನನ್ನು ದೇವರು ಎಂದು ಪರಿಗಣಿಸಲಾಗುವುದಿಲ್ಲ. ಅವನು ಈ ಭೂಮಿಯ ಮೇಲೆ ನಡೆದಾಡಿದ ಒಬ್ಬ ಮನುಷ್ಯನಾಗಿದ್ದ ಮತ್ತು ಅವನು ಯೋಗಸಂಪ್ರದಾಯಗಳ ಮೂಲವಾಗಿದ್ದಾನೆ. ಅವನು ಆದಿಯೋಗಿ ಅಥವಾ ಮೊದಲ ಯೋಗಿ, ಮತ್ತು ಆದಿಗುರು, ಅಂದರೆ ಮೊದಲ ಗುರುವಾಗಿದ್ದಾನೆ. ಯೋಗವಿಜ್ಞಾನಗಳ ಮೊದಲ ಪ್ರಸರಣ ಕೇದಾರನಾಥದಿಂದ ಕೆಲವು ಮೈಲುಗಳ ಆಚೆಗಿನ ಒಂದು ಹಿಮಸರೋವರವಾದ ಕಾಂತಿಸರೋವರದ ತಟದಲ್ಲಿ ನಡೆಯಿತು. ಅಲ್ಲಿ ಆದಿಯೋಗಿಯು ಇಂದು ಸಪ್ತ ಋಷಿಗಳೆಂದು ಕರೆಯಲ್ಪಡುವ, ತನ್ನ ಮೊದಲ ಏಳು ಶಿಷ್ಯರಿಗೆ ಈ ಆಂತರ್ಯದ ತಂತ್ರಜ್ಞಾನದ ಒಂದು ವ್ಯವಸ್ಥಿತ ನಿರೂಪಣೆಯನ್ನು ಪ್ರಾರಂಭಿಸಿದನು.


ಕಾಂತಿ ಸರೋವರ – ಅನುಗ್ರಹದ ಸರೋವರ

ದಂತಕಥೆಯ ಪ್ರಕಾರ ಶಿವ ಮತ್ತು ಪಾರ್ವತಿಯರು ಕಾಂತಿಸರೋವರದ ತಟದಲ್ಲಿ ಮತ್ತು ಕೇದಾರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅಲ್ಲಿ ವಾಸಿಸುತ್ತಿದ್ದ ಹಲವಾರು ಯೋಗಿಗಳನ್ನು ಶಿವ ಮತ್ತು ಪಾರ್ವತಿಯರು ಭೇಟಿಯಾಗುತ್ತಿದ್ದರು. ಹಲವಾರು ವರ್ಷಗಳ ಹಿಂದೆ, ನಾನು ಪ್ರತಿವರ್ಷ ಒಂದು ಅಥವಾ ಎರಡು ತಿಂಗಳ ಕಾಲ ಹಿಮಾಲಯದಲ್ಲಿ ಸುತ್ತಾಡುತ್ತಿರುತ್ತಿದ್ದೆ. ನಾನು ಮೊಟ್ಟಮೊದಲನೆಯ ಸಲ 1994ರಲ್ಲಿ ಕಾಂತಿಸರೋವರಕ್ಕೆ ಹೋದೆ. ಕಾಂತಿ ಸರೋವರವೇ ಉಕ್ಕಿ ಹರಿದು ಕೇದಾರದಲ್ಲಿ 2013ರಲ್ಲಿ ಪ್ರವಾಹ ಸಂಭವಿಸಿತು. ಇಂದು, ಅದನ್ನು ಗಾಂಧಿ ಸರೋವರವೆಂದು ಕರೆಯಲಾಗುತ್ತಿದೆ. ವಾಸ್ತವವಾಗಿ ಅದು ಕಾಂತಿ ಸರೋವರ. ಕಾಂತಿ ಎಂದರೆ ಅನುಗ್ರಹ. ಅದು ಅನುಗ್ರಹದ ಸರೋವರ.



ನಾನು ದೀರ್ಘಕಾಲದ ನಡಿಗೆಯ ನಂತರ ಕೇದಾರವನ್ನು ತಲುಪಿದಾಗ, ಕಾಂತಿಸರೋವರದ ಬಗ್ಗೆ ಕೇಳಿದೆ. ನಂತರ ಒಂದು ದಿನ ಮಧ್ಯಾಹ್ನ 2 ಅಥವಾ 2.30 ಘಂಟೆಗೆ ಹೊರಟು ಒಂದು ಘಂಟೆಯ ಪ್ರಯಾಣದ ನಂತರ ಅಲ್ಲಿಗೆ ತಲುಪಿದೆ. ಅಲ್ಲೊಂದು ಸರೋವರವಿತ್ತು ಮತ್ತು ಸುತ್ತಲೂ ಹಿಮಾಚ್ಛಾದಿತ ಬೆಟ್ಟಗಳಿದ್ದವು. ಪ್ರಕೃತಿಯ ದೃಷ್ಟಿಯಲ್ಲಿ ನೋಡುವುದಾದರೆ ಅದೊಂದು ರಮಣೀಯ ಸ್ಥಳ – ನಿಶ್ಚಲ ನೀರಿನ ಬೃಹತ್ತಾದ ಸರೋವರ, ಎಲ್ಲೂ ಹಸಿರಿಲ್ಲ ಮತ್ತು ಎಲ್ಲಾ ಹಿಮಾಚ್ಛಾದಿತ ಬೆಟ್ಟಗಳು ಸಂಪೂರ್ಣ ನಿಶ್ಚಲವಾದ ನೀರಿನಲ್ಲಿ ಪ್ರತಿಫಲಿಸುತ್ತಿರುತ್ತವೆ. ಅದೊಂದು ಅಮೋಘವಾದ ಸ್ಥಳ.


ಕಾಂತಿ ಸರೋವರದಲ್ಲಿ ಸದ್ಗುರು

ನಾನಲ್ಲಿ ಕುಳಿತೆ. ಅಲ್ಲಿನ ಪ್ರಶಾಂತತೆ, ಮೌನ ಮತ್ತು ಶುದ್ಧತೆ ನನ್ನ ಪ್ರಜ್ಞೆಯನ್ನು ಪ್ರವೇಶಿಸಿತು. ಆ ಪ್ರದೇಶದ ಎತ್ತರ ಮತ್ತು ಅಲ್ಲಿನ ನಿಚ್ಚಳ ಸೌಂದರ್ಯ ನನ್ನ ಉಸಿರನ್ನು ಸ್ತಬ್ಧಗೊಳಿಸಿತು. ನಾನು ಆ ನಿಶ್ಚಲತೆಯಲ್ಲಿ ಒಂದು ಸಣ್ಣ ಕಲ್ಲಿನ ಮೇಲೆ ನನ್ನ ಕಣ್ಣುಗಳನ್ನು ತೆರೆದು ಕುಳಿತು. ನನ್ನ ಸುತ್ತಲಿನ ಪ್ರತಿಯೊಂದು ರೂಪವನ್ನೂ ಹೀರಿಕೊಳ್ಳುತ್ತಿದ್ದೆ. ನಿಧಾನವಾಗಿ ಸುತ್ತಲಿನ ಪ್ರಪಂಚ ಅದರ ರೂಪವನ್ನು ಕಳೆದುಕೊಂಡಿತು ಮತ್ತು ಕೇವಲ ನಾದ ಮಾತ್ರ ಉಳಿಯಿತು. ಆ ಪರ್ವತ, ಸರೋವರ ಮತ್ತು ಸುತ್ತಲಿನ ಇಡೀ ಪ್ರಪಂಚ, ನನ್ನ ಶರೀರವನ್ನೂ ಒಳಗೊಂಡು, ಎಲ್ಲವೂ ಅವುಗಳ ಎಂದಿನ ರೂಪವನ್ನು ಕಳೆದುಕೊಂಡವು. ಎಲ್ಲವೂ ಕೇವಲ ಒಂದು ಶಬ್ದವಾಗಿತ್ತು. ನನ್ನೊಳಗೊಂದು ಹಾಡು ಉದಿಸಿತು : “ನಾದಬ್ರಹ್ಮ ವಿಶ್ವ ಸ್ವರೂಪ”




ನಾದ ಬ್ರಹ್ಮ

ನಾದ ಬ್ರಹ್ಮ ವಿಶ್ವಸ್ವರೂಪ
ನಾದ ಹಿ ಸಕಲ ಜೀವಸ್ವರೂಪ
ನಾದ ಹಿ ಕರ್ಮ ನಾದ ಹಿ ಧರ್ಮ
ನಾದ ಹಿ ಬಂಧನ ನಾದ ಹಿ ಮುಕ್ತಿ
ನಾದ ಹಿ ಶಂಕರ ನಾದ ಹಿ ಶಕ್ತಿ
ನಾದಂ ನಾದಂ ಸರ್ವಂ ನಾದಂ
ನಾದಂ ನಾದಂ ನಾದಂ ನಾದಂ



I am somebody who always avoided learning the Sanskrit language. Though I like the language very much and I know the depth of the language, I avoided learning it because the moment you learn Sanskrit, you will invariably end up reading the scriptures. My own vision has never failed me in anything even for one moment, so I did not want to clutter myself with scriptures and all these traditions. So I avoided the Sanskrit language.



ನಾನು ಯಾವಾಗಲೂ ಸಂಸ್ಕೃತವನ್ನು ಕಲಿಯುವುದನ್ನು ತಪ್ಪಿಸಿಕೊಂಡವನಾಗಿದ್ದೆ. ನಾನು ಆ ಭಾಷೆಯನ್ನು ತುಂಬಾ ಇಷ್ಟಪಡುತ್ತೇನಾದರೂ ಮತ್ತು ಅದರ ಗಹನತೆಯನ್ನು ಬಲ್ಲೆನಾದರೂ, ನಾನು ಅದನ್ನು ಕಲಿಯುವುದನ್ನು ತಪ್ಪಿಸಿದೆ. ಏಕೆಂದರೆ ನೀವು ಸಂಸ್ಕೃತವನ್ನು ಕಲಿತ ತಕ್ಷಣ ಶಾಸ್ತ್ರಗ್ರಂಥಗಳನ್ನು ಓದಲೇಬೇಕಾಗುತ್ತದೆ. ನನ್ನ ಸ್ವಂತ ದೃಷ್ಟಿಕೋನವು ನನ್ನನ್ನು ಯಾವುದರಲ್ಲೂ ಒಂದು ಕ್ಷಣವೂ ವಿಫಲಗೊಳಿಸಿಲ್ಲ, ಹಾಗಾಗಿ ನಾನು ನನ್ನನ್ನು ಈ ಶಾಸ್ತ್ರಗ್ರಂಥಗಳು ಮತ್ತು ಸಂಪ್ರದಾಯಗಳ ಗೋಜಲಿಗೆ ಈಡುಮಾಡಿಕೊಳ್ಳಲಿಲ್ಲ. ಹಾಗಾಗಿ ನಾನು ಸಂಸ್ಕೃತವನ್ನು ಕಲಿಯಲಿಲ್ಲ.



ನಿಧಾನವಾಗಿ, ಸ್ವಲ್ಪ ಸಮಯದ ನಂತರ, ಎಲ್ಲವೂ ಮೊದಲಿನ ಸ್ಥಿತಿಗೆ ಬಂತು. ನಾದದಿಂದ ರೂಪಕ್ಕೆ ಇಳಿದ ನನ್ನ ಪ್ರಜ್ಞೆಯ ಪತನ ನನ್ನ ಕಣ್ಣುಗಳನ್ನು ಕಣ್ಣೀರಿನಿಂದ ತುಂಬಿಸಿತು.



ನೀವು ನಿಮ್ಮನ್ನು ಆ ಹಾಡಿಗೆ ಸಮರ್ಪಿಸಿಕೊಂಡರೆ, ಅದಕ್ಕೊಂದು ರೀತಿಯ ಶಕ್ತಿಯಿದೆ. ನೀವು ಅದರಲ್ಲಿ ನಿಜವಾಗಿಯೂ ತನ್ಮಯರಾದರೆ, ಆ ಹಾಡಿಗೆ ವ್ಯಕ್ತಿಯನ್ನು ವಿಲೀನಗೊಳಿಸುವ ಶಕ್ತಿಯಿದೆ.



ಕೈಲಾಸ – ನಿಗೂಢ ಪರ್ವತ

ಹಿಂದೂ ಜೀವನ ವಿಧಾನದಲ್ಲಿ, ಕೈಲಾಸವು ಶಿವನ ಆವಾಸಸ್ಥಳವಾಗಿದೆ. ಅದರರ್ಥ ಅವನು ಅಲ್ಲಿ ಕುಣಿಯುತ್ತ ಅಥವಾ ಹಿಮದಲ್ಲಿ ಅಡಗಿಕೊಂಡು ಕೂತಿದ್ದಾನೆ ಎಂದಲ್ಲ. ಅಲ್ಲಿ ಅವನು ತನ್ನ ಜ್ಞಾನವನ್ನೆಲ್ಲಾ ನಿಕ್ಷೇಪವಾಗಿಟ್ಟಿದ್ದಾನೆ ಎಂದು ಅದರರ್ಥ. ಸಪ್ತಋಷಿಗಳಲ್ಲಿ ಒಬ್ಬೊಬ್ಬರೂ ಜ್ಞಾನದ ಒಂದೊಂದೇ ಆಯಾಮವನ್ನು ಮಾತ್ರ ತಿಳಿಯಲು ಸಾಧ್ಯವಾಗಿದ್ದು, ಯೋಗದ ಎಲ್ಲಾ ಏಳೂ ಆಯಾಮಗಳನ್ನು ಗ್ರಹಿಸಬಲ್ಲ ಇನ್ನೊಬ್ಬ ಮನುಷ್ಯ ಸಿಗದ ಕಾರಣ, ಜೀವನದ ತಾಂತ್ರಿಕತೆಯನ್ನು ತಿಳಿಯುವ ಜ್ಞಾನದ ಎಲ್ಲಾ ಏಳೂ ಆಯಾಮಗಳನ್ನು ಒಂದೇ ಕಡೆ ಮತ್ತು ಒಂದು ಮೂಲದಲ್ಲಿ ಲಭ್ಯವಾಗುವಂತೆ, ಆದಿಯೋಗಿಯು ತನ್ನೆಲ್ಲಾ ಜ್ಞಾನವನ್ನು ಕೈಲಾಸ ಪರ್ವತದಲ್ಲಿ ನಿಕ್ಷೇಪವಾಗಿಟ್ಟಿದ್ದಾನೆ. ಕೈಲಾಸವು ಭೂಮಿಯ ಅತ್ಯಂತ ದೊಡ್ಡ ಅತೀಂದ್ರಿಯಜ್ಞಾನದ ಭಂಡಾರವಾಗಿದೆ – ಅದೊಂದು ಜೀವಂತ ಭಂಡಾರ, ಕೇವಲ ಮಾಹಿತಿಯ ಸಂಗ್ರಹವಲ್ಲ, ಜೀವಂತವಾದದ್ದು!


ಕೈಲಾಸದ ದಕ್ಷಿಣದ ಮುಖ

ಒಬ್ಬ ವ್ಯಕ್ತಿ ತನ್ನನ್ನು ತಾನು ಅರಿತಾಗ ಮತ್ತು ಅವನ ಗ್ರಹಿಕೆ ಸಾಮಾನ್ಯವೆಂದು ಪರಿಗಣಿಸಲ್ಪಡುವ ಗ್ರಹಿಕೆಯ ಮಟ್ಟವನ್ನು ಮೀರಿಹೋದಾಗ, ಅವನು ಗ್ರಹಿಸಿದ್ದನ್ನು ಯಾವಾಗಲೂ ಅವನ ಸುತ್ತಲಿನ ಜನರ ಗ್ರಹಿಕೆಗೆ ನಿಲುಕುವಂತೆ ಮಾಡಲಾಗುವುದಿಲ್ಲ. ಅದರ ಸಣ್ಣಭಾಗವನ್ನು ಮಾತ್ರ ನೀಡಬಹುದು. ಯಾವುದೇ ಗುರುವಿಗೆ ತನ್ನಲ್ಲಿರುವುದನ್ನೆಲ್ಲಾ ನೀಡಲು ಸಾಧ್ಯವಾಗುವಂತಹ ಜನರು ಸಿಗುವುದು ಬಹಳ ಅಪರೂಪ.



ಹಾಗಾದರೆ, ನೀವು ಇದನ್ನೆಲ್ಲಾ ಎಲ್ಲಿ ಇಡುತ್ತೀರಿ? ಇದು ಕಳೆದುಹೋಗುವುದು ನಿಮಗೆ ಇಷ್ಟವಿಲ್ಲ. ಹಾಗಾಗಿ, ಸಾವಿರಾರು ವರ್ಷಗಳಿಂದ, ಜ್ಞಾನಿಗಳು ಯಾವಾಗಲೂ ಕೈಲಾಸಕ್ಕೆ ತೆರಳಿ ತಮ್ಮ ಜ್ಞಾನವನ್ನು ಆ ಪರ್ವತದಲ್ಲಿ ನಿರ್ದಿಷ್ಟ ಶಕ್ತಿರೂಪದಲ್ಲಿ ನಿಕ್ಷೇಪವಾಗಿಡುತ್ತಿದ್ದರು. ಈ ಕಾರಣದಿಂದಲೇ ದಕ್ಷಿಣ ಭಾರತದ ಆಧ್ಯಾತ್ಮಿಕ ಪರಂಪರೆಯು ತನ್ನ ಮೂಲಪುರುಷನಾದ ಅಗಸ್ತ್ಯರು, ಕೈಲಾಸದ ದಕ್ಷಿಣಮುಖದಲ್ಲಿ ವಾಸಿಸುತ್ತಾರೆ ಎಂದು ಹೇಳುವುದು. ಬೌದ್ಧರು ತಮ್ಮ ಪರಂಪರೆಯ ಮೂವರು ಬುದ್ಧರು ಈ ಪರ್ವತದಲ್ಲಿ ವಾಸಿಸುತ್ತಾರೆ ಎಂದು ಹೇಳುತ್ತಾರೆ. ಜೈನರು ತಮ್ಮ ಮೊದಲ ತೀರ್ಥಂಕರರಾದ ಋಷಭನಾಥರು ಕೈಲಾಸದಲ್ಲಿ ವಾಸಿಸುತ್ತಾರೆ ಎಂದು ಭಾವಿಸುತ್ತಾರೆ.



ಓರ್ವ ಆಧ್ಯಾತ್ಮಿಕ ಸಾಧಕನಿಗೆ, ಕೈಲಾಸವೆಂದರೆ ಈ ಭೂಮಿಯ ಮೇಲಿನ ಅತ್ಯುನ್ನತವಾದ ಆಧ್ಯಾತ್ಮಿಕ ಮೂಲವನ್ನು ಸಂಧಿಸಿದಂತೆ. ಆಧ್ಯಾತ್ಮದ ಹಾದಿಯಲ್ಲಿರುವವರಿಗೆ, ಇದು ಭೇಟಿ ನೀಡಲೇಬೇಕಾದ ಸ್ಥಳ. ಇಂತಹ ಸ್ಥಳವು ಬೇರೊಂದಿಲ್ಲ.



8-12 ನೇ ಶತಮಾನಗಳ ಶಿವ ಮತ್ತು ಶಕ್ತಿ ದೇವಸ್ಥಾನಗಳು

ಈ ದೇಶದಲ್ಲಿ, ಹಿಂದಿನ ಕಾಲದಲ್ಲಿ, ಸಾಮಾನ್ಯವಾಗಿ ಶಿವನಿಗೆ ಮಾತ್ರ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತಿತ್ತು. ಕಳೆದ ಸುಮಾರು 1000 ವರ್ಷಗಳಿಂದೀಚೆಗೆ ಇತರ ದೇವಸ್ಥಾನಗಳು ನಿರ್ಮಾಣಗೊಂಡಿವೆಯಷ್ಟೆ. “ಶಿವ” ಎಂಬ ಪದದ ಅರ್ಥ “ಏನೂ ಅಲ್ಲದ್ದು” ಎಂಬುದಾಗಿದೆ. ಹಾಗಾಗಿ ದೇವಸ್ಥಾನವನ್ನು “ಏನೂ ಅಲ್ಲ”ದ ವಸ್ತುವಿಗಾಗಿ ನಿರ್ಮಿಸಲಾಗುತ್ತದೆ. “ಏನೋ ಒಂದು” ಎನ್ನುವುದು ಭೌತಿಕ ಅಭಿವ್ಯಕ್ತಿಯಾಗಿದೆ; “ಏನೂ ಅಲ್ಲದ್ದು” ಭೌತಿಕತೆಯನ್ನು ಮೀರಿದ್ದಾಗಿದೆ. ದೇವಸ್ಥಾನ ಎನ್ನುವುದು ಏನೂ ಅಲ್ಲದ್ದರ ಆಯಾಮಕ್ಕೆ ಪ್ರವೇಶಿಸಲು ನಿಮಗೆ ಅನುವು ಮಾಡಿಕೊಡುವ ಒಂದು ಕಿಂಡಿಯಾಗಿದೆ. ದೇಶದಲ್ಲಿ ಸಾವಿರಾರು ಶಿವ ದೇವಸ್ಥಾನಗಳಿವೆ, ಮತ್ತು ಅವುಗಳಲ್ಲಿ ಬಹುತೇಕ ದೇವಸ್ಥಾನಗಳಲ್ಲಿ ಯಾವುದೇ ರೂಪಗಳಿಲ್ಲ. ಅಲ್ಲಿ ಕೇವಲ ಒಂದು ಪ್ರಾತಿನಿಧಿಕ ರೂಪವಿರುತ್ತದೆ ಮತ್ತು ಅದು ಸಾಮಾನ್ಯವಾಗಿ ಒಂದು ಲಿಂಗವಾಗಿರುತ್ತದೆ.



ಕೆಳಕಂಡ ನಕ್ಷೆಯ ಡೌನ್ಲೋಡ್ ಮಾಡಬಹುದಾದ ಆವೃತ್ತಿಯು ಇಲ್ಲಿ ಲಭ್ಯವಿದೆ.

ವೆಳ್ಳಿಯಂಗಿರಿ – ದಕ್ಷಿಣದ ಕೈಲಾಸ

ದಕ್ಷಿಣ ಭಾರತದಲ್ಲಿ, ನಮ್ಮ ಕೇಂದ್ರವಿರುವ ಸ್ಥಳಕ್ಕೆ ಅತ್ಯಂತ ಹತ್ತಿರದಲ್ಲಿ, ಇನ್ನೊಂದು ಅತೀಂದ್ರಿಯಜ್ಞಾನ ಭಂಡಾರವಿದೆ – ಅದೇ ವೆಳ್ಳಿಯಂಗಿರಿ ಬೆಟ್ಟ. ಇದನ್ನು ದಕ್ಷಿಣದ ಕೈಲಾಸ ಎಂದು ಕರೆಯುತ್ತಾರೆ. ಅದೊಂದು ಅಸಾಧಾರಣವಾದ ಸ್ಥಳ. ಕೈಲಾಸವು ಜ್ಞಾನದ ಬಹಳ ದೊಡ್ಡ ರಾಶಿ. ಆದರೆ ದಕ್ಷಿಣದ ಹಲವಾರು ಯೋಗಿಗಳು ಮತ್ತು ಅವಧೂತರು ತಮ್ಮ ಜ್ಞಾನವನ್ನು ಶೇಖರಿಸಲು ವೆಳ್ಳಿಯಂಗಿರಿಯನ್ನು ಬಳಸಿಕೊಂಡರು. ಪ್ರಮಾಣದ ದೃಷ್ಟಿಯಲ್ಲಿ ನೋಡುವುದಾದರೆ ಕೈಲಾಸಕ್ಕೆ ಸಮನಾದುದು ಯಾವುದೂ ಇಲ್ಲ, ಆದರೆ ಗುಣಮಟ್ಟದ ದೃಷ್ಟಿಯಲ್ಲಿ, ವೆಳ್ಳಿಯಂಗಿರಿಯು ಅಷ್ಟೇ ಉತ್ತಮವಾದದ್ದು.

ಈ ಗಿರಿಯು ‘ಏಳು ಬೆಟ್ಟಗಳು’ ಎಂದು ಕರೆಯಲ್ಪಡುತ್ತದೆ ಏಕೆಂದರೆ, ನೀವು ಬೆಟ್ಟವನ್ನು ಹತ್ತುವಾಗ, ನಿಮಗೆ ಏಳು ಏರು ತಗ್ಗುಗಳು ಕಾಣಸಿಗುತ್ತವೆ, ಅದರಿಂದ ನಿಮಗೆ ಏಳು ಬೆಟ್ಟಗಳನ್ನು ಹತ್ತಿದಂತೆನಿಸುತ್ತದೆ. ಏಳನೆಯದು ಸಂಪೂರ್ಣವಾಗಿ ಗಾಳಿ ಬೀಸುವ ಶಿಖರವಾಗಿದ್ದು ಅಲ್ಲಿ ಹುಲ್ಲು ಬಿಟ್ಟರೆ ಮತ್ತೇನೂ ಬೆಳೆಯುವುದಿಲ್ಲ. ಅಲ್ಲಿ ಮೂರು ದೊಡ್ಡ ಬಂಡೆಗಳಿದ್ದು, ಅವುಗಳ ಸಹಜವಾದ ಜೋಡಣೆಯಿಂದ ಒಂದು ಸೂರು ನಿರ್ಮಾಣವಾಗಿದ್ದು, ಅದರಲ್ಲಿ ಒಂದು ಸಣ್ಣ ಲಿಂಗವಿದೆ. ಅದೊಂದು ಅಸಾಧಾರಣವಾದ ಶಕ್ತಿಯುತವಾದ ಸ್ಥಳ.

ಈ ಪರ್ವತದಿಂದ ಕೆಳಗಿಳಿದು ಬಂದ ಯೋಗಿಗಳು ಮತ್ತು ಸಿದ್ಧರು ಸಂಪೂರ್ಣವಾಗಿ ವಿಭಿನ್ನ ರೀತಿಯವರಾಗಿದ್ದರು – ಅವರು ವಿಪರೀತ ಉಗ್ರ ಮತ್ತು ತೀವ್ರ ಸ್ವಭಾವದ ಜನರು. ಅಂತಹ ಹಲವಾರು ಜನರು ಈ ಬೆಟ್ಟದಲ್ಲಿ ನಡೆದಾಡಿದ್ದಾರೆ. ಅವರು ಎಂತಹ ಘನತೆ ಮತ್ತು ಹಿರಿಮೆಯಿಂದ ಜೀವಿಸಿದ್ದರೆಂದರೆ ಅವರನ್ನು ನೋಡಿ ದೇವತೆಗಳೂ ಸಹ ಅಸೂಯೆಪಡದಿರಲಾರರು. ಈ ಮಹಾನ್ ಚೇತನಗಳು ತಮಗೆ ತಿಳಿದ ಜ್ಞಾನವನ್ನು ಈ ಇಡೀ ಪರ್ವತದಲ್ಲಿ ನಿಕ್ಷೇಪವಾಗಿಟ್ಟರು, ಮತ್ತು ಅದು ಎಂದೂ ಕಳೆದುಹೋಗುವುದಿಲ್ಲ. ಇದು ನನ್ನ ಗುರುಗಳೂ ಸಹ ನಡೆದಾಡಿದ ಮತ್ತು ತಮ್ಮ ಶರೀರವನ್ನು ತ್ಯಜಿಸಿದ ಪರ್ವತವಾಗಿದೆ. ಹಾಗಾಗಿ ಇದು ಕೇವಲ ಒಂದು ಬೆಟ್ಟವಲ್ಲ. ನಮಗೆ ಇದೊಂದು ದೇವಸ್ಥಾನ.

ಸನಾತನ ನಗರಿ - ಕಾಶಿ

ಸಾವಿರಾರು ವರ್ಷಗಳಿಂದ ಜಗತ್ತಿನೆಲ್ಲೆಡೆಯಿಂದ ಜನರು ಕಾಶಿಗೆ ಬರುತ್ತಿದ್ದಾರೆ. ಗೌತಮನು ತನ್ನ ಮೊದಲ ಪ್ರವಚನವನ್ನು ನೀಡಲು ಇಲ್ಲಿಗೆ ಬಂದ. ಗೌತಮನ ನಂತರ ಚೀನಿಯರು ಇಲ್ಲಿಗೆ ಬಂದರು. ಜ್ಞಾನಾರ್ಜನೆಯ ಬಹಳ ದೊಡ್ಡ ಸ್ಥಳವೆಂದು ಪ್ರಸಿದ್ಧವಾದ ನಳಂದ ವಿಶ್ವವಿದ್ಯಾಲಯವು ಕಾಶಿಯಿಂದ ಹೊರಬಿದ್ದ ಒಂದು ಸಣ್ಣ ಹನಿಯಷ್ಟೆ. ನೀವು ಕೇಳಿರುವ ಅನೇಕರು, ಆರ್ಯಭಟ ಮತ್ತು ಇತರ ಅನೇಕರು ಈ ಪ್ರದೇಶದಿಂದ ಬಂದವರು. ಅವರೆಲ್ಲ ಕಾಶಿಯಲ್ಲಿ ಆಗ ಜೀವಂತವಿದ್ದ ಸಂಸ್ಕೃತಿಯಿಂದ ರೂಪುಗೊಂಡವರು.

ಯೋಗಿಗಳು ಬ್ರಹ್ಮಾಂಡದ ಸ್ವಭಾವವನ್ನು ಅರಿತಾಗ – ಅದು ಹೇಗೆ ತನ್ನೊಳಗಿಂದಲೇ ವಿಕಾಸವಾಗುತ್ತಿದೆ ಮತ್ತು ಹೇಗೆ ಅದರ ವಿಕಾಸಗೊಳ್ಳುವ ಸಾಮರ್ಥ್ಯ ಅನಂತವಾಗಿದೆ ಎಂಬುದನ್ನು ಅರಿತಾಗ - ಯೋಗಿಗಳು ಅದೇ ರೀತಿಯ ರಚನೆಯೊಂದನ್ನು ತಾವೇ ನಿರ್ಮಿಸಲು ಆಸೆಪಟ್ಟರು. ಅವರು ಕಾಶಿಯಲ್ಲಿ ಬ್ರಹ್ಮಾಂಡ ಮತ್ತು ಪಿಂಡಾಂಡಗಳನ್ನು ಬೆಸೆಯುವ ಒಂದು ರೀತಿಯ ಉಪಕರಣವನ್ನು ಒಂದು ನಗರದ ರೂಪದಲ್ಲಿ ನಿರ್ಮಿಸಿದರು. ಈ ಪುಟ್ಟ ಮನುಷ್ಯ ಜೀವಿಯು ವಿಶ್ವದ ಸತ್ಯದೊಂದಿಗೆ ಒಂದಾಗುವ ಅಸಾಧಾರಣ ಸಾಧ್ಯತೆಯನ್ನು ಹೊಂದಬಹುದು, ವಿಶ್ವಪ್ರಕೃತಿಯೊಂದಿಗೆ ಒಂದಾಗುವ ಸುಖ, ಆನಂದ ಮತ್ತು ಸೌಂದರ್ಯವನ್ನು ತಿಳಿಯಬಹುದು. ಜ್ಯಾಮಿತಿಯನುಸಾರವಾಗಿ, ಕಾಶಿಯು ಬ್ರಹ್ಮಾಂಡ ಮತ್ತು ಪಿಂಡಾಂಡಗಳು ಸೇರುವಿಕೆಯ ಒಂದು ಪರಿಪೂರ್ಣ ಅಭಿವ್ಯಕ್ತಿಯಾಗಿದೆ. ದೇಶದಲ್ಲಿ ಈ ರೀತಿಯ ಉಪಕರಣಗಳು ಹಲವಾರು ಇದ್ದವು, ಆದರೂ ಕಾಶಿಯಂತಹ ನಗರವನ್ನು ಸೃಷ್ಟಿಸುವುದು ಒಂದು ಹುಚ್ಚು ಮಹತ್ವಾಕಾಂಕ್ಷೆಯೇ ಸರಿ. ಮತ್ತು ಅವರು ಅದನ್ನು ಸಾವಿರಾರು ವರ್ಷಗಳ ಹಿಂದೆಯೇ ಮಾಡಿದ್ದಾರೆ. ಅಲ್ಲಿ 72,000 ದೇವಸ್ಥಾನಗಳು ಇದ್ದವು – ಅದು ಮನುಷ್ಯ ಶರೀರದಲ್ಲಿನ ನಾಡಿಗಳ ಸಂಖ್ಯೆಗೆ ಸಮ. ಈ ಇಡೀ ಪ್ರಕ್ರಿಯೆಯು ವಿಶ್ವದ ರಚನೆಯೊಂದಿಗೆ ಬೆಸೆಯಬಲ್ಲ ಒಂದು ಮಹತ್ತಾದ ಮನುಷ್ಯ ಶರೀರದ ರಚನೆಯಾಗಿತ್ತು. ಈ ಕಾರಣದಿಂದಲೇ “ನೀವು ಕಾಶಿಗೆ ಹೋದರೆ ಸಾಕು, ಮುಕ್ತಿ ಸಿಗುತ್ತೆ” ಎಂಬ ಸಂಪ್ರದಾಯ ಹುಟ್ಟಿಕೊಂಡಿತು. ನೀವು ಬೇರೆ ಕಡೆ ಹೋಗಲು ಇಚ್ಛಿಸುವುದಿಲ್ಲ, ಏಕೆಂದರೆ ನೀವು ವಿಶ್ವದ ರಚನೆಯೊಂದಿಗೆ ಬೆಸೆದುಕೊಂಡಾಗ, ಬೇರೆ ಕಡೆ ಹೋಗಲು ಯಾಕಾದರೂ ಬಯಸುತ್ತೀರಿ?

ಶಿವನು ಸ್ವತಃ ಕಾಶಿಯಲ್ಲಿ ವಾಸವಿದ್ದ ಎಂಬ ಮೂಲಭೂತ ಅಂಶವನ್ನು ಸಂಪೂರ್ಣವಾಗಿ ಆಧರಿಸಿ ಕಾಶಿಯ ದಂತಕಥೆ ಸಾಗುತ್ತದೆ. ಇದು ಅವನ ಚಳಿಗಾಲದ ವಾಸಸ್ಥಳವಾಗಿತ್ತು. ಅವನು ಹೇಗೆ ಜನರನ್ನು ಒಬ್ಬರ ನಂತರ ಮತ್ತೊಬ್ಬರನ್ನು ಕಾಶಿಗೆ ಕಳುಹಿಸಿದ, ಮತ್ತು ಹೇಗೆ ಆ ನಗರ ಅಷ್ಟು ಅದ್ಭುತವಾಗಿದ್ದರಿಂದ ಅಲ್ಲಿಗೆ ಹೋದವರು ಹಿಂತಿರುಗಲೇ ಇಲ್ಲ ಎಂಬುದನ್ನು ಹೇಳುವ ಅನೇಕ ಕಥೆಗಳಿವೆ. ಆದರೆ, ಅವನು ಜನರನ್ನು ಅಲ್ಲಿಗೆ ಕಳುಹಿಸಿದ್ದು ಆ ನಗರವನ್ನು ಕಟ್ಟುವ ಸಲುವಾಗಿ ಇರಬಹುದು, ಮತ್ತು ಅವರು ಬಹಳ ದೀರ್ಘಕಾಲ ತೆಗೆದುಕೊಂಡಿರಬೇಕು ಎನಿಸುತ್ತದೆ. ಅದರ ನಿರ್ಮಾಣವಾದ ಮೇಲೆ, ಅವನು ಬಂದು ನೋಡಿ ಇಷ್ಟಪಟ್ಟ ಮತ್ತು ಅಲ್ಲೇ ಉಳಿಯಲು ನಿರ್ಧರಿಸಿದ.

ಕಳೆದ ಕೆಲವು ಶತಮಾನಗಳಲ್ಲಿ, ಕಾಶಿಯನ್ನು ಮೂರು ಬಾರಿ ನೆಲಸಮ ಮಾಡಲಾಯಿತು. ಇವತ್ತು ಅದು ಎಷ್ಟರಮಟ್ಟಿಗೆ ಉಳಿದಿದೆ ಎನ್ನುವುದು ತಿಳಿದಿಲ್ಲ, ಆದರೆ ಎಲ್ಲವೂ ನಾಶವಾಗಿಲ್ಲ – ಏನೋ ಒಂದು ಇನ್ನೂ ಜೀವಂತವಾಗಿದೆ. ಅದು ಪೂರ್ಣ ವೈಭವದಿಂದ ಇದ್ದಾಗ ನಾವು ಇರಲಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ. ಪ್ರಪಂಚದ ಎಲ್ಲಾ ಕಡೆಗಳಿಂದ ಜನರನ್ನು ಸೆಳೆಯಬೇಕಾದರೆ ನಿಜವಾಗಿಯೂ ಅದೊಂದು ಅಸಾಧಾರಣ ಸ್ಥಳವಾಗಿರಬೇಕು.

ನಾವು ಭೂತಕಾಲದ ಹೊಡೆತಗಳಿಂದ ಪಾರಾಗಿ ಬದುಕಿದ್ದೇವೆ, ಆದರೆ ಭವಿಷ್ಯದಲ್ಲಿ ನಾವು ಉಳಿಯುತ್ತೇವಾ ಎನ್ನುವುದೇ ಈಗಿನ ಪ್ರಶ್ನೆ. ನಾನು “ನಾವು” ಎಂದು ಹೇಳಿದಾಗ ಒಂದು ನಿರ್ದಿಷ್ಟ ಮತಧರ್ಮದ ಬಗ್ಗೆ ಮಾತನಾಡುತ್ತಿಲ್ಲ. ನಾನು ಮಾತನಾಡುತ್ತಿರುವುದು ಜೀವನವನ್ನು ಅದು ಇರುವಂತೆಯೇ ನೋಡಲು ಇಚ್ಛಿಸುವ, ತಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರದ ಜನಾಂಗಗಳ ಬಗ್ಗೆ. ಈಗ ಜಗತ್ತಿಗೆ ಯಾವುದೇ ರೀತಿಯ ಸಿದ್ಧಾಂತಗಳು, ಮತಗಳು ಅಥವಾ ನಂಬಿಕೆಯ ಕಂತೆಗಳು ಬೇಕಾಗಿಲ್ಲ. ಜಗತ್ತಿಗೆ ಬೇಕಾಗಿರುವುದು ಈಗ “ಅತೀತ”ವೆಂದು ಪರಿಗಣಿಸಲ್ಪಟ್ಟಿರುವ ಸಂಗತಿಯನ್ನು ಗ್ರಹಿಸಬಹುದಾದ ಮಾನವ ಸಾಮರ್ಥ್ಯ. ಒಬ್ಬ ಮನುಷ್ಯ ತಿಳಿದುಕೊಳ್ಳುವ ಮಾರ್ಗ ಇದೊಂದೇ. ಮಾನವ ಪ್ರಜ್ಞೆ ವಿಕಾಸವಾಗುವ ಮಾರ್ಗ ಇದೊಂದೇ. ಓರ್ವ ವ್ಯಕ್ತಿಯು, ಮನುಷ್ಯ ಸಮಾಜಗಳಲ್ಲಿ ಸೃಷ್ಟಿಯಾಗಿರುವ ಸಂಕುಚಿತ ಭೇದಗಳನ್ನು ಮೀರಿ ವಿಕಾಸಗೊಳ್ಳುವ ಮಾರ್ಗ ಇದೊಂದೇ.

    Share

Related Tags

ಅತೀಂದ್ರಿಯಜ್ಞಾನಶಿವ ತತ್ವ

Get latest blogs on Shiva

Related Content

Obliterating Boundaries