logo
logo
adiyogi

Obliterating Boundaries

ಗಡಿಗಳನ್ನು ಅಳಿಸಿಹಾಕಿ


ಮೂಲಭೂತವಾಗಿ, ಯೋಗವೆಂದರೆ ಎಲ್ಲೆಗಳನ್ನು ತೊಡೆದುಹಾಕುವ ವಿಜ್ಞಾನ. ಸರಳವಾದ ಜೀವಿಗಳಿಂದ ಹಿಡಿದು ಮನುಷ್ಯರವರೆಗೆ, ಅವುಗಳ ಅತ್ಯಂತ ಮೂಲವಾದ ಅಸ್ತಿತ್ವದ ಸ್ಥಿತಿಯಲ್ಲಿ, ಅವುಗಳ ಸಂಪೂರ್ಣ ಜೀವನ, ಗಡಿಗಳನ್ನು ನಿರ್ಮಿಸಿ ಭದ್ರಪಡಿಸುವ ಬಗ್ಗೆಯಾಗಿರುತ್ತದೆ. ಒಂದು ನಾಯಿ ಎಲ್ಲೆಂದರಲ್ಲಿ ಮೂತ್ರ ಮಾಡುವುದು, ಅದಕ್ಕೆ ಮೂತ್ರಪಿಂಡದ ಸಮಸ್ಯೆಯಿದೆ ಎನ್ನುವ ಕಾರಣಕ್ಕಲ್ಲ, ಬದಲಿಗೆ ಅದು ತನ್ನ ಗಡಿಗಳನ್ನು ಗುರುತುಮಾಡುತ್ತಿರುವುದರಿಂದ. ಈ ರೀತಿಯಾಗಿ, ಮನುಷ್ಯರೂ ಸೇರಿದಂತೆ, ಪ್ರತಿ ಪ್ರಾಣಿಯೂ ಸಹ, ಎಲ್ಲಾ ಸಮಯದಲ್ಲಿ ತಮ್ಮದೇ ಆದ ಗಡಿಗಳನ್ನು ನಿರ್ಮಿಸಿಕೊಳ್ಳುವಲ್ಲಿ ಕಾರ್ಯನಿರತವಾಗಿವೆ.

ಆಶ್ರಮದಲ್ಲಿ, ನಾವು ಒಂದು ರೀತಿಯಲ್ಲಿ ಈ ಗಡಿಗಳನ್ನು ನಾಶಮಾಡಲು ಪ್ರಯತ್ನಿಸುತ್ತೇವೆ, ಆದರೆ ಅದರೊಳಗೂ ಸಹ ಜನರು ತಮ್ಮದೇ ಆದ ಗಡಿಗಳನ್ನು ಕಟ್ಟಿಕೊಳ್ಳುತ್ತಾರೆ. ಏಕೆಂದರೆ ಅವರಿಗೆ ತಮ್ಮ ಗುರುತುಗಳನ್ನು ಸ್ವಲ್ಪಮಟ್ಟಿಗಾದರೂ ಅಲ್ಲಿ ಇಲ್ಲಿ ಬಿಡಬೇಕಾಗಿರುತ್ತದೆ, ಇಲ್ಲದೇ ಹೋದರೆ ಅವರಿಗೆ ನಿರಾಶ್ರಿತ ಭಾವನೆ ಕಾಡುತ್ತದೆ. ದುರದೃಷ್ಟವಶಾತ್, ಹೆಚ್ಚಿನವರಿಗೆ ಈ ಜಗತ್ತಿನಲ್ಲಿ ಹಾಗೇ ಸುಮ್ಮನೆ ಬದುಕಲು ಸಾಧ್ಯವಿಲ್ಲ. ಅವರು ಸಣ್ಣದೊಂದು ಕೋಣೆಯಲ್ಲಿ ಬದುಕಲು ಬಯಸುತ್ತಾರೆ. ಅವರು ಜೈಲಿನಲ್ಲಿ ಬದುಕುವುದನ್ನೇ ಇಷ್ಟಪಡುತ್ತಾರೆ. ವಾಸಿಸಲು ಹಾಗೂ ಅನುಭವ ಪಡೆಯಲು ದೊರೆತಿರುವ ಈ ವಿಶಾಲವಾದ ಬ್ರಹ್ಮಾಂಡದಲ್ಲಿ ಜೀವಿಸುವುದು ಅವರಿಗೆ ಇಷ್ಟವಿಲ್ಲ.

ನೀವು ಗಡಿಗಳನ್ನು ನಿರ್ಮಿಸಿಕೊಂಡರೆ, ಒಂದು - ನೀವು ಅದನ್ನು ಗೊತ್ತುಮಾಡಬೇಕು, ಮತ್ತು ಇನ್ನೊಂದು - ನೀವದನ್ನು ರಕ್ಷಿಸಿಕೊಳ್ಳಬೇಕು. ಗಡಿಯೇನಾದರೂ ದೊಡ್ಡದಾದರೆ, ನೀವೊಂದು ಸೈನ್ಯವನ್ನೇ ನಿರ್ಮಿಸಬೇಕು.

ಯೋಗವೆಂದರೆ, ಒಬ್ಬ ಮನುಷ್ಯನನ್ನು ಪ್ರತಿಯೊಂದು ಸಂಭವನೀಯ ರೀತಿಯಲ್ಲಿ, ಅವನು ಸುಮ್ಮನೆ 'ಇರು'ವಂತಾಗಲು, ಅವನ ಗಡಿಗಳನ್ನು ನಿಧಾನವಾಗಿ ಅಳಿಸಿಹಾಕುವ ಸಲುವಾಗಿ ಅವನನ್ನು ಸಿದ್ಧಪಡಿಸುವುದಾಗಿದೆ. ನೀವು ಇದನ್ನು ಅರ್ಥಮಾಡಿಕೊಳ್ಳಬೇಕು: ನೀವು ಗಡಿಗಳನ್ನು ನಿರ್ಮಿಸಿಕೊಂಡರೆ, ಒಂದು - ನೀವು ಅದನ್ನು ಗೊತ್ತುಮಾಡಬೇಕು, ಮತ್ತು ಇನ್ನೊಂದು - ನೀವದನ್ನು ರಕ್ಷಿಸಿಕೊಳ್ಳಬೇಕು. ಗಡಿಯೇನಾದರೂ ದೊಡ್ಡದಾದರೆ, ನೀವೊಂದು ಸೈನ್ಯವನ್ನೇ ನಿರ್ಮಿಸಬೇಕು. ಇಂದು ಪ್ರತಿ ರಾಷ್ಟ್ರವೂ ಒಂದು ಸೈನ್ಯವನ್ನು ಹೊಂದಿದೆ - ವಿನೋದಕ್ಕಾಗಲ್ಲ, ಆದರೆ ಒಮ್ಮೆ ನೀವು ಗಡಿರೇಖೆಗಳನ್ನು ಎಳೆದರೆ, ನೀವದನ್ನು ರಕ್ಷಿಸಬೇಕು, ಇಲ್ಲದಿದ್ದರೆ ಯಾರಾದರೂ ಅದನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಾರೆ ಎಂಬ ಕಾರಣಕ್ಕೆ. ಆ ಗಡಿ ನಿಮಗೆ ಮುಖ್ಯವಾಗುತ್ತದೆ, ಹಾಗಾಗಿ ನೀವದನ್ನು ರಕ್ಷಿಸಬೇಕಾಗುತ್ತದೆ, ಅದಕ್ಕಾಗಿ ನೀವು ಹೋರಾಡಬೇಕಾಗುತ್ತದೆ ಮತ್ತು ಅದಕ್ಕಾಗಿ ನೀವು ಸಾಯಲೂಬೇಕಾಗುತ್ತದೆ. ಈ ಸಂಗತಿಗಳನ್ನೆಲ್ಲಾ ನೀವು ನಿರ್ವಹಿಸಬೇಕಾಗಿ ಬರುತ್ತದೆ. ಹಾಗಾಗಿ, ಯೋಗವೆಂದರೆ ಅದೆಲ್ಲದರಿಂದ ಮುಕ್ತವಾಗುವುದು ಎಂದರ್ಥ, ಮತ್ತು ಅಲ್ಲಿ ನೀವು ಗಡಿಗಳನ್ನು ನಿರ್ನಾಮ ಮಾಡುತ್ತೀರಿ. ಆಗ ನೀವು ಒಂದು ಕಡೆ ಕುಳಿತುಕೊಂಡರೆ, ಈ ವಿಶ್ವದಲ್ಲಿ ಸುಮ್ಮನೆ ಒಂದು ಕಡೆ ಕುಳಿತಂತಿರುತ್ತೀರಿ; ನಿಮಗೆ ನಿಮ್ಮ ಸ್ವಂತ ಗಡಿಗಳ ಅಗತ್ಯವಿರುವುದಿಲ್ಲ. ನಿಮಗೆ ನಿಮ್ಮ ಸ್ವಂತ ಜಾಗವೆಂದು ಕರೆಸಿಕೊಳ್ಳುವ ಜಾಗದ ಅವಶ್ಯಕತೆ ಇರುವುದಿಲ್ಲ. ಹೇಗಿದ್ದರೂ "ನಿಮ್ಮ ಸ್ವಂತ ಜಾಗ"ವೆನ್ನುವುದೆಲ್ಲ ಇಲ್ಲ. ಅದು ನಿಮ್ಮದೇ ಎಂದು ನೀವು ಭಾವಿಸಬಹುದಷ್ಟೆ, ಆದರೆ ಅದು ಕೇವಲ ನಿಮ್ಮ ಭ್ರಮೆ.


ಭೌತಿಕತೆಯು ಗಡಿಯನ್ನು ಹೊಂದಿದೆ, ಮತ್ತದು ಭೌತಿಕತೆಯ ಮೂಲ ಲಕ್ಷಣ ಕೂಡ ಹೌದು, ಹಾಗಾಗಿ ಇಲ್ಲಿ ಸಮಸ್ಯೆ ಅದಲ್ಲ. ಹೇಗೋ ಏನೋ, ಆ ಗಡಿಗಳು ನಿಮ್ಮ ಮನಸ್ಸಿನೊಳಕ್ಕೆ ಇಳಿದುಬಿಟ್ಟಿವೆ. ಈಗ ನಿಮ್ಮ ಮನಸ್ಸು ಒಂದು ಗಡಿಯನ್ನು ಬಯಸುತ್ತದೆ, ನಿಮ್ಮ ಭಾವನೆಗಳು ಒಂದು ಗಡಿಯನ್ನು ಬಯಸುತ್ತವೆ. ಅನೇಕ ಪರಿಮಿತಿಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ನೀವು ಶ್ರಮಿಸಿರುವ ಕಾರಣ, ನಿಮ್ಮೊಳಗಿರುವ ಅಪರಿಮಿತವು ನಿಮ್ಮ ಕೈಗೆಟುಕುವ ಸ್ಥಿತಿಯಲ್ಲಿಲ್ಲ, ಮತ್ತದು ನಿಮ್ಮ ಅನುಭವದಿಂದಾಚೆಗೆ ಸರಿದಿದೆ ಅಷ್ಟೆ. ನೀವು ನಿಮ್ಮದೇ ಆದಂತಹ ಗಡಿಗಳನ್ನು ನಿರ್ಮಿಸಿಕೊಳ್ಳುವುದು ಹೇಗೆ ಎಂಬುವುದರಲ್ಲಿ ನಿಮ್ಮೆಲ್ಲಾ ಸಮಯ, ಶಕ್ತಿ ಹಾಗೂ ಬುದ್ಧಿವಂತಿಕೆಯನ್ನು ಹೂಡಿಕೆ ಮಾಡುತ್ತಿರುವ ಕಾರಣ, ಅಪರಿಮಿತವಾದದ್ದು ನಿಮ್ಮ ಅನುಭವಕ್ಕೆ ಬಾರದೆ ಜಾರಿಹೋಗುತ್ತದೆ.


ನಾವು ಆದಿಯೋಗಿ-ಶಿವನ ಬಗ್ಗೆ ಮಾತನಾಡುವಾಗ, ನಾವು ಅವನನ್ನು ಯೋಗಿ ಎಂದು ಕರೆಯುತ್ತೇವೆ. ಯಾರೇ ಆಗಲಿ ತಮ್ಮೊಳಗಿನ ಗಡಿಗಳನ್ನು ಉಲ್ಲಂಘಿಸಿದರೆ ಅಥವಾ ಅಳಿಸಿಹಾಕಿದರೆ, ನಾವವರನ್ನು ಯೋಗಿ ಎಂದು ಕರೆಯುತ್ತೇವೆ.

ಇದೆಲ್ಲಾ ನಿಮ್ಮಿಂದಲೇ ಆಗಿರುವುದು, ನೀವು ವಿಶ್ವದಿಂದ ಬೇರ್ಪಟ್ಟಿರುವುದು ನಿಮ್ಮದೇ ಸ್ವಂತ ಕರ್ಮದಿಂದಾಗಿ. ಆದ್ದರಿಂದ ಇಷ್ಟು ಜೀವಂತವಾದ ಹಾಗೂ ಒಳಗೂಡಿಸಿಕೊಳ್ಳುವಿಕೆಯಿಂದ ಕೂಡಿದ ಈ ಅಸ್ತಿತ್ವದಲ್ಲಿ ನೀವು ಏಕಾಂಗಿಯಂತೆ ಭಾವಿಸುತ್ತೀರಿ. ನಾವು ಆದಿಯೋಗಿ-ಶಿವನ ಬಗ್ಗೆ ಮಾತನಾಡುವಾಗ, ನಾವು ಅವನನ್ನು ಯೋಗಿ ಎಂದು ಕರೆಯುತ್ತೇವೆ. ಯಾರೇ ಆಗಲಿ ತಮ್ಮೊಳಗಿನ ಗಡಿಗಳನ್ನು ಉಲ್ಲಂಘಿಸಿದರೆ ಅಥವಾ ಅಳಿಸಿಹಾಕಿದರೆ, ನಾವವರನ್ನು ಯೋಗಿ ಎಂದು ಕರೆಯುತ್ತೇವೆ. ಮತ್ತು ನಮಗೆ ತಿಳಿದಿರುವಂತೆ, ಹಾಗೆ ಮಾಡಿದ ಮೊದಲನೇ ವ್ಯಕ್ತಿ ಅವನಾಗಿದ್ದರಿಂದ, ನಾವು ಅವನನ್ನು ಆದಿಯೋಗಿಯೆಂದು ಕರೆಯುತ್ತೇವೆ. ನಾವು ಅವನನ್ನು ಪ್ರತಿಷ್ಠಾಪಿಸಿದಾಗ, ಅದು ಅವನ ಶಕ್ತಿಯಾಗಿರುತ್ತದೆ. ಜನರು ಬಂದು ಅಲ್ಲಿ ಕುಳಿತುಕೊಂಡರೆ, ಅವರ ಜೀವವು ನಿಧಾನವಾಗಿ ಗಡಿಗಳನ್ನು ನಾಶಮಾಡಿ, ಅಪರಿಮಿತದ ಕಡೆಗೆ ಚಲಿಸಲು ಶುರುಮಾಡುತ್ತದೆ. ಅದೊಂದೇ ಏಕಮಾತ್ರ ಗುರಿ; ನಾವೇನೇ ಮಾಡಿದರೂ ಸಹ ಬೇರಿನ್ಯಾವುದೇ ಗುರಿ ಇಲ್ಲ.

ಈಗ ನಾವು ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಲ್ಲಿ ಆದಿಯೋಗಿ-ಶಿವನ ದೇವಾಲಯಗಳನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿರುವ ಕಾರಣ, ಇದರ ನಿಜವಾದ ಸಾಂದರ್ಭಿಕ ಮಹತ್ವವನ್ನು ಜನರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರಕೃತಿ ನಿರ್ಧರಿಸಿದ ಗಡಿಗಳನ್ನು ನಾವು ಮೀರಿ ಹೋಗಬಹುದು ಎಂಬುದನ್ನು ಅವನು ಮೊದಲ ಬಾರಿಗೆ ನಮಗೆ ನೆನಪಿಸಿಕೊಟ್ಟ ಮತ್ತು ಅದಕ್ಕಾಗಿ ಪರಿಣಾಮಕಾರಿಯಾದ ವಿಧಾನಗಳನ್ನೂ ಸಹ ನೀಡಿದ. ಜೀವವು ವಿಕಾಸವಾಗಬಹುದು ಎಂಬ ವಿಚಾರ ಅವನದು; ಆ ವಿಕಸನವು ಭೌತಿಕ ರೂಪಕ್ಕೆ ಮಾತ್ರ ಸೀಮಿತವಾಗಿರುವ ಅವಶ್ಯಕತೆ ಇಲ್ಲ, ಮನುಷ್ಯ ಪ್ರಜ್ಞಾಪೂರ್ವಕವಾಗಿ ವಿಕಾಸಗೊಳ್ಳಬಹುದು ಎನ್ನುವ ಸಂಗತಿ ಅವನು ನಮ್ಮ ಬಂಧವಿಮುಕ್ತಿಗಾಗಿ ತೆರೆದಿಟ್ಟ ಅತ್ಯಂತ ಮಹತ್ವದ ಸಾಧ್ಯತೆಯಾಗಿದೆ. ಯೋಗದ ಸಂಪೂರ್ಣ ವಿಜ್ಞಾನ ಅವನದು. ಇಂತಹ ಅಗಾಧ ಕೊಡುಗೆಗಾಗಿ ಆ ಮಹಾನ್ ಚೇತನವು ಗುರುತಿಸಲ್ಪಡಬೇಕು ಎಂಬುದು ನನ್ನ ಪ್ರಯತ್ನವಾಗಿದೆ. ಈ ಕಾರ್ಯದಲ್ಲಿ ನೀವು ನನ್ನ ಜೊತೆಯಾಗಿ ನಿಲ್ಲಿ, ಏಕೆಂದರೆ ಇವುಗಳು ಮಾನವ ಪ್ರಜ್ಞೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಶಕ್ತಿಶಾಲಿ ಸಾಧನಗಳಾಗುತ್ತವೆ.

    Share

Related Tags

ಅತೀಂದ್ರಿಯಜ್ಞಾನ

Get latest blogs on Shiva

Related Content

Maha Mrityunjaya Mantra in Kannada - ಮಹಾಮೃತ್ಯುಂಜಯ ಮಂತ್ರ - ಸಾಹಿತ್ಯ ಮತ್ತು ಉಚಿತ MP3 ಡೌನ್‍ಲೋಡ್