logo
logo

ಶಿವ, ಗಣೇಶ ಮತ್ತು ಪಾರ್ವತಿ - ಗಣೇಶನ ಜನ್ಮ ವೃತ್ತಾಂತ

ಶಿವನು ಗಣೇಶನ ತಲೆಯನ್ನು ಹೇಗೆ ಕತ್ತರಿಸಿದನು ಎಂಬ ಕಥೆಯನ್ನು ಸದ್ಗುರುಗಳು ಹೇಳುತ್ತಾ ಸಾಮಾನ್ಯವಾಗಿ ನಂಬಲಾಗುವಂತೆ ತಲೆಯನ್ನು ಆನೆಯ ತಲೆಯೊಂದಿಗೆ ಬದಲಾಯಿಸಲಾಗಿಲ್ಲ. ವಾಸ್ತವದಲ್ಲಿ, ಶಿವನ ಪರಲೋಕದ ಸಹಚರರಾದ ಗಣಗಳ ನಾಯಕನ ತಲೆಯೊಂದಿಗೆ ಬದಲಾಯಿಸಲಾಯಿತು ಎಂದು ವಿವರಿಸುತ್ತಾರೆ.

ಗಣೇಶನು ಹೇಗೆ ಜನಿಸಿದನು

ಸದ್ಗುರು: ಶಿವನು ಒಂದು ರೀತಿಯ ಅಲೆಮಾರಿ ಗಂಡನಾಗಿದ್ದನು. ಅವನು ನಿರಂತರವಾಗಿ ವರ್ಷಗಟ್ಟಲೇ ಅಲೆದಾಡುತ್ತಿದ್ದನು. ಆ ದಿನಗಳಲ್ಲಿ ಮೊಬೈಲ್ ಫೋನ್‌, ಈ-ಮೇಲ್‌ಗಳು ಇರಲಿಲ್ಲ, ಆದ್ದರಿಂದ ಪಾರ್ವತಿ ಅವನನ್ನು ಸಂಪರ್ಕಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಅವಳು ತುಂಬಾ ಏಕಾಂಗಿಯಾಗಿ ಬಿಟ್ಟಳು. ಎಲ್ಲಕ್ಕಿಂತ ಹೆಚ್ಚಾಗಿ, ಅವನು ಶಿವ ಸ್ವರೂಪಿಯಾದ ಕಾರಣ - ಅವನು ಯಕ್ಷ ಸ್ವರೂಪ, ಮಾನವ ಮೂಲದವನಲ್ಲ ಎಂದು ಪರಿಗಣಿಸಲಾಗಿತ್ತು - ಆದ ಕಾರಣ ಪಾರ್ವತಿಗೆ ಅವನಿಂದ ಮಗುವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಏಕಾಂಗಿತನ ಮತ್ತು ತಾಯಿತನದ ಬಯಕೆಯಿಂದ ಅವಳು ಒಂದು ಮಗುವನ್ನು ಸೃಷ್ಟಿಸಿ ಅದಕ್ಕೆ ಜೀವ ತುಂಬಲು ನಿರ್ಧರಿಸಿದಳು. ಅವಳು ತನ್ನ ದೇಹದ ಮೇಲಿದ್ದ ಗಂಧದ ಲೇಪವನ್ನು ತೆಗೆದು ಅದನ್ನು   ಮಣ್ಣಿನೊಂದಿಗೆ ಬೆರೆಸಿ, ಅದಕ್ಕೆ ಮಗುವಿನ ಆಕಾರ ನೀಡಿ, ಜೀವ ತುಂಬಿದಳು. ಇದೆಲ್ಲ ದೂರದ ಕಲ್ಪನೆಯಂತೆ ಕಾಣಬಹುದು, ಆದರೆ ಇಂದು ವಿಜ್ಞಾನವು ಈ ರೀತಿಯ ವಿಷಯಗಳ ಬಗ್ಗೆ ಮಾತನಾಡುತ್ತಿದೆ. ಯಾರಾದರೂ ನಿಮ್ಮಿಂದ ಚರ್ಮದ ಮೇಲಿನ ಜೀವಕೋಶವನ್ನು ತೆಗೆದುಕೊಂಡರೆ,  ನಾವು ಅದರಿಂದ ನಿಮ್ಮದೇ ಆದ ಒಂದು ರೂಪವನ್ನು ಸೃಷ್ಟಿಸಬಹುದು. ಅಂತೆಯೇ ಪಾರ್ವತಿಯು ಅದಕ್ಕೆ ಜೀವ ತುಂಬಿ ಒಂದು ಶಿಶುವಿನ ಜನ್ಮವಾಯಿತು.

ಶಿವನು ಗಣೇಶನ ತಲೆಯನ್ನು ಏಕೆ ಕಡಿದನು?

ಕೆಲ ವರ್ಷಗಳ ನಂತರ, ಅಂದರೆ ಹುಡುಗನು ಸುಮಾರು ಹತ್ತು ವರ್ಷದವನಿಗಿದ್ದಾಗ. ಶಿವನು ತನ್ನ ಗಣಗಳೊಂದಿಗೆ ಮನೆಗೆ ಬರುತ್ತಾನೆ. ಆಗ ಪಾರ್ವತಿಯು ಸ್ನಾನ ಮಾಡುತ್ತಿದ್ದಳು ಮತ್ತು ಅವಳು ತನ್ನ ಚಿಕ್ಕ ಮಗನನ್ನು ಕರೆದು "ಯಾರೂ ಈ ಕಡೆ ಬರದಂತೆ ನೋಡಿಕೋ" ಎಂದು ಹೇಳಿ ನಿಲ್ಲಿಸಿದ್ದಳು. ಆ ಬಾಲಕ ಯಾವತ್ತೂ ಶಿವನನ್ನು ನೋಡಿರಲಿಲ್ಲ, ಆದ್ದರಿಂದ ಅವನು ಬಂದಾಗ, ಬಾಲಕ ಅವನನ್ನು ಮನೆಯೊಳಗೆ ಪ್ರವೇಶಿಸದಂತೆ ನಿರ್ಬಂಧಿಸುತ್ತಾನೆ. ಶಿವನಿದ್ದ ಮನಸ್ಥಿತಿಯಲ್ಲಿ ಯಾರಿಂದಲೂ ಅವನ್ನನ್ನು ತಡೆಯಲು ಸಾಧ್ಯವಿರಲಿಲ್ಲ - ಆದ್ದರಿಂದ ಅವನು ತನ್ನ ಖಡ್ಗವನ್ನು ತೆಗೆದು, ಹುಡುಗನ ತಲೆಯನ್ನು ಕಡಿದು ಪಾರ್ವತಿಯ ಬಳಿಗೆ ಬಂದನು.

ಪಾರ್ವತಿಯು ಅವನ ಕೈಯಲ್ಲಿದ್ದ ರಕ್ತಸಿಕ್ತ ಖಡ್ಗವನ್ನು ಕಂಡಾಗ,ನಡೆದ್ದದ್ದೇನೆಂದು ಅವಳಿಗೆ ಅರ್ಥವಾಯಿತು. ಹುಡುಗ ತಲೆಯಿಲ್ಲದೆ ಬಿದ್ದಿರುವುದನ್ನು ನೋಡಿ ಅವಳು ಕೋಪಗೊಂಡಳು. ಶಿವನು ಅವಳನ್ನು ಒಪ್ಪಿಸಲು ಪ್ರಯತ್ನಿಸಿದನು, "ಪರವಾಗಿಲ್ಲ. ಅವನು ನಿಜವಾಗಿಯೂ ನಿನ್ನ ಮಗನಲ್ಲ. ನೀನು ಅವನನ್ನು ಸೃಷ್ಟಿಸಿದೆ ಮತ್ತು ನಾನು ಅವನನ್ನು ಕೊನೆಗಾಣಿಸಿದೆ. ಹಾಗಾದರೆ ಸಮಸ್ಯೆ ಏನು?" ಆದರೆ ಅವಳು ಕೇಳುವ ಮನಸ್ಥಿತಿಯಲ್ಲಿರಲಿಲ್ಲ.

ಗಣೇಶನಿಗೆ ಆನೆಯ ತಲೆ ಏಕೆ ಇಲ್ಲ

ಈ ವಿಷಯವನ್ನು ಬಗೆಹರಿಸಲು, ಶಿವನು ಗಣಗಳಲ್ಲಿ ಒಬ್ಬನ ತಲೆಯನ್ನು ತೆಗೆದು ಹುಡುಗನ ದೇಹದೊಂದಿಗೆ ಕಸಿಮಾಡಿದನು. ಗಣೇಶ ಚತುರ್ಥಿ ಎಂಬುದು ಈ ತಲೆ ಕಸಿ ಮಾಡಿದ ದಿನವಾಗಿದೆ . ಅವನು ಗಣಗಳ ನಾಯಕನ ತಲೆಯನ್ನು ತೆಗೆದು ಈ ಹುಡುಗನ ಮೇಲೆ ಜೋಡಿಸಿರುವುದರಿಂದ, ಅವನಿಗೆ "ಇಂದಿನಿಂದ, ನೀನು ಗಣಪತಿ. ಗಣಗಳ ನಾಯಕ.” ಎಂದು ಕರೆದನು.

ಕಾಲಕ್ರಮೇಣ, ಚಿತ್ರ ಕಲಾವಿದರಿಗೆ ಈ ಹೊಸ ಜೀವಿ ಏನೆಂದು ಅರ್ಥವಾಗದೆ, ಅವರು ಆನೆಯ ಮುಖವನ್ನು ಬಿಡಿಸಿದರು. ಪುರಾಣಗಳು ಗಣಗಳಿಗೆ ಎಲುಬುಗಳಿಲ್ಲದ ಅಂಗಗಳಿದ್ದವು ಎಂದು ಹೇಳುತ್ತವೆ. ಈ ಸಂಸ್ಕೃತಿಯಲ್ಲಿ, ಎಲುಬುಗಳಿಲ್ಲದ ಅಂಗ ಎಂದರೆ ಆನೆಯ ಸೊಂಡಿಲು, ಆದ್ದರಿಂದ ಕಲಾವಿದರು ಅದನ್ನು ಆನೆಯ ತಲೆಯನ್ನಾಗಿ ಚಿತ್ರಿಸಿದರು. ನೀವು ಮಾನಸರೋವರದ ದಡದಲ್ಲಿ ಆನೆಯನ್ನು ಕಾಣಲು ಸಾಧ್ಯವಿಲ್ಲ ಏಕೆಂದರೆ ಆ ಭೂಪ್ರದೇಶವು ಆನೆಗೆ ಹೊಂದುವಂತದ್ದು ಆಗಿರಲಿಲ್ಲ . ಆನೆಗೆ ಸಾಕಾಗುವಷ್ಟು ಸಸ್ಯವರ್ಗವು ಅಲ್ಲಿರಲಿಲ್ಲ . ಹಾಗಾಗಿ, ಶಿವನು ಆನೆಯ ಶಿರವನ್ನು ಕಡಿದು ತರಲು ಸಾಧ್ಯವಿರಲಿಲ್ಲ. ಗಣನೊಬ್ಬನ ಶಿರ ಹೊಂದಿರುವುದರಿಂದ, ಅವನಿಗೆ ಅನೇಕ ಹೆಸರುಗಳಿವೆ - ಗಣೇಶ, ಗಣಪತಿ, ವಿನಾಯಕ - ಆದರೆ ಗಜಪತಿ ಎಂಬ ಹೆಸರಿಲ್ಲ..

ಗಣಗಳು ಶಿವನ ಸಹಚರರಾಗಿದ್ದರು. ಅವರು ಎಲ್ಲಿಂದ ಬಂದರು ಮತ್ತು ಹೇಗೆ ಬಂದಿರುವರೆಂದು ನಮಗೆ ತಿಳಿದಿಲ್ಲ, ಆದರೆ ಸಾಮಾನ್ಯವಾಗಿ ಪುರಾಣಗಳು ಅವರನ್ನು ಈ ಗ್ರಹದ ಜೀವಿಗಳಲ್ಲ ಎಂದು ವರ್ಣಿಸುತ್ತವೆ. ಅವರ ಜೀವಪ್ರಕ್ರಿಯೆ ನಮಗೆ ಇಲ್ಲಿ ತಿಳಿದಿರುವ ಜೀವಪ್ರಕ್ರಿಯೆಗಿಂತ ತುಂಬಾ ಭಿನ್ನವಾಗಿದೆ.

ಇಂದು, ಆಧುನಿಕ ಜೀವಶಾಸ್ತ್ರವು ಏಕಕೋಶ ಜೀವಿಯಿಂದ, ಹೆಚ್ಚು ಸಂಕೀರ್ಣ ಜೀವ ವೈವಿಧ್ಯಗಳವರೆಗೆ, ಮತ್ತು ಮಾನವನವರೆಗಿನ ಅದ್ಭುತ ವಿಕಾಸದ ಬಗ್ಗೆ ತುಂಬಾ ಸ್ಪಷ್ಟವಾಗಿ ಅರಿತಿದೆ. ಆದರೆ ಜೀವನದ ಮೂಲ ಸ್ವಭಾವ ಒಂದೇ - ಅದು ಬದಲಾಗಿಲ್ಲ. ಅದು ಹೆಚ್ಚು ಸಂಕೀರ್ಣವಾಗುತ್ತಲೇ ಹೋಗುತ್ತಿದೆ. ಆದರೆ, ಗಣಗಳ ಜೀವಪ್ರಕ್ರಿಯೆ ಹೀಗಿರಲಿಲ್ಲ. ಅವರನ್ನು ಭೂಮಿಯ ಮೇಲೆ ಸೃಷ್ಟಿಸಲಾಗಿರಲಿಲ್ಲ. ಮತ್ತು ಅವರಿಗೆ ಎಲುಬುಗಳಿಲ್ಲದ ಅಂಗಗಳಿದ್ದವು.

ನೀವು ನಿಮ್ಮ ದೇಹವನ್ನು ವಿವಿಧ ರೀತಿಯಲ್ಲಿ ಪಳಗಿಸಲು ಪ್ರಯತ್ನಿಸಿದರೆ, ವಿವಿಧ ಆಸನಗಳನ್ನು ಮಾಡಲೆತ್ನಿನಿಸಿದರೆ, ನಿಮಗೆ ಎಲುಬುಗಳು ಇಲ್ಲದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನೀವು ಬಯಸುತ್ತೀರಿ. ನಾನು ಯೋಗಾಭ್ಯಾಸವನ್ನು ನನ್ನ 11ನೇ ವಯಸ್ಸಿನಲ್ಲಿ ಪ್ರಾರಂಭಿಸಿದ್ದರಿಂದ, ನಾನು 25 ವರ್ಷದವನಾಗಿದ್ದಾಗಲೇ ಹಠಯೋಗವನ್ನು ಕಲಿಸಲಾರಂಭಿಸಿದೆ. ಆಗ ಜನರು, "ಓಹ್. ನಿಮಗೆ ಎಲುಬುಗಳೇ ಇಲ್ಲ. ನೀವು ಎಲುಬುಗಳಿಲ್ಲದವರು” ಎಂದರು. ಎಲುಬುಗಳಿಲ್ಲದ ಅಂಗಗಳನ್ನು ಹೊಂದಬೇಕೆಂದು ಪ್ರತಿಯೊಬ್ಬ ಯೋಗಿಯ ಕನಸಾಗಿರುತ್ತದೆ. ಅದರಿಂದ ಅವನು ತಾನು ಬಯಸಿದ ಯಾವುದೇ ಆಸನವನ್ನು ಮಾಡಬಹುದು!

ಸುಸಂಸ್ಕೃತ ವಿದ್ವಾಂಸ

ಸಾವಿರಾರು ವರ್ಷಗಳಿಂದ, ಗಣೇಶ ಚತುರ್ಥಿ ಜೀವಂತವಾಗಿದೆ, ಮತ್ತು ಗಣಪತಿ ಅತ್ಯಂತ ಜನಪ್ರಿಯ ಮತ್ತು ಭಾರತದಿಂದ ಅತ್ಯಧಿಕ ರಫ್ತು ಮಾಡಲ್ಪಟ್ಟ ದೇವರುಗಳಲ್ಲಿ ಒಬ್ಬನಾಗಿದ್ದಾನೆ. ಅವನು ತುಂಬಾ ಸುಲಭವಾಗಿ ಹೊಂದಿಕೊಳ್ಳುವವನು. ಅವನು ಅನೇಕ ರೂಪಗಳನ್ನು ಮತ್ತು ಭಂಗಿಗಳನ್ನು ತಾಳುತ್ತಾನೆ. ಅವನು ವಿದ್ಯೆಯ ದೇವರೂ ಹೌದು ಮತ್ತು ಅದ್ಭುತ ವಿದ್ವಾಂಸನಾಗಿದ್ದನೆಂದು ಹೇಳಲಾಗಿದೆ. ಗಣಪತಿಯ ಪಾಂಡಿತ್ಯವನ್ನು ತೋರಿಸಲು ಯಾವಾಗಲೂ ಅವನನ್ನು ಪುಸ್ತಕ ಮತ್ತು ಲೇಖನಿಯೊಂದಿಗೆ ಚಿತ್ರಿಸಲಾಗುತ್ತದೆ. ಅವನ ವಿದ್ವತ್ತು ಮತ್ತು ಬುದ್ಧಿಶಕ್ತಿ ಸಾಮಾನ್ಯ ಮಾನವ ಸಾಮರ್ಥ್ಯಗಳನ್ನು ಮೀರಿಸುವಂತಿತ್ತು.

ಮತ್ತು ಅವನಿಗೆ ಆಹಾರ ಇಷ್ಟವಾಗಿತ್ತು. ಸಾಮಾನ್ಯವಾಗಿ, ಯಾರಾದರೂ ವಿದ್ವಾಂಸರಂತೆ ಕಾಣಬೇಕಾದರೆ, ಅವರು ತೆಳ್ಳಗಿರಬೇಕೆಂದು ಅಂದುಕೊಳ್ಳುತ್ತೇವೆ. ಆದರೆ ಇವನು ಒಬ್ಬ ಒಳ್ಳೆಯ, ಚೆನ್ನಾಗಿ ತಿಂದುಂಡಿರುವ ವಿದ್ವಾಂಸ. ಈ ದಿನದಂದು, ಜನರು ನೀವು ಚೆನ್ನಾಗಿ ತಿನ್ನಬೇಕೆಂದು ನಂಬುತ್ತಾರೆ. ಜನರು ಕೇವಲ ದೊಡ್ಡ ಹೊಟ್ಟೆಯನ್ನು ನೋಡಿದರೇ ಹೊರತು ಅವನ ತಲೆಯಲ್ಲಿನ ದೊಡ್ಡ ಮೆದುಳನ್ನು ಗುರುತಿಸಲಿಲ್ಲ. ಅದು ಅತ್ಯಂತ ಮುಖ್ಯವಾದ ವಿಷಯ. ಅವನ ಹೊಟ್ಟೆ ನಂತರ ಬೆಳೆಯಿತು. ಬಹುಶಃ ಅಂತಹ ದೊಡ್ಡ ತಲೆಯೊಂದಿಗೆ, ಅವನಿಗೆ ನಡೆಯಲು ಇಷ್ಟವಾಗಲಿಲ್ಲ! ಆದರೆ ಮುಖ್ಯವಾದ ಸಂಗತಿಯೆಂದರೆ ಅವನ ಬುದ್ಧಿಶಕ್ತಿ ಹೆಚ್ಚಾಯಿತು. ಆದ್ದರಿಂದ ಇದು ಕೇವಲ ತಿನ್ನುವ ದಿನವಲ್ಲ. ಇದು ನಿಮ್ಮ ಹೊಟ್ಟೆಯನ್ನಲ್ಲ, ವಿವೇಕವನ್ನು ಹೆಚ್ಚಿಸಬೇಕಾದ ದಿನ.

ಒಂದು ರೀತಿಯಲ್ಲಿ,ಎಲ್ಲಾ ಯೋಗಾಭ್ಯಾಸಗಳು, ನಿಮ್ಮ ಬುದ್ಧಿಶಕ್ತಿ  ಈಗ ಇರುವ ಸ್ಥಿತಿಯಲ್ಲಿಯೇ ಇರದಂತೆ ನೋಡಿಕೊಳ್ಳುವುದು ಆಗಿದೆ. ಸರಳ ಆಧ್ಯಾತ್ಮಿಕ ಅಭ್ಯಾಸಗಳನ್ನು ಪ್ರಾರಂಭಿಸಿ, ತಮ್ಮ ಬುದ್ಧಿಶಕ್ತಿಯನ್ನು ಅನೇಕ ವಿಭಿನ್ನ ರೀತಿಗಳಲ್ಲಿ ಹೆಚ್ಚಿಸಿಕೊಂಡ ಸಾವಿರಾರು ಉದಾಹರಣೆಗಳಿವೆ.ಚಿಂತಿಸಬೇಡಿ, ನಿಮಗೆ ಸೊಂಡಿಲು ಬೆಳೆಯುವುದಿಲ್ಲ, ಆದರೆ ನೀವು ಬುದ್ಧಿಶಕ್ತಿಯ ಹೆಚ್ಚಳಕ್ಕೆ ಪ್ರಯತ್ನಿಸಬಹುದು.

ಗಣೇಶ ಚತುರ್ಥಿಯ ಮಹತ್ವ

ಮಾನವತೆ ಯಾವಾಗಲೂ ಒಳ್ಳೆಯ ಜನರನ್ನು ಉಂಟುಮಾಡುವ ಕಡೆಗೆಲ್ ಕೆಲಸ ಮಾಡುವ ಗಂಭೀರ ತಪ್ಪನ್ನು ಮಾಡಿದೆ. ನಮಗೆ ಒಳ್ಳೆಯ ಜನರ ಅಗತ್ಯವಿಲ್ಲ; ನಮಗೆ ಸಂವೇದನಾಶೀಲ ಜನರ ಅಗತ್ಯವಿದೆ. ನಿಮಗೆ ಸಂವೇದನಾಶೀಲರಾಗಿದ್ದರೆ, ನೀವು ಸರಿಯಾದದ್ದನ್ನು ಮಾಡುತ್ತೀರಿ. ಜನರು ಮೂರ್ಖತನದ ಕೆಲಸಗಳನ್ನು ಮಾಡುವುದು ಅವರಿಗೆ ಸರಿಯಾದ ಸಂವೇದನೆಯಿಲ್ಲದ ಕಾರಣದಿಂದ ಮಾತ್ರ.

ಬುದ್ಧಿವಂತಿಕೆ ಎಂದರೆ ಜಾಣತನವಲ್ಲ. ಬುದ್ಧಿವಂತಿಕೆ ಎಂದರೆ ಚತುರರಾಗಿರುವುದಲ್ಲ. ನೀವು ನಿಜವಾಗಿಯೂ ಬುದ್ಧಿವಂತರಾಗಿದ್ದರೆ, ನೀವು ಅಸ್ತಿತ್ವದೊಂದಿಗೆ ನೂರರಷ್ಟು ಸಾಮರಸ್ಯದಿಂದ ಇರುತ್ತೀರಿ. ಏಕೆಂದರೆ ಬುದ್ಧಿವಂತರಾಗಲು ಬೇರೆ ದಾರಿಯಿಲ್ಲ. ಬುದ್ಧಿಶಕ್ತಿಯ ನಿಜವಾದ ಗುಣಲಕ್ಷಣವೆಂದರೆ ನೀವು ನಿಮ್ಮ ಸುತ್ತಲಿನ ಎಲ್ಲದರೊಂದಿಗೂ ಸಂಪೂರ್ಣವಾಗಿ ಸಾಮರಸ್ಯದಿಂದ ಇರುತ್ತೀರಿ, ನಿಮ್ಮ ಒಳಗೆ ಮತ್ತು ಹೊರಗೆ ಅತ್ಯಂತ ಕಡಿಮೆ ಸಂಘರ್ಷದೊಂದಿಗೆ ಜೀವನವನ್ನು ಸಾಗಿಸುತ್ತೀರಿ.

ಗಣೇಶ ಚತುರ್ಥಿ ಎಂಬುವುದು ಕನಿಷ್ಠ ನಿಮ್ಮ ಬುದ್ಧಿಶಕ್ತಿಯನ್ನಾದರೂ ಹೆಚ್ಚಿಸಲು  ಪ್ರಯತ್ನಿಸುವ ದಿನವಾಗಿದೆ. ನೀವು ಬೆಳಿಗ್ಗೆ ಆಸನಗಳನ್ನು ಮಾಡುವ ಮೂಲಕ ಎಲುಬುಗಳಿಲ್ಲದ ಅಂಗಗಳನ್ನು ಹೊಂದುವತ್ತ ಕೆಲಸ ಮಾಡಿದರೆ, ಅದು ಸಾಧ್ಯವಾಗಬಹುದು!

    Share

Related Tags

Get latest blogs on Shiva