ಸದ್ಗುರು: ನಮ್ಮ ದೇವರುಗಳು ನೃತ್ಯ ಮಾಡಲೇಬೇಕಾದ ಏಕೈಕ ಸ್ಥಳ ಭಾರತ. ಅವರಿಗೆ ನೃತ್ಯ ಮಾಡಲು ಬರದಿದ್ದರೆ ಅವರು ದೇವರುಗಳಾಗಲು ಸಾಧ್ಯವಿಲ್ಲ! ಇದಕ್ಕೆ ಕಾರಣ ಸೃಷ್ಟಿಯ ವಿದ್ಯಮಾನಕ್ಕೆ ನೀವು ನೀಡಬಹುದಾದ ಅತ್ಯಂತ ಹತ್ತಿರದ ಹೋಲಿಕೆಯೆಂದರೆ ಅದು ನೃತ್ಯದಂತೆ ಎಂಬುದು. ಇಂದು ಆಧುನಿಕ ಭೌತವಿಜ್ಞಾನಿಗಳು ಅಂತಹ ಪದಗಳನ್ನು ಬಳಸುತ್ತಿದ್ದಾರೆ - ಸೃಷ್ಟಿಯು ನೃತ್ಯದಲ್ಲಿರುವಂತೆ ಭಾಸವಾಗುತ್ತಿದೆ ಎನ್ನುತ್ತಿದ್ದಾರೆ.ನೀವು ನೃತ್ಯವನ್ನು ಗಮನಿಸಿದರೆ, ಮೇಲ್ನೋಟಕ್ಕೆ, ಏನು ನಡೆಯುತ್ತಿದೆ ಎಂಬುದಕ್ಕೆ ಯಾವುದೇ ತಾರ್ಕಿಕ ಸಂಬಂಧ ಇರುವಂತೆ ತೋರುವುದಿಲ್ಲ. ಆದರೆ ನೀವು ಸೂಕ್ಷ್ಮವಾಗಿ ನೋಡಿದರೆ, ಇಡೀ ಪ್ರಕ್ರಿಯೆಗೆ ಒಂದು ಅತ್ಯಂತ ಆಳವಾದ ವ್ಯವಸ್ಥೆ ಇದೆ.
ಉದಾಹರಣೆಗೆ, ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ, ನರ್ತಕ ತನ್ನ ಕೈಕಾಲುಗಳನ್ನು ಮನಬ೦ದ೦ತೆ ಚಲಿಸುತ್ತಿರುವಂತೆ ಕಾಣಬಹುದು. ಮೇಲ್ನೋಟಕ್ಕೆ, ಅದರಲ್ಲಿ ಏನೂ ಇಲ್ಲದಂತೆ ಕಾಣುತ್ತದೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ, ನಡೆಯುತ್ತಿರುವ ಪ್ರತಿಯೊಂದಕ್ಕೂ ಒಂದು ಆಳವಾದ ಸಾಮರಸ್ಯವಿದೆ. ಆ ಸಾಮರಸ್ಯ ಇಲ್ಲದಿದ್ದರೆ, ನೀವು ನೃತ್ಯವನ್ನು ಆನಂದಿಸುವುದಿಲ್ಲ. ಕೈಕಾಲುಗಳನ್ನು ಬೇಕಾಬಿಟ್ಟಿಯಾಗಿ ಚಲಿಸುವಂತೆ ಕಂಡರೂ, ನೀವು ನಿರೂಪಿಸಲು ಬಯಸುವ ಎಲ್ಲದಕ್ಕೂ ಸಂಪೂರ್ಣ ಸಾಮರಸ್ಯ ತರಲು, ವರ್ಷಗಳ ತರಬೇತಿ ಮತ್ತು ಅಭ್ಯಾಸ ಬೇಕಾಗುತ್ತದೆ. ನೃತ್ಯವು ಆ ಸಾಮರಸ್ಯದ ಸೌಂದರ್ಯವನ್ನು ಹೊಂದಿದ್ದರೆ, ಕಥೆ ತಿಳಿದಿಲ್ಲದಿದ್ದರೂ ಅಥವಾ ನೃತ್ಯ ಅರ್ಥವಾಗದಿದ್ದರೂ ಅದು ವೀಕ್ಷಕರ ಮೇಲೆ ಒಂದು ನಿರ್ದಿಷ್ಟ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಬೇರೊಂದು ಆಯಾಮದಲ್ಲಿ ಇದೇ ಮಾತು ಸಂಗೀತಕ್ಕೂ ಅನ್ವಯಿಸುತ್ತದೆ.
ಭೌತಶಾಸ್ತ್ರಜ್ಞರೂ ಈ ನಿಟ್ಟಿನಲ್ಲಿ ಗಮನ ಹರಿಸುತ್ತಿದ್ದಾರೆ. ಸೃಷ್ಟಿಯು ಸಂಪೂರ್ಣವಾಗಿ ಅವ್ಯವಸ್ಥಿತ ಮತ್ತು ಆಕಸ್ಮಿಕವಾಗಿರುವಂತೆ ಭಾಸವಾಗಬಹುದು, ಆದರೆ ಸೂಕ್ಷ್ಮವಾಗಿ ನೋಡಿದರೆ, ಎಲ್ಲವೂ ಯಾವುದೋ ರೀತಿಯಲ್ಲಿ ಸಮನ್ವಯಗೊಂಡಿರುವಂತೆ ಕಾಣುತ್ತದೆ. ಅವರಿಗೆ ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಯಾವುದೋ ರೀತಿಯ ಸಾಮರಸ್ಯ ಎಲ್ಲದರಲ್ಲೂ ಇದೆ. ‘ಯೋಗ’ ಸಾಧ್ಯವಾಗಲು ಏಕೈಕ ಕಾರಣ ವೈಯಕ್ತಿಕ ಜೀವ ಮತ್ತು ಸೃಷ್ಟಿಯ ಸ್ಥೂಲ ಅಭಿವ್ಯಕ್ತಿಯ ನಡುವೆ ಒಂದು ಸಾಮರಸ್ಯವಿರುವುದು. ಸಾಮರಸ್ಯವಿಲ್ಲದಿದ್ದರೆ, ನೀವು ಒಂದಾಗಲು ಸಾಧ್ಯವಿಲ್ಲ. ಸಾಮರಸ್ಯವಿಲ್ಲದಿದ್ದರೆ ಐಕ್ಯತೆಯ ಯಾವುದೇ ಸಾಧ್ಯತೆ ಇರುತ್ತಿರಲಿಲ್ಲ.
ಕಳೆದ ಕೆಲ ವರ್ಷಗಳಿಂದ ವಿಜ್ಞಾನದಲ್ಲಿ ಚರ್ಚೆಯಾಗುತ್ತಿರುವ ವಾದಗಳಲ್ಲಿ ಒಂದು ಕನ್ಸ್ಟ್ರಕ್ಟಲ್ ಸಿದ್ಧಾಂತ. ಅದರ ಪ್ರಕಾರ ನೀವು ಪರಮಾಣು, ಮಾನವ, ಆನೆ ಅಥವಾ ಬ್ರಹ್ಮಾಂಡವನ್ನು ತೆಗೆದುಕೊಂಡರೂ - ಮೂಲ ವಿನ್ಯಾಸ ಒಂದೇ ಆಗಿರುವುದು. ಕೇವಲ ಸಂಕೀರ್ಣತೆಯ ಸೂಕ್ಷ್ಮತೆ ಹೆಚ್ಚಾಗುತ್ತದೆ.
ಯೋಗದಲ್ಲಿ ನಾವು ಯಾವಾಗಲೂ ಹೇಳಿದ್ದು ಇದನ್ನೇ. ಬ್ರಹ್ಮಾಂಡದ ಸೂಕ್ಷ್ಮರೂಪ ಮತ್ತು ಸ್ಥೂಲರೂಪ ಮೂಲತಃ ಒಂದೇ ವಿನ್ಯಾಸ. ಇದರಿಂದಲೇ ಯೋಗ ಅಭ್ಯಾಸಗಳು ಆರಂಭವಾದವು. ನಾವು ಅಂಡ, ಪಿಂಡ ಮತ್ತು ಬ್ರಹ್ಮಾಂಡ ಎಂದು ಹೇಳಿದ್ದೇವೆ - ಈ ಜೀವವನ್ನು ಮಾಡುವ ಘಟಕ, ಒಬ್ಬ ಮನುಷ್ಯ ಮತ್ತು ಬ್ರಹ್ಮಾಂಡ - ಇವು ಒಂದೇ ವಸ್ತುವಿನ ಮೂರು ಅಭಿವ್ಯಕ್ತಿಗಳು. ಇವೆಲ್ಲವೂ ಒಂದೇ ಸಮನ್ವಯದಲ್ಲಿವೆ. ಮತ್ತು ಇದು ಒಂದೇ ವಿನ್ಯಾಸವಾಗಿರುವುದರಿಂದ, ನೀವು ಒಂದನ್ನು ಇನ್ನೊಂದರಲ್ಲಿ ಹಾಕಬಹುದು. ನೀವು ಕ್ಯಾರೆಟ್ ತಿಂದು ಅದನ್ನು ಮಾನವನಾಗಿ ಮಾಡಬಹುದು ಏಕೆಂದರೆ ಇದು ಒಂದೇ ವಿನ್ಯಾಸ.
ಬ್ರಹ್ಮಾಂಡ ಕಾರ್ಯನಿರ್ವಹಿಸುವ ರೀತಿಗೆ ನೀವು ನೀಡಬಹುದಾದ ಹತ್ತಿರದ ಮತ್ತು ನಿಕಟ ಹೋಲಿಕೆಯೆಂದರೆ ಅದು ಒಂದು ನೃತ್ಯ, ಏಕೆಂದರೆ ಎಲ್ಲವೂ ಅವ್ಯವಸ್ಥಿತವಾಗಿರುವಂತೆ ಕಾಣುತ್ತದೆ, ಆದರೆ ಅದರ ಹಿಂದೆ ಪರಿಪೂರ್ಣ ವ್ಯವಸ್ಥೆ ಮತ್ತು ಸಮನ್ವಯವಿದೆ. ಏನೆಂದರೆ, ವ್ಯವಸ್ಥೆಯ ಬಗ್ಗೆ ಜನರ ಕಲ್ಪನೆ ಮಾತ್ರ ಬೌದ್ಧಿಕ ಹಾಗೂ ವಿಭಜನಾತ್ಮಕವಾಗಿರುವುದು. ಉದಾಹರಣೆಗೆ, ನಾವು ಒಂದು ಚೆನ್ನಾಗಿ ನಿರ್ವಹಿಸಿದ ತೋಟ ಮತ್ತು ಒಂದು ಕಾಡನ್ನು ತೆಗೆದುಕೊಳ್ಳೋಣ. ತೋಟ ಎಂದರೆ ಎಲ್ಲವೂ ವ್ಯವಸ್ಥಿತವಾಗಿದೆ ಎಂದರ್ಥ. ಕಾಡು ಎಂದರೆ ಯಾವುದೇ ವ್ಯವಸ್ಥೆ ಇಲ್ಲ. ಆದರೆ ನೀವು ಮೂರು ತಿಂಗಳು ತೋಟವನ್ನು ನೋಡಿಕೊಳ್ಳದಿದ್ದರೆ, ಅದು ಹೋಗಿಬಿಡುತ್ತದೆ. ಆದರೆ ಒಂದು ಕಾಡು ನಿಮ್ಮ ಗಮನವಿಲ್ಲದೆ ಲಕ್ಷಾಂತರ ವರ್ಷಗಳು ಬದುಕಬಹುದು. ಹಾಗಾದರೆ ಯಾವುದನ್ನು ನೀವು ಉತ್ತಮ ವ್ಯವಸ್ಥೆ ಎಂದು ಪರಿಗಣಿಸುತ್ತೀರಿ?
ಚಿದಂಬರಂ ದೇವಾಲಯದಲ್ಲಿ ನಟರಾಜ, ನೃತ್ಯದ ದೇವರಾಗಿ ಶಿವನಿದ್ದಾನೆ. ನಟೇಶ ಅಥವಾ ನಟರಾಜ ಶಿವನ ಅತ್ಯಂತ ಮಹತ್ವದ ರೂಪಗಳಲ್ಲಿ ಒಂದು. ನಾನು ಸ್ವಿಟ್ಜರ್ಲ್ಯಾಂಡ್‌ನ CERN ಗೆ ಭೇಟಿ ನೀಡಿದಾಗ - ಇದು ಜಗತ್ತಿನ ಭೌತಶಾಸ್ತ್ರ ಪ್ರಯೋಗಾಲಯ, ಎಲ್ಲಾ ಪರಮಾಣು-ವಿಭಜನೆ ನಡೆಯುವ ಸ್ಥಳ - ಅಲ್ಲಿ ಪ್ರವೇಶದ್ವಾರದ ಮುಂದೆ ನಟರಾಜ ಪ್ರತಿಮೆಯನ್ನು ನೋಡಿದೆ, ಏಕೆಂದರೆ “ಅವರು ಈಗ ಮಾಡುತ್ತಿರುವುದಕ್ಕೆ ಮಾನವ ಸಂಸ್ಕೃತಿಯಲ್ಲಿ ಇದಕ್ಕಿಂತ ಹತ್ತಿರವಾದದ್ದು ಏನೂ ಇಲ್ಲ” ಎಂದು ಅವರು ಗುರುತಿಸಿದ್ದಾರೆ.
ಸೃಷ್ಟಿ ಒಂದು ನೃತ್ಯವಾಗಿರುವುದರಿಂದ, ನಾವು ಸೃಷ್ಟಿಕರ್ತನನ್ನು ನರ್ತಕ ಎಂದು ಹೇಳಿದೆವು. ಅವನು ನರ್ತಕನಾಗಿಲ್ಲದಿದ್ದರೆ, ಈ ನೃತ್ಯವನ್ನು ಹೇಗೆ ನಡೆಸಬಲ್ಲ? ನಾವು ಶಿವನನ್ನು ನಟರಾಜ ಎಂದು ಹೇಳುವಾಗ, ನಾವು ಒಬ್ಬ ವ್ಯಕ್ತಿ ನೃತ್ಯ ಮಾಡುವುದರ ಬಗ್ಗೆ ಮಾತನಾಡುತ್ತಿಲ್ಲ. ನಟರಾಜನ ಚಿತ್ರಣದಲ್ಲಿ ಅವನ ಸುತ್ತಲೂ ಒಂದು ವೃತ್ತವಿರುವುದನ್ನು ನೀವು ಗಮನಿಸಿರಬಹುದು. ವೃತ್ತವು ಯಾವಾಗಲೂ ಬ್ರಹ್ಮಾಂಡದ ಸಂಕೇತ, ಏಕೆಂದರೆ ಯಾವುದಾದರೂ ಚಲಿಸಿದಾಗ, ಅಸ್ತಿತ್ವದಲ್ಲಿ ಆಗುವ ಅತ್ಯಂತ ನೈಸರ್ಗಿಕ ರೂಪ ವೃತ್ತ. ತಾನಾಗಿಯೇ ಆಗುವ ಯಾವುದೇ ವಿಷಯ ವೃತ್ತ ಅಥವಾ ‘ಅಂಡಾಭ ( ಎಲಿಪ್ಸಾಯ್ಡ್) - ಇದು ಸ್ವಲ್ಪ ವಿರೂಪಗೊಂಡ ವೃತ್ತ - ಏಕೆಂದರೆ ವೃತ್ತವು ಕನಿಷ್ಠ ಪ್ರತಿರೋಧದ ಆಕಾರ. ಗ್ರಹ, ಚಂದ್ರ, ಸೂರ್ಯ - ಇವೆಲ್ಲವೂ ವೃತ್ತಗಳು.
ಇದಕ್ಕಾಗಿಯೇ ನಟರಾಜನ ಸುತ್ತಲಿನ ವೃತ್ತವು ಬ್ರಹ್ಮಾಂಡವನ್ನು ಸೂಚಿಸುತ್ತದೆ. ಅವನು ಬ್ರಹ್ಮಾಂಡದ ನಟರಾಜ. ಅವನನ್ನು ಯಾವಾಗಲೂ ಹೀಗೆಯೇ ವರ್ಣಿಸಲಾಗುತ್ತದೆ. ಇದು ಒಬ್ಬ ವ್ಯಕ್ತಿ ಬ್ರಹ್ಮಾಂಡದಾದ್ಯಂತ ನೃತ್ಯ ಮಾಡುವುದರ ಬಗ್ಗೆ ಅಲ್ಲ. ಬ್ರಹ್ಮಾಂಡವು ನೃತ್ಯದಲ್ಲಿದೆ ಮತ್ತು ನೃತ್ಯವನ್ನು ಒಂದು ನಿರ್ದಿಷ್ಟ ಬುದ್ಧಿವಂತಿಕೆಯು ಮಾರ್ಗದರ್ಶನ ಮಾಡುತ್ತಿದೆ ಎಂದು ನಾವು ಹೇಳುತ್ತೇವೆ. ನಾವು ವ್ಯಕ್ತಿಗಳಾಗಿರುವುದರಿಂದ ಮತ್ತು ಎಲ್ಲವನ್ನೂ ಪ್ರತ್ಯೇಕ ಜೀವ ರೂಪಗಳಾಗಿ ಅರ್ಥಮಾಡಿಕೊಳ್ಳುವುದರಿಂದ, ನಮ್ಮ ಸ್ವಂತ ಗ್ರಹಿಕೆಗಾಗಿ ನಾವು ಅದನ್ನು ನಟರಾಜನಾಗಿ ವೈಯಕ್ತೀಕರಿಸುತ್ತೇವೆ. "ಶಿವ" ಎಂಬ ಪದದ ಅಕ್ಷರಶಃ ಅರ್ಥ "ಇಲ್ಲದ್ದು" ಅಥವಾ "ಏನೂ ಅಲ್ಲದ್ದು." ಅದು ಏನೂ ಅಲ್ಲ, ಅದು ಖಾಲಿ ಜಾಗ, ಆದರೆ ಅದು ನೃತ್ಯ ಮಾಡುತ್ತಿದೆ. ಅದು ನೃತ್ಯ ಮಾಡುತ್ತಿರುವುದರಿಂದ, ಎಲ್ಲವೂ ನಡೆಯುತ್ತಿದೆ.
ನಟರಾಜ ರೂಪವು ಮೂಲತಃ ದಕ್ಷಿಣ ಭಾರತದಿಂದ, ವಿಶೇಷವಾಗಿ ತಮಿಳುನಾಡಿನಿಂದ ಬಂದಿದೆ. ಇದು ಸೃಷ್ಟಿಯ ಉತ್ಸಾಹವನ್ನು, ಶಾಶ್ವತ ನಿಶ್ಚಲತೆಯಿಂದ ಸ್ವಯಂ-ಸೃಷ್ಟಿಸಿಕೊಂಡ ಸೃಷ್ಟಿಯ ನೃತ್ಯವನ್ನು ಪ್ರತಿನಿಧಿಸುತ್ತದೆ. ಚಿದಂಬರಂನಲ್ಲಿ ನಿಂತಿರುವ ನಟರಾಜ ಬಹಳ ಸಾಂಕೇತಿಕ, ಏಕೆಂದರೆ ನೀವು ಚಿದಂಬರಂ ಎಂದು ಕರೆಯುವುದು ಕೇವಲ ಸಂಪೂರ್ಣ ನಿಶ್ಚಲತೆ. ಅದನ್ನೇ ಈ ದೇವಾಲಯದ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ.
ನೀವು ನೃತ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ನೀವು ಅರ್ಥಮಾಡಿಕೊಳ್ಳುವುದೆಲ್ಲವೂ ಕೇವಲ ತಪ್ಪು ತೀರ್ಮಾನವಾಗಿರುತ್ತದೆ. ಆದರೆ ನೀವು ನೃತ್ಯದ ಸೌಂದರ್ಯವನ್ನು ಅನುಭವಿಸಬಹುದು, ಅಥವಾ ನೀವು ನೃತ್ಯವಾಗಬಹುದು. ನೀವು ನೃತ್ಯದ ಸೌಂದರ್ಯವನ್ನು ವೀಕ್ಷಣೆಯ ಮೂಲಕ ಅನುಭವಿಸಿದರೆ, ನೀವು ಅನ್ವೇಷಕ. ಸಮಾಜದಲ್ಲಿ, ನಿಮ್ಮನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಬಹುದು - ಒಂದು ವೇಳೆ ವಿಜ್ಞಾನಿ - ಆದರೂ ನೀವು ಅನ್ವೇಷಕರೇ. ಅದು ಏನು ಎಂದು ನಿಮಗೆ ತಿಳಿಯಬೇಕು, ಆದ್ದರಿಂದ ನೀವು ಗಮನ ಕೊಡುತ್ತಿದ್ದೀರಿ. ನೀವು ನೃತ್ಯವಾದರೆ, ನೀವು ದೈವವಾಗುತ್ತೀರಿ, ನೀವು ಯೋಗಿಯಾಗುತ್ತೀರಿ. ಅದು ನಿಮಗಿರುವ ಆಯ್ಕೆ.
ನೃತ್ಯವು ಎಷ್ಟು ಪರಿಪೂರ್ಣವಾಗಿದೆ ಎಂದರೆ ನಾವು ನರ್ತಕನನ್ನೇ ಮರೆತುಬಿಡುತ್ತೇವೆ, ಆದರೆ ನರ್ತಕನಿಲ್ಲದೆ ನೃತ್ಯವಿರಲು ಸಾಧ್ಯವಿಲ್ಲ. ನಮ್ಮ ದೃಷ್ಟಿ, ನಮ್ಮ ಗಮನವು ಎಷ್ಟು ಮೇಲ್ನೋಟಕ್ಕೆ -ಕೇಂದ್ರಿತವಾಗಿದೆಯೆಂದರೆ ನಮಗೆ ನರ್ತಕನು ಕಾಣುವುದಿಲ್ಲ. ನೃತ್ಯದಲ್ಲಿ ನರ್ತಕನನ್ನು ಗುರುತಿಸಲು, ನೀವು ನೃತ್ಯದಲ್ಲಿ ಸಂಪೂರ್ಣವಾಗಿ ಲೀನವಾಗಬೇಕು, ನೀವೂ ನೃತ್ಯವಾಗಬೇಕು, ನೀವು ಪ್ರೇಕ್ಷಕರಲ್ಲ, ನೀವೇ ಅದಾಗಬೇಕು. ಆಗ ನೀವು ನರ್ತಕನನ್ನು ಅನುಭವದಿಂದ ತಿಳಿಯುತ್ತೀರಿ, ಅವನ ಸ್ಪರ್ಶ ನಿಮಗೆ ತಿಳಿಯುತ್ತದೆ. ಆದರೆ ನೀವು ನರ್ತಕನನ್ನು ಅವನ ಸಂಪೂರ್ಣ ಆಳ ಮತ್ತು ಆಯಾಮದಲ್ಲಿ ತಿಳಿಯಲು ಬಯಸಿದರೆ, ನೃತ್ಯದ ಮೂಲವನ್ನು ತಿಳಿಯಲು ಬಯಸಿದರೆ, ಕ್ರಿಯೆಯ ಆಧಾರವಾಗಿರುವುದನ್ನು ತಿಳಿಯಲು ಬಯಸಿದರೆ - ನೀವು ಸಂಪೂರ್ಣ ಗಮನ ನೀಡಲು ಸಮರ್ಥರಾಗಿರಬೇಕು, ಒಂದು ರೀತಿಯಲ್ಲಿ ನೃತ್ಯದಿಂದ ದೂರ ನಿಂತು. ಈ ವಿಷಯಗಳು ವಿರುದ್ಧವಾಗಿ ಕಾಣುತ್ತವೆ. ಒಂದು ಮಟ್ಟದಲ್ಲಿ ನಾನು ನೀವು ನೃತ್ಯದಲ್ಲಿ ಮುಳುಗಬೇಕು ಎನ್ನುತ್ತೇನೆ, ಇನ್ನೊಂದು ಮಟ್ಟದಲ್ಲಿ ನೀವು ನೃತ್ಯವನ್ನು ಅತ್ಯಂತ ತೀವ್ರತೆಯಿಂದ ವೀಕ್ಷಿಸಬೇಕು ಎನ್ನುತ್ತೇನೆ. ಅವು ವಿರುದ್ಧವಲ್ಲ. ನೀವು ಅದನ್ನು ಛಿದ್ರ ಛಿದ್ರವಾಗಿ ನೋಡಿದಾಗ, ತುಂಡುಗಳಾಗಿ ಕತ್ತರಿಸಿ ನೋಡಿದಾಗ ಮಾತ್ರ ಎಲ್ಲವೂ ವಿರುದ್ಧವಾಗಿರುವಂತೆ ತೋರುತ್ತದೆ.
ನೀವು ನೃತ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ, ಕ್ರಿಯೆಯಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡರೆ, ತಿಳಿಯಲು ಅದು ಒಂದು ಮಾರ್ಗ. ಅಥವಾ ನೀವು ಕ್ರಿಯೆಯಿಂದ ದೂರವಿರುವುದು ಹೇಗೆ ಎಂದು ತಿಳಿದಿದ್ದರೆ, ಕ್ರಿಯೆಯಲ್ಲಿ ಒಂದು ಚೂರೂ ತೊಡಗಿಸಿಕೊಳ್ಳದೆ, ಆದರೆ ಕ್ರಿಯೆಯನ್ನು ಸಂಪೂರ್ಣವಾಗಿ ಗಮನಿಸಲು ಸಮರ್ಥರಾಗಿದ್ದರೆ, ನೀವು ಕ್ರಿಯೆ ಮತ್ತು ಕರ್ತ, ನೃತ್ಯ ಮತ್ತು ನರ್ತಕನ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬಹುದು, ತಿಳಿಯಲು ಅದೂ ಕೂಡ ಒಂದು ಮಾರ್ಗ. ಎರಡನೇ ವಿಧಾನಕ್ಕೆ ಹೆಚ್ಚು ಜಾಗೃತಿ, ತೀಕ್ಷ್ಣತೆ, ತೀವ್ರತೆ ಮತ್ತು ತರಬೇತಿ ಬೇಕಾಗುತ್ತದೆ, ಆದ್ದರಿಂದ ನೃತ್ಯದ ಭಾಗವಾಗುವುದು ಸುಲಭ. ನಿಧಾನವಾಗಿ ಲಯ ಹೆಚ್ಚಾದಂತೆ, ನೀವು ಅದರಲ್ಲಿ ಆಳವಾಗಿ ಮತ್ತು ಆಳವಾಗಿ ಮುಳುಗುತ್ತಾ ಹೋದಂತೆ, ಒಂದು ದಿನ ಯಾವುದು ನೀವು ಮತ್ತು ಯಾವುದು ನೃತ್ಯ ಎಂದು ನಿಮಗೆ ತಿಳಿಯುವುದಿಲ್ಲ. ನೀವು ಒಮ್ಮೆ ನೃತ್ಯದ ಭಾಗವಾದರೆ, ನರ್ತಕನ ಉಪಸ್ಥಿತಿಯನ್ನು ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.