logo
logo

ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯ: ಈ ಶಿವಲಿಂಗವು ಇಷ್ಟು ಶಕ್ತಿಯುತವಾಗಿರಲು ಕಾರಣವೇನು?

ಭಾರತದ ಅತ್ಯಂತ ಮಹತ್ವದ ದೇವಾಲಯಗಳಲ್ಲಿ ಒಂದಾದ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ಅತೀಂದ್ರಿಯ ಪರಂಪರೆಯ ಬಗ್ಗೆ ತಿಳಿಯಿರಿ. ಶಿವನ ಭಕ್ತರಿಂದ ಪೂಜಿಸಲ್ಪಡುವ ಮತ್ತು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಈ ಶಿವಲಿಂಗವು, ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯ: ಮೂಲ ಮತ್ತು ಮಹತ್ವ

ಸದ್ಗುರು: ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯವನ್ನು ಶಿವನ ಮಹಾನ್ ಭಕ್ತನಾದ ಚಂದ್ರಸೇನ ಎಂಬ ರಾಜನು ನಿರ್ಮಿಸಿದನು. ಭಕ್ತನಗರಿಯಾಗಿ ಮಾರ್ಪಟ್ಟಿದ್ದ ಹಾಗು ಜ್ಞಾನವನ್ನು ಅರಸಿ ಬರುವ ಸ್ಥಳವಾಗಿದ್ದ ಉಜ್ಜಯಿನಿಯ ಸಂಸ್ಕೃತಿಯನ್ನು ಹಾಳುಮಾಡಲು ಬಯಸಿದ ಜನರಿಂದ ಚಂದ್ರಸೇನನ ಮೇಲೆ ದಾಳಿ ನಡೆಯಿತು. ಉಜ್ಜಯಿನಿಯು ಭಾರತದ ಎರಡನೇ ಕಾಶಿಯಂತೆಯೇ ಆಗಿತ್ತು. ಜ್ಞಾನ, ಕಲಿಕೆ ಮತ್ತು ಆಧ್ಯಾತ್ಮಿಕ ಜ್ಞಾನದ ಪ್ರಸಾರವು ನಡೆಯುವ ಮುಖ್ಯ ಕೇಂದ್ರವಾಗಿತ್ತು. ಆ ಉದ್ದೇಶದಿಂದ ಜನರು ಈ ಊರಿಗೆ ಬರುತ್ತಿದ್ದರು. ಇದು ಯಾವುದೇ ವ್ಯಾಪಾರ ಮಾರ್ಗದಲ್ಲಿಲ್ಲದಿದ್ದರೂ, ಆ ಸಮಯದಲ್ಲಿ ಅವಂತಿಕಾ ಎಂದು ಕರೆಯಲ್ಪಡುತ್ತಿದ್ದ ಉಜ್ಜಯಿನಿಯು ಜ್ಞಾನ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯಿತು. ಆದರೆ, ಇದನ್ನು ಇಷ್ಟಪಡದ ಜನರಿದ್ದರು. ಅವರು ನಗರವನ್ನು ನಾಶಮಾಡಲು ಬಯಸುತ್ತಿದ್ದರು.

ಅವರು ದಾಳಿ ಮಾಡಿದಾಗ, ಚಂದ್ರಸೇನನು ಶಿವನನ್ನು ಪ್ರಾರ್ಥಿಸಿದನು. ಚಂದ್ರಸೇನನಿಗೆ ಆಧ್ಯಾತ್ಮಿಕತೆ ಮತ್ತು ಜ್ಞಾನವನ್ನು ಹರಡಲು ಸಾಧ್ಯವಾಗಲೆಂದು ಶಿವನು ಮಹಾಕಾಲನ ರೂಪದಲ್ಲಿ ಬಂದು, ಶತ್ರುಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಹೀರಿಕೊಂಡನು ಹಾಗು ಈ ತೊಂದರೆಯಿಂದ ಅವನನ್ನು ಮುಕ್ತಗೊಳಿಸಿದನು.

ಮಹಾಕಾಳೇಶ್ವರ ಜ್ಯೋತಿರ್ಲಿಂಗ: ಲಿಂಗದ ಶಕ್ತಿ

ನಾನು ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿ ನೀಡದಿದ್ದರೂ, ನಾನು ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ಹೋಗಿದ್ದೆ. ದೇವಸ್ಥಾನವನ್ನು ಹಲವು ರೀತಿಯಲ್ಲಿ ಧ್ವಂಸಗೊಳಿಸಲಾಗಿದೆ. ದಾಳಿಕೋರರು ದೇವಾಲಯವನ್ನು ನಾಶಮಾಡಿದರು ಮತ್ತು ಅದನ್ನು ಎರಡು ಅಥವಾ ಮೂರು ಬಾರಿ ಪುನರ್ನಿರ್ಮಿಸಲಾಗಿದೆ. ಆದರೆ ಈಗಲೂ, ನೀವು ಅಲ್ಲಿ ಕುಳಿತುಕೊಂಡರೆ, ಈ ಪುಟ್ಟ ರೂಪ, ಸಾವಿರಾರು ವರ್ಷಗಳಿಂದ ಅಲ್ಲಿ ಕುಳಿತಿರುವ ಒಂದು ಸಣ್ಣ ಕಲ್ಲಿನ ತುಂಡು, ನಿಮ್ಮನ್ನು ಸಂಪೂರ್ಣವಾಗಿ ಮಗ್ನಗೊಳಿಸುತ್ತದೆ. ಅದು ನಿನ್ನೆ ಮೊನ್ನೆ ಮಾಡಿದಷ್ಟು ಶಕ್ತಿಯುತವಾಗಿದೆ. ಹೇಗೆ ಎಂದು ನಿಮಗೆ ತಿಳಿದಿದ್ದರೆ, ಅಂತಹ ಲಿಂಗದ ಸಮ್ಮುಖದಲ್ಲಿ ನಿಮ್ಮ ವ್ಯವಸ್ಥೆಯನ್ನು ನೀವು ಸಂಪೂರ್ಣವಾಗಿ ಮರುಸಂಘಟಿಸಬಹುದು.

ಮಹಾಕಾಲ ದೇವಾಲಯ ಮತ್ತು ಅಲ್ಲಿ ಪ್ರತಿಷ್ಠಾಪಿಸಲಾದ ಲಿಂಗವು ಅಸಾಧಾರಣವಾದದ್ದು. ಅದು ನಿಮ್ಮ ಅಸ್ತಿತ್ವದ ಮೂಲದಿಂದ ನಿಮ್ಮನ್ನು ಅಲ್ಲಾಡಿಸುತ್ತದೆ. ಇದು ನಂಬಲಸಾಧ್ಯವಾದ ಪ್ರತಿಷ್ಠಾಪನೆಯಾಗಿದ್ದು, ನಿಮ್ಮನ್ನು ವಿಲೀನಗೊಳಿಸುವ ಉದ್ದೇಶದಿಂದಲೇ ಮಾಡಲಾಗಿದೆ. ಅದರ ಅಭಿವ್ಯಕ್ತಿಯು ಎದ್ದು ಕಾಣುತ್ತದೆ, ಒಂದು ಕಚ್ಚಾ ಶಕ್ತಿಯೊಂದಿಗೆ. ಈ ದೇವಾಲಯಕ್ಕೆ ಹೋಗಲು ಒಬ್ಬರು ಸರಿಯಾಗಿ ಸಿದ್ಧರಾಗಿರಬೇಕು ಏಕೆಂದರೆ ಇದು ಪ್ರಚಂಡ ಶಕ್ತಿಯನ್ನು ಹೊಂದಿದೆ. ಇದು ಧೈರ್ಯವಂತರಿಗೆ ಮಾತ್ರ.

ಪ್ರತಿದಿನ, ಮಹಾಕಾಲನಿಗೆ ಆಗಬೇಕಾದ ನೈವೇದ್ಯವೆಂದರೆ ಸ್ಮಶಾನದ ತಾಜಾ ಭಸ್ಮ. ಏಕೆಂದರೆ ಅದು ಅವನಿಗೆ ತುಂಬ ಇಷ್ಟವಾದದ್ದು ಮತ್ತು ಆ ಲಿಂಗವು ಮುಂದೆಯೂ ಹೀಗೆಯೇ ಶಕ್ತಿಯುತವಾಗಿರುವಂತೆ ಇರಿಸುತ್ತದೆ. ಇದು ಕೇವಲ ಸಾಂಸ್ಕೃತಿಕ ಅಂಶವಲ್ಲ. ಅದರ ಹಿಂದೆ ವಿಜ್ಞಾನವಿದೆ. ಪ್ರಾಯೋಗಿಕವಾಗಿ, ಸ್ಮಶಾನ ಭೂಮಿಯ ಭಸ್ಮ ಮತ್ತು ಇತರ ಬೂದಿಯ ನಡುವಿನ ವ್ಯತ್ಯಾಸವು ಅಸಾಧಾರಣವಾಗಿದೆ. ಈ ಪ್ರಕ್ರಿಯೆಯು ಮುಂದುವರಿಯುವುದು ಬಹಳ ಮುಖ್ಯ ಏಕೆಂದರೆ ಅದು ಮಹಾಕಾಲನ ರೀತಿಯಾಗಿದೆ. ಈ ಮಹಾಕಾಲ ರೂಪದ ಅಸ್ತಿತ್ವವೇ ಹಾಗಿದೆ, ಅಲ್ಲಿಗೆ ಹೋದಾಗ ಎಲ್ಲವೂ ಸುಟ್ಟು ಬೂದಿಯಾಗುತ್ತದೆ. ಅಂದರೆ ನೀವು ಭೌತಿಕತೆಯಿಂದ ಮುಕ್ತರಾಗುತ್ತೀರಿ. ಇದು ನಿಮ್ಮ ಅಂತಿಮ ವಿಮೋಚನೆಯ ಕಡೆಗೆ ನಿಮ್ಮನ್ನು ಪ್ರೇರೇಪಿಸುತ್ತದೆ.

ಇದೇ ಪ್ರಕ್ರಿಯೆಯನ್ನು ನೀವು ಸೌಮ್ಯವಾಗಿ ಮಾಡಲು ಬಯಸಿದರೆ, ಧ್ಯಾನಲಿಂಗದಲ್ಲಿ ಮಹಾಕಾಲನ ಆಯಾಮವಿದೆ. ಆದರೆ ಅದನ್ನು ಹುಡುಕುವವರಿಗೆ ಮಾತ್ರ ಲಭ್ಯವಾಗುವಂತೆ ಅಡಗಿಸಿಡಲಾಗಿದೆ. ಆದರೆ ನೀವು ಅದನ್ನು ಪ್ರಬಲವಾಗಿ ಮಾಡಲು ಬಯಸಿದರೆ ಮತ್ತು ನೀವು ಧೈರ್ಯಗೆಡದೆ ನಿಮ್ಮ ಮಿತಿಗಳನ್ನು ಮೀರಲು ಬಯಸಿದರೆ, ಮಹಾಕಾಲ ದೇವಾಲಯವು ಒಂದು ಅಸಾಧಾರಣ ಪ್ರಕ್ರಿಯೆಯಾಗಿದೆ.

ಶಿವನ ಮಹಾಕಾಲ ರೂಪ: ಶುಕ್ರಾಚಾರ್ಯರ ಮತ್ತು ಸಂಜೀವಿನಿ ಮಂತ್ರದ ಕಥೆ

ಶಿವನ ವಿವಿಧ ರೂಪಗಳಲ್ಲಿ, 'ಕಾಲ/ಕಾಳ' ಅಥವಾ 'ಮಹಾಕಾಲ' ಒಂದು ಪ್ರಮುಖ ಮತ್ತು ಉಗ್ರ ರೂಪವಾಗಿದೆ. ಮಹಾಕಾಲನಾದ ಅವನು ಕಾಲದ ಅಧಿಪತಿ. ಮುಕ್ತಿ ಅಥವಾ ಸಂಪೂರ್ಣ ವಿಮೋಚನೆಗಾಗಿ ಹಂಬಲಿಸುವವರಿಗೆ, ನಾವು ಮಹಾಕಾಲ ಎಂದು ಉಲ್ಲೇಖಿಸುವ ಈ ಆಯಾಮವು ಅತ್ಯಂತ ಮಹತ್ವದ್ದಾಗಿದೆ.

ಎಲ್ಲಾ ಅಸುರರಿಗೆ ಗುರುವಾಗಿದ್ದ ಮಹಾನ್ ಋಷಿ ಶುಕ್ರಾಚಾರ್ಯರು ಶಿವನ ಆರಾಧನೆಯಲ್ಲಿ ಅಪಾರ ತಪಸ್ಸುಗಳನ್ನು ಮಾಡಿದರು ಮತ್ತು ಶಿವನು ದರ್ಶನ ನೀಡಬೇಕಾಯ್ತು. ಅವನು ಕಾಣಿಸಿಕೊಂಡಾಗ, ಶುಕ್ರಾಚಾರ್ಯರು ಅಮರತ್ವವನ್ನು ಕೇಳಿದರು. ಶಿವನು "ಅದು ಸಾಧ್ಯವಿಲ್ಲ. ಹುಟ್ಟಿದ್ದೆಲ್ಲ ಸಾಯಲೇ ಬೇಕು. ಬೇರೆ ಏನಾದರೂ ಕೇಳು" ಎಂದನು. ಆಗ ಶುಕ್ರಾಚಾರ್ಯರು, "ನನಗೆ ಪುನರುಜ್ಜೀವನದ ಶಕ್ತಿಯನ್ನು ಕೊಡು, ನಾನು ಯಾವುದೇ ರೀತಿಯ ಗಾಯ ಅಥವಾ ರೋಗವನ್ನು ಪುನರುಜ್ಜೀವನಗೊಳಿಸಲು ಶಕ್ತನಾಗುವಂತೆ" ಎಂದು ಹೇಳಿದರು. ಎಲ್ಲಾ ಗಿಡಮೂಲಿಕೆಗಳ ಮತ್ತು ಔಷಧಿಗಳ ಯಜಮಾನನಾದ ಶಿವನು ಶುಕ್ರಾಚಾರ್ಯರಿಗೆ ಸಂಜೀವಿನಿ ಮಂತ್ರವನ್ನು ನೀಡಿದನು, ಯಾವುದೇ ರೀತಿಯ ಕಾಯಿಲೆ ಅಥವಾ ಗಾಯದಿಂದ ಜನರನ್ನು ಪುನರುಜ್ಜೀವನಗೊಳಿಸುವ ಮಂತ್ರ.

ಒಮ್ಮೆ ಶುಕ್ರಾಚಾರ್ಯರು ಈ ಸಂಜೀವಿನಿ ಮಂತ್ರವನ್ನು ಹೊಂದಿದ ಮೇಲೆ, ಅಸುರರು ವಿಪರೀತವಾಗಿ ಧೈರ್ಯಶಾಲಿಗಳಾದರು ಮತ್ತು ದೇವತೆಗಳ ವಿರುದ್ಧ ಯುದ್ಧದ ಮೇಲೆ ಯುದ್ಧವನ್ನು ಮಾಡ ತೊಡಗಿದರು. ಯುದ್ಧದಲ್ಲಿ ಯಾವುದೇ ರೀತಿಯ ಘೋರವಾದ ಗಾಯದಿಂದ ಬಿದ್ದ ಎಲ್ಲಾ ಅಸುರರನ್ನು ಸಂಜೀವಿನಿ ಮಂತ್ರದಿಂದ ಶುಕ್ರಾಚಾರ್ಯರು ಪುನರುಜ್ಜೀವನಗೊಳಿಸಿದರು. ಹೀಗಾಗಿ, ಅಸುರರ ಸೈನ್ಯವು ಒಬ್ಬ ವ್ಯಕ್ತಿಯನ್ನೂ ಕಳೆದುಕೊಳ್ಳದೆ ಯುದ್ಧವನ್ನು ಮಾಡಬಹುದಾಗಿತ್ತು.

ದೇವತೆಗಳು ಬಹಳ ಗಾಬರಿಗೊಂಡರು ಮತ್ತು ಇದು ತುಂಬಾ ಅನ್ಯಾಯದ ಯುದ್ಧವೆಂದು ಭಾವಿಸಿದರು ಏಕೆಂದರೆ ಅವರು ಎಷ್ಟೇ ಹೋರಾಡಿದರೂ ಅಸುರರು ಸಾಯುತ್ತಿರಲಿಲ್ಲ, ಆದರೆ ದೇವತೆಗಳು ಸಾಯುತ್ತಿದ್ದರು. ಅವರು ಬ್ರಹ್ಮನ ಬಳಿಗೆ ಹೋದರು, ಅವನು ಶಿವನೊಂದಿಗೆ ಮಧ್ಯಪ್ರವೇಶಿಸಿ, "ನೀನು ಶುಕ್ರಾಚಾರ್ಯರಿಗೆ ಈ ರೀತಿಯ ಶಕ್ತಿಯನ್ನು ನೀಡಿದ್ದೀಯ. ನೀನು ಈಗ ಅವರನ್ನು ಕೊಲ್ಲಬೇಕು. ಇಲ್ಲದಿದ್ದರೆ, ಜಗತ್ತಿನಲ್ಲಿ ಸಂಪೂರ್ಣ ಅಸಮತೋಲನ ಉಂಟಾಗುತ್ತದೆ. ಅಸುರರಿಗೆ ದೇವತೆಗಳ ಮೇಲೆ ನ್ಯಾಯವಲ್ಲದ ಮೇಲುಗೈ ಇದೆ" ಎಂದು ಹೇಳಿದರು. ಶಿವನು "ಅವನನ್ನು ಕೊಲ್ಲುವ ಅಗತ್ಯವಿಲ್ಲ, ನಾನು ಅವನನ್ನು ನನ್ನೊಳಗೆ ಹಿಡಿದಿಡುತ್ತೇನೆ" ಎಂದು ಹೇಳಿದನು.

ದೇವತೆಗಳ ಮತ್ತು ಅಸುರರ ನಡುವಿನ ಯುದ್ಧದ ಸಮಯದಲ್ಲಿ, ಶುಕ್ರಾಚಾರ್ಯರು ಮಂತ್ರವನ್ನು ಉಚ್ಚರಿಸಿಕೊಂಡು ಎಲ್ಲಾ ಅಸುರರನ್ನು ಅವರ ಗಾಯಗಳಿಂದ ಪುನರುಜ್ಜೀವನಗೊಳಿಸುತ್ತಿದ್ದರು. ನಂತರ, ಬಾನಂಚಿನಲ್ಲಿ, ಒಂದು ಭಯಾನಕ ಜೀವಿ, ಕೃತಿಕಾ ಎಂಬ ಹೆಸರಿನ ರಾಕ್ಷಸಿ ಬಂದಳು. ಅವಳು ಶಿವಗಣರಲ್ಲಿ ಒಬ್ಬಳಾಗಿದ್ದಳು. ಅವಳು ಶುಕ್ರಾಚಾರ್ಯರನ್ನು ತನ್ನ ಗರ್ಭದೊಳಗೆ ಎಳೆದುಕೊಂಡಳು, ಅಲ್ಲಿ ಅವರು ಭ್ರೂಣವಾಗಿ ಉಳಿದರು. ಅವರನ್ನು ಒಳಗಡೆ ಹಿಡಿದಿಡಲಾಯಿತು ಮತ್ತು ದೇವತೆಗಳ ಮತ್ತು ಅಸುರರ ನಡುವಿನ ಸಮತೋಲನವನ್ನು ನಿಗದಿಪಡಿಸಲಾಯಿತು.

ಬ್ರಹ್ಮನು ತುಂಬಾ ಖುಷಿಪಟ್ಟನು ಹಾಗು ಮಹಾಕಾಲನಿಗೆ ಮಾತ್ರವೇ ಒಬ್ಬ ವ್ಯಕ್ತಿಯನ್ನು ಕೊಲ್ಲದೆ ಅವನ ಜೀವವನ್ನು ಸಂಪೂರ್ಣವಾಗಿ ಹಿಡಿದಿಡಲು ಸಾಧ್ಯ ಎಂದು ಭಾವಿಸಿದನು. ಶುಕ್ರಾಚಾರ್ಯರು ಕೃತಿಕಾಳ ಗರ್ಭದಲ್ಲಿ ಉಳಿದರು, ಮತ್ತು ಸಂಜೀವಿನಿ ಮಂತ್ರವು ಶಕ್ತಿಹೀನವಾಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಮಹಾಕಾಲನು ಶುಕ್ರಾಚಾರ್ಯರಿಗೆ ಸಮಯವನ್ನು ಸ್ಥಗಿತಗೊಳಿಸಿ, ಅವರು ಮುಂದುವರೆಯಲು ಸಾಧ್ಯವಾಗದಂತೆ ಮಾಡಿದನು.

ಮಹಾಕಾಳೇಶ್ವರ ದೇವಾಲಯವು ಮಧ್ಯಪ್ರದೇಶದ ಉಜ್ಜಯಿನಿಯನ್ನು ನಿಜವಾದ "ಜಿ ಎಮ್ ಟಿ" ಯನ್ನಾಗಿ ಮಾಡಿತು!

ಬ್ರಿಟಿಷರು ಭಾರತಕ್ಕೆ ಬಂದು ಗ್ರೀನ್‌ವಿಚ್ ಸಮಯಕ್ಕೆ ಬದಲಾಯಿಸುವ ಮೊದಲು ಮಧ್ಯ ಭಾರತದಲ್ಲಿ ಪ್ರತಿಷ್ಠಾಪಿಸಲಾದ ಮಹಾಕಾಳೇಶ್ವರನು ಅನೇಕ ಸಹಸ್ರಮಾನಗಳ ಕಾಲ ಕಾಲದ ಕೇಂದ್ರವಾಗಿತ್ತು. ಇದು ಪ್ರಪಂಚದ ಸರಾಸರಿ ಸಮಯವಾಗಿತ್ತು ಏಕೆಂದರೆ ಸಮಯ ಇಲ್ಲಿ ಪ್ರಾರಂಭವಾಯಿತು ಎಂದು ಪರಿಗಣಿಸಲಾಗಿತ್ತು. ಆದ್ದರಿಂದ, ಮಹಾಕಾಲ ಎಂಬ ಪ್ರತ್ಯೇಕ ದೇವತೆಯನ್ನು ಅಲ್ಲಿ ಸ್ಥಾಪಿಸಲಾಯಿತು.

ಯೋಗಶಾಸ್ತ್ರಗಳಲ್ಲಿ ಸಮಯದ ಬಗ್ಗೆ ಮಾತ್ರ ಹೇಳಲಾಗುತ್ತದೆ, ಸ್ಥಳದ ಬಗ್ಗೆ ಅಲ್ಲ. ಸ್ಥಳವು ಸಮಯದ ಪರಿಣಾಮವಾಗಿದೆ. ಸಮಯವಿಲ್ಲದಿದ್ದರೆ ಸ್ಥಳವು ಇರುತ್ತಿರಲಿಲ್ಲ. ಸ್ಥಳವು ಒಂದು ಭ್ರಮೆಯಾಗಿದ್ದು ಅದು ನಾವು ನಮ್ಮ ಭೌತಿಕ ಸ್ವಭಾವಗಳೊಂದಿಗೆ ತೊಡಗಿಸಿಕೊಂಡಿರುವುದರಿಂದ ಹುಟ್ಟಿದೆ. ನಿಮ್ಮ ಭೌತಿಕ ಸ್ವಭಾವದೊಂದಿಗೆ ನೀವು ಅಂತರ ಹೊಂದಿದರೆ, ಇದ್ದಕ್ಕಿದ್ದಂತೆ ಸಮಯವಿರುವುದಿಲ್ಲ, ಮತ್ತು ಅದರ ಪರಿಣಾಮವಾಗಿ, ಸ್ಥಳವೂ ಇರುವುದಿಲ್ಲ.

ಸಮಯ ಮತ್ತು ಸ್ಥಳ ಎರಡಕ್ಕೂ ನಾವು ಸಾಮಾನ್ಯ ಪದವನ್ನು ಹೊಂದಿದ್ದೇವೆ. ನಾವು ಅದನ್ನು ಕಾಲ ಎಂದು ಕರೆಯುತ್ತೇವೆ. ಕಾಲ ಎಂದರೆ ಸಮಯ, ಮತ್ತು ಕಾಲ ಎಂದರೆ ಶೂನ್ಯ ಎಂದರ್ಥ. ಶೂನ್ಯ ಎಂದರೆ ಸ್ಥಳ. ಸಭಾಂಗಣ ಶೂನ್ಯವಾಗಿದೆ ಎಂದಾಗ ಅಲ್ಲಿ ಸ್ಥಳವಿದೆ ಎಂದರ್ಥ. ಸಭಾಂಗಣ ತುಂಬಿದಾಗ ಅಲ್ಲಿ ಸ್ಥಳವಿಲ್ಲ ಎನ್ನುತ್ತೇವೆ. ಆ ಪದಗಳನ್ನು ಸರಳವಾದ ಭಾಷೆಯಲ್ಲಿ ಹೀಗೆ ಉಪಯೋಗಿಸುತ್ತೇವೆ. ಆದರೆ ಒಂದೇ ಪದವನ್ನು ಸಮಯ ಮತ್ತು ಸ್ಥಳ ಎರಡಕ್ಕೂ ಬಳಸಲಾಗುತ್ತದೆ, ಏಕೆಂದರೆ ಸ್ಥಳವು ಸಮಯದಿಂದ ಹುಟ್ಟುತ್ತದೆ. ಸಮಯವಿಲ್ಲದಿದ್ದರೆ ಸ್ಥಳವಿಲ್ಲ.

ಯೋಗದಲ್ಲಿ, ನಾವು ಸಮಯವನ್ನು ಎರಡು ವಿಭಿನ್ನ ಆಯಾಮಗಳಲ್ಲಿ ನೋಡುತ್ತೇವೆ: ಕಾಲ ಮತ್ತು ಮಹಾಕಾಲ. ಮಹಾಕಾಲವು ಮಹತ್ವದ ಸಮಯ. ದೈನಂದಿನ ಜೀವನದಲ್ಲಿ, ಸಮಯವೆಂದರೆ ನಮ್ಮ ತಿಳುವಳಿಕೆಯಲ್ಲಿ ಆವರ್ತಕ ಚಲನೆಗಳು - ಗ್ರಹದ ತಿರುಗುವಿಕೆ ಒಂದು ದಿನ, ಚಂದ್ರನ ತಿರುಗುವಿಕೆ ಒಂದು ತಿಂಗಳು, ಭೂಮಿಯ ತಿರುಗುವಿಕೆ ಒಂದು ವರ್ಷ ಹೀಗೆ. ಆದರೆ ಮಹಾಕಾಲ ಅಥವಾ ಮಹತ್ವದ ಸಮಯವು ಯಾವುದೇ ಆವರ್ತಕ ಚಲನೆಯನ್ನು ಹೊಂದಿಲ್ಲ.

ಆವರ್ತಕ ಚಲನೆಯು ಭೌತಿಕ ಸ್ವಭಾವದಿಂದ ಬರುತ್ತದೆ. ಭೌತಿಕ ಸ್ವಭಾವದಿಂದಾಗಿ, ಎಲ್ಲದರ ಜನನ ಮತ್ತು ಮರಣ, ಆದಿ ಮತ್ತು ಅಂತ್ಯದ ವಿಷಯದಲ್ಲಿ ಸಮಯವಿದೆ. ಪ್ರತಿಯೊಂದು ಪರಮಾಣು, ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಒಂದು ಕಾಲಾವಧಿಯನ್ನು ಹೊಂದಿದೆ. ಸೂರ್ಯ, ಗ್ರಹಗಳು, ಸೌರವ್ಯೂಹವು ನಿಯಮಿತ ಕಾಲವನ್ನು ಹೊಂದಿವೆ. ಯಾವುದೋ ಸಮಯದಲ್ಲಿ ಅವು ಪ್ರಾರಂಭವಾಗಿವೆ, ಮತ್ತು ನಿರ್ದಿಷ್ಟ ಸಮಯದಲ್ಲಿ ಅವು ಕೊನೆಗೊಳ್ಳುತ್ತವೆ. ಅದು ಸ್ಪೋಟದಿಂದ ಆಗಲಿದೆಯೇ ಅಥವಾ ನಿಧಾನವಾಗಿ ಮಾಸಿಹೋಗಲಿದೆಯೇ ಎಂಬುದು ಚರ್ಚಿಸಬಹುದಾದ ವಿಷಯ. ಆದರೆ ಭೌತಿಕತೆಯು ಶಾಶ್ವತವಲ್ಲ. ಅದು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. ಈ ಕಾರಣದಿಂದ ನಾವು ಸಾಮಾನ್ಯವಾಗಿ ಸಮಯವನ್ನು ಆ ಅರ್ಥದಲ್ಲಿ ನೋಡುತ್ತೇವೆ. ಆದರೆ ಆವರ್ತ ಸ್ವಭಾವವನ್ನು ಮೀರಿದ ಸಮಯವಿದೆ. ಇದನ್ನು ನಾವು ಮಹಾಕಾಲ ಎಂದು ಕರೆಯುತ್ತೇವೆ.

ಮಹಾಕಾಳೇಶ್ವರ ಲಿಂಗ ಮತ್ತು ಮುಕ್ತಿ

ಆಧ್ಯಾತ್ಮಿಕ ಅನ್ವೇಷಕರ ಸಂಪೂರ್ಣ ಆಕಾಂಕ್ಷೆಯು ಮುಕ್ತಿ ಅಥವಾ ವಿಮೋಚನೆಯನ್ನು ಪಡೆಯುವುದು, ಅಂದರೆ ನೀವು ಭೌತಿಕತೆಯನ್ನು ಮೀರಲು ಬಯಸುತ್ತೀರಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಅಸ್ತಿತ್ವದ ಆವರ್ತಕ ಸ್ವಭಾವವನ್ನು ಮೀರಲು ಬಯಸುತ್ತೀರಿ. ಅಸ್ತಿತ್ವದ ಆವರ್ತಕ ಸ್ವರೂಪವನ್ನು ಮೀರುವುದು ಎಂದರೆ ಜೀವನದ ಪುನರಾವರ್ತಿತ ಪ್ರಕ್ರಿಯೆಯನ್ನು ಮೀರುವುದು. ಜೀವನದ ಪುನರಾವರ್ತಿತ ಪ್ರಕ್ರಿಯೆಯನ್ನು ಮೀರುವುದು ಎಂದರೆ ನೀವು ಯಾರು ಎಂಬ ಅಭ್ಯಾಸವನ್ನು ಮೀರುವುದು. ಪ್ರಜ್ಞಾರಹಿತ ಸ್ಥಿತಿಯಿಂದ ಪ್ರಜ್ಞೆಯೆಡೆಗೆ ಪಯಣ.

ನೀವು ಪ್ರಜ್ಞಾರಹಿತ ಸ್ಥಿತಿಯಿಂದ ಪ್ರಜ್ಞೆಯೆಡೆಗೆ ಚಲಿಸಲು ಬಯಸಿದರೆ, ಭೌತಿಕ ಅಸ್ತಿತ್ವದ ಆವರ್ತಕ ಚಲನೆಯ ಅಭಿವ್ಯಕ್ತಿಯಾಗಿರುವ ಸಮಯದ ಸೀಮಿತ ಅನುಭವವನ್ನು ಮೀರಬೇಕಾಗುತ್ತದೆ. ನೀವು ಭೌತಿಕತೆಯ ಆಧಾರವಿಲ್ಲದೆ ಅಥವಾ ಭೌತಿಕತೆಯ ಮಿತಿಗಳಿಲ್ಲದೆ ಸಮಯವನ್ನು ಅನುಭವಿಸಿದರೆ, ಆ ಸಮಯವನ್ನು ನಾವು 'ಮಹಾಕಾಲ' ಎಂದು ಕರೆಯುತ್ತೇವೆ. ಮಹಾಕಾಲವು ಸೃಷ್ಟಿಯ ಪುಟ್ಟ ವಸ್ತುಗಳಿಗೆ ಮಡಿಲಾಗಿದೆ. ಗ್ಯಾಲಕ್ಸಿಗಳು ಅಗಾಧವಾಗಿವೆ, ಆದರೆ, ಅವೂ ಕೂಡಾ ಸೃಷ್ಟಿಯ ಸಣ್ಣ ಚುಕ್ಕೆಗಳಾಗಿವೆ; ಉಳಿದ ಭಾಗವೆಲ್ಲ ಖಾಲಿ ಸ್ಥಳ. ಪರಮಾಣುವಿನ ತೊಂಬತ್ತೊಂಬತ್ತು ಪ್ರತಿಶತ ಅಥವಾ ಹೆಚ್ಚಿನ ಭಾಗ ಶೂನ್ಯವಾಗಿದೆ. ಅದು ಮಹಾಕಾಲ.

ಪರಮಾಣು ಆವರ್ತಕ ಚಲನೆಯಲ್ಲಿದ್ದರೂ, ತೊಂಬತ್ತೊಂಬತ್ತು ಪ್ರತಿಶತದಷ್ಟು ಅದು ಶೂನ್ಯವಾಗಿದೆ. ಬ್ರಹ್ಮಾಂಡವು, ತೊಂಬತ್ತೊಂಬತ್ತು ಪ್ರತಿಶತದಷ್ಟು ಶೂನ್ಯವಾಗಿದೆ. ಬೃಹತ್ ಗ್ಯಾಲಕ್ಸಿಗಳು ಆವರ್ತಕ ಚಲನೆಗಳಲ್ಲಿವೆ, ಆದರೆ ತೊಂಬತ್ತೊಂಬತ್ತು ಪ್ರತಿಶತವು ಅವು ಶೂನ್ಯವಾಗಿವೆ. ಹಾಗಾಗಿ ಮಹಾಕಾಲನ ಮಡಿಲಲ್ಲಿ ಸೃಷ್ಟಿಯು ನಡೆಯುತ್ತದೆ. ನೀವು ಸೃಷ್ಟಿಯ ಸೀಮಿತ ಚುಕ್ಕೆಗಳೊಂದಿಗೆ ತೊಡಗಿಸಿಕೊಂಡಿದ್ದರೆ, ಆವರ್ತಕ ಚಲನೆಯಾಗಿ ಸಮಯವನ್ನು ನೀವು ಅನುಭವಿಸುತ್ತೀರಿ. ಈ ಆಯಾಮವನ್ನು ಸಂಸಾರ ಎಂದು ಕರೆಯಲಾಗುತ್ತದೆ - ಅಂದರೆ ಆವರ್ತಕ ಚಲನೆಗಳು.

ನೀವು ಇದನ್ನು ಮೀರಿದರೆ, ನಾವು ಇದನ್ನು 'ವೈರಾಗ್ಯ' ಎಂದು ಕರೆಯುತ್ತೇವೆ. ಇದರರ್ಥ ನೀವು ಪಾರದರ್ಶಕವಾಗಿದ್ದೀರಿ. ನೀವು ಪಾರದರ್ಶಕವಾಗಿದ್ದರೆ, ನೀವು ಬೆಳಕನ್ನು ತಡೆಯುವುದಿಲ್ಲ. ನೀವು ಬೆಳಕನ್ನು ತಡೆಯದಿದ್ದರೆ, ನೀವು ಜೀವನದ ಪ್ರಜ್ಞಾರಹಿತ ಸ್ವಭಾವದಿಂದ ಅಥವಾ ಜೀವನದ ಆವರ್ತಕ ಚಲನೆಯಿಂದ ಮುಕ್ತರಾಗಿದ್ದೀರಿ ಎಂದರ್ಥ. ನೀವು ಜೀವನದ ಆವರ್ತಕ ಚಲನೆಯಿಂದ ಮುಕ್ತರಾದರೆ, 'ನೀವು ಮುಕ್ತಿಯಲ್ಲಿದ್ದೀರಿ' ಅಥವಾ ಸಂಪೂರ್ಣ ಮುಕ್ತಿಯನ್ನು ಹೊಂದಿದ್ದೀರಿ ಎಂದು ಹೇಳುತ್ತೇವೆ. ಆದ್ದರಿಂದ, ಮುಕ್ತಿ ಅಥವಾ ಸಂಪೂರ್ಣ ವಿಮೋಚನೆಗಾಗಿ ಹಾತೊರೆಯುವವರಿಗೆ, ನಾವು ಮಹಾಕಾಲ ಎಂದು ಉಲ್ಲೇಖಿಸುತ್ತಿರುವ ಈ ಆಯಾಮವು ಅತ್ಯಂತ ಮಹತ್ವದ್ದಾಗಿದೆ.

    Share

Related Tags

ಶಿವ ತತ್ವ

Get latest blogs on Shiva

Related Content

Shiva Purana