logo
logo

ಶಿವನ ದಕ್ಷಿಣ ಭಾರತದ ಪ್ರೇಮ ಕಥೆ

ಶಿವನ ದಕ್ಷಿಣ ಭಾರತೀಯ ಪ್ರೇಮ ಕಥೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ದುರದೃಷ್ಟವಶಾತ್ ಈ ಪ್ರೇಮ ಯಶಸ್ವಿಯಾಗಲಿಲ್ಲ. ಆದರೆ ಇದು ಬೇರೆ ರೀತಿಯಲ್ಲಿ ಫಲ ನೀಡಿತು, ಮತ್ತು ದಕ್ಷಿಣದ ಕೈಲಾಸವನ್ನು ರೂಪಿಸಿತು. ಇಲ್ಲಿದೆ ಆ ಕಥೆ.

ಸದ್ಗುರು: ಪುಣ್ಯಾಕ್ಷಿ,  ಉತ್ತಮ ಗ್ರಹಿಕೆ ಹೊಂದಿರುವ ಮಹಿಳೆ , ಭಾರತ ಉಪಖಂಡದ ದಕ್ಷಿಣದ ತುದಿಯಲ್ಲಿ ವಾಸಿಸುತ್ತಿದ್ದಒಬ್ಬ ದೇವದೂತಳು. ಅವಳಿಗೆ ಶಿವನ ಮೇಲೆ ಒಲವು ಮೂಡಿತು ಮತ್ತು ಅವನ ಪತ್ನಿಯಾಗಿ ಅವನ ಕೈ ಹಿಡಿಯುವ ಆಕಾಂಕ್ಷೆ ಹೊಂದಿದಳು. ಅವಳು ಅವನನ್ನು ಹೊರತು ಬೇರೆ ಯಾರನ್ನೂ ಮದುವೆಯಾಗಲಾರೆನೆಂದು ನಿರ್ಧರಿಸಿದಳು. ಹೀಗಾಗಿ ಪುಣ್ಯಾಕ್ಷಿ ಶಿವನ ಗಮನ ಸೆಳೆಯಲು ತನ್ನನ್ನು ಸಮರ್ಥಳನ್ನಾಗಿ ಮತ್ತು ಯೋಗ್ಯಳನ್ನಾಗಿ ಮಾಡಿಕೊಳ್ಳಲು ಪ್ರಯತ್ನ ಆರಂಭಿಸಿದಳು. ಅವಳು ತನ್ನ ಜೀವನದ ಪ್ರತಿ ಕ್ಷಣವೂ ಅವನ ಮೇಲೆಯೇ ಸಂಪೂರ್ಣ ಗಮನ ಕೇಂದ್ರೀಕರಿಸಿದಳು; ಅವಳ ಭಕ್ತಿ ಎಲ್ಲ ಮಿತಿಗಳನ್ನು ದಾಟಿತು ಮತ್ತು ಅವಳ ಕಠಿಣವಾದ ತಪಸ್ಸು ವಿವೇಕದ ಎಲ್ಲಾ ಹಂತಗಳನ್ನು ದಾಟಿದವು.

ಅವಳ ಭಾವನೆಯ ತೀವ್ರತೆಯನ್ನು ನೋಡಿ, ಶಿವನ ಮನಕಲಕಿ, ಅವಳಲ್ಲಿ ಒಲವು ಮೂಡಿತು. ಅವನು ಅವಳ ಪ್ರೀತಿಗೆ ಸ್ಪಂದಿಸಿದನು ಮತ್ತು ಅವಳನ್ನು ಮದುವೆಯಾಗಲು ಸಿದ್ಧನಾದನು. ಆದರೆ ಪುಣ್ಯಾಕ್ಷಿ ವಾಸಿಸುತ್ತಿದ್ದ ಸಮಾಜ ಚಿಂತಿತವಾಗಿತ್ತು. ಪುಣ್ಯಾಕ್ಷಿ ಮದುವೆಯಾದರೆ, ಅವಳು ಭವಿಷ್ಯ ನೋಡುವ ಮತ್ತು ಅವರನ್ನು ರಕ್ಷಿಸಿ ಮಾರ್ಗದರ್ಶನ ನೀಡುವ  ಶಕ್ತಿಯನ್ನು ಕಳೆದುಕೊಳ್ಳುತ್ತಾಳೆ ಎಂದು ಅವರು ನಂಬಿದ್ದರು. ಆದ್ದರಿಂದ ಈ ಮದುವೆಯನ್ನು ತಡೆಯಲು ಅವರು ಸಾಧ್ಯವಿರುವ  ಎಲ್ಲವನ್ನೂ ಮಾಡಿದರು. ಆದರೆ ಶಿವನ ಮೇಲಿನ ಅವಳ ದೃಢ ನಿಶ್ಚಯ ಮತ್ತು ಭಕ್ತಿಯಿಂದ ಅವಳನ್ನು ಯಾವುದೂ ಬೇರ್ಪಡಿಸಲಾಗಲಿಲ್ಲ. 

ಶಿವನು ಭಾವಪೂರ್ಣವಾಗಿ ಸ್ಪಂದಿಸಿದನು ಮತ್ತು ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು. ಅವನು ಉಪಖಂಡದ ದಕ್ಷಿಣ ತುದಿಯ ಕಡೆಗೆ ಹೊರಟನು. ಆದರೆ ಅವಳ ಸಮುದಾಯದ ಜನರು ಮದುವೆಯ ವಿರುದ್ಧವಿದ್ದರು, ಆದ್ದರಿಂದ ಅವರು ಶಿವನಿಗೆ ಮೊರೆ ಹೋದರು, "ಓ ಶಿವ, ನೀನು ಅವಳನ್ನು ಮದುವೆಯಾದರೆ, ನಮಗಾಗಿ ನಾವು ಹೊಂದಿರುವ ಗ್ರಹಿಕೆಯ ಏಕೈಕ ಕಣ್ಣನ್ನು ನಾವು ಕಳೆದುಕೊಳ್ಳುತ್ತೇವೆ. ದಯವಿಟ್ಟು ಅವಳನ್ನು ಮದುವೆಯಾಗಬೇಡಿ ." ಆದರೆ ಶಿವನು ಕೇಳುವ ಮನಸ್ಥಿತಿಯಲ್ಲಿರಲಿಲ್ಲ ಮತ್ತು ಮದುವೆಯ ಕಡೆಗೆ ಮುಂದುವರಿದನು. 

ಸಮುದಾಯದ ಹಿರಿಯರು ಅವನನ್ನು ತಡೆದರು ಮತ್ತು ಹೇಳಿದರೂ , "ನೀನು ಈ ಹುಡುಗಿಯನ್ನು ನಿನ್ನ ವಧುವಾಗಿ ಬಯಸಿದರೆ, ಕೆಲವು ಷರತ್ತುಗಳಿವೆ. ನೀನು ನಮಗೆ ವಧು ದಕ್ಷಿಣೆ  ಪಾವತಿಸಬೇಕು".

ಶಿವನು ಕೇಳಿದನು, "ವಧುದಕ್ಷಿಣೆ ಎಂದರೇನು? ಅದು ಏನೇ ಆಗಿರಲಿ, ನಾನು ನಿಮಗೆ ನೀಡುತ್ತೇನೆ."

ಅವರು ಪುಣ್ಯಾಕ್ಷಿಯ ವಧುದಕ್ಷಿಣೆಗಾಗಿ  ಶಿವನು ಪಾವತಿಸಬೇಕಾದ ಮೂರು ವಸ್ತುಗಳನ್ನು ಪಟ್ಟಿ ಮಾಡಿದರು, "ನಮಗೆ ಗಂಟುಗಳಿಲ್ಲದ ಕಬ್ಬು, ನರಗಳಿಲ್ಲದ ವೀಳ್ಯದೆಲೆ, ಮತ್ತು ಕಣ್ಣುಗಳಿಲ್ಲದ ತೆಂಗಿನಕಾಯಿ ಬೇಕು. ಇದು ನೀನು ನೀಡಬೇಕಾದ ವಧುದಕ್ಷಿಣೆ."

ಈ ಎಲ್ಲಾ ವಸ್ತುಗಳು ಅನೈಸರ್ಗಿಕವಾಗಿವೆ. ಕಬ್ಬು ಯಾವಾಗಲೂ ಗಂಟುಗಳೊಂದಿಗೆ ಬರುತ್ತದೆ, ನರಗಳಿಲ್ಲದ ವೀಳ್ಯದೆಲೆ ಇಲ್ಲ, ಮತ್ತು ಕಣ್ಣುಗಳಿಲ್ಲದ ತೆಂಗಿನಕಾಯಿ ಇರಲು ಸಾಧ್ಯವಿಲ್ಲ. ಇದೊಂದು ಅಸಾಧ್ಯವಾದ ವಧು ದಕ್ಷಿಣೆ ಮತ್ತು ಈ ಮದುವೆಯನ್ನು ತಡೆಯುವ ಖಚಿತವಾದ ಮಾರ್ಗವಾಗಿತ್ತು.

ಶಿವನು ಪುಣ್ಯಾಕ್ಷಿಯ ಬಗ್ಗೆ ಬಹಳ ಭಾವೋದ್ರಿಕ್ತನಾಗಿದ್ದನು ಮತ್ತು ಯಾವ ಬೆಲೆ ಕೊಟ್ಟಾದರೂ ಅವಳನ್ನು ಮದುವೆಯಾಗಲು ಬಯಸಿದ್ದನು. ಆದ್ದರಿಂದ ಅವನು ತನ್ನ ಗೂಢ ಶಕ್ತಿ ಮತ್ತು ಮಾಂತ್ರಿಕ ಸಾಮರ್ಥ್ಯಗಳನ್ನು ಬಳಸಿ , ಪ್ರಕೃತಿಯ ನಿಯಮಗಳನ್ನು ಮುರಿದು, ಈ ಮೂರು ವಸ್ತುಗಳನ್ನು ಸೃಷ್ಟಿಸಿದನು. ಅವರು ಕೇಳಿದ ಅನ್ಯಾಯದ, ಅಸಾಧ್ಯವಾದ ವಧುದಕ್ಷಿಣೆಯನ್ನು ನೀಡಲು  ಅವನು ಪ್ರಕೃತಿಯ ಮೂಲಭೂತ ನಿಯಮಗಳನ್ನು ಮುರಿದನು.ಬೇಡಿಕೆಗಳನ್ನು ಈಡೇರಿಸಿದ ನಂತರ, ಅವನು ಮದುವೆಯ ಕಡೆಗೆ ಮುಂದುವರಿದನು.

ಆದರೆ ನಂತರ, ಸಮುದಾಯದ ಹಿರಿಯರು ಶಿವನ ಮೇಲೆ ಒಂದು ಕೊನೆಯ ಷರತ್ತನ್ನು ಹಾಕಿದರು. "ನೀನು ನಾಳೆ ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಮದುವೆಯಾಗಬೇಕು. ನೀನು ತಡಮಾಡಿದರೆ , ಅವಳನ್ನು ಮದುವೆಯಾಗಲು ಸಾಧ್ಯವಿಲ್ಲ" ಎಂದರು.

ಇದನ್ನು ಕೇಳಿ, ಶಿವನು ದೇಶದ ದಕ್ಷಿಣ ತುದಿಯ ಕಡೆಗೆ ತ್ವರಿತವಾಗಿ ಸಾಗಿದನು. ಅವನು ವೇಗವಾಗಿ ದೂರವನ್ನು ಕ್ರಮಿಸಿದನು ಮತ್ತು ತಾನು ಸಮಯಕ್ಕೆ ಸರಿಯಾಗಿ ಪುಣ್ಯಾಕ್ಷಿಯನ್ನು ತಲುಪುತ್ತೇನೆ ಎಂದು ಖಚಿತವಾಗಿದ್ದನು. ಸಮುದಾಯದ ಹಿರಿಯರು ಶಿವನು ತಾವು ನಿಗದಿಪಡಿಸಿದ ಎಲ್ಲಾ ಅಸಾಧ್ಯ ಷರತ್ತುಗಳನ್ನು ಮೀರಿ ಪುಣ್ಯಾಕ್ಷಿಗೆ ನೀಡಿದ ಮಾತನ್ನು ಈಡೇರಿಸುತ್ತಿರುವುದನ್ನು ನೋಡಿ ನಿಜವಾಗಿಯೂ ಚಿಂತಿತರಾದರು.

ಶಿವನು ತನ್ನ ಪ್ರಯಾಣದಲ್ಲಿ ಅವಸರದಿಂದ ಸಾಗುತ್ತಿದ್ದಾಗ, ಇಂದು ಸುಚೀಂದ್ರಂ ಎಂದು ಕರೆಯಲ್ಪಡುವ ಸ್ಥಳಕ್ಕೆ ಬಂದನು, ಅದು ಮದುವೆಯ ಸ್ಥಳದಿಂದ ಕೇವಲ ಕೆಲವು ಕಿಲೋಮೀಟರ್ ದೂರದಲ್ಲಿತ್ತು. ಸೂರ್ಯ ಮೇಲೇರುತ್ತಿರುವುದನ್ನು ಅವನು ನೋಡಿದನು! ಅವನಿಗೆ ನಂಬಲಾಗಲಿಲ್ಲ. ತನ್ನ ಕಾರ್ಯಾಚರಣೆಯಲ್ಲಿ  ಅವನು ವಿಫಲನಾಗಿದ್ದನು! ಆದರೆ ನಿಜವಾಗಿ ಇದು ಸಮುದಾಯದ ಹಿರಿಯರು ಮಾಡಿದ ಅಂತಿಮ ತಂತ್ರವಾಗಿತ್ತು; ಅವರು ಕೃತಕ ಸೂರ್ಯೋದಯವನ್ನು ಸೃಷ್ಟಿಸಲು ನಿರ್ಧರಿಸಿದ್ದರು. ಒಂದು ದೊಡ್ಡ ಕರ್ಪೂರದ ರಾಶಿಯನ್ನು ಒಟ್ಟುಗೂಡಿಸಿ ಅದಕ್ಕೆ ಬೆಂಕಿ ಹಚ್ಚಿದರು. ಕರ್ಪೂರವು ಪ್ರಕಾಶಮಾನವಾಗಿ ಮತ್ತು ತೀವ್ರವಾಗಿ ಉರಿಯಿತು, ಶಿವನು ದೂರದಿಂದ ನೋಡಿದಾಗ, ಸೂರ್ಯ ಮೇಲೇರುತ್ತಿದೆ ಎಂದು ಭಾವಿಸಿ ತಾನು ತನ್ನ ಕಾರ್ಯಾಚರಣೆಯಲ್ಲಿ ವಿಫಲನಾಗಿದ್ದೇನೆ ಎಂದುಕೊಂಡನು. ಅವನು ಅಷ್ಟು ಹತ್ತಿರವಿದ್ದನು - ಕೇವಲ ಕೆಲವು ಕಿಲೋಮೀಟರ್ ದೂರ - ಆದರೆ ಸಮಯ ಮುಗಿದಿದೆ ಮತ್ತು ಪುಣ್ಯಾಕ್ಷಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಯೋಚಿಸಿ ಅವನು ಮೋಸ ಹೋದನು..

ಪುಣ್ಯಾಕ್ಷಿ ಶಿವನೊಂದಿಗಿನ ತನ್ನ ಅದ್ಧೂರಿ ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದಳು.ಮದುವೆಯನ್ನು ಹಾಳುಮಾಡಲು ತನ್ನಸಮುದಾಯದವರ ಪ್ರಯತ್ನಗಳ ಬಗ್ಗೆ ಅವಳಿಗೆ ಸಂಪೂರ್ಣವಾಗಿ ಅರಿವಿರಲಿಲ್ಲ . ನಿಜವಾದ ಸೂರ್ಯೋದಯವಾದಾಗ, ಶಿವನು ಬರುವುದಿಲ್ಲ ಎಂಬುದು ಅವಳಿಗೆ ಅರಿವಾಯಿತು. ಅವಳು ಆವೇಶಗೊಂಡು, ವಿವಾಹ ಭೋಜನವನ್ನು ತುಂಬಿದ್ದ ಎಲ್ಲಾ ಮಡಕೆಗಳನ್ನು ಒದ್ದು ಒಡೆದಳು, ಮತ್ತು ಕೋಪದಲ್ಲಿ, ಭೂಪ್ರದೇಶದ ಅಂಚಿಗೆ ಹೋಗಿ ನಿಂತಳು. ಅವಳು ಒಬ್ಬ ಸಾಧನೆ ಮಾಡಿದ ಯೋಗಿನಿಯಾಗಿದ್ದಳು, ಉಪಖಂಡದ ಅತ್ಯಂತ ಅಂಚಿನಲ್ಲಿ ನಿಂತು, ತನ್ನ ದೇಹವನ್ನು ತ್ಯಜಿಸಿದಳು. ಇಂದಿಗೂ, ಅವಳು ದೇಹತ್ಯಾಗ ಮಾಡಿದ ಸ್ಥಳದಲ್ಲಿ ಒಂದು ದೇವಾಲಯವಿದೆ; ಆ ಸ್ಥಳವನ್ನು ಕನ್ಯಾಕುಮಾರಿ ಎಂದು ಕರೆಯಲಾಗುತ್ತದೆ.

ಶಿವನು ತಾನು ಪುಣ್ಯಾಕ್ಷಿಯನ್ನು ವಿಫಲಗೊಳಿಸಿದ್ದೇನೆ ಎಂದು ಭಾವಿಸಿ ತನ್ನ ಬಗ್ಗೆ ತುಂಬಾ ಹತಾಶೆ ಮತ್ತು ನಿರಾಶೆಗೊಂಡನು. ಅವನು ಹಿಂತಿರುಗಿ ನಡೆಯಲು ಪ್ರಾರಂಭಿಸಿದನು. ಆದರೆ ತನ್ನೊಳಗಿನ ಕೋಪದಿಂದಾಗಿ, ಅವನಿಗೆ ಕುಳಿತು ತನ್ನ ನಿರಾಶೆಯನ್ನು ನಿಭಾಯಿಸಲು ಒಂದು ಸ್ಥಳದ ಅಗತ್ಯವಿತ್ತು. ಆದ್ದರಿಂದ ಅವನು ವೆಳ್ಳಿಯಂಗಿರಿ ಪರ್ವತವನ್ನೇರಿ ಶಿಖರದ ಮೇಲೆ ಕುಳಿತನು. ಅವನು ಆನಂದದಲ್ಲಿ ಅಥವಾ ಧ್ಯಾನದಲ್ಲಿ ಕುಳಿತಿರಲಿಲ್ಲ. ಅವನು ತನ್ನ ಬಗ್ಗೆ ಒಂದು ರೀತಿಯ ನಿರಾಶೆ ಮತ್ತು ಕೋಪದಲ್ಲಿ ಕುಳಿತಿದ್ದನು. ಅವನು  ಬಹಳ ಸಮಯದವರೆಗೆ ಅಲ್ಲಿಯೇ ಉಳಿದನು ಮತ್ತು ಪರ್ವತವು ಅವನ ಶಕ್ತಿಯನ್ನು ಹೀರಿಕೊಂಡಿತು, ಇದು ಬೇರೆಡೆಗಿಂತ ಬಹಳ, ಬಹಳ ವಿಭಿನ್ನವಾಗಿದೆ.

ಸಾಂಪ್ರದಾಯಿಕವಾಗಿ, ಶಿವನು ಒಂದು ನಿರ್ದಿಷ್ಟ ಅವಧಿಗೆ ನೆಲೆಸಿದ ಯಾವುದೇ ಸ್ಥಳವನ್ನು ಕೈಲಾಸ ಎಂದು ಕರೆಯಲಾಗುತ್ತಿತ್ತು. ಆದ್ದರಿಂದ ಈ ಪರ್ವತವನ್ನು ದಕ್ಷಿಣದ ಕೈಲಾಸ ಎಂದು ಕರೆಯಲಾಗುತ್ತದೆ. ಎತ್ತರದಲ್ಲಿ ಮತ್ತು ಬಣ್ಣದಲ್ಲಿ, ಮತ್ತು ಬಹುಶಃ ಗಾತ್ರದಲ್ಲಿ, ವೆಳ್ಳಿಯಂಗಿರಿ ಹಿಮಾಲಯದ ಕೈಲಾಸಕ್ಕೆ ಹೋಲಿಸಲು ಸಾಧ್ಯವಿಲ್ಲದಿರಬಹುದು, ಆದರೆ ಶಕ್ತಿಯಲ್ಲಿ, ಸೊಬಗಿನಲ್ಲಿ ಮತ್ತು ಪಾವಿತ್ರ್ಯತೆಯಲ್ಲಿ, ಇದು ಯಾವುದಕ್ಕೂ ಕಡಿಮೆಯಿಲ್ಲ. ಸಾವಿರಾರು ವರ್ಷಗಳಿಂದ, ಅನೇಕ ಋಷಿಗಳು, ಯೋಗಿಗಳು ಮತ್ತು ಅನುಭಾವಿಗಳು ಈ ಪರ್ವತದಲ್ಲಿ ನಡೆದಿದ್ದಾರೆ. ವೆಳ್ಳಿಯಂಗಿರಿ ಪರ್ವತವು ಅದ್ಭುತವಾದ ಹಲವು ಅತೀಂದ್ರಿಯ ಕಾರ್ಯಗಳಿಗೆ ಸಾಕ್ಷಿಯಾಗಿದೆ. ದೇವತೆಗಳೂ ಅಸೂಯೆಪಡುವ ರೀತಿಯ ಎಷ್ಟೊಂದು ಜೀವಿಗಳು ಈ ಪರ್ವತದಲ್ಲಿ ನೆಲೆಸಿದ್ದರು, ಏಕೆಂದರೆ ಅವರು ಅಂತಹ ಅನುಗ್ರಹ ಮತ್ತು ಘನತೆಯಿಂದ ಬದುಕುತ್ತಿದ್ದವರು . ಈ ಮಹಾನ್ ಜೀವಿಗಳು ತಮಗೆ ತಿಳಿದಿದ್ದನ್ನು ಇಡೀ ಪರ್ವತವು ಹೀರಿಕೊಳ್ಳಲು ಅವಕಾಶ ಮಾಡಿಕೊಟ್ಟವರು, ಮತ್ತು ಅದು ಎಂದಿಗೂ ಕಳೆದುಹೋಗದು..

    Share

Related Tags

Get latest blogs on Shiva