logo
logo

ಆಊಮ್ ನಮಃ ಶಿವಾಯ ಅಥವಾ ಓಂ ನಮಃ ಶಿವಾಯ: ಮಹಾ ಮಂತ್ರವನ್ನು ಉಚ್ಚರಿಸುವುದು ಹೇಗೆ?

‘ಆಊಮ್ ನಮಃ ಶಿವಾಯ’ ನಮ್ಮ ವ್ಯವಸ್ಥೆಯನ್ನು ಶುದ್ಧೀಕರಿಸುವ ಮತ್ತು ಧ್ಯಾನಸ್ಥರಾಗಲು ಸಹಾಯ ಮಾಡುವ ಮಂತ್ರವಾಗಿದೆ. ಸದ್ಗುರುಗಳು ಈ ಮಂತ್ರವನ್ನು ಜಪಿಸುವುದರ ಅರ್ಥವನ್ನು ತಿಳಿಸುತ್ತಾ, ಅದನ್ನು ಓಂ ನಮಃ ಶಿವಾಯ ಎಂದು ಹೇಳದೆ ಏಕೆ ಆಊಮ್ ನಮಃ ಶಿವಾಯ ಎಂದು ಜಪಿಸಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ.
Table of Contents

ಮಂತ್ರ ಎಂದರೇನು?

ಸದ್ಗುರು: ಇಡೀ ಅಸ್ತಿತ್ವ ಶಬ್ದಗಳ ಸಂಕೀರ್ಣ ಸಂಯೋಜನೆ ಎಂದು ನಾವು ಯೋಗದಲ್ಲಿ ಹೇಳುತ್ತೇವೆ. ಅದರಲ್ಲಿ, ವಿಭಿನ್ನ ಆಯಾಮಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುವ ಕೆಲವು ಶಬ್ದಗಳನ್ನು ನಾವು ಗುರುತಿಸಿದ್ದೇವೆ. ಕೆಲವು ಶಬ್ದಗಳನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸಲಾಗುತ್ತದೆ - ಈ ಪ್ರಮುಖ ಶಬ್ದಗಳನ್ನು ಸಾಮಾನ್ಯವಾಗಿ ಮಂತ್ರಗಳು ಎಂದು ಕರೆಯಲಾಗುತ್ತದೆ. ವಿವಿಧ ರೀತಿಯ ಮಂತ್ರಗಳಿವೆ. ವಸ್ತುಗಳನ್ನು ವಶಪಡಿಸಿಕೊಳ್ಳಲು ಮತ್ತು ಸಂಪಾದಿಸಲು ಮಂತ್ರಗಳಿವೆ. ಸಂತೋಷ ಮತ್ತು ಪ್ರೀತಿಯನ್ನು ತರಲು ಮಂತ್ರಗಳಿವೆ. ಅನುಭವದ ಇತರ ಆಯಾಮಗಳನ್ನು ತಲುಪಲೂ ಕೂಡ ಮಂತ್ರಗಳು ಇವೆ.

ಯಾವಾಗಲೂ, ಪ್ರಪಂಚದ ಹೆಚ್ಚಿನ ಆಧ್ಯಾತ್ಮಿಕ ಮಾರ್ಗಗಳಲ್ಲಿ, ಸರಿಯಾದ ರೀತಿಯ ಅರಿವಿನೊಂದಿಗೆ ಮಂತ್ರವನ್ನು ಜಪಿಸುವುದು ಸಾಧನದ ಮೂಲ ವಿಧವಾಗಿದೆ. ಹೆಚ್ಚಿನ ಜನರು ಮಂತ್ರವಿಲ್ಲದೆ, ತಮ್ಮೊಳಗೆ, ಸರಿಯಾದ ಶಕ್ತಿಯ  ಮಟ್ಟಕ್ಕೆ ಏರಲು ಸಮರ್ಥರಾಗಿಲ್ಲ.  ನಾನು ಕಂಡುಕೊಂಡಂತೆ, ತೊಂಬತ್ತಕ್ಕಿಂತ ಹೆಚ್ಚು ಪ್ರತಿಶತ ಜನರಿಗೆ ತಮ್ಮನ್ನು ತಾವು ಸಕ್ರಿಯಗೊಳಿಸಿಕೊಳ್ಳಲು ಯಾವಾಗಲೂ ಮಂತ್ರದ ಅಗತ್ಯವಿದೆ. ಅದಿಲ್ಲದೆ, ಅವರು ಬೇಕಾದ ಶಕ್ತಿಯ ಮಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.

ಯೋಗ ಸಂಸ್ಕೃತಿಯಲ್ಲಿ ಮಹಾಮಂತ್ರವೆಂದು ಪರಿಗಣಿಸಲಾಗಿರುವ ಮೂಲ ಮಂತ್ರವೆಂದರೆ "ಆಊಮ್ ನಮಃ ಶಿವಾಯ."

ಆಊಮ್ ನಮಃ ಶಿವಾಯ ಅಥವಾ ಓಂ ನಮಃ ಶಿವಾಯ?

"ಆಊಮ್" ಶಬ್ದವನ್ನು "ಓಂ" ಎಂದು ಉಚ್ಚರಿಸಬಾರದು. ನಿಮ್ಮ ಬಾಯಿ ತೆರೆದು ಇದನ್ನು ಉಚ್ಚರಿಸಬೇಕು - "ಆ" ಮತ್ತು ನೀವು ನಿಧಾನವಾಗಿ ಬಾಯಿಯನ್ನು ಮುಚ್ಚಿದಾಗ, ಅದು "ಊ" ಮತ್ತು "ಮ್" ಆಗುತ್ತದೆ. ಇದು ಅದಾಗಿಯೇ ಆಗುವ ಘಟನೆ, ನೀವು ಮಾಡಬೇಕಾದ ಕೆಲಸ ಅಲ್ಲ. ನೀವು ಬಾಯಿಯನ್ನು ತೆರೆದು ಉಸಿರನ್ನು ಹೊರಹಾಕಿದರೆ, ಅದು ""ಆ" ಆಗುತ್ತದೆ. ನಿಧಾನವಾಗಿ ಬಾಯಿಯನ್ನು ಮುಚ್ಚುವಾಗ, ಅದು "ಊ" ಆಗುತ್ತದೆ ಮತ್ತು ನೀವು ಪೂರ್ತಿ ಮುಚ್ಚಿದಾಗ ಅದು "ಮ್" ಆಗುತ್ತದೆ. "ಆ", "ಊ" ಮತ್ತು "ಮ್" ಅಸ್ತಿತ್ವದ ಮೂಲಭೂತ ಶಬ್ದಗಳು. ನೀವು ಈ 3 ಶಬ್ದಗಳನ್ನು ಒಟ್ಟಿಗೆ ಉಚ್ಚರಿಸಿದರೆ, ನೀವು "ಆಊಮ್" ಅನ್ನು ಪಡೆಯುತ್ತೀರಿ. "ಆಊಮ್" ಅತ್ಯಂತ ಮೂಲಭೂತ ಮಂತ್ರ. ಆದ್ದರಿಂದ, ಮಹಾಮಂತ್ರವನ್ನು "ಓಂ ನಮಃ ಶಿವಾಯ" ಎಂದು ಹೇಳಬಾರದು - "ಆಊಮ್ ನಮಃ ಶಿವಾಯ" ಎಂದು ಹೇಳಬೇಕು.

ಮಂತ್ರವನ್ನು ಕರ್ಮದ ಬಲೆಗಳನ್ನು ಬಿಡಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ನಿಮ್ಮ ಗ್ರಹಿಕೆ ವರ್ಧಿಸಿ, ನೀವು ಅಸ್ತಿತ್ವದ ಮಹತ್ತರ ಆಯಾಮಕ್ಕೆ ಲಭ್ಯವಾಗುತ್ತೀರಿ.

ಇದು 'ಲಯ'ಕಾರಕನಾದ ಶಿವನ ಮಂತ್ರ. ಅವನು ನಾಶಮಾಡುವುದು ನಿಮ್ಮನ್ನಲ್ಲ, ನಿಮ್ಮ ಮತ್ತು ಜೀವನದ ದೊಡ್ಡ ಸಾಧ್ಯತೆಗಳ ನಡುವೆ ತಡೆಗೋಡೆಯಾಗಿ ನಿಂತಿರುವುದನ್ನು 'ಲಯ'ಗೊಳಿಸುತ್ತಾನೆ. ಮಂತ್ರವನ್ನು ಕರ್ಮದ ಬಲೆಗಳನ್ನು ಬಿಡಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ನಿಮ್ಮ ಗ್ರಹಿಕೆ ವರ್ಧಿಸಿ, ನೀವು ಅಸ್ತಿತ್ವದ ಮಹತ್ತರ ಆಯಾಮಕ್ಕೆ ಲಭ್ಯವಾಗುತ್ತೀರಿ.

“ಆಊಮ್' ನಮಃ ಶಿವಾಯ” ದ ಪಂಚಾಕ್ಷರಗಳು

"ನ-ಮಃ ಶಿ-ವಾ-ಯ" ವನ್ನು ಪಂಚಾಕ್ಷರಗಳು ಅಥವಾ ಐದು ಅಕ್ಷರಗಳೆಂದು ಕರೆಯಲಾಗುತ್ತದೆ. ಈ ಮಂತ್ರವು ಅಸಾಧಾರಣವಾದದ್ದನ್ನು ಮಾಡಬಲ್ಲ, ಕೇವಲ ಐದು ಅಕ್ಷರಗಳ ಅದ್ಭುತ ರಚನೆ. ಕಾಲದ ಇತಿಹಾಸದುದ್ದಕ್ಕೂ, ಬಹುಶಃ ಅತ್ಯಧಿಕ ಜನರು ಈ ಐದು ಅಕ್ಷರಗಳ ಮೂಲಕ ತಮ್ಮ ಪರಮ ಸಾಮರ್ಥ್ಯವನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೆ.

ಪಂಚಾಕ್ಷರಗಳು ಮಾನವ ವ್ಯವಸ್ಥೆಯ ಐದು ಮುಖ್ಯ ಕೇಂದ್ರಗಳಿಗೆ ಸಂಬಂಧಿಸಿವೆ ಮತ್ತು ಅವುಗಳನ್ನು ಸಕ್ರಿಯಗೊಳಿಸುವ ಮಾರ್ಗವಾಗಿದೆ. ಈ ಮಂತ್ರವನ್ನು ಶುದ್ಧೀಕರಣ ಪ್ರಕ್ರಿಯೆಯಾಗಿ ಬಳಸಬಹುದು ಮತ್ತು ಅದೇ ಸಮಯದಲ್ಲಿ ನಾವು ಸಾಧಿಸಬಹುದಾದ ಎಲ್ಲಾ ಧ್ಯಾನಶೀಲತೆಗೆ ಅಡಿಪಾಯವಾಗಿಯೂ ಬಳಸಬಹುದು. ಇಲ್ಲದಿದ್ದರೆ, ಹೆಚ್ಚಿನ ಜನರು ಮಂತ್ರಗಳ ಸಾಕಷ್ಟು ಕಂಪನವನ್ನು ತಮ್ಮೊಳಗೆ ಸೃಷ್ಟಿಸದೆ, ತಮ್ಮ ಧ್ಯಾನಶೀಲತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಂತ್ರ ನಿಮ್ಮ ಜೀವನದಲ್ಲಿ ತರಬೇಕಾದ ಬಹಳ ಮುಖ್ಯವಾದ ಮಾಪನ, ಇದು ನಿಮ್ಮ ವರ್ತನೆಗಳು ಮತ್ತು ನಿಮ್ಮ ದೈಹಿಕ ಶಕ್ತಿಗಳು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಕೆಳಗೆ ಇಳಿಯುವುದನ್ನು ತಡೆಯಲು ಅಗತ್ಯವಾದ ಮೂಲ ಕಂಪನವನ್ನು ನೀಡುತ್ತದೆ.

ಈ ಪಂಚಾಕ್ಷರಗಳು ಪ್ರಕೃತಿಯಲ್ಲಿರುವ ಪಂಚಭೂತಗಳನ್ನು ಸಹ ಪ್ರತಿನಿಧಿಸುತ್ತವೆ. ‘ನ’ ಎಂದರೆ ಭೂಮಿ, ‘ಮ’ ಎಂದರೆ ನೀರು, ‘ಶಿ’ ಎಂದರೆ ಅಗ್ನಿ, ‘ವಾ’ ಎಂದರೆ ವಾಯು, ಮತ್ತು ‘ಯ’ ಎಂದರೆ ಆಕಾಶ. ನೀವು ಪಂಚಾಕ್ಷರಗಳ ಮೇಲೆ ಪ್ರಭುತ್ವ ಪಡೆದರೆ, ಪಂಚಭೂತಗಳಿಂದ ರೂಪುಗೊಂಡಿರುವ ಎಲ್ಲವನ್ನೂ ನೀವು ಪ್ರಜ್ಞಾಪೂರ್ವಕವಾಗಿ ಕರಗಿಸಬಹುದು.

ಪಂಚಭೂತಗಳ ಅಧಿಪತಿ, ಜೀವನದ ಅಧಿಪತಿ

ಶಿವನ ಅತ್ಯಂತ ಮುಖ್ಯವಾದ ಅಂಶವೆಂದರೆ ಅವನು ಭೂತೇಶ್ವರ - ಪಂಚಭೂತಗಳ ಮೇಲೆ ಪ್ರಭುತ್ವ ಹೊಂದಿದವನು. ಇಡೀ ಸೃಷ್ಟಿಯು ಈ ಐದು ಅಂಶಗಳ ಆಟವಷ್ಟೇ. ಕೇವಲ ಐದು ಪದಾರ್ಥಗಳೊಂದಿಗೆ ಎಂತಹ ಭವ್ಯವಾದ ಸೃಷ್ಟಿ! ನೀವು ಈ ಐದು ಅಂಶಗಳ ಮೇಲೆ ಸ್ವಲ್ಪ ಮಟ್ಟಿಗಾದರೂ ಪ್ರಭುತ್ವ ಹೊಂದಿದ್ದರೆ, ನೀವು ಜೀವನ ಮತ್ತು ಮರಣದ ಮೇಲೆ ಹಾಗೂ ನಿಮ್ಮ ಸುತ್ತಲಿನ ಎಲ್ಲದರ ಮೇಲೆ ಪ್ರಭುತ್ವ ಹೊಂದಿರುತ್ತೀರಿ, ಏಕೆಂದರೆ ಎಲ್ಲವೂ ಈ ಐದು ಅಂಶಗಳಿಂದ ಮಾಡಲ್ಪಟ್ಟಿದೆ. ಯೋಗದ ಅತ್ಯಂತ ಮೂಲಭೂತ ಅಭ್ಯಾಸವೆಂದರೆ ಭೂತ ಶುದ್ಧಿ ಅಥವಾ ನಿಮ್ಮ ವ್ಯವಸ್ಥೆಯಲ್ಲಿನ ಐದು ಅಂಶಗಳನ್ನು ಶುದ್ಧೀಕರಿಸುವುದು ಮತ್ತು ಅವುಗಳ ಮೇಲೆ ಹಿಡಿತ ಸಾಧಿಸುವುದು.

ನೀವು ಪಂಚಭೂತಗಳ ಮೇಲೆ ಪ್ರಭುತ್ವ ಸಾಧಿಸಿದರೆ, ನಿಮ್ಮ ಭೌತಿಕತೆಯ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿದಂತೆ, ಏಕೆಂದರೆ ನಿಮ್ಮ ಸಮಸ್ತ ಭೌತಿಕತೆಯು ಈ ಐದು ಪದಾರ್ಥಗಳ ಆಟವಷ್ಟೇ. ಈ ಐದು ಅಂಶಗಳು, ಅವುಗಳು ಹೇಗೆ ಕಾರ್ಯನಿರ್ವಹಿಸಬೇಕೆಂಬ ಬಗ್ಗೆ ನಿಮ್ಮಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಆಗ ಆರೋಗ್ಯ, ಯೋಗಕ್ಷೇಮ, ಯಶಸ್ಸು ಮತ್ತು ಜೀವನದ ಮೇಲಿನ ಪ್ರಭುತ್ವವು ಸಹಜವಾಗಿ ಬರುತ್ತದೆ.

    Share

Related Tags

ಶಿವ ಸ್ತೋತ್ರಗಳು

Get latest blogs on Shiva

Related Content

Presence of Shiva