ಸದ್ಗುರು: ಕೇದಾರನಾಥ ಒಂದು ಅಸಾಧಾರಣ ಸ್ಥಳ. "ಶಿವ" ಶಬ್ದದ ಉಚ್ಚಾರಣೆಯು ಇಲ್ಲಿ ಸಂಪೂರ್ಣವಾಗಿ ಹೊಸ ಆಯಾಮ ಮತ್ತು ಮಹತ್ವವನ್ನು ಪಡೆಯುತ್ತದೆ. ಇದು ಈ ನಿರ್ದಿಷ್ಟ ಶಬ್ದಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ಸ್ಥಳವಾಗಿದೆ. ನಾವು "ಶಿವ" ಎಂಬ ಪದವನ್ನು ಉಚ್ಚರಿಸಿದಾಗ ಅದು ಸ್ವಯಂಭೂವಿನ ಸ್ವತಂತ್ರ, ಸೃಷ್ಟಿಯೇ ಆಗದ್ದರ ವಿಮೋಚನೆ. ಹೀಗೆ ಹೇಳಿದರೆ ತಪ್ಪಾಗಬಹುದೇನೋ, ಆದರೆ ಈ ಭೂಗ್ರಹದ ಮೇಲೆ ಬಹುತೇಕ "ಶಿವ" ಎಂಬ ಶಬ್ದವು ಕೇದಾರನಾಥದಿಂದ ಹೊರಹೊಮ್ಮುತ್ತದೆ. ಸಾವಿರಾರು ವರ್ಷಗಳಿಂದ, ಜನರು ಆ ಶಬ್ದದ ಪ್ರತಿಧ್ವನಿಯಾಗಿ ಆ ಜಾಗದ ಅನುಭವ ಪಡೆದಿದ್ದಾರೆ.
ನಾವು "ಶಿವ" ಎಂದು ಹೇಳಿದಾಗ, ನಾವು ಜೀವನದಲ್ಲಿ ಹೆಚ್ಚು ಸಮೃದ್ಧಿ ಅಥವಾ ಉತ್ತಮ ವಿಷಯಗಳನ್ನು ಬೇಡಲು ಮತ್ತೊಂದು ವಿಗ್ರಹ ಅಥವಾ ದೇವರನ್ನು ರಚಿಸುವುದರ ಬಗ್ಗೆ ಅಲ್ಲ. "ಶಿವ" ಎಂಬ ಪದದ ಅರ್ಥ "ಏನೂ ಅಲ್ಲದೇ ಇರುವುದು ಅಥವಾ ಶೂನ್ಯ". ಇಂದು, ಆಧುನಿಕ ವಿಜ್ಞಾನವು ನಮಗೆ ರುಜುವಾತುಪಡಿಸುತ್ತಿರುವುದೇನೆಂದರೆ, ಎಲ್ಲವೂ ಶೂನ್ಯದಿಂದ ಬರುತ್ತದೆ ಮತ್ತು ಶೂನ್ಯಕ್ಕೆ ಹಿಂತಿರುಗುತ್ತದೆ ಎಂದು. ಅಸ್ತಿತ್ವದ ಆಧಾರ ಮತ್ತು ಬ್ರಹ್ಮಾಂಡದ ಮೂಲಭೂತ ಗುಣ, ವಿಶಾಲವಾದ ಶೂನ್ಯತೆಯಾಗಿದೆ. ಅದರಲ್ಲಿ ಗ್ಯಾಲಕ್ಸಿಗಳು ಕೇವಲ ಒಂದು ಸಣ್ಣ ಅಂಶವಾಗಿವೆ - ಸಣ್ಣ ಹನಿಯಂತೆ. ಉಳಿದವು ಎಲ್ಲಾ ವಿಶಾಲವಾದ ಖಾಲಿ ಜಾಗವಾಗಿದೆ, ಇದನ್ನು ‘ಶಿವ’ ಎಂದು ಕರೆಯಲಾಗುತ್ತದೆ.
ಕುರುಕ್ಷೇತ್ರ ಯುದ್ಧದ ನಂತರ, ಪಾಂಡವರು ತಮ್ಮ ಸ್ವಂತ ಬಂಧುಗಳನ್ನು - ತಮ್ಮ ಸ್ವಂತ ಸಹೋದರರು ಮತ್ತು ಸಂಬಂಧಿಕರನ್ನು ಹತ್ಯೆಗೈದ ಕಾರಣ ಅದರಿಂದ ಬಹಳಷ್ಟು ಪಶ್ಚಾತ್ತಾಪಕ್ಕೊಳಗಾಗಿದ್ದರು ಎಂಬ ದಂತಕಥೆಯಿದೆ. ಇದನ್ನು ಗೋತ್ರವಧೆ ಎಂದು ಕರೆಯಲಾಯಿತು. ಈ ಕೃತ್ಯದಿಂದ ಅವರು ತಮ್ಮನ್ನು ತಪ್ಪಿತಸ್ಥರೆಂದು ಭಾವಿಸಿದರು ಮತ್ತು ಅಪಮಾನಕ್ಕೊಳಗಾದರು ಮತ್ತು ಅದರಿಂದ ತಮ್ಮನ್ನು ತಾವು ಮುಕ್ತಗೊಳಿಸಲು ಒಂದು ಮಾರ್ಗವನ್ನು ಹುಡುಕುತ್ತಿದ್ದರು. ಆದಕ್ಕಾಗಿ ಅವರು ಶಿವನನ್ನು ಅರಸಿ ಹೋದರು.
ಈ ಘೋರ ಕೃತ್ಯದಿಂದ ಹಠಾತ್ತನೆ ಮುಕ್ತಿ ಹೊಂದುವ ಆನಂದವನ್ನು ಅವರಿಗೆ ನೀಡುವ ಇಚ್ಛೆ ಶಿವನಿಗೆ ಇರಲಿಲ್ಲ, ಹಾಗಾಗಿ ಅವನು ನಂದಿಯ ರೂಪಕ್ಕೆ ತನ್ನನ್ನು ಪರಿವರ್ತಿಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಅವರು ಅವನನ್ನು ಹಿಂಬಾಲಿಸಿ, ಹಿಡಿಯಲು ಪ್ರಯತ್ನಿಸಿದರು. ಶಿವನು ನೆಲದೊಳಗೆ ಹೋದನು ಮತ್ತು ಅವನು ಮೇಲಕ್ಕೆ ಬಂದಾಗ, ದೇಹದ ವಿವಿಧ ಭಾಗಗಳು ವಿವಿಧ ಸ್ಥಳಗಳಲ್ಲಿ ಹೊರಬಂದವು. ನಂದಿಯ ಗೂನು ಕೇದಾರನಾಥ, ಎರಡು ಮುಂಗಾಲುಗಳು ತುಂಗನಾಥ - ಇದು ಕೇದಾರಕ್ಕೆ ಹೋಗುವ ದಾರಿಯಲ್ಲಿದೆ. ನಾಭಿ - ಹಿಮಾಲಯದ ಭಾರತದ ಭಾಗದಲ್ಲಿ ಮಧ್ಯ-ಮಹೇಶ್ವರ ಎಂದು ಕರೆಯಲ್ಪಡುವ ಸ್ಥಳದಲ್ಲಿ ಕಾಣಿಸಿಕೊಂಡಿತು, ಇದು ಅತ್ಯಂತ ಶಕ್ತಿಯುತವಾದ ಮಣಿಪೂರಕ ಲಿಂಗವಾಗಿದೆ ಮತ್ತು ಶಿವನ ಜಟೆಗಳು ಕಲ್ಪನಾಥ್ ಎಂದು ಕರೆಯಲ್ಪಡುವ ಸ್ಥಳದಲ್ಲಿ ಕಾಣಿಸಿಕೊಂಡವು. ಇದರಂತೆ, ದೇಹದ ವಿವಿಧ ಭಾಗಗಳು ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡವು.
ದೇಹದ ಭಾಗಗಳ ಈ ವಿವರಣೆಯು ಏಳು ಚಕ್ರಗಳೊಂದಿಗೆ ಒಂದು ರೀತಿಯಲ್ಲಿ ಸಂಬಂಧ ಹೊಂದಿದೆ. ಈ ದೇವಾಲಯಗಳನ್ನು ಮಾನವ ದೇಹವಾಗಿ ಸ್ಥಾಪಿಸಲಾಗಿದೆ. ಬೃಹತ್ ದೇಹವನ್ನು ರಚಿಸುವ ಈ ಪ್ರಯತ್ನ, ಒಂದು ದೊಡ್ಡ ಪ್ರಯೋಗವಾಗಿತ್ತು. ಅಂತಹ ಒಂದು ದೇಹವು ಭಾರತೀಯ ಹಿಮಾಲಯದ ದಿಕ್ಕಿನಲ್ಲಿ ಸಂಭವಿಸಿದೆ. ಅಂತಹ ಇನ್ನೊಂದು ದೇಹವು ಪಶ್ಚಿಮ ದಿಕ್ಕಿನ ಕಡೆಗೆ ಸಾಗಿತು, ಅಲ್ಲಿ ಅವರು ನೇಪಾಳವನ್ನೇ ದೇಹವಾಗಿ ಪರಿವರ್ತಿಸಲು ಪ್ರಯತ್ನಿಸಿದರು.
ಆಧ್ಯಾತ್ಮಿಕ ಉನ್ನತಿಯನ್ನು ಬಯಸುವವರಿಗೆ, ಕೇದಾರನಾಥವು ಒಂದು ವರವಾಗಿದೆ, ಅದರ ಪ್ರಮಾಣವನ್ನು ನೀವು ಊಹಿಸಲು ಸಾಧ್ಯವಿಲ್ಲ. ಅದೇನೆಂಬುದನ್ನು ವಿವರಿಸುವುದು ತುಂಬಾ ಕಷ್ಟ. ಅದು ಕೇವಲ ಸ್ವಲ್ಪ ಹೊರಹೊಮ್ಮಿರುವ ಒಂದು ಕಲ್ಲಷ್ಟೇ, ಆದರೆ ಸಾವಿರಾರು ವರ್ಷಗಳಿಂದ ಇಲ್ಲಿ ಜೀವಿಸಿದ್ದ ಆ ದಿವ್ಯ ಚೇತನರು ಮಾಡಿದ ಕೆಲಸಗಳು, ಈ ಜಾಗಕ್ಕೆ ಅಗಾಧವಾದ ವ್ಯತ್ಯಾಸವನ್ನು ಉಂಟುಮಾಡುತ್ತವೆ. ಅನೇಕ ಯೋಗಿಗಳು ತಮ್ಮ ದೇಹವನ್ನು ತ್ಯಜಿಸಿದ ಸ್ಥಳ ಇದು. ಇದು ನೀವು ಅನುಭವಿಸಲೇಬೇಕಾದ ವಿಷಯ. ಭಾರತದಲ್ಲಿ ಹುಟ್ಟಿದ ಮೇಲೆ, ವಯಸ್ಸಾಗಿ ಏನೂ ಮಾಡದೇ ಇರುವ ಸ್ಥಿತಿಗೆ ತಲುಪುವ ಮೊದಲು ನೀವು ಒಮ್ಮೆ ಹಿಮಾಲಯಕ್ಕೆ ಭೇಟಿ ನೀಡಬೇಕು.
ಆದಿ ಶಂಕರರು ಅತ್ಯಂತ ಬುದ್ಧಿವಂತ ಚೇತನರು, ಭಾಷಾಶಾಸ್ತ್ರದ ಮೇಧಾವಿ. ಅವರ ಜೀವನದ ಅಲ್ಪಾವಧಿಯಲ್ಲಿ, ಅವರು ಈ ರಾಷ್ಟ್ರದ ಉದ್ದಗಲವನ್ನು ಕ್ರಮಿಸಿದ್ದರು. ಶಂಕರಾಚಾರ್ಯರು "ಕಾಲಡಿ" ಎಂಬ ಹಳ್ಳಿಯಿಂದ ಬಂದವರು, ಅಕ್ಷರಶಃ ಇದರರ್ಥ "ಕಾಲುಗಳ ಕೆಳಗೆ" ಎಂದು. ದಕ್ಷಿಣದಲ್ಲಿ ನಾವು ಭಾರತ ಮಾತೆಯ ಪಾದದಲ್ಲಿದ್ದೇವೆ. ಭಾರತ ಎಂದರೆ ನಾವು ಯಾವಾಗಲೂ ದೈವತ್ವದ ಪಾದದಲ್ಲಿ ಹೇಗೆ ಇರಬೇಕೆಂದು ಕಲಿತಿದ್ದೇವೆ. ದೈವತ್ವದ ಪಾದದಲ್ಲಿರುವುದರ ಮೂಲಕ ನಾವು ವಿಕಸನಗೊಂಡಿದ್ದೇವೆ ಮತ್ತು ನಮ್ಮ ಪೂರ್ಣತೆಗೆ ಅರಳಿದ್ದೇವೆ. ಇದು ಅತಿರೇಕಗೊಂಡ ಆಡಂಬರದ ಸಂಸ್ಕೃತಿಯಲ್ಲ, ಸಹಜ ದೈವಭಕ್ತಿಯ ಸಂಸ್ಕೃತಿ.
ಆದಿಶಂಕರರು "ಎಲ್ಲವೂ ಮಾಯೆ" ಎಂದು ಹೇಳಿದ್ದಾರೆ. ಮಾಯೆ ಎಂದರೆ "ಭ್ರಮೆ", ಅರ್ಥಾತ್ ನೀವು ‘ಅದನ್ನು’, ಅದು ‘ಇರುವ’ ರೀತಿಯಲ್ಲಿ ನೋಡುತ್ತಿಲ್ಲ. ಇಲ್ಲಿ ನೀವು ಮೇಲ್ನೋಟಕ್ಕೆ ಈ ಘನವಾದ ದೇಹದೊಂದಿಗೆ ಇದ್ದೀರಿ, ಆದರೆ ನೀವು ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯೊಂದಿಗೆ ನಿಮ್ಮ ದೇಹದ ಜೀವಕೋಶಗಳು ದಿನನಿತ್ಯ ಬದಲಾಗುತ್ತಿವೆ. ಇದರರ್ಥ ಸ್ವಲ್ಪ ಸಮಯದ ನಂತರ, ನೀವು ಸಂಪೂರ್ಣವಾಗಿ ಹೊಸ ದೇಹವನ್ನು ಹೊಂದಿರುತ್ತೀರಿ. ಆದರೆ ನಿಮ್ಮ ಅನುಭವದಲ್ಲಿ, ಏನೂ ಬದಲಾಗಿಲ್ಲ, ಇದು ಒಂದೇ ವಿಷಯ ಎಂದು ತೋರುತ್ತದೆ - ಇದು ಮಾಯೆ. ಅಂತೆಯೇ, ಪಂಚೇಂದ್ರಿಯಗಳ ಮೂಲಕ ನೀವು ಅಸ್ತಿತ್ವವನ್ನು ಗ್ರಹಿಸುವ ರೀತಿ ಸಂಪೂರ್ಣವಾಗಿ ಸತ್ಯಕ್ಕೆ ದೂರದಲ್ಲಿದೆ - ಇದು ಭ್ರಮೆಯ ಬಗ್ಗೆ, ಮಾಯೆಯ ಬಗ್ಗೆ ಶಂಕರರು ಹೇಳಿದ ಮಾತು.
ಒಮ್ಮೆ ಕಾಶಿಯಲ್ಲಿ ಶಂಕರರು ಮುಂಜಾನೆ ಸ್ನಾನ ಮುಗಿಸಿ ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಾಗ ನಡೆದ ಘಟನೆಯ ಬಗ್ಗೆ ಒಂದು ಕಥೆಯಿದೆ. ದೇವಸ್ಥಾನದೊಳಗೆ ಹೋಗುತ್ತಿರುವಾಗ ದಾರಿಯಲ್ಲಿ ಒಬ್ಬ ಚಂಡಾಲ ಬಂದನು. ಚಂಡಾಲರು ಸ್ಮಶಾನ ಭೂಮಿಯನ್ನು ನಿರ್ವಹಿಸುವ ನಿರ್ದಿಷ್ಟ ಜಾತಿಯ ಜನರು. ಅವರನ್ನು ಅತ್ಯಂತ ಕೆಳಮಟ್ಟದ ಜನರು ಮತ್ತು ಅಶುಭವೆಂದು ಪರಿಗಣಿಸಲಾಗಿತ್ತು. ಚಂಡಾಲನನ್ನು ಕಂಡರೆ ಸಾವು ಬರುತ್ತದೆ ಎಂಬ ನಂಬಿಕೆ ಇತ್ತು. ಯಾರೂ ಅವರೊಂದಿಗೆ ಏನನ್ನೂ ಮಾಡಲು ಬಯಸುತ್ತಿರಲಿಲ್ಲ, ಮತ್ತು ಅವರನ್ನು ದೂರವಿಡಲಾಗಿತ್ತು
ಹಾಗಾಗಿ ಈ ಮನುಷ್ಯ ಶಂಕರರ ಮುಂದೆ ಬಂದಾಗ, ಅವರು "ದೂರ ಹೋಗು" ಎಂದು ಹೇಳಿದರು. ಆಗ ಆ ವ್ಯಕ್ತಿ ಅಲ್ಲಿಯೇ ನಿಂತು, "ಯಾರು ದೂರ ಹೋಗಬೇಕು? - ನಾನೋ ಅಥವಾ ನನ್ನ ದೇಹವೋ,” ಎಂದು ಕೇಳಿದನು. ಇದು ಶಂಕರರಿಗೆ ಬಹಳ ಆಳವಾಗಿ ನಾಟಿತು. ಅವರು "ಈ ದೇಹವು ನೀನಲ್ಲ, ಇದೆಲ್ಲ ಮಾಯೆ" ಎಂದು ಎಲ್ಲರಿಗೂ ಬೋಧಿಸುತ್ತಾ ಸಾಗಿದ್ದರು. ಆದರೆ ಈಗ ಈ ಮನುಷ್ಯನು ಈ ಪ್ರಶ್ನೆಯನ್ನು ಕೇಳಿದಾಗ ಅದು ಅವರಿಗೆ ಆಳದಲ್ಲಿ ನಾಟಿತು. ಅದರ ನಂತರ, ಅವರು ಒಂದು ಮಾತನ್ನೂ ಆಡಲಿಲ್ಲ, ಯಾರಿಗೂ ಏನನ್ನೂ ಬೋಧಿಸಲಿಲ್ಲ. ಅವರು ನೇರವಾಗಿ ಹಿಮಾಲಯಕ್ಕೆ ಹೋದರು. ಕೇದಾರನಾಥದಲ್ಲಿ, ಇಂದಿಗೂ ಅವರಿಗಾಗಿ ಒಂದು ಸ್ಮಾರಕವಿದೆ, ಅದು ಶಂಕರರು ಕಾಣಿಸಿಕೊಂಡ ಕೊನೆಯ ಸ್ಥಳ. ಅವರು ಹಾಗೇ ಮೇಲೆ ನಡೆದುಕೊಂಡು ಹೋಗಿ ಶಿವನೊಂದಿಗೆ ವಿಲೀನಗೊಂಡರು ಎಂಬ ಕಥೆಗಳಿವೆ.
ಇದು ನಮ್ಮ ರಾಷ್ಟ್ರ ಮತ್ತು ಸಂಸ್ಕೃತಿಯ ಮೂಲಭೂತ ಸ್ವಭಾವವಾಗಿದೆ - ನಾವು ನಮ್ಮ ದಾರಿಯಲ್ಲಿ ಬರುವವರನ್ನು ತಳ್ಳಿ ಮೇಲೆ ಬರುವವರಲ್ಲ - ನಾವು ನಮಸ್ಕರಿಸುವುದರ ಮೂಲಕ ಮೇಲೇರುವವರು. ದೇವರು, ಪುರುಷ, ಮಹಿಳೆ, ಮಗು, ಪ್ರಾಣಿ, ಮರ ಅಥವಾ ಬಂಡೆ - ನಾವು ಎಲ್ಲದಕ್ಕೂ ನಮಸ್ಕರಿಸುವುದನ್ನು ಕಲಿತಿದ್ದೇವೆ. ಇದು ನಮ್ಮ ಶಕ್ತಿಯಾಗಿದೆ, ಇದು ನಮ್ಮ ಮಾರ್ಗವಾಗಿದೆ, ಇದು ನಮ್ಮ ವಿಕಸನದ ಮತ್ತು ಸಾಕ್ಷಾತ್ಕಾರದ ಪ್ರಕ್ರಿಯೆ ಮತ್ತು ವಿಧಾನವಾಗಿದೆ.
ಬದರಿನಾಥವು ಹಿಮಾಲಯದಲ್ಲಿ ಸುಮಾರು 13700 ಅಡಿ ಎತ್ತರದಲ್ಲಿರುವ ಭವ್ಯವಾದ ಸ್ಥಳವಾಗಿದೆ. ಬದರಿನಾಥದ ಬಗ್ಗೆ ಒಂದು ದಂತಕಥೆ ಇದೆ. ಇಲ್ಲಿ ಶಿವ ಮತ್ತು ಪಾರ್ವತಿ ವಾಸಿಸುತ್ತಿದ್ದರು. ಒಂದು ದಿನ ಶಿವ ಮತ್ತು ಪಾರ್ವತಿ ವಾಯು ವಿಹಾರಕ್ಕೆ ತೆರಳಿದ್ದರು. ಅವರು ಹಿಂತಿರುಗಿ ಬಂದಾಗ ಅವರ ಮನೆಯ ದ್ವಾರದಲ್ಲಿ ಒಂದು ಪುಟ್ಟ ಮಗು ಅಳುತ್ತಿತ್ತು. ಬಹಳ ದುಃಖದಿಂದ ಅಳುತ್ತಿರುವ ಈ ಮಗುವನ್ನು ನೋಡಿದಾಗ ಪಾರ್ವತಿಯ ತಾಯಿಯ ಕರುಳು ಮಗುವನ್ನು ಎತ್ತಿಕೊಳ್ಳಲು ಬಯಸಿತು. ಶಿವ ಅವಳನ್ನು ತಡೆದು, “ಆ ಮಗುವನ್ನು ಮುಟ್ಟಬೇಡ” ಎಂದನು. ಅದಕ್ಕೆ ಪಾರ್ವತಿ, “ಎಂತಹ ಕ್ರೂರತನವಿದು, ನೀವು ಈ ರೀತಿ ಹೇಗೆ ಹೇಳಲು ಸಾಧ್ಯ? ” ಎಂದಳು.
ಅದಕ್ಕೆ ಶಿವನು, “ಇದು ಒಳ್ಳೆಯ ಮಗು ಅಲ್ಲ. ಅದು ತಾನಾಗಿಯೇ ನಮ್ಮ ಮನೆಯ ಬಾಗಿಲ ಬಳಿ ಏಕೆ ಬಂದಿದೆ? ಸುತ್ತಲೂ ಯಾರೂ ಇಲ್ಲ, ಈ ಹಿಮದಲ್ಲಿ ಅದರ ಪೋಷಕರ ಹೆಜ್ಜೆಗುರುತುಗಳು ಸಹ ಇಲ್ಲ. ಇದು ಮಗುವಲ್ಲ.” ಎಂದನು. ಆದರೆ ಪಾರ್ವತಿ, “ಅದೆಲ್ಲಾ ನನಗೆ ಗೊತ್ತಿಲ್ಲ! ನನ್ನೊಳಗಿರುವ ತಾಯಿ ಈ ಮಗುವನ್ನು ಇಲ್ಲಿ ಈ ರೀತಿ ಬಿಡಲು ಒಪ್ಪುವುದಿಲ್ಲ” ಎಂದು ಮಗುವನ್ನು ಮನೆಯೊಳಗೆ ಕರೆದುಕೊಂಡು ಹೋದಳು. ಮಗು ತುಂಬಾ ಆರಾಮದಾಯಕವಾಗಿ, ಉಲ್ಲಾಸಭರಿತದಿಂದ ಶಿವನೆಡೆ ನೋಡುತ್ತ ಪಾರ್ವತಿಯ ತೊಡೆಯ ಮೇಲೆ ಕುಳಿತಿತ್ತು. ಇದರ ಪರಿಣಾಮವು ಶಿವನಿಗೆ ತಿಳಿದಿತ್ತು ಆದರೆ ಅವನು, "ಸರಿ, ಏನಾಗುತ್ತೊ ನೋಡೋಣ" ಎಂದು ಸುಮ್ಮನಿದ್ದ.
ಪಾರ್ವತಿ, ಮಗುವಿಗೆ ಆರೈಕೆ ಮಾಡಿ, ಊಟ ಮಾಡಿಸಿ, ಮನೆಯಲ್ಲಿ ಬಿಟ್ಟು ಶಿವನೊಂದಿಗೆ ಹತ್ತಿರದ ಬಿಸಿನೀರಿನ ಬುಗ್ಗೆಗೆ ಸ್ನಾನಕ್ಕೆ ಹೋದಳು. ಮರಳಿ ಬಂದು ನೋಡಿದಾಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡು ಬಂತು. ಪಾರ್ವತಿ ಗಾಬರಿಯಾದಳು. "ಯಾರು ಬಾಗಿಲು ಹಾಕಿದ್ದೀರಿ?" ಎಂದಳು. ಶಿವನು, “ನಾನು ನಿನಗೆ ಹೇಳಿದೆ, ಈ ಮಗುವನ್ನು ಎತ್ತಿಕೊಳ್ಳಬೇಡ ಎಂದು. ಆದರೆ ನೀನು ಮಗುವನ್ನು ಮನೆಗೆ ಕರೆತಂದೆ, ಮತ್ತೀಗ ಅದು ಬಾಗಿಲು ಹಾಕಿದೆ" ಎಂದ.
ಪಾರ್ವತಿ "ಈಗ ಏನು ಮಾಡುವುದು" ಎಂದು ಕೇಳಿದಳು.
ಶಿವನಿಗೆ ಎರಡು ಆಯ್ಕೆಗಳಿದ್ದವು: ಒಂದು, ಅವನ ಮುಂದೆ ಇರುವುದೆಲ್ಲವನ್ನೂ ಸುಟ್ಟುಹಾಕುವುದು. ಇನ್ನೊಂದು, ಬೇರೆ ದಾರಿ ಹುಡುಕಿಕೊಂಡು ಆ ಕಡೆ ಸಾಗುವುದು. ಆದ್ದರಿಂದ ಅವನು, “ನಾವು ಬೇರೆಡೆ ಹೋಗೋಣ. ಏಕೆಂದರೆ ಅದು ನಿನ್ನ ಪ್ರೀತಿಯ ಮಗು, ನಾನು ಅದನ್ನು ಮುಟ್ಟಲು ಸಾಧ್ಯವಿಲ್ಲ." ಎಂದ.
ಈ ರೀತಿ ಶಿವನು ತನ್ನ ಸ್ವಂತ ಮನೆಯನ್ನು ಕಳೆದುಕೊಂಡನು ಮತ್ತು ಶಿವಪಾರ್ವತಿಯರು ನಿರಾಶ್ರಿತರಾದರು! ಅವರು ವಾಸಿಸಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಾ ಅಲೆದಾಡಿದರು ಮತ್ತು ಅಂತಿಮವಾಗಿ ಕೇದಾರನಾಥದಲ್ಲಿ ನೆಲೆಸಿದರು. "ಅವನಿಗೆ ಇದು ಮೊದಲೇ ತಿಳಿದಿದ್ದಿಲ್ಲವೇ" ಎಂದು ನೀವು ಕೇಳಬಹುದು. ಅನೇಕ ವಿಷಯಗಳನ್ನು ತಿಳಿದಿದ್ದರೂ, ಅವುಗಳನ್ನು ತಡೆಯದೇ ಸಂಭವಿಸಲು
ಶಿವನನ್ನು ಯಾವಾಗಲೂ ಅತ್ಯಂತ ಶಕ್ತಿಶಾಲೀ ಚೈತನ್ಯವಾಗಿ ನೋಡಲಾಗುತ್ತದೆ, ಅದೇ ಸಮಯದಲ್ಲಿ ಅವನು ಪ್ರಾಪಂಚಿಕ ವ್ಯಕ್ತಿಯಲ್ಲ. ಆದ್ದರಿಂದ ಶಿವನ ಒಂದು ರೂಪವನ್ನು ಭೋಲೆನಾಥ ಎಂದು ಕರೆಯಲಾಗುತ್ತದೆ, ಏಕೆಂದರೆ ಅವನೊಂದು ಮಗುವಿನಂತೆ. ಹಾಗೆಂದರೆ ಮೂರ್ಖನೆಂದು ಅಲ್ಲ, ಆದರೆ ತನ್ನ ಬುದ್ಧಿವಂತಿಕೆಯನ್ನು ಎಲ್ಲಾ ಸಣ್ಣ ಪ್ರಾಪಂಚಿಕ ವಿಷಯಗಳಲ್ಲಿ ಬಳಸಲು ಅವನು ಇಚ್ಛಿಸುವುದಿಲ್ಲ.
ಇದು ಕೇವಲ ಚಾಣಾಕ್ಷ ಮತ್ತು ಕೆಳಮಟ್ಟದ ಬುದ್ಧಿವಂತಿಕೆಯಾಗಿದ್ದು ಇದು ಬೇರೆಯವರಿಗಿಂತ ಉತ್ತಮಗೊಳ್ಳುವುದು ಹೇಗೆ ಎಂದು ನಿರಂತರವಾಗಿ ಯೋಚಿಸುತ್ತಿದೆ. ಬುದ್ಧಿವಂತಿಕೆ ಮತ್ತು ಸಾಮಾಜಿಕ ಕಪಟತನ ಎರಡು ವಿಭಿನ್ನ ವಿಷಯಗಳು. ಸ್ಮಾರ್ಟ್ ಆಗಿರುವುದು ಯಾವಾಗಲೂ ಬೇರೆಯವರೊಂದಿಗೆ ಹೋಲಿಕೆಯಲ್ಲಿ ಮಾತ್ರ. ಬುದ್ಧಿವಂತರಾಗಿರುವುದು ಬೇರೆಯವರೊಂದಿಗೆ ಹೋಲಿಕೆಯಲ್ಲಿ ಅಲ್ಲ, ಅದು ತನ್ನದೇ ಆದ ಸ್ವಭಾವದಿಂದ. ಬುದ್ಧಿವಂತಿಕೆಯು ಮಹತ್ವದ್ದಾಗಿದೆ ಏಕೆಂದರೆ ಬುದ್ಧಿವಂತಿಕೆಯು ಎಂದಿಗೂ ಸ್ಪರ್ಧೆಯಲ್ಲಿರುವುದಿಲ್ಲ, ಅದು ಜೀವನದ ಅಭಿವ್ಯಕ್ತಿಯಾಗಿದೆ.
ದಂತಕಥೆಯ ಪ್ರಕಾರ ಶಿವ ಮತ್ತು ಪಾರ್ವತಿ ಕಾಂತಿಸರೋವರದ ದಡದಲ್ಲಿ ವಾಸಿಸುತ್ತಿದ್ದರು ಮತ್ತು ಅವರು ಭೇಟಿ ನೀಡುತ್ತಿದ್ದ ಅನೇಕ ಯೋಗಿಗಳು ಕೇದಾರದಲ್ಲಿ ವಾಸಿಸುತ್ತಿದ್ದರು. 2013ರ ಪ್ರವಾಹದ ವೇಳೆ ಕೇದಾರಕ್ಕೆ ನುಗ್ಗಿ ಹರಿದು ಬಂದ ಸರೋವರವೇ ಕಾಂತಿಸರೋವರ. ಇಂದು ಅದನ್ನು ಗಾಂಧಿ ಸರೋವರ ಎಂದು ಕರೆಯಲಾಗುತ್ತಿದೆ. ಅದು ವಾಸ್ತವವಾಗಿ ಕಾಂತಿಸರೋವರ. ಕಾಂತಿ ಎಂದರೆ ಅನುಗ್ರಹ, ಇದು ಅನುಗ್ರಹದ ಸರೋವರ. ಯೋಗ ಸಂಸ್ಕೃತಿಯಲ್ಲಿ ಶಿವನನ್ನು ದೇವರಂತೆ ಕಾಣುವುದಿಲ್ಲ. ಅವನು ಈ ಭೂಮಿಯ ಮೇಲೆ ನಡೆದಾಡಿದ ಜೀವಿ ಮತ್ತು ಯೋಗ ಸಂಪ್ರದಾಯಗಳ ಮೂಲ. ಅವನು ಆದಿಯೋಗಿ ಅಥವಾ ಮೊದಲ ಯೋಗಿ, ಮತ್ತು ಆದಿ ಗುರು - ಮೊದಲ ಗುರು. ಯೋಗ ವಿಜ್ಞಾನದ ಮೊದಲ ಯೋಗದೀಕ್ಷೆ ನಡೆದಿದ್ದು ಈ ಕಾಂತಿಸರೋವರದ ದಡದಲ್ಲೇ, ಅಲ್ಲಿ ಆದಿಯೋಗಿ ತನ್ನ ಮೊದಲ ಏಳು ಶಿಷ್ಯರಿಗೆ ಈ ಆಂತರಿಕ ತಂತ್ರಜ್ಞಾನದ ವ್ಯವಸ್ಥಿತವಾದ ನಿರೂಪಣೆಯನ್ನು ಪ್ರಾರಂಭಿಸಿದನು, ಇಂದು ಆ 7 ಶಿಷ್ಯರನ್ನು ‘ಸಪ್ತರ್ಷಿ’ಗಳೆಂದು ಗೌರವಿಸಲಾಗುತ್ತದೆ.
ಹಲವು ವರ್ಷಗಳ ಹಿಂದೆ ಹಿಮಾಲಯದಲ್ಲಿ ಪ್ರತಿ ವರ್ಷ ಒಂದೆರಡು ತಿಂಗಳು ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದೆ. ಆ ಸಮಯದಲ್ಲಿ ನಾನು ಸ್ಥಳೀಯ ಬಸ್ ನಲ್ಲಿ ಹೋಗುತ್ತಿದ್ದೆ. ಪರ್ವತಗಳ ವೀಕ್ಷಣೆಯನ್ನು ಕಳೆದುಕೊಳ್ಳದಿರಲು, ಸಾಮಾನ್ಯವಾಗಿ ನಾನು ಬಸ್ಸಿನ ಮೇಲ್ಬಾಗದಲ್ಲಿ ಕುಳಿತು ಹೋಗುತ್ತಿದ್ದೆ. ಇವು ಹುಚ್ಚು ಬಸ್ಸುಗಳಾಗಿದ್ದವು! ಅವು ಹರಿದ್ವಾರದಿಂದ ಬೆಳಿಗ್ಗೆ 4 ಅಥವಾ 4:30 ಕ್ಕೆ ಹೊರಟು, ನೇರವಾಗಿ ಗೌರಿಕುಂಡ ಅಥವಾ ಬದರಿನಾಥವನ್ನು ತಲುಪುತ್ತಿದ್ದವು. ಜನರನ್ನು ಹತ್ತಿಸಿಕೊಳ್ಳುವುದು ಮತ್ತು ಇಳಿಸುವುದನ್ನು ಬಿಟ್ಟರೆ ಎಲ್ಲಿಯೂ ನಿಲ್ಲುತ್ತಿರಲಿಲ್ಲ - ಆಹಾರಕ್ಕಾಗಿಯೂ ಸಹ. ಅವುಗಳನ್ನು "ಭೂಕ್ ಹರ್ತಾಲ್" ಬಸ್‌ಗಳು ಎಂದು ಕರೆಯಲಾಗುತ್ತಿತ್ತು, ಅಂದರೆ “ಉಪವಾಸ ಸತ್ಯಾಗ್ರಹ” ಬಸ್‌ಗಳು. ನೀವು ಊಟದ ಬಗ್ಗೆ ಯೋಚಿಸುತ್ತಾ ಕುಳಿತಿರುವಾಗ, ಡ್ರೈವರ್ ತನ್ನ ಚಪಾತಿ ರೋಲ್ ಅನ್ನು ತಿನ್ನುತ್ತಾ ಬಸ್ ಚಲಾಯಿಸುತ್ತಿದ್ದ!
ನಾನು ಗೌರಿಕುಂಡ್‌ನಿಂದ ಸುದೀರ್ಘ ಟ್ರೆಕ್ಕಿಂಗ್ ಮುಗಿಸಿ ಕೇದಾರಕ್ಕೆ ಬಂದಾಗ, ನಾನು ಕಾಂತಿಸರೋವರದ ಬಗ್ಗೆ ಕೇಳಿದೆ, ಹಾಗಾಗಿ ಒಂದು ಮಧ್ಯಾಹ್ನ, ಸುಮಾರು 2 ಅಥವಾ 2:30 ಕ್ಕೆ ಹೊರಟೆ. ಮತ್ತು ಒಂದು ಗಂಟೆಗಿಂತ ಸ್ವಲ್ಪ ಹೆಚ್ಚು ಸಮಯದಲ್ಲಿ ಅಲ್ಲಿಗೆ ತಲುಪಿದೆ. ಸರೋವರ ಮತ್ತು ಅದರ ಸುತ್ತಲೂ ಹಿಮದಿಂದ ಆವೃತವಾದ ಪರ್ವತಗಳು ಇದ್ದವು. ಪ್ರಕೃತಿಯ ದೃಷ್ಟಿಯಿಂದ ಅದ್ಭುತವಾಗಿರುವ ಈ ಬೃಹತ್ ಸರೋವರ - ಸಂಪೂರ್ಣವಾಗಿ ನಿಶ್ಚಲವಾದ ನೀರು, ಸಸ್ಯವರ್ಗವಿಲ್ಲ ಮತ್ತು ಎಲ್ಲಾ ಹಿಮದಿಂದ ಆವೃತವಾದ ಶಿಖರಗಳು ನಿಶ್ಚಲವಾದ ನೀರಿನಲ್ಲಿ ಪ್ರತಿಫಲಿಸುತ್ತದೆ. ಇದು ನಂಬಲಾಗದ ಸ್ಥಳವಾಗಿತ್ತು.
ನಾನು ಸುಮ್ಮನೆ ಕುಳಿತೆ, ಅಲ್ಲಿನ ಪ್ರಶಾಂತತೆ, ಮೌನ ಮತ್ತು ಶುದ್ಧತೆ ನನ್ನ ಪ್ರಜ್ಞೆಯನ್ನು ಭೇದಿಸಿತು. ಆ ಸ್ಥಳದ ಏರುವಿಕೆ, ಎತ್ತರ ಮತ್ತು ನಿರ್ಜನ ಸೌಂದರ್ಯ ನನ್ನನ್ನು ಉಸಿರುಗಟ್ಟಿಸಿತು. ನಾನು ಆ ನಿಶ್ಚಲತೆಯಲ್ಲಿ ಒಂದು ಸಣ್ಣ ಬಂಡೆಯ ಮೇಲೆ ಕಣ್ಣು ತೆರೆದುಕೊಂಡು ಕುಳಿತು ನನ್ನ ಸುತ್ತಲಿರುವ ಪ್ರತಿಯೊಂದು ರೂಪವನ್ನು ಮೈಗೂಡಿಸಿಕೊಂಡೆ. ಕ್ರಮೇಣವಾಗಿ ಸುತ್ತಮುತ್ತಲಿನ ಪ್ರದೇಶಗಳು ತಮ್ಮ ರೂಪವನ್ನು ಕಳೆದುಕೊಂಡು, ಕೇವಲ `ನಾದ’ ಅಸ್ತಿತ್ವದಲ್ಲಿತ್ತು. ಪರ್ವತ, ಸರೋವರ ಮತ್ತು ನನ್ನ ದೇಹವನ್ನು ಒಳಗೊಂಡಂತೆ ಇಡೀ ಸುತ್ತಮುತ್ತಲಿನ ಪ್ರದೇಶಗಳು ತಮ್ಮ ಎಂದಿನ ರೂಪದಲ್ಲಿ ಅಸ್ತಿತ್ವದಲ್ಲಿರಲಿಲ್ಲ. ಎಲ್ಲವೂ ಕೇವಲ ಧ್ವನಿಯಾಗಿತ್ತು. ನನ್ನೊಳಗೆ ಒಂದು ಹಾಡು ಹುಟ್ಟಿತು: "ನಾದ ಬ್ರಹ್ಮ ವಿಶ್ವ ಸ್ವರೂಪ."
ನಾದ ಬ್ರಹ್ಮ ವಿಶ್ವಸ್ವರೂಪ
ನಾದ ಹಿ ಸಕಲ ಜೀವರೂಪಾ
ನಾದ ಹಿ ಕರ್ಮ ನಾದ ಹಿ ಧರ್ಮ
ನಾದ ಹಿ ಬಂಧನ ನಾದ ಹಿ ಮುಕ್ತಿ
ನಾದ ಹಿ ಶಂಕರ ನಾದ ಹಿ ಶಕ್ತಿ
ನಾದಂ ನಾದಂ ಸರ್ವಂ ನಾದಮ್
ನಾದಂ ನಾದಂ ನಾದಂ ನಾದಂ
ನಾನು ಯಾವಾಗಲೂ ಸಂಸ್ಕೃತ ಭಾಷೆಯನ್ನು ಕಲಿಯುವುದರಿಂದ ದೂರ ಉಳಿದಿದ್ದೆ. ನನಗೆ ಆ ಭಾಷೆ ತುಂಬಾ ಇಷ್ಟವಾಗಿದ್ದರೂ ಮತ್ತು ಭಾಷೆಯ ಆಳವನ್ನು ತಿಳಿದಿದ್ದರೂ, ನಾನು ಅದನ್ನು ಕಲಿಯುವುದರಿಂದ ದೂರವಿದ್ದೆ. ಏಕೆಂದರೆ ನೀವು ಸಂಸ್ಕೃತವನ್ನು ಕಲಿತ ಕ್ಷಣ, ಶಾಸ್ತ್ರಗಳನ್ನು ಓದೇ ಓದುತ್ತೀರಿ. ನನ್ನ ಸ್ವಂತ ದೃಷ್ಟಿ ಒಂದು ಕ್ಷಣವೂ ನನ್ನನ್ನು ಯಾವುದರಲ್ಲೂ ವಿಫಲಗೊಳಿಸಿಲ್ಲ, ಆದ್ದರಿಂದ ನಾನು ಧರ್ಮಗ್ರಂಥಗಳು ಮತ್ತು ಈ ಎಲ್ಲಾ ಸಂಪ್ರದಾಯಗಳಿಂದ ನನ್ನನ್ನು ಗೊಂದಲಕ್ಕೀಡು ಮಾಡಲು ಬಯಸಲಿಲ್ಲ. ಹಾಗಾಗಿ ಸಂಸ್ಕೃತದಿಂದ ದೂರ ಉಳಿದೆ.
ನಾನು ಅಲ್ಲಿ ಕುಳಿತಿರುವಾಗ, ನನ್ನ ಬಾಯಿ ಖಂಡಿತವಾಗಿಯೂ ಮುಚ್ಚಿತ್ತು ಮತ್ತು ನನ್ನ ಕಣ್ಣುಗಳು ತೆರೆದಿದ್ದವು ಮತ್ತು ನಾನು ಈ ಹಾಡನ್ನು ನನ್ನ ಧ್ವನಿಯಲ್ಲೇ ಜೋರಾಗಿ ಕೇಳಿದೆ. ಹಾಡುತ್ತಿದ್ದದ್ದು ನನ್ನ ಧ್ವನಿಯೇ ಆಗಿತ್ತು ಮತ್ತು ಅದು ಸಂಸ್ಕೃತ ಹಾಡು. ನಾನು ಅದನ್ನು ಸ್ಪಷ್ಟವಾಗಿ, ಜೋರಾಗಿ ಕೇಳಿದೆ. ಎಷ್ಟು ಜೋರಾಗಿ ಎಂದರೆ, ಇಡೀ ಪರ್ವತವೇ ಹಾಡುವಂತಿತ್ತು. ನನ್ನ ಅನುಭವದಲ್ಲಿ, ಎಲ್ಲವೂ ಧ್ವನಿಯಾಗಿ ಮಾರ್ಪಟ್ಟಿತ್ತು. ಆಗ ನಾನು ಈ ಹಾಡನ್ನು ಗ್ರಹಿಸಿದ್ದು. ನಾನು ಅದನ್ನು ರಚಿಸಲಿಲ್ಲ, ನಾನು ಅದನ್ನು ಬರೆಯಲಿಲ್ಲ - ಅದು ನನ್ನೊಳಗೆ ತಾನಾಗೇ ಹರಿದು ಬಂತು. ಇಡೀ ಹಾಡು ಸಂಸ್ಕೃತದಲ್ಲಿ ಹರಿಯಿತು. ಆ ಅನುಭವ ಅಗಾಧವಾಗಿತ್ತು.
ನಿಧಾನವಾಗಿ, ಸ್ವಲ್ಪ ಸಮಯದ ನಂತರ, ಎಲ್ಲವೂ ಅದರ ಹಿಂದಿನ ರೂಪಕ್ಕೆ ಮರಳಿತು. ನನ್ನ ಅರಿವಿನ ಪತನ - ನಾದದಿಂದ ರೂಪಕ್ಕೆ ಮರಳಿದ್ದು - ನನ್ನ ಕಣ್ಣುಗಳನ್ನು ತುಂಬಿತು.
‘ನಾದ ಬ್ರಹ್ಮ’ ಎಂದರೆ ಪ್ರಪಂಚವನ್ನು ಶಬ್ದವಾಗಿ ಅನುಭವಿಸುವುದು, ರೂಪವಾಗಿ ಅಲ್ಲ. ಆಧುನಿಕ ವಿಜ್ಞಾನವು ಹೇಳುವಂತೆ ಪ್ರತಿಯೊಂದು ಶಬ್ದಕ್ಕೂ ಒಂದೊಂದು ರೂಪವಿದೆ, ಪ್ರತಿ ರೂಪಕ್ಕೂ ಒಂದೊಂದು ಶಬ್ದವಿರುತ್ತದೆ. ಇದು ವೈಜ್ಞಾನಿಕ ವಾಸ್ತವ. ಮತ್ತು ಇಂದು ವಿಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ "ವಸ್ತು" ಎಂಬುದಿಲ್ಲ ಎಂದು ನಮಗೆ ತಿಳಿದಿದೆ. ಎಲ್ಲಿ ಕಂಪನವಿದೆಯೋ, ಅಲ್ಲಿ ಒಂದು ಶಬ್ದವಿರುತ್ತದೆ. ಆದ್ದರಿಂದ ಯೋಗದಲ್ಲಿ, ನಾವು ಇಡೀ ಅಸ್ತಿತ್ವವು "ಶಬ್ದ" ಎಂದು ಹೇಳುತ್ತೇವೆ.
ನೀವು ಆ ಹಾಡಿಗೆ ಸುಮ್ಮನೆ ನಿಮ್ಮನ್ನು ಸಮರ್ಪಿಸಿಕೊಂಡರೆ ಅದಕ್ಕೊಂದು ರೀತಿಯ ಶಕ್ತಿ ಇದೆ. ನೀವು ನಿಜವಾಗಿಯೂ ನಿಮ್ಮನ್ನು ಅದಕ್ಕೆ ಸಮರ್ಪಿಸಿಕೊಂಡರೆ, ಅದಕ್ಕೆ ನಿಮ್ಮನ್ನು ವಿಲೀನಗೊಳಿಸುವ ಶಕ್ತಿಯಿದೆ.