ಹಲವಾರು ಶತಮಾನಗಳಿಂದ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿರುವ ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ನಾವು ಇಲ್ಲಿ ನೋಡೋಣ. ಮನೆ ಔಷಧಿಯಾಗಿ ಹಾಗೂ ಸಾಂಪ್ರದಾಯಿಕ ಔಷಧದಲ್ಲಿ ಜೇನುತುಪ್ಪದ ಕೆಲವು ಉಪಯೋಗಗಳನ್ನು ನಾವು ನೋಡೋಣ.

ಸಹಸ್ರಾರು ವರ್ಷಗಳಿಂದ, ಜೇನುತುಪ್ಪವು, ಅಡುಗೆ ಮನೆಯ ಒಂದು ವಿಶೇಷ ಆಹಾರ ಹಾಗೂ ಪ್ರಮುಖವಾದ ವೈದ್ಯಕೀಯ ಪರಿಹಾರವಾಗಿದೆ. ಜಗತ್ತಿನಾದ್ಯಂತ, ನಮ್ಮ ಪೂರ್ವಜರು ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ಚೆನ್ನಾಗಿ ಅರಿತುಕೊಂಡಿದ್ದಂತೆ ಕಾಣುತ್ತದೆ.

ವೈದ್ಯರಿಂದ ಪ್ರಿಸ್ಕ್ರಿಪ್ಶನ್ (prescription) ಮೂಲಕವಾಗಿ ಇದರ ಮೊದಲ ಬಳಕೆಯದಾಖಲೆಯು, ಸುಮೇರಿಯಾದಲ್ಲಿ ೪೦೦೦ ವರ್ಷ ಹಳೆಯದಾದ ಜೇಡಿಮಣ್ಣಿನ ಹಲಗೆಯಲ್ಲಿ ಕಂಡುಬರುತ್ತದೆ. ಶೇ.೩೦% ಸುಮೇರಿಯನ್ನರ ವೈದ್ಯಕೀಯ ಚಿಕಿತ್ಸೆಗಳಲ್ಲಿ ಜೇನು ತುಪ್ಪದ ಬಳಕೆಯಿತ್ತು. ಭಾರತದಲ್ಲಿ, ಜೇನುತುಪ್ಪವು, ಪುರಾತನ, ಪ್ರಾಚೀನ ಸಾಂಪ್ರದಾಯಿಕ ಔಷಧಗಳಾದ ಸಿದ್ಧ ಮತ್ತು ಆಯುರ್ವೇದದ ಪ್ರಮುಖ ಭಾಗವಾಗಿದೆ. ಪ್ರಾಚೀನ ಈಜಿಪ್ಟ್‍ನಲ್ಲಿ ಇದು ಚರ್ಮ ಮತ್ತು ಕಣ್ಣಿನ ರೋಗಗಳನ್ನು ನಿರ್ವಹಿಸುವಲ್ಲಿ ಹಾಗೂ ಹುಣ್ಣುಗಳು, ಸುಟ್ಟ ಗಾಯಗಳ ಮೇಲೆ ಹಾಕುವಂತಹ ಒಂದು ನೈಸರ್ಗಿಕ ಬ್ಯಾಂಡೇಜ್ ಆಗಿಯೂ ಬಳಸಲಾಗುತ್ತಿತ್ತು. ಇತರ ಹಲವಾರು ಸಂಸ್ಕೃತಿಗಳು ಕೂಡ, ವಿವಿಧ ವೈದ್ಯಕೀಯ ಉದ್ದೇಶಗಳಿಗಾಗಿ ಜೇನುತುಪ್ಪವನ್ನು ಬಳಸಿಕೊಂಡಿವೆ.

ಇಂದು, ಜೇನುತುಪ್ಪವು ವೈದ್ಯಕೀಯ ಸಮುದಾಯದ ವೈಜ್ಞಾನಿಕ ಸಂಶೋಧನೆಯ ಕೇಂದ್ರಬಿಂದುವಾಗಿದೆ. ನಮ್ಮ ಪೂರ್ವಜರು ಈಗಾಗಲೆ ಯೋಚಿಸಿದ ಜೇನುತುಪ್ಪದ ಹಲವು ಉಪಯೋಗಗಳನ್ನು ಇದು ತನಿಖೆ ಮಾಡಿ ದೃಢಪಡಿಸಿದೆ. ಇವುಗಳಲ್ಲಿ ಕೆಲವನ್ನು ಕೆಳಗೆ ನೋಡೋಣ.

ಆರೋಗ್ಯಕ್ಕಾಗಿ ಜೇನುತುಪ್ಪದ ಪ್ರಯೋಜನಗಳು

#೧ ಜೇನುತುಪ್ಪವು ನಿಮ್ಮ ರಕ್ತಕ್ಕೆ ಒಳ್ಳೆಯದು

ಜೇನು ತುಪ್ಪವನ್ನುನೀವು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದನ್ನು ಅವಲಂಬಿಸಿ, ವಿಭಿನ್ನ ರೀತಿಯಲ್ಲಿ ದೇಹವನ್ನು ಅದು ಪ್ರಭಾವಿಸುತ್ತದೆ. ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿಕುಡಿದರೆ, ಅದು ರಕ್ತದ ಕೆಂಪು ರಕ್ತಕಣಗಳ (RBC) ಸಂಖ್ಯೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ರಕ್ತದಲ್ಲಿನ ಆಮ್ಲಜನಕವನ್ನು ದೇಹದಲ್ಲಿನ ವಿವಿಧ ಭಾಗಗಳಿಗೆ ಸಾಗಿಸಲು ಆರ್-ಬಿ-ಸಿಯು (RBC) ಕಾರಣವಾಗಿದೆ. ತುಸು ಬೆಚ್ಚಗಿನ ನೀರಿನ ಜೊತೆ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ, ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ರಕ್ತಹೀನತೆಯನ್ನು ಗುಣಪಡಿಸುತ್ತದೆ.

ಕಬ್ಬಿಣಾಂಶ ಇರುವ ಆಹಾರವನ್ನು ಸೇವಿಸದೆ ಇರುವುದು ಅಥವಾ ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳದೆ ಇರುವುದು ರಕ್ತಹೀನತೆ (Iron deficiency anaemia) ಉಂಟಾಗಲು ಕಾರಣ. ಇದರಿಂದ ರಕ್ತದ ‘ಆಮ್ಲಜನಕ ರವಾನಿಸುವ’ ಸಾಮರ್ಥ್ಯವು ಕಡಿಮೆಯಾಗುತ್ತದೆ. ಆಯಾಸ, ಉಸಿರಾಟದ ತೊಂದರೆ, ಕೆಲವೊಮ್ಮೆ ಖಿನ್ನತೆ ಮತ್ತು ಇತರ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ರಕ್ತದ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಸುಧಾರಿಸುವ ಮೂಲಕ ಜೇನುತುಪ್ಪವು ಈ ಸಮಸ್ಯೆಯನ್ನು ಇಲ್ಲದ ಹಾಗೆ ಮಾಡಬಹದು.

ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಸುಧಾರಿಸುವುದು ಬಹಳ ಮುಖ್ಯ. ಏಕೆಂದರೆ ದೇಹವು ಎಷ್ಟು ಆರೋಗ್ಯಕರವಾಗಿದೆ ಹಾಗೂ ಅದು ಎಷ್ಟು ಸುಲಭವಾಗಿ ತನ್ನನ್ನು ತಾನು ಪುನಃ ಚೈತನ್ಯಗೊಳಿಸಿಕೊಳ್ಳುತ್ತದೆ ಎಂಬುವುದು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಅವಲಂಬಿಸಿರುತ್ತದೆ. ಅಧಿಕ ರಕ್ತದೊತ್ತಡದ ಮೇಲೆ ಜೇನುತುಪ್ಪದ ಧನಾತ್ಮಕ ಪರಿಣಾಮವನ್ನು, ಪ್ರಾಥಮಿಕ ಸಂಶೋಧನೆಯು ತೋರಿಸಿದೆ. ಸಾಂಪ್ರದಾಯಿಕವಾಗಿ, hypotension ಅಥವಾ ಕಡಿಮೆ ರಕ್ತದೊತ್ತಡದ ಪರಿಣಾಮಗಳನ್ನು ಕಡಿಮೆ ಮಾಡಲು ಕೂಡ ಜೇನುತುಪ್ಪವನ್ನು ಸೇವಿಸಲಾಗುತ್ತದೆ.

ಕೀಮೋಥೆರಪಿ ರೋಗಿಗಳಲ್ಲಿ ಬಿಳಿಯ ರಕ್ತಕಣಗಳ (WBC) ಎಣಿಕೆ ಕಡಿಮೆಯಾಗುವುದನ್ನು ಜೇನುತುಪ್ಪವನ್ನು ತಡೆಗಟ್ಟುತ್ತದೆ ಎಂಬುದರ ಬಗ್ಗೆ ಕೆಲವು ಪ್ರಾಥಮಿಕ ಪುರಾವೆಗಳಿವೆ. ಸಣ್ಣ-ಪ್ರಮಾಣದ ಪ್ರಯೋಗದಲ್ಲಿ, ಕೀಮೋಥೆರಪಿಯ ಅವಧಿಯಲ್ಲಿ, ದಿನಕ್ಕೆ ಎರಡು ಟೀಚಮಚ ಚಿಕಿತ್ಸಕ ಜೇನುತುಪ್ಪವನ್ನು ಸೇವಿಸಿದ ನಂತರ, ಬಿಳಿಯ ರಕ್ತ ಕಣಗಳು ಕಡಿಮೆಯಾಗುವ ಅಪಾಯವಿದ್ದ ೪೦% ನಷ್ಟು ರೋಗಿಗಳಲ್ಲಿ, ಈ ಸಮಸ್ಯೆಯ ಮರುಕಳಿಸಲಿಲ್ಲ.

#೨ ಜೇನುತುಪ್ಪವು ಸಕ್ಕರೆಗಿಂತ ಸುರಕ್ಷಿತವಾಗಿದೆ

ದೇಹದ ಮೇಲೆ ಬಿಳಿ ಸಕ್ಕರೆಯ ಕೆಟ್ಟ ಪರಿಣಾಮಗಳ ಬಗ್ಗೆ ಸಾಕಷ್ಟು ಹೇಳಿಯಾಗಿದೆ.ಅಷ್ಟೆ ಸಿಹಿಯಾಗಿರುವ ಜೇನುತುಪ್ಪವು, ಸಕ್ಕರೆಗೆ ಒಂದು ಉತ್ತಮ ಪರ್ಯಾಯವಾಗಿದೆ ಹಾಗೂ ಸೇವಿಸಲು ಸುರಕ್ಷಿತವೂ ಆಗಿದೆ. ಅದರ ರಾಸಾಯನಿಕ ರಚನೆಯಲ್ಲಿ ಜೇನುತುಪ್ಪವು, ಸರಳವಾದ ಸಕ್ಕರೆಗಳನ್ನು ಒಳಗೊಂಡಿರುತ್ತದೆಯಾದರೂ, ಇದು ಬಿಳಿ ಸಕ್ಕರೆಗಿಂತ ಭಿನ್ನವಾಗಿದೆಇದು ಸುಮಾರು ಶೇ. ೩೦% ಗ್ಲೂಕೋಸ್ ಮತ್ತು ಶೇ. ೪೦% ಫ್ರಕ್ಟೋಸ್ಗಳನ್ನು ಹೊಂದಿರುತ್ತದೆ - ಇವೆರಡು ಮೊನೊಸ್ಯಾಕರೈಡ್ ಅಥವಾ ಸರಳ ಸಕ್ಕರೆಗಳು. ಶೇ. ೨೦% ಇತರ ಸಂಕೀರ್ಣ ಸಕ್ಕರೆಗಳನ್ನು ಹೊಂದಿರುತ್ತದೆ. ಜೇನುತುಪ್ಪದಲ್ಲಿ ಡೆಕ್ಸ್ಟ್ರಿನ್ (dextrin) ಎಂಬ ಪಿಷ್ಟದ ನಾರು ಸಹ ಇದೆ. ಈ ಸಂಯೋಜನೆಯು, ದೇಹದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

#೩ ಯೋಗಾಭ್ಯಾಸ ಮಾಡುವವರಿಗೆ ಜೇನುತುಪ್ಪವು ಒಳ್ಳೆಯದು

ಯೋಗದ ಅಭ್ಯಾಸಗಳನ್ನು ಮಾಡುವವರಿಗಾಗಿ ಜೇನುತುಪ್ಪವನ್ನು ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ. ಜೇನುತುಪ್ಪವನ್ನು ಸೇವಿಸುವುದರಿಂದ, ರಕ್ತ ಪರಿಚಲನೆಯ ವ್ಯವಸ್ಥೆಯು ಸಮತೋಲನಕ್ಕೆ ಬರತ್ತದೆ. ನಿಯಮಿತವಾದ ಜೇನುತುಪ್ಪದ ಸೇವನೆ, ವ್ಯವಸ್ಥೆಗೆ ಹೆಚ್ಚು ಹುರುಪನ್ನು ನೀಡುತ್ತದೆ. ಅಭ್ಯಾಸವನ್ನು ಪ್ರಾರಂಭಿಸುವ ಮೊದಲು, ತುಸು ಬೆಚ್ಚಗಿನ ನೀರಿನ ಜೊತೆ ಸ್ವಲ್ಪ ಜೇನುತುಪ್ಪವನ್ನು ಸೇವಿಸಿದರೆ, ದೈಹಿಕ ವ್ಯವಸ್ಥೆಯು ತೆರೆದುಕೊಂಡಂತಾಗುತ್ತದೆ.

#೪ ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕವಾಗಿದೆ

ಜೇನುತುಪ್ಪದ ಸೇವನೆಯು, ಪ್ರಯೋಜನಕಾರಿ ಉತ್ಕರ್ಷಣ ನಿರೋಧಕದ ಶಕ್ತಿಯ (antioxidant agents) ಹೆಚ್ಚಳವನ್ನು ಉತ್ತೇಜಿಸುತ್ತದೆ, ಪ್ರತಿಕಾಯಗಳನ್ನು (antibodies) ಪ್ರಚೋದಿಸುತ್ತದೆ ಮತ್ತು ಹಾನಿಕಾರಕ ಸೂಕ್ಷ್ಮಜೀವಿ ಚಟುವಟಿಕೆಯನ್ನು (microbial activity) ಪ್ರತಿರೋಧಿಸುತ್ತದೆ. ಗಾಯದ ಚಿಕಿತ್ಸೆಯಲ್ಲಿ ಜೇನುತುಪ್ಪದ ಉಪಯೋಗದ ಕಡೆಗೆ ಹಲವಾರು ಅಧ್ಯಯನಗಳು ದೃಷ್ಟಿ ಹರಿಸುತ್ತಿವೆ. ಒಂದು ಅಧ್ಯಯನವು, ವಿಶೇಷವಾಗಿ ಪರಿಶುದ್ಧಗೊಳಿಸಿದ ಚಿಕಿತ್ಸಕ ಜೇನುತುಪ್ಪವನ್ನು ಉಪಯೋಗಿಸಿತು. ಅಧ್ಯಯನದಲ್ಲಿ ಭಾಗವಹಿಸಿದವರ ಗಾಯಗಳಲ್ಲಿನ ಬ್ಯಾಕ್ಟೀರಿಯಾದ ಎಲ್ಲಾ ತಳಿಗಳನ್ನು ಇದು ನಾಶಪಡಿಸಿತು. ಮತ್ತೊಂದು ಅಧ್ಯಯನವು, ೫೯ ರೋಗಿಗಳ, ಗಾಯ ಮತ್ತು ಕಾಲಿನ ಹುಣ್ಣುಗಳಿಗೆ ಸಂಸ್ಕರಿಸದ (unprocessed) ಜೇನುತುಪ್ಪದೊಂದಿಗೆ ಚಿಕಿತ್ಸೆ ನೀಡಿತು, ಇವರಲ್ಲಿ ಶೇ. ೮೦% ರಷ್ಟು ಜನರು ಸಾಂಪ್ರದಾಯಿಕ ಚಿಕಿತ್ಸೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಒಬ್ಬ ರೋಗಿಯನ್ನು ಹೊರತುಪಡಿಸಿ, ಇತರರ ಗಾಯಗಳು ಸುಧಾರಣೆಯನ್ನು ತೋರಿಸಿದವು, ಜೇನುತುಪ್ಪದ ಉಪಯೋಗದಿದಂದ, ಒಂದು ವಾರದೊಳಗೆ ಸೋಂಕಿತ ಗಾಯಗಳು ಕ್ರಿಮಿರಹಿತವಾದವಾದವು.

ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ,ಉಸಿರಾಟದ ಸೋಂಕಿನ ಚಿಕಿತ್ಸೆಯು, ಜೇನುತುಪ್ಪದ ಆರೋಗ್ಯ ಪ್ರಯೋಜನಗಳಲ್ಲಿ ಒಂದು.ಹೆಚ್ಚು ಕಫ ಮತ್ತು ಆಸ್ತಮಾದಂತಹ ಸಮಸ್ಯೆಗಳನ್ನು ಎದುರಿಸಲು, ದಿನನಿತ್ಯ ಜೇನುತುಪ್ಪದ ಸೇವನೆಯನ್ನು ಸೂಚಿಸಲಾಗಿದೆ.

ಇ-ಕೋಲಿ (e-coli) ಮತ್ತು ಸಾಲ್ಮೊನೆಲ್ಲಾ (salmonella) ನಂತಹ, ಆಹಾರದಿಂದ-ಹರಡುವ ರೋಗಗಳ ವ್ಯಾಧಿಜನಕಗಳನ್ನು (pathogens), ವೈದ್ಯಕೀಯ-ದರ್ಜೆಯ ಜೇನುತುಪ್ಪವು ನಾಶಪಡಿಸಬಹುದು ಎಂದು ವೈದ್ಯಕೀಯ ಸಂಶೋಧನೆಯು ತೋರಿಸಿದೆ.ಪ್ರತಿಜೀವಕಗಳಿಗೆ (antibioticsಪ್ರತಿರೋಧವನ್ನು ವೃದ್ಧಿಪಡಿಸಿಕೊಂಡಿರುವ ಬ್ಯಾಕ್ಟೀರಿಯಾದ ತಳಿಗಳನ್ನು ಎದುರಿಸುವಲ್ಲಿ ಜೇನುತುಪ್ಪದ ಪ್ರಯೋಗವು ಭರವಸೆಯನ್ನು ತೋರಿಸಿದೆ. ಮೆಥಿಸಿಲಿನ್-ನಿರೋಧಕ ಸ್ಟ್ಯಾಫಿಲೋಕೊಕಸ್ ಔರೆಸ್ (Staphylococcus aureus) ಮತ್ತು ಸ್ಯೂಡೋಮೊನಸ್ ಏರುಗುನೋಸಾದ (Pseudomonas aeruginosa) ವಿರುದ್ಧ ಜೇನುತುಪ್ಪವು ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆಯು ತೋರಿಸಿದೆ.

ಜೇನುತುಪ್ಪವು, ಸೋಂಕಿನ ಹರಡುವಿಕೆಯ ಅನೇಕ ಹಂತಗಳಲ್ಲಿ ಹೋರಾಡುತ್ತದೆ ಹಾಗೂ ರೋಗಕಾರಕಗಳು ನಿರೋಧಕತೆಯನ್ನು ಹೆಚ್ಚಿಸಿಕೊಳ್ಳದಂತೆ ಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರತಿಜೀವಕಗಳು (antibioticsಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳು ಬೆಳೆಯುತ್ತಿರುವ ಸಂದರ್ಭದಲ್ಲಿ ದಾಳಿ ಮಾಡುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳಿಗೆ, ಪ್ರತಿರೋಧವನ್ನು ವೃದ್ಧಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆ.

Quorum sensing ಎಂದು ಕರೆಯಲ್ಪಡುವುದನ್ನು ಜೇನುತುಪ್ಪವುಅಡ್ಡಿಪಡಿಸುತ್ತದೆ, ಇದು ರೋಗಕಾರಕ ಬ್ಯಾಕ್ಟೀರಿಯಾಗಳ ಹರಡುವಿಕೆಯನ್ನು ಕಡಿಮೆ ಮಾಡಿ, ಪ್ರತಿಜೀವಕಗಳು (antibiotics) ಪರಿಣಾಮವನ್ನು ಬೀರಲು ಅನುವು ಮಾಡಿಕೊಡುತ್ತದೆ.

#೫ ಜೇನುತುಪ್ಪ – ಒಂದು ಶಕ್ತಿ ವರ್ಧನೆಯ ಆಹಾರ

ಸಾಂಪ್ರದಾಯಿಕ ಔಷಧಗಳಲ್ಲಿ, ಜೇನುತುಪ್ಪದ ಪ್ರಮುಖ ಬಳಕೆಯು, ತ್ವರಿತ ಶಕ್ತಿ ವರ್ಧನೆಗಾಗಿಯೂ ಇರುತ್ತದೆ. ಮೇಲೆ ತಿಳಿಸಿದಂತೆ, ಜೇನುತುಪ್ಪವು ವಿವಿಧ ಬಗೆಯ ಸಕ್ಕರೆ ಅಣುತಂಡಗಳನ್ನು (molecules) ಹೊಂದಿರುತ್ತದೆ – ಇದರಲ್ಲಿ ಮುಖ್ಯವಾದವು, ಗ್ಲುಕೋಸ್ ಮತ್ತು ಫ್ರಕ್ಟೋಸ್. ಬಿಳಿ ಸಕ್ಕರೆಯಲ್ಲಿ ಫ್ರಕ್ಟೋಸ್ ಮತ್ತು ಗ್ಲುಕೋಸ್ ಎರಡು ಸೇರಿ ಸುಕ್ರೋಸ್ ಆಗಿರುವುದರಿಂದ, ಜೀರ್ಣಕಾರಿ ಪ್ರಕ್ರಿಯೆಯಲ್ಲಿ ಇದನ್ನು ಬೇರೆ ಮಾಡಲು ಒಂದು ಹೆಚ್ಚುವರಿ ಹಂತ ಬೇಕಾಗುತ್ತದೆ. ಆದರೆ, ಜೇನುತುಪ್ಪದಲ್ಲಿ, ಈ ಎರಡು ಸಕ್ಕರೆಗಳು ಪ್ರತ್ಯೇಕವಾಗಿರುವುದರಿಂದ, ಇದರಲ್ಲಿರುವ ಗ್ಲುಕೋಸ್ತ್ವರಿತ ಶಕ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

ಜೇನುತುಪ್ಪವು ಸಣ್ಣ ಪ್ರಮಾಣದಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ – ಹಾಗಾಗಿ, ಅಮೇರಿಕೆಯ ನ್ಯಾಷನಲ್ ಹನಿ ಬೋರ್ಡ್ (National Honey Board) ಇದರ ಬಳಕೆಯನ್ನು ಶಿಫಾರಸು ಮಾಡುತ್ತದೆ. ಇವುಗಳ ಪಟ್ಟಿ ಇಲ್ಲಿದೆ: ನಿಯಾಸಿನ್ (niacin), ರಿಬೋಫ್ಲಾವಿನ್ (riboflavin), ಪಾಂಟೊಥೆನಿಕ್ ಆಮ್ಲ (pantothenic acid), ಕ್ಯಾಲ್ಸಿಯಂ (calcium), ತಾಮ್ರ, ಕಬ್ಬಿಣ, ಮೆಗ್ನೀಸಿಯಮ್ (magnesium), ಮ್ಯಾಂಗನೀಸ್ (manganese), ಫಾಸ್ಫರಸ್ (phosphorus), ಪೊಟ್ಯಾಸಿಯಮ್ (potassium) ಮತ್ತು ಸತು (zinc).

#೬ ಜೀರ್ಣಕ್ರಿಯೆಗೆ ಜೇನುತುಪ್ಪವು ಸಹಾಯಕಾರಿ

ಜೇನುತುಪ್ಪವು ಸೌಮ್ಯ ವಿರೇಚಕ (laxative)ವಾಗಿರುವುದರಿಂದ ಮಲಬದ್ಧತೆ, ಹೊಟ್ಟೆ ಉಬ್ಬರ ಮತ್ತು ವಾಯು ಸಮಸ್ಯೆಯನ್ನು (gas) ಕಡಿಮೆ ಮಾಡಲು ಸಹಾಯ ಮಾಡುತ್ತದೆಜೇನುತುಪ್ಪವು, ಬೈಫಿಡೋ (bifido) ಬ್ಯಾಕ್ಟೀರಿಯಾ ಮತ್ತು ಲ್ಯಾಕ್ಟೋಬಾಸಿಲ್ಲಿಯಂತಹ (lactobacilli) ಸೀರುಸುರಿಯ (ಪ್ರೋಬಯಾಟಿಕ್) ಅಥವಾ "ಸ್ನೇಹಪರ" ಬ್ಯಾಕ್ಟೀರಿಯಾದಲ್ಲಿ ಕೂಡ ಸಮೃದ್ಧವಾಗಿದೆ, ಇದು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ, ನಿರೋಧಕ ವ್ಯವಸ್ಥೆಯ ಆರೋಗ್ಯವನ್ನು ಪ್ರೋತ್ಸಾಹಿಸುತ್ತದೆ ಹಾಗೂ ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಬಿಳಿ ಸಕ್ಕರೆಯ ಬದಲಾಗಿ ಜೇನುತುಪ್ಪವನ್ನು ಬಳಸಿ, ಕರುಳಿನ ಮೇಲೆ, ಫಂಗಸ್-ನಿಂದ ಉತ್ಪತ್ತಿಯಾದ ಮೈಕೋಟಾಕ್ಸಿನ್‍ಗಳ (mycotoxins) ವಿಷಕಾರಿ ಪರಿಣಾಮಗಳನ್ನು ಕಡಿಮೆ ಮಾಡುವ ಸಾಧ್ಯತೆ ಕಂಡುಬಂದಿದೆ.

#೭ ಚರ್ಮ ಮತ್ತು ತಲೆಯ ಚರ್ಮದ (scalp) ಸೋಂಕಿಗೆ ಜೇನುತುಪ್ಪವು ಪರಿಣಾಮಕಾರಿ

ಚರ್ಮ ಮತ್ತು ತಲೆಯ ಚರ್ಮದ (scalp) ಸ್ವಾಸ್ಥ್ಯಕ್ಕೂ ಜೇನುತುಪ್ಪದ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ. ೩೦ ರೋಗಿಗಳ ಸಣ್ಣ-ಪ್ರಮಾಣದ ಅಧ್ಯಯನವು ಸೆಬೊರ್ಹೆರಿಕ್ ಡರ್ಮಟೈಟಿಸ್ (seborrheic dermatitis) ಮತ್ತು ತಲೆಹೊಟ್ಟು ಚಿಕಿತ್ಸೆಯಲ್ಲಿ ಜೇನುತುಪ್ಪದ ಪರಿಣಾಮಗಳನ್ನು ನೋಡಿತು. ಭಾಗವಹಿಸುವವರು ತೆಳುವಾದ ಕಚ್ಚಾ ಜೇನುತುಪ್ಪವನ್ನು, ದಿನ ಬಿಟ್ಟು ದಿನ,  2-3 ನಿಮಿಷಗಳ ಕಾಲ ಸಮಸ್ಯೆಯಿದ್ದ ಜಾಗದಲ್ಲಿ ನಿಧಾನವಾಗಿ ಮಸಾಜ್ ಮಾಡಿಕೊಂಡರುಬೆಚ್ಚಗಿನ ನೀರಿನಿಂದ ತೊಳೆಯಲ್ಪಡುವ ಮೊದಲು ಜೇನುತುಪ್ಪವನ್ನು ಮೂರು ಗಂಟೆಗಳ ಕಾಲ ಅಲ್ಲೆ ಬಿಡಲಾಯಿತು. ಎಲ್ಲಾ ರೋಗಿಗಳು ಚಿಕಿತ್ಸೆಯಿಂದ ಸುಧಾರಣೆ ತೋರಿಸಿದರು. ತುರಿಕೆ ನಿವಾರಣೆಯಾಗಿ, ಎರಡು ವಾರದಲ್ಲಿ ಗಾಯವು ಮಾಗಿತು. ರೋಗಿಗಳ ಕೂದಲುದರುವಿಕೆಯ ಪರಿಸ್ಥಿತಿ ಕೂಡ ಸುಧಾರಿಸಿತು. ವಾರಕ್ಕೊಮ್ಮೆ, ಆರು ತಿಂಗಳವರೆಗೆ ಈ ಚಿಕಿತ್ಸೆಯನ್ನು ಮುಂದುವರೆಸಿದವರಿಗೆ, ಇದೇ ಪರಿಸ್ಥಿತಿ ಮರುಕಳಿಸಲಿಲ್ಲ.

#೮ ಮಕ್ಕಳು ಚೆನ್ನಾಗಿ ನಿದ್ದೆ ಮಾಡಲು ಸಹಾಯಕಾರಿ

ಮಕ್ಕಳಲ್ಲಿ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಜೇನುತುಪ್ಪವು ನೆರವಾಗುತ್ತದೆ ಎಂದು ಹಲವು ಅಧ್ಯಯನಗಳ ಪ್ರಾಥಮಿಕ ಫಲಿತಾಂಶಗಳು ಸೂಚಿಸುತ್ತವೆ. ಪೋಷಕರ ಅಭಿಪ್ರಾಯಗಳ ಆಧಾರದ ಮೇಲೆ, ಜೇನುತುಪ್ಪವು, ರಾತ್ರಿವೇಳೆ ಮಕ್ಕಳಲ್ಲಿ ಕೆಮ್ಮನ್ನು ಕಡಿಮೆ ಮಾಡಿ, ಅವರುಗಳು ಗಾಢವಾಗಿ ಮಲಗಲು ಸಹಾಯ ಮಾಡುತ್ತದೆ ಎಂಬ ತೀರ್ಮಾನಕ್ಕೆ ಅಧ್ಯಯನಗಳು ಬಂದವು.

ಗಮನಿಸಬೇಕಾದ ಅಂಶಗಳು

ಗಾಢವಾದ ಬಣ್ಣದ ಜೇನುತುಪ್ಪವು ಹೆಚ್ಚಿನ ಉತ್ಕರ್ಷಣ (antioxidants) ನಿರೋಧಕಗಳನ್ನು ಹೊಂದಿವೆ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ, ಜೇನುತುಪ್ಪವು ಹಾಳಾಗುವುದಿಲ್ಲ ಹಾಗೂ ಗಾಳಿಯಾಡದ ರೀತಿಯಲ್ಲಿ ಮುಚ್ಚಿಟ್ಟರೆ, ದೀರ್ಘ ಕಾಲದವರೆಗೆ ಅದನ್ನು ಸಂರಕ್ಷಿಸಬಹುದು. ವಾಸ್ತವವಾಗಿ, ಪುರಾತತ್ವಶಾಸ್ತ್ರಜ್ಞರು ಪ್ರಾಚೀನ ಈಜಿಪ್ಟಿನ ನಗರವಾದ ಥೇಬ್ಸ್ (Thebes) ಮತ್ತು ಟುಟಾಂಕಾಮೆನ್ (Tutankhamen) ಸಮಾಧಿಯಲ್ಲಿನ ಫೇರೋಗಳಗೋರಿಗಳಲ್ಲಿ ಜೇನುತುಪ್ಪದ ಮುಚ್ಚಿದ ಜಾಡಿಗಳನ್ನು ಕಂಡುಹಿಡಿದಿದ್ದಾರೆ. ಆ ಎಲ್ಲಾ ಜೇನುತುಪ್ಪದ ಜಾಡಿಗಳೊಂದಿಗೆ ಅವರು ಏನು ಮಾಡಿದ್ದಾರೆ ಎಂಬುರ ಬಗ್ಗೆ ಯಾವುದೇ ಮಾಹಿತಿ ಇಲ್ಲ!

೧೨ ತಿಂಗಳೊಳಗಿನ ಮಕ್ಕಳಿಗೆ ಜೇನುತುಪ್ಪವನ್ನು ನೀಡಬಾರದು, ಇದು ಬಾಟ್ಯುಲಿಸಮ್ ಬ್ಯಾಕ್ಟೀರಿಯಾದ ಬೀಜಕಗಳನ್ನು ಹೊಂದಿರಬಹುದಾದ ಅಪಾಯದಿಂದಾಗಿ infant botulismಗೆ ಕಾರಣವಾಗಬಹುದು. ಈ ಬೀಜಕಗಳು, ಧೂಳು ಮತ್ತು ಮಣ್ಣಿನಲ್ಲಿರುತ್ತವೆ ಹಾಗೂ ಜೇನುತುಪ್ಪದಲ್ಲಿ ಸೇರುವ ಸಾಧ್ಯತೆಯಿದೆ. ಇಂತಹ ಸೋಂಕಿನ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ಇಷ್ಟು ಚಿಕ್ಕ ವಯಸ್ಸಿನ ಮಗುವಿನ ವ್ಯವಸ್ಥೆಯು ಸಜ್ಜಾಗಿರುವುದಿಲ್ಲ.

ನೆನಪಿನಲ್ಲಿಡಬೇಕಾದ ಇನ್ನೊಂದು ಅಂಶವೆಂದರೆ, ಮಧುಮೇಹದ ವಿಷಯಕ್ಕೆ ಬಂದಾಗ, ಜೇನುತುಪ್ಪವು, ಬಿಳಿ ಸಕ್ಕರೆಗಿಂತ ಬೇರೆಯೇನಲ್ಲ. ಎರಡೂ ಉತ್ಪನ್ನಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ ಹಾಗೂ ಮಧುಮೇಹ ರೋಗಿಗಳು ಅದೇ ಕಾಳಜಿಯನ್ನು ತೆಗೆದುಕೊಳ್ಳಬೇಕು.

ಸಿದ್ಧ ಮತ್ತು ಆಯುರ್ವೇದದಲ್ಲಿ ಜೇನುತುಪ್ಪದ ಉಪಯೋಗಗಳು

ಬಹುಶಃ ಭಾರತೀಯರಷ್ಟು ಆಳವಾಗಿ, ಜೇನುತುಪ್ಪದ ಪ್ರಯೋಜನಗಳನ್ನು ಯಾರೂ ಅನ್ವೇಷಣೆ ಮಾಡಿಲ್ಲ. ಜೇನುತುಪ್ಪವನ್ನು ಮನುಕುಲಕ್ಕೆ ಪ್ರಕೃತಿಯ ಉಡುಗೊರೆಯೆಂದು ಪರಿಗಣಿಸಲಾಗಿತ್ತು ಹಾಗೂ ಪ್ರತಿಯೊಂದು ಅಡುಗೆಮನೆಯ ಅಗತ್ಯವಾದ ಪದಾರ್ಥವೆಂದು ಸೂಚಿಸಲಾಗಿತ್ತು. ೧೨ ತಿಂಗಳು ಮೇಲ್ಪಟ್ಟ ಯಾರಿಗಾದರೂ, ಆಹಾರದ ಒಂದು ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತಿತ್ತು. ಜೇನುತುಪ್ಪವು ಪೂರ್ವಸಿದ್ಧ ಆಹಾರವೆಂದು ತಿಳಿಯಲ್ಪಟ್ಟಿತ್ತು ಹಾಗೂ ಮನುಷ್ಯರು ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು ಎಂದು ಹೇಳಲಾಗಿತ್ತು. ಆಯುರ್ವೇದ ಮತ್ತು ಸಿದ್ಧ, ಎರಡರಲ್ಲೂ ಔಷಧಗಳ ಮಾಧ್ಯಮವಾಗಿರುವುದು ಜೇನುತುಪ್ಪದ ಒಂದು ಬಳಕೆ. ಜೇನುತುಪ್ಪದೊಂದಿಗೆ ಬೆರೆಸಿದಾಗ, ಔಷಧಿಗಳನ್ನು ದೇಹವು ಸುಲಭವಾಗಿ ಮತ್ತು ಶೀಘ್ರವಾಗಿ ಹೀರಿಕೊಳ್ಳುತ್ತದೆ ಹಾಗೂ ರಕ್ತದ ಪರಿಚಲನೆಯ ಮೂಲಕ ವ್ಯವಸ್ಥೆಯಲ್ಲಿ ಹರಡುತ್ತವೆ. ಜೇನುತುಪ್ಪವು, ಔಷಧಿಯ ಶಕ್ತಿಯನ್ನು ಕಾಪಾಡುತ್ತದೆ ಹಾಗೂ ಅದರ ಪರಿಣಾಮಕಾರಿತ್ವವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಸಿದ್ಧ ಗ್ರಂಥಗಳು, ಉಷ್ಣ ಸಂಬಂಧಿತ ಸಮಸ್ಯೆಗಳಾದ, ಹೆಚ್ಚಿನ ಕಫ, ವಾಂತಿ, ಗ್ಯಾಸ್ ಸಮಸ್ಯೆಗಳು ಮತ್ತು ರಕ್ತದ ಕಲ್ಮಶದ ಚಿಕಿತ್ಸೆಗಾಗಿ ಜೇನುತುಪ್ಪವನ್ನು ಸೂಚಿಸುತ್ತವೆ. ಸಿದ್ಧ ಗ್ರಂಥಗಳು ಏಳು ಬಗೆಯ ಜೇನುತುಪ್ಪವನ್ನು ಗುರುತಿಸುತ್ತವೆ; ಅವುಗಳಲ್ಲಿ, ದಟ್ಟವಾದ ಪರ್ವತ ಕಾಡುಗಳಿಂದ ಸಂಗ್ರಹಿಸಲ್ಪಟ್ಟ ಜೇನುತುಪ್ಪವು - ಮಲೈಥೆನ್ (malaithen) ಅಥವಾ ಪರ್ವತ ಜೇನು ಎಂದು ಕರೆಯುಲ್ಪಡುವ ಇದು, ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಯ ಜೇನುತುಪ್ಪವು, ಜೇನುನೊಣಗಳು ಮಕರಂದವನ್ನು ಸಂಗ್ರಹಿಸಿರುವ ಅನೇಕ ಔಷಧೀಯ ಸಸ್ಯಗಳ ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.

ಜೇನುತುಪ್ಪದ ಸಾಂಪ್ರದಾಯಿಕ ಪರಿಹಾರಗಳು ಮತ್ತು ಉಪಯೋಗಗಳು

ಜೇನುತುಪ್ಪದ ನೀರು

-೩ ಚಮಚಗಳಷ್ಟು ಜೇನುತುಪ್ಪವನ್ನು ಒಂದು ಲೋಟ ನೀರಿನಲ್ಲಿ ಬೆರಸಿ, ದಿನಕ್ಕೆ ಎರಡು ಬಾರಿಯಂತೆ ಸೇವಿಸುತ್ತ ಬಂದರೆ, ಅಂಗಾಂಶಗಳು ಪೋಷಣೆಗೊಂಡು ನರಮಂಡಲದ ದೌರ್ಬಲ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.

೩ ಚಮಚಗಳಷ್ಟು ಜೇನುತುಪ್ಪವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿದಾಗ, ಅದು ತ್ವರಿತ ಶಕ್ತಿಯನ್ನು ಒದಗಿಸುತ್ತದೆ ಹಾಗೂ ದೇಹದ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ಲೇಪನದ ಉಪಯೋಗಗಳು

ತರಚು ಗಾಯದ ಮೇಲೆ ಜೇನುತುಪ್ಪವನ್ನು ಹಚ್ಚಿದರೆ, ಅದು ಗಾಯವನ್ನು ಬೇಗ ಗುಣ ಮಾಡುತ್ತದೆ ಹಾಗೂ ಗಾಯದ ಕಲೆಯನ್ನು ಕಡಿಮೆ ಮಾಡುತ್ತದೆ.

ಜೇನುತುಪ್ಪ ಮತ್ತು ನಿಂಬೆಯ ಪ್ರಯೋಜನಗಳು

ದಿನಕ್ಕೆರಡು ಬಾರಿ, ಜೇನುತುಪ್ಪ ಮತ್ತು ತಾಜಾ ನಿಂಬೆಯ ರಸವನ್ನು ಮುಖಕ್ಕೆ ಹಚ್ಚಿ, ೨೦ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಮೇಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕಬಹುದು.

ಶುಂಠಿ ಮತ್ತು ಜೇನುತುಪ್ಪದ ಪಾನೀಯ

ಪಾನೀಯ  #೧

ಶುಂಠಿಯನ್ನು ಜಜ್ಜಿ, ಅದರ ರಸವನ್ನು ತೆಗೆಯಿರಿ, ೧೫ ನಿಮಿಷಗಳ ಕಾಲ ಇದನ್ನು ಒಂದು ಗಾಜಿನ ಬಟ್ಟಲಿನಲ್ಲಿ ಇಡಿ. ಆಮೇಲೆ, ತಳಸೇರಿದ್ದನ್ನು ಹಾಗೆ ಬಿಟ್ಟು, ರಸವನ್ನು ಮಾತ್ರ ರೆಫ್ರಿಜಿರೇಟರ್-ನಲ್ಲಿ ಶೇಖರಿಸಿಇಡಿ.

ಎರಡು ಚಮಚಈ ಶುಂಠಿಯ ರಸವನ್ನು ಎರಡು ಚಮಚ ಜೇನುತುಪ್ಪದ ಜೊತೆ ಸೇರಿಸಿ, ಪ್ರತಿದಿನ ಬೆಳಿಗ್ಗೆಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಪ್ರತಿ ೬ ತಿಂಗಳಿಗೊಮ್ಮೆ ಇದನ್ನು ೪೮ ದಿನಗಳವರೆಗೆ ಸೇವಿಸಬಹುದು.

ಪಾನೀಯ  #೨

ತಾಜಾ ಶುಂಠಿಯನ್ನು ತೊಳೆದು ಅದರ ಸಿಪ್ಪೆ ತೆಗೆಯಿರಿ. ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ದೊಡ್ಡ ಬಾಯಿಯ ಗಾಜಿನ ಬಾಟಲ್‍ನಲ್ಲಿ ಜೇನುತುಪ್ಪದಲ್ಲಿ ನೆನೆಸಿ. ತೆಳುವಾದ, ಬಿಳಿಹತ್ತಿ ಬಟ್ಟೆಯಿಂದ ಬಾಟಲಿಯ ಬಾಯಿಯನ್ನು ಮುಚ್ಚಿ ೧೨ ದಿನಗಳ ಕಾಲ ಬಿಸಿಲಿನಲ್ಲಿ ಇಡಿ.ಯಾವುದೇ ಅಜೀರ್ಣ ಸಮಸ್ಯೆಯನ್ನು ತೊಡೆದುಹಾಕಲು, ಬೆಳಿಗ್ಗೆ ಮತ್ತು ಸಂಜೆ, ಪ್ರತಿದಿನ ೨-೪ ತುಂಡುಗಳನ್ನು ಸೇವಿಸಿ.

ಪಾನೀಯ #೩

ನಾಲ್ಕು ಚಮಚಶುಂಠಿಯ ರಸ, ನಾಲ್ಕು ಟೀ ಚಮಚ ಜೇನುತುಪ್ಪ ಮತ್ತು ಎರಡು ಟೀ ಚಮಚ ನಿಂಬೆ ರಸವನ್ನು ಮುಕ್ಕಾಲು ಕಪ್ ನೀರಿನಲ್ಲಿ ಮಿಶ್ರಮಾಡಿ ಸೇವಿಸಿ. ಇದು ನಿಮ್ಮ ಶೀತ ಪ್ರಕೃತಿಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಹೃದಯದ ಆರೈಕೆ

ಒಂದು ತಾಜಾ ದಾಳಿಂಬೆಯ ರಸವನ್ನು ತೆಗೆದುಕೊಂಡು, ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಪ್ರತಿ ದಿನವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

ಸೂಜಿಯಿಂದ ಖರ್ಜೂರದಲ್ಲಿ ರಂಧ್ರಗಳನ್ನು ಮಾಡಿ. ಜೇನುತುಪ್ಪದಲ್ಲಿ ಅದನ್ನು ನೆನೆಸಿ ದಿನಕ್ಕೆ ಎರಡು ಬಾರಿ ೨-೪ ಖರ್ಜೂರಗಳನ್ನು ತಿನ್ನಿ.

ಶೀತಕ್ಕೆ ಜೇನುತುಪ್ಪದ ಪರಿಹಾರಗಳು

ನೀವು ಶೀತ-ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರೆ ಅಥವಾ ಪ್ರತಿದಿನ ಬೆಳಿಗ್ಗೆ  ಕಟ್ಟಿದ ಮೂಗನ್ನು ನಿಭಾಯಿಸಬೇಕಿದ್ದರೆ; ಬೇವು, ಮೆಣಸು, ಜೇನುತುಪ್ಪ ಮತ್ತು ಅರಿಶಿನದ ಸೇವನೆಯು ನಿಮಗೆ ಮಹತ್ತರವಾಗಿ ಸಹಾಯ ಮಾಡಬಹುದು. ಇಲ್ಲಿ ಕೆಲವು ಸರಳ ಪರಿಹಾರಗಳನ್ನು ಕೊಡಲಾಗಿದೆ.

ಪರಿಹಾರ #೧

೧೦-೧೨ ಮೆಣಸುಕಾಳುಗಳನ್ನು ಜಜ್ಜಿ, ಅದನ್ನು ಜೇನುತುಪ್ಪದಲ್ಲಿ ರಾತ್ರಿಯಿಡಿ (೮-೧೨ ಗಂಟೆಗಳ ಕಾಲ) ನೆನೆಸಿ. ಬೆಳಿಗ್ಗೆ ಈ ಮೆಣಸುಕಾಳುಗಳನ್ನು ಚೆನ್ನಾಗಿ ಅಗಿದು ತಿನ್ನಿ. ಜೇನುತುಪ್ಪಕ್ಕೆ ನೀವು ಸ್ವಲ್ಪ ಅರಿಶಿನನ್ನೂ ಸೇರಿಸಬಹುದು.

ಪರಿಹಾರ #೨

ಬೇವಿನ ಎಲೆಗಳನ್ನು ಗಟ್ಟಿಯಾಗಿ ರುಬ್ಬಿ, ಗೋಲಿ ಗಾತ್ರದ ಉಂಡೆಯನ್ನಾಗಿ ಮಾಡಿ. ಇದನ್ನು ಜೇನುತುಪ್ಪದಲ್ಲಿ ಅದ್ದಿ, ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆ ಸೇವಿಸಿ. ಬೇವು ವ್ಯವಸ್ಥೆಯಲ್ಲಿ ಹಾದು ಹೋಗಲು ಅನುಕೂಲವಾಗುವುದಕ್ಕೆ, 60 ನಿಮಿಷಗಳ ಕಾಲ ಏನನ್ನೂ ತಿನ್ನಬೇಡಿ. ಇದು ಚರ್ಮ ಅಥವಾ ಆಹಾರ ಅಲರ್ಜಿಯಂತಹ ಇತರ ರೀತಿಯ ಅಲರ್ಜಿಗಳಿಗೂ ಸಹಾಯ ಮಾಡುತ್ತದೆ. ಬೇವಿನಲ್ಲಿ ಅನೇಕ ಔಷಧೀಯ ಗುಣಗಳಿರುವ ಕಾರಣ ಈ ಅಭ್ಯಾಸವು ಹೆಚ್ಚು ಲಾಭದಾಯಕವಾಗಿದೆ. ಬಲಿತ ಬೇವಿನ ಎಲೆಗಳು ತುಂಬಾ ಕಹಿಯೆನಿಸಿದರೆ, ಎಳೆಯ ಬೇವಿನ ಎಲೆಗಳನ್ನು ಸಹ ಉಪಯೋಗಿಸಬಹುದು.

ಕಲ್ಲಂಗಡಿ-ಶುಂಠಿ-ಪುದೀನ ತಂಪು ಪಾನೀಯ

ಬೇಸಿಗೆಯ ತಿಂಗಳುಗಳಲ್ಲಿ ದೊಡ್ಡ ವರದಾನವಾಗಬಲ್ಲ ಜೇನುತುಪ್ಪ ಮತ್ತು ಕಲ್ಲಂಗಡಿಯ "ತಂಪಾದ" ಪಾನೀಯದ ಪಾಕವಿಧಾನ ಇಲ್ಲಿದೆ.

 

ಬೇಕಾಗುವ ಪದಾರ್ಥಗಳು

ಕಾಲು ಭಾಗ ಕಲ್ಲಂಗಡಿ ಹಣ್ಣು

೧ ಇಂಚು ಶುಂಠಿಯ ತುಂಡು

¼ ಕಪ್ ತಾಜಾ ಪುದೀನ ಎಲೆಗಳು

ಉಪ್ಪು ರುಚಿಗೆ ತಕ್ಕಷ್ಟು

ಕಪ್ಪು ಮೆಣಸುಕಾಳು ಪುಡಿ ರುಚಿಗೆ ತಕ್ಕಷ್ಟು

೩ ಟೇಬಲ್ ಸ್ಪೂನ್ ಜೇನುತುಪ್ಪ

 

ಮಾಡುವ ವಿಧಾನ

ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗೂ ಬೀಜ ತೆಗೆದು, ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು mixie jar ಅಥವಾ blender ಗೆ ಹಾಕಿ.

ಶುಂಠಿಯ ಸಿಪ್ಪೆ ತೆಗೆದು, ಅದನ್ನು ಜಜ್ಜಿ jarಗೆ ಹಾಕಿ.

ಪುದೀನಎಲೆಗಳು, ಉಪ್ಪು, ಮೆಣಸುಕಾಳು ಪುಡಿ ಮತ್ತು ಜೇನುತುಪ್ಪವನ್ನು ಸೇರಿಸಿ.

ನುಣ್ಣಾಗಾಗುವ ತನಕ ರುಬ್ಬಿ, ರಸವನ್ನು ಜರಡಿ ಹಿಡಿಯಿರಿ.

ಪಾನೀಯವನ್ನು ಲೋಟದಲ್ಲಿ  ಹಾಕಿ ಕುಡಿಯಲು ಕೊಡಿ.

 

ಲೇಖನವನ್ನು ಮುಗಿಸಲುಜೇನು ಮತ್ತು ಜೇನುನೊಣಗಳ ಬಗ್ಗೆ ಕೆಲವು ವಾಸ್ತವಾಂಶಗಳು ಇಲ್ಲಿವೆ.

ಸುಮಾರು 25,000 ಬಗೆಯ ಜೇನು ಹುಳುಗಳು ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ. ದುರದೃಷ್ಟವಶಾತ್, ಇದರಲ್ಲಿ ಅನೇಕ ಜಾತಿಗಳು ಅಪಾಯದ ಅಂಚಿನಲ್ಲಿದೆ.

ಮಾರುಕಟ್ಟೆಯಲ್ಲಿ ದೊರಕುವ ಶೇ. ೮೦% ಆಹಾರ ಪದಾರ್ಥಗಳು, ಜೇನಿನಿಂದಾದ ಬೀಜ-ಪರಾಗ ಸ್ಪರ್ಶದ ಪರಿಣಾಮವಾಗಿ ದೊರಕುವುದು. ಮಾನವರು ಜೇನುತುಪ್ಪವನ್ನು ಕ್ರಿ.ಪೂ. ೬೦೦೦ರಿಂದ ಸಂಗ್ರಹಣೆ ಮಾಡುತ್ತಿದ್ದರೆಂಬುವುದು, ಈ ಸಂಗ್ರಹಣೆಯ ಮೊದಲ ದಾಖಲೆಯಾಗಿದೆ. ಸ್ಪೇನ್ ದೇಶದ ವೇಲೆನ್ಸಿಯಾದಲ್ಲಿನ (Valencia) Cave of the Spider ಎಂಬ ಗುಹೆಯಲ್ಲಿ ಇದನ್ನು ಚಿತ್ರಿಸಲಾಗಿದೆ. ಜೇನುಹುಳುಗಳು, ೫೦೦ ಗ್ರಾಂ ಜೇನುತುಪ್ಪವನ್ನು ಉತ್ಪಾದಿಸಲು, ಮಕರಂದಕ್ಕಾಗಿ ಸುಮಾರು ೧೦ ದಶಲಕ್ಷ ಬಾರಿ ಹಾರಾಟವನ್ನು ಮಾಡುತ್ತವೆ. ಇದು ಪ್ರಪಂಚವನ್ನು ೧.೫ಬಾರಿಸುತ್ತುವುದಕ್ಕೆ ಸಮನಾಗಿರುತ್ತದೆ.

ಸಂಪಾದಕರ ಟಿಪ್ಪಣಿ: ಈಶ ಶೊಪಿ ಹಲವಾರು ಜೇನು ತುಪ್ಪದ ಉತ್ಪನ್ನಗಳನ್ನು ಸಂಗ್ರಹದಲ್ಲಿ ಇಟ್ಟಿರುತ್ತದೆ. ಭಾರತದಲ್ಲಿ ವಿತರಣೆಗಾಗಿ, ಆಹಾರ ಪದಾರ್ಥಗಳು ಮತ್ತು ದೇಹದ ಆರೈಕೆ ಉತ್ಪನ್ನಗಳ ಪಟ್ಟಿ ಇಲ್ಲಿದೆ.

ಅಮೇರಿಕೆಯಲ್ಲಿ ವಿತರಣೆಗಾಗಿ, ದೇಹದ ಆರೈಕೆ ಉತ್ಪನ್ನಗಳ ಪಟ್ಟಿ ಇಲ್ಲಿದೆ.