ಕೈಲಾಸ ವಾದ್ಯವು ತಮಿಳುನಾಡಿಗೆ ಬಂದದ್ದು ಮುಖ್ಯವಾಗಿ 63 ನಾಯನ್ಮಾರ್ಗಳಲ್ಲಿ (ತಮಿಳು ಶಿವ ಸಂತರು) ಒಬ್ಬರಾದ ಅಪ್ಪರ್ರಿಂದ.
ತಿರುನಾವುಕ್ಕರಸರ್ ಎಂದೂ ಕರೆಯಲ್ಪಡುವ ಅಪ್ಪರ್, ಅನೇಕ ಶಿವ ದೇವಾಲಯಗಳಿಗೆ ಪ್ರಯಾಣಿಸಿ, ಶಿವನ ಬಗ್ಗೆ ಗಹನವಾದ, ಅರ್ಥಗರ್ಭಿತ ಸ್ತೋತ್ರಗಳನ್ನು ಹಾಡುತ್ತಿದ್ದರು. ಸುಮಾರು 80 ವರ್ಷ ವಯಸ್ಸಿನಲ್ಲಿ, ಅವರಿಗೆ ಕೈಲಾಸ ಪರ್ವತಕ್ಕೆ ಭೇಟಿ ನೀಡಬೇಕೆಂಬ ತೀವ್ರ ಬಯಕೆ ಉಂಟಾಯಿತು. ಅವರ ದೇಹ ದುರ್ಬಲವಾಗಿದ್ದರೂ, ಅವರ ನಿಶ್ಚಯ ಎಷ್ಟು ದೃಢವಾಗಿತ್ತೆಂದರೆ, ಆಯಾಸಗೊಳ್ಳುವವರೆಗೂ ಅವರು ನಡೆದರು, ತೆವಳಿದರು ಮತ್ತು ಉರುಳಿದರು ಕೂಡ.
ಶಿವನು ಒಬ್ಬ ವೃದ್ಧ ಸಾಧುವಿನ ವೇಷದಲ್ಲಿ ಅಪ್ಪರ್ ಎದುರು ಕಾಣಿಸಿಕೊಂಡು, 'ಕೈಲಾಸದಲ್ಲಿ ನಿನಗೆ ಶಿವ ಸಿಗುವುದಿಲ್ಲ' ಎಂದು ಹೇಳಿ ಹಿಂತಿರುಗಲು ಸಲಹೆ ನೀಡಿದನು. ಆದರೆ ಅಪ್ಪರ್ ದೃಢವಾಗಿ, "ನಾನು ಶಿವನ ದರ್ಶನ ಪಡೆಯುತ್ತೇನೆ, ಇಲ್ಲವೇ ಇಲ್ಲೇ ಸಾಯುತ್ತೇನೆ!" ಎಂದರು. ಶಿವನು ಅಪ್ಪರ್ಗೆ ತನ್ನನ್ನು ಚೇತರಿಸಿಕೊಳ್ಳಲು ಹತ್ತಿರದ ಕೊಳದಲ್ಲಿ ಮುಳುಗಿ ಬರಲು ಒಪ್ಪಿಸಿದನು. ಅಪ್ಪರ್ ಕೊಳದಲ್ಲಿ ಮುಳುಗಿದಾಗ, ಅವರ ಆಶ್ಚರ್ಯಕ್ಕೆ, ತಿರುವೈಯಾರಿನಲ್ಲಿ ಮೇಲೆದ್ದು ಬಂದರು ಮತ್ತು ತಾವು ಬಯಸಿದ್ದ ದರ್ಶನವನ್ನು ಪಡೆದರು. ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಮತ್ತು ಮರಗಳಲ್ಲಿ - ಎಲ್ಲೆಡೆ ಶಿವ ಮತ್ತು ಶಕ್ತಿಯ ಉಪಸ್ಥಿತಿಯನ್ನು ಅರಿತುಕೊಂಡರು. ಇದರಿಂದ ಕೈಲಾಸ ವಾದ್ಯಕ್ಕೆ ಜನ್ಮ ನೀಡಲಾಯಿತು.
ಕೈಲಾಸ ವಾದ್ಯವನ್ನು ಈಗ ತಮಿಳುನಾಡಿನ ಅನೇಕ ಶಿವ ದೇವಾಲಯಗಳಲ್ಲಿ ನಡೆಸಲಾಗುತ್ತದೆ.
ಶಬ್ದದ ಪ್ರಾಮುಖ್ಯತೆಯೋಗ ಸಂಸ್ಕೃತಿಯಲ್ಲಿ, ಶಬ್ದಗಳಿಗೆ ಅಪಾರ ಪ್ರಾಮುಖ್ಯತೆ ಇದೆ ಮತ್ತು ಅವುಗಳನ್ನು ಮಾನವ ಪ್ರಜ್ಞೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಯಾವಾಗಲೂ ಮಧುರವಾಗಿರದಿದ್ದರೂ, ಕೆಲವು ಶಬ್ದಗಳು ಒಬ್ಬರ ವ್ಯವಸ್ಥೆಯ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ. ಉದಾಹರಣೆಗೆ, ಒಂದು ಸರಳವಾದ ಡಮರು ನಾದವು, ನಿಮ್ಮೊಳಗೆ ಒಂದು ಬೇರೆಯೇ ಆಯಾಮವನ್ನು ಪ್ರಚೋದಿಸಬಹುದು. ಕೈಲಾಸ ವಾದ್ಯವು ಶಿವಾನುಭವವನ್ನು ಅರಿಯಲು ನೆರವಾಗಲೆಂದು ನಡೆಸಲಾಗುವ ಪುರಾತನವಾದ ಒಂದು ಶಕ್ತಿಯುತ ವಾದ್ಯಗಳ ಸಂಗೀತದ ಅರ್ಪಣೆ.
ಈ ಪ್ರಾಚೀನ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸಲು, ಶಿವಾಂಗ ತಂಡವು ತಮಿಳುನಾಡಿನಾದ್ಯಂತ ವಿವಿಧ ಶಿವ ದೇವಾಲಯಗಳಲ್ಲಿ ಕೈಲಾಸ ವಾದ್ಯವನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು info@shivanga.org ಗೆ ಬರೆದು ಕಳುಹಿಸಿ. ವಿಷಯದ ಸಾಲಿನಲ್ಲಿ "ಕೈಲಾಸ ವಾದ್ಯ" ಎನ್ನುವುದನ್ನು ದಯವಿಟ್ಟು ಉಲ್ಲೇಖಿಸಿ.