ಪ್ರಶ್ನೆ: ಸದ್ಗುರುಗಳೇ, ನಮ್ಮ ಜೀವನದಲ್ಲಿ ಕಹಿ ಅನುಭವಗಳಾದರೆ ಅದಕ್ಕೆ ನಮ್ಮ ಹಿಂದಿನ ಕರ್ಮಗಳೇ ಕಾರಣ ಎಂದು ನೀವು ನಮಗೆ ಹಲವು ಬಾರಿ ಹೇಳಿದ್ದೀರಿ. ಭವಿಷ್ಯದಲ್ಲಿ ಕಹಿತನವನ್ನು ತಪ್ಪಿಸಲು ನಾವು ಇಂದು ಯಾವ ರೀತಿಯ ಚಟುವಟಿಕೆಗಳನ್ನು ಮಾಡಬೇಕು?

ಸದ್ಗುರು: ಯಾವುದೇ ಅನುಭವದ ಕಹಿತನವು, ಏನಾಯಿತು ಎನ್ನುವುದರಲ್ಲಿ ಅಲ್ಲ, ನೀವು ಅದನ್ನು ಹೇಗೆ ಸ್ವೀಕರಿಸಿದ್ದೀರಿ ಎನ್ನುವುದರಲ್ಲಿದೆ. ಒಬ್ಬ ವ್ಯಕ್ತಿಗೆ ಬಹಳ ಕಹಿಯಾಗಿರುವ ಸಂಗತಿ ಇನ್ನೊಬ್ಬ ವ್ಯಕ್ತಿಗೆ ಆಶೀರ್ವಾದ ಆಗಬಹುದು. ಒಮ್ಮೆ, ದುಃಖಗ್ರಸ್ತ ವ್ಯಕ್ತಿಯೊಬ್ಬನು ಒಂದು ಸಮಾಧಿಯ ಮೇಲೆ ಬಿದ್ದು ಕಟುವಾಗಿ ಅಳುತ್ತಾ , ತನ್ನ ತಲೆಯನ್ನು ಅದರ ಮೇಲೆ ಚಚ್ಚುತ್ತಾ, "ನನ್ನ ಜೀವವೇ! ಓ! ಎಂಥಾ ನಿರರ್ಥಕ! ನೀನು ಹೋಗಿರುವುದರಿಂದ ನನ್ನ ಈ ದೇಹ ಎಷ್ಟು ವ್ಯರ್ಥ. ನೀನು ಬದುಕಿದ್ದಿದ್ದರೆ! ವಿಧಿ ಇಷ್ಟು ಕ್ರೂರವಾಗಿ ನಿನ್ನನ್ನು ಈ ಲೋಕದಿಂದ ತೆಗೆದುಕೊಂಡು ಹೋಗಿರದಿದ್ದರೆ! ಎಲ್ಲಾ ಎಷ್ಟೊಂದು ಭಿನ್ನವಾಗಿರುತ್ತಿತ್ತು!" ಸಮೀಪದಲ್ಲಿದ್ದ ಒಬ್ಬ ಪಾದ್ರಿಯು ಇದನ್ನು ಕೇಳಿ ಹೀಗೆ ಹೇಳಿದನು,  "ಈ ಮಣ್ಣಿನ ದಿಬ್ಬದ ಕೆಳಗೆ ಮಲಗಿರುವ ವ್ಯಕ್ತಿ ನಿಮಗೆ ಬಹು ಮುಖ್ಯ ವ್ಯಕ್ತಿ ಆಗಿರಬೇಕೆಂದು ಭಾವಿಸುತ್ತೇನೆ. " ಆಪ್ತನೇ ? ಹೌದು, ನಿಜ," ಆ ಮನುಷ್ಯ ಇನ್ನಷ್ಟು ಜೋರಾಗಿ ಗೋಳಾಡಿ ಅಳುತ್ತಾ ಹೇಳಿದ, "ಈತ ನನ್ನ ಹೆಂಡತಿಯ ಮೊದಲ ಗಂಡ!" ಕಹಿತನವು ಏನಾಗುತ್ತಿದೆಯೋ ಅದರಲ್ಲಿಲ್ಲ. ಅದನ್ನು ಅನುಭವಿಸಲು ನಿಮ್ಮನ್ನು ನೀವು ಹೇಗೆ ಅನುಮತಿಸುತ್ತೀರಿ ಎನ್ನುವುದರಲ್ಲಿದೆ. ಅದೇ ರೀತಿ, ಹಿಂದಿನ ಕಾರ್ಯ ಅಥವಾ ಕರ್ಮವೂ ಕೇವಲ ಅದನ್ನು ಮಾಡುವುದರಲ್ಲಿಲ್ಲ, ಅದನ್ನು ಮಾಡಿದ ಉದ್ದೇಶದಲ್ಲಿದೆ.

ಕರ್ಮವು  ಕೇವಲ ಏನಾದರೂ ಮಾಡಬೇಕೆಂಬ ಅಗತ್ಯತೆಗೆ ಸಂಬಂಧಿಸಿದ್ದು. ನಿಮಗೆ ಏನನ್ನೂ ಮಾಡುವ ಅಗತ್ಯವಿಲ್ಲದಿದ್ದಾಗ ನೀವು ಕೇವಲ ಅಗತ್ಯವಿರುವುದನ್ನು ಮಾಡಿದರೆ, ಅದಕ್ಕೆ ಯಾವುದೇ ಕರ್ಮದ ಬಂಧನವಿರುವುದಿಲ್ಲ.

ನೀವು ನನಗೆ ಅಥವಾ ನಾನು ಹೇಳುವುದಕ್ಕೆ ಸ್ವಲ್ಪ ಮುಕ್ತವಾಗಿದ್ದರೆ, ಕಾರ್ಯೋದ್ದೇಶವು ದೂರವಾಗುತ್ತದೆ, ಆಗ ನೀವು ಕೇವಲ ಅಗತ್ಯವಿರುವುದನ್ನು ಮಾಡುತ್ತೀರಿ. ಇದೇ ಅರಿವಿನ ಅರ್ಥ;  ಯಾವುದೇ ಉದ್ದೇಶ ಇಲ್ಲದೇ ಇರುವುದು. ಎಲ್ಲಿ ಉದ್ದೇಶ ಇಲ್ಲವೋ ಅಲ್ಲಿ ಯಾವ ಕರ್ಮವೂ ಇಲ್ಲ. ಸ್ವೀಕಾರ ಎಂದರೆ  ನೀವು ಕೇವಲ ಅಗತ್ಯವಿರುವುದನ್ನು ಮಾಡುತ್ತೀರಿ. ಮಿತಿಯಿಲ್ಲದ ಜವಾಬ್ಧಾರಿ ಎಂದರೆ ನಿಮಗೆ ಯಾವುದರ ಬಗ್ಗೆಯೂ ಯಾವುದೇ ಉದ್ದೇಶ ಇರುವುದಿಲ್ಲ. ಪ್ರತಿಯೊಂದು ಸಂದರ್ಭದಲ್ಲೂ, ನಿಮ್ಮ ಅರಿವಿಗೆ ಅನುಸಾರವಾಗಿ ಏನು ಅಗತ್ಯ ಎಂದು ಗಮನಿಸುತ್ತೀರೋ, ಅದನ್ನೇ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡುತ್ತೀರಿ. ನಿಮ್ಮ ಕಾರ್ಯೋದ್ದೇಶದ ಬಲವೇ ಕರ್ಮವನ್ನು ನಿರ್ಮಿಸುತ್ತದೆ; ಅದು ಒಳ್ಳೆಯದು ಅಥವಾ ಕೆಟ್ಟದು, ಎನ್ನುವುದು ಅಪ್ರಸ್ತುತವಾಗುತ್ತದೆ.

ಜನರು ನನಗೆ ಅದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾರೆ, "ನಿಮ್ಮ ಧ್ಯೇಯವೇನು?" "ನನಗೆ ಯಾವುದೇ ಧ್ಯೇಯವಿಲ್ಲ. ಸುಮ್ಮನೆ ಮರುಳು ಮಾಡುತ್ತಿದ್ದೇನೆ," ಎಂದು ನಾನು ಅವರಿಗೆ ಹೇಳಿದಾಗ, ಕ್ಷುಲ್ಲಕವೆಂದು ಭಾವಿಸುತ್ತಾರೆ. ಇದು ಬದುಕುವ ಬಗ್ಗೆ ನಾನು ಹೇಳಬಹುದಾದ ಆಳವಾದ ಹೇಳಿಕೆ ಎಂದು ಅವರು ಅರ್ಥಮಾಡಿಕೊಳ್ಳುವುದಿಲ್ಲ, ಏಕೆಂದರೆ ಇಲ್ಲಿ ಯಾವುದೇ ನಿರ್ದಿಷ್ಟವಾದ ಉದ್ದೇಶವಿಲ್ಲ - ಅಗತ್ಯವಿರುವುದನ್ನು ಮಾಡುವುದು, ಅಷ್ಟೆ. ಇದರಲ್ಲಿ, ನೀವು ಏನನ್ನೇ ಅನುಭವಿಸಿದರೂ, ಯಾವುದೇ ಕರ್ಮವಿಲ್ಲ. ನೀವು ಏನು ಮಾಡುತ್ತಿದ್ದೀರಿ, ಅದು ಕೇವಲ ಅಗತ್ಯವಿರುವಂತೆ ನಡೆಯುತ್ತಿದೆ. ಕರ್ಮವು ಕೇವಲ ನಿಮಗೆ ಏನಾದರೂ ಮಾಡಬೇಕೆಂಬ ಅಗತ್ಯಕ್ಕೆ ಸಂಬಂಧಿಸಿದ್ದು. ನಿಮಗೆ ಏನನ್ನೂ ಮಾಡುವ ಅಗತ್ಯವಿಲ್ಲದಿದ್ದಾಗ ಮತ್ತು ನೀವು ಬೇಕಾದುದನ್ನು ಸಲೀಸಾಗಿ ಮಾಡಿದಾಗ, ಅದಕ್ಕೆ ಯಾವುದೇ ಕರ್ಮದ ಬಾಂಧವ್ಯವಿರುವುದಿಲ್ಲ. ಇದು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ.