ಮಹಾಶಿವರಾತ್ರಿಯು ಭಾರತದ ಆಧ್ಯಾತ್ಮಿಕ ಆಚರಣೆಗಳಲ್ಲಿ ಅತ್ಯಂತ ಮಹತ್ತರವಾದ ಸಂದರ್ಭಗಳಲ್ಲೊಂದು. ಮಹಾಶಿವರಾತ್ರಿಯನ್ನು ಅಷ್ಟೊಂದು ಮುಖ್ಯವಾಗಿಸುವುದು ಏನು ಮತ್ತು ನಾವು ಅದರಲ್ಲಿ ಹೇಗೆ ಪಾಲ್ಗೊಳ್ಳಬಹುದು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ.

ಸದ್ಗುರು: ಒಂದು ಕಾಲದಲ್ಲಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ವರ್ಷದ ಮುನ್ನೂರ ಅರವತ್ತೈದು ದಿನಗಳೂ ಹಬ್ಬಗಳಿರುತ್ತಿದ್ದವು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ವರ್ಷದ ಪ್ರತಿದಿನವನ್ನೂ ಆಚರಿಸಲು ಅವರಿಗೊಂದು ನೆಪ ಬೇಕಿತ್ತಷ್ಟೆ. ಈ ಮುನ್ನೂರ ಅರವತ್ತೈದು ಹಬ್ಬಗಳನ್ನು ಬೇರೆ ಬೇರೆ ಕಾರಣಗಳಿಗೆ ಮತ್ತು ಜೀವನದ ಬೇರೆ ಬೇರೆ ಉದ್ದೇಶಗಳಿಗೆ ಆಚರಿಸಲಾಗುತ್ತಿತ್ತು. ನಾನಾ ರೀತಿಯ ಐತಿಹಾಸಿಕ ಘಟನೆಗಳು, ಗೆಲುವುಗಳು, ಅಥವಾ ಜೀವನದ ನಿರ್ದಿಷ್ಟ ಸಂದರ್ಭಗಳಾದ ಬಿತ್ತನೆ, ನಾಟಿ ಮತ್ತು ಕೊಯ್ಲು ಮಾಡುವುದನ್ನು ಸಂಭ್ರಮಿಸಲು ಆ ಹಬ್ಬಗಳನ್ನು ಆಚರಿಸುತ್ತಿದ್ದರು. ಹೀಗೆ ಪ್ರತಿ ಸಂದರ್ಭಕ್ಕೂ ಒಂದು ಹಬ್ಬವಿರುತ್ತಿತ್ತು. ಆದರೆ ಮಹಾಶಿವರಾತ್ರಿಯು ಬೇರೆಯದ್ದೇ ಪ್ರಾಮುಖ್ಯತೆಯನ್ನು ಹೊಂದಿದೆ.

ಪ್ರತಿ ಚಾಂದ್ರಮಾಸದ ಹದಿನಾಲ್ಕನೇ ರಾತ್ರಿ ಅಥವಾ ಅಮಾವಾಸ್ಯೆಯ ಹಿಂದಿನ ರಾತ್ರಿಯನ್ನು ಶಿವರಾತ್ರಿಯೆಂದು ಕರೆಯಲಾಗುತ್ತದೆ.  ಒಂದು ವರ್ಷದಲ್ಲಿ ಸಂಭವಿಸುವ ಎಲ್ಲಾ ಹನ್ನೆರಡು ಶಿವರಾತ್ರಿಗಳಲ್ಲಿ, ಫೆಬ್ರವರಿ-ಮಾರ್‌್ತನಲ್ಲಿ ಬರುವ ಮಹಾಶಿವರಾತ್ರಿಯು ಹೆಚ್ಚಿನ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ರಾತ್ರಿಯಂದು, ಭೂಮಿಯ ಉತ್ತರ ಗೋಳಾರ್ಧವು ಯಾವ ಸ್ಥಾನದಲ್ಲಿರುತ್ತದೆಯೆಂದರೆ, ಅದರಿಂದ ಮನುಷ್ಯರ ಶಕ್ತಿಯಲ್ಲಿ ನೈಸರ್ಗಿಕವಾದ ಏರಿಕೆ ಉಂಟಾಗುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಮನುಷ್ಯರನ್ನು ಅವರ ಆಧ್ಯಾತ್ಮಿಕ ಉನ್ನತಿಗೆ ತಳ್ಳುತ್ತಿರುತ್ತದೆ. ನಾವಿದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದೇ ನಮ್ಮ ಸಂಪ್ರದಾಯದಲ್ಲಿ ರಾತ್ರಿಯಿಡೀ ಜರುಗುವಂತಹ ಒಂದು ಉತ್ಸವವನ್ನು ನಾವು ನಿಗದಿಪಡಿಸಿದ್ದೇವೆ. ರಾತ್ರಿ ಪೂರ್ತಿ ನಡೆಯುವ ಈ ಉತ್ಸವದ ಮೂಲಭೂತ ಅಂಶವೆಂದರೆ, ಸ್ವಾಭಾವಿಕವಾಗಿ ಏರಿಕೆಯಾದಂತಹ ಶಕ್ತಿಗೆ ಅದರ ದಾರಿಯನ್ನು ಕಂಡುಕೊಳ್ಳಲು ಅನುವು ಮಾಡಿಕೊಡುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಅದಕ್ಕಾಗಿ ನೀವು ನಿಮ್ಮ ಬೆನ್ನುಹುರಿಯನ್ನು ನೆಟ್ಟಗಿನ ಸ್ಥಿತಿಯಲ್ಲಿ ಇಟ್ಟುಕೊಂಡು, ಎಚ್ಚರವಾಗಿರಬೇಕಾಗುತ್ತದೆ. 

ಅನೇಕ ಸಹಸ್ರಮಾನಗಳ ಧ್ಯಾನದ ನಂತರ, ಒಂದು ದಿನ ಅವನು ಸಂಪೂರ್ಣವಾಗಿ ಅಚಲವಾದನು. ಆ ದಿನವೇ ಮಹಾಶಿವರಾತ್ರಿ.

ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಮಹಾಶಿವರಾತ್ರಿಯು ಬಹಳ ಪ್ರಮುಖವಾದದ್ದು. ಸಾಂಸಾರಿಕ ಜೀವನದಲ್ಲಿರುವವರಿಗೆ ಮತ್ತು ಜಗತ್ತಿನಲ್ಲಿನ ಮಹತ್ವಾಕಾಂಕ್ಷಿಗಳಿಗೂ ಸಹ ಇದು ತುಂಬ ಮಹತ್ವವುಳ್ಳದ್ದಾಗಿದೆ. ಸಂಸಾರಸ್ಥರು ಮಹಾಶಿವರಾತ್ರಿಯನ್ನು ಶಿವನ ಮದುವೆ ವಾರ್ಷಿಕೋತ್ಸವವಾಗಿ ಆಚರಿಸುತ್ತಾರೆ. ಲೌಕಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವವರು ಆ ದಿನವನ್ನು ಶಿವನು ತನ್ನ ಶತ್ರುಗಳನ್ನೆಲ್ಲಾ ಜಯಿಸಿದ ದಿನವಾಗಿ ನೋಡುತ್ತಾರೆ.

ಆದರೆ ಆಧ್ಯಾತ್ಮಿಕ ಸಾಧಕರು ಮತ್ತು ತಪಸ್ವಿಗಳಿಗೆ ಮಹಾಶಿವರಾತ್ರಿಯು ಶಿವನು ಕೈಲಾಸ ಪರ್ವತದೊಂದಿಗೆ ಒಂದಾದ ದಿನ. ಅವನು ಪರ್ವತದ ಹಾಗೆ ಸಂಪೂರ್ಣವಾಗಿ ಅಚಲನಾದ. ಯೋಗ ಪರಂಪರೆಯಲ್ಲಿ, ಶಿವನನ್ನು ಒಬ್ಬ ದೇವರಾಗಿ ಪೂಜಿಸಲಾಗುವುದಿಲ್ಲ, ಆದರೆ ಜ್ಞಾನದ ಮೂಲವಾದ ಮೊದಲ ಗುರು, ಆದಿ ಗುರು ಎಂದು ಪರಿಗಣಿಸಲಾಗುತ್ತದೆ. ಅನೇಕ ಸಹಸ್ರಮಾನಗಳ ಧ್ಯಾನದ ನಂತರ, ಒಂದು ದಿನ ಅವನು ಸಂಪೂರ್ಣವಾಗಿ ಅಚಲವಾದನು. ಆ ದಿನವೇ ಮಹಾಶಿವರಾತ್ರಿ. ಅವನಲ್ಲಿನ ಎಲ್ಲಾ ಚಲನೆಗಳೂ ನಿಂತುಹೋಗಿ, ಅವನು ಅತ್ಯಂತ ನಿಶ್ಚಲನಾದನು. ಆದ್ದರಿಂದ ಯೋಗಿಗಳು ಮಹಾಶಿವರಾತ್ರಿಯನ್ನು ಅಚಲತೆಯ ರಾತ್ರಿಯಾಗಿ ಕಾಣುತ್ತಾರೆ.

ದಂತಕಥೆಗಳನ್ನು ಹೊರತುಪಡಿಸಿ, ಯೋಗ ಸಂಪ್ರದಾಯದಲ್ಲಿ ಈ ದಿನ ಹಾಗೂ ರಾತ್ರಿಯನ್ನು ಏಕಿಷ್ಟು ಮುಖ್ಯವಾಗಿ ಕಾಣುತ್ತಾರೆಂದರೆ ಆಧ್ಯಾತ್ಮಿಕ ಅನ್ವೇಷಕರಿಗೆ ಅದು ನೀಡುವ ಅಗಾಧವಾದ ಸಾಧ್ಯತೆಗಳ ಕಾರಣಕ್ಕೆ. ಆಧುನಿಕ ವಿಜ್ಞಾನವು ಹಲವು ಹಂತಗಳ ಪ್ರಯೋಗಗಳ ಮೂಲಕ ಹಾದು ಹೋಗಿ, ನೀವಿಂದು ತಿಳಿದಿರುವ ಎಲ್ಲ ಜೀವಗಳೂ, ದ್ರವ್ಯಪದಾರ್ಥ ಮತ್ತು ಅಸ್ತಿತ್ವವೆಲ್ಲವೂ, ಬ್ರಹ್ಮಾಂಡ ಹಾಗೂ ಎಲ್ಲ ಆಕಾಶಗಂಗೆಗಳೂ ಕೋಟ್ಯಂತರ ರೀತಿಗಳಲ್ಲಿ ಅಭಿವ್ಯಕ್ತವಾಗಿರುವ ಒಂದೇ ಒಂದು ಶಕ್ತಿ ಎಂದು ಸಾಬೀತುಪಡಿಸುವ ಹಂತಕ್ಕೆ ಬಂದು ತಲುಪಿದೆ.

ಈ ವೈಜ್ಞಾನಿಕ ವಾಸ್ತವಾಂಶವು ಪ್ರತಿಯೊಬ್ಬ ಯೋಗಿಯಲ್ಲೂ ಒಂದು ಅನುಭವಾತ್ಮಕ ಸತ್ಯವಾಗಿದೆ. "ಯೋಗಿ" ಎಂಬ ಪದದ ಅರ್ಥ ಅಸ್ತಿತ್ವದ ಏಕತೆಯನ್ನು ಸಾಕ್ಷಾತ್ಕರಿಸಿಕೊಂಡವನು ಎಂದು. ನಾನು "ಯೋಗ" ಎಂದು ಹೇಳಿದಾಗ, ನಾನು ಯಾವುದೇ ಒಂದು ನಿರ್ದಿಷ್ಟವಾದ ಅಭ್ಯಾಸ ಅಥವಾ ವ್ಯವಸ್ಥೆಯ ಕುರಿತಾಗಿ ಹೇಳುತ್ತಿಲ್ಲ. ಅಪರಿಮಿತವಾದುದ್ದನ್ನು ತಿಳಿಯಲು,  ಅಸ್ತಿತ್ವದಲ್ಲಿನ ಏಕತೆಯನ್ನು ಅನುಭವಿಸಲು ಇರುವ ತೀವ್ರವಾದ ಹಾತೊರೆಯುವಿಕೆಯೇ ಯೋಗ. ಮಹಾಶಿವರಾತ್ರಿಯ ರಾತ್ರಿಯು ಈ ಏಕತೆಯನ್ನು ಅನುಭವಿಸುವ ಸದವಕಾಶವನ್ನು ನಮಗೆ ನೀಡುತ್ತದೆ.
 

ಸದ್ಗುರುಗಳಿಂದ ಧ್ಯಾನಲಿಂಗದಲ್ಲಿ ಪಂಚಭೂತ ಆರಾಧನೆ

ಶಿವರಾತ್ರಿಯು ತಿಂಗಳಿನ ಅತ್ಯಂತ ಕತ್ತಲ ರಾತ್ರಿ. ಪ್ರತಿ ತಿಂಗಳ ಶಿವರಾತ್ರಿ ಮತ್ತು ವರ್ಷದಲ್ಲಿ ಒಮ್ಮೆ ಬರುವ ಮಹಾಶಿವರಾತ್ರಿಯ ಆಚರಣೆಯು ಅಂಧಕಾರವನ್ನು ಕೊಂಡಾಡುವಂತೆಯೇ ತೋರುತ್ತದೆ. ಯಾವುದೇ ತಾರ್ಕಿಕ ಮನಸ್ಸು ಅಂಧಕಾರವನ್ನು ವಿರೋಧಿಸುತ್ತದೆ, ಮತ್ತು ಸಹಜವಾಗೇ ಬೆಳಕನ್ನು ಆರಿಸಿಕೊಳ್ಳುತ್ತದೆ. ಆದರೆ "ಶಿವ" ಎಂಬ ಪದದ ಅರ್ಥ "ಏನಿಲ್ಲವೋ ಅದು" ಎಂದು. “ಏನಿದೆಯೋ ಅದು” ಅಸ್ತಿತ್ವ ಮತ್ತು ಸೃಷ್ಟಿ. "ಏನಿಲ್ಲವೋ ಅದು" ಶಿವ. "ಏನಿಲ್ಲವೋ ಅದು" ಎಂದರೆ, ನೀವು ನಿಮ್ಮ ಕಣ್ಣುಗಳನ್ನು ತೆರೆದು ಸುತ್ತಲೂ ನೋಡಿದರೆ, ನಿಮ್ಮ ದೃಷ್ಟಿ ಚಿಕ್ಕ ವಿಷಯಗಳ ಕಡೆಗಿದ್ದರೆ, ನೀವು ಸೃಷ್ಟಿಯ ಬಹಳಷ್ಟು ವಿಷಯಗಳನ್ನು ನೋಡುತ್ತೀರಿ. ಅದೇ ನಿಮ್ಮ ದೃಷ್ಟಿ ನಿಜವಾಗಿಯೂ ದೊಡ್ಡ ವಿಷಯಗಳಿಗಾಗಿ ನೋಡುತ್ತಿದ್ದರೆ, ಅಸ್ತಿತ್ವದಲ್ಲಿ ಅತಿದೊಡ್ಡ ಉಪಸ್ಥಿತಿಯಿರುವುದು ವಿಶಾಲವಾದ ಶೂನ್ಯತೆಗೆ ಎಂಬುದನ್ನು ನೀವು ನೋಡುತ್ತೀರಿ. ನಾವು ಗ್ಯಾಲಕ್ಸಿಗಳೆಂದು ಕರೆಯುವ ಕೆಲವೇ ಕೆಲವು ಚುಕ್ಕಿಗಳು ಹೆಚ್ಚಾಗಿ ನಮ್ಮ ಗಮನಕ್ಕೆ ಬರುತ್ತವೆ, ಆದರೆ ಅವುಗಳನ್ನು ಹೊಂದಿರುವ ವಿಶಾಲವಾದ ಶೂನ್ಯತೆಯು ಪ್ರತಿಯೊಬ್ಬರ ಗಮನಕ್ಕೆ ಬರುವುದಿಲ್ಲ. ಈ ವೈಶಾಲ್ಯತೆಯನ್ನು, ಈ ಅಪರಿಮಿತವಾದ ಶೂನ್ಯತೆಯನ್ನು ಶಿವ ಎಂದು ಕರೆಯಲಾಗುತ್ತದೆ. ಇಂದು, ಆಧುನಿಕ ವಿಜ್ಞಾನವೂ ಸಹ ಎಲ್ಲವೂ ಶೂನ್ಯದಿಂದ ಬರುತ್ತದೆ ಮತ್ತು ಎಲ್ಲವೂ ಶೂನ್ಯಕ್ಕೆ ಹಿಂದಿರುಗುತ್ತದೆ ಎನ್ನುವುದನ್ನು ಸಾಬೀತುಪಡಿಸುತ್ತದೆ. ಇದೇ ಹಿನ್ನೆಲೆಯಲ್ಲಿ, ವಿಶಾಲವಾದ ಶೂನ್ಯತೆಯಾದ ಶಿವನನ್ನು ಮಹಾದೇವ ಎಂದು ಕರೆಯಲಾಗುತ್ತದೆ. 

ಅಪರಿಮಿತವಾದುದ್ದನ್ನು ತಿಳಿಯಲು,  ಅಸ್ತಿತ್ವದಲ್ಲಿನ ಏಕತೆಯನ್ನು ಅನುಭವಿಸಲು ಇರುವ ತೀವ್ರವಾದ ಹಾತೊರೆಯುವಿಕೆಯೇ ಯೋಗ. ಮಹಾಶಿವರಾತ್ರಿಯ ರಾತ್ರಿಯು ಈ ಏಕತೆಯನ್ನು ಅನುಭವಿಸಲು ನಮಗೆ ಸದವಕಾಶವನ್ನು ನೀಡುತ್ತದೆ.

ಈ ಭೂಮಿಯಲ್ಲಿನ ಪ್ರತಿಯೊಂದು ಮತ ಮತ್ತು ಸಂಸ್ಕೃತಿಯು ಯಾವಾಗಲೂ ದೈವದ ಸರ್ವಾಂತರ್ಯಾಮಿ ಸ್ವಭಾವದ ಬಗ್ಗೆ ಮಾತನಾಡುತ್ತದೆ. ನಾವಿದನ್ನು ಕೂಲಂಕಷವಾಗಿ ಗಮನಿಸಿದರೆ, ನಿಜವಾಗಿಯೂ ಸರ್ವವ್ಯಾಪಿಯಾಗಿ, ಎಲ್ಲೆಡೆ ಇರಬಹುದಾದ ಏಕೈಕ ವಿಷಯವೆಂದರೆ ಕತ್ತಲೆ ಅಥವಾ ಶೂನ್ಯತೆ ಮಾತ್ರ. ಸಾಮಾನ್ಯವಾಗಿ, ಜನರು ತಮ್ಮ ಯೋಗಕ್ಷೇಮವನ್ನು ಬಯಸುತ್ತಿರುವಾಗ, ನಾವು ದೈವವನ್ನು ಬೆಳಕಿಗೆ ಹೋಲಿಸಿ ಮಾತನಾಡುತ್ತೇವೆ. ಆದರೆ ಅವರು ತಮ್ಮ ಯೋಗಕ್ಷೇಮಕ್ಕಿಂತ ಹೆಚ್ಚಿನದ್ದೇನನ್ನೋ ಅಪೇಕ್ಷಿಸಿದಾಗ, ತಮ್ಮ ಜೀವನದಿಂದಾಚೆಯ ಆಯಾಮದೊಂದಿಗೆ ವಿಲೀನವಾಗಲು ಬಯಸಿದಾಗ, ಅವರ ಪೂಜೆ ಮತ್ತು ಅವರ ಸಾಧನೆಯ ಉದ್ದೇಶ ಅಸ್ತಿತ್ವದಲ್ಲಿ ಲೀನವಾಗುವುದೇ ಆಗಿದ್ದಾಗ, ನಾವು ಯಾವಾಗಲೂ ದೈವವನ್ನು ಕತ್ತಲೆಯೆಂದು ಪರಿಗಣಿಸುತ್ತೇವೆ.

ಬೆಳಕು ಎನ್ನುವುದು ನಿಮ್ಮ ಮನಸ್ಸಿನಲ್ಲಿ ನಡೆಯುವ ಅಲ್ಪಾವಧಿಯ ಪ್ರಕ್ರಿಯೆ. ಬೆಳಕು ಶಾಶ್ವತವಲ್ಲ, ಅದು ಯಾವಾಗಲೂ ಸೀಮಿತವಾದ ಸಾಧ್ಯತೆ ಏಕೆಂದರೆ ಅದು ಸಂಭವಿಸುತ್ತದೆ ಮತ್ತು ಕೊನೆಯಾಗುತ್ತದೆ. ಈ ಭೂಮಿಯಲ್ಲಿ ನಾವು ತಿಳಿದಿರುವ ಬೆಳಕಿನ ಸರ್ವಶ್ರೇಷ್ಠ ಮೂಲವೆಂದರೆ ಸೂರ್ಯ. ಅಂತಹ ಸೂರ್ಯನ ಬೆಳಕನ್ನೂ ಸಹ ನೀವು ನಿಮ್ಮ ಕೈಯಿಂದ ತಡೆದು ನಿಲ್ಲಿಸಿ, ಕತ್ತಲೆಯ ಛಾಯೆ ಮೂಡುವಂತೆ ಮಾಡಬಹುದು.

ಆದರೆ ಕತ್ತಲೆ ಎಲ್ಲೆಡೆಯೂ ಆವರಿಸುವಂತಹದ್ದು. ಜಗತ್ತಿನಲ್ಲಿನ ಅಪಕ್ವವಾದ ಮನಸ್ಸುಗಳು ಕತ್ತಲೆಯನ್ನು ಯಾವಾಗಲೂ ಸೈತಾನನೆಂದು ವರ್ಣಿಸಿವೆ. ಆದರೆ ನೀವು ದೈವವನ್ನು ಸರ್ವವ್ಯಾಪಿಯೆಂದು ವಿವರಿಸುವಾಗ, ನಿಸ್ಸಂಶಯವಾಗಿ ನೀವದನ್ನು ಕತ್ತಲೆ ಎಂದು ಉಲ್ಲೇಖಿಸುತ್ತಿದ್ದೀರಿ, ಏಕೆಂದರೆ ಕತ್ತಲೆ ಮಾತ್ರ ಎಲ್ಲಾ ಕಡೆ ವ್ಯಾಪಿಸಿರುತ್ತದೆ. ಅದು ಎಲ್ಲೆಡೆಯೂ ಇದೆ. ಅದಕ್ಕೆ ಯಾವುದರಿಂದಲೂ ಯಾವ ಸಹಾಯವೂ ಬೇಕಾಗಿಲ್ಲ. ಬೆಳಕು ಯಾವಾಗಲೂ ತನ್ನನ್ನು ತಾನು ದಹಿಸಿಕೊಳ್ಳುತ್ತಿರುವಂತಹ ಒಂದು ಮೂಲದಿಂದ ಬರುತ್ತದೆ. ಅದು ಆರಂಭ ಮತ್ತು ಅಂತ್ಯವನ್ನು ಹೊಂದಿದ್ದು, ಯಾವಾಗಲೂ ಸೀಮಿತವಾದಂತಹ ಮೂಲದಿಂದ ಬರುತ್ತದೆ. ಆದರೆ ಅಂಧಕಾರಕ್ಕೆ ಯಾವುದೇ ಮೂಲವಿಲ್ಲ. ಇದು ಸ್ವತಃ ಒಂದು ಮೂಲವಾಗಿದೆ. ಇದು ಸರ್ವವ್ಯಾಪಿಯಾಗಿ, ಎಲ್ಲೆಡೆ ಹರಡಿಕೊಂಡಿದೆ. ಆದ್ದರಿಂದ ನಾವು ಶಿವ ಎಂದು ಹೇಳಿದಾಗ, ಅದು ಅಸ್ತಿತ್ವದ ಅಗಾಧವಾದ ಶೂನ್ಯತೆಯಾಗಿದೆ. ಈ ವಿಶಾಲವಾದ ಶೂನ್ಯತೆಯ ಮಡಿಲಿನಲ್ಲೇ ಎಲ್ಲಾ ರೀತಿಯ ಸೃಷ್ಟಿ ಸಂಭವಿಸಿರುವುದು. ಈ ಶೂನ್ಯತೆಯ ಮಡಿಲನ್ನೇ ನಾವು ಶಿವ ಎಂದು ಕರೆಯುವುದು.

ಭಾರತೀಯ ಸಂಸ್ಕೃತಿಯಲ್ಲಿ, ಎಲ್ಲಾ ಪುರಾತನ ಪ್ರಾರ್ಥನೆಗಳು ನಿಮ್ಮನ್ನು ನೀವು ಉಳಿಸಿಕೊಳ್ಳುವ, ರಕ್ಷಿಸಿಕೊಳ್ಳುವ ಅಥವಾ ಜೀವನದಲ್ಲಿ ಉತ್ತಮವಾಗುವ ಬಗ್ಗೆಯಾಗಿರಲಿಲ್ಲ. ಎಲ್ಲಾ ಪ್ರಾಚೀನ ಪ್ರಾರ್ಥನೆಗಳು ಯಾವಾಗಲೂ "ಓ ದೇವರೇ, ನನ್ನನ್ನು ನಾಶಮಾಡು, ಆಗ ನಾನು ನಿನ್ನಂತೆ ಆಗಬಹುದು." ಎಂದಾಗಿದ್ದವು.

ಬೆಳಕು ಯಾವಾಗಲೂ ತನ್ನನ್ನು ತಾನು ದಹಿಸಿಕೊಳ್ಳುತ್ತಿರುವಂತಹ ಒಂದು ಮೂಲದಿಂದ ಬರುತ್ತದೆ. ಆದರೆ ಅಂಧಕಾರಕ್ಕೆ ಯಾವುದೇ ಮೂಲವಿಲ್ಲ. ಇದು ಸ್ವತಃ ಒಂದು ಮೂಲವಾಗಿದೆ.

ಹಾಗಾಗಿ ತಿಂಗಳ ಕರಾಳ ರಾತ್ರಿಯಾದ ಶಿವರಾತ್ರಿಯು, ಪ್ರತಿಯೊಬ್ಬ ಮನುಷ್ಯನಿಗೂ ಅವನ ಸೀಮಿತ ಅಸ್ತಿತ್ವವನ್ನು ಕರಗಿಸಿಕೊಂಡು, ಅವನ ಅಂತರಾಳದಲ್ಲಿರುವ ಸೃಷ್ಟಿಯ ಮೂಲದ ಅಪರಿಮಿತತೆಯನ್ನು ಅನುಭವಿಸಲು ದೊರೆತಿರುವ ಒಂದು ಅವಕಾಶವಾಗಿದೆ. ಪ್ರತಿಯೊಬ್ಬ ಮನುಷ್ಯನೊಳಗೆ ಅಡಗಿರುವ, ಇಡೀ ಸೃಷ್ಟಿಯ ಮೂಲವಾಗಿರುವ ವಿಶಾಲವಾದ ಶೂನ್ಯತೆಯ ಅನುಭವಕ್ಕೆ ನಿಮ್ಮನ್ನು ತರಲು ಮಹಾಶಿವರಾತ್ರಿಯು ಒಂದು ಅವಕಾಶ ಮತ್ತು ಒಂದು ಸಾಧ್ಯತೆಯಾಗಿದೆ.

ಒಂದು ಕಡೆ, ಶಿವನನ್ನು ಲಯಕಾರಕ ಎಂದು ಕರೆಯಲಾಗುತ್ತದೆ. ಮತ್ತೊಂದು ಕಡೆ, ಅವನನ್ನು ಅತ್ಯಂತ ಸಹಾನುಭೂತಿಯುಳ್ಳವನು ಎಂದು ಕರೆಯಲಾಗುತ್ತದೆ. ಅವನು ನೀಡುವವರಲ್ಲಿ ಸರ್ವಶ್ರೇಷ್ಠನೆಂದೂ ಸಹ ಪರಿಗಣಿಸಲಾಗುತ್ತದೆ. ಯೋಗ ಸಂಪ್ರದಾಯವು ಶಿವನ ಕಾರುಣ್ಯದ ಬಗೆಗಿನ ಅನೇಕ ಕಥೆಗಳೊಂದಿಗೆ ತುಂಬಿಹೋಗಿದೆ. ಅವನ ಸಹಾನುಭೂತಿಯ ಅಭಿವ್ಯಕ್ತಿಯ ವಿಧಾನಗಳು ಸೋಜಿಗ ಹಾಗೂ ವಿಸ್ಮಯಕಾರಿಯಾಗಿವೆ. ಆದ್ದರಿಂದ ಮಹಾಶಿವರಾತ್ರಿಯು ಅವನ ದಯೆಯನ್ನು ಪಡೆಯಲು ಒಂದು ವಿಶೇಷ ರಾತ್ರಿಯಾಗಿದೆ.

ನಾವು ಶಿವ ಎಂದು ಕರೆಯುವ ಈ ವಿಶಾಲವಾದ ಶೂನ್ಯತೆಯನ್ನು ಕ್ಷಣಕಾಲವಾದರೂ ಅರಿಯದೆಯೇ ನೀವು ಈ ಮಹಾಶಿವರಾತ್ರಿಯನ್ನು ಕಳೆಯಬಾರದು ಎನ್ನುವುದು ನಮ್ಮ ಹಾರೈಕೆ ಮತ್ತು ಆಶೀರ್ವಾದ. ಈ ರಾತ್ರಿಯು ನಿಮಗೆ ಕೇವಲ ಜಾಗರಣೆಯ ರಾತ್ರಿಯಾಗದೇ ಜಾಗೃತಿಯ ರಾತ್ರಿಯಾಗಲಿ.
 

ಸಂಪಾದಕರ ಟಿಪ್ಪಣಿ: ಸದ್ಗುರು ಅವರ ಈಬುಕ್ Shiva - Ultimate Outlaw, ಹಾಗೂ ಪವಿತ್ರವಾದ ಮಂತ್ರಗಳಿರುವ Vairagya ಆಲ್ಬಮ್ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿ!

Download Now