ಪ್ರತಿದಿನ ಸಂಜೆ ೬:೨೦ ರ ಪ್ರೆಸೆನ್ಸ್ ಟೈಮ್ ನ ಸಮಯದಲ್ಲಿ ಸದ್ಗುರುಗಳ ಸಾನ್ನಿಧ್ಯವನ್ನು ಅನುಭವಿಸಲು ಉತ್ತಮವಾದ ವಿಧಾನ ಯಾವುದು? ಇದನ್ನು ವಿವರಿಸುತ್ತಾ ಸದ್ಗುರುಗಳು ಹೇಳುತ್ತಾರೆ, ಮುಖ್ಯವಾದ ವಿಚಾರವೆಂದರೆ ನೀವು ಪ್ರೆಸೆಂಟ್ ಆಗಿರಬೇಕು ಎಂದು.
Pratidina Sadgurugala Saannidhyadalli iruvudu hege?
ಲಿಪ್ಯಂತರ:
ಪ್ರಶ್ನೆ: ಪ್ರತಿದಿನ ಸಂಜೆ 6:20 ರ ಪ್ರೆಸೆನ್ಸ್ ಟೈಮ್ ನ ಸಮಯದಲ್ಲಿ ನನಗೆ ನಿಮ್ಮ ಸಾನ್ನಿಧ್ಯವನ್ನು ಅನುಭವಿಸಲು ಆಗುತ್ತಿಲ್ಲ. ನಾನೇನು ಮಾಡಲಿ?
ಸದ್ಗುರು: ಸುಮ್ನೆ ಹಾಗೆ ಕೂತ್ಕೊಳ್ಳೋದ್ರಿಂದ ನಿಮಗ್ ಏನೂ ಆಗ್ತಾ ಇಲ್ಲ; ನೀವು ಇನ್ನೂ ಸಕ್ರಿಯವಾದ ಪ್ರಕ್ರಿಯೆಯನ್ನ ರಚಿಸ್ಕೊಳ್ಳಬಹುದು. ಒಂದೇ ವಿಷ್ಯಕ್ಕೆ ಹಲವಾರು ತರದ್ ಮಾರ್ಗಗಳನ್ನ ಯಾಕ್ ರಚಿಸಿದ್ದೀವಿ ಅಂದ್ರೆ, ವ್ಯಕ್ತಿ ಅವ್ನೇ ಆಗಿದ್ರೂ, ಒಂದೇ ಮಟ್ಟದ ಗ್ರಹಣಶೀಲತೆ ಮತ್ತು ಮುಕ್ತತೆಯನ್ನ ಅವ್ನು ಜೀವನದ ಪ್ರತಿದಿನಾನೂ ಹೊಂದಿರಲ್ಲ. ಅದಕ್ಕಾಗಿ ಮಂತ್ರ ಇದೆ, ಮೌನ ಇದೆ, ಸಾಧನೆ ಇದೆ, ಇನ್ನೂ ತುಂಬಾ ರೀತಿಗಳಿವೆ. ಬರೀ ಈ ಮೂರು ವಿಧಗಳನ್ನ ನೀವು ತೊಗಂಡ್ರೆ – ಗುರು ಪೂಜೆ ಇದೆ, ಸರಳವಾದ ಮಂತ್ರದ ಪಠನ ಇದೆ ಅಥವಾ ಮೌನವಾಗಿ ಕೂತ್ಳೊಳ್ಳೋದ್ ಇದೆ, ಅಥವಾ ಸಾಧನೆ ಇದೆ. ನೀವ್ ಯಾವ್ದಾದರೂ ಒಂದನ್ ಮಾಡಿ, ಅದ್ ಕೆಲಸ ಮಾಡತ್ತೆ. ನೀವು.... ಸಾನ್ನಿಧ್ಯವನ್ನ ಅನುಭವಿಸ್ಲಿಕ್ಕೆ ಪ್ರಯತ್ನಿಸ್ಬೇಡಿ, ಏನೇನೋ ಕಲ್ಪನೆಗಳನ್ನ ಮಾಡ್ಕೋತೀರ ಅಷ್ಟೆ. ನಾನ್ ಉಪಸ್ಥಿತನಾಗಿದೀನೋ ಇಲ್ವೋ, ಅದು ಮುಖ್ಯ ಅಲ್ಲ, ನೀವ್ ಉಪಸ್ಥಿತರಾಗಿರ್ಬೇಕು. ನೀವು ಒಂದೇ ಜಾಗದಲ್ಲಿ ಕೂತಿದ್ರೂ, ಹೆಚ್ಚಾಗಿ ನೀವಲ್ಲಿ ಇರೋದೇ ಇಲ್ಲ, ಇಡೀ ಬ್ರಹ್ಮಾಂಡ ಸುತ್ ತಿರ್ತೀರ (ನಗು). ನಿಮ್ ಮನಸ್ಸು ಅಂತ ಸ್ಥಿತಿಯಲ್ಲಿದ್ರೆ, ಮಂತ್ರ ಹೇಳೋದು, ಏನಾದ್ರೂ ಸಾಧನೆ ಮಾಡೋದು ಅಥವಾ ಗುರುಪೂಜೆ ಒಳ್ಳೇದು. ನೀವ್ ಉಪಸ್ಥಿತರಾಗಿರೋದಿಕ್ಕೆ. ನೀವ್ present ಆಗಿದ್ರೆ, ನಾನೂ present. ಯಾವಾಗ್ಲೂ. ನಾನದ್ರಲ್ಲಿ ವಿಫಲನಾಗಿಲ್ಲ. ನಾನು ದೇಹವನ್ನ ಬಿಟ್ರೂ, ಆಮೇಲೂ ಇರ್ತೀನಿ.
ಆದ್ದರಿಂದ, ನೀವು ಇರಬೇಕು, ಅದು ಮುಖ್ಯವಾದ ವಿಷಯ. ಉಪಸ್ಥಿತಿ... ನನ್ನ ಉಪಸ್ಥಿತಿಯಲ್ಲಿ ಯಾವುದೇ ತೊಂದರೆಯಿಲ್ಲ. ನಿಮ್ಮ ಉಪಸ್ಥಿತಿ ಈಗ ಬೇಕಾಗಿರೋದು. ನಿಮ್ ಹೆಸ್ರು ಕರೆದಾಗ, ಬೇರೆ ಯಾರೋ , ‘Yes maam,’ ಅನ್ನಕ್ಕಾಗಲ್ಲ (ನಗು). ಅದ್ದರಿಂದ, ನೀವ್ present ಆಗಿರ್ಬೇಕು. ನಿಮಗ್ ಯಾವ್ದು ಒಪ್ಪುತ್ತೋ, ಅದನ್ ಮಾಡಿ. ಏನೂ ಮಾಡ್ದೆ ಹಾಜರಾಗಿರೋದಿಕ್ಕಾಗಲ್ಲ ಅಂದ್ರೆ ಏನಾದ್ರೂ ಚಟುವಟಿಕೆ ಮಾಡಿ. Presence time ನೇ ಗುರು ಪೂಜೆ ಟೈಮ್ ಮಾಡ್ಕೊಳ್ಳಿ. ಅದನ್ನ ಮಾಡಿ, ಅದೊಂದು ಪರಿಹಾರ. ಅರ್ಥ ಮಾಡ್ಕೊಳಿ, ಇದು ನಿಮ್ ಉಪಸ್ಥಿತಿ ಬಗ್ಗೆ. ವಾಸ್ತವಿಕತೆಯ ಇನ್ನೊಂದ್ ಆಯಾಮಕ್ಕೆ ನೀವು ಉಪಸ್ಥಿತರಾಗ್ಬೇಕು. ನಾನು? ನಾನ್ ಇದ್ದೀನಾ? ಇದ್ದೀನಿ. ಯಾಕಂದರೆ... ಸಾನ್ನಿಧ್ಯ ಒಂದು ಭೌಗೋಳಿಕ ವಿಷಯವಲ್ಲ. “ಸದ್ಗುರು, ನೀವ್ ನಮ್ ಮನೇನಲ್ಲಿದ್ದೀರ? ಬಾಗಲಿಗೆ ಬೀಗ ಹಾಕ್ತೀನಿ, ಒಡ್ಕೊಂಡು ಬರ್ತೀರಾ?" ಬಾಗಿಲನ್ನಾದರೂ ಯಾಕೆ ತೆಗದಿಡಲ್ಲ? ನಾನ್ ಯಾಕೆ ಒಡ್ದು ಕಳ್ಳನ್ ತರ ಬರಬೇಕು? ಕಳ್ಳ ಹೇಗಿದ್ರೂ ಒಡ್ಕೊಂಡು ಬರಲ್ಲ, ನುಸುಳ್ಕೊಂಡು ಬರ್ತಾನೆ. ದರೋಡೆಕೋರನ್ ತರ ಯಾಕ್ ಬರ್ಲಿ? ನೀವ್ ಯಾಕೆ ಬಾಗಿಲ್ನ ತೆರೆದು ಕೂತ್ಕೋಬಾರದು?
ಇದು ನಿಮ್ ಉಪಸ್ಥಿತಿ ಬಗ್ಗೆ. ಈವಾಗ, ನೀವು ಎಲ್ಲಾ ಕಡೆ ಚೆಲ್ಲಾಪಿಲ್ಲಿಯಾಗಿದ್ದೀರ. ಆದ್ದರಿಂದ, ನಿಮಗೆ ಸುಮ್ನೆ ಹಾಗೇ ಇರೋದಿಕ್ಕಾಗಲ್ಲ ಅಂದ್ರೆ, ಏನಾದ್ರೂ ಚಟುವಟಿಕೆ ಮಾಡಿ. ಗುರು ಪೂಜೆ ಒಂದ್ ಚಟುವಟಿಕೆ. ನೀವ್ ಇರೋ ಸಮಯ-ಸ್ಥಳ ಗುರು ಪೂಜೆ ಮಾಡೋಕ್ ಆಗ್ದೆ ಇರೋ ತರ ಇದ್ರೆ, ಮಂತ್ರವನ್ನಾದ್ರೂ ಹೇಳಿ. ಅದೂ ಚಟುವಟಿಕೆ. ಸ್ವಲ್ಪ ಮೃದು ತರದ್ದು, ಪರ್ವಾಗಿಲ್ಲ.
ಸುಮ್ಮನೇ ಕೂತು ಸಾನ್ನಿಧ್ಯದಲ್ಲಿ ಇರಬೇಕಂದರೆ ಸಾಮಾನ್ಯವಾಗಿ..... ಒಂದೋ ಪೂರ್ವಸಿದ್ಧತೆ ಬೇಕಾಗತ್ತೆ ಅಥವಾ ಬಾಹ್ಯದ್ ಶಕ್ತಿ ಬೇಕಾಗತ್ತೆ. ಸಾಕಷ್ಟು ಜನರು, Inner Engineering program ನ ಮೊದಲನೆ ದಿನಕ್ಕೆ ಬಂದಾಗ, ಹೇಳೋದು ಏನಂದರೆ, “ಮೂರು ಗಂಟೆ! ನನಗ್ ಕೂತ್ಕೊಳ್ಳಕ್ ಆಗಲ್ಲ”. ಅದಕ್ಕೆ, ಮೂರು ಕಾಲ್ ಗಂಟೆ ಮಾಡಿದ್ವಿ. (ನಗು) ಯಾಕಂದರೆ... ಅವ್ರು ಹೇಳ್ದ್ರು ಮೂರು ಗಂಟೆ ಕೂತ್ಕೊಳ್ಳಕ್ ಆಗಲ್ಲ ಅಂತ. ಮೂರು ಅಂದ್ರೆ ಏನೋ ಮೂಡನಂಬಿಕೆ ಅಂತ ಅನ್ಕೊಂಡೆ, ಅದಕ್ಕೆ ಮೂರು ಕಾಲ್ ಗಂಟೆ ಮಾಡಿ ಅಂತಂದೆ (ನಗು). “ಸದ್ಗುರು, ಅಮೇರಿಕ ದವರು ಮೂರು ಕಾಲ್ ಗಂಟೆ ಕೂತ್ಕೊಳ್ಳಲ್ಲ” ಅಂತ ನಮ್ ಟೀಚರ್ಸೂ ಹೇಳಿದ್ರು. ನಾನ್ ಹೇಳ್ದೆ “ಪರ್ವಾಗಿಲ್ಲ, ಮೂರು ಕಾಲ್ ಗಂಟೆ ಕೂತ್ಕೋತಾರೆ”. ಮೊದಲನೇ ದಿನ ಮಾತ್ರ ಕಷ್ಟ ಪಟ್ರು, ಎರಡನೆ ದಿನದಿಂದ ಹೆಚ್ಚಿನ ಜನ ಕೂತ್ಕೊಂಡ್ರು, ಆರೋಗ್ಯ ಸರಿ ಇಲ್ಲದೆ ಇರೋರನ್ನ ಬಿಟ್ಟು, ಅದ್ ಪರ್ವಾಗಿಲ್ಲ. ಯಾಕಂದರೆ, ನೀವ್ ಏನಾದರೂ ಪರವಶಗೊಳಿಸೋವಂತದ್ದನ್ನ ಸೃಷ್ಟಿಸಿದರೆ, ಕೂತ್ಕೋತಾರೆ, ಯಾಕಂದರೆ ಅವರಿಗೆ ಸಮಯದ್ ಅರಿವೇ ಇರೋದಿಲ್ಲ, ಸಮಯದ್ ಬಗ್ಗೆ ಯೋಚಿಸಲ್ಲ. ಸಮಯ, ಸ್ಥಳ, ಮೂತ್ರಕೋಶದ್ ಸೈಜು, ಇದೆಲ್ಲ ನೀವೇ ಮಾಡ್ಕೊಂಡಿರೋದು. ಅದನ್ನೆ ಅವ್ರು ಹೇಳ್ತಾ ಇದ್ದಿದ್ದು (ಕೈ ಸನ್ನೆ ಮಾಡುತ್ತ) (ನಗು). ಇದೆಲ್ಲ ನೀವೇ ಮಾಡ್ಕೊಂಡಿರೋದು; ಇದು ನಿಮ್ದೇ concept ಜೀವನದ್ ಬಗ್ಗೆ. ಹಾಗಾದರೆ, Presence, ನನ್ನ್ ಬಗ್ಗೆ ತಲೆ ಕೆಡಿಸ್ಕೋಬೇಡಿ, ಇದು, ನೀವು present ಆಗಿರೋದ್ರ್ ಬಗ್ಗೆ. ನಾನ್ ಪ್ರೆಸೆಂಟೇ, ಯಾವಗ್ಲೂ. “ಸದ್ಗುರು, ನನ್ 6:20 ಅಮೆರಿಕ ಟೈಮ್ ನಲ್ಲಿ ನೀವ್ ಮಲಗಿರ್ಬಹುದು”. ಚಿಂತೆ ಮಾಡ್ಬೇಡಿ, ನಾನ್ ಇದೀನಿ. ಸತ್ತರೂ ನಾನ್ ಇರ್ತೀನಿ.
ಸಂಜೆ 6:20 ರಿಂದ 6:27 ರ ವರೆಗೆ, ನೀವೆಲ್ಲಿದ್ದರೂ, ನೀವು ಮಾಡುತ್ತಿರುವ ಕೆಲಸ ಕಾರ್ಯಗಳನ್ನು ನಿಲ್ಲಿಸಿ "ಬ್ರಹ್ಮಾನಂದ ಸ್ವರೂಪ" ಮಂತ್ರವನ್ನು ಜಪಿಸಿ. ಅನಂತರ, ಮೂರು ನಿಮಿಷಗಳ ಕಾಲ ಮೌನವಾಗಿ ಕುಳಿತುಕೊಳ್ಳಿ. ಅನುಗ್ರಹವನ್ನು ಪಡೆಯುವುದಕ್ಕಾಗಿ 10 ನಿಮಿಷ, ಪ್ರತಿದಿನ.