“ಒಮ್ಮೆ ಹೀಗಾಯಿತು. ನಾನು ಎಲ್ಲೋ ಒಂದು ಕಡೆ, ಸುಮಾರು 25-30 ನಿಮಿಷಗಳ ಕಾಲ ಕಣ್ಮುಚ್ಚಿ ಕುಳಿತಿದ್ದೆ. ನನ್ನ ಕಣ್ಣುಗಳನ್ನು ತೆರೆದು ನೋಡಿದಾಗ ನನ್ನ ಸುತ್ತಲೂ ಒಂದು ದೊಡ್ಡ ಜನಸಮೂಹವೇ ನೆರೆದಿತ್ತು. ಒಬ್ಬರು ತಮ್ಮ ಭವಿಷ್ಯವನ್ನು ತಿಳಿಯಲು ಬಯಸುತ್ತಿದ್ದರು; ಮತ್ತೊಬ್ಬರು ತಮ್ಮ ಮಗಳ ಮಾಡುವೆ ಯಾವಾಗ ಆಗುತ್ತದೆಯೋ ಎಂದು ತಿಳಿದುಕೊಳ್ಳಲು ಬಯಸುತ್ತಿದ್ದರು… ಹೀಗೆ ಎಲ್ಲಾ ರೀತಿಯ ಅಸಂಬದ್ಧ ಪ್ರಶ್ನೆಗಳನ್ನೂ ಅವರು ನನ್ನಲ್ಲಿ ಕೇಳಲು ಶುರುಮಾಡಿದರು. ಇವರೆಲ್ಲ ಎಲ್ಲಿಂದ ಬಂದರು ಎಂದು ನಾನು ಯೋಚಿಸತೊಡಗಿದೆ. ಆಗ ಅವರು “ನೀವಿಲ್ಲಿ ಹದಿಮೂರು ದಿನಗಳಿಂದ ಕುಳಿತಿದ್ದೀರಿ ಸ್ವಾಮೀ!” ಎಂದು ನನಗೆ ಹೇಳಿದರು. ನಾನು ನನ್ನ ಕಾಲುಗಳನ್ನು ಸಡಿಲಿಸಲು ಹೋದಾಗ, ಅವು ಪೂರ್ತಿಯಾಗಿ ಬಿಗಿದುಕೊಂಡಿದ್ದವು. ಕಾಲುಗಳನ್ನು ಬಿಡಿಸಲು ಸುಮಾರು ಎರಡು ಗಂಟೆಗಳ ಕಾಲ ಮಸಾಜ್ ಮಾಡಿ, ಬಿಸಿನೀರಿನಲ್ಲಿ ಅದ್ದಿ, ಇನ್ನೂ ಏನೇನೋ ಮಾಡಬೇಕಾಯಿತು. ನಾನು ಅದೇ ಸ್ಥಳದಲ್ಲಿ ಸುಮಾರು 13 ದಿನಗಳಿಂದ ಕುಳಿತಿದ್ದೆ, ಆದರೆ ನನ್ನ ಅನುಭವದಲ್ಲಿ ಅದು ಕೇವಲ 25-30 ನಿಮಿಷಗಳಾಗಿದ್ದವು, ಏಕೆಂದರೆ ನೀವು ಶರೀರದಿಂದ, ಅಂದರೆ ಭೌತಿಕತೆಯಿಂದ ದೂರ ಸರಿದಂತೆಲ್ಲ, ನಿಮ್ಮ ಮೇಲೆ ಸಮಯದ ಹಿಡಿತ ಕಡಿಮೆಯಾಗುತ್ತದೆ. ಅಂತಹ ಮನುಷ್ಯನನ್ನು ನಾವು ಸಮಯಾಧಿಪತಿ ಎಂದು ಕರೆಯುತ್ತೇವೆ. ಅಂದರೆ ಯಾವುದೋ ಒಂದು ರೀತಿಯಲ್ಲಿ ಸಮಯವನ್ನು ಮೀರಿದವನು ಎಂದು. ಒಮ್ಮೆ ನೀವು ಸಮಯದ ಮೇಲೆ ಅಧಿಪತ್ಯವನ್ನು ಸಾಧಿಸಿದರೆ, ನಂತರ ಸಮಯವು ನಿಮ್ಮ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ…” ಎಂದು ಸದ್ಗುರುಗಳು ಹೇಳುತ್ತಾರೆ

ಇದೆಲ್ಲಾ ಕೇಳಲು ಅದ್ಭುತವೆನಿಸುತ್ತದೆ. ಆದರೆ, ಅವರು “ಇದೊಂದು ಪವಾಡವೇನಲ್ಲ; ಇದನ್ನು ಯಾರು ಬೇಕಾದರೂ ಸಾಧಿಸಬಹುದು” ಎಂದು ಹೇಳಿದಾಗ ಇನ್ನೂ ಅದ್ಭುತವೆನಿಸುತ್ತದೆ. ಅದು ನಿಜವೇ? ಎಲ್ಲರಿಗೂ ಅದು ಸಾಧ್ಯವೆ? ಎಂದು ನಾವು ಕೇಳಿದಾಗ ಅವರು ಮೆಲ್ಲನೆ ನಗುತ್ತಾ, “ಹೌದು” ಎನ್ನುತ್ತಾರೆ. ಅವರ ಉತ್ತರ ಮುಂದಿನ ಪ್ರಶ್ನೆಗಳನ್ನು ಕೇಳುತ್ತಾ ಹೋಗಲು ಪ್ರೇರಣೆಯನ್ನು ನೀಡುವ ಆಹ್ವಾನವೂ ಹೌದು, ಪಂಥಾಹ್ವಾನವೂ ಹೌದು.

ಸುಮಾರು ಒಂದು ಗಂಟೆಯ ಕಾಲ ನಡೆದ ಸಂವಾದದಲ್ಲಿ, ತಮ್ಮ ಹೆಗ್ಗುರುತಾದ ವಾಕ್ಚಾತುರ್ಯ ಮತ್ತು ವಿವೇಕ-ಜ್ಞಾನ ತುಂಬಿದ ಮಾತುಗಳಲ್ಲಿ, ಸದ್ಗುರುಗಳು ಜೀವನದ ಕೆಲವು ಉಪಾಯಗಳನ್ನು ತಿಳಿಸುತ್ತಾ, ಕೆಲವು ನಿಗೂಢಗಳನ್ನು ಅನಾವರಣಗೊಳಿಸುತ್ತಾರೆ ಮತ್ತು ನಾವು ಜೀವಿಸುತ್ತಿರುವ ರೀತಿಯಲ್ಲಿನ ಕೆಲ ಕಟು ಸತ್ಯಗಳನ್ನು ನಮ್ಮ ಮುಂದಿಡುತ್ತಾರೆ .

ಪ್ರಶ್ನೆ : ಹಾಗಾದರೆ, ನಾವೀಗ ಕುತೂಹಲಭರಿತರಾಗಿದ್ದೇವೆ.  ಸಮಯವನ್ನು ಮೀರುವುದು ಹೇಗೆ ?

ಸದ್ಗುರು: ನೀವು ಸಮಯವನ್ನು ಮೀರಲು ಪ್ರಯತ್ನಿಸಬೇಡಿ. ಒಮ್ಮೆ ನೀವು ನಿಮ್ಮ ಭೌತಿಕ ಸ್ವಭಾವವನ್ನು ಮೀರಿದರೆ, ಸಹಜವಾಗಿಯೇ ನೀವು ಸಮಯವನ್ನು ಮೀರುವಿರಿ. ಜನರು ಸಮಯದ ಲೆಕ್ಕವನ್ನು ತಮ್ಮಲ್ಲಿ ಹೇಗೆ ಇಟ್ಟುಕೊಳ್ಳುತ್ತಾರೆ? ಅದು ಶರೀರದಿಂದ ಮಾತ್ರ ಸಾಧ್ಯ. ಈಗ ಮಧ್ಯಾಹ್ನ ಎಂದು ನಿಮಗೆ ಹೇಗೆ ಗೊತ್ತಾಗುತ್ತದೆ? ನೀವು ಬೆಳಗಿನ ಉಪಹಾರವನ್ನು ತಿಂದಿರುತ್ತೀರಿ, ಮತ್ತೀಗ ಊಟದ ಸಮಯ - ನಿಮ್ಮ ಶರೀರವು ಒಂದು ಊಟದಿಂದ ಇನ್ನೊಂದಕ್ಕೆ ಸಮಯವನ್ನು ಲೆಕ್ಕಹಾಕುತ್ತದೆ. ಒಂದು ಸಲ ಮೂತ್ರಕೋಶ ತುಂಬುವುದಕ್ಕೂ ಮತ್ತೊಂದು ಸಲ ತುಂಬುವುದಕ್ಕೂ ನಡುವೆ ನೀವು ಸಮಯವನ್ನು ಲೆಕ್ಕಹಾಕುತ್ತಿರುತ್ತೀರಿ. ನಿಮಗೆ ಸುಸ್ತಾಗುತ್ತದೆ ಮತ್ತು ನೀವು ನಿದ್ರಿಸಬೇಕು - ಸಮಯವನ್ನು ಲೆಕ್ಕ ಹಾಕಲು ಇದೂ ಒಂದು ರೀತಿ.

ನಾನು ನಿಮ್ಮನ್ನಿಲ್ಲಿ ಸತತವಾಗಿ ಮೂರು ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಾಡಿದರೆ, ನಿಮ್ಮ ಶರೀರವು ಚಲಿಸಲು ಬಯಸುತ್ತದೆ. ಅದೇ ನಿಮಗೆ ಶರೀರವಿಲ್ಲದೇ ಹೋಗಿದ್ದರೆ, ನಾನು ನಿಮ್ಮನ್ನು 10,000 ವರ್ಷಗಳ ಕಾಲ ಇಲ್ಲಿ ಕುಳಿತುಕೊಳ್ಳುವಂತೆ ಮಾಡಿದರೂ ಸಹ ಸಮಸ್ಯೆ ಏನು? ಶರೀರವೇ ನಿಮಗೆ ‘ಸಮಯ' ದ ಪರಿವೆಯನ್ನು ಉಂಟುಮಾಡುತ್ತಿರುವುದು. ನೀವು ಗಡಿಯಾರದಲ್ಲಿ ಸಮಯವನ್ನು ನೋಡಿದಾಗ, ಅದರ ಮುಳ್ಳು ಒಂದು ಸುತ್ತು ಸುತ್ತಿದರೆ ಒಂದು ಗಂಟೆ ಎಂದರ್ಥ. ಚಂದ್ರನು ಭೂಮಿಯ ಸುತ್ತ ಒಂದು ಸುತ್ತು ಸುತ್ತಿದರೆ, ಅದು ಒಂದು ತಿಂಗಳು. ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಸುತ್ತಿದರೆ, ಅದು ಒಂದು ವರ್ಷ. ಹೀಗೆ ಎಲ್ಲವೂ ಆವರ್ತಗಳಲ್ಲಿ ಸುತ್ತುತ್ತಿವೆ, ಏಕೆಂದರೆ ಅದೇ ಸೃಷ್ಟಿಯ ಸ್ವಭಾವ. 

ಪ್ರಶ್ನೆ : ಹಾಗಿದ್ದಾಗ ಭೌತಿಕ ಸ್ವಭಾವವನ್ನು ಮೀರುವುದು ಹೇಗೆ?

ಸದ್ಗುರು: ಇಡೀ ಯೋಗವಿಜ್ಞಾನವಿರುವುದು ನಿಮ್ಮ ಶರೀರ ವ್ಯವಸ್ಥೆಯನ್ನು ವಿಶ್ವದ ವ್ಯವಸ್ಥೆಯೊಂದಿಗೆ ಹೊಂದಿಸುವುದು ಹೇಗೆ ಎನ್ನುವ ಬಗ್ಗೆಯಾಗಿದೆ. ಏಕೆಂದರೆ ನಿಮ್ಮ ಶರೀರದ ಎಲ್ಲಾ ಆವರ್ತಗಳೂ ಸಹ ಅಸ್ತಿತ್ವದಲ್ಲಿನ ದೊಡ್ಡ ಆವರ್ತಗಳಾದ ಸೌರವ್ಯೂಹ, ಬ್ರಹ್ಮಾಂಡದೊಂದಿಗೆ ಸಂಬಂಧವನ್ನು ಹೊಂದಿವೆ. ಅದನ್ನು ಸರಿಯಾಗಿ ಹೊಂದಿಸಿದರೆ, ಶರೀರದ ಮೇಲಿನ ನಿಮ್ಮ ಅರಿವು ಅತ್ಯಂತ ಕಡಿಮೆಯಾಗುತ್ತದೆ ಮತ್ತು ನೀವು ನಿಮ್ಮ ಶರೀರವನ್ನು ನಿಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಬಹುದು. ನಿಮ್ಮ ಶರೀರದ ಅರಿವು ಅತಿಯಾದರೆ, ಅದು ಪ್ರಚೋದನೆಯ ಸ್ವಭಾವದ್ದಾಗಿಬಿಡುತ್ತದೆ. ಅದು ನಿಮ್ಮನ್ನು ಮತ್ತದೇ ಹಳೇ ಸಂಗತಿಯನ್ನು ಮಾಡುವಂತೆ ಮಾಡುತ್ತದೆ. ನೀವದನ್ನು ಮಾಡದೇ ಹೋದರೆ ಅದು ನಿಮ್ಮನ್ನು ಹಿಂಸಿಸುತ್ತಲೇ ಇರುತ್ತದೆ. 

ನೀವು ಭೌತಿಕತೆಯೊಂದಿಗೆ ಎಷ್ಟರ ಮಟ್ಟಿಗೆ ಗುರುತಿಸಿಕೊಳ್ಳುವಿರೋ, ಅಷ್ಟರ ಮಟ್ಟಿಗೆ ನೀವು ಸಮಯದ ವಶಕ್ಕೆ ಸಿಗುತ್ತೀರಿ.

ನೀವು ಭೌತಿಕತೆಯೊಂದಿಗೆ ಎಷ್ಟರ ಮಟ್ಟಿಗೆ ಗುರುತಿಸಿಕೊಳ್ಳುವಿರೋ, ಅಷ್ಟರ ಮಟ್ಟಿಗೆ ನೀವು ಸಮಯದ ವಶಕ್ಕೆ ಸಿಗುತ್ತೀರಿ. ಭೌತಿಕ ವಿಷಯಗಳನ್ನು ಮಾಡುವ ಜನ ಯಾವಾಗಲೂ ಗಡಿಯಾರವನ್ನು ನೋಡುತ್ತಲೇ ಇರುತ್ತಾರೆ. ಅವರಿಗೆ ಸಮಯವು ಕಳೆಯುವುದೇ ಇಲ್ಲ. ಯಾರಾದರೂ ಸ್ವಲ್ಪ ಬುದ್ಧಿಜೀವಿಗಳಾದರೆ ಮತ್ತು ಅವರೊಂದು ಪುಸ್ತಕವನ್ನು ಓದಲು ತೊಡಗಿದರೆ, ಇದ್ದಕ್ಕಿದ್ದಂತೆ ಅವರಿಗೆ ಸಮಯದ ಅರಿವಿರುವುದಿಲ್ಲ. ಗಂಟೆಗಳು ಹಾಗೇ ಸುಮ್ಮನೆ ಕಳೆದುಹೋಗುತ್ತವೆ. ನೀವು ಬುದ್ಧಿಶಕ್ತಿಯನ್ನು ಮೀರಿಹೋಗಿ ಧ್ಯಾನಸ್ಥರಾದರೆ, ಸಮಯವು ಸುಮ್ಮನೆ ಜಾರಿಹೋಗುತ್ತದೆ. 

ನನ್ನ ದಿನಚರಿ ಹೇಗಿದೆಯೆಂದರೆ, ನಾನು ಯಾವುದಾದರೂಂದು ಕಾರ್ಯಕ್ರಮದಲ್ಲಿ ಕುಳಿತುಕೊಂಡರೆ, ಮುಂದಿನ 10-12 ಗಂಟೆಗಳ ಕಾಲ ಅದೇ ಸ್ಥಳದಲ್ಲಿ ಕುಳಿತಿರುತ್ತೇನೆ. ಬೇರೆಯವರೆಲ್ಲರೂ ಶೌಚಕ್ಕೆ, ಪಾನೀಯಗಳನ್ನು ಸೇವಿಸುವುದಕ್ಕೆ ಬಿಡುವನ್ನು ತೆಗೆದುಕೊಳ್ಳುತ್ತಿರುತ್ತಾರೆ, ಆದರೆ ನಾನು ಮಾತ್ರ ಎಲ್ಲೂ ಹೋಗದೆ ಕುಳಿತಿರುತ್ತೇನೆ. ಇದು ಯಾವುದೋ ಪವಾಡವನ್ನು ಮಾಡುವ ಬಗ್ಗೆಯಲ್ಲ. ಅದೇನೆಂದರೆ ಶರೀರಕ್ಕೆ ನಿಮ್ಮ ಮೇಲೆ ಮುಂಚಿನಷ್ಟೇ ಹಿಡಿತವಿರುವುದಿಲ್ಲ. ನೀವು ನಿಮ್ಮ ಶರೀರವನ್ನು ಉಪಯೋಗಿಸಲು ಸಮರ್ಥರಾಗಿರುತ್ತೀರಿ, ಆದರೆ ಶರೀರಕ್ಕೆ ನಿಮ್ಮನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಅಷ್ಟೆ. ಜೀವಿಸಲು ಅದೊಂದು ಒಳ್ಳೆಯ ರೀತಿ.

ಪ್ರಶ್ನೆ : ನೀವು ಯೋಗವನ್ನು ಆಧ್ಯಾತ್ಮಿಕತೆಯ ಬಹುದೊಡ್ಡ ಭಾಗವಾಗಿ ಪ್ರತಿಪಾದಿಸುತ್ತಿರುವುದು ಈ ಕಾರಣದಿಂದಾಗಿಯೇ ಏನು?

ಸದ್ಗುರು : ನಿಮ್ಮ ಭೌತಿಕ ಶರೀರವು ಒಂದು ಸರಳವಾದ ವಿಷಯವಲ್ಲ. ಅದೊಂದು ಅಸಾಧಾರಣವಾದ ಯಂತ್ರ. ನೀವದನ್ನು ಸಂಪೂರ್ಣ ಎಚ್ಚರಿಕೆಯಿಂದ ಚುರುಕಾಗಿ ಇಟ್ಟುಕೊಳ್ಳದೇ ಹೋದರೆ, ನೀವು ಜೀವನವನ್ನು ಆಳವಾಗಿ ಅನುಭವಿಸುವುದಿಲ್ಲ. 

ನಾನು ಇತ್ತೀಚೆಗೆ ತಿರುಪತಿಯಲ್ಲಿದ್ದಾಗ, ಒಂದು ಸ್ಕೂಲ್ ಬಸ್ ನನ್ನ ಕಾರಿನ ಮುಂದೆ ಬಂದಿತು. ಅದರಲ್ಲಿದ್ದ ಹತ್ತರಲ್ಲಿ ಐದು ಮಕ್ಕಳು ಸ್ಥೂಲಕಾಯರಾಗಿರುವುದನ್ನು ನಾನು ಗಮನಿಸಿದೆ. ಇಂದು ಶಾಲೆಗೆ ಹೋಗುವ ಮಗು ಅತಿಯಾದ ಬೇಸರದಲ್ಲಿರುವಂತೆ ಕಾಣುತ್ತದೆ. ಹತ್ತು ವರ್ಷದ ಮಗುವೊಂದು ಇಡೀ ಬ್ರಹ್ಮಾಂಡವನ್ನು ಒಂದು ಫೋನಿನ ಪರದೆಯ ಮೇಲೆ ನೋಡಿರುತ್ತದೆ - ಮತ್ತು ಅದು ತನಗೆಲ್ಲವೂ ಗೊತ್ತಿದೆ ಎಂದು ಭಾವಿಸಿರುತ್ತದೆ. ಇಂತಹ ಮಕ್ಕಳು ಜೀವನದಲ್ಲಿ ಮುಂದೆ ಏನು ಮಾಡುತ್ತಾರೆ? ಅವರು ಯಾವುದೋ ಒಂದು ಕೆಲಸವನ್ನು ಹಿಡಿದು ಹಣ ಸಂಪಾದನೆ ಮಾಡಬಹುದು - ಆದರೆ ಅಷ್ಟೇ ಸಾಕೆ? ಅವರು ಒಂದು ಮರವನ್ನಾದರೂ ಹತ್ತಲಾರರು, ಓಡಲಾರರು, ತಮ್ಮಷ್ಟಕ್ಕೆ ತಾವೇ ಸಂತೋಷದಿಂದಿರಲಾರರು ಅಥವಾ ಕುಣಿಯಲಾರರು. ಬೇಸರ ತುಂಬಿದ ಮಕ್ಕಳು ಮುಂದೆ ಬೆಳೆದು ಬೇಸರ ತುಂಬಿದ ವಯಸ್ಕರಾಗುತ್ತಾರೆ. ಆಗ ಅವರು ತಮಗೆ ಏನಾದರೂ ತೀವ್ರವಾದ ಅನುಭವವಾಗಲಿ ಎಂದು ಬಯಸುತ್ತಾರೆ, ಹಾಗಾಗಿ ಅವರು ಮದ್ಯ ಮತ್ತು ಮಾದಕವಸ್ತುಗಳ ಮೊರೆಹೋಗುತ್ತಾರೆ. ಬೇರೇನೂ ಸಹ ಅವರನ್ನು ಉತ್ತೇಜಿಸುವುದಿಲ್ಲ, ಹಾಗಾಗಿ ಅವರು ತಮ್ಮ ಶರೀರದೊಳಕ್ಕೆ ರಾಸಾಯನಿಕಗಳನ್ನು ಹಾಕುತ್ತಾರೆ. 

ಪ್ರಶ್ನೆ : ಹಾಗಾದರೆ ನಮ್ಮನ್ನು ನಾವು ಉತ್ತೇಜಿಸಿಕೊಳ್ಳಲು ರಾಸಾಯನಿಕಮುಕ್ತ ವಿಧಾನಗಳೇನಾದರೂ ಇವೆಯೇ?

ಸದ್ಗುರು: ಸುಮ್ಮನೆ ತಮ್ಮ ಕಣ್ಣುಗಳನ್ನು ಮುಚ್ಚಿದರೆ, ಕೆನ್ನೆಗಳ ಮೇಲೆ ಪರಮಾನಂದದ ಅಶ್ರುಧಾರೆ ಹರಿಯುವಂತಹ ಸಾವಿರಾರು ಜನರನ್ನು ನಾನು ನಿಮಗೆ ತೋರಿಸಬಲ್ಲೆ - ನೀವು ಕೇವಲ ನಿಮ್ಮೊಂದಿಗೆ ಸಂಪರ್ಕದಲ್ಲಿರಬೇಕಷ್ಟೆ. ಕೆಲವರು ಮದ್ಯ ಮತ್ತು ಮಾದಕವಸ್ತುಗಳ ವಿಷಯವನ್ನು ನೈತಿಕ ದೃಷ್ಟಿಯಿಂದ ನೋಡಬಹುದು, ಆದರೆ ಅದರ ಸಾರಾಂಶವಿಷ್ಟೆ - ಜನರು ಜೀವನದ ದೊಡ್ಡ ಅನುಭವವೊಂದಕ್ಕಾಗಿ ಹಂಬಲಿಸುತ್ತಿದ್ದಾರೆ ಅಷ್ಟೆ. ಪ್ರತಿಯೊಬ್ಬರಿಗೂ ಜೀವನದ ದೊಡ್ಡ ಭಾಗ ಬೇಕು. ನೀವು ಅವರಿಗೆ ಬೇರಿನ್ಯಾವ ಉತ್ತಮ ಮಾರ್ಗವನ್ನು ತೋರಿಸದಿದ್ದರೆ, ಅವರು ಮದ್ಯದ ಬಾಟಲ್ ಗೆ ಶರಣಾಗುತ್ತಾರೆ. ಸ್ವಲ್ಪ ಸಮಯದ ನಂತರ, ಆ ಬಾಟಲ್ ಕೆಲಸ ಮಾಡುವುದಿಲ್ಲ ಮತ್ತು ಅವರು ಇನ್ನೂ ತೀವ್ರತರವಾದ ಪರ್ಯಾಯಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಅದರಿಂದ ಸಾಯುವ ಸ್ಥಿತಿ ಬಂದರೂ ಚಿಂತೆಯಿಲ್ಲ, ಆದರೆ ಜನರು ಇನ್ನೂ ಹೆಚ್ಚಿನದನ್ನು ಅನುಭವಿಸಲು ಬಯಸುತ್ತಾರೆ. ಮತ್ತೂ ಹೆಚ್ಚಿನದನ್ನು ಅನುಭವಿಸಬೇಕೆಂಬ ಮನುಷ್ಯನ ಹಂಬಲ ಅಷ್ಟೊಂದು ಪ್ರಬಲವಾದದ್ದಾಗಿದೆ. 

ಪ್ರಶ್ನೆ : ಹಾಗಾದರೆ, ಆ ಹಂಬಲಕ್ಕೆ ಆಧ್ಯಾತ್ಮಿಕತೆಯೇ ಉತ್ತರವೇ?

ಸದ್ಗುರು : ಇಂದು, ಮಾನವ ಬುದ್ಧಿಮತ್ತೆಯು ಹಿಂದೆಂದಿಗಿಂತಲೂ ಪ್ರಖರವಾಗಿ ಹೊಳೆಯುತ್ತಿದೆ. ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಜನರು ತಮಗೋಸ್ಕರವಾಗಿ ಯೋಚಿಸುತ್ತಿದ್ದಾರೆ. ಇಂದು, ನಿಮ್ಮ ಮುಂದೆ ದೇವರೇ ಬಂದು ಮಾತನಾಡಿದರೂ ಸಹ, ಅವನ ಮಾತು ನಿಮಗೆ ತಾರ್ಕಿಕವಾಗಿ ಸರಿಯೆನಿಸದಿದ್ದರೆ, ನೀವದನ್ನು ಒಪ್ಪುವುದಿಲ್ಲ. ಹಿಂದೆ ಅದನ್ನು ಒಪ್ಪಿಕೊಳ್ಳುತ್ತಿದ್ದಂತಹ ಕಾಲವೊಂದಿತ್ತು. ಹಾಗಾಗಿ, ಅನೇಕ ರೀತಿಗಳಲ್ಲಿ ಇಂದು ಸ್ವರ್ಗದ ಕಲ್ಪನೆ ಕುಸಿಯುತ್ತಿದೆ. ಈಗಿದು ಒಂದಷ್ಟು ಜನರಿಗೆ ಮಾತ್ರ ಆಗುತ್ತಿರಬಹುದು, ಆದರೆ ನಿಧಾನವಾಗಿ ಅದೊಂದು ವ್ಯಾಪಕವಾದ ಸಂಗತಿಯಾಗಲಿದೆ.

ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಜನರು ತಮಗೋಸ್ಕರವಾಗಿ ಯೋಚಿಸುತ್ತಿದ್ದಾರೆ. ಇಂದು, ನಿಮ್ಮ ಮುಂದೆ ದೇವರೇ ಬಂದು ಮಾತನಾಡಿದರೂ ಸಹ, ಅವನ ಮಾತು ನಿಮಗೆ ತಾರ್ಕಿಕವಾಗಿ ಸರಿಯೆನಿಸದಿದ್ದರೆ, ನೀವದನ್ನು ಒಪ್ಪುವುದಿಲ್ಲ.

ನನ್ನ ಅಂದಾಜಿನ ಪ್ರಕಾರ, ಮುಂದಿನ 80-100 ವರ್ಷಗಳಲ್ಲಿ, ಸಂಘಟಿತ ಮತಗಳ ಈಗಿನ ಸ್ವರೂಪವು ಕುಸಿದುಹೋಗುತ್ತದೆ.  ಜನರು ಅತ್ಯಂತ ದಯನೀಯ ಸ್ಥಿತಿಗಳಲ್ಲಿ ಜೀವನ ನಡೆಸುತ್ತಿದ್ದಾಗ ಆಗಿನ ಕಾಲದ ಸ್ವರ್ಗಗಳು ಒಪ್ಪಿಗೆಯಾಗುತ್ತಿದ್ದವು. ಇಂದು ನಾವು ಸ್ವರ್ಗದಲ್ಲಿರುವುದಕ್ಕಿಂತ ಉತ್ತಮವಾದ ಜೀವನವನ್ನು ನಡೆಸುತ್ತಿದ್ದೇವೆ, ಹಾಗಾಗಿ ಜನ “ನನಗೆ ಸ್ವರ್ಗಕ್ಕೆ ಹೋಗುವುದು ಬೇಕಿಲ್ಲ, ಇಲ್ಲೇ ಚೆನ್ನಾಗಿದೆ” ಎನ್ನುತ್ತಾರೆ. ಆದರೆ ಇನ್ನೂ ಹೆಚ್ಚಿನದನ್ನು ಅನುಭವಿಸಬೇಕೆಂಬ ಮನುಷ್ಯರ ಹಂಬಲ ಎಂದಿಗೂ ನಶಿಸುವುದಿಲ್ಲ. ನಾವು ಒಂದು ತಲೆಮಾರಿನ ಜನರಾಗಿ, ಪ್ರತಿಯೊಬ್ಬ ಮನುಷ್ಯನಿಗೂ, ಅವನಲ್ಲೊಂದು ಶಕ್ತಿಯುತವಾದ ಆಂತರಿಕ ಅನುಭವವನ್ನು ತರಲು ಪ್ರಯತ್ನಿಸದೇ ಹೋದಲ್ಲಿ, ನಮ್ಮ ಜನಸಂಖ್ಯೆಯ ಪ್ರತಿಶತ ತೊಂಭತ್ತರಷ್ಟು ಜನ ಮದ್ಯ ಮತ್ತು ಮಾದಕವಸ್ತುಗಳ ಕಡೆಗೆ ಸಾಗುತ್ತಾರೆ - ನೀವದನ್ನು ತಡೆಯಲಾರಿರಿ.

ನಿಮ್ಮನ್ನು ಅಮೀಬಾದಂತಹ ಏಕಕೋಶ ಜೀವಿಯಿಂದ ಇಂತಹ ಮಟ್ಟದ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವುಳ್ಳ ಜೀವಿಯನ್ನಾಗಿಸಿದ ಜೀವವಿಕಸನದ ಪ್ರಕ್ರಿಯೆಯ ಅತ್ಯದ್ಭುತವಾದ ಕೆಲಸವನ್ನು ನಾವೆಲ್ಲರೂ ಸೇರಿ ಪೂರ್ತಿಯಾಗಿ ಹಿಮ್ಮುಖಗೊಳಿಸುವ ಮುನ್ನ, ಜಗತ್ತಿನಲ್ಲಿ ವೈಜ್ಞಾನಿಕವಾಗಿ ಪ್ರಸ್ತುತವಾದಂತಹ ಒಂದು ಆಧ್ಯಾತ್ಮಿಕ ಪ್ರಕ್ರಿಯೆ ಆಗಲೇಬೇಕು.

ಪ್ರಶ್ನೆ : ಯಾರಾದರೂ ನಾಸ್ತಿಕರಾಗಿದ್ದು, ನಿರ್ದಿಷ್ಟವಾಗಿ ಯಾವುದನ್ನೂ ನಂಬದಿದ್ದರೆ ಹೇಗೆ?

ಸದ್ಗುರು : ಆಸ್ತಿಕರು ಮತ್ತು ನಾಸ್ತಿಕರು ಇಬ್ಬರೂ ಬೇರೆ ಬೇರೆಯಲ್ಲ. ಇಬ್ಬರೂ ಸಹ ಅವರಿಗೆ ತಿಳಿಯದೇ ಇರುವುದನ್ನು ನಂಬುತ್ತಾರೆ. ಇಬ್ಬರಿಗೂ ಸತ್ಯವನ್ನು ಅರಸುವ ಧೈರ್ಯ ಹಾಗೂ ಬದ್ಧತೆ ಎರಡೂ ಇಲ್ಲ. ಅವರು ಏನೋ ಒಂದನ್ನು ಕಲ್ಪಿಸಿಕೊಳ್ಳಲು ಬಯಸುತ್ತಾರೆ. ಅವರು ಬೆಳೆದ ಸಂಸ್ಕೃತಿಗೆ ಅನುಗುಣವಾಗಿ, ಒಂದು ಕಲ್ಪನೆ ಸಕಾರಾತ್ಮಕವಾಗಿ ಕಂಡರೆ, ಇನ್ನೊಂದು ನಕಾರಾತ್ಮಕವಾಗಿ ತೋರುತ್ತದೆ. ಅವರಿಗೆ ಯಾವ ರೀತಿಯಲ್ಲೂ ಸತ್ಯ ಗೊತ್ತಿರುವುದಿಲ್ಲ. 

ಆಸ್ತಿಕ ಅಥವಾ ನಾಸ್ತಿಕರಾಗಿರುವ ಬದಲು, “ನನಗೇನು ಗೊತ್ತೋ ಅಷ್ಟು ಮಾತ್ರ ನನಗೆ ಗೊತ್ತು, ಏನು ಗೊತ್ತಿಲ್ಲವೋ ಅದು ನನಗೆ ಗೊತ್ತಿಲ್ಲ” ಎಂಬುದನ್ನು ಒಪ್ಪಿಕೊಳ್ಳುವಷ್ಟು ನೇರವಂತಿಕೆ ನಿಮಗಿದ್ದರೆ, ಸ್ವಾಭಾವಿಕವಾಗಿ ನೀವು ಸತ್ಯವನ್ನು ತಿಳಿದುಕೊಳ್ಳಲು ಬಯಸುತ್ತೀರಿ, ತಿಳಿದುಕೊಳ್ಳಲು ಪ್ರಯತ್ನಿಸುತ್ತೀರಿ, ತಿಳಿದುಕೊಳ್ಳಲು ಅರಸುತ್ತೀರಿ - ಮತ್ತು ನೀವದನ್ನು ಕಂಡುಕೊಳ್ಳುತ್ತೀರಿ. ಮನುಷ್ಯನ ಅಸ್ತಿತ್ವದ ಮೂಲಸ್ವಭಾವವೇ ಅಂತಹದ್ದು.

ಪ್ರಶ್ನೆ : ಏನೇ ಆಗಲಿ, ನಮ್ಮ ತಲೆಮಾರಿನ ದೊಡ್ಡ ಸಮಸ್ಯೆಗಳು ಇನ್ನೂ ಸಹ ಪ್ರತಿದಿನದ ವಾಸ್ತವಗಳೇ ಆಗಿವೆ - ಕೆಲಸದಲ್ಲಿನ ಒತ್ತಡ, ಎಂದೂ ಬಾರದ ಬಡ್ತಿ, ಅಸಹನೀಯವಾದ ಮೇಲಧಿಕಾರಿ!

ಸದ್ಗುರು: ಕೆಲ ಸಮಯದ ಹಿಂದೆ ನಾನು ಮುಂಬಯಿಯಲ್ಲಿದ್ದೆ. ತುಂಬಾ ಮುಖ್ಯವಾದ ಹುದ್ದೆಯೊಂದರಲ್ಲಿದ್ದ ಒಬ್ಬರು ನನ್ನನ್ನು ಭೇಟಿಯಾಗಿ “ಸದ್ಗುರು, ಇನ್ನಿದನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ. ನನ್ನ ಬಾಸ್ ನನ್ನ ಜೀವನವನ್ನು ನರಕವನ್ನಾಗಿಸುತ್ತಿದ್ದಾನೆ” ಎಂದರು. ಅದಕ್ಕೆ ನಾನು, “ಹಾಗಾದರೆ ನಿನ್ನ ಕೆಲಸ ಹೋಗಲಿ” ಎಂದೆ. ಆಗವರು ಕಂಗಾಲಾಗಿ: ಸದ್ಗುರು, ನೀವೇನು ಹೇಳುತ್ತಿದ್ದೀರಿ.” ಎಂದರು. ನಾನು “ನೀವೇಕೆ ನಿಮ್ಮ ಕೆಲಸದಿಂದ ನರಳುತ್ತಿದ್ದೀರಿ? ಕೆಲಸ ಹೋಗಲಿ ಬಿಡಿ.  ನೀವು ಹೋಗಿ ಬೀಚಿನಲ್ಲಿ ಅಡ್ಡಾಡಿ” ಎಂದೆ. ಸದ್ಯಕ್ಕೆ ನೀವು ಹೇಗಿದ್ದೀರೆಂದರೆ - ನಿಮಗೆ ಕೆಲಸ ಕೊಟ್ಟರೆ ನೀವು ನರಳುತ್ತೀರಿ. ಕೆಲಸ ಹೋದರೂ ನೀವು ನರಳುತ್ತೀರಿ! 

ನಿಮಗೆ ನಿಜವಾಗಿಯೂ ಕಾಳಜಿಯಿರುವುದನ್ನು ನೀವು ಮಾಡುತ್ತಿದ್ದರೆ, ನೀವು ಮಾಡುತ್ತಿರುವ ಕೆಲಸ ಜಗತ್ತಿಗೆ ನೀವು ನೀಡುತ್ತಿರುವ ಒಂದು ಮುಖ್ಯವಾದ ಕೊಡುಗೆ ಎಂದು ನಿಮಗನಿಸಿದರೆ, ನೀವದನ್ನು ಸಂತೋಷದಿಂದ ಮಾಡುತ್ತೀರಿ

ಇದು ನಾವು ನಿರ್ಧರಿಸಬೇಕಾದ ಒಂದು ವಿಷಯ. ನೀವು ಕೇವಲ ಹೊಟ್ಟೆಪಾಡನ್ನು ಅರಸುತ್ತಾ ಬದುಕುಳಿಯಲು ಬಯಸುತ್ತೀರೋ ಅಥವಾ ನೀವೊಂದು ಜೀವನವನ್ನು ಸೃಷ್ಟಿಸಲು ಬಯಸುತ್ತೀರೋ? ಒಂದು ಹುಳು, ಒಂದು ಕೀಟ ಮತ್ತು ಒಂದು ಪಕ್ಷಿ ಅಷ್ಟು ಸುಲಭವಾಗಿ ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿರಲು ಸಾಧ್ಯವಿರುವಾಗ, ಇಷ್ಟೊಂದು ದೊಡ್ಡ ಮೆದುಳನ್ನು ಹೊಂದಿರುವ ನಿಮಗೆ ಹೊಟ್ಟೆಪಾಡನ್ನು ನೋಡಿಕೊಳ್ಳುವುದು ದೊಡ್ಡ ವಿಷಯವೇನಲ್ಲ. ಆದರೆ ನೀವು ಮತ್ತೊಬ್ಬರಂತೆ ಬದುಕಲು ಪ್ರಯತ್ನಿಸುತ್ತಿರುವುದೇ ಇಲ್ಲಿರುವ ಏಕೈಕ ಸಮಸ್ಯೆ. ನೀವು ಮತ್ತೊಬ್ಬರಂತೆ ದುಡ್ಡು ಮಾಡಬೇಕೆಂದುಕೊಂಡಿದ್ದೀರಿ, ಹಾಗಾಗಿ ಕೆಲಸಕ್ಕೆ ಸೇರಿಕೊಂಡಿದ್ದೀರಿ ಅಷ್ಟೆ. ಇನ್ಯಾರ ಬಳಿಯೋ ಇರುವ ಕಾರು ನಿಮಗೆ ಬೇಕು, ಹಾಗಾಗಿ ನೀವು ಯಾವುದೋ ಒಂದು ವ್ಯಾಪಾರಕ್ಕಿಳಿದಿದ್ದೀರಿ. ಇನ್ನೊಬ್ಬರು ವಾಸಿಸುತ್ತಿರುವಂತಹ ಮನೆಯಲ್ಲಿ ನೀವು ವಾಸಿಸಬೇಕು, ಅದಕ್ಕಾಗಿ ಇಷ್ಟೆಲ್ಲಾ ಗೋಜಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ. ಎಲ್ಲಾ ರೀತಿಯ ತಪ್ಪು ಕಾರಣಗಳಿಗಾಗಿ ಕೆಲಸ ಮಾಡುವುದನ್ನು ಕಲಿಯುತ್ತಾ ನೀವು ಬೆಳೆದಿದ್ದೀರಿ. ನೀವು ನಿಜವಾಗಿಯೂ ಮಾಡಬೇಕೆಂದುಕೊಂಡಿರುವುದನ್ನು ಮಾಡುತ್ತಿಲ್ಲ.

ನಾನು “ನಿಜವಾಗಿಯೂ  ಮಾಡಬೇಕೆಂದುಕೊಂಡಿರುವುದು” ಎಂದಾಗ - ಮನಸ್ಸಿಗೆ ಬಂದದ್ದನ್ನು ಮಾಡುವುದು ಎಂದರ್ಥವಲ್ಲ. ನಿಮಗೆ ನಿಜವಾಗಿಯೂ ಕಾಳಜಿಯಿರುವುದನ್ನು ನೀವು ಮಾಡುತ್ತಿದ್ದರೆ, ನೀವು ಮಾಡುತ್ತಿರುವ ಕೆಲಸ ಜಗತ್ತಿಗೆ ನೀವು ನೀಡುತ್ತಿರುವ ಒಂದು ಮುಖ್ಯವಾದ ಕೊಡುಗೆ ಎಂದು ನಿಮಗನಿಸಿದರೆ, ನೀವದನ್ನು ಸಂತೋಷದಿಂದ ಮಾಡುತ್ತೀರಿ. ಅದರಲ್ಲಿ ನಿಮಗೆ ಒತ್ತಡ ಎನ್ನುವಂತದ್ದೇನೂ ಇರಲು ಸಾಧ್ಯವಿಲ್ಲ. ಆದರೆ ನಿಮಗೆ ಕಾಳಜಿಯೇ ಇಲ್ಲದಂತಹ ಕೆಲಸವನ್ನು ಏನೋ ಒಂದು ಸಿಗುತ್ತದೆ ಎಂಬ ಕಾರಣಕ್ಕಾಗಿ ನೀವು ಮಾಡಿದರೆ - ನಾನು ಹೀಗೆ ಹೇಳಲು ಇಚ್ಛಿಸುವುದಿಲ್ಲವಾದರೂ, ಒಂದು ರೀತಿಯಲ್ಲಿ ನಿಮ್ಮನ್ನು ನೀವೇ ಮಾರಾಟಮಾಡಿಕೊಂಡಿದ್ದೀರಿ ಎಂದರ್ಥ.

ಪ್ರಶ್ನೆ : ಆದರೆ “ದೊಡ್ಡದಾದುದ್ದನ್ನು ಪಡೆದುಕೋ” ಎನ್ನುವುದು ಈಗಿನ ಪೀಳಿಗೆಯನ್ನು ಮುನ್ನುಗಿಸುತ್ತಿರುವ ಶಕ್ತಿಯಾಗಿಬಿಟ್ಟಿದೆ. ನಾವದನ್ನು ಆಕಾಂಕ್ಷೆ ಎನ್ನುತ್ತೇವೆ. ಅದು ಕೆಟ್ಟದ್ದು ಎಂದು ಯಾರೂ ನಮಗೆ ಹೇಳಿಲ್ಲ.

ಸದ್ಗುರು: ಇದೀಗ ನೀವು ಜೀವಂತವಾಗಿದ್ದೀರಿ ಎನ್ನುವುದೇ ನಿಮ್ಮ ಜೀವನದ ಅತ್ಯಂತ ಮುಖ್ಯವಾದ ಸಂಗತಿ. ಈಗ ಇಲ್ಲಿ ನಡೆಯುತ್ತಿರುವ ಜೀವನವೆಂಬ ಅತಿ ದೊಡ್ಡ ಅದ್ಭುತವನ್ನು ಆನಂದಿಸುವುದು ಹೇಗೆಂದು ನಿಮಗೆ ತಿಳಿದಿಲ್ಲದಿದ್ದರೆ, ಬೇರೇನನ್ನಾದರೂ ನೀವು ಹೇಗೆ ಆನಂದಿಸುತ್ತೀರಿ? ನೀವು ನಿಜವಾಗಿಯೂ ಅದನ್ನು ಆನಂದಿಸುತ್ತಿದ್ದೇ ಆದರೆ, ಬೇರೆಲ್ಲವೂ ಪ್ರಾಸಂಗಿಕವಷ್ಟೇ, ನಿರ್ಧಾರಕ ಅಂಶವಲ್ಲ. ಇಂದು ನನ್ನ ಬಳಿ ಒಂದು ಕಾರ್ ಇರಬಹುದು, ಆದರೆ ನಾಳೆ ನನ್ನ ಬಳಿ ಸೈಕಲ್ ಇದ್ದರೆ, ನಾನದನ್ನೇ ಓಡಿಸುತ್ತೇನೆ - ಅದೆಂಥಾ ಮಹಾ ವಿಷಯ? ನಿಮ್ಮ ಜೀವನದ ನಿಜವಾದ ಮೌಲ್ಯವನ್ನು ನೀವಿನ್ನೂ ಕಂಡುಕೊಂಡಿಲ್ಲ, ಹಾಗಾಗಿ ನೀವು ಎಲ್ಲಾ ರೀತಿಯ ಮೌಲ್ಯವಿಲ್ಲದ ಸಂಗತಿಗಳಿಗೆ ಮೌಲ್ಯವನ್ನು ನೀಡಲು ಪ್ರಯತ್ನಿಸುತ್ತಿದ್ದೀರಿ ಅಷ್ಟೆ.

ನನ್ನ ಕಾರ್ಯಕ್ರಮಗಳು ದಿನಕ್ಕೆ ಇಪ್ಪತ್ತು ಗಂಟೆಗಳಿಗೂ ಹೆಚ್ಚು ಕಾಲ ನಡೆಯುತ್ತವೆ. ಒಂದೇ ಹಾಸಿಗೆಯ ಮೇಲೆ ಎರಡು ರಾತ್ರಿಗಳು ನಿದ್ರಿಸಲು ನನಗೆ ಅವಕಾಶ ಸಿಕ್ಕರೆ ಅದೇ ನನಗೊಂದು ಸುಯೋಗ. ಆದರೆ ನಾನು ಒತ್ತಡದಲ್ಲಿರುವಂತೆ ಕಾಣುತ್ತೇನೆಯೇ? ನಾನು ತಲೆಬಿಸಿಯಿಂದ ಸಾಯುತ್ತೇನೆಯೇ? ಎಂದಿಗೂ ಇಲ್ಲ! ಸುಸ್ತಿನಿಂದ ನಾನು ಸಾಯಬಹುದೇ ಹೊರತು ಬೇಸರದಿಂದಾಗಿ ಖಂಡಿತವಾಗಿಯೂ ನಾನು ಸಾಯುವುದಿಲ್ಲ. ಸಾಯಲು ಅದೊಂದು ಭಯಂಕರವಾದ ವಿಧಾನ. ನೀವು ಜೀವನದೆಡೆಗೆ ಚೈತನ್ಯಶೀಲರಾಗಿರಲು, ನೀವು ಅದರಿಂದ ಏನನ್ನು ಪಡೆದುಕೊಳ್ಳಬಹುದು ಎಂದು ಯೋಚಿಸುತ್ತಿರಬಾರದು - ನೀವದರಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವುದು ಹೇಗೆಂದು ನೋಡಬೇಕು. 

ಪ್ರಶ್ನೆ : ಹೌದು, ನಾವು ಜೀವಂತಿಕೆಯಿಂದ ಇದ್ದೇವೆ - ಶುಕ್ರವಾರಗಳಂದು ಮಾತ್ರ! :)

ಸದ್ಗುರು: ಅಬ್ಬ! ಶುಕ್ರವಾರ ಬಂತು, ಅಲ್ಲವೇ? ಜನ ನನ್ನನ್ನು ಕೆಲಸ ಮತ್ತು ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಹೇಗೆಂಬ ಬಗ್ಗೆ ಬಹಳಷ್ಟು ಕೇಳುತ್ತಾರೆ. ನೀವು ಮಾಡುವ ಕೆಲಸ ಜೀವನವಲ್ಲದಿದ್ದರೆ, ನೀವದನ್ನು ಮಾಡಬೇಡಿ ಎಂದು ನಾನು ಹೇಳುತ್ತೇನೆ. ನನಗೆ ವಾರಾಂತ್ಯ ಎನ್ನುವುದಿಲ್ಲ - ನಾನು ವಾರದ ಏಳೂ ದಿನಗಳು, ವರ್ಷದ 365 ದಿನಗಳೂ ಕೆಲಸ ಮಾಡುತ್ತೇನೆ. ನನಗೆ ರಜೆ ಬೇಕೆನ್ನುವ ಹಾಗೆ ನಾನು ಕಾಣುತ್ತೇನೆಯೇ? ನಿಮಗೆ ಕಾಳಜಿಯಿರುವುದನ್ನು ನೀವು ನಿಜವಾಗಿಯೂ ಮಾಡಿದರೆ, ನಿಮ್ಮ ಇಡೀ ಜೀವನ ಒಂದು ರಜೆಯಾಗಿರುತ್ತದೆ. ಹಾಗಾಗಿ ನಿಮಗೆ ಕಾಳಜಿ ಇರುವುದನ್ನು ಸೃಷ್ಟಿಸುವ ಮೂಲಕ ನಿಮ್ಮಿಡೀ ಜೀವವನ್ನು ಒಂದು ರಜೆಯನ್ನಾಗಿಸಿಕೊಳ್ಳಿ.

ಸಂತೋಷ ಎನ್ನುವುದು ಒಂದು ವಿಮೆಯಿದ್ದಂತೆ. ನೀವು ಸಂತೋಷದಿಂದಿದ್ದಾಗ, ನೀವು ಎಲ್ಲರೊಂದಿಗೂ ಅದ್ಭುತವಾಗಿರುತ್ತೀರಿ

ಜೀವನವು ತಾನೇ ಒಂದು ಉದ್ಧೇಶವಾಗಿದೆ. ನೀವು ಎಷ್ಟರಮಟ್ಟಿಗೆ ಜೀವಂತಿಕೆಯಿಂದ ಇದ್ದೀರಿ ಎನ್ನುವುದೇ ದೊಡ್ಡ ಪ್ರಶ್ನೆ. ನೀವು ಐದು ವರ್ಷದವರಿದ್ದಾಗ ಎಷ್ಟು ಜೀವಂತಿಕೆಯಿಂದಿದ್ದಿರಿ? ಇಂದು ಎಷ್ಟು ಜೀವಂತಿಕೆಯಿಂದಿದ್ದೀರಿ?  ದಿನಕ್ಕೊಮ್ಮೆಯಾದರೂ ಒಂದು ಲೆಕ್ಕವನ್ನು ಇಡಿ! ನೀವಿದರ ಲೆಕ್ಕವನ್ನು ಇಡದಿದ್ದರೆ, ನಿಮ್ಮ ಜೀವನದ ವ್ಯವಹಾರ ನಷ್ಟಕ್ಕೆ ತಿರುಗುತ್ತದೆ. ಕೊನೇಪಕ್ಷ ನೀವು ಮಲಗುವ ಮುನ್ನ ಸ್ವಲ್ಪ ಗಮನಿಸಿ: ನೀವು ನಿನ್ನೆಗಿಂತ ಇಂದು ಉತ್ತಮ ಮನುಷ್ಯರಾಗಿದ್ದೀರಾ ಎಂಬುದನ್ನು ವಿಚಾರ ಮಾಡಿ. ನಾನು “ಉತ್ತಮ” ಎಂದು ಹೇಳಿದಾಗ, ಅದರರ್ಥ ನೀವು ಏನೋ ಒಳ್ಳೆಯದನ್ನು ಮಾಡಬೇಕು ಅಥವಾ ಯಾರಿಗೋ ಸಹಾಯ ಮಾಡಬೇಕು ಎಂದಲ್ಲ. ನಾನು ನೈತಿಕ ಸುಧಾರಣೆಯ ಕುರಿತು ಇಲ್ಲಿ ಮಾತನಾಡುತ್ತಿಲ್ಲ. ಒಂದು ಜೀವವಾಗಿ, ನೀವು ಸ್ವಲ್ಪ ಹೆಚ್ಚು ಆನಂದದಿಂದಿದ್ದೀರಾ?

ಸಂತೋಷ ಎನ್ನುವುದು ಒಂದು ವಿಮೆಯಿದ್ದಂತೆ. ನೀವು ಸಂತೋಷದಿಂದಿದ್ದಾಗ, ನೀವು ಎಲ್ಲರೊಂದಿಗೂ ಅದ್ಭುತವಾಗಿರುತ್ತೀರಿ. ನೀವು ನಿಮ್ಮ ಮೂರ್ಖ ಹಣದ ಲೆಕ್ಕವಿಡುತ್ತಿದ್ದೀರೇ ವಿನಃ ನಿಮ್ಮ ಜೀವನದ ಲೆಕ್ಕವಿಡುತ್ತಿಲ್ಲ. ನಿಮ್ಮ ಹಣ ನಿಮ್ಮ ಜೀವನಕ್ಕಿಂತ ಹೆಚ್ಚು ಮುಖ್ಯವಾಗಿಬಿಟ್ಟಿದೆ!

ಪ್ರಶ್ನೆ : ಹಾಗಾದರೆ ಇದಕ್ಕೆಲ್ಲ ಪರಿಹಾರವೇನು ?

ಸದ್ಗುರು: ನಿಮ್ಮ ಶ್ರೇಯಸ್ಸಿಗಾಗಿ ನೀವು ಅಂತರ್ಮುಖಿಯಾಗಬೇಕು, ಹೊರಗೆ ನೋಡುವುದಲ್ಲ. ನೀವು ಸ್ವಭಾವತಃ ಆನಂದದಿಂದಿದ್ದರೆ, ನೀವೇನು ಮಾಡುತ್ತಿದ್ದಿರಿ? ಏನು ಅಗತ್ಯವಿದೆಯೋ ಅದನ್ನು ನೀವು ಸುಮ್ಮನೆ ಮಾಡಿರುತ್ತಿದ್ದಿರಿ. ಸದ್ಯದಲ್ಲಿ, ನೀವು ನಿಮ್ಮ ಸಂತೋಷದ ಹುಡುಕಾಟದಲ್ಲಿ ಏನು ಮಾಡುತ್ತಿದ್ದೀರಿ? ನಿಮಗೆ ಯಾವುದು ಸಂತೋಷವನ್ನು ತರುತ್ತದೆ ಎಂದೆನಿಸುತ್ತದೆಯೋ ಅದನ್ನು ಮಾಡುತ್ತಿದ್ದೀರಿ. ಹಾಗಾಗಿ, ಪ್ರಪಂಚದಿಂದ ಸಂತೋಷದ ಸವಿಯನ್ನು ಹಿಂಡಲು ಪ್ರಯತ್ನಿಸುವುದರ ಬದಲಾಗಿ, ಈ ಜೀವನವನ್ನು ತಾನೇ ಒಂದು ಮಾಧುರ್ಯದಿಂದ ಕೂಡಿದ ರೀತಿಯಲ್ಲಿ ವರ್ಧಿಸುವಂತೆ ಮಾಡುವ ಸಲುವಾಗಿ ಮಾನವ ಅನುಭವವನ್ನು ಪರಿವರ್ತಿಸುವುದೇ ಉತ್ತಮ ಪರಿಹಾರವಾಗಿದೆ.

ಸಂಪಾದಕರ ಟಿಪ್ಪಣಿ : ಯೋಗವಿಜ್ಞಾನಗಳ ಕಾಲಾತೀತ ವಿವೇಕದಲ್ಲಿ ಬೇರೂರಿರುವ, ಸದ್ಗುರುಗಳಿಂದ ವಿನ್ಯಾಸಗೊಳಿಸಲ್ಪಟ್ಟಿರುವ ಈಶ ಕ್ರಿಯ, ಒಬ್ಬ ವ್ಯಕ್ತಿಗೆ ತನ್ನ ಅಸ್ತಿತ್ವದ ಮೂಲದೊಂದಿಗೆ ಸಂಪರ್ಕದಲ್ಲಿರಲು ಮತ್ತು ಅವನು ತನ್ನ ದೃಷ್ಟಿಕೋನ ಮತ್ತು ಆಕಾಂಕ್ಷೆಗನುಗುಣವಾಗಿ ತನ್ನ ಜೀವನವನ್ನು ರೂಪಿಸಿಕೊಳ್ಳಲು ಸಹಾಯಮಾಡುತ್ತದೆ. ಉಚಿತ ಮಾರ್ಗದರ್ಶಿತ ಧ್ಯಾನ ಎಂಬ ಶೀರ್ಷಿಕೆಯಡಿಯಲ್ಲಿ, ಲಿಖಿತ ಸೂಚನೆಗಳೊಂದಿಗೆ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿರುವ ಈ ಸಾಧನಕ್ರಮವು, ಪ್ರತಿದಿನ ಕೆಲವು ನಿಮಿಷಗಳ ಕಾಲ ಅಭ್ಯಾಸ ಮಾಡಲು ಇಚ್ಛಿಸುವವರ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.