ಪ್ರಶ್ನೆ : ಉದ್ಯೋಗ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಸಮತೋಲನ ಹೇಗೆ ಸಾಧಿಸಬೇಕು? ಅದರಲ್ಲೂ ವಿಶೇಷವಾಗಿ ಪರಿವಾರ ಮತ್ತು ಮಕ್ಕಳ ಜೊತೆ?

ಸದ್ಗುರು: ನಿಮ್ಮ ಉದ್ಯೋಗವನ್ನು ನೀವು ಜೀವಿಸಬೇಕು, ಜೊತೆಗೆ ನಿಮ್ಮ ಜೀವನವನ್ನು ಕಟ್ಟಬೇಕು. ಉದ್ಯೋಗ ಮತ್ತು ಜೀವನ ಎನ್ನುವ ಎರಡು ವಿಷಯಗಳಿಲ್ಲ, ಇರುವುದು ಬರೀ ಜೀವನ ಮತ್ತು ಜೀವನವಷ್ಟೇ. ನಿಮ್ಮ ಉದ್ಯೋಗ ನಿಮ್ಮ ಜೀವನವಾಗದಿದ್ದರೆ, ನೀವು ಅದನ್ನು ಏಕೆ ಮಾಡಬೇಕು ಎನ್ನುವುದು ನನಗೆ ತಿಳಿಯುತ್ತಿಲ್ಲ. ನಿಮ್ಮ ಉದ್ಯೋಗ ಕೂಡ ಜೀವನವೇ. ನೀವು ಉದ್ಯೋಗ ಮಾಡದಿದ್ದರೆ, ನಿಮ್ಮ ಜೀವನ ನಡೆಯುತ್ತದೆಯೇ? ನಾನು ಕೇವಲ ಆರ್ಥಿಕ ಅಂಶಗಳ ಬಗ್ಗೆ ಹೇಳುತ್ತಿಲ್ಲ. ಹೀಗಾಗಿ ಉದ್ಯೋಗ ಕೂಡ ಜೀವನವೇ. ಉದ್ಯೋಗ ಮತ್ತು ಜೀವನ ಎಂದು ಎರಡು ಭಾಗಗಳನ್ನು ಮಾಡಬೇಡಿ. ಇವು ಜೀವನದ ವಿಭಿನ್ನ ಅಂಶಗಳು ಅಷ್ಟೇ ಮತ್ತು ಅವೆರಡನ್ನೂ ನಾವು ನಿಭಾಯಿಸಬೇಕು.

ನೀವು ಮಾಡಬಹುದಾದ ಒಂದು ಪ್ರಮುಖ ಸಂಗತಿಯೆಂದರೆ, ಕೌಟುಂಬಿಕ ಸಂಭಾಷಣೆಯಲ್ಲಿ ನಿಮ್ಮ ಉದ್ಯೋಗದಲ್ಲಿ ನೀವು ಮಾಡುತ್ತಿರುವ ವಿವಿಧ ಕೆಲಸಗಳ ಬಗ್ಗೆ ಕುಟುಂಬದ ಜೊತೆ ಹಂಚಿಕೊಳ್ಳುವುದು. ಇದು ಸಂಪೂರ್ಣವಾಗಿ ಬೇರೆಯದೇ ಮಟ್ಟದ ವಿಶ್ವಾಸವನ್ನು ನಿರ್ಮಿಸುತ್ತದೆ ಮತ್ತು ನಿಮ್ಮ ಕುಟುಂಬದಿಂದ ಯಾವ ರೀತಿಯ ಒಳನೋಟಗಳು ಬರಬಹುದು ಎಂಬುದನ್ನು ನೀವು ಊಹಿಸಿರಲಿಕ್ಕಿಲ್ಲ. ಅವರು ನಿಮ್ಮ ಕೆಲಸವನ್ನು ಹೊರಗಿನಿಂದ ನೋಡುತ್ತಾರೆ, ಆದರೆ ಇವರು ನಿಮ್ಮ ವಿಶ್ವಸಾರ್ಹ ವ್ಯಕ್ತಿಗಳು, ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ನೀವು ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಅವರ ಸಲಹೆಗಳು ತುಂಬಾ ಅಮೂಲ್ಯವಾದುದು. ಅವರು ನಿಮ್ಮ ಹೆಂಡತಿಯಾಗಿರಬಹುದು, ನಿಮ್ಮ ಐದು ವರ್ಷದ ಮಗುವಾಗಿರಬಹುದು, ಅವರು ಯಾರೆಂದು ನಿಮಗೆ ಗೊತ್ತಿರುವದಿಲ್ಲ. ಜನರು ತಮ್ಮ ಕಛೇರಿ ಕೆಲಸದ ಸಂಭಾಷಣೆಗಳನ್ನು ಕುಟುಂಬದಿಂದ ದೂರವಿಡಲು ಪ್ರಯತ್ನಿಸುತ್ತಾರೆ, ಆದರೆ ಇದು ತಪ್ಪು ಎಂದು ನನ್ನ ಭಾವನೆ. ನೀವು ಉದ್ಯೋಗದಲ್ಲಿ ಎನನ್ನಾದರೂ ವಿಶಿಷ್ಟವಾದದ್ದನ್ನು ಸೃಷ್ಟಿಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಸಂಭಾಷಣೆಗಳು ಏಕೆ ಆಸಕ್ತಿಕರವಾಗಿರುವುದಿಲ್ಲ? ಕುಟುಂಬವು ಅದರಲ್ಲಿ ಭಾಗಿಯಾಗಬಹುದು. ಮನೆಯಲ್ಲಿದ್ದಾಗ, ನೀವು ಕೆಲಸ ಮಾಡದೇ ಇದ್ದರೂ, ಆಲೋಚನೆ ಮಾಡುತ್ತಿರಬಹುದು ಅಥವಾ ನಾಳೆಯ ಅಥವಾ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸುತ್ತಿರಬಹುದು.

ಅಬ್ಬ ಇವತ್ತು ಶುಕ್ರವಾರ... ಥ್ಯಾಂಕ್ಸ್ ದೇವರೇ!

ಇತ್ತೀಚಿನ ದಿನಗಳಲ್ಲಿ, ಅಮೇರಿಕಾದಿಂದ ಬಂದಿರುವ ಈ "ಅಬ್ಬ ಇವತ್ತು ಶುಕ್ರವಾರ... ಥ್ಯಾಂಕ್ಸ್ ದೇವರೇ" ಸಂಸ್ಕೃತಿ ಭಾರತದಲ್ಲೂ ಬೆಳೆಯುತ್ತಿರುವುದನ್ನು ನೋಡುತ್ತಿದ್ದೇನೆ. ಹಾಗೆಂದರೆ ಅವರು ವಾರದ ಐದು ದಿನ ಶವವಾಗಿರುತ್ತಾರೆ, ಹಾಗೂ ವಾರಾಂತ್ಯಗಳಲ್ಲಿ ಮಾತ್ರ ಜೀವಿಸುತ್ತಾರೆ. ಅದು ಬದುಕುವ ಉತ್ತಮ ವಿಧಾನವಲ್ಲ. ನೀವು ಎಲ್ಲಾ ಏಳೂ ದಿನಗಳನ್ನೂ ಜೀವಿಸಬೇಕು.

ಇಂದು ಸಮಾಜದಲ್ಲಿ ಉದ್ಯೋಗ ಮತ್ತು ವಿಲಾಸದಿಂದಿರುವುದು ಬೇರೆ ಬೇರೆ ಅನ್ನುವ ಭಾವನೆ ಪ್ರಬಲವಾಗಿದೆ - ವಿಶೇಷವಾಗಿ ಅಮೇರಿಕನ್ ಸಮಾಜದಲ್ಲಿ. ಅದೃಷ್ಟವಶಾತ್ ಭಾರತದಲ್ಲಿ ಅಷ್ಟಿಲ್ಲ. ಅಮೇರಿಕಾದಲ್ಲಿ ಕೆಲವರು ಶುಕ್ರವಾರ ಬೆಳಿಗ್ಗೆ ತಮ್ಮ ಪ್ಯಾಂಟ್ ಒಳಗೆ ಬೀಚ್ ಶಾರ್ಟ್ಸ್ ಧರಿಸಿ ಕಚೇರಿಗೆ ಹೋಗುತ್ತಾರೆ. ಸಂಜೆ ಪಾರ್ಕಿಂಗ್ ನಿಲ್ದಾಣಕ್ಕೆ ಬಂದ ಕೂಡಲೇ ಪ್ಯಾಂಟ್ ತೆಗೆಯುತ್ತಾರೆ, ಏಕೆಂದರೆ ಅವರು ಶುಕ್ರವಾರ ಸಂಜೆ ತಮ್ಮ ಕಛೇರಿಯ ಪ್ಯಾಂಟ್‍ಗಳಲ್ಲಿ ಕಾಣಿಸಿಕೊಳ್ಳಲು ಬಯಸುವುದಿಲ್ಲ - ಬೀಚ್ ಶಾರ್ಟ್ಸನಲ್ಲಿ ಕಾಣಬೇಕೆಂದು ಬಯಸುತ್ತಾರೆ!

ನೀವು ಕಛೇರಿಯಲ್ಲಿರಲಿ ಅಥವಾ ಬೀದಿಯಲ್ಲಿರಲಿ, ನೀವು ಕಾಳಜಿವಹಿಸುವ ಏನನ್ನಾದರೂ ಸೃಷ್ಟಿಸಲು ನೀವು ನಿರಂತರವಾಗಿ ಶ್ರಮಿಸುತ್ತಿದ್ದರೆ, ನೀವು ರಜಾದಿನದಲ್ಲಿದ್ದಂತೆ ನಿಮಗೆ ಯಾವಾಗಲೂ ಅನ್ನಿಸುತ್ತದೆ.

ಇದು ಏಕೆಂದರೆ ಜನರು ತಮ್ಮ ಉದ್ಯೋಗವನ್ನು ಯಾತನೆ ಎಂದು ತಿಳಿದಿದ್ದಾರೆ. ಚಟುವಟಿಕೆಯಲ್ಲಿ ಇರುವ ಆನಂದ ತಿಳಿದವರಿಗೆ, ವಿಶ್ರಾಂತಿ ಬೇಕೆನಿಸುವುದಿಲ್ಲ. ನನಗೆ, ನನ್ನ ಕೆಲಸ ಒಂದು ಪ್ರೇಮ ಸಲ್ಲಾಪವಿದ್ದಂತೆ. ನಾನು ಇಪ್ಪತ್ತು ಗಂಟೆ ಕೆಲಸ ಮಾಡಿದರೂ ಎನೋ ಕಳೆದು ಕೊಂಡಿದ್ದೇನೆ ಎನ್ನಿಸುವುದಿಲ್ಲ. ನೀವು ಕಾಳಜಿವಹಿಸುವ ಏನನ್ನಾದರೂ ಸೃಷ್ಟಿಸಲು ನೀವು ನಿರಂತರವಾಗಿ ಶ್ರಮಿಸುತ್ತಿದ್ದರೆ, ನೀವು ಕಛೇರಿಯಲ್ಲಿರಲಿ ಅಥವಾ ಬೀದಿಯಲ್ಲಿರಲಿ, ರಜಾದಿನದಲ್ಲಿದ್ದಂತೆ ನಿಮಗೆ ಯಾವಾಗಲೂ ಅನ್ನಿಸುತ್ತದೆ. ನಿಮ್ಮ ಭೌತಿಕ ದೇಹಕ್ಕೆ ಕೆಲವೊಮ್ಮೆ ವಿಶ್ರಾಂತಿ ಬೇಕಾಗುತ್ತದೆ, ಆದರೆ ನಿಮ್ಮ ಕೆಲಸದಿಂದ ನಿಮಗೆ ವಿಶ್ರಾಂತಿ ಬೇಕು ಎನ್ನಿಸಿದರೆ, ನೀವು ನಿಮಗೆ ಇಷ್ಟವಾದದ್ದನ್ನು ಮಾಡುತ್ತಿಲ್ಲ ಎಂದರ್ಥ. ನಿಮಗೆ ಇಷ್ಟವಾದದ್ದನ್ನು ನೀವು ಮಾಡುತ್ತಿದ್ದರೆ, ನಿಮಗೆ ವಿಶ್ರಾಂತಿ ಎಕೆ ಬೇಕು ? ಸಾಧ್ಯವಾದರೆ ನನಗೆ ದಿನಕ್ಕೆ 48 ಗಂಟೆ ಇರಬೇಕು ಎನ್ನಿಸುತ್ತದೆ, ಆದರೆ ಒಬ್ಬ ಯೋಗಿಗೂ ಸಹ ಈ ವಿನಾಯತಿ ಕೊಡಲಾಗಿಲ್ಲ!

ಉದ್ಯೋಗ ಕೇವಲ ಹಣ ಸಂಪಾದನೆಗಾಗಿ ಮತ್ತು ಕುಟುಂಬ ಜನರ ಬದುಕನ್ನು ಸ್ಪರ್ಶಿಸಲು ಇರುವುದು ಎಂದು ಜನರು ಜೀವನವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನೀವು ಎಷ್ಟೇ ಹಣ ಸಂಪಾದಿಸಿದರೂ, ನೀವು ಮಾಡುವ ಉದ್ಯೋಗದಿಂದ ನಿಮ್ಮ ಸಂಗಾತಿಗೆ ಅಥವಾ ಮಕ್ಕಳಿಗೆ ಹೆಮ್ಮೆ ಎನಿಸದಿದ್ದರೆ, ಇದ್ದಕ್ಕಿದ್ದಂತೆ ಎಲ್ಲವೂ ಅರ್ಥಹೀನವೆಂದು ತೋರುತ್ತದೆ. ನಿಮ್ಮ ಜೀವನದಲ್ಲಿ ಎಲ್ಲೋ ಒಂದು ಕಡೆ, ನೀವು ನಿರ್ವಹಿಸುವ ಚಟುವಟಿಕೆಯಿಂದ ಜನರನ್ನು ಸ್ಪರ್ಶಿಸಬೇಕೆಂದು ಬಯಸುತ್ತೀರಿ. ಉದಾಹರಣೆಗೆ, ಯಾರೂ ನೋಡಲು ಬಯಸದಿರುವ ಸಿನೆಮಾವೊಂದನ್ನು ನೀವು ಮಾಡಲು ಬಯಸುತ್ತೀರಾ ? ಅಥವಾ ಯಾರೂ ವಾಸಿಸಲು ಇಷ್ಟಪಡದ ಮನೆಯನ್ನು ನಿರ್ಮಿಸಲು ಬಯಸುತ್ತೀರಾ? ಯಾರೂ ಬಳಸಲು ಬಯಸದ ವಸ್ತುವನ್ನು ಉತ್ಪಾದಿಸಲು ನೀವು ಬಯಸುವುದಿಲ್ಲ. ಯಾವುದಾದರೂ ರೀತಿಯಲ್ಲಿ, ನೀವು ಜನರ ಜೀವನವನ್ನು ಸ್ಪರ್ಶಿಸಲು ಹಾತೊರೆಯುತ್ತಿದ್ದೀರಿ. ಈ ಅಂಶವು ಕುಟುಂಬಕ್ಕೆ ಮಾತ್ರ ಸೀಮಿತವಾಗಬೇಕಾಗಿಲ್ಲ. ಇದು ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯಿಸುತ್ತದೆ.

ಉದ್ಯೋಗವೆಂದರೆ ಕೇವಲ ನೀವು ಪಡೆಯುವ ಹಣಕ್ಕಾಗಿಯಲ್ಲ, ಅದು ನಿಮಗೆ ಎನಾದರೂ ಮಹತ್ವವಾದದ್ದನ್ನು ಸೃಷ್ಟಿಸಲು ದೊರೆತಿರುವ ಸೌಲಭ್ಯ. ಹಣ ನಮ್ಮ ಉಳಿವಿಗಾಗಿ ಬೇಕಾದ ಸಾಧನ ನಿಜ. ಅಷ್ಟರ ಮಟ್ಟಿಗೆ ಮಾತ್ರ ಅದರ ಅವಶ್ಯಕತೆ ಇದೆ. ನಿಮಗೆ ಮಾಡಲು ಕೊಟ್ಟಿರುವ ಕೆಲಸಕ್ಕೆ ಸಂಬಂಧಿಸಿದಂತೆ, ನಿಮ್ಮನ್ನು ನೀವು ಯಾವಾಗಲೂ ವಿಮರ್ಶಿಸಿಕೊಳ್ಳಬೇಕು. ನಿಮಗೆ ನೀಡಲಾಗಿರುವ ಜವಾಬ್ದಾರಿಯ ಮಟ್ಟ ಎನು? ನಿಮಗೂ ಮತ್ತು ನಿಮ್ಮ ಸುತ್ತಮುತ್ತಲಿರುವ ಜನರಿಗೆ ಎನಾದರೂ ವಿಶಿಷ್ಟವಾದದ್ದನ್ನು ಸೃಷ್ಟಿಸಲು ನಿಮಗೆ ಇರುವ ಅವಕಾಶಗಳೇನು? ನೀವು ಪ್ರಪಂಚದಲ್ಲಿ ಮಾಡುವ ಯಾವುದೇ ಕೆಲಸವಿರಲಿ, ಅದು ಜನರ ಜೀವನವನ್ನು ಆಳವಾಗಿ ಸ್ಪರ್ಶಿಸಲು ಸಾಧ್ಯವಾದರೆ ಮಾತ್ರ, ಅದು ಉಪಯುಕ್ತ ಕೆಲಸವಾಗುತ್ತದೆ.

ಸಂಪಾದಕರ ಟಿಪ್ಪಣಿ : “ಇನ್‍ಸೈಟ್ – ದಿ ಡಿ ಎನ್ ಎ ಆಫ್ ಸಕ್ಸಸ್” ಕಾರ್ಯಕ್ರಮದಲ್ಲಿ ನಿಮ್ಮ ಉದ್ಯಮ ಮತ್ತು ಆಂತರಿಕ ಸಾಮರ್ಥ್ಯದ ಉನ್ನತೀಕರಣ ಮಾಡುವ ವಿಶಿಷ್ಟ ಸಂಯೋಜನೆಯನ್ನು ಅನುಭವಿಸಿ.
ಸದ್ಗುರು, ಅರುಂಧತಿ ಭಟ್ಟಾಚಾರ್ಯ (ಅಧ್ಯಕ್ಷರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ), ಅಜಯ್ ಪಿರಮಾಲ್ (ಅಧ್ಯಕ್ಷರು, ಪಿರಮಾಲ್ ಗ್ರೂಪ್ ಮತ್ತು ಶ್ರೀರಾಮ್ ಗ್ರೂಪ್), ಮತ್ತು 20 ಕ್ಕೂ ಹೆಚ್ಚು ಉನ್ನತ ಮಟ್ಟದ ಉದ್ಯಮಿಗಳೊಂದಿಗೆ ಉದ್ಯಮ ನಾಯಕತ್ವ ಕಾರ್ಯಕ್ರಮವನ್ನು ನವೆಂಬರ್ 24 - 27, 2016 ರಿಂದ ಈಶಾ ಯೋಗಕೇಂದ್ರ, ಕೊಯಮತ್ತೂರಿನಲ್ಲಿ ನಡೆಸಲಾಗಿತ್ತು.
ಹೆಚ್ಚಿನ ವಿವರಗಳಿಗಾಗಿ www.ishainsight.org, +91 83000 84888, leadership@ishainsight.org