ದೀಪಾವಳಿ – ನಮ್ಮೊಳಗಿನ ದೀಪವನ್ನು ಬೆಳಗಿಸುವುದು
ಸದ್ಗುರುಗಳು ದೀಪಾವಳಿ ಹಬ್ಬದ ಮಹತ್ವವನ್ನು ವಿವರಿಸುತ್ತಾ ನಾವು ಹೇಗೆ ಹಬ್ಬವನ್ನು ಅವಿಸ್ಮರಣೀಯವಾದ ರೀತಿಯಲ್ಲಿ ಆಚರಿಸುವುದು ಎಂಬುದನ್ನು ತಿಳಿಸಿಕೊಡುತ್ತಾರೆ!
ಸದ್ಗುರು: ದೀಪಾವಳಿಯನ್ನು ವಿವಿಧ ಸಾಂಸ್ಕೃತಿಕ ಕಾರಣಗಳಿಗಾಗಿ ಆಚರಿಸಲಾಗುತ್ತದೆ ಆದರೆ ಐತಿಹಾಸಿಕವಾಗಿ ಇದನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ದಿನ ಕ್ರೂರಿಯಾದ ರಾಜ ನರಕಾಸುರನನ್ನು ಕೃಷ್ಣನು ಕೊಂದ ದಿನ. ಆ ಕಾರಣದಿಂದಾಗಿಯೇ, ಈ ಆಚರಣೆಯು ಅಷ್ಟು ದೊಡ್ಡ ರೀತಿಯಲ್ಲಿ ನಡೆಯಿತು. ಈ ದಿನವನ್ನು ಅನೇಕ ಶುಭಕರ ಕಾರಣಗಳಿಗಾಗಿ ಆಚರಿಸಲಾಗತ್ತದೆ. ಈ ದಿನದಲ್ಲಿ, ಯಾರು ಸಂಪತ್ತನ್ನು ಬಯಸುತ್ತಾರೆಯೋ, ಅವರ ಬಳಿ ಲಕ್ಷ್ಮಿ ಬರುತ್ತಾಳೆ, ಯಾರು ಆರೋಗ್ಯವನ್ನು ಬಯಸುತ್ತಾರೆಯೋ, ಅವರ ಬಳಿ ಶಕ್ತಿ ಬರುತ್ತಾಳೆ, ಮತ್ತು ಯಾರು ಜ್ಞಾನವನ್ನು ಬಯಸುತ್ತಾರೆಯೋ, ಅವರ ಬಳಿ ಸರಸ್ವತಿ ಬರುತ್ತಾಳೆ ಎಂದು ಹೇಳಲಾಗುತ್ತದೆ.ಒಟ್ಟಾರೆಯಾಗಿ ನೋಡಿದರೆ, ಒಬ್ಬರ ಯೋಗಕ್ಷೇಮವನ್ನು ಈ ರೀತಿ ಹಲವು ಬಗೆಯಲ್ಲಿ ವರ್ಣಿಸಲಾಗಿದೆ.
ಆಂತರಿಕ ಬೆಳಕನ್ನು ಬೆಳಗುವುದು
ದೀಪಾವಳಿ ದೀಪಗಳ ಹಬ್ಬ. ಪ್ರತಿ ಪಟ್ಟಣ, ನಗರ ಹಾಗು ಹಳ್ಳಿಗಳಲ್ಲಿ ಎಲ್ಲೆಡೆ ಸಾವಿರಾರು ದೀಪಗಳು ಬೆಳಗಿವುದನ್ನು ನೀವು ಕಾಣಬಹುದು. ಆದರೆ, ಇದು ಕೇವಲ ಬಾಹ್ಯದ ದೀಪಗಳನ್ನು ಬೆಳಗುವುದಷ್ಟೇ ಅಲ್ಲ, ಆಂತರಿಕ ಬೆಳಕನ್ನೂ ಎಲ್ಲರೂ ಬೆಳಗಿಸಬೇಕಾಗಿದೆ. ಬೆಳಕು ಎಂದರೆ ಸ್ಪಷ್ಟತೆ. ಸ್ಪಷ್ಟತೆಯಿಲ್ಲದೆ, ನೀವು ಹೊಂದಿರುವ ಎಲ್ಲ ಗುಣವೂ ಹಾನಿಕಾರಕವಾಗುತ್ತದೆಯೇ ವಿನಹ ಅವು ಉಡುಗೊರೆಯಾಗುವುದಿಲ್ಲ. ನಿಮ್ಮಲ್ಲಿ ಸ್ಪಷ್ಟತೆಯಿಲ್ಲದ ಆತ್ಮವಿಶ್ವಾಸವು ವಿಪತ್ತನ್ನಷ್ಟೇ ಒಡ್ಡಬಲ್ಲದು. ಮತ್ತು, ಈ ದಿನ ಜಗತ್ತಿನಲ್ಲಿ ಬಹಪಾಲು ಚಟುವಟಿಗಳು ಯಾವುದೇ ಸ್ಪಷ್ಟತೆಯಿಲ್ಲದೆ ನಡೆಸಲಾಗುತ್ತದೆ.
ಒಂದು ದಿನ, ಹೊಸದಾಗಿ ಪೋಲೀಸ್ ವೃತ್ತಿಯನ್ನು ಸ್ವೀಕರಿಸಿದ್ದ ಒಬ್ಬ ವ್ಯಕ್ತಿ ಇನ್ನೊಬ್ಬ ಅನುಭವೀ ಸಂಗಾತಿಯೊಡನೆ ಒಂದು ನಗರದಲ್ಲಿ ಕಾರಿನಲ್ಲಿ ಸವಾರಿ ಮಾಡುತ್ತಿದ್ದ. ಸವಾರಿಯ ವೇಳೆ ರೇಡಿಯೊದಲ್ಲಿ ಒಂದು ಸಂದೇಶ ಬಂದಿತು ಮತ್ತು ಅದರಲ್ಲಿ ಒಂದು ನಿರ್ದಿಷ್ಟ ಬೀದಿಯಲ್ಲಿ ಜನರ ಗುಂಪೊಂದು ಓಡಾಡುತ್ತಿದೆ, ಅವರನ್ನು ಚದುರಿಸಬೇಕೆಂದು ಕೇಳಲಾಯಿತು. ಅವರು ಯಾವುದೋ ಒಂದು ಬೀದಿಯಲ್ಲಿ ಸಾಗುತ್ತಿದ್ದಾಗ, ಜನರ ಗಂಪೊಂದನ್ನು ಕಂಡರು.ಅವರ ಕಾರು ಆ ಗಂಪನ್ನು ಸಮೀಪಿಸುತ್ತದ್ದಂತೆಯೇ, ಆ ಹೊಸ ಪೋಲೀಸ್ ಹುಮ್ಮಸ್ಸಿನಂದ, “ಎಲ್ಲರೂ ಇಲ್ಲಿಂದ ಹೋಗಿರಿ” ಎಂದು ಆದೇಶಿಸಿದ. ಅಲ್ಲಿನ ಜನರು ಗೊಂದಲದಲ್ಲಿ ಪರಸ್ಪರ ನೋಡಿಕೊಂಡರು. ಆ ಪೋಲೀಸ್ ಮತ್ತೆ “ ನಾನು ಹೇಳುತ್ತಿರುವದು ಕೇಳಿಸುತ್ತಲ್ಲವೇ, ಆ ಮೂಲೆಯಿಂದ ಎಲ್ಲರು ಸರಿಯಿರಿ” ಎಂದು ಅಬ್ಬರಿಸಿದನು. ನಂತರ ಅವರೆಲ್ಲರೂ ಗುಂಪಿನಿಂದ ಚದುರಿದರು. ತನ್ನ ಮೊದಲ ಮೊದಲ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಸಂತಸದಲ್ಲಿ ತನ್ನ ಸಂಗಾತಿಯನ್ನು ಕುರಿತು, “ನಾನು ನಿರ್ವಹಿಸಿದ ರೀತಿ ಚೆನ್ನಾಗಿತ್ತೇ” ಎಂದು ಕೇಳಿದನು. ಅದಕ್ಕೆ ಅನುಭವಿಯು, “ರೀತಿಯೇನೋ ಚೆನ್ನಾಗಿಯೇ ಇತ್ತು, ಸಮಸ್ಯೆಯೆಂದರೆ ಅದೊಂದು ಬಸ್ ನಿಲ್ದಾಣವಾಗಿತ್ತು” ಎಂದ.
ಹೀಗೆಯೇ ಸರಿಯಾದ ಸ್ಪಷ್ಟತೆಯಲ್ಲದೆ, ನೀವು ಯಾವುದೇ ಕೆಲಸವನ್ನು ಮಾಡಿದರೂ ಸಹ ಅದು ಅನಾಹುತಕ್ಕೆ ಕಾರಣವಾಗುತ್ತದೆ. ಬೆಳಕು ನಿಮ್ಮ ದೃಷ್ಟಿಗೆ ಸ್ಪಷ್ಟತೆಯನ್ನು ತರುತ್ತದೆ - ಇದು ಕೇವಲ ಭೌತಿಕ ಅರ್ಥದಲ್ಲಷ್ಟೇ ಅಲ್ಲ. ನಿಮ್ಮ ಜೀವನವನ್ನು ನೀವು ಎಷ್ಟು ವಿವೇಚನಾಯುಕ್ತವಾಗಿ ನಡೆಸುವಿರಿ ಎಂಬುದು ನೀವು ಜೀವನವನ್ನು ಎಷ್ಟು ಸ್ಪಷ್ಟವಾಗಿ ನೋಡುತ್ತೀರಿ ಮತ್ತು ನಿಮ್ಮ ಸುತ್ತಲಿನ ಎಲ್ಲವನ್ನೂ ಎಷ್ಟರ ಮಟ್ಟಿಗೆ ಗ್ರಹಿಸುತ್ತೀರಿ ಎಂಬದರ ಮೇಲೆ ಅವಲಂಬಿತವಾಗಿರುತ್ತದೆ. ದೀಪಾವಳಿ ಎಂದರೆ ಕರಾಳ ಶಕ್ತಿಗಳನ್ನು ನಾಶಮಾಡಿ ಬೆಳಕನ್ನು ತಂದ ದಿನ. ಇಂತಹ ಕರಾಳ ಶಕ್ತಿಗಳಲ್ಲಿ ಮಾನವ ಜೀವನದ ಸಂಕಟವೂ ಒಂದಾಗಿದೆ. ಕಾರ್ಮೋಡಗಳು ತಾವೇ ಸೂರ್ಯನನ್ನು ಅಡ್ಡಹಾಕಿರುವುದನ್ನು ಅರಿತುಕೊಳ್ಳದೆ, ಕತ್ತಲೆಯ ವಾತಾವರಣದಲ್ಲಿ ಸಂಚರಿಸುವಂತೆ, ಮನುಷ್ಯರು ಕೂಡಾ. ನೀವು ಬೇರೆಡೆಯಿಂದ ಯಾವುದೇ ಬೆಳಕನ್ನು ತರಬೇಕಾಗಿಲ್ಲ. ಬದಲಾಗಿ ನಿಮ್ಮೊಳಗೆ ಸಂಗ್ರಹಿಸಿಟ್ಟರುವ ಕಾರ್ಮೋಡಗಳನ್ನು ಹೊರಹಾಕಿದರೆ, ಬೆಳಕು ತಾನಾಗಿಯೇ ಸಂಭವಿಸುತ್ತದೆ. ದೀಪಗಳಿಂದ ತುಂಬಿರುವ ಈ ಹಬ್ಬವು ಇದರ ನೆನಪಾಗಿದೆ.
ಜೀವನವೇ ಒಂದು ಆಚರಣೆ
ಭಾರತೀಯ ಸಂಸ್ಕೃತಿಯಲ್ಲಿ, ವರ್ಷದ ಪ್ರತಿದಿನವೂ ಒಂದು ಹಬ್ಬವನ್ನು ಆಚರಿಸುವ ಕಾಲವಿತ್ತು - ಒಂದು ವರ್ಷದಲ್ಲಿ 365 ಹಬ್ಬಗಳು. ನಮ್ಮ ಇಡೀ ಜೀವನವನ್ನು ಆಚರಣೆಯನ್ನಾಗಿ ಮಾಡುವುದೇ ಇದರ ಹಿಂದಿನ ಆಲೋಚನೆಯಗಿತ್ತು. ಇಂದು, ಬಹುಶಃ ಮೂವತ್ತು ಅಥವಾ ನಲವತ್ತು ಹಬ್ಬಗಳು ಮಾತ್ರ ಉಳಿದಿವೆ. ನಾವು ಇವನ್ನೂ ಸಹ ಆಚರಿಸಲು ಅನೇಕ ಬಾರಿ ಸಾಧ್ಯವಾಗುವುದಿಲ್ಲ, ಏಕೆಂದರೆ ನಾವು ಕಚೇರಿಗೆ ಹೋಗಬೇಕು ಅಥವಾ ಪ್ರತಿದಿನ ಬೇರೆ ಏನಾದರೂ ಮಾಡಬೇಕು. ಆದ್ದರಿಂದ ಜನರು ಸಾಮಾನ್ಯವಾಗಿ ವಾರ್ಷಿಕವಾಗಿ ಎಂಟು ಅಥವಾ ಹತ್ತು ಹಬ್ಬಗಳನ್ನು ಮಾತ್ರ ಆಚರಿಸುತ್ತಿದ್ದಾರೆ. ನಾವು ಇದನ್ನು ಈ ರೀತಿ ಬಿಟ್ಟರೆ ಮುಂದಿನ ಪೀಳಿಗೆಗೆ ಯಾವುದೇ ಹಬ್ಬ ಇರುವುದಿಲ್ಲ. ಹಬ್ಬ ಎಂದರೇನು ಎಂಬುದೂ ಅವರಿಗೆ ತಿಳಿಯುವುದಿಲ್ಲ. ಅವರು ಕೇವಲ ಹಣವನ್ನು ಗಳಿಸುತ್ತಾರೆ ಮತ್ತು ತಿನ್ನುತ್ತಾರೆ, ಗಳಿಸುತ್ತಾರೆ ಮತ್ತು ತಿನ್ನುತ್ತಾರೆ – ಆಷ್ಟಕ್ಕೇ ಸೀಮಿತರಾಗುತ್ತಾರೆ. ಈಗಾಗಲೇ ಅನೇಕ ಜನರ ಜೀವನ ಈ ರೀತಿಯಾಗಿದೆ. ಹಬ್ಬ ಎಂದರೆ ಅವರು ನಿಮಗೆ ರಜೆಯನ್ನು ನೀಡುತ್ತಾರೆ, ಮತ್ತು ನೀವು ಆ ದಿನ ಮಧ್ಯಾಹ್ನದ ತನಕ ಮಲಗಿರುತ್ತೀರಿ. ನಂತರ ಹೆಚ್ಚುಚ್ಚು ತಿನ್ನುತ್ತೀರಿ, ಸಿನಿಮಾಕ್ಕೆ ಹೋಗುತ್ತೀರಿ ಅಥವಾ ಮನೆಯಲ್ಲಿ ಟೀವಿಯನ್ನು ನೋಡುತ್ತಾ ಕಾಲಕಳೆಯುತ್ತೀರಿ. ಮಾದಕ ಪದಾರ್ಥ ತೆಗೆದುಕೊಳ್ಳುವವರು ಮಾತ್ರ ಕುಣಿದಾಡುತ್ತಾರೆ. ಮತ್ಯಾರೂ ಕುಣಿಯುವುದಿಲ್ಲ ಅಥವಾ ಹಾಡುವುದಿಲ್ಲ. ಆದರೆ ಮೊದಲು ಹೀಗೆ ಇರಲಿಲ್ಲ. ಒಂದು ಹಬ್ಬದವೆಂದರೆ, ಇಡೀ ಊರಿನ ಜನರು ಒಂದು ಸ್ಥಳದಲ್ಲಿ ಒಟ್ಟುಗೂಡುತ್ತಿದ್ದರು ಮತ್ತು ದೊಡ್ಡ ಆಚರಣೆಯಾಗುತ್ತಿತ್ತು. ಒಂದು ಹಬ್ಬವೆಂದರೆ ನಾವು ಮುಂಜಾನೆ ನಾಲ್ಕು ಗಂಟೆಗೆ ಏಳುತ್ತಿದ್ದೆವು ಮತ್ತು ತುಂಬಾ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದೆವು. ಜನರಲ್ಲಿ ಈ ಸಂಸ್ಕೃತಿಯನ್ನು ಮರಳಿ ತರಲು, ಈಶಾದಲ್ಲಿ ನಾಲ್ಕು ಪ್ರಮುಖ ಹಬ್ಬಗಳನ್ನು ಆಚರಿಸುತ್ತಾರೆ: ಪೊಂಗಲ್ ಅಥವಾ ಮಕರ ಸಂಕ್ರಾಂತಿ, ಮಹಾಶಿವರಾತ್ರಿ, ದಸರಾ ಮತ್ತು ದೀಪಾವಳಿ.
ಗಂಭೀರವಾಗಿ ಪರಿಗಣಿಸದೇ ಪರಿಪೂರ್ಣವಾಗಿ ತೊಡಗಿಸಿಕೊಳ್ಳುವುದು
ನೀವು ಎಲ್ಲವನ್ನೂ ಆಚರಣೆಯ ರೀತಿಯಲ್ಲಿ ನೋಡತೊಡಗಿದರೆ, ಎಲ್ಲದರಲ್ಲೂ ಗಂಭೀರವಾಗಿ ವ್ಯವಹರಿಸದೆ, ಸಂಪೂರ್ಣವಾಗಿ ತೊಡಗಿಕೊಳ್ಳಲು ಆರಂಭಿಸುವಿರಿ. ಇದೀಗ ಹೆಚ್ಚಿನ ಮನುಷ್ಯರಲ್ಲಿರುವ ಸಮಸ್ಯೆಯೆಂದರೆ, ಯಾವುದನ್ನು ತಮಗೆ ಮಖ್ಯವೆಂದು ಭಾವಿಸತ್ತಾರೆಯೋ, ಆ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಯಾವ ವಿಷಯ ತಮಗೆ ಮಖ್ಯವಲ್ಲ ಎನಿಸುತ್ತದೆಯೋ, ಬಹಳ ಉದಾಸೀನವಾಗಿ ಪರಿಗಣಿಸುತ್ತಾರೆ ಮತ್ತು ಅದರಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದಿಲ್ಲ. “ಅವನು ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾನೆ” ಎಂದು ಯಾರಾದರೂ ಹೇಳಿದಾಗ, ಇದರರ್ಥ ಅವರ ಮುಂದಿನ ಹಂತ ಯಾವುದು ಎಂಬುದು ನಿಮಗೇ ಗೊತ್ತು. ಬಹಳಷ್ಟು ಜನ ಈ ರೀತಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಅವರ ಪ್ರಕಾರ ಕೇವಲ ಒಂದು ವಿಷಯವಷ್ಟೇ ಅವರ ಜೀವನದಲ್ಲಿ ಮಹತ್ವ ಪಡೆದುಕೊಂಡಿರುತ್ತದೆ. ಅವರ ಜೀವನದಲ್ಲಿ ಮತ್ತೆಲ್ಲ ವಿಷಯಗಳು ಪ್ರಾಮುಖ್ಯತೆ ಪಡೆದಿರುವುದಿಲ್ಲವಾದ್ದರಿಂದ ಅವೆಲ್ಲವನ್ನೂ ದಾಟಿ ಹೋಗುತ್ತಾರೆ. ಈ ರೀತಿ ಅವರಲ್ಲಿ ಮತ್ತೆಲ್ಲ ವಿಷಯಗಳ ಕುರಿತು ಗಂಭೀರತೆಯಿಲ್ಲದ ಕಾರಣ ಅವುಗಳಲ್ಲಿ ಒಳಗೊಳ್ಳುವಿಕೆ ಮತ್ತು ಸಮರ್ಪಣೆಯನ್ನು ತೋರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಇದು ದೊಡ್ಡ ತೊಂದರೆಗೆ ಕಾರಣವಾಗುತ್ತದೆ. ಜೀವನದ ರಹಸ್ಯ ಕೇವಲ ಇಷ್ಟೇ – ಜೀವನದಲ್ಲಿ ಎಲ್ಲವನ್ನೂ ತೀವ್ರ ಗಂಭೀರವಾಗಿ ನೋಡದೆ ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವುದು – ಒಂದು ಆಟದ ರೀತಿ. ಇದರ ಕಾರಣವೇ ಜೀವನದ ಅತ್ಯಂತ ಗಹನವಾದ ಅಂಶಗಳನ್ನು ಒಂದು ಆಚರಣೆಯ ರೀತಿಯಲ್ಲಿ ನೋಡುವುದು.
ದೀಪಾವಳಿಯ ಉದ್ದೇಶವೇ, ಸಂಭ್ರಮದ ಈ ಅಂಶವನ್ನು ನಿಮ್ಮ ಜೀವನದಲ್ಲಿ ತರುವುದಾಗಿದೆ. ಅದಕ್ಕಾಗಿಯೇ ಪಟಾಕಿ ಸಿಡಿಸುವ ಮೂಲಕ ನಮ್ಮೊಳಗಿನ ಕಿಚ್ಚನ್ನು ಹೆಚ್ಚಿಸಿಕೊಳ್ಳುವದು! ಆದ್ದರಿಂದ ಈ ಹಬ್ಬದ ಉದ್ದೇಶ ಕೇವಲ ಒಂದು ದಿನದ ಮೋಜಿಗಷ್ಟೇ ಸೀಮಿತ ಮಾಡದೆ ಪ್ರತಿದಿನವೂ ನಮ್ಮೊಳಗೆ ಈ ರೀತಿ ಆಗಬೇಕು. ನಾವು ಸುಮ್ಮನೆ ಕುಳಿತರೆ ಸಾಕು, ನಮ್ಮ ಪ್ರಾಣಶಕ್ತಿ, ಹೃದಯ, ಮನಸ್ಸು ಮತ್ತು ದೇಹವು ಜೀವಂತ ಪಟಾಕಿಯಂತ ಸಿಡಿಯುತ್ತಿರಬೇಕು, ಒದ್ದೆಯಾದ ಪಟಾಕಿಯಂತೆ ನೀವಿದ್ದರೆ, ಹೊರಗಿನ ಪಟಾಕಿಯ ಅಗತ್ಯ ಬೀಳುತ್ತದೆ.
Editor’s Note: At the Isha Yoga Center, major festivals, including Makar Sankranti and Pongal, Navratri and Mahashivratri are celebrated with great exuberance. These festivals are a part of Isha’s efforts to rejuvenate the ethos of Indian culture.