ಚಲನಚಿತ್ರ ನಿರ್ಮಾಪಕ ಕುನಾಲ್ ಕೊಹ್ಲಿ ಭೋಪಾಲ್‌ನಲ್ಲಿ ಸದ್ಗುರು ಅವರೊಂದಿಗೆ ಸಂವಾದದಲ್ಲಿದ್ದರು. ಪ್ರೀತಿ, ಸಂಬಂಧಗಳು ಮತ್ತು ಕುಟುಂಬದ ಬಗ್ಗೆ ನಡೆದ ಸಂವಾದದ ಆಯ್ದ ಭಾಗ ಇಲ್ಲಿದೆ.

ಕುನಾಲ್ ಕೊಹ್ಲಿ: ನಾನು ತುಂಬಾ ಕೆಳ ವರ್ಗದ ಮಧ್ಯಮ ಕುಟುಂಬದಿಂದ ಬಂದವನು. ಎಪ್ಪತ್ತರ ದಶಕದ ಆರಂಭದಲ್ಲಿ, ಹೆಚ್ಚಿನ ಮಹಿಳೆಯರು ಕೆಲಸದ ಸಲುವಾಗಿ ಮನೆಯ ಹೊರಗೆ ಹೋಗದಂತಹ ಸಮಯದಲ್ಲಿ, ನಮ್ಮನ್ನು ಬೆಳೆಸಲು ನನ್ನ ತಾಯಿ ಹಾಗೆ ಹೋಗಬೇಕಿತ್ತು, ಏಕೆಂದರೆ ನನ್ನ ತಂದೆಗೆ ಕೆಲಸ ಮಾಡಲು ಆಸಕ್ತಿ ಇರಲಿಲ್ಲ. ಅವಳು ನನ್ನನ್ನು ಮತ್ತು ನನ್ನ ತಂಗಿಯನ್ನು ಚೆನ್ನಾಗಿಯೇ ಬೆಳೆಸಿದಳು, ದೇಶದ ಉತ್ತಮ ಶಾಲೆಯಲ್ಲಿ ಓದಿಸಿದಳು, ಮತ್ತು ನನ್ನ ತಂಗಿಗೆ ಮದುವೆ ಮಾಡಿಕೊಟ್ಟಳು. ಆರ್ಥಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿ ಕೂಡ, ನನ್ನ ತಂದೆ ನಮ್ಮೊಂದಿಗೆ ಇರಲಿಲ್ಲ.

ಇತ್ತೀಚೆಗೆ, ಅವರು ಆಸ್ಪತ್ರೆಯಲ್ಲಿದ್ದರು, “ಬದುಕುವ ಯಾವುದೇ ಭರವಸೆ ಇಲ್ಲ” ಎಂದು ವೈದ್ಯರು ಹೇಳಿದಾಗ ನನಗೆ ಏನೂ ಅನಿಸಲಿಲ್ಲ, ಏಕೆಂದರೆ ನನ್ನ ತಂದೆಯೊಂದಿಗೆ ನನಗೆ ಆ ಸಂಬಂಧವಿಲ್ಲ. ಆ ಸಂದರ್ಭದಲ್ಲಿ ನಾನು ನನ್ನನ್ನು ಪ್ರಶ್ನಿಸಲು ಪ್ರಾರಂಭಿಸಿದೆ – “ನಾನು ಕೆಟ್ಟ ವ್ಯಕ್ತಿಯೇ? ಅವರ ಹಾಗೆಯೇ ನಾನು ಕೂಡ ಆಗುತ್ತಿದ್ದೇನೆಯೇ?”. ನಂತರ ಅವರ ಆರೋಗ್ಯ ಸ್ಥಿರವಾಗಿ ಮನೆಗೆ ಹಿಂದಿರುಗಲು ಸಾಧ್ಯವಾಯಿತು, ಆಗಲೂ ಕೂಡ ನನಗೆ ಏನೂ ಅನಿಸಲಿಲ್ಲ. ನನ್ನ ತಾಯಿಗೆ ಸಣ್ಣ ಜ್ವರ ಬಂದರೋ ಅಥವಾ ಇನ್ನೇನಾದರೂ, ನಾನು ಅವಳ ಬಳಿಗೆ ಓಡುತ್ತೇನೆ. ಆದರೆ ತಂದೆಗೆ ಹೀಗೆ ನಡೆದಾಗ, ನನಗೇನೂ ಅನಿಸಲಿಲ್ಲ. ಇದು ಅವರು ನನ್ನ ಬೆಳವಣಿಗೆಯ ಭಾಗವಾಗದ ಕಾರಣವೇ? ನಮ್ಮ ಹೆತ್ತವರ ಬಗ್ಗೆಯೂ ನಮ್ಮಲ್ಲಿ ಸ್ವಾರ್ಥ ಭಾವನೆಗಳು ಇರುತ್ತವೆಯೇ?

ಸದ್ಗುರು: ನಿಸ್ವಾರ್ಥತೆ ಎಂಬುದು ಯಾವುದೂ ಇಲ್ಲ. ಇಲ್ಲಿ ಎಲ್ಲವೂ ಸ್ವಾರ್ಥವೇ. ಬೇರೆ ದಾರಿಯಿಲ್ಲ. ನಿಮ್ಮ ಆಲೋಚನೆಗಳು ಮತ್ತು ಭಾವನೆಗಳು ಮೂಲಭೂತವಾಗಿ ನಿಮ್ಮೊಳಗಿನವು, ಆದ್ದರಿಂದ ಅವುಗಳು ಸ್ವಾರ್ಥವೇ ಆಗಿರುತ್ತವೆ. ನಿಮ್ಮಲ್ಲಿನ ಸ್ವಾರ್ಥ ಗುಣ ಜಿಪುಣತೆಯಿಂದ ಕೂಡಿದೆಯೋ ಅಥವಾ ಉದಾರತೆಯಿಂದಲೋ ಎಂಬುದು ಮುಖ್ಯ. ನಿಮ್ಮ ದೇಹದೊಂದಿಗೆ ಸಂಬಂಧ ಹೊಂದಿದವರು, ಅವರು ನಿಮ್ಮ ಗಂಡ, ಹೆಂಡತಿ, ಮಕ್ಕಳು, ನಿಮ್ಮ ತಾಯಿ, ತಂದೆ, ಸಹೋದರ, ಸಹೋದರಿ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ನಿಮ್ಮ ಕುಟುಂಬವನ್ನು ಮಾತ್ರ ನಿಮ್ಮ ಸ್ವಾರ್ಥ ಒಳಗೊಂಡಿರುತ್ತದೆಯೇ ಅಥವಾ ಇಡೀ ಮನುಕುಲ ಅಥವಾ ಪ್ರತಿಯೊಂದು ಪ್ರಾಣಿ ಸಂಕುಲವನ್ನೂ ಒಳಗೊಂಡಂತೆ ನಿಮ್ಮ ಸ್ವಾರ್ಥವು ಹಿರಿದಾಗಿದೆಯೇ?

ಇದೀಗ ಸಮಸ್ಯೆ ಏನೆಂದರೆ ನಿಮ್ಮ ಸಂತೋಷ, ಪ್ರೀತಿ ಮತ್ತು ಇತರ ಭಾವನೆಗಳು - ನಿಮ್ಮ ಬಗ್ಗೆ ಸುಂದರವಾದ ಎಲ್ಲವನ್ನೂ ಯಾರಾದರೂ ಬಲವಂತವಾಗಿ ಆರಂಭಿಸಬೇಕಾಗಿದೆ.

ಇದು ಸ್ವಾರ್ಥದ ಪ್ರಶ್ನೆಯಲ್ಲ. ಇದು ಕಂಜೂಸ್‍ತನ‍ದ ಪ್ರಶ್ನೆಯಾಗಿದೆ. ನಿಮಗೆ ತಿಳಿದ ಹಾಗೆ, ಇದರ ಅರ್ಥ "ಕಮ್ ಜ್ಯೂಸ್" - ಕಡಿಮೆ ರಸ. ನಿಮ್ಮ ಸುತ್ತಲಿನ ಪ್ರತಿಯೊಂದು ಜೀವದ ಬಗ್ಗೆ ಸಂವೇದನೆಯಿಂದಿರಲು ನಿಮಲ್ಲಿ ಸಾಕಷ್ಟು ರಸವಿಲ್ಲ, ಆದ್ದರಿಂದ ನಿಮ್ಮ ಜೀವನದಲ್ಲಿ ಕೆಲವು ಜನರೊಂದಿಗಷ್ಟೇ ನಿಮ್ಮ ಸಂವೇದನೆಗಳನ್ನು ಸೀಮಿತಗೊಳಿಸಿಕೊಳ್ಳುತ್ತೀರಿ..

ದೈಹಿಕ ಅಥವಾ ಆರ್ಥಿಕ ಅಂಶಗಳ ವಿಷಯಕ್ಕೆ ಬಂದರೆ, ನೀವು ಕೆಲವೇ ಜನರನ್ನು ಮಾತ್ರ ನೋಡಿಕೊಳ್ಳಬಹುದು. ಆದರೆ ಆಲೋಚನೆಗಳು ಮತ್ತು ಭಾವನೆಗಳ ವಿಷಯಕ್ಕೆ ಬಂದಾಗ ನಿಮ್ಮಲ್ಲಿ ಯಾವುದೇ ಕೊರತೆಯಿಲ್ಲ. ನೀವು ಬ್ರಹ್ಮಾಂಡದ ಪ್ರತಿಯೊಂದು ಜೀವಿಗಯೊಂದಿಗೂ ಸಂವೇದನೆಯಿಂದಿರಬಹುದು. ಸಮಸ್ಯೆಯೆಂದರೆ, ನಿಮ್ಮಲ್ಲಿ ಸಾಕಷ್ಟು ರಸವಿಲ್ಲ, ನಿಮ್ಮಲ್ಲಿ ಸಾಕಷ್ಟು ಜೀವವಿಲ್ಲ. ಸಾಕಷ್ಟು ಜೀವವಿದ್ದ ಸಂಧರ್ಭದಲ್ಲಿ, ಪ್ರತಿಯೊಂದು ಜೀವಿ, ಕೀಟ, ಹುಳು, ಸಸ್ಯ, ಪಕ್ಷಿ, ಪ್ರಾಣಿ – ಎಲ್ಲದರ ಕುರಿತೂ ನೀವು ಸಂವೇದನೆಯಿಂದಿರಬಹುದು. ಇದುವೇ ನಿಮ್ಮ ಜೀವನವನ್ನು ಉತ್ಕೃಷ್ಟಗೊಳಿಸುವ ಮಾರ್ಗವಾಗಿದೆ. ಜೀವನವು ಒಂದು ಸಂಕ್ಷಿಪ್ತ ಸಮಯದ್ದಾಗಿದೆ.

ಕುನಾಲ್ ಕೊಹ್ಲಿ: ನಿಮ್ಮ “ಕಮ್ ಜ್ಯೂಸ್” ನೊಂದಿಗೆ ನನ್ನ ಸಂಪೂರ್ಣ ಒಪ್ಪಿಗೆಯಿಲ್ಲ, ಏಕೆಂದರೆ ನನಗೆ ನೀಡಲು ತುಂಬಾ ಪ್ರೀತಿ ಇದೆ ಎಂದು ನಾನು ಭಾವಿಸುತ್ತೇನೆ. ವಾಸ್ತವವಾಗಿ, ನಾನು ಈಗ ಹೇಳುತ್ತಿರುವುದು ಸ್ವಲ್ಪ ಹಗರಣವೆನಿಸಬಹುದು - ಏಕಪತ್ನಿತ್ವವು ಸರಿಯಾದ ಮಾರ್ಗವಲ್ಲ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಎಲ್ಲರಲ್ಲೂ ತುಂಬಾ ಪ್ರೀತಿ ಇದೆ…

ಸದ್ಗುರು: ನಾನು ಮಾತನಾಡುತ್ತಿರುವುದು ಆ ರಸದ ಬಗ್ಗೆಯಲ್ಲ. ಅದು ಹಾರ್ಮೋನುಗಳ ವಿಷಯ. ನಾನು ಹೇಳುತ್ತಿರುವುದು ಜೀವನದ ಸಾರದ ಬಗ್ಗೆ. ಭೌತಿಕ ಅಂಶಗಳ ವಿಷಯಕ್ಕೆ ಬಂದರೆ, ಅವು ಸೀಮಿತವಾಗಿರುವುದೇ ಉತ್ತಮ. ಏಕೆಂದರೆ, ಭೌತಿಕ ವಿಷಯಗಳು ಯಾವುದೇ ಪರಿಣಾಮಗಳಿಲ್ಲದೇ ನಡೆಯುವುದಿಲ್ಲ. ಆದರೆ ಯಾವುದು ಭೌತಿಕವಲ್ಲದ್ದೋ ಆ ವಿಷಯಗಳಿಗೆ ಯಾವುದೇ ಪರಿಣಾಮಗಳಿರುವುದಿಲ್ಲ – ಅದಕ್ಕೆ ಯಾವುದೇ ಬೆಲೆ ತೆರಬಹುದಾದ ಅವಶ್ಯಕತೆ ಇರುವುದಿಲ್ಲ. ನಿಮಗೆ ಗೊತ್ತಿಲ್ಲದ ಒಬ್ಬ ವ್ಯಕ್ತಿಯನ್ನು ಪ್ರೀತಿಸಲು ನಿಮಗೆ ಏನು ತಾನೇ ವೆಚ್ಚವಾಗುತ್ತದೆ? ಅವನನ್ನು ಪ್ರೀತಿಯಿಂದ ನೋಡುವುದರಲ್ಲಿ ನಿಮಗೇನು ಸಮಸ್ಯೆ? ಅವನು ಆ ಪ್ರೀತಿಯನ್ನು ಸ್ವೀಕರಿಸುತ್ತಾನೋ ಇಲ್ಲವೋ ಎಂಬುದು ಅವನ ಸಮಸ್ಯೆ. ನೀವು ಪ್ರೀತಿಸುವಿರಾದರೆ, ಅದು ನಿಮ್ಮ ಜೀವನವನ್ನು ಸುಂದರಗೊಳಿಸುತ್ತದೆ. ನಿಮ್ಮ ಭಾವನೆಯ ಮಾಧುರ್ಯ ಬೇರೆಯವರ ಕುರಿತಾಗಿ ಅಲ್ಲ.

ಕುನಾಲ್ ಕೊಹ್ಲಿ: ಅದನ್ನು ನಾನು ಒಪ್ಪುತ್ತೇನೆ.

ಸದ್ಗುರು: ಮತ್ತು ಅದನ್ನು ಬೇರೊಬ್ಬರು ಪ್ರಚೋದಿಸಬೇಕಾಗಿಲ್ಲ. ಇದೀಗ ಸಮಸ್ಯೆ ಏನೆಂದರೆ ನಿಮ್ಮ ಸಂತೋಷ, ಪ್ರೀತಿ ಮತ್ತು ಇತರ ಭಾವನೆಗಳು - ನಿಮ್ಮ ಬಗ್ಗೆ ಸುಂದರವಾದ ಎಲ್ಲವನ್ನೂ ಯಾರಾದರೂ ಬಲವಂತವಾಗಿ ಆರಂಭಿಸಬೇಕಾಗಿದೆ, ಪ್ರಚೋದಿಸಬೇಕಾಗಿದೆ. ಆಗ ಮಾತ್ರ ಅದು ಆರಂಭವಾಗುತ್ತದೆ. ಆದರೆ ಅದು ಸ್ವಯಂ ಪ್ರಾರಂಭವಾಗುವ ರೀತಿ ಮಾಡಲು ಒಂದು ಮಾರ್ಗವಿದೆ. ಹಾಗಾದಲ್ಲಿ ನೀವು ಮುಂಜಾನೆ ಪ್ರೀತಿಯಿಂದ, ಸಂತೋಷದಿಂದ ಮತ್ತು ಭಾವಪರವಶರಾಗಿ ಎಚ್ಚರಗೊಳ್ಳಬಹುದು. ಇಲ್ಲದಿದ್ದರೆ, ನಿಮ್ಮೊಳಗೆ ಸ್ವಲ್ಪ ಉತ್ಸಾಹ ಸ್ವಲ್ಪ ಜೀವಂತಿಕೆಯವನ್ನು ಉಂಟುಮಾಡಲು ಮತ್ತೊಬ್ಬರ ಪ್ರಚೋದನೆಯ ಅಗತ್ಯವಿರುತ್ತದೆ.


 

ಭೌತಿಕವಾದ ಯಾವುದೇ ವಿಷಯಕ್ಕೆ ಬಂದಾಗ, ನೀವು ಏನು ಮಾಡಬಹುದು ಮತ್ತು ಏನು ಮಾಡಲಾಗದು ಎಂಬ ಮಿತಿ ಇದ್ದೇ ಇರುತ್ತದೆ. ಇಲ್ಲಿ ನಿಮ್ಮ ಆಯ್ಕೆಗೆ ಅವಕಾಶವಿಲ್ಲ. ಇದು ಅಸ್ತಿತ್ವದ ಸ್ವರೂಪ. ಭೌತಿಕ ವಿಷಯಗಳು ಯಾವಾಗಲೂ ಸೀಮಿತವಾಗಿರುತ್ತವೆ. ಆದರೆ ನಿಮ್ಮ ದೈಹಿಕತೆಯೊಂದಿಗೆ ನಿಮ್ಮನ್ನು ಬಹಳವಾಗಿ ಗುರುತಿಸಿಕೊಂಡಲ್ಲಿ, ಎಲ್ಲದಕ್ಕೂ ನೀವು ಮಿತಿಯನ್ನು ಹಾಕಿಕೊಳ್ಳುತ್ತೀರಿ. ಪ್ರಪಂಚದಲ್ಲಿ ನಡೆಯುತ್ತಿರುವುದೇ ಇದು. ಇದಕ್ಕಾಗಿಯೇ ಈ ಇಡೀ ಕುಟುಂಬ ವ್ಯವಹಾರ. ನಾನು ಕೌಟುಂಬಿಕ ಜೀವನದ ವಿರೋಧಿಯಲ್ಲ, ನಾನು ಹೇಳುತ್ತಿರುವುದು, ನಿಮ್ಮ ಕುಟುಂಬವನ್ನು ಹೆಚ್ಚಿನ ಮಟ್ಟಕ್ಕೆ ವಿಸ್ತರಿಸಿ.

ಕುನಾಲ್ ಕೊಹ್ಲಿ: ಆದರೆ, ಈಗಿರುವ ಕುಟುಂಬದೊಂದಿಗೇ, ನಮಗೆ ಈ ಅನೇಕ ಸಮಸ್ಯೆಗಳಿವೆ. ನಾವು ಅದನ್ನು ವಿಸ್ತರಿಸುತ್ತಾ ಹೋದರೆ, ಅದು ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಸದ್ಗುರು: ನೀವು ಎರಡು ಅಥವಾ ಅನೇಕ ಮದುವೆಗಳಾಗಿ ಕುಟುಂಬವನ್ನು ವಿಸ್ತರಿಸುವ ಬಗ್ಗೆ ನಾನು ಮಾತನಾಡುತ್ತಿಲ್ಲ. ನಿಮ್ಮ ಭಾವನೆಗಳನ್ನು ಮಿತಿಗೊಳಿಸುವ ಅಗತ್ಯವಿಲ್ಲ ಎಂದಷ್ಟೇ ಹೇಳುತ್ತಿದ್ದೇನೆ. ಈ ಸಭಾಂಗಣದ ಗ್ಯಾಲರಿಯಲ್ಲಿರುವ ಎಲ್ಲ ಜನರನ್ನು ನಾನು ಸರಿಯಾಗಿ ನೋಡಲು ಸಾಧ್ಯವಿಲ್ಲ, ಆದರೆ ಈ ಅಸ್ಪಷ್ಟ ಮುಖಗಳನ್ನು ಪ್ರೀತಿಯಿಂದ ಏಕೆ ನೋಡಬಾರದು? ಇದರಿಂದ ನನಗೇನೂ ಖರ್ಚಿಲ್ಲ. ಬದಲಾಗಿ ಅದು ನನ್ನ ಜೀವನವನ್ನು ಸುಂದರಗೊಳಿಸುತ್ತದೆ. ನಾನು ಎಲ್ಲರನ್ನೂ ಅನುಮಾನಾಸ್ಪದ ರೀತಿಯಲ್ಲಿ ನೋಡುತ್ತಿದ್ದರೆ, ಅದು ನನ್ನ ಜೀವನವನ್ನಷ್ಟೇ ಹದಗೆಡಿಸುತ್ತದೆ. ನಾನು ಅವರನ್ನು ದ್ವೇಷಪೂರಿತ ರೀತಿಯಲ್ಲಿ ನೋಡಿದರೆ, ಅದು ನನ್ನ ಜೀವನವನ್ನು ಕೆಟ್ಟದಾಗಿಸುತ್ತದೆಯಷ್ಟೇ. ಅವರಿಗೆ ಏನೂ ಆಗುವುದಿಲ್ಲ - ಅವರು ಬಾಲ್ಕನಿಯಲ್ಲಿಯೇ ಇರುತ್ತಾರೆ.

ಕುನಾಲ್ ಕೊಹ್ಲಿ: ವಾಸ್ತವವಾಗಿ, ನಾವು ಹೇಗೆ ಯೋಚಿಸುತ್ತೇವೆ ಮತ್ತು ಭಾವಿಸುತ್ತೇವೆ ಎಂಬುದು ನಮ್ಮ ಸ್ವಂತ ಆಯ್ಕೆಯಾಗಿದೆ, ಆದರೂ ನಮ್ಮ ಜೀವನ, ನಮ್ಮ ಭಾವನೆಗಳು ಮತ್ತು ನಮ್ಮ ಆಲೋಚನೆಗಳ ಮೇಲೆ ನಾವು ಇತರ ಜನರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತೇವೆ ಎಂದು ನೀವು ಹೇಳುತ್ತಿದ್ದೀರ ಅಲ್ಲವೆ?

ಸದ್ಗುರು: ಇದು ನೀವು “ಜೀವನ” ಎಂದು ಏನ್ನನ್ನು ಭಾವಿಸಿದ್ದಿರೋ ಅದರ ಮೇಲೆ ಅವಲಂಬಿತವಾಗಿದೆ. ನೀವು ನಿಮ್ಮ ಜೀವನವನ್ನು - ನಿಮ್ಮ ಕೆಲಸ, ನಿಮ್ಮ ಸಂಬಂಧಗಳು, ನಿಮ್ಮ ಕುಟುಂಬ ಮತ್ತು ಸಮಾಜ, ನಿಮ್ಮ ಆಸ್ತಿ ಮತ್ತು ಸಂಪತ್ತು, ನಿಮ್ಮ ಆಲೋಚನೆಗಳು ಮತ್ತು ಭಾವನೆಗಳು ಎಂದು ಭಾವಿಸಿದರೆ - ಇವೆಲ್ಲವೂ ನೀವು ಇರುವ ಮೂಲಭೂತ ಜೀವನದ ಪರಿಕರಗಳು ಮಾತ್ರ. ನೀವು ಜೀವಂತವಾಗಿರುವುದರಿಂದ ಮಾತ್ರ, ಈ ಎಲ್ಲಾ ಪರಿಕರಗಳು ನಿಮ್ಮೊಂದಿಗಿರುತ್ತವೆ. ನೀವು ಎಚ್ಚರವಾಗಿರಲಿ ಅಥವಾ ನಿದ್ದೆ ಮಾಡುತ್ತಿರಲಿ, ಜೀವನವು ನಿಮ್ಮೊಳಗೆಯೇ ಮಿಡಿಯುತ್ತಿರುತ್ತದೆ.

ಸಂಪಾದಕರ ಟಿಪ್ಪಣಿ: ಸಂಬಂಧಗಳ ಬಗೆಗಿನ ಸದ್ಗುರುಗಳ ಹೆಚ್ಚಿನ ಒಳನೋಟಗಳನ್ನು "ಸಂಬಂಧಗಳು: ನಂಟೋ... ಕಗ್ಗಂಟೋ..." ಎಂಬ ಪುಸ್ತಕದಲ್ಲಿ ಕಾಣಬಹುದು. Flipkart ಮತ್ತು Amazon ನಲ್ಲಿ ಈ ಪುಸ್ತಕ ಲಭ್ಯವಿದೆ.