ಜಾತಕಗಳಿಂದ ಏನಾದರೂ ಸಂಭವಿಸುತ್ತದೆಯೇ ಮತ್ತು ಗ್ರಹಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರಬಹುದೇ ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ.

ಸದ್ಗುರು: ಈ ದಿನಗಳಲ್ಲಿ ಜನರು ಏನಾದರೂ ಮಾಡಬೇಕೆಂದುಕೊಂಡರೆ ಅದಕ್ಕಾಗಿ ಅವರು ಗ್ರಹ ಮತ್ತು ನಕ್ಷತ್ರಗಳೆಡೆಗೆ ನೋಡಲು ಬಯಸುತ್ತಾರೆ. ನೀವು ಮನೆಯಿಂದ ಹೊರಗೆ ಹೆಜ್ಜೆಯಿಡಲು ಬಯಸಿದರೆ, ಗ್ರಹಗಳು ತಾವಾಗಿಯೇ ಸರಿಯಾಗಿ ಸಾಲಾಗಿ ನಿಲ್ಲಬೇಕು. ಜನರು ಸರಿಯಾದ ಸಮಯವನ್ನು ನೋಡುತ್ತಿದ್ದಾರೆ, ರಾಹುಕಾಲ, ಗುಳಿಕಕಾಲ ಮತ್ತೇನಾದ್ರೂ ಆಗಿರಬಹುದು. ಅವರು ಮದುವೆ ಮಾಡಿಕೊಳ್ಳಲು ಬಯಸಿದರೆ, ಅವರು ಮೂರನೆಯ ವ್ಯಕ್ತಿಯ ಹತ್ತಿರ ಹೋಗಿ ಕೇಳುತ್ತಾರೆ "ನಾನು ನನ್ನ ಹೆಂಡತಿ / ಗಂಡನೊಂದಿಗೆ ಸಂತೋಷವಾಗಿ ಬಾಳುತ್ತೇನೆಯೇ?” ನೀವು ಮದುವೆಯಾಗುವುದು ಯಾರನ್ನಾದರೂ ಆಗಿರಬಹುದು, ಅವರೊಂದಿಗೆ ಚೆನ್ನಾಗಿ ಬದಕಲು ನಿಮಗೆ ಸಾಧ್ಯವಿಲ್ಲವೇಕೆ? ಅಥವಾ ನೀವು ನಿರೀಕ್ಷೆ ಮಾಡಿರದಂತಹ ಯಾವುದೋ ಹೊಸ ತರಹದ ಹುಚ್ಚುತನವನ್ನು ಅವರು ತೋರ್ಪಡಿಸಿದರೆ ಅವರನ್ನು ನೀವೇಕೆ ಬಿಡುವುದಿಲ್ಲ?

ನಿರ್ಜೀವ ವಸ್ತುಗಳು ನಿಮ್ಮ ಹಣೆಬರಹದ ಹಾದಿಯನ್ನು ನಿರ್ಧರಿಸಬೇಕೇ ಅಥವಾ ನಿರ್ಜೀವ ವಸ್ತುಗಳ ಹಣೆಬರಹವನ್ನು ಮಾನವನ ಸ್ವಭಾವ ನಿರ್ಧರಿಸಬೇಕೇ?

ನಿಮ್ಮ ಬುದ್ಧಿವಂತಿಕೆ ಕಾರ್ಯನಿರ್ವಹಿಸುತ್ತಿದ್ದರೆ, ನಾಳೆ ನೀವು ಏನು ಮಾಡುತ್ತೀರಿ ಮತ್ತು ನಿಮ್ಮ ಜೀವನವನ್ನು ಹೇಗೆ ನಡೆಸುತ್ತೀರಿ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಬುದ್ಧಿವಂತ ಮನುಷ್ಯ ನಾಳೆ ಏನು ಮಾಡುತ್ತಾನೆ ಎಂದು ನೀವು ಊಹಿಸಬಲ್ಲಿರಾ? ಇಲ್ಲ, ಏಕೆಂದರೆ ಅವನು ಭೂಮಿಯಲ್ಲಿ ಎಂದಿಗೂ ಸಂಭವಿಸದ ಕೆಲಸವನ್ನು ಮಾಡಬಹುದು. ನಿಮ್ಮ ಎಲ್ಲಾ ಮುನ್ನೋಟಗಳು ಈಗಾಗಲೇ ಸಂಭವಿಸಿದ ವಿಷಯಗಳ ಬಗ್ಗೆಯೇ ಆಗಿದೆ. ನೀವು ಎಂದೂ ಊಹಿಸದಂತಹ ಕೆಲಸವನ್ನು ಅವನು ಮಾಡಬಹುದು. ಯಾವುದೇ ಮನುಷ್ಯನ ಜೀವನವನ್ನು ಅವನು ಬದುಕುವ ಮುಂಚೆಯೇ ಬರೆಯಲು ಸಾಧ್ಯವಾದರೆ, ಅದು ಖಂಡಿತವಾಗಿಯೂ ಹಾರೋಸ್ಕೋಪ್(ಜಾತಕ) ಅಲ್ಲ, ಅದೊಂದು "ಹಾರರ್ ಸ್ಕೋಪ್!".

ಜಾತಕವೆಂದರೆ ಗ್ರಹಗಳು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತಿವೆ ಎಂಬುದರ ಬಗ್ಗೆಯಾಗಿದೆ. ಗ್ರಹಗಳು ನಿರ್ಜೀವ ವಸ್ತುಗಳು. ನಿರ್ಜೀವ ವಸ್ತುಗಳು ನಿಮ್ಮ ಹಣೆಬರಹದ ಹಾದಿಯನ್ನು ನಿರ್ಧರಿಸಬೇಕೇ ಅಥವಾ ನಿರ್ಜೀವ ವಸ್ತುಗಳ ಹಣೆಬರಹವನ್ನು ಮಾನವನ ಸ್ವಭಾವ ನಿರ್ಧರಿಸಬೇಕೇ? ಮಾನವ ಸ್ವಭಾವವೇ ಅದನ್ನು ನಿರ್ಧರಿಸಬೇಕು. ಗ್ರಹಗಳು ನಿಮ್ಮ ಹಣೆಬರಹದ ಹಾದಿಯನ್ನು ನಿರ್ಧರಿಸುತ್ತಿದ್ದರೆ, ಇದರರ್ಥ ನಿಮ್ಮ ಮಾನವ ಸ್ವಭಾವವು ನಿರ್ಜೀವ ವಸ್ತುಗಳ ಮಟ್ಟಕ್ಕೂ ಸಹ ಕಾರ್ಯನಿರ್ವಹಿಸುತ್ತಿಲ್ಲವೆಂದು. ನಾಯಿಗಳು ಮತ್ತು ಬೆಕ್ಕುಗಳು ತಮ್ಮ ಜೀವನದ ಮೇಲೆ ಗ್ರಹಗಳು ಪ್ರಭಾವ ಬೀರಲು ಬಿಡುವುದಿಲ್ಲ. ಅವುಗಳು ತಾವು ಬದುಕಲು ಬಯಸುವ ರೀತಿಯಲ್ಲಿಯೇ ಬದುಕುತ್ತವೆ. ಆದರೆ ದುರದೃಷ್ಟವಶಾತ್ ಮಾನವ ಜೀವನವು ನಿರ್ಜೀವ ವಸ್ತುಗಳಿಂದ ಪ್ರಭಾವಿಸಲ್ಪಟ್ಟಿದೆ.

ಹಾಗಾದರೆ ಅದರಲ್ಲಿ ಏನೂ ಇಲ್ಲವೆ? ಅದರಲ್ಲಿ ಕೆಲವೊಂದು ವಿಷಯಗಳಿವೆ, ಆದರೆ ಎಂದಿನಂತೆ ಮಾನವರು ವಿಷಯಗಳನ್ನು ಉತ್ಪ್ರೇಕ್ಷಿಸುತ್ತಾರೆ. ವ್ಯಕ್ತಿಗಳು ಯಾವುದಾದರೂ ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದರೆ, ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನದಂದು ಅವರು ಸ್ವಲ್ಪ ಹೆಚ್ಚು ಅಸಮತೋಲನ ಹೊಂದುತ್ತಾರೆ. ಆದರೆ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ನಾವೆಲ್ಲರೂ ಹುಚ್ಚರಾಗುತ್ತೇವೆಯೇ? ಇಲ್ಲ, ಏಕೆಂದರೆ ಅವರಿಗೆ ಹೋಲಿಸಿದರೆ, ನಿಮ್ಮ ಮನಸ್ಸಿನಲ್ಲಿ ನೀವು ಸ್ವಲ್ಪ ಹೆಚ್ಚು ಸ್ಥಿರ ಮತ್ತು ಸ್ಥಾಪಿತರಾಗಿದ್ದೀರಿ. ಆ ವ್ಯಕ್ತಿಯು ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಚಂದ್ರನ ಸ್ಥಾನವು ಅವರನ್ನು ಹುಚ್ಚರನ್ನಾಗಿ ಮಾಡುತ್ತದೆ. ಇದು ಎಲ್ಲರಲ್ಲಿಯೂ ನಡೆಯುತ್ತಿದೆ, ಆದರೆ ಆ ವ್ಯಕ್ತಿಗೆ ಹೋಲಿಸಿದರೆ, ನೀವು ಹೆಚ್ಚು ಸ್ಥಿರವಾಗಿರುವುದರಿಂದ, ನೀವು ಇರುವ ರೀತಿಯನ್ನು ಅದು ಅಷ್ಟರ ಮಟ್ಟಿಗೆ ನಿರ್ಧರಿಸುತ್ತಿಲ್ಲ..

ನೀವು ನಿಜವಾಗಿಯೂ ನಿಮ್ಮೊಳಗೆ ಸ್ಥಿರವಾಗಿದ್ದರೆ, ಗ್ರಹಗಳೆಲ್ಲಾ ಎಲ್ಲಿಗೆ ಹೋಗಬೇಕೆಂದುಕೊಂಡಿವೆಯೋ ಅಲ್ಲಿಗೆ ಹೋಗಲಿ, ನೀವೆಲ್ಲಿಗೆ ಹೋಗಬೇಕೆಂದುಕೊಂಡಿರುವಿರೊ ಅಲ್ಲಿಗೆ ನೀವು ಹೋಗಿ.

ಹಾಗೆಯೇ, ನೀವು ನಿಜವಾಗಿಯೂ ನಿಮ್ಮೊಳಗೆ ಸ್ಥಿರವಾಗಿದ್ದರೆ, ಗ್ರಹಗಳು ಎಲ್ಲಿಗೆ ಹೋಗಬೇಕೆಂದುಕೊಂಡಿವೆಯೋ ಅಲ್ಲಿಗೆ ಹೋಗಲಿ, ನೀವೆಲ್ಲಿಗೆ ಹೋಗಬೇಕೆಂದುಕೊಂಡಿರುವಿರೊ ಅಲ್ಲಿಗೆ ನೀವು ಹೋಗಿ. ಇಲ್ಲದಿದ್ದರೆ, ಪ್ರತಿ ಸಣ್ಣ ಬದಲಾವಣೆಯು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ನೀವು ಒಂದು ನಿರ್ದಿಷ್ಟ ಸ್ಥಿತಿಗೆ ಒಳಗಾಗಿದ್ದರೆ, ಈ ವಿಷಯಗಳು ನಿಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಕೆಲಸ ಮಾಡುತ್ತವೆ. ಆದರೆ ನಿಮ್ಮೊಳಗೆ ನೀವು ಉತ್ತಮವಾಗಿ ಸ್ಥಾಪಿತರಾಗಿದ್ದರೆ, ಯಾವುದೇ ಗ್ರಹವು ನಿಮ್ಮ ಜೀವನದ ಹಾದಿಯನ್ನು ನಿರ್ಧರಿಸುವುದಿಲ್ಲ. ಮಾನವ ಸ್ವಭಾವವು ನಿಮ್ಮ ಜೀವನದ ಹಾದಿಯನ್ನು ನಿರ್ಧರಿಸಬೇಕು. ನಿಮ್ಮೊಳಗೆ ಕಾರ್ಯನಿರ್ವಹಿಸುತ್ತಿರುವ ಸೃಷ್ಟಿಯ ಮೂಲ, ಅದು ನಿಮ್ಮ ಹಣೆಬರಹದ ಹಾದಿಯನ್ನು ನಿರ್ಧರಿಸಲು ಸಾಧ್ಯವಾಗದಿದ್ದು, ಗ್ರಹಗಳು - ನಿರ್ಜೀವ ವಸ್ತುಗಳು - ನಿಮ್ಮ ಹಣೆಬರಹದ ಹಾದಿಯನ್ನು ನಿರ್ಧರಿಸಬಹುದು ಎಂದಾದರೆ, ಏನೋ ತಪ್ಪಾಗಿದೆ ಎಂದೇ ಅರ್ಥ. ನಿಮ್ಮೊಳಗೆ ನೀವು ಸ್ವಲ್ಪ ಹೆಚ್ಚು ಕೇಂದ್ರಿತರಾಗಿದ್ದರೆ, ಈ ಎಲ್ಲ ವಿಷಯಗಳು ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ. ನೀವು ಎಲ್ಲಿಗೆ ಹೋಗಬೇಕೆಂದು ಬಯಸಿರುವಿರೋ ಅಲ್ಲಿಗೆ ನೀವು ಹೋಗುತ್ತೀರಿ.

“ನಾನು ಆಧ್ಯಾತ್ಮಿಕ ಹಾದಿಯಲ್ಲಿದ್ದೇನೆ” ಎಂದು ಯಾರಾದರೂ ಹೇಳಿದಾಗ, ಇದರ ಅರ್ಥವೇನೆಂದರೆ, “ಗ್ರಹಗಳು ಎಲ್ಲಿದ್ದರೂ ಅದು ಅಪ್ರಸ್ತುತವಾಗುತ್ತದೆ, ನನ್ನಲ್ಲಿ ಯಾವ ಕರ್ಮವಿದೆ ಎಂಬುದು ಮುಖ್ಯವಲ್ಲ, ನಾನು ಹೋಗಲು ಬಯಸುವ ಹಾದಿಯಲ್ಲಿ ಹೋಗುತ್ತಿದ್ದೇನೆ. ನಾನು ವಿಮೋಚನೆಯ ಕಡೆಗೆ ಹೋಗಲಿದ್ದೇನೆ.” ಆಧ್ಯಾತ್ಮಿಕತೆ ಎಂದರೆ ಇದೆ - ವಿಧಿಯನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು.

ನಿಮ್ಮ ವಿಧಿಯನ್ನು ನಿರ್ಧರಿಸಲು ನೀವು ನಿಮ್ಮನ್ನು ಸಶಕ್ತಗೊಳಿಸಬಹುದು, ಅಥವಾ ಗ್ರಹಗಳು ಮತ್ತು ಇತರ ಲಕ್ಷಾಂತರ ಸಂಗತಿಗಳು ಅದನ್ನು ನಿರ್ಧರಿಸಲು ನೀವು ಬಿಡಬಹುದು. ದುರದೃಷ್ಟವಶಾತ್, ಜನರು ಇತರ ಗ್ರಹಗಳೆಡೆಗೆ ಅತಿಯಾಗಿ ನೋಡುತ್ತಿದ್ದಾರೆ. ನೀವು ಭೂಮಿಯ ಬಗ್ಗೆ ಸ್ವಲ್ಪ ಆಸಕ್ತಿ ವಹಿಸುವ ಮತ್ತು ಅದರ ಬಗ್ಗೆ ಏನಾದರೂ ಮಾಡುವ ಸಮಯ ಬಂದಿದೆ. ಜನರು ಈ ಗ್ರಹದ ಬಗ್ಗೆ ಸ್ವಲ್ಪ ಹೆಚ್ಚು ಗಮನ ಹರಿಸುತ್ತಾರೆಂದು ನಾನು ಭಾವಿಸುತ್ತೇನೆ. ಇದೀಗ ಅವಶ್ಯಕವಾಗಿರುವುದು ಇದೇ.

Editor’s Note: Find more of Sadhguru’s insights in the ebook “Of Mystics and Mistakes”, available at Isha Downloads.