#1 ನಿಮ್ಮ ನಿದ್ರೆಯ ಭಂಗಿಯನ್ನು ಗಮನಿಸಿ

ಸದ್ಗುರು: ನೀವು ನಿಮ್ಮ ನಿದ್ರೆಯ ಭಂಗಿಯನ್ನು ಗಮನಿಸಬೇಕು. ಗೊರಕೆ ಹೊಡೆಯುವವರು ಸಾಮಾನ್ಯವಾಗಿ ತಮ್ಮ ಬೆನ್ನಿನ ಮೇಲೆ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ನೀವು ನಿಮ್ಮ ಪಕ್ಕಕ್ಕೆ ತಿರುಗಿ ಮಲಗಿಕೊಂಡರೆ, ನಿಮ್ಮ ಗೊರಕೆಯು ಹೊರಟು ಹೋಗಬಹುದು. ಜೊತೆಗೆ, ನೀವು ನಿಮ್ಮ ಅನ್ನನಾಳವನ್ನು ಧೃಢವಾಗಿರಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿದರೆ, ನಿಮ್ಮ ಗೊರಕೆಯು ನಿಂತು ಹೋಗಬಹುದು.

#2 ಮಲಗುವ ಮುನ್ನ ಸ್ವಲ್ಪ ಜೇನುತುಪ್ಪವನ್ನು ಸೇವಿಸಿ

ಇನ್ನೊಂದು ಸಂಗತಿಯೆಂದರೆ, ನೀವು ಮಲಗುವ ಮುಂಚೆ, ಕೆಲವು ಹನಿ ಜೇನುತುಪ್ಪವನ್ನು ನಿಮ್ಮ ಬಾಯಲ್ಲಿ ಹಾಕಿಕೊಂಡು ಮಲಗಿದರೆ, ಗೊರಕೆಯು ಹೊರಟು ಹೋಗಬಹುದು.

 

#3 ನಿಮ್ಮ ಕಟ್ಟಿದ ಮೂಗನ್ನು ಸರಾಗವಾಗಿಸಲು ತುಪ್ಪವನ್ನು ಬಳಸಿ

ನೀವು ಮಲಗುವ ಮುನ್ನ, ನಿಮ್ಮ ಮೂಗನ್ನು ಸೀನಿ ಆದಷ್ಟು ಅದನ್ನು ಸರಾಗವಾಗಿಸಿಕೊಳ್ಳಿ, ಕನಿಷ್ಟಪಕ್ಷ ನಿಮ್ಮ ಗೊರಕೆಯು ತಡ ರಾತ್ರಿಯಲ್ಲಿ ಶುರುವಾಗುತ್ತದೆ. ಅದು ಇನ್ನೂ ಹೆಚ್ಚು ಮೊಂಡಾಗಿದ್ದರೆ, ನೀವು ತುಪ್ಪವನ್ನು ಬಳಸಬಹುದು. ಬೆಣ್ಣೆಯನ್ನು ನಿರ್ದಿಷ್ಟ ಅವಧಿಗಿಂತ ಜಾಸ್ತಿ ಹೊತ್ತು ಬಿಸಿಮಾಡಿದರೆ, ಅದು ತಣ್ಣಗಾದ ನಂತರ ಮತ್ತೆ ಬೆಣ್ಣೆಯಾಗುವುದಿಲ್ಲ – ಅದು ತುಪ್ಪವಾಗುತ್ತದೆ.

ನಿಮ್ಮ ಮೂಗು ನಿರಂತರವಾಗಿ ಕಟ್ಟಿಕೊಂಡಿದ್ದರೆ, ಅದು ಉಸಿರಾಟದ ಬಗ್ಗೆಯಷ್ಟೇ ಅಲ್ಲ – ಅದು ಬಹಳಷ್ಟು ರೀತಿಗಳಲ್ಲಿ ನಿಮ್ಮಿಡೀ ವ್ಯವಸ್ಥೆಯನ್ನೇ ಬಾಧಿಸುತ್ತದೆ.

ನೀವು ರಾತ್ರಿ ನಿದ್ರಿಸುವ ಮುಂಚೆ, ಬೆಚ್ಚಗಿರುವ ತುಪ್ಪದ ಎರಡು ಹನಿಗಳನ್ನು ಮೂಗಿನ ಡ್ರಾಪ್ಸ್-ನಂತೆ ಬಳಸಿ. ಅದು ನಿಮ್ಮ ಮೇಲೆ ನಿರ್ದಿಷ್ಟ ಪ್ರಭಾವವನ್ನು ಹೊಂದಿದೆ, ಜೊತೆಗೆ ಅದು ನಿಮ್ಮ ಉಸಿರಾಟದ ಮಾರ್ಗವನ್ನು ನಯವಾಗಿಸುತ್ತದೆ. ಇದರಿಂದಾಗಿ ಬೆಳಗ್ಗೆ ಎದ್ದಾಗ ನೀವು ನಿಮ್ಮ ಕಟ್ಟಿದ ಮೂಗನ್ನು ಸಲೀಸಾಗಿ ಸ್ವಚ್ಛಗೊಳಿಸಿಕೊಳ್ಳಬಹುದು.

Woman using nasal spray | 5 Tips to Stop Snoring and Clear Blocked Nostrils

 

ಅಥವಾ ಇನ್ನೊಂದು ಸರಳ ಉಪಾಯವೆಂದರೆ, ಈಗಿನ ಔಷಧದ ಅಂಗಡಿಗಳಲ್ಲಿ ದೊರೆಯುವ ಶುದ್ಧ ಉಪ್ಪು ನೀರಿನ ಮೂಗಿನ ಸ್ಪ್ರೇ-ಗಳನ್ನು ನೀವು ಬಳಸಬಹುದು. ಇದೂ ಸಹ ನಿಮ್ಮ ಉಸಿರಾಟದ ಮಾರ್ಗವನ್ನು ತಕ್ಕ ಮಟ್ಟಿಗೆ ಸುಗಮವಾಗಿಸುತ್ತದೆ. 

ನಿಮ್ಮ ಮೂಗು ನಿರಂತರವಾಗಿ ಕಟ್ಟಿಕೊಂಡಿದ್ದರೆ, ಅದು ಉಸಿರಾಟದ ಬಗ್ಗೆಯಷ್ಟೇ ಅಲ್ಲ – ಅದು ಬಹಳಷ್ಟು ರೀತಿಗಳಲ್ಲಿ ನಿಮ್ಮಿಡೀ ವ್ಯವಸ್ಥೆಯನ್ನೇ ಬಾಧಿಸುತ್ತದೆ. ಆದ್ದರಿಂದ ನಿಮ್ಮ ಉಸಿರಾಟದ ಮಾರ್ಗವು ಸರಾಗವಾಗಿರುವುದು ಬಹಳ ಮುಖ್ಯ. ವಿಶೇಷವಾಗಿ ನಿಮ್ಮ ತಲೆ ಪ್ರದೇಶದಲ್ಲಿ ಸೈನಸ್-ಗಳು ಎಷ್ಟು ಸ್ವಚ್ಛವಾಗಿವೆ ಮತ್ತು ದೇಹದಲ್ಲಿನ ದ್ರವಗಳು ಎಷ್ಟು ಚೆನ್ನಾಗಿ ಸಮತೋಲನದಲ್ಲಿವೆ ಎನ್ನುವುದು ನಿಮ್ಮ ಮೆದುಳಿನ ಕಾರ್ಯನಿರ್ವಹಣೆ, ನಿಮ್ಮ ಯೋಗಕ್ಷೇಮ, ನಿಮ್ಮ ಸಮತೋಲನೆ, ನಿಮ್ಮ ಬುದ್ಧಿಯ ಚುರುಕುತನ ಮತ್ತು ಪಂಚೇಂದ್ರಿಯಗಳ ತೀಕ್ಷ್ಣತೆಯನ್ನೂ ಸೇರಿದಂತೆ ಇನ್ನೂ ಬಹಳಷ್ಟು ರೀತಿಯ ವಿಷಯಗಳನ್ನು ನಿರ್ಧರಿಸುತ್ತದೆ.


ಕಟ್ಟಿದ ಮೂಗು ನಿಮ್ಮನ್ನು ಪ್ರತಿನಿತ್ಯ ಕಾಡುತ್ತಿರುವ ದೀರ್ಘಕಾಲಿಕ ಸಮಸ್ಯೆಯಾಗಿದ್ದರೆ, ನೀವು ಪ್ರಯತ್ನಿಸಬಹುದಾದ ಕೆಲವು ಅಭ್ಯಾಸಗಳಿವೆ.
 

#4 ಸ್ವಲ್ಪ ಹೊತ್ತು ಜಾಗಿಂಗ್ ಮಾಡಿ

ಪ್ರತಿನಿತ್ಯ ಕನಿಷ್ಟ ಐದರಿಂದ ಹತ್ತು ನಿಮಿಷಗಳ ಕಾಲ ಜಾಗಿಂಗ್ ಮಾಡಲು ಶುರುಮಾಡಿ. ಬಾಯಿಯನ್ನು ಮುಚ್ಚಿ, ನೀವು ನಿಂತಲ್ಲೇ ಸ್ವಲ್ಪ ಹೊತ್ತು ಜಾಗಿಂಗ್ ಮಾಡಿದರೂ ಸಹ ಅದು ಸರಿಹೋಗಬಹುದು. 

 

#5 ಜಲ ನೇತಿ

ಈ ಮೇಲೆ ಕೊಟ್ಟಿರುವ ಯಾವುದೇ ಉಪಾಯಗಳಿಂದ ಸುಧಾರಣೆಯಾಗದ್ದಂತಹ ಕಠಿಣ ಮೂಗಿನ ಪರಿಸ್ಥಿತಿ ನಿಮಗಿದ್ದರೆ, ಜಲ ನೇತಿ ಎನ್ನುವ ಕ್ರಿಯೆಯೊಂದಿದೆ. ಇದಕ್ಕೆ ಒಂದು ನಿರ್ದಿಷ್ಟ ಮಟ್ಟದ ಸಿದ್ಧತೆ ಬೇಕಾಗುತ್ತದೆ. ಇತ್ತೀಚೆಗೆ ಇದನ್ನು ಅಗತ್ಯ ಸಿದ್ಧತೆಗಳಿಲ್ಲದೆಯೇ ವಿವಿಧ ಯೋಗ ಸ್ಟೂಡಿಯೋಗಳಲ್ಲಿ ಹೇಳಿಕೊಡಲಾಗುತ್ತಿದೆಯಾದರೂ, ಸುಮ್ಮನೆ ನೀವು ನಿಮ್ಮ ಮೂಗಿನೊಳಕ್ಕೆ ನೀರನ್ನು ಸುರಿದುಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. ಈ ಅಭ್ಯಾಸವನ್ನು ಸರಿಯಾದ ರೀತಿಯಲ್ಲಿ ಹೇಳಿಕೊಡಬೇಕಾಗುತ್ತದೆ. ಅಗತ್ಯವಿದ್ದಲ್ಲಿ, ನಮ್ಮ ಹಠ ಯೋಗ ಶಿಕ್ಷಕರು ನಿಮಗಿದನ್ನು ಹೇಳಿಕೊಡುತ್ತಾರೆ.

ಸಂಪಾದಕರ ಟಿಪ್ಪಣಿ: ನೀವು ಆಗಾಗ್ಗೆ ಕಟ್ಟಿದ ಸೈನಸ್ ಮತ್ತು ಎದೆ ಬಿಗಿತವನ್ನು ಅನುಭವಿಸುತ್ತಿದ್ದೀರ? ನಿಮ್ಮ ಸೈನಸ್ ಮುಕ್ತವಾಗಿ ಮತ್ತು ಸಮತೋಲನದಲ್ಲೇಕಿರಬೇಕು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ಹಾಗೆಯೇ, ಶಕ್ತಿಯುತವಾದ ಯೋಗಾಭ್ಯಾಸಗಳು ಹಾಗೂ ಕೆಲವು ಆಹಾರ ಕ್ರಮಗಳ ಬದಲಾವಣೆಗಳ ಮೂಲಕ ನೀವಿದನ್ನು ಹೇಗೆ ಸಾಧಿಸಬಹುದು ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿ.