ಮಾನವ ವ್ಯವಸ್ಥೆಯನ್ನೂ ಅದರ ಕಾರ್ಯಶೈಲಿಯನ್ನೂ ಸದ್ಗುರುಗಳು ಯೌಗಿಕ ದೃಷ್ಟಿಯಿಂದ ಚುಟುಕಾಗಿ ವಿಶ್ಲೇಷಿಸುತ್ತಾರೆ. ಸೃಷ್ಟಿಯ ಮೂಲ ನಮ್ಮೊಳಗಿನಿಂದ ಕೆಲಸ ಮಾಡುತ್ತಿರುವುದರಿಂದ, ಅದು ಹೊರಹೊಮ್ಮಲು ನಾವು ಅವಕಾಶ ಮಾಡಿಕೊಟ್ಟರೆ, ನಮ್ಮ ದೇಹದ ಸಮಸ್ಯೆಗಳು ಪವಾಡದ ಥರ ಮಾಯವಾಗುತ್ತವೆ ಎಂದು ವಿವರಿಸುತ್ತಾರೆ, ಹಾಗೂ ಶಾಂಭವಿ ಮಹಾಮುದ್ರೆಯು ಇದನ್ನು ಸಾಧ್ಯವಾಗಿಸುವ ಒಂದು ಸಾಧನ ಎಂದು ತಿಳಿಸುತ್ತಾರೆ.
Rogagalinda Gunamukharagi, Pavaadadante!
ಲಿಪ್ಯಂತರ:
ಸದ್ಗುರು: ಈ ದೇಹವನ್ನ ನೋಡಿ, ನಾವು ಪದೇ ಪದೇ ನಿಮಗೆ ಹೇಳ್ತಿರೋ ಹಾಗೆ, ಅದು ಹುಟ್ಟಿದಾಗ ಇಷ್ಟು ಸಣ್ಣದಾಗಿತ್ತು, ಈವಾಗ ಇಷ್ಟ್ ದೊಡ್ಡದಾಗಿದೆ. ಖಂಡಿತವಾಗ್ಲೂ, ಹೊರಗಡೆಯಿಂದ ಯಾರೂ ಇದನ್ನ ಹಿಡ್ಕೊಂಡು ಎಳದಿಲ್ಲ ಅದು ಇಷ್ಟು ದೊಡ್ಡದಾಗ್ಬೇಕಾದ್ರೆ, ಅಲ್ವೇ? ಯಾವುದು ಸೃಷ್ಟಿಯ ಮೂಲವೋ, ಯಾರನ್ನ ನೀವು ಸೃಷ್ಟಿಕರ್ತ ಅಂತ ಕರೀತೀರೋ, ಅದು ನಿಮ್ಮೊಳಗಿಂದಲೇ ಕೆಲಸ ಮಾಡ್ತಿರೋ ಹಾಗಿದೆ ಹೌದಲ್ವೇ? ಅಲ್ವಾ? ಸೃಷ್ಟಿಕರ್ತ ಕೆಲಸ ಮಾಡ್ತಿದ್ದಾನೆ, ಅಂದ್ರೆ, manufacturer, ಈ ದೇಹ ಮತ್ತು ಈ ಜಗತ್ತನದ್ದು ನಿಮ್ಮೊಳಗಿಂದಲೇ ಕೆಲಸ ಮಾಡ್ತಿರೋ ಹಂಗಿದೆ.
ಸೃಷ್ಟಿಕರ್ತ ನಿಮ್ಮೊಳಗೆ ಇದಾನೆ ಅಂತಂದ್ರೆ, ಅವನಿಗೆ ನೀವು ಕೆಲಸ ಮಾಡ್ಲಿಕ್ಕೆ ಬಿಟ್ಟರೆ, ದೇಹದಲ್ಲಿ ಸಣ್ಣ ಪುಟ್ಟ ತೊಂದ್ರೆಗಳನ್ನ ಸರಿಮಾಡೋದು ಒಂದ್ ಸಮಸ್ಯೆ ಆಗತ್ತೆ ಅನ್ಸತ್ತಾ? ಆದ್ರಿಂದ, ಶಾಂಭವಿ ಮಹಾಮುದ್ರ ನಿಮ್ಮ ಅಂತರಾಳವನ್ನ ಕ್ರಿಯಾಶೀಲಗೊಳಿಸೋದಿಕ್ಕೆ ಒಂದು ದಾರಿಯನ್ನ ಮಾಡ್ಕೊಡತ್ತೆ. ಅದು ಕೆಲಸ ಮಾಡಕ್ಕೆ ನೀವು ಅವಕಾಶ ಮಾಡಿಕೊಟ್ರೆ, ಇದರ ಗುಣ ಎಂತದಂದ್ರೆ, ಯೋಗದಲ್ಲಿ ನಿಮ್ಮ ಅಂತರಂಗದ ಅತ್ಯಂತ ಒಳಭಾಗವನ್ನ ಆನಂದಮಯ ಕೋಶ ಅಂತೀವಿ. ಜನ ಹಿಂದಿನಿಂದಲೂ ಹೇಳ್ತಾನೇ ಇದ್ದಾರೆ, ನೀವು ದೇವರ ಸಂಪರ್ಕಕ್ಕೆ ಬಂದ್ರೆ ಪರಮಾನಂದವನ್ನ ಹೊಂದುತ್ತೀರಾ. ಕೇಳಿಲ್ವಾ, ಬ್ರಹ್ಮಾನಂದ? ಗೊತ್ತು ತಾನೇ ಎಲ್ಲರೂ ಹಿಂಗೆ ಹೇಳ್ತಾ ಬಂದಿರೋದು? ನೋಡಿ, ಇದೆಲ್ಲ ಅದನ್ನು ಪ್ರಸ್ತುತ ಪಡಿಸೋ ಬೇರೆ ಬೇರೆ ವಿಧಾನಗಳು. ನಿಮ್ಮ ಅಂತರಾಳವನ್ನ ಆನಂದಮಯ ಕೋಶ ಅಂತ ಕರೀತಾರೆ. ಈಗ ನಾವು ಮಾಡ್ತಿರೋದೆಲ್ಲ ಏನಂದ್ರೆ, ನಿಮ್ಮ ಭೌತಿಕ ಶರೀರ, ಮಾನಸಿಕ ಶರೀರ, ಪ್ರಾಣಮಯಶರೀರ, ಮತ್ತು ವಿಜ್ಞಾನಮಯ ಶರೀರ ಇವೆಲ್ಲವನ್ನೂ ಹೇಗೆ ಜೋಡಿಸ್ತಿದ್ದೀವಂದ್ರೆ, ನಿಮ್ಮ ಅಂತರಂಗದ ಅತ್ಯಂತ ಒಳತಿರುಳು, ಅಂದರೆ ಆನಂದಮಯ ಕೋಶ ಹೊರಹೊಮ್ಮುತ್ತೆ. ಶಾಂಭವಿ ಯಾವುದೇ ಭಾವೋತ್ಕರ್ಷತೆಯನ್ನು ಉಂಟ್ ಮಾಡ್ತಿಲ್ಲ. ಶಾಂಭವಿ ಏನಿದ್ರೂ ಈ ನಾಲ್ಕನ್ನ ಸರಿಯಾಗಿ ಜೋಡಿಸ್ತಿದೆ ಅಷ್ಟೆ, ಪರಿಣಾಮವಾಗಿ ಇದು, ಸೃಷ್ಟಿಯ ಮೂಲ ಹೊರಹೊಮ್ಮುತ್ತೆ. ನಿಮ್ಮೊಳಗಿರೋ ಸೃಷ್ಟಿಯ ಮೂಲ, ಸೃಷ್ಟಿಕರ್ತ ಹೊರಹೊಮ್ಮಿದ್ರೆ, ನಿಮ್ಮ ಹಾರ್ಟ್, ಲಿವರ್ ಅಥವಾ ಕಿಡ್ನಿ ಸರಿಮಾಡೋದು ಕಷ್ಟಾನಾ? Manufacturer, ಅವ್ನೆ ಹೊರಗೆ ಬಂದು ಕೆಲಸ ಮಾಡ್ಲಿಕ್ಕೆ ಶುರು ಮಾಡಿದ್ರೆ, ಎಲ್ಲಾನು ಸರಿಹೋಗತ್ತೆ. ನೀವು ನೋಡ್ತೀರಾ, ಪವಾಡದ ಥರ ಆರೋಗ್ಯ ಸುಧಾರಿಸತ್ತೆ. ನಿಮಗೆ ನಾನು ಸಾವಿರಾರು ಜನರನ್ನ ತೋರಿಸ್ತೀನಿ, ಖಾಯಿಲೆಗಳಿಂದ ಸುಮ್ನೆ ಹಾಗೆಯೇ ಹೊರಬಂದಿರೋವಂತಾವ್ರನ್ನ. ಪವಾಡದ ಥರ.
ಅದು ಪವಾಡಾನಾ? ಯಾವುದು ನಿಮಗೆ ಅರ್ಥ ಆಗಲ್ವೋ, ಅದನ್ನ ನೀವು ಪವಾಡ ಅಂತೀರಾ, ಅಲ್ವಾ? ನಿಮಗೆ ಎಲೆಕ್ಟ್ರಿಸಿಟಿ ಎಂದ್ರೆ ಏನಂತ ಗೊತ್ತಿಲ್ಲಾ ಅನ್ಕೋಳಣ. ನಾನ್ ಹೇಳ್ತೀನಿ, "ನೀವು ನೋಡ್ತಿರಿ, ನಾನು ಆ ಗೋಡೆಯನ್ನ ಒತ್ತುತ್ತೀನಿ, ಇಡೀ ಕೋಣೆಯಲ್ಲಿ ಬೆಳಕು ತುಂಬತ್ತೆ" ಅಂತ, ನನ್ನ ನಂಬುತ್ತೀರ? ನೀವು ನಂಬಲ್ಲ. ನೀವು ಹೇಳ್ತೀರಾ, "ಇಲ್ಲ, ಅಂತದ್ದೆಲ್ಲಾ ಆಗಲ್ಲ". ಈಗ ನಾನು ಒತ್ತಿದ್ರೆ, ಹಠಾತ್ತನೆ ಎಲ್ಲೆಡೆ ಬೆಳಕು ಬಂದ್ರೆ, ಆಗ ನೀವು ನನ್ನನ್ನ ದೇವರ ಮಗ, ಅಥವಾ ದೇವರ ದೂತ ಅಥವಾ ನನ್ನನ್ನೇ ದೇವರು ಅಂತ ಕರೀತೀರ ನೀವು ಒಳಪಟ್ಟಿರೋ ಸಂಸ್ಕೃತಿಗನುಗುಣವಾಗಿ. ಅಲ್ವೇ? ಯಾವುದೆಲ್ಲ ನಿಮಗೆ ಅರ್ಥ ಆಗಲ್ವೋ, ನಿಮ್ಮ ಪ್ರಕಾರ ಅದು ಪವಾಡ. ಒಂದೋ ಪವಾಡಗಳೂಂತ ಯಾವುದೂ ಇಲ್ಲ ಜೀವನ್ದಲ್ಲಿ—ಪ್ರತಿಯೊಂದೂ ಕಾರಣ ಮತ್ತು ಪರಿಣಾಮಗಳಿಂದ ಕೂಡಿದೆ—ಅಥವಾ ಪ್ರತಿಯೊಂದು ಪವಾಡವೇ. ಈ ಜೀವನವೇ ಒಂದು ಪವಾಡವಲ್ವಾ? ನಾನು, ನೀವು ಇಲ್ಲಿ ಈ ಗುಂಡಗಿರುವ ಮತ್ತು ಪ್ರಚಂಡ ವೇಗದಲ್ಲಿ ಹೋಗ್ತಿರೋ ಭೂಮಿ ಮೇಲೆ ಕೂತಿರೋದು, ಇದು ಪವಾಡ ಅಲ್ವಾ? ನಾವಿಲ್ಲಿ ಕೂತು ಈ ಅಸಂಬದ್ಧವಾದ್ದೆಲ್ಲ ಮಾತಾಡ್ತಿರೋದು (ನಗು), ಇದು ಪವಾಡ ಅಲ್ವಾ? ಹಾಗಾಗಿ, ನೀವು ಗಮನಿಸಿದ್ರೆ, ಸರಿಯಾಗಿ ನೋಡೋವಂತ ಕಣ್ಣು ನಿಮಗ್ ಇದ್ರೆ, ಪ್ರತಿಯೊಂದು ಪವಾಡವೇ, ಅಥವಾ ಯಾವುದೂ ಪವಾಡ ಅಲ್ಲ. ಇವು ಬದುಕನ್ನ ಅರಿಯೋ ಎರಡು ದಾರಿಗಳು. ಇವು ಯೋಗದ ಎರಡು ಮಾರ್ಗಗಳು. ಒಂದು, ಪ್ರತಿಯೊಂದನ್ನು ಪವಿತ್ರವಾಗಿ ಕಾಣೋದು, ಮತ್ತೊಂದು, ಪ್ರತಿಯೊಂದನ್ನು ಅಸಂಬದ್ಧವನ್ನಾಗಿ ಕಾಣೋದು. ಆದ್ರೆ ನಿಮ್ಮ ತೊಂದರೆ ಏನಂದ್ರೆ, ಯಾವುದು ನಿಮಗಿಷ್ಟಾನೋ ಅದು ಪವಿತ್ರ, ಯಾವುದು ಇಷ್ಟ ಇಲ್ವೋ, ಅದು ಅಸಂಬದ್ಧ. ಅದೇ ತೊಂದ್ರೆ. ಅದೊಂದು ಸಿಕ್ ಹಾಕ್ಸೋ ಬಲೆ. ಪ್ರತಿಯೊಂದು ಪವಿತ್ರ, ಇದೊಂದು ಸುಂದರವಾದ ಜೀವನ, ಪ್ರತಿಯೊಂದು ಅಸಂಬದ್ಧ, ಇದು ಕೂಡ ಸುಂದವಾದ ಜೀವನ. ಈ ಜನ್ರು ಪವಿತ್ರ, ಈ ಜನ್ರು ಅಸಂಬದ್ಧ, ಇದು ನಿಮ್ಮನ್ನ ನಾಶ ಮಾಡತ್ತೆ.