Preetisi mosa maadidare yenu maadodu?
ಲಿಪ್ಯ೦ತರ
ಪ್ರಶ್ನೆ: ಒಂದ್ವೇಳೆ ನಮ್ಮ ಸಂಗಾತಿ ನಮಗ್ ಮೋಸ ಮಾಡ್ದ್ರೆ, ಅವ್ರನ್ ಶಿಕ್ಷಿಸೋದು, ಅಥವಾ ಮುಂದ್ ಒಂದ್ ದಿನ ಅವ್ರಿಗ್ ತಕ್ಕಶಾಸ್ತಿಯಾಗತ್ತೆ ಅಂತ ನಂಬೋದು ತಪ್ಪಾ?
ಸದ್ಗುರು: ಆದ್ರೆ ಅವ್ನಿಗೆ ಶಿಕ್ಷೆ ಆಗ್ಲೇ ಬೇಕು? (ನಗು), ನಿಮ್ಮಿಂದಾನೋ ಅಥವಾ ಬೇರೆಯವ್ರಿಂದಾನೋ, ಅವ್ನಿಗೆ ಶಿಕ್ಷೆ ಆಗ್ಲೇ ಬೇಕು. (ನಗು ಮತ್ತು ಚಪ್ಪಾಳೆ) ಸಾಮಾನ್ಯವಾಗಿ ಯಾವ್ ತರದ್ ಶಿಕ್ಷೇನ ಕೊಡ್ತೀರ ನೀವು ಜನ್ರಿಗೆ? (ನಗು) ಆಗ್ಲೇ ಸಾಕಷ್ಟ್ ಶಿಕ್ಷೇನ ಕೊಟ್ಟಾಗಿದೆ, ಅಲ್ವಾ? ಈಗಾಗ್ಲೇ ಕೊಟ್ಟಾಗಿದೆ – ಕೋಪ ತಾಪ, ಕೂಗಾಡೋದು, ಮಾತಾಡ್ಸ್ ದೆ ಇರೋದು, ಎಲ್ಲಾನೂ ಆಗ್ಬಿಟ್ಟಿದೆ. ಹಾಗಿದ್ಮೇಲೆ, ಇನ್ನೂ ಏನ್ ಶಿಕ್ಷೆ ಕೊಡಕ್ ಇಷ್ಟ ಪಡ್ತೀರ? ನಿಮ್ ಸಮಸ್ಯೆ ಏನಂದ್ರೆ, ಆ ಕಡೇಲೀ ಯಾವ್ದೇ ಪಶ್ಚಾತ್ತಾಪ ಕಾಣಿಸ್ತಿಲ್ಲ. ಆ ಕಡೇಲೀ ಯಾವ್ ಪಶ್ಚಾತ್ತಾಪಾನೂ ಇಲ್ಲ, ಯಾಕಂದ್ರೆ, ಜನ್ರು ಅವ್ರಿಗ್ ಬೇಕಾಗಿದ್ದನ್ನ ಮಾಡ್ತಿದಾರೆ..... ನಿಮಗೇನ್ ಬೇಕೋ ಅದನ್ ಮಾಡ್ತಿಲ್ಲ. ಯಾವಾಗ್ಲೂ. ಅದು.... ನಿಮ್ ಹಿತಾಸಕ್ತೀಲ್ ಇಲ್ದೇ ಇರ್ಬೋದು. ಆದ್ರೆ ಅವ್ರಿಗ್ ಏನ್ ಬೇಕೋ ಅದನ್ ಅವ್ರ್ ಮಾಡ್ತಿದಾರೆ.. ಅದ್ ಸರೀನೋ ತಪ್ಪೋ – ಅದ್ರ ನೈತಿಕತೆ ಬಗ್ಗೆ ನಾನ್ ಮಾತಾಡಲ್ಲ. ಪರಿಸ್ಥಿತಿಯ ಒಳವಿಷಯಗಳನ್ನ ನೀವ್ ಅರ್ಥ ಮಾಡ್ಕೋಬೇಕು.
ಯಾರೋ, ಅವ್ರಿಗ್ ಬೇಕಾಗಿದ್ದನ್ನ ಅವ್ರ್ ಮಾಡ್ತ ಇದಾರೆ. ನಿಮಗೆ ಅವ್ರಿಗ್ ಶಿಕ್ಷೆಯಾಗ್ಬೇಕಂತ ಅನ್ಸುತ್ತೆ. ಬಹುಶಃ ಅವ್ರು ಯಾವ್ದೇ ಕಾನೂನನ್ ಮುರ್ದಿಲ್ಲ. ಇಲ್ಲಾಂದ್ರೆ, ಅವ್ರಿಗೆ ಹೇಗಾದ್ರೂ ಶಿಕ್ಷೆಯಾಗಿರ್ತ್ತಿತ್ತು. ಇಬ್ಬರ ನಡುವಿನ ಒಪ್ಪಂದಾನ ಅವ್ರು ಮುರೀತಾ ಇದ್ದಾರೆ. ಬಹುಶಃ ನೀವ್ ಈ ಒಪ್ಪಂದಾನ ತಪ್ಪಾಗಿ ಅರ್ಥ ಮಾಡ್ಕೊಂಡಿದ್ರಿ. ಈ ಒಪ್ಪಂದಗಳು ಅಚಲವಾದವು ಅಂತ ನಂಬ್ ಕೊಂಡ್ರಿ. ಆದ್ರೆ ಅವು ಅಚಲವಲ್ಲ.
ಮಾನವತೆಯ ಇತಿಹಾಸದಲ್ಲೆಲ್ಲೂ, ಅಥ್ವಾ ಇಂದು, ಅಥ್ವಾ ಭವಿಷ್ಯದ್ ಯಾವ್ದೇ ಸಮಯದಲ್ಲೂ, ಮಾನವ ಸಂಬಂಧಗಳು ಅಚಲವಾಗಿರೋದಿಲ್ಲ. ಆದ್ರೂ, ಸ್ವಲ್ಪ ಮಟ್ಟಿಗ್ romantic ಆಗೋವ್ರೆಲ್ಲಾರೂ ನಂಬ್ತಾರೆ, ಇದು ಯಾವತ್ತೂ ಹಂಗೇ ಇರುತ್ತೆ ಅಂತ. ಆದ್ರೆ ಸಂಬಂಧಗಳಲ್ಲಿ ಅಂತದ್ದೇನು ಇಲ್ಲ. ಸಂಬಂಧ ಬದಲಾಗೋವಂತಾದ್ದು. ಯಾವಾಗ್ಲೂ. ಇದನ್ನ ಪ್ರತಿದಿನ ನಿಭಾಯಿಸ್ತಾನೇ ಇರ್ಬೇಕು. ಒಂದ್ ದಿನ ಅದನ್ ಸರ್ಯಾಗ್ ನಿಭಾಯಿಸ್ಲಿಲ್ಲ ಅಂದ್ರೆ, ಅದು ಎಲ್ಲೆಲ್ಲೋ ಹೋಗ್ಬೋದು. ಹೌದೋ, ಅಲ್ವೋ? ಹಾಗಲ್ಲ, ಅದ್ ಹೇಗಿದ್ಯೋ, ಅದನ್ನ ಹಾಗೆ ನೋಡಿ. ಅದನ್ ನೀವ್ ಸರ್ಯಾಗ್ ನಿಭಾಯಿಸ್ಲೇ ಬೇಕು. “ಇಲ್ಲ, ನಾನು ನನ್ ಕೈಲಾದಷ್ಟನ್ನ ಮಾಡ್ತಿದೀನಿ". ಆದ್ರೆ ಅದು ಅವ್ರಿಗೆ ಸಾಕಾಗ್ತಿಲ್ಲ ಅಂತ ತೋರುತ್ತೆ. ನೀವ್ ಇದನ್ ಒಪ್ಪಿಕೊಳ್ ಬೇಕು. ಇದು ಸರಿ ತಪ್ಪು.... ಅವ್ರ್ ಮಾಡ್ತ ಇರೋದನ್ನ ನಾನು ಸರಿ ಅಥ್ವಾ ತಪ್ಪು ಅಂತ ಹೇಳ್ತಿಲ್ಲ – ಅದೆಲ್ಲ ನನ್ ಕೆಲ್ಸ ಅಲ್ಲ. ನಾನ್ ಏನ್ ಹೇಳ್ತಿದೀನಿ ಅಂದ್ರೆ, ಮನುಷ್ಯರು ಇರೋದು ಹೀಗೇನೆ, ಅನಾದಿ ಕಾಲದಿಂದ್ಲೂ, ಈಗ್ಲೂ ಹೀಗೇ ಇದಾರೆ. ನಾನ್ ಹೇಳೋದು, ಮೊದಲ್ನೆದಾಗಿ, ನಿಮಗ್ ಅರ್ಥ ಆಗ್ಬೇಕು, ಸಂಬಂಧಗಳು ಯಾವತ್ತೂ, ಎಂದಿಗೂ ಅಚಲವಾಗಿರೋದಿಲ್ಲ.
ಅವು ಬದಲಾಗೋವಂತಾವು. ಅದು ಚೆಂಡುಗಳನ್ನ juggle ಮಾಡೋ ತರ.
ನೀವು ಐದು ಚೆಂಡುಗಳ ಜೊತೆ juggle ಮಾಡ್ತ ಇದ್ದಾಗ, ಒಂದು, ಕೆಲವೊಮ್ಮೆ, ಕೆಳಗ್ ಬಿದ್ಹೋಗತ್ತೆ. ತುಂಬಾ ಕೌಶಲ ಮತ್ ಗಮನ ಬೇಕಾಗತ್ತೆ. ಹೌದೋ, ಅಲ್ವೋ? ನಿಮ್ಮಲ್ ಬಹಳ ಮಂದಿಗೆ ಮದ್ವೆ ಆಗಿದೆ; ಅದಕ್ ತುಂಬಾ ಕೌಶಲ ಮತ್ ಗಮನ ಬೇಕಾಗಲ್ವ? ನೀವು ಗಮ್ನ ಕೊಡ್ಲಿಲ್ಲ ಅಂದ್ರೆ, ಏನ್ ಆಗ್ತ ಇದೆ ಅಂತಾನೇ ನಿಮಿಗ್ ಗೊತ್ತಾಗಲ್ಲ. (ನಗು). ತುಂಬಾಽಽನೇ ಗಮನ ಕೊಡ್ಬೇಕಾಗತ್ತೆ, ಅಲ್ವಾ? ಇತ್ತೀಚೆಗೆ ಯಾರೋ ನಂಗ್ ಫೋನ್ ಮಾಡಿದ್ರು, ಯುರೋಪ್ನ ಯಾವ್ದೋ ದೇಶ್ದಿಂದ, “ಸದ್ಗುರು, ನಾನ್ ಬರೀ ಮನೆಕೆಲ್ಸ ಮಾಡ್ತಿದೀನಿ, ಬಂದು ನನ್ನನ್ ಕಾಪಾಡಿ. (ನಗು) ನನ್ನನ್ ಕರ್ಕೊಂಡ್ಹೋಗಿ. ನಿಮ್ ಆಶ್ರಮಕ್ಕೆ; ನಾನ್ ಬರೀ ಮನೆಕೆಲ್ಸ ಮಾಡ್ತಿದೀನಿ” ಅವ್ರು ಪಾತ್ರೆಪರ್ಡಿಗಳನ್ನ ತೊಳೀತಿದ್ರು. ಬಹಳ ಶ್ರೀಮಂತ್ರು, ಆದ್ರೆ ನಾಕ್ ಮಕ್ಳಿದಾರೆ. ಹಾಗಾಗಿ, ಯಾವಾಗ್ಲೂ ಏನೋ ಒಂದ್ ಇರುತ್ತೆ ಮಾಡಕ್ಕೆ, ಕೊನೇನೆ ಇಲ್ದಂಗೆ. (ನಗು) ಮತ್ ಇವತ್ ಕೆಲ್ಸ ಮಾಡೋಳ್ ಸಹ ಬಂದಿರ್ಲಿಲ್ಲ. ಆದ್ರಿಂದ, ಅವ್ರೆ ಎಲ್ಲಾ ಪಾತ್ರೆಗಳ್ನ ತೊಳೀತಿದ್ರು. ನಾಕ್ ಮಕ್ಳು ಬೇರೆ ಇದರೆ. ಪಾತ್ರೇನೂ ತೊಳೀಬೇಕು, ಬೇರೆ ಎಲ್ಲಾನೂ ತೊಳೀಬೇಕು. (ನಗು)
ನಾನ್ಹೇಳೋದ್ ಏನಂದ್ರೆ, ನೀವಿದನ್ನ ಅರ್ಥ ಮಾಡ್ಕೋಬೇಕು – ಸಂಬಂಧ ಬದಲಾಗೋಂತ ಸಂಗತಿ. ಅದು ಅಚಲವಾದಂತ ಸಂಗತಿಯಲ್ಲ. ನಿಮ್ಗೆ ಸಂಪೂರ್ಣ ಸ್ಥಿರವಾದ ಸಂಬಂಧ ಬೇಕಿದ್ರೆ, ನೀವು ಸತ್ತೋರ ಜೊತೆ ಸಂಬಂಧ ಬೆಳೆಸ್ಬೇಕಷ್ಟೆ (ನಗು). ಇದಕ್ಕೇನೆ ಬಹಳ ಮಂದಿ ದೇವ್ರನ್ನ ಆರಿಸ್ಕೊಳ್ಳೋದು, ಯಾಕಂದ್ರೆ ಅದು ಅಚಲವಾದ್ದು. ಅದನ್ನ ಬೇಕಾದಂಗೆ ನಡೆಸ್ಕೋಬಹುದು. ಹತ್ ದಿನ ಅವನ್ ಬಗ್ಗೆ ಯೋಚ್ನೆ ಮಾಡ್ದೆ, ಹನ್ನೊಂದ್ನೆ ದಿನ ನೆನೆಸ್ಕೊಂಡ್ರೆ, ಅವ್ನು ಅಲ್ಲೇ ಇರ್ತಾನೆ. (ನಗು) ಅದನ್ನೆ ನಿಮ್ ಗಂಡ ಅಥವಾ ಹೆಂಡ್ತಿ ಜೊತೆ ಮಾಡಿ (ನಗು) – ಅಲ್ಲಿ (ನಗು) ಇನ್ನೇನೋ ನಡೆದ್ಬಿಡತ್ತೆ. ನೀವೆಲ್ಲೋ ದೂರ ಹೋದ್ರಿ, busy ಆದ್ರಿ, ಮೂರ್ ವರ್ಷಗಳ ಕಾಲ ದೇವ್ರನ್ ಮರೆತ್ಬಿಟ್ರಿ – ಆಮೇಲೆ ಮತ್ತೆ ನೆನೆಸ್ಕೊಂಡ್ರಿ, ಇನ್ನೂ ಅಲ್ಲೇ ಇರ್ತಾನೆ. (ನಗು) ನಿಮಗೆ ಅಚಲವಾದ ಸಂಬಂಧ ಬೇಕಿದ್ರೆ... ನೀವು... ನೀವು ಮನುಷ್ಯರನ್ನ ಆರ್ಸಕೋಬಾರ್ದು. ಮಾನವ ಸಂಬಂಧಗಳು ಬದ್ಲಾಗೋಂತವ್ಗಳು. ಅವ್ಗಳಿಗೆ ತುಂಬಾಽಽನೇ ಗಮ್ನ ಕೊಡ್ಬೇಕಾಗತ್ತೆ.
ಅದಿಕ್ಕೇ, ಕೆಲವ್ ಜನ್ರು ನಿಶ್ಚಯಿಸ್ತಾರೆ ಜೀವನ್ದಲ್ಲಿ ಇಂತ ವಿಷ್ಯಗಳ್ನ ನಿರ್ವಹಿಸೋಕೆ ಅವ್ರಿಗೆ ಸಮಯ ಮತ್ತು ಶಕ್ತಿ ಇಲ್ಲ ಅಂತ, ಮತ್ತು ಬೇರೊಂದು ದಾರಿ ಹಿಡೀತಾರೆ. ಇಂತ ಯಾವ್ದೇ ಹೊಣೆ ಇಲ್ದೇ ಇರೋವಂತಾದ್ದು. ಅವ್ರು ಕಣ್ಗಳ್ನ ಮುಚ್ಚಿದ್ರೆ, ತಮ್ಮಷ್ಟಕ್ ತಾವ್ ಇರ್ತಾರೆ. ತಮ್ ಸುತ್ತ ಯಾರೀದಾರೆ, ತಮ್ ಸುತ್ತ ಏನಿದೆ ಅಂತ ತಲೆ ಕೆಡಸ್ಕೊಳಲ್ಲ. ಆದ್ರೆ, ನಿಮಿಗ್ ಅದನ್ನ ಮಾಡಕ್ ಆಗಲ್ಲ. ನೀವು ಬೇರೆಯವರ್ನ ಶಿಕ್ಷಿಸ್ಲಿಕ್ ಹೋಗಿ, ನಿಮಗ್ ನೀವೇ ಶಿಕ್ಷೆ ಕೊಟ್ಕೊಳ್ತೀರ ಅಷ್ಟೆ. ಅವ್ರಿಗ್ ಬೇಕಾಗಿದ್ದನ್ನ ಅವ್ರ್ ಮಾಡ್ತಿದಾರೆ. ನೀವು ನಿಮಗೆ ಜೀವನ್ದಲ್ಲಿ ನಿಜ್ವಾಗ್ಲೂ ಏನ್ ಬೇಕು ಅಂತ ನೋಡಿ. ನೀವು ಅವ್ರಿಗ್ ಪ್ರತಿಕ್ರಿಯಿಸಿ ಅವ್ರ್ ತರಾನೆ ಪೆದ್ಪೆದ್ದಾಗ್ ಏನೂ ಮಾಡ್ಬೇಕಿಲ್ಲ. ನೀವು ನಿಮ್ಮಷ್ಟಕ್ಕೆ ಕೂತು, ಇದನ್ನ ಗಮನಿಸ್ಬೇಕು. ನಿಮ್ ಭ್ರಮೆಗಳು ಛಿದ್ರವಾದಾಗ... ನಿಮ್ಗೀಗ ಭ್ರಮೆ ಹೋಗ್ಬಿಟ್ಟಿದೆ. ಅದ್ ತುಂಬಾನೆ ಒಳ್ಳೇದು.
ನಿಮ್ ಭ್ರಮೆಗಳು ಛಿದ್ರವಾಗಿವೆ ಅಂದ್ರೆ, ನಿಮ್ ಜೀವ್ನ, ನಿಮ್ಮನ್ನ ವಾಸ್ತವಿಕತೆಗೆ ಹತ್ರ ತರ್ತ ಇದೆ ಅಂತ, ಅಲ್ವೆ?
ಆದ್ರಿಂದ, ಇದೊಂದು ಸದವ್ಕಾಶ ನಿಮ್ಗೆ; ಕೂತ್ಕೊಂಡ್ ಗಮನ್ಸೋಕೆ, “ನನ್ ಜೀವ್ನದ ಸ್ವರೂಪ ಏನು, ಇದ್ಯಾಕ್ ಹಿಂಗಿದೆ” ಅಂತ. ನೋಡಿ, ಈ ಜೀವದ್ ತುಣುಕು, ಒಂದು ಸಂಪೂರ್ಣವಾದ ಜೀವ, ಅಲ್ವೆ? ಇದೇನು ಅರ್ಧ ಜೀವಾನ? ನೀವ್ ಅರ್ಧ ಜೀವಾನ ಅಥ್ವಾ ಪೂರ್ತಿ ಜೀವಾನ? ಪೂರ್ತಿ ಜೀವ. ಮತ್ತೆ ಯಾಕಿದು ತಾನ್ ಅಪೂರ್ಣ ಅಂತ ಭಾವ್ಸತ್ತೆ? ಯಾಕೆ ಇದನ್ನ ಪೂರ್ಣ ಮಾಡ್ಲಿಕ್ಕೆ ಇನ್ನೊಂದ್ ಜೀವದ್ ಅಗತ್ಯ ಇದೆ ಅಂತ ಭಾವ್ಸತ್ತೆ?
ಯಾಕೆ ಹೀಗೆ? ಅದನ್ನ ತಿಳ್ಕೊಳೊ ಸಮಯ ಬಂದಿದೆ, ಅಲ್ವಾ? ಇದು ಒಂದು ಪೂರ್ತಿ ಜೀವವಾಗಿದ್ರೆ, ಅದು ತನ್ನಲ್ ತಾನೇ ಪೂರ್ಣವಾಗಿದೆ. ಆದ್ರೆ, ಈವಾಗ ನೀವ್ ಅದನ್ನ ಹೇಗ್ ಮಾಡ್ಕೊಂಡಿದೀರ ಅಂದ್ರೆ, ಇದಿಕ್ ಅದನ್ ಬಿಟ್, ಅದನ್ ಬಿಟ್, ಅದನ್ ಬಿಟ್.... ಅದನ್ ಬಿಟ್ ಇರ್ಲಿಕ್ಕಾಗಲ್ಲ.
ಹಾಗಾದ್ರೆ, ಎಲ್ಲೋ ಒಂದ್ ಕಡೆ, ಈ ಜೀವ ಅಪೂರ್ಣವಾಗಿದೆ, ಅಥ್ವಾ ತನ್ ಸ್ವಭಾವದ ಸಂಪೂರ್ಣತೆಯನ್ನ ಅದು ಅರ್ಥಮಾಡ್ಕೊಂಡಿಲ್ಲ ಅಂತ. ಅಲ್ವೆ? ಇದೊಂದು ಸಂಪೂರ್ಣವಾದ ಜೀವ. ಸೃಷ್ಟಿಕರ್ತ ಹಾಗೂ ಸೃಷ್ಟಿ ಎರಡೂ
ಒಟ್ಟಾಗಿರೋವಂತಾದ್ದು. ಬಹಳ ಒಳ್ಳೆ combination. ಈ ಸಮಯವನ್ನ ಉಪಯೋಗಿಸ್ಕೊಳ್ಳಿ. ಬದ್ಕು ನಿಮ್ ಬಾಗಿಲ್ನ ತಟ್ದಾಗ, ಈ ತರ, ನಿಮ್ಮನ್ ನೀವು ಆಳವಾಗಿ ಗಮನಿಸ್ಕೋಬೇಕು, ಸುಮ್ನೆ ಪ್ರತಿಕ್ರಯಿಸಿ ಬೇರೆ ಯಾರನ್ನೋ ಬದ್ಲಾಯಿಸ್ಲಿಕ್ಕೆ ಪ್ರಯತ್ನಿಸೋ ಬದಲು.
ಬೇರೆ ಇನ್ಯಾರಿಗೋ ಶಿಕ್ಷೆ ಕೊಡೋದ್ರಿಂದ ನಿಮ್ ಜೀವ್ನ ಏನೂ ಪರಿವರ್ತನೆ ಹೊಂದಲ್ಲ, ನಿಮ್ ಜೀವ್ನಾನ ಯಾವ್ ರೀತೀನಲ್ಲೂ ಸುಂದ್ರವಾಗೇನೂ ಮಾಡಲ್ಲ. ಒಂದೆರಡ್ ದಿನ ಏನೋ ಒಂದ್ ಕೆಟ್ಟ್ ತೃಪ್ತಿ ಇರತ್ತೆ, ಆಮೇಲೆ, ಅಲ್ಲೂ ತಪ್ ಮಾಡಿದ್ನೇನೋ ಅಂತ ಅನ್ಸತ್ತೆ, ಹೌದು. ಶುರು ಶುರುನಲ್ಲಿ, ಆವೇಶ ಇದ್ದಾಗ, ಅದ್ ನಿಮ್ಗೆ ತೃಪ್ತಿ ಕೊಡತ್ತೆ; ಸ್ವಲ್ಪ ಸಮಯದ್ ನಂತ್ರ, ಆಗಿದ್ದನ್ನ ನೆನೆಸ್ಕೊಂಡಾಗ, ನಿಮಗ್ ನಿಮ್ ಬಗ್ಗೇನೆ ನಾಚ್ಕೆಯಾಗತ್ತೆ. ಆದ್ರಿಂದ, ಆ ದಾರಿನಲ್ಲಿ ಹೋಗ್ಬೇಡಿ. ಇದೊಂದ್ ಅವಕಾಶ. ಯಾರೋ, ಆಧ್ಯಾತ್ಮಿಕದ್ ಆಯಾಮಾನ ನಿಮ್ಗಾಗಿ ತೆರೆದ್ ಕೊಡ್ತ ಇದಾರೆ... ನಿಜವಾಗ್ಲೂ, ಯಾರೋ ನಿಮಗ್ ಅರ್ಥ ಮಾಡಿಸ್ತಿದಾರೆ - ಇವೆಲ್ಲಾನೂ ಎಷ್ಟ್ ನಾಜೂಕಾಗಿದೆ ಅಂತ: ಅವ್ರು ನಿಮಗ್ ಮೋಸ ಮಾಡ್ಬೋದು, ಓಡ್ ಹೋಗ್ಬೋದು, ನಿಮಗ್ divorce ಕೊಡ್ಬೋದು ಅಥ್ವಾ ಸತ್ ಬೀಳ್ಬೋದು, ಅಲ್ವೆ? ಅವ್ರು ಸತ್ ಹೋದ್ರೆ, ನಿಮಗ್ ಮೋಸ ಮಾಡ್ದ್ರು ಅಂತ ನೀವ್ ಅಂದ್ಕೊಳಲ್ಲ, ಅಂದ್ಕೋತೀರ? ಇಲ್ಲ.. ಅದು ಹೇಗೇ ಆಗಿರ್ಲಿ, ನಿಮಗದನ್ನ ನಿರಾಕರಿಸಲಾಯಿತು, ಅಲ್ವೆ? ಮುಖ್ಯವಾದ ವಿಷ್ಯ ಅಂದ್ರೆ, ನಿಮಗ್ ಸಿಗ್ಬೇಕಾಗಿದ್ದಿದ್ ಸಿಗ್ಲಿಲ್ಲ. ಅವ್ರದನ್ನ ಹೇಗ್ ಮಾಡಿದ್ರು ಅನ್ನೋದ್ ಸಮಸ್ಯೆ ಅಲ್ಲ, ನಿಮಗದನ್ನ ನಿರಾಕರಿಸಲಾಯಿತು – ಅವ್ರು ಸಾಯೋದ್ರಿಂದಾನೋ, divorce-ನಿಂದಾನೋ, ಮೋಸ ಮಾಡೋದ್ರಿಂದಾನೋ ಅಥ್ವಾ ಇನ್ಯಾವುದ್ರಿಂದಾನೋ. ಮೂಲ ವಿಷ್ಯ ಏನಂದ್ರೆ ನಿಮಗದನ್ನ ನಿರಾಕರಿಸಲಾಯಿತು.
ನಿಮಗೆ ಏನನ್ನೋ ನಿರಾಕರಿಸಲು ಸಾಧ್ಯವಾಗಿರೋದು ಯಾಕಂದ್ರೆ, ನೀವೊಂದ್ ಒಂದ್ ರೀತಿ ಭ್ರಮೆಯಲ್ಲಿದೀರ. ಇದು ಅರ್ಧ ಜೀವ, ಇದಕ್ಕೆ ಇನ್ನೊಂದು ಅರ್ಧ ಎಲ್ಲಿಂದಲೋ ಬೇಕು ಅಂತ. ಇಲ್ಲ.. ಇದೊಂದ್ ಸಂಪೂರ್ಣವಾದ ಜೀವ. ನೀವೊಂದ್ ಸಂಪೂರ್ಣವಾದ ಜೀವದ್ ತರ ಅರಳ್ದ್ರೆ, ಆವಾಗ್ ನೋಡ್ತೀರ, ಸಂಬಂಧಗಳು ಪೂರ್ತಿಯಾಗಿ ಬೇರೇನೆ ಸ್ವರೂಪದ್ದಾಗಿರುತ್ವೆ. ಸಂಬಂಧಗಳು ಒಂದುಗೂಡೋದು, ಹಂಚಿಕೊಳ್ಳೋದರ ಬಗ್ಗೆಯಾಗಿರುತ್ತೆ. ಹಿಂಡಿ ತೆಗ್ಯೋ ಬಗ್ಗೆ ಅಲ್ಲ. ಅದ್ ಪರಿವರ್ತನೆ ಹೊಂದ್ಬೇಕು. ಅದ್ ಪರಿವರ್ತನೆ ಹೊಂದ್ಬೇಕಂದ್ರೆ ನೀವು ಪರಿವರ್ತನೆ ಹೊಂದ್ಬೇಕು. ಇದು ನಿಮಗ್ ಯಾರೋ ಕೊಟ್ಟಿರೋ ಒಂದ್ ದೊಡ್ ಅವಕಾಶ. ಯಾರೋ ನಂಗ್ ಮೋಸ ಮಾಡ್ದ್ರು ಅಂತ ಹೇಳೋದನ್ನ ನಿಲ್ಸಿ. ಯಾರೋ ನನ್ನನ್ನ ಭ್ರಮೆಯ ಅವಸ್ಥೆಯಿಂದ ಪರಮ ಸತ್ಯದ್ ಕಡೆಗೆ ಕೊಂಡೊಯ್ತಾ ಇದಾರೆ ಅಂತ ಹೇಳಿ. ಅವ್ರಿಗ್ ಧನ್ಯವಾದ ಹೇಳ್ಬೇಕು. ಕೃತಜ್ಞರಾಗಿರ್ಬೇಕು.
ನಿಮ್ಮನ್ನ ಭ್ರಮೇಲಿಟ್ಟಿರೋ ಬದ್ಲು, ನಿಮ್ಮನ್ನ ಅವ್ರ್ ಜೀವನ್ದಲ್ಲಿ ಜೀವನ್ಪರ್ಯಂತ ಉಳುಸ್ಕೊಳ್ಳೋ ಬದ್ಲು, ಇಷ್ಟ್ ಬೇಗ, ನಿಮಗ್ ಇದನ್ನ ಅರ್ಥ ಮಾಡಿಸ್ತಾ ಇದಾರೆ (ನಗು) ಇಲ್ಲಾಂದ್ರೆ, ನೀವ್ ಸಾಯೋ ಕಾಲ್ದಲ್ಲಷ್ಟೆ ನಿಮ್ಗಿದ್ ಗೊತ್ತಾಗತ್ತೆ (ನಗು). ಹೌದು, ಸಾಯ್ತಾ ಇರ್ಬೇಕಾದ್ರೆ ಗೊತ್ತಾಗತ್ತೆ. ಸಾಯ್ಬೇಕಾದ್ರೆ “ನಂಗ್ ಹೆದ್ರಿಕೆ ಆಗ್ತಿದೆ, ಯಾಕ್ ನೀನೂ ನನ್ ಜೊತೆ ಬರ್ಬಾರ್ದು?” ಅಂತ ನೀವಂದ್ರೆ, ಅವರು “ಇಲ್ಲಾಪ್ಪ" ಅಂತಾರೆ (ನಗು). ಆದ್ರಿಂದ ಕೊನೆ ಘಳ್ಗೆನಲ್ಲಿ ಗೊತ್ತಾಗೊ ಬದ್ಲು, ಈವಾಗ್ಲೇ ಗೊತ್ತಾಗೋದು ವಾಸಿ. (ನಗು)


