ಸದ್ಗುರುಗಳು ಇಲ್ಲಿ ಶ್ರೀರಾಮ ಮತ್ತು ಯೇಸುವಿನ ಗುಣಗಳಲ್ಲಿರುವ ಸಾಮ್ಯತೆಯನ್ನೂ, ಅವರುಗಳು ಯಾಕೆ ಇಂದಿಗೂ ಅತ್ಯಂತ ಸಂಗತರಾಗಿದ್ದಾರೆ ಎಂಬುದನ್ನೂ ತೋರಿಸುತ್ತಾರೆ. ನಾವು ಇವರನ್ನು ಮಹಾನ್ ಎಂದು ಪರಿಗಣಿಸಿ ಪೂಜಿಸುವುದು ಅವರು ಅಂದಿನ ಮಹಾ ಯಶಸ್ವೀ ವ್ಯಕ್ತಿಗಳು ಎಂದೇನೂ ಅಲ್ಲ, ಆದರೆ ಅವರು ತಮ್ಮ ಜೀವನದಲ್ಲಿ ದುರಂತಗಳ ಮೇಲೆ ದುರಂತಗಳು ಬಂದರೂ ಅವನ್ನು ಮೀರಿ ನಿಂತಿದ್ದರು, ಮತ್ತು ತಮ್ಮ ಸ್ಥಿರತೆಯನ್ನು, ಸಮತ್ವವನ್ನು ಕಳೆದುಕೊಳ್ಳಲಿಲ್ಲ ಎಂಬುದಕ್ಕಾಗಿ. ಆದ್ದರಿಂದ ಅವರು ನಿಜವಾಗಿ ಇದ್ದರೋ ಇಲ್ಲವೋ ಎಂಬ ಇತಿಹಾಸಕಾರರ ಗೋಜಲಿಗೆ ಬೀಳದೆ ಅವರ ಜೀವನವನ್ನು ನಮಗೆ ಒಂದು ಪ್ರೇರಣೆಯನ್ನಾಗಿ ಮಾಡಿಕೊಂಡು ಅವರ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು, ನಮಗೆ ಮುಖ್ಯವಾಗುವುದು ಅದಷ್ಟೆ ಎಂದು ಕಿವಿಮಾತು ಹೇಳುತ್ತಾರೆ.
Navu ShriRama mattu Yesu Kristarannu poojisuvudu Eke?
ಲಿಪ್ಯಂತರ:
ರಾಮನನ್ನ ಉದಾಹರಣೆಯನ್ನಾಗಿ ತೊಗೊಳೋಣ, ಏಕೆಂದ್ರೆ ರಾಮ ಭಾರತ ದೇಶದಲ್ಲಿ ಒಂದು ಮಹಾನ್ ಆದರ್ಶವಾಗಿದಾನೆ. ಅವ್ನು ರಾಜನಾಗೇ ಹುಟ್ದ, ರಾಜನ್ ಪಟ್ಟವನ್ನ ಏರಿದ. ಆದರೆ ಯಾವುದೋ ಕೆಲವು ವಿಚಿತ್ರ ಸನ್ನಿವೇಶಗಳಿಂದ ಅವ್ನು ಕಾಡಿಗೆ ಹೋಗಿ ಇರಬೇಕಾಯ್ತು, ಹೊಸ್ದಾಗಿ ಮದ್ವೆಯಾದ ತನ್ನ ಹದಿಹರೆಯದ ಹೆಂಡ್ತಿ ಜೊತೆ. ಅವಳು ಯುವರಾಣಿ, ಅರಮನೆಯಲ್ ಬೆಳೆದವಳು. ಆದರೆ ಈಗ ಇವಳ ಜೊತೆ ರಾಮ ಕಾಡಿಗ್ ಹೋಗ್ತಾನೆ. ಈವತ್ತಿನ ದಿನ ಕೆಲವು ಪೆದ್ದು ಫಿಲಂ ಗಳಲ್ಲಿ ಸೀತೆ ಆರಾಮಾಗಿ ಆನಂದದಿಂದ ಕಾಡ್ನಲ್ಲಿ ತೇಲಾಡ್ತಾ ಇರೋ ತರ ನಿಮಗ್ ತೋರಿಸ್ತಾರೆ. ಇಲ್ಲ. ಕಾಡಿಗ್ ಹೋಗಿ ಇದ್ದು ನೋಡಿ. (ನಗು-ಚಪ್ಪಾಳೆ)
ನೀವು ಎಷ್ಟೇ ಸುಂದರವಾಗಿದ್ದೀರಾ ಅಂತ ನೀವ್ ಅಂದ್ ಕೊಂಡಿದ್ರೂ, ಒಂದು ತಿಂಗಳು ಕಾಡ್ನಲ್ಲಿ ಕಳ್ದು ನೋಡಿ (ನಗು) ಆಮೇಲೆ ಯಾರ್ಗೂ ನಿಮ್ಮನ್ನು ಗುರ್ತೇ ಹಿಡಿಯೋದಕ್ಕಾಗಲ್ಲ (ನಗು). ಈಗ ಈ ಯುವರಾಣಿ ಕಾಡ್ನಲ್ ಇರ್ಬೇಕಾಯ್ತು. ಅದೃಷ್ಟವಶಾತ್ ರಾಮನ್ ತಮ್ಮ ಅವನ್ ಜೊತೆಗ್ ಬಂದ. ಕಾಡಿನ್ ಜೀವನದ್ ಕಷ್ಟ ತಿಳ್ಕೊಂಡು ತನ್ನ ಸ್ವಂತ ಕುಟುಂಬವನ್ನೇ ಬಿಟ್ಟು ತನ್ನ ಅಣ್ಣ ಅತ್ತಿಗೆಯ ಸೇವೆ ಮಾಡೋದಿಕ್ಕೆ ಅವನು ಹೊರಟ.
ಈಗ 10 ದಿನಗಳ ಹಿಂದೆ ನಾನು ಆಂಧ್ರ ಪ್ರದೇಶದ ಪ್ರವಾಸದಲ್ಲಿದ್ದೆ - 10-15 ದಿನಗಳ ಹಿಂದೆ. ಒಮ್ಮೆ ಒಂದ್ ಸಣ್ ಊರಲ್ಲಿದ್ದೆ. ಅಲ್ಲಿ 14 ವರುಷದ ಒಂದು ಶಾಲೆಗ್ ಹೋಗೋ ಹುಡುಗಿ ಎದ್ದು ನಿಂತು ಕೇಳಿದ್ಳು, "ಸದ್ಗುರು, ಇದು ಹೇಗೆ ಸಾಧ್ಯ - ಸೀತೇನ ಅಪಹರಣ ಮಾಡಿ ಶ್ರೀಲಂಕದಲ್ಲಿಟ್ಟಿದ್ದಾಗ, ರಾಮ ಅಯೋಧ್ಯೆಯಿಂದ ಶ್ರೀಲಂಕಾವರೆಗೆ ನಡ್ಕೊಂಡ್ ಹೋದ್ನಂತೆ. ಅದು ಹೇಗ್ ಸಾಧ್ಯ, ಅದ್ ಸತ್ಯಾನಾ?" (ನಗು) ಅದಕ್ಕೆ ನಾನ್ ಕೇಳ್ದೆ, "ನೋಡು ನೀನಿನ್ನೂ ಚಿಕ್ಕ ಹುಡುಗಿ, ಒಂದ್ ದಿನ ನಿಂಗೊಬ್ಬ ಹುಡುಗ ಸಿಗ್ತಾನೆ. ಆಗ ಯಾವ್ ತರದ ಹುಡ್ಗ ಸಿಗ್ಬೇಕೂಂತ ನಿನ್ನಾಸೆ - ನೀನು ಎಲ್ಲಾದ್ರೂ ನಾಪತ್ತೆಯಾದಾಗ ಎಲ್ಲಿದ್ರೂ ನಿನ್ನನ್ನು ಹುಡುಕ್ಕೊಂಡು ನಡ್ಕೊಂಡು ಬರೋಂತವ್ನಾ ಅಥವಾ ಅದೆಲ್ಲಾ practical ಅಲ್ಲ ಅಂತ ಹೇಳೋಂತವ್ನಾ? (ನಗು) ಮತ್ತು ಪಕ್ಕದ್ ಮನೇಲಿರೋ ಇನ್ನೊಬ್ಬಳನ್ನು ಕಂಡುಕೊಳೋಂತವ್ನಾ? (ನಗು) ನಿನ್ ಆಯ್ಕೆ ಯಾವುದು?". 14 ವರುಷದ ಬಾಲಕಿಗೂ ಸಹ ಗೊತ್ತು, ತನ್ನನ್ನು ಎಲ್ಲಿದ್ರೂ ಹುಡುಕಿಕೊಂಡು ಬರೋವಂತ ಹುಡುಗನೇ ಬೇಕು ಅಂತ. ಆನಂತರ ರಾಮ ಅಲ್ಲಿಗ್ ಹೋದ. ಕೆಲವು ತಮಿಳುಗರನ್ನು ಸೇರಿಸ್ದ, ಒಂದ್ ಸೇನೇನ್ ಕಟ್ದ (ನಗು) - ಹೌದು ಹೌದು, ಅದು ತಮಿಳು ಸೇನೆನೇ (ನಗು). ಆಮೇಲೆ ಯುದ್ಧ ಮಾಡ್ದ, ಶ್ರೀಲಂಕಾಕ್ಕೆ ಹೋದ, ಇಡೀ ನಗರವನ್ನೇ ಸುಟ್ಟು ಭಸ್ಮಮಾಡ್ದ, ತನ್ನ ಹೆಂಡ್ತೀನ ವಾಪಸ್ ತಂದ, ಬಹಳ ಕಷ್ಟದಿಂದ.
ಈ ಯತ್ನದಲ್ಲಿ ತನಗೆ ಆಪ್ತರಾದ ಬಹಳಷ್ಟು ಜನರನ್ ಕಳ್ಕೊಂಡ, ಆದರೆ ತನ್ ಹೆಂಡ್ತೀನ ವಾಪಸ್ ತಂದ. ಆದ್ರೆ ರಾಜಕೀಯ ಒತ್ತಡಗಳಿಂದಾಗಿ, ಅವಳನ್ನು ಅವ್ನು ಅಗ್ನಿಪರೀಕ್ಷೆಗೆ ಒಳಪಡಿಸ್ಬೇಕಾಯ್ತು - ಈ ದಿನಗಳ ಏನೋ ಒಂದ್ ಪರೀಕ್ಷೆ. ಇದಾದನಂತರ ಅವಳನ್ನು ತನ್ನ ಮಹಾರಾಣಿಯನ್ನಾಗಿ ಮಾಡಿ ರಾಜ್ಯವನ್ನು ಆಳತೊಡಗಿದ. ಮತ್ತೊಮ್ಮೆ ರಾಜಕೀಯ ಪರಿಸ್ಥಿತಿಗಳು ಅವನ್ ಮೇಲೆ ಒತ್ತಡ ಹೇರಿದ್ವು... ಅವ್ಳು ಗರ್ಭಿಣಿಯಾಗಿದ್ಳು. ಆ ಸ್ಥಿತಿಯಲ್ಲಿ ಅವಳನ್ನ ಮತ್ತೆ ಕಾಡಿಗೆ ಕಳ್ಸ್ ಬೇಕಾಯ್ತು. ಆಗ ಸೋನೋಗ್ರಾಮ್ ಏನೂ ಇಲ್ಲ (ನಗು). ಹಾಗಾಗಿ ಅವ್ನಿಗೆ ಅದು ಗಂಡು ಮಗುವೋ, ಹೆಣ್ಣು ಮಗುವೋ, ಗಂಡು ಮಕ್ಕಳೋ, ಅಥವಾ ಹೆಣ್ಣು ಮಕ್ಕಳೋ ಗೊತ್ತಿಲ್ಲ. ಅವಳು ಕಾಡಿಗೆ ಹೋಗಿ ಇಬ್ಬರು ಗಂಡು ಮಕ್ಕಳಿಗೆ ಜನ್ಮ ಕೊಟ್ಳು - ಅವಳಿ ಜವಳಿ. ಆನಂತರ, ಅವರಿಬ್ರೂ ತನ್ ಸ್ವಂತ ಮಕ್ಕಳೇ ಅಂತ ಗೊತ್ತಿಲ್ದೇ ಅವ್ನು ಅವರ್ ಜೊತೆ ಯುದ್ಧಾನೇ ಮಾಡ್ಬಿಟ್ಟ. ಅವ್ನು ಅವ್ರನ್ನ ಕೊಲ್ಲೋ ಸಾಧ್ಯತೇನೂ ಇತ್ತು, ತನ್ ಮಕ್ಳೂಂತ ಗೊತ್ತಿಲ್ದೇ. ನೀವು ಹೇಗೋ ಯಾವ್ದೋ ಕಾರಣದಿಂದ ಆಕಸ್ಮಿಕವಾಗಿ ನಿಮ್ದೇ ಮಕ್ಕಳನ್ನ ಕೊಲ್ಲುವಂತಾದ್ರೆ, ಅದಕ್ಕಿಂತ ದೊಡ್ಡ ದುರಂತ ಬೇರೇನಿಲ್ಲ, ಅಲ್ವಾ? ಅತ್ಯಂತ ಘೋರವಾದದ್ದದು. ಅವನು ಅದಕ್ಕೆ ಬಹಳ ಹತ್ರದಲ್ಲಿದ್ದ, ಅವ್ರನ್ನ ಹೆಚ್ಚುಕಮ್ಮಿ ಕೊಂದೇಬಿಟ್ಟಿದ್ದ. ಆದ್ರೆ, ಅದೃಷ್ಟವಶಾತ್ ಅವರು ಯುದ್ಧದಲ್ಲಿ ಸಾಯ್ಲಿಲ್ಲ. ಆನಂತರ ಅವಳು ಆ ಕಾಡಿನಲ್ಲೇ ತೀರ್ಕೊಂಡ್ಳು, ಅವ್ನನ್ನ ಇನ್ನೊಮ್ಮೆ ನೋಡ್ಲೇ ಇಲ್ಲ.
ಇದನ್ನ ನೀವು ಯಶಸ್ವಿ ಜೀವನಾಂತ ಕರೀತೀರಾ? (ನಗು) ನಾನ್ ಕೇಳ್ತಾ ಇದೀನಿ ಇದನ್ನ ನೀವು ಯಶಸ್ವಿ ಜೀವನಾಂತ ಕರೀತೀರಾ? ಇಲ್ಲ. ಆದರೆ ನಾವು ಅವನನ್ನ ಪೂಜಿಸ್ತೇವೆ, ಅವ್ನು ಅಂದಿನ್ ಕಾಲದ ಮಹಾಯಶಸ್ವಿ ವ್ಯಕ್ತಿ ಅಂತೇನೂ ಅಲ್ಲ. ಆತನ ಜೀವನದಲ್ಲಿ ನಡೆದ ದುರಂತಗಳಲ್ಲಿ ಯಾವುದಾದರೂ ಒಂದು ನಿಮ್ಮ ಬದುಕಿನಲ್ಲಿ ನಡೆದ್ರೂ, ಬಹಳಷ್ಟು ಜನ ಚೂರುಚೂರಾಗಿ ಹೋಗ್ತಾರೆ, ಉಳಿದ ಜೀವನವನ್ನಿಡೀ ದುಃಖದಲ್ ಕಳೀತಾರೆ. ಆದರೆ, ಅದೇನೇ ಆದ್ರೂ ಸಹ, ಅವ್ನು ಒಮ್ಮೇನೂ ಮನಸ್ನ ಕಹಿ ಮಾಡ್ಕೊಳ್ಳಿಲ್ಲ, ಕುಪಿತನಾಗ್ಲಿಲ್ಲ, ದ್ವೇಷಭಾವನೆಗ್ ಒಳಗಾಗ್ಲಿಲ್ಲ. ಮಾಡ್ಬೇಕಾದ ಎಲ್ಲಾ ಕಾರ್ಯಗಳನ್ನೂ ಮಾಡ್ದ. ಯುದ್ಧಗಳನ್ನೂ ಮಾಡ್ದ. ಆದ್ರೆ ಯಾವತ್ತೂ ಕೋಪಕ್ಕೊಳಗಾಗ್ಲಿಲ್ಲ, ದ್ವೇಷಭಾವನೆಗ್ ಒಳಗಾಗ್ಲಿಲ್ಲ, ಮನ್ಸ್ ಕಹಿ ಮಾಡ್ಕೊಳ್ಳಿಲ್ಲ. ಜೀವನ ಅವ್ನೆಡೆಗೆ ದುರಂತದ ನಂತರ ದುರಂತವನ್ನ ಎಸೆದರೂ ಸಹ... ಅವ್ನು ಅವುಗಳನ್ನ ಮೀರಿ ನಿಂತಿದ್ದ. ನಾವು ಪೂಜಿಸೋದು ಅದನ್ನ.
ಏಕೆಂದ್ರೆ, ಮೂಲಭೂತವಾಗಿ ಜೀವನ ಅಂದ್ರೆ ಇಷ್ಟೇ. ಪ್ರಪಂಚ ನಿಮ್ ಕಡೆ ಏನನ್ ಎಸಿಯುತ್ತೋ ಅದು 100% ನಿಮ್ಮ ಕೈಯಲ್ಲಿಲ್ಲ. ಸ್ವಲ್ಪಮಟ್ಟಿಗೆ ಅವುಗಳನ್ನ ನಾವು ನಿಯಂತ್ರಿಸ್ಬಹುದಷ್ಟೇ. ಪ್ರಪಂಚ ನಿಮ್ ಕಡೆ ಏನನ್ನಾದ್ರೂ ಎಸೀಬಹುದು. ನಮಗ್ಗೊತ್ತಿಲ್ಲ ಅದು ಏನು ಎಸೀಬಹುದು ಅಂತ. ಅದು ನಿಮ್ ಕಡೆ ರೋಗವನ್ನ ಎಸೀಬಹುದು, ಸಾವನ್ನ ಎಸೀಬಹುದು, bullet ಎಸೀಬಹುದು, ಅವಮಾನವನ್ನ ಎಸೀಬಹುದು, ಏನೇನೆಲ್ಲಾ ಎಸೀಬಹುದು. ಆದ್ರೆ ಅದ್ರಿಂದ ನೀವು ನಿಮ್ಮೊಳಗೆ ಏನು ಮಾಡ್ಕೊಳ್ತೀರಿ ಅನ್ನೋದು 100% ನಿಮ್ದೇ ಆಯ್ಕೆ. ಇದೊಂದು ವಿಚಾರವನ್ನ ನೀವು ನಿಮ್ಮ ನಿಯಂತ್ರಣಕ್ ತಂದ್ಕೊಂಡ್ರೆ, ಪ್ರಪಂಚವು ನಿಮ್ ಕಡೆ ಏನನ್ ಎಸೆದ್ರೂ ನೀವದನ್ನು ನಿಮ್ಮ ಒಳಿತಿಗಾಗಿ ಪರಿವರ್ತಿಸಿಕೊಳ್ತೀರಿ.
ಇದಾದ್ರೆ, ನಂತ್ರ ನೀವು ಎಲ್ಲಿಗ್ ಹೋಗ್ತೀರಿ, ಯಾವ್ ತರದ ಪರಿಸ್ಥಿತಿಗಳನ್ನು ಎದುರಿಸ್ತೀರಿ, ಸ್ವರ್ಗಕ್ ಹೋಗ್ತೀರೋ ನರಕಕ್ ಹೋಗ್ತೀರೋ ಯಾವ್ದೂ ಒಂದ್ ವಿಷ್ಯಾನೇ ಅಲ್ಲ. ಯಾಕಂದ್ರೆ, ನಿಮ್ ಕಡೆ ಏನೇ ಬಂದ್ರೂ ಸಹ ನೀವದನ್ನ ನಿಮ್ ಒಳಿತನ್ನಾಗಿ ಪರಿವರ್ತಿಸಿಕೊಳ್ತೀರಿ. ನಾವು ಪೂಜಿಸೋದು ರಾಮನ ಈ ಗುಣವನ್ನ. ಈ ಗುಣ ಪೂಜನೀಯವಾದ್ದು. ಯಾಕಂದ್ರೆ, ಇದು ಎಲ್ಲರ ವಿಷ್ಯದಲ್ಲೂ ನಿಜ. ಪ್ರಪಂಚ ನಿಮ್ ಕಡೆ ಹೊಲಸನ್ನ ಎಸೆದ್ರೆ, ನೀವೂ ಹೊಲಸಾಗ್ತೀರಿ. ಪ್ರಪಂಚ ಕಹಿಯನ್ನ ಎಸೆದ್ರೆ, ನೀವೂ ಕಹಿಯಾಗ್ತೀರಿ. ಪ್ರಪಂಚ ಕೋಪವನ್ನ ಎಸೆದ್ರೆ, ನೀವೂ ಕೋಪಗೊಳ್ತೀರಿ. ಹೆಚ್ಚಿನ್ ಜನ್ರು ಜೀವ್ನ ಮಾಡ್ತಾ ಇರೋದು ಈ ರೀತೀನೇ. ರಾಮ ಇದನ್ನೆಲ್ಲಾ ಮೀರಿ ಜೀವ್ಸಿದ್ರಿಂದ ನಾವಂದ್ವಿ - ಅವ್ನು ದೇವ್ರ ತರನೇ.
ಈ ರೀತಿ ಮಹಾಪುರುಷ್ರ ಜೀವನ್ದಲ್ ಆಗಿದ್ದನ್ನ, ಅವರ್ ಜೀವನದಲ್ಲಿ ಆದ ಘಟನೆಗಳ್ನ ನೀವು ನೋಡಿದ್ರೆ, ಅದು ಒಂದು ದೊಡ್ ದುರಂತ.
32 ವರ್ಷ ವಯಸ್ನಲ್ಲಿ ನಿಮ್ಮನ್ನ ಶಿಲುಬೆಗೇರ್ಸಿದ್ರೆ, ತುಂಬ ಭೀಕರವಾದ ಸಾವನ್ನಪ್ಪಿದ್ರೆ, ಅದನ್ನ ನೀವು ಯಶಸ್ವಿ ಜೀವ್ನ ಅಂತ ಕರೀತೀರಾ? ಇಲ್ಲ. ಆದ್ರೆ, ನಾವು ಅವ್ನಿಗೆ ತಲೆಬಾಗ್ತೀವಿ, ಯಾಕಂದ್ರೆ, ಕತೆಪ್ರಕಾರ — ನಮಗ್ಗೊತ್ತಿಲ್ಲ, ಆದ್ರೆ ನಾವು ನಂಬ್ತೀವಿ, ಜನ್ರೆಲ್ಲಾ ಹಾಗೇನೇ ಹೇಳ್ತಾ ಬಂದಿದಾರೆ — ಅವ್ನನ್ನ ಶಿಲುಬೆಗೇರ್ಸಿದಾಗ್ಲೂ ಸಹ ಅವ್ನು ಹೇಳಿದ್ನಂತೆ, "ಅವರಿಗ್ ತಿಳೀದೇ ಮಾಡ್ತಿರೋ ಕೆಲಸ ಇದು, ಅವರನ್ ಕ್ಷಮಿಸು" ಅಂತ. ನಾವು ಅವ್ನಿಗ್ ತಲೆಬಾಗೋದು ಇದಕ್ಕಾಗಿ. ಶಿಲುಬೆಗೇರಿದಾಂತ ಅಲ್ಲ. ಏಕೆಂದರೆ ಶಿಲುಬೆಗೇರಿ ಸಾಯೋದು ಯಶಸ್ವಿ ಜೀವನವಲ್ಲ. ಅಲ್ವಾ? ಆದ್ರೆ ಅವ್ನನ್ನ ಶಿಲುಬೆಗೇರಿಸಿದ್ರೂ ಸಹ ಅವ್ನು ತನ್ನ ಗುಣವನ್ನ ಕಳ್ಕೊಳ್ಳಿಲ್ಲ. ನಾವು ತಲೆಬಾಗೋದು ಅದಕ್ಕಾಗಿ. ನಮಗ್ ಮುಖ್ಯವಾಗೋದು ಅದೇನೇ, ಅವ್ರು ನಿಜ್ವಾಗಿ ಇದ್ರೋ ಇಲ್ವೋ ಅನ್ನೋದಲ್ಲ. ಅವ್ರು ನಮಗೆ ಸ್ಫೂರ್ತಿದಾಯಕರು ಅಷ್ಟೇ. ಅವರುಗಳ ಬಗ್ಗೆ ಹೇಳಿದ್ ಮಾತುಗಳೆಲ್ಲವೂ ವಾಸ್ತವನೋ ಅಲ್ವೋ ಅನ್ನೋದು ಸಹ ನಿಮಗ್ ಅನಗತ್ಯ. ನೀವೇನು ಇತಿಹಾಸಕಾರರಲ್ಲ (ನಗು). ನಿಮ್ಗೆ ಒಂದು ಆದರ್ಶ ಬೇಕು, ಉನ್ನತ ಸಾಧ್ಯತೆಗಳೆಡೆಗೆ ನೀವು ಬೆಳೆಯೋದಿಕ್ಕೆ, ಅಷ್ಟೇ. ನಿಮಗೇನು, ಕೃಷ್ಣ ಇದ್ನೋ ಇಲ್ವೋ, ಜೀಸಸ್ ಇದ್ನೋ ಇಲ್ವೋ, ನಿಮಗೇನು? 2000 ವರ್ಷಗಳ ಹಿಂದೆ ಒಬ್ಬ ಮನುಷ್ಯ ಇದ್ನೋ ಇಲ್ವೋ, ಅಥ್ವಾ ಅದು ಯಾರದೋ ಕಲ್ಪನೇನಾ, ನಮಗೇನು? ನಮಗ್ ಮುಖ್ಯ ಆಗೋದು ಅವರುಗಳು ತೋರಿಸಿದ ಗುಣಗಳು ಅಲ್ವಾ? ನಾವು ಇಂತಹ ಗುಣಗಳನ್ನ ಮಹತ್ತರವಾದ್ದೂಂತ ಗುರ್ತಿಸ್ತೀವಿ. ಹಾಗೂ ನಮಗಾಗೋಷ್ಟರ ಮಟ್ಟಿಗೆ ಅವುಗಳನ್ನು ಆಚರಿಸೋದಕ್ಕೆ ಪ್ರಯತ್ನಿಸ್ತೀವಿ. ನಮಗ್ ಮುಖ್ಯವಾಗೋದು ಅದಷ್ಟೆ.