Ee ondu vishayavashte Bhaaratavannu ondaagidaballadu
ಲಿಪ್ಯ೦ತರ
ಪ್ರಶ್ನೆ: ನಮಸ್ಕಾರ ಸದ್ಗುರುಗಳೇ. ನಿಮ್ಮ ಪ್ರಕಾರ ಇಂದು ಭಾರತದ ಅತ್ಯಂತ ದೊಡ್ಡ ಬಲ ಯಾವುದು?
ಸದ್ಗುರು: ಭಾರತದ ಅತ್ಯಂತ ಮೂಲಭೂತವಾದ ಬಲ ಏನು ಅಂದ್ರೆ, ನಮ್ದು ಒಂದು ಅನ್ವೇಷಕರ ನಾಡು. ಸತ್ಯ ಮತ್ತು ಮುಕ್ತಿಯ ಅನ್ವೇಷಕರು. ಬರೀ ನಂಬಿಕೆಯಲ್ಲಿ ತೃಪ್ತರಾಗೋ ಜನ್ರಲ್ಲ ನಾವು. ನಮ್ದು ದೇವರಿಲ್ಲದಂತ ರಾಷ್ಟ್ರ. ಯಾವಾಗ್ಲೂ, ಯಾವಾಗ್ಲೂ, ಸಾವಿರಾರು ವರ್ಷಗಳಿಂದ ನಮಗೆ ಹೇಳಿರೋದು, "ನಿಮ್ಮ ಜೀವನ ನಿಮ್ಮದೇ ಕರ್ಮ". ಅಂದ್ರೆ ನಿಮ್ ಜೀವನ ನಿಮ್ಮದೇ ರಚನೆ. ಇದೇ ನಮ್ ಮೂಲಭೂತ ಬಲ. ಅದನ್ನ ನಾವು ವಾಪಸ್ ತರ್ಬೇಕು. ನಮ್ದು ಅನ್ವೇಷಕರ ನಾಡು. ಯಾರೋ ಏನೋ ಹೇಳಿದ್ರೂಂತ ನಾವು ಸುಮ್ನೆ ನಂಬೋವ್ರಲ್ಲ. ನಮಗದನ್ನ ಅನ್ವೇಷಿಸಿ ಅನುಭವಪೂರ್ವಕವಾಗಿ ತಿಳ್ಕೋಬೇಕು. ಯಾರು ಹೇಳಿದ್ರು ಅನ್ನೋದು ಮುಖ್ಯ ಅಲ್ಲ. ಕೃಷ್ಣ ಹೇಳಿರ್ಬಹುದು, ರಾಮ ಹೇಳಿರ್ಬಹುದು, ಶಿವ ಹೇಳಿರ್ಬಹುದು, ಬುದ್ಧ ಹೇಳಿರ್ಬಹುದು, ಯಾರೇ ಇರ್ಲಿ. ನೀವು ಅನ್ವೇಷಿಸಲೇ ಬೇಕು. ಅವ್ರನ್ನ ಬಹಳ ಗೌರವಿಸ್ತೀವಿ. ಆದ್ರೆ ನಮಗದು ಸ್ವಂತ ಅನುಭವವಾಗ್ಬೇಕು. ನಾವಿದನ್ನ ತೊರೆದ್ಬಿಟ್ರೆ, ನಾವು ಯಾಕೆ ಭಾರತೀಯರು ಅನ್ನೋದೇ ಗೊತ್ತಿರಲ್ಲ ನಮ್ಗೆ, ಮತ್ತು ಭಾರತೀಯರಾಗಿರೋದಿಕ್ಕೂ ಇಷ್ಟ ಪಡಲ್ಲ. ಈಗ, ತುಂಬ ತೀವ್ರವಾದ ರೀತಿಯಲ್ಲಿ ಅನ್ವೇಷಣೆ ಕಡಿಮೆಯಾಗಿದೆ ಈ ದೇಶದಲ್ಲಿ. ಇದರಿಂದಾಗಿ, ಇವತ್ತು ಪಾಶ್ಚಾತ್ಯ ದೇಶಗಳು ತಮ್ visa ವನ್ನೇನಾದ್ರೂ ಮುಕ್ತವಾಗಿಸ್ಬಿಟ್ರೆ, 80% ಭಾರತೀಯರು ಈಜ್ಕೊಂಡು ಹೋಗ್ಬಿಡ್ತಾರೆ ಅಲ್ಲಿಗೆ. ಇದರರ್ಥ, ನಾವು 80 ಕೋಟಿ ಜನರನ್ನ ಬಲವಂತವಾಗಿ ದೇಶದೊಳಗೆ ಕೂಡಿಹಾಕಿದೀವಿ ಅಂತ! ಹೀಗಾದ್ರೆ ಇದು ಒಂದು ಜೈಲು. ರಾಷ್ಟ್ರವಲ್ಲ. ಇದನ್ನ ಒಂದು ರಾಷ್ಟ್ರವಾಗಿಸ್ಬೇಕಾದ್ರೆ, ನಾವು ಅನ್ವೇಷಕರ ನಾಡು ಅನ್ನೋ ನಮ್ಮ ಮೂಲಭೂತ ಮೌಲ್ಯವನ್ನ ಅರ್ಥಮಾಡ್ಕೋಬೇಕು. ಈ ಅನ್ವೇಷಣೆಯನ್ನ ಆಳವಾಗಿಸದಿದ್ರೆ, ನಮ್ಮಲ್ಲಿ ಅಧ್ಯಾತ್ಮಿಕತೆ ಇಲ್ಲದಿದ್ರೆ, ನಾವು ಒಟ್ಟಾಗಿರೋದಿಕ್ಕೆ ಕಾರಣಾನೇ ಇರೋದಿಲ್ಲ. ಯಾಕಂದ್ರೆ, ನಮ್ಮ ರೂಪ, ನಮ್ಮ ಊಟ, ಉಡುಗೆ ತೊಡುಗೆ, ನಮ್ಮ ಭಾಷೆ ಎಲ್ಲ ವಿಭಿನ್ನವಾಗಿವೆ. ಒಟ್ಟಾಗಿರೋದಿಕ್ಕೆ ಕಾರಣಾನೇ ಇರೋದಿಲ್ಲ. ಈ ಮೂಲಭೂತ ಅಧ್ಯಾತ್ಮಿಕ ಎಳೆಯೇ ನಮ್ಮ ರಾಷ್ಟ್ರವನ್ನ ಸಡಿಲವಾಗಿ ಒಂದಾಗಿ ಹಿಡಿದಿಟ್ಟಿದೆ. ಇದನ್ನ ತುಂಡರಿಸಿದ್ರೆ, ಅದು ನಶಿಸಿಬಿಡುತ್ತೆ. ನಮ್ಮ ರಾಷ್ಟ್ರದ ಏಕತೆಗೇ ಸಂಚಕಾರ ಬರುತ್ತೆ, ಈ ಎಳೆಯನ್ನ ತುಂಡರಿಸಿದ ತಕ್ಷಣ. ಹಾಗಾಗಿ ಇದು ನಿಮ್ಮಂತ ಯುವಜನರ ಕೈಯಲ್ಲಿದೆ. ಇದನ್ನ ನಿಮ್ಮೊಳಗೆ ಮತ್ತು ಸುತ್ತಮುತ್ತಲಿನವ್ರಲ್ಲಿ ಪ್ರಬಲಗೊಳಿಸ್ಬೇಕು. ಮತ್ತು ನಿಮ್ಮ ಬಟ್ಟೆಬರೆಯ 20% ಭಾರತೀಯವಾಗ್ಬೇಕು. ಧನ್ಯವಾದಗಳು.