ಮನುಷ್ಯನ ಶರೀರ ವ್ಯವಸ್ಥೆಯು ಭೂಮಿಯ ಮೇಲಿನ ಅತ್ಯಂತ ಸೂಕ್ಷ್ಮ ಮತ್ತು ಪರಿಷ್ಕೃತವಾದ ಯಂತ್ರವಾಗಿದೆ. ಆದರೆ ದುರದೃಷ್ಟವಶಾತ್ ಹೆಚ್ಚಿನವರು ಅದನ್ನು ಹೇಗೆ ನಡೆಸಬೇಕೆಂದು ತಿಳಿದುಕೊಳ್ಳಲು ತಮ್ಮ ಆಂತರ್ಯದ ಕಡೆಗೆ ಗಮನವನ್ನೇ ಹರಿಸಿಲ್ಲ, ಮತ್ತು ಅದನ್ನು ಒಬ್ಬ ಕಮ್ಮಾರನ ತರಹ ಒರಟಾಗಿ ನಡೆಸುತ್ತಿದ್ದಾರೆ. ಇದರಿಂದ ಅತ್ಯಂತ ಸರಳ ಮತ್ತು ಮೂಲಭೂತ ವಿಷಯವಾದಂತಹ ಶಾಂತಿಯನ್ನು ಹೊಂದುವುದೇ ದುಸ್ಸಾಧ್ಯವೆನಿಸಿಬಿಟ್ಟು, ಶಾಂತಿಯನ್ನೇ ಜೀವನದ ಪರಮಗುರಿಯನ್ನಾಗಿಸಿ ಬಿಟ್ಟಿದ್ದೇವೆ!

Computer Annu Kammaara Nadesidaaga!

ಲಿಪ್ಯಂತರ:

ಪ್ರಶ್ನೆ: ನಮ್ಮನ್ನು ನಾವು ಸಂಪೂರ್ಣವಾಗಿ ತಿಳ್ಕೊಳೋದು ಹೇಗೆ?

ಸದ್ಗುರು: ಪರಿಚಯ ಮಾಡಿಸ್ಕೊಬೇಕು, ಅಷ್ಟೆ. ನೀವು ನಿಮ್ ಸುತ್ ಮುತ್ತ ಇರೋ ವಿಷ್ಯಗಳಿಗೆ ಬಹಳ ಗಮನವನ್ನ ಕೊಡ್ತಾ ಇದೀರ, (ಕೈ ಸನ್ನೆ ಮಾಡುತ್ತ) ಆದ್ರೆ ಇದ್ರ ಬಗ್ಗೆ ಸಾಕಷ್ಟು ಗಮನ ಕೊಡ್ತಾ ಇಲ್ಲ. ಆದರೆ ನಿಮ್ ಜೀವನದ ಗುಣಮಟ್ಟ ನಿರ್ಧಾರ ಆಗೋದು ನೀವು ಇದನ್ನ ಹೇಗ್ ಇಟ್ಕೊಂಡಿದ್ದೀರ ಅನ್ನೋದ್ರಿಂದ. ಹೌದೋ ಅಲ್ವೋ? ಈ ಕ್ಷಣ, ನೀವ್ ಯಾವ್ ತರದ್ ಬಟ್ಟೆ ಹಾಕ್ಕೊಂಡಿದ್ದೀರ, ಯಾವ್ ತರದ್ ಕಾರ್ ಹೊರಗೆ park ಮಾಡಿದ್ದೀರ, ಯಾವ್ ತರದ್ ಮನೇನಲ್ ವಾಸಿಸ್ತಿದೀರ – ಇವು ಯಾವ್ದೂ ನಿಮ್ ಜೀವನದ ಗುಣಮಟ್ಟವನ್ನ ನಿರ್ಧರಿಸಲ್ಲ. ಈ ಕ್ಷಣದಲ್ಲಿ, ನಿಮ್ಮೊಳಗೆ ನೀವು ಎಷ್ಟು ಸಂತೋಷವಾಗಿದ್ದೀರ ಅನ್ನೋದು ನಿಮ್ಮ ಜೀವನದ ಗುಣಮಟ್ಟವನ್ನ ನಿರ್ಧರಿಸುತ್ತೆ; ಅಲ್ವಾ? ಇದರ ಬಗ್ಗೆ ಏನೂ ಮಾಡಲಾಗಿಲ್ಲ.

ಇದು ಯಾವುದ್ರದ್ದೋ ಫಲಿತಾಂಶವಾಗಿ ಬರತ್ತೆ ಅಂತ ನೀವು ಅಂದ್ಕೊಂಡು ನಿಮ್ ಸಂತೋಷಕ್ಕೆ ಅಸಾಧ್ಯವಾದ ಗುರಿಗಳನ್ನ ಇಟ್ಕೋತಿದೀರ. “ನಾನ್ ಸಂತೋಷವಾಗಿರ್ಬೇಕಂದ್ರೆ, ನನ್ ಹೆಂಡ್ತಿ ಹಿಂಗಿರ್ಬೇಕು, ನನ್ ಗಂಡ ಹಂಗಿರ್ಬೇಕು, ನನ್ ಮಕ್ಳು ಹಿಂಗಿರ್ಬೇಕು, ಪ್ರಪಂಚ ಇನ್ಯಾವುದೋ ತರ ಆಗ್ಬೇಕು” ಇವು ನಿಮ್ ಸಂತೋಷಕ್ಕೆ ಶಾಂತಿಗೆ ನೀವು ಹಾಕ್ಕೋತ ಇರೋ ಅಸಾಧ್ಯವಾದ ಷರತ್ತುಗಳು.

ಈಗ ನೀವು ಶಾಂತಿಯಷ್ಟೆ ಸಾಕು ಅಂತ ರಾಜಿ ಮಾಡ್ಕೊಂಡಿದ್ದೀರ – ನೀವು ರಾಜಿ ಮಾಡ್ಕೊಂಡಿದ್ದೀರ ಅಂತ ಯಾಕ್ ಹೇಳ್ತ ಇದ್ದೀನಿ ಅಂದ್ರೆ, ಹೆಚ್ಚಿನ ಜನ ಪರಮಾನಂದ ಹಾಗೂ ಭಾವಪರವಶತೆಯ ಹಂಬಲವನ್ನೇ ಬಿಟ್ ಬಿಟ್ಟಿದ್ದಾರೆ. “ನಾನ್ ನೆಮ್ಮದಿಯಾಗ್ ಇದ್ರೆ, ಅಷ್ಟ್ ಸಾಕು” ಆಧ್ಯಾತ್ಮಿಕ ಗುರುಗಳು ಅಂತ ಕರೆಸ್ಕೊಳ್ಳೋರು ಸಹ ಶಾಂತಿಯೇ ಜೀವನದ ಪರಮ ಗುರಿ ಅಂತ ಹೇಳ್ಕೊಂಡು ಓಡಾಡ್ತಿದಾರೆ.

ಶಾಂತಿ ನಿಮ್ ಜೀವನದ ಪರಮ ಗುರಿಯಲ್ಲ. ನೀವು ಇವತ್ತಿನ ಮಧ್ಯಾಹ್ನದ್ ಊಟನ ಆಸ್ವಾದಿಸಬೇಕಿದ್ರೆ, ನೀವು ಶಾಂತಿಯಿಂದಿರಬೇಕು - ಹೌದೋ ಅಲ್ವೋ? ನೀವು ಶಾಂತಿಯುತರಾಗಿಲ್ದೇ ಇದ್ರೆ, ನೀವು ಜೀವನದಲ್ಲಿ ಏನನ್ನೂ ಉಪಯುಕ್ತವಾದ ರೀತೀಲಿ ಮಾಡ್ಲಿಕ್ಕಾಗಲ್ಲ. ಶಾಂತಿಯಿಂದ ಇರೋದು ಅಂದ್ರೆ, ಮೂಲಭೂತವಾಗಿ, ನೀವು ನಿಮ್‌ ಮನಸ್ಸನ್ನ ಅಸ್ತವ್ಯಸ್ತಗೊಳಿಸ್ದೇ ಇರೋದು ಅಂತ. ಶಾಂತಿಯಿಂದ ಇರೋದು ಅಂದ್ರೆ, ನಿಮ್ ಇಡೀ ವ್ಯವಸ್ಥೆ ಆರಾಮವಾಗಿದೆ ಅಂತ. ನಿಮಗ್ ನಿಮ್ ಮನಸ್ಸನ್ನ ಹೇಗ್ ನಡೆಸೋದು ಅಂತ ಗೊತ್ತು; ನಿಮ್ ಭಾವನೆಗಳ್ನ, ಶರೀರನ, ಪ್ರಾಣಶಕ್ತಿಯನ್ನ ಹೇಗ್ ನಿರ್ವಹಿಸೋದು ಅಂತ ಗೊತ್ತು. ನೀವು ಶಾಂತವಾಗಿದ್ದೀರ. ಇದೇನು rocket technology ಅಲ್ಲ; ಇದು ಅತ್ಯಂತ ಸರಳವಾದ್ ವಿಷ್ಯ. ನಿಮ್ ಮನೇಲಿ ಒಂದ್ ನಾಯಿ ಇದೆ. ನೀವ್ ಅದಕ್ಕೆ ಊಟ ಕೊಡ್ತೀರ; ಅದು ಶಾಂತಿಯಿಂದ ಕೂತ್ಕೊಳ್ಳತ್ತೆ – ಪರಮಾನಂದದಿಂದೇನೂ ಅಲ್ಲ, ಆದ್ರೆ ಶಾಂತವಾಗಿ. ಬಹಳ ಸಲ ಅವು ಪರಮಾನಂದದಲ್ಲೂ ಇರ್ತಾವೆ, (ನಗು), ಅಲ್ವಾ? ನಿಮ್ ನಾಯಿಗೆ ಶಾಂತಿಯಿಂದ ಕೂತ್ಕೊಳಕಾಗತ್ತೆ ಅಂದ್ರೆ... ಓಹ್! ಅದಕ್ಕೇನು ನನ್ factory ನ ನಡಸ್ಬೇಕಿಲ್ಲ”. ವಿಷ್ಯ ಅದಲ್ಲ; ಅದಕ್ಕೂ ಅದರದ್ದೇ ಏನೋ ಒಂದ್ ಇರತ್ತೆ ಪಾಪ. (ನಗು)

ನೋಡಿ, ಇದಕ್ಕೆ ನೀವ್ ಮಾಡ್ತಾ ಇರೋ ಬಾಹ್ಯ ಚಟುವಟಿಕೆ ಜೊತೆ ಏನೂ ಸಂಬಂಧ ಇಲ್ಲ. ಇದಕ್ಕೆ ಸಂಬಂಧ ಇರೋದು ನಿಮ್ ಒಳಗಿನ ವ್ಯವಸ್ಥೆಗಳು ಹೇಗೆ ಕೆಲಸ ಮಾಡ್ತಿವೆ ಅನ್ನೋದ್ರ ಜೊತೆ. ಇದರ್ ಅರ್ಥ ಏನಂದ್ರೆ, ನಿಮ್ ದೇಹ, ನಿಮ್ ಮನಸ್ಸು, ನಿಮ್ ಕೆಮಿಸ್ಟ್ರಿ, ನಿಮ್ ಭಾವನೆಗಳು, ನಿಮ್ ಪ್ರಾಣಶಕ್ತಿ, ಇವು ಯಾವ್ದು ನಿಮ್ಮಿಂದ ಸೂಚನೆಗಳನ್ನ ತೊಗೊಳ್ತ ಇಲ್ಲ. ಅವು ತಮ್ಮದೇ ಏನೋ ಮಾಡ್ಕೋತ ಇವೆ. ಯಾವಾಗ ನಿಮ್ machine ನಿಮ್ ಹಿಡಿತದಲ್ಲಿ ಇಲ್ವೋ, ನೆಮ್ಮದಿಯಿಂದ ಇರೋದು ಅಸಾಧ್ಯ.

ಇದು ಹೆಂಗಂದ್ರೆ, ನೀವ್ ನಿಮ್ ಕಾರ್ ನಲ್ಲಿ ಕೂರ್ತೀರ, ರಸ್ತೇನಲ್ಲಿ ನಿಮ್ಗೆ ಈ ಕಡೆ ತಿರಗ್ಬೇಕು – ನೀವು steering ನ ಹೀಗ್ ತಿರಗ್ಸತೀರ, ಆದ್ರೆ ಕಾರ್ ಈ ಕಡೆ ಹೋಗತ್ತೆ (ಕೈ ಸನ್ನೆ ಮಾಡುತ್ತ)—ಇಂತ ಕಾರ್ ನ ಶಾಂತವಾಗಿ drive ಮಾಡಕ್ ಆಗತ್ತ? ಆಗತ್ತ?

ಪ್ರೇಕ್ಷಕರು: ಇಲ್ಲ

ಸದ್ಗುರು: ಇಲ್ಲ. ಆತಂಕ ಸ್ವಾಭಾವಿಕ, ಅಲ್ವಾ? ನಿಮ್ ಗಾಡಿಗ್ ಆಗಿರೋದು ಇದೇ. ಇದ್ರ ಹತೋಟಿ ತಪ್ ಹೋಗಿದೆ, ಮೊದಲ್ನೆದಾಗಿ steering wheel ಎಲ್ಲಿದೆ ಅಂತ ತಿಳ್ಕೊಳೋದಿಕ್ಕೇನೇ ನೀವು ಏನೂ ಮಾಡಿಲ್ಲ. (ನಗು). ಇದು ಕಾರ್ ತರ ಅಷ್ಟು ಸರಳವಾಗಿಲ್ಲ. ಇದೊಂದು super super computer. ಈವಾಗ ಸಮಸ್ಯೆ ಏನಂದ್ರೆ, ಹೆಚ್ಚಿನ ಜನ್ರು ಇದ್ರ keyboard ನ ಹುಡುಕೋದಕ್ಕೂನು ಪ್ರಯತ್ನಿಸಿಲ್ಲ. ಅವರಂದ್ಕೊಂಡಿದಾರೆ ಹೀಗ್ ಏನೋ ಮಾಡಿದ್ರೆ, ಅದು ಹೆಂಗೋ ಕೆಲ್ಸ ಮಾಡತ್ತೆ ಅಂತ. (ನಗು)

ನಿಮ್ಗೆ ಇಂತ ಪರಿಷ್ಕೃತವಾದಂತ machine ಕೊಟ್ಟಿರೋವಾಗ, ನೀವು ಅದನ್ನ ಸರಿಯಾಗಿ ನಡೆಸಿಕೊಂಡಿಲ್ಲ ಅಂದ್ರೆ, ನಿಮ್ಗೆ ಅದು ಬಹಳ ಸಮಸ್ಯೆಗಳನ್ನ ಉಂಟು ಮಾಡತ್ತೆ. ಈಗ ಆಕಸ್ಮಿಕವಾಗಿ ಕೆಲ್ಸ ಮಾಡ್ತಿದೆ. ನೀವು ಇದನ್ನ ತಿಳ್ಕೋಬೇಕು; ಇದು ಹೇಗಿದೆ ಅಂದ್ರೆ, ನೀವು ನಿಮ್ ಕೈಯನ್ನ ಹೀಗ್ ಇಟ್ಕೊಂಡ್ರೆ, ಇದು ಒಂದ್ ರೀತೀಲಿ ಉಸಿರಾಡತ್ತೆ; ಸುಮ್ನೆ ಇದನ್ನ ತಿರುಗಿಸಿದರೆ, ನೀವ್ ಉಸಿರಾಡೋ ರೀತಿ, ನಿಮ್ ಶ್ವಾಸಕೋಶದಲ್ಲಿ ಉಸಿರಾಟದ್ ಕ್ರಮವೇ ಬದಲಾಗತ್ತೆ. ಬೇಕಿದ್ದರೆ ಪ್ರಯತ್ನ ಮಾಡ್ ನೋಡಿ, ಸಮಯ ಸಿಕ್ಕಾಗ. ಹೀಗೆ..... ಹೀಗೆ. (ಕೈ ಸನ್ನೆ ಮಾಡುತ್ತ)

ನಾನ್ ಹೇಳ್ತಿರೋದೇನಂದ್ರೆ, ನೀವು ಏನ್ ಮಾಡಿದ್ರೂ, ಈ machine ನಲ್ಲಿ ಮೂಲಭೂತವಾದ ಬದಲಾವಣೆಗಳು ಆಗ್ತ ಇರತ್ವೆ, ಯಾಕಂದ್ರೆ ಇದು ಅಷ್ಟೊಂದು ಪರಿಷ್ಕೃತವಾದ machine. ಇದು touch screen ಗಿಂತ್ಲೂ ಒಂದು ಕೈ ಮೇಲೆ. ನೀವು ಬರೀ ಯೋಚ್ಸಿದ್ರೆ, ಅದು ಆಗತ್ತೆ. ನಿಮ್ ಹತ್ರ ಇಂತ ಸೂಕ್ಷ್ಮವಾದ ಹಾಗೂ ಪರಿಷ್ಕೃತವಾದ machine ಇರುವಾಗ, ನೀವು ಕಮ್ಮಾರನ ತರ ಅದನ್ ನಡ್ಸ್ ಕೊಂಡ್ರೆ, (ನಗು) ಶಾಂತಿಯಿಂದ ಇರೋದು ಕಷ್ಟ ಅಂತ ಅನ್ಸತ್ತೆ.

ಶಾಂತಿ ನಿಮ್ ಜೀವನದ ಅತ್ಯುನ್ನತ ಗುರಿ ಅಲ್ಲ. ಇದು ಅತ್ಯಂತ ಮೂಲಭೂತವಾದ ಅವಶ್ಯಕತೆ. ಶಾಂತಿಯನ್ನ ಯಾವತ್ತಿಗೂ ಅತ್ಯುನ್ನತ ಗುರಿ ಅಂತ ಇಟ್ಕೋಬೇಡಿ. ಹಾಗೇನಾದ್ರು ಮಾಡಿದ್ರೆ, ಸತ್ತಾಗ ಮಾತ್ರ ಶಾಂತವಾಗ್ ಇರ್ತೀರ. ಶಾಂತವಾಗಿ ಇರೋದು ನಿಮ್ ಜೀವನದ ಮೊದಲನೆ ವಿಷ್ಯ ಅಂತ ನೀವ್ ತಿಳ್ಕೋಬೇಕು, ಅಲ್ವಾ? ನಿಮ್ ಜೀವನ್ದಲ್ಲಿ ವಿವೇಚನೆಯಿಂದ ಏನಾದ್ರೂ ಮಾಡ್ಬೇಕಂದ್ರೆ – ನಿಮ್ ಜೀವನ್ದಲ್ಲಿ ಯಾವ್ದೇ ಪರಿಸ್ಥಿತಿಯನ್ನ ವಿವೇಚನೆಯಿಂದ ನಿಭಾಯಿಸಬೇಕಂದ್ರೆ, ಸಂತೋಷ ಮತ್ತು ಶಾಂತಿ ಮೂಲಭೂತ ವಿಷಯಗಳು.

ಇಂತ ಮೂಲಭೂತವಾದ ವಿಷ್ಯ, ಇಂದಿನ ದಿನಗಳಲ್ಲಿ ಸ್ವರ್ಗಕ್ಕೆ ಏರ್ತಾ ಇದೆ. ಬೇರೆ ಎಲ್ಲೋ ಶಾಂತಿಯಿಂದ ಇರ್ಬೋದು ಅಂತ ಜನ ಭಾವಿಸ್ತಾರೆ, ಇಲ್ಲಲ್ಲ. ಯಾಕಂದ್ರೆ, ನೀವು ಈ machine ಕಡೆಗೆ ಗಮನಾನೇ ಕೊಟ್ಟಿಲ್ಲ. ಮಾನವನ ವ್ಯವಸ್ಥೆಯ ಆಂತರಿಕ ಕಾರ್ಯವೈಖರಿಯ ಕಡೆಗೆ, ನಿಮ್ಮೊಳಗೆ ಆಗ್ತ ಇರೋ ಎಲ್ಲದರ ತಳಹದಿ ಏನು ಅನ್ನೋದ್ರ್ ಬಗ್ಗೆ ಗಮನವನ್ನೇ ಕೊಟ್ಟಿಲ್ಲ. ಅದಿಕ್ಕೆ ಸ್ವಲ್ಪ ಗಮನ ಕೊಡ್ಬೇಕು. ಅದಕ್ಕೆ ನಮ್ಮ ಮೊದಲ್ನೇ program ನ  “Inner Engineering” ಅಂತ ಕರೆದಿರೋದು.

ಇಡಿ ಜಗತ್ತನ್ನ ನಮ್ಗೆ ಹೇಗ್ ಬೇಕೋ ಹಾಗ್ engineer ಮಾಡ್ಕೊಂಡಿದ್ದೀವಿ; ತುಂಬಾ ಸೌಕರ್ಯ ಹಾಗೂ ಅನುಕೂಲತೆಗಳಾಗಿವೆ, ಆದರೆ, ಸೌಖ್ಯ ಉಂಟಾಗಿಲ್ಲ, ಅಲ್ವಾ? ಸೌಖ್ಯ ಬರೋದಿಲ್ಲ. ಸೌಖ್ಯ ಬರೋದು, ಇದನ್ನ ನೀವು ನಿಮ್ಗೆ ಬೇಕಾದ್ ರೀತಿಯಲ್ಲಿ engineer ಮಾಡ್ಕೊಂಡಾಗ. ಆವಾಗ ಮಾತ್ರ ನಿಮ್ಗೆ ಸೌಖ್ಯ ಅಂದ್ರೆ ಏನು ಅಂತ ಗೊತ್ತಾಗತ್ತೆ.