Kelasada ottadave? Chintisabedi!

ಲಿಪ್ಯ೦ತರ

ಸದ್ಗುರು: ನಿಮ್ಮ ಉದ್ಯೋಗದ ಬಗ್ಗೆ ಚಿಂತಿಸ್ಬೇಡಿ... ಬಿಟ್ಬಿಡಿ ಅದನ್ನ... ಏನ್ ಬೇಕ್ ನಿಮ್ಗೆ...? ತಲೇ ಮೇಲೆ ಒಂದ್ ಸೂರಿರ್ಬೇಕಾ...? ನಾನ್ ಕೊಡ್ತೀನಿ… ದಿನನಿತ್ಯ ಊಟ ಬೇಕಾ...? ನಾನ್ ಕೊಡಸ್ತೀನಿ... ನೀವ್ ಮಾಡ್ಬೇಕಾಗಿರೋದಿಷ್ಟೇ... ನೀವು ಒಂದ್ ಕಡೆ ಕೂತು ಆನಂದದಿಂದ ಇರಿ... ನಾನು ನಿಮ್ಮನ್ನ ಜೀವನ ಇಡೀ ನೋಡ್ಕೊಳ್ತೀನಿ... ಆಗತ್ತಾ ನಿಮ್ಗೆ...? ಇಲ್ಲಾ... ನಿಮ್ಗೆ ಏನಾದ್ರು ಗಬ್ಬೆಬಸ್ತಾನೇ ಇರ್ಬೇಕು... ದಿನಾಗ್ಲು... (ನಗುತ್ತಾರೆ)... ಎಲ್ರೂ ಜೀವನ ನಡೆಸಕ್ಕಷ್ಟೆ ಕೆಲ್ಸ ಮಾಡ್ತಿದೀವಿ ಅಂತಾರೆ... ಸರಿ... ಚಿಂತೆ ಮಾಡ್ಬೇಡಿ... ನಿಮ್ಗೆ ವಾಸಕ್ಕೆ ಮನೆ... ತಿನ್ನೋಕ್ಕೆ ಊಟ ದಿನಾಗ್ಲು ಕೊಡ್ತೀನಿ... ಏನೂ ಸಮಸ್ಯೆ ಇಲ್ಲ... ನನಗೆ ಬೇಕಾಗಿರೋದಿಷ್ಟೇ. ನಾನು ನಿಮ್ಮ ಕಣ್ಣಲ್ಲಿ ಪ್ರತಿನಿತ್ಯ ಆನಂದ ಬಾಷ್ಪ ನೋಡ್ಬೇಕು... ಅಷ್ಟೇ ಶರತ್ತು ಇದಕ್ಕೆ... ನೀವೇನೂ ಕೆಲ್ಸಾ ಮಾಡ್ಬೇಕಾಗಿಲ್ಲ… ನೀವು ನನ್ನ ಸೇವೆ ಮಾಡ್ಬೇಕಾಗಿಲ್ಲ... ನೀವು ಏನನ್ನೂ ಉತ್ಪಾದಿಸಬೇಕಾಗಿಲ್ಲ … ಏನೂ ಇಲ್ಲ... ಸುಮ್ನೆ ಆನಂದದಿಂದ ಕೂತ್ಕೊಳಿ... ನಾವು ನಿಮ್ಗೆ ಊಟ ಕೊಡ್ತೀವಿ... ನಿಮ್ಮ ಪೂಜೆ ಕೂಡ ಮಾಡ್ತೀವಿ (ನಗು)... ಇಲ್ಲ... ಅಂದ್ಮೇಲೆ ಸಮಸ್ಯೆ ಇರೋದು ನಿಮ್ಮ ಉದ್ಯೋಗದಲ್ಲಲ್ಲ... ನಿಮ್ಮ ಜೀವನದಲ್ಲಲ್ಲ... ಸಮಸ್ಯೇ ಇರೋದು ನೀವು ಬದುಕ್ತಾಯಿರೋ ಜಗತ್ತಿನಲ್ಲಲ್ಲ... ಈಗ್ ನಿಮ್ಮ ಸಮಸ್ಯೆ ಇಷ್ಟೇ... ನೀವು ಅಗತ್ಯವಾದ ತಯಾರಿಗಳನ್ನ ಮಾಡ್ಕೊಂಡಿಲ್ಲ, ಈ ಜೀವ ಸರಾಗವಾಗಿ ಸುಂದರವಾಗಿ ಈ ಬದುಕಲ್ಲಿ ಹರಿಯೋದಿಕ್ಕೆ. ಮಾಡ್ಬೇಕಾಗಿರೋ ಯಾವ ತಯಾರಿಗಳನ್ನೂ ಮಾಡ್ಕೊಂಡಿಲ್ಲ. ಹೇಗೋ ಆಕಸ್ಮಿಕವಾಗಿ ಎಲ್ಲ ಚೆನ್ನಾಗಿರುತ್ವೆ ಅಂತ ಆಶಿಸ್ತಿದೀವಿ... ಆಕಸ್ಮಿಕವಾಗಿ ಏನೂ ನಡೆಯಲ್ಲ...

ಜಗತ್ತಿನಲ್ಲಿ ಅದೆಷ್ಟೋ ಜನ ಅಮೇರಿಕಾನ ಸ್ವರ್ಗ ಅಂತ ಅಂದ್ಕೋತಾರೆ... ಆದರೆ ಅದೇ ದೇಶದಲ್ಲಿರೋ ನಿಮಗೆ ಆ ರೀತಿ ಅನ್ನಿಸೇ ಇಲ್ಲ... ಹೌದು ತಾನೆ...? ಹೌದಲ್ವಾ...? ಜಗತ್ತಿನಲ್ಲಿ ಅದೆಷ್ಟೋ ಜನ ಹೇಗಾದ್ರೂ ಅಮೇರಿಕಾ entry ಪಡೆಯೋದಿಕ್ಕೆ ಕಾಯ್ತಿದಾರೆ... ನೀವು ನಿಮ್ ದಕ್ಷಿಣದ ಗಡಿಯನ್ನ ತೆರದ್ಬಿಟ್ರೇ ಮರುದಿನಾನೇ ಒಂದ್ ಕೋಟಿ ಜನ ಒಳಗ್ ನುಗ್ಬಿಡ್ತಾರೆ. ಯಾಕಂದ್ರೆ ಅವರ ಪ್ರಕಾರ ಇದು ಸ್ವರ್ಗ... ಆದರೆ ನಿಮಗೆ ಯಾವತ್ತೂ ಆ ರೀತಿ ಅನ್ಸಿಲ್ಲ... ಹೌದು ತಾನೆ...? ನಿಮ್ಗೆ ಈ ದೇಶ ಯಾವತ್ತೂ ಸ್ವರ್ಗ ಅಂತ ಅನ್ಸಿಲ್ಲ... ಯಾಕಂದ್ರೆ ಸ್ವರ್ಗ ಮತ್ತೆ ನರಕ ಇವೆರಡೂ ಭೂಭಾಗಗಳಲ್ಲ... ಸ್ವರ್ಗ ಮತ್ತೆ ನರಕ ನಿಮ್ಮನ್ನ ನೀವು ಹೇಗೆ ಮಾಡ್ಕೋತಿರೋ ಅದರಲ್ಲಿದೆ... ಹೌದಲ್ವಾ...? ಸ್ವರ್ಗದ ಬಗ್ಗೆ ತುಂಬಾನೇ ಮಾತು ಚರ್ಚೆಗಳು ನಡೀತಾಯಿದೆ. ಯಾಕಂದ್ರೆ ತಮ್ಮ ಬದುಕನ್ನ ನರಕ ಮಾಡ್ಕೊಂಡಿರೋರು ತುಂಬಾನೇ ಜನ ಇದಾರೆ ಅದಕ್ಕೆ... ನಿಮ್ಮ ಬದುಕನ್ನ ಸ್ವರ್ಗ ಮಾಡ್ಕೊಂಡಿದ್ರೆ ನೀವು ಮೇಲ್ಗಡೇ ಇರೋ ಸ್ವರ್ಗದ್ ಬಗ್ಗೆ ಮಾತಾಡ್ತಾಯಿದ್ರಾ...? ನೀವು ಇಲ್ಲಿ ಕುಂತಲ್ಲೇ ಮಹದಾನಂದ ಅನುಭವಿಸ್ತಾಯಿದ್ರೆ ನೀವು ಸ್ವರ್ಗಕ್ಕೆ ಹೋಗೋ ಆಸೆ ಇಟ್ಕೊಳ್ತೀರಾ...?

ಒಂದ್ ಸಾರ್ತಿ ಏನಾಯ್ತೂಂದ್ರೆ, ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಒಂದು ಸಂಪ್ರದಾಯಸ್ಥ ಗ್ರೀಕ್ ಚರ್ಚ್... ಆ ಚರ್ಚಿನ ಬಿಶಪ್... ನಿಮಗೆ ಗೊತ್ತಾ ಸಂಪ್ರದಾಯಸ್ಥ ಗ್ರೀಕರಿಗೆ ಅವರದ್ದೇ ಪ್ರತ್ಯೇಕ ಚರ್ಚ್ ಇದೆ... ಅವರಿಗೆ ಅವರದ್ದೇ ಧರ್ಮಗುರುಗಳಿದಾರೆ… ಅವರು ಟರ್ಕಿ ದೇಶದಲ್ಲಿದ್ದಾರೆ... ಇದು ಗೊತ್ತಾ ನಿಮ್ಗೆ... ಈ ಸಂಪ್ರದಾಯದ ಒಬ್ಬ ಬಿಷಪ್ ಗೆ ಭಾರತದ ಆಧ್ಯಾತ್ಮದ ಬಗ್ಗೆ ತುಂಬಾನೇ ಕೇಳಿ ಭಾರತಕ್ಕೆ ಒಮ್ಮೆ ಭೇಟಿ ನೀಡ್ಬೇಕೂ ಅಂತ ಅನ್ನಿಸ್ತು... ಆದರೆ ಅವನಿಗೆ ಬರಕ್ಕಾಗ್ಲಿಲ್ಲ ಯಾಕಂದ್ರೆ ತನ್ನ ಬಿಶಪ್ ಕೆಲ್ಸದಿಂದ ಅವ್ನಿಗೆ ಬಿಡುವು ಮಾಡ್ಕೊಳಕ್ಕಾಗ್ಲಿಲ್ಲ. ಆಮೇಲೆ ಅವ್ನಿಗೆ ಅರವತ್ತು ವರ್ಷ ಆಗಿ ಅರ್ಧ ನಿವೃತ್ತಿ ಪಡ್ಕೊಂಡ್ ಮೇಲೆ ಅವನಿಗೆ ಅವಕಾಶ ಸಿಗ್ತು ಮತ್ತು ಅವ್ನು ಭಾರತಕ್ಕೆ ಹೊರಟ... ಆತ ದಕ್ಷಿಣ ಭಾರತಕ್ಕೆ ಬಂದ... ನಮ್ಮ ಕೇಂದ್ರ ಇರೋ ಸ್ಥಳದ ಹತ್ತಿರಾನೆ... ಮತ್ತೆ... ಒಬ್ಬ ಜ್ನಾನಿಯನ್ನ ಭೇಟಿ ಮಾಡ್ಬೇಕು ಅಂದ್ಕೊಂಡಾ… ಒಬ್ಬ ಯೋಗಿಯನ್ನ... ಯಾರೋ ಹೇಳದ್ರು ಇದೇ ಬೆಟ್ಟ ಹತ್ತಿ ಹೋಗಿ. ಅಲ್ಲೊಂದು ಗುಹೆ ಇದೆ. ಅಲ್ಲೊಬ್ಬ ಯೋಗಿ ಸಿಗ್ತಾನೆ ನಿಮ್ಗೆ ... ಅಲ್ಲಿಗೆ ಹೋಗಿ... ನಮ್ಮ ಬಿಶಪ್ ಹೊರಟ್ರು ಕಷ್ಟಪಟ್ಟು ಬೆಟ್ಟ ಹತ್ತಿದ್ರು... ಅವರಿಗೆ ಗುಹೆ ಸಿಗ್ತು... ಆ ಗುಹೆ ಹೊರಗೆ ಒಬ್ಬ ವಯಸ್ಸಾದ ವ್ಯಕ್ತಿ ಮುಖದಲ್ಲಿ ಒಂದ್ ಮಂದಹಾಸ ಇಟ್ಕೊಂಡು ಕಣ್ ಮುಚ್ಕೊಂಡ್ ಕುಳಿತಿದ್ದ... ಬಿಶಪ್ ಹೋಗಿ ಅವರಿಗೆ ಅಡ್ಡ ಬಿದ್ರು... ಅವರಿಗೆ ಅದು ಕಷ್ಟ... ಅಭ್ಯಾಸ ಇರ್ಲಿಲ್ಲ. ಆದರೆ ಭಾರತಕ್ಕೆ ಹೋದ್ರೆ ಹಿರಿಯರಿಗೆ ಅಡ್ ಬೀಳ್ಬೇಕೂ ಅಂತ ಯಾರೋ ಹೇಳಿದ್ರು… ಅಡ್ ಬಿದ್ದಾದ್ಮೇಲೆ ಕಷ್ಟ ಪಟ್ಟು ಕೈಕಾಲೂರಿ ಮೇಲೆದ್ರು.... ಆ ಯೋಗಿ ಅವನನ್ನ ವಿನೋದದ ದೃಷ್ಟಿಯಿಂದ ನೋಡಿದ್ರು... ನಿಸ್ಸಂಶಯವಾಗಿ ಆತ ಇಲ್ಲಿವರೆಗೂ ಯಾರಿಗೂ ಅಡ್ ಬಿದ್ದಿರ್ಲಿಲ್ಲ (ನಗು) ಮತ್ತು ಆತ ಮುಗುಳ್ನಕ್ಕ. ಆಮೇಲೆ ಆ ಬಿಶಪ್ ತನ್ ಪರಿಚಯ ಮಾಡ್ಕೊಂಡ... ನಾನು ಬಿಷಪ್, ನಾನು ನನ್ನ ಜೀವನವಿಡೀ ಚರ್ಚ್ ನ ಸೇವೆ ಮಾಡ್ಕೊಂಡ್ ಬಂದಿದೀನಿ… ಆದ್ರೆ ನನ್ನಲ್ಲಿ ಕೆಲವು ಪ್ರಶ್ನೆಗಳಿವೆ... ಅದಕ್ಕೆ ಉತ್ತರ ಕೊಡ್ತೀರಾ...? ಯೋಗಿ ಮುಗುಳ್ನಕ್ಕು ಆಗಲಿ... ದಯವಿಟ್ಟು ಕೇಳಿ ನಿಮ್ ಪ್ರಶ್ನೆ ಅಂದ್ರು. ಆಗ ಬಿಶಪ್ ಕೇಳಿದ್ರು... "ಜೀವನ ಅಂದ್ರೇನು...?" ತನ್ನ ಅರವತ್ತನೇ ವಯಸ್ಸಿನಲ್ಲಿ! (ನಗುತ್ತಾರೆ)... ಜೀವನ ಅಂದ್ರೇನು...? ಆಗ ಯೋಗಿ ಕಣ್ ಮುಚ್ಚಿ, ಆನಂದದಿಂದ ತುಂಬ್ ಹೋಗಿ ಹೇಳ್ದ... ಜೀವನ ಅಂದ್ರೆ ವಸಂತ ಋತುವಿನ ತಂಗಾಳಿಯಲ್ಲಿರೋ ಮಲ್ಲಿಗೆಯ ಪರಿಮಳ ಇದ್ಹಾಗೆ... ಹೀಗೆ ಹೇಳೋವಾಗ್ಲೇ ಆತನ ಕಣ್ಣಿಂದ ಆನಂದ ಬಾಷ್ಪ ಹರಿಯೋದಿಕ್ಕೆ ಶುರುವಾಯ್ತು... ಆಗ ಬಿಶಪ್ ಹೇಳದ್ರು... ಇಲ್ಲ... ಇಲ್ಲ... ಇಲ್ಲ... ನಮ್ಮ ಧರ್ಮಗುರುಗಳು ಹೇಳಿದಾರೆ, ಜೀವನ ಒಂದು ಮುಳ್ ಇದ್ಹಾಗೆ... ನಾವು ಅದನ್ನ ತ್ಯಜಿಸ್ಬಿಡ್ಬೇಕು ಅಂತ... ಅದೂ ಅಲ್ದೇ ಸಾಂಕೇತಿಕವಾಗಿ ಯೇಸು ಕ್ರಿಸ್ತರು ಒಂದು ಮುಳ್ಳಿನ ಕಿರೀಟವನ್ನ ಧರಿಸಿದ್ರು... ಹೀಗಿರೋವಾಗ ನೀವು ಹಿಂಗ್ ಹೇಗ್ ಹೇಳ್ತೀರ...? ನಮ್ಮ ಧರ್ಮಗುರುಗಳು ಬೇರೇನೇ ಹೇಳಿದಾರೆ... ಯೋಗಿ ಆತನನ್ನ ನೋಡಿ ಮಂದಹಾಸ ಬೀರಿ ಹೇಳ್ದಾ... ಅದೂ ಆತನ ಬದುಕು... (ನಗುತ್ತಾರೆ)... ಆದ್ದರಿಂದ ಜೀವನವನ್ನು ಹೇಗೆ ಅನುಭವಿಸ್ತೀರ ಅನ್ನೋದು, ನೀವು ಎಲ್ಲಿದೀರ, ಏನಾಗಿದೀರ ಅನ್ನೋದ್ರ ಮೇಲಿಲ್ಲ. ಅದು ನೀವು ನಿಮ್ಮೊಳಗೆ ಏನ್ ಮಾಡ್ಕೋತೀರ ಅನ್ನೋದ್ರ ಮೇಲಿದೆ... ಅಲ್ವಾ...? ನೀವಿಲ್ಲಿ ಅಗತ್ಯವಾದ ತಯಾರಿಯನ್ನ ಮಾಡಿದೀರ... ಸರಿಯಾದ ವ್ಯವಸ್ಥೆಯನ್ನ ರಚಿಸಿದ್ದೀರ... ಸರಿಯಾದ ಪದಾರ್ಥಗಳನ್ನ ಹುಟ್ ಹಾಕಿದೀರ... ಆಗ ನಿಮ್ಮ ಜೀವನವನ್ನ ವಸಂತ ಋತುವಿನ ತಂಗಾಳಿಯಲ್ಲಿರೋ ಮಲ್ಲಿಗೆಯ ಪರಿಮಳವಾಗಿಸ್ಬಹದು... ಮುಳ್ಳಾಗಲ್ಲ... ಅದು ಮುಳ್ಳಾಗಿದ್ರೆ ಅದನ್ನ ಮೊದ್ಲು ಕಿತ್ ಬಿಸಾಕ್ ಬೇಕು ತಾನೆ...? ಹೌದಲ್ವಾ...? ಹೌದು ತಾನೆ...?