Vidhi, Devaru, Adrushta, Prayatna - Yashasannu Nirdharisuvudu Yaavudu?

ಲಿಪ್ಯಂತರ:

ಪ್ರಶ್ನೆ: ಜೀವನದಲ್ಲಿ ಯಶಸ್ಸನ್ನು ಪಡೀಬೇಕಾದ್ರೆ, ಯಾವುದು ಹೆಚ್ಚು ಪ್ರಮುಖವಾದ ಪಾತ್ರವನ್ನ ವಹಿಸುತ್ತೆ ಗುರೂಜಿ? ವಿಧೀನಾ, ದೇವರಾ, ಪ್ರಯತ್ನಾನಾ, ಅಥವಾ ಅದೃಷ್ಟನಾ?

ಸದ್ಗುರು: ಅಥವಾ ಚುನಾವಣೆ ಗೆಲ್ಲೋದಾ? (ನಗು)

ಪ್ರಶ್ನೆ: ಚುನಾವಣೆಯಲ್ಲಿ ಗೆಲ್ಬೇಕಾದ್ರೆ, ಅದೃಷ್ಟಾನೂ ಇರ್ಬೇಕು.

ಸದ್ಗುರು: ವಿಧಿ, ದೇವರು, ಅದೃಷ್ಟ, ಪ್ರಯತ್ನ - ಬಹುಶಃ ಎಲ್ಲಾನೂ (ನಗು), ಆದರೆ ಯಾವ ಪ್ರಮಾಣದಲ್ಲಿ? ನೀವು ವಿಧಿ ಅಂದಾಗ, ಸಹಜವಾಗಿ ಅದರ ಬಗ್ಗೆ ನೀವೇನೂ ಮಾಡಕ್ಕಾಗಲ್ಲ. ನೀವು ಅದೃಷ್ಟ ಅಂದಾಗ, ಅದರ ಬಗ್ಗೆ ಕೂಡ ನಿಮ್ಗೇನೂ ಮಾಡಕ್ಕಾಗಲ್ಲ. ನೀವು ದೇವರು ಅಂದಾಗ, ಅದರ ಬಗ್ಗೆ ಕೂಡ ನಿಮ್ಗೇನೂ ಮಾಡಕ್ಕಾಗಲ್ಲ (ನಗು). ಆದ್ರಿಂದ, ನಿಮ್ಮ ಕೈಯಲ್ಲಿ ಇರೋದು ಪ್ರಯತ್ನ ಮಾತ್ರ. ಆದ್ದರಿಂದ, ನಿಮ್ಮನ್ನ ೧೦೦% ಪ್ರಯತ್ನದಲ್ಲಿ ತೊಡಗಿಸಿ, ಏನಾಗ್ಬೇಕೋ ಅದು ಆಗತ್ತೆ. ಅಲ್ವೇ? (ಚಪ್ಪಾಳೆ) ಆದ್ರಿಂದ, ನಿಮ್ಮ ಶಕ್ತಿಯ ಮತ್ತು ಸಾಮರ್ಥ್ಯದ ಒಂದು ಭಾಗವನ್ನ ಅದೃಷ್ಟಕ್ಕೆ, ದೇವರಿಗೆ, ಹಣೆ ಬರಹಕ್ಕೆಲ್ಲಾ, ಬಿಡ್ಬೇಡಿ. ಅದು ನಿಮ್ಮ ಕೆಲಸ ಅಲ್ಲ. ಆ ಥರದ್ದೇನಾದ್ರೂ ಇದ್ರೆ, ಅದು ಕೆಲಸ ಮಾಡತ್ತೆ. ನಿಮ್ಮ ಕೆಲಸ ಪ್ರಯತ್ನ ಮಾಡೋದು ಮಾತ್ರ. ಅಲ್ವೇ? ಅದನ್ನ ಮಾಡಿ. ಪ್ರಯತ್ನ ಪ್ರಖರವಾಗಿರಬೇಕು, ಅಂದ್ರೆ, ಅದು ಕೇಂದ್ರೀಕೃತವಾಗಿರ್ಬೇಕು, ಸರಿಯಾದ ರೀತಿಯಲ್ಲಿರ್ಬೇಕು. ಸುಮ್ನೆ ಪ್ರಯತ್ನ ಮಾಡಿದ್ರೆ, ಅದು ಮೂರ್ಖಪ್ರಯತ್ನ ಆಗತ್ತೆ, ಅಲ್ವೇ? ಬರೀ ಶ್ರಮದಿಂದ ಏನೂ ಆಗಲ್ಲ , ಸರಿಯಾದ ಕಾರ್ಯ, ಸರಿಯಾದ ಸಮಯ, ಸರಿಯಾದ ಸ್ಥಳ, ಇವೆಲ್ಲವೂ ಮುಖ್ಯ, ಅಲ್ವೇ? 

ಮತ್ತು ಅವೆಲ್ಲ ಆಗ್ಬೇಕಾದ್ರೆ, ನಿಮಗೆ ಗ್ರಹಣಶಕ್ತಿ ಮತ್ತು ಬುದ್ಧಿವಂತಿಕೆ ಬೇಕು. ಆದ್ರಿಂದ ನಿಮ್ಮ ಜೀವನದಲ್ಲಿ ನೀವು ಮಾಡ್ಬೇಕಾಗಿರೋದು ಇಷ್ಟೆ - ಸತತವಾಗಿ ವಿಧಾನಗಳನ್ನ ಹುಡುಕ್ತಿರ್ಬೇಕು, ನಿಮ್ಮ ಗ್ರಹಣಶಕಿಯನ್ನ ಮತ್ತು ಬುದ್ಧಿವಂತಿಕೆಯನ್ನ ಹೆಚ್ಚಿಸ್ಕೊಳೋದಕ್ಕೆ. ಉಳ್ದಿದ್ದು ಹೇಗಿದ್ರು ಆಗತ್ತೆ. ದುರಾದೃಷ್ಟವಶಾತ್ ಇದೊಂದು ವಿಚಾರವನ್ನ ಮನುಕುಲ ಮಾಡ್ತಿಲ್ಲ. ಅವರು ಯಾವುದೋ ಒಂದರಲ್ಲಿ ಸಮರ್ಥರಾಗೋದಿಕ್ಕೆ ಪ್ರಯತ್ನಿಸ್ತಾ ಇದ್ದಾರೆ. ಒಂದು ವಿಷ್ಯದಲ್ಲಿ ಸಮರ್ಥರಾಗೋದಿಕ್ಕೆ ಪ್ರಯತ್ನ ಪಡ್ಬೇಡಿ, ಸುಮ್ನೆ ನಿಮ್ಮ ಗ್ರಹಣಶಕ್ತಿಯನ್ನ ಮತ್ತು ಬುದ್ಧಿವಂತಿಕೆಯನ್ನ ಹೆಚ್ಚಿಸ್ಕೊಳಿ, ಆಮೇಲೆ ನಿಮ್ಮೆದುರಿಗೆ ಏನೇ ಬರ್ಲಿ.

ಈಗ ಇದನ್ನ ಹೀಗೆ ಹೇಳ್ಬಹುದು, ಇದು ಪ್ರಪಂಚದಲ್ಲಿ ಯಾವಾಗ್ಲೂ ಆಗ್ತಾನೇ ಇರುತ್ತೆ, ಪ್ರತಿಯೊಬ್ಬರಿಗೂ ಡಾಕ್ಟರ್ ಆಗ್ಬೇಕು,. ಈವಾಗಲ್ಲ, ೨೫ ವರ್ಷಗಳ ಹಿಂದೆ ಹೀಗಿತ್ತು. ಓದಬೇಕು ಅಂದ್ರೆ, ಮೊದಲು ಬರೋದು ಮೆಡಿಕಲ್. ಸೀಟ್ ಸಿಗದಿದ್ರೆ, ಏನ್ಮಾಡೋದು? ಇಂಜಿನಿಯರಿಂಗ್. ಅಲ್ಲೂ ಸೀಟ್ ಸಿಗದಿದ್ರೆ, ಇನ್ನೊಂದು, ಇನ್ನೊಂದು ಹೀಗೆ. ನೀವು ಡಾಕ್ಟರ್ ಆದ್ರಿ ಅನ್ಕೋಳಣ, ಮತ್ತು ಪ್ರತಿಯೊಬ್ಬರೂ ಯೋಗ ಕಾರ್ಯಕ್ರಮಕ್ಕೆ ಬಂದು ಡಾಕ್ಟರ್ ಹತ್ರ ಹೋಗೋದನ್ನೇ ನಿಲ್ಸ್ ಬಿಟ್ರು ಅನ್ಕೋಳಣ. ಕನಿಷ್ಟ ಪಕ್ಷ ನೀವು ಡಾಕ್ಟರ್ ನ ಭೇಟಿಯಾಗೋದು ಕಡಿಮೆ ಆಗಿದೆ ಅಲ್ವೇ? ಆಗಿದ್ಯಾ? ಕಡಿಮೆ ಆಗಿದ್ಯಾ ಇಲ್ವಾ? ನಿಶ್ಚಿತವಾಗಿ ಕಡಿಮೆ ಆಗಿದೆ. ಆದ್ರಿಂದ, ನಿಮ್ಮ ವ್ಯಾಪಾರ ಕಡಿಮೆ ಆಗತ್ತೆ. ಇನ್ನದು ಒಂದು ಒಳ್ಳೆ ಕಸುಬು ಆಗಿ ಉಳಿಯಲ್ಲ. ಏಕೆಂದ್ರೆ, ತುಂಬಾ ಕಡಿಮೆ ಡಾಕ್ಟರ್ ಗಳು ವೈದ್ಯ ವೃತ್ತಿಯನ್ನ ತಾವು ಡಾಕ್ಟರ್ ಆಗ್ಬೇಬೇಕೂಂತ ಆರಿಸ್ಕೊತಿದ್ದಾರೆ. ಬೇರೆಯವ್ರು ಡಾಕ್ಟರಾಗ್ತಿರೋದು ಅದ್ರಲ್ಲಿ ಜಾಸ್ತಿ ದುಡ್ಡು ಬರತ್ತೆ ಅಂತ, ಅಲ್ವಾ? ಹಾಗೇ ತಾನೆ? ತುಂಬಾ ಜನ ಡಾಕ್ಟರ್ಸ್ ಆಗ್ತಿರೋದು ಏಕೆಂದ್ರೆ, ಮತ್ತೊಬ್ಬರ ಖಾಯಿಲೆ ಒಂದು ಲಾಭದಾಯಕ ವ್ಯಾಪಾರ ಅಂತ (ನಗು). ಇದು ತುಂಬಾ...ಇದ್ರ್ ಬಗ್ಗೆ ಎಲ್ಲ ಮಾತಾಡಕ್ಕೆ ನಂಗಿಷ್ಟ ಇಲ್ಲ, ನನ್ ಮನ್ಸಿಗೆ ತುಂಬ ಕಿರಿಕಿರಿಯಾಗುತ್ತೆ. (ನಗು).

ಕೆಲವು ವೈದ್ಯರು ಇದ್ದಾರೆ, ನಿಜಕ್ಕೂ ವೈದ್ಯರಾಗೋದಿಕ್ಕೆ ಬಯಸ್ತಾರೆ. ಅವರಿಗೆ ಮನುಷ್ಯನ ವ್ಯವಸ್ಥೆಯನ್ನ ಅರ್ಥ ಮಾಡ್ಕೊಳಕ್ಕಿಷ್ಟ, ಮತ್ತು ಆ ದಿಕ್ಕಿನಲ್ಲಿ ಪ್ರಯತ್ನವನ್ನ ಹಾಕೋದಿಷ್ಟ, ಅದು ಒಳ್ಳೇದು. ಒಂದ್ವೇಳೆ ಎಲ್ಲರು ಆರೋಗ್ಯವಂತರಾಗ್ಬಿಟ್ರೆ, ನಿಮಗದು ಬೇಡ ಅಲ್ವೇ? ಹೌದು, ನಿಮಗದು ಬೇಡ, (ನಗು). ಆದ್ರಿಂದ ನಿಮ್ಮ ಯಶಸ್ಸಿಗೆ ಒಂದು ಸೂತ್ರವನ್ನ ಹಾಕೋದಿಕ್ಕೆ ಹೋಗ್ಬೇಡಿ. ಯಶಸ್ಸು ಎಂದ್ರೆ, ನಿಮಗೆ ನಿಮ್ಮ ಪರಿಪೂರ್ಣ ಸಾಮರ್ಥ್ಯವನ್ನ ಉಪಯೋಗಿಸಿಕೊಳ್ಳೋದಕ್ಕೆ ಆಗೋದು. ಮುಂದಿನ ವಿಷ್ಯ ಮುಖ್ಯ ಅಲ್ಲ. ನೀವು ವೈದ್ಯರಾಗ್ತೀರೋ, ರಾಜಕಾರಣಿಯಾಗ್ತೀರೋ, ಯೋಗಿಯಾಗ್ತೀರೋ ಅಥವಾ ಬೇರೆ ಏನಾಗ್ತೀರೋ ಅದು ಮುಖ್ಯ ಅಲ್ಲ.

ಯಶಸ್ಸು ಎಂದ್ರೆ ನಿಮ್ಮ ಜೀವನವನ್ನ ನಿಮ್ಮ ಸಾಮರ್ಥ್ಯದ ಪೂರ್ತಿ ಪ್ರಮಾಣದಲ್ಲಿ ಬದುಕುವುದು. ಅದೇ ಯಶಸ್ಸು ಎಂದ್ರೆ. ಅದಾಗ್ಬೇಕಂದ್ರೆ, ನಿಮಗೆ ಗ್ರಹಣಶಕ್ತಿ ಮತ್ತು ಸಕ್ರಿಯವಾದ ಬುದ್ಧಿವಂತಿಕೆ ಬೇಕು. "ನನ್ನ ಬುದ್ಧಿವಂತಿಕೆಯನ್ನ ಹೇಗೆ ಹೆಚ್ಚಿಸ್ಕೊಳೋದು?" ಅದರ ಬಗ್ಗೆ ಚಿಂತಿಸ್ಬೇಡಿ. ಸದ್ಯಕ್ಕೆ ಮುಖ್ಯವಾದ ವಿಷಯ ಅಂದ್ರೆ ನಿಮ್ಮ ಗ್ರಹಣಶಕಿಯನ್ನ ಹೆಚ್ಚಿಸ್ಕೊಳೋದು. ಬದುಕನ್ನ ಅದು ಇದ್ದ ಹಾಗೆಯೇ ನೋಡೋದಿಕ್ಕೆ ನಿಮಗೆ ಸಾಧ್ಯವಾದ್ರೆ, ಅದನ್ನ ಚೆನ್ನಾಗಿ ನಿರ್ವಹಿಸೋದಿಕ್ಕೆ ಬೇಕಾದ ಬುದ್ಧಿವಂತಿಕೆ ನಿಮಗಿರುತ್ತೆ. ಆದ್ರೆ ಬದಕನ್ನ ಅದು ಇದ್ದ ಹಾಗೆಯೇ ನೋಡೋದಿಕ್ಕೆ ನಿಮಗ್ ಆಗದಿದ್ರೆ, ನಿಮ್ಮ ಬುದ್ಧಿವಂತಿಕೆ ನಿಮ್ಮ ವಿರುದ್ಧವಾಗಿ ಕೆಲಸ ಮಾಡುತ್ತೆ. ಪ್ರಪಂಚದಲ್ಲಿ ಅತ್ಯಂತ ಬುದ್ಧಿವಂತರೇ ಸಾಮಾನ್ಯವಾಗಿ ಅತಿ ಹೆಚ್ಚು ದುಃಖಕ್ಕೊಳಗಾಗಿರೋವ್ರು. ಇದು ಏಕೆಂದರೆ, ಅವರಿಗೆ ಸಕ್ರಿಯವಾದ ಬುದ್ಧಿಶಕ್ತಿ ಇದೆ, ಆದರೆ ಜೀವನದ ಗ್ರಹಿಕೆ ಇಲ್ಲ.   

ಆದ್ರಿಂದ, ಒಂದ್ ವಿಷ್ಯ, ಜನರು ಸಾಕಷ್ಟು ಪ್ರಯತ್ನ ಹಾಕದಿರುವ ಒಂದ್ ಬಹಳ ಮುಖ್ಯವಾದ ವಿಷ್ಯ ಏನಂದ್ರೆ, ಗ್ರಹಣಶಕ್ತಿಯನ್ನ ವರ್ಧಿಸಿಕೊಳ್ಳೋದು. ಅವರು ತಮ್ಮ ಮನಸ್ಸನ್ನು ವಿಶಾಲಗೊಳಿಸೋದಿಕ್ಕೆ ಯತ್ನಿಸ್ತಿದ್ದಾರೆ. ಅದ್ರಿಂದ ಪ್ರಯೋಜನ ಇಲ್ಲ. ಅದು ನಿಮಗೆ ಸಾಮಾಜಿಕ ಯಶಸ್ಸು ತರುತ್ತೆ ಅಷ್ಟೆ, ನಿಜವಾದ ಯಶಸ್ಸಲ್ಲ. ನಿಜವಾದ ಯಶಸ್ಸು ಸಿಗಬೇಕಂದ್ರೆ, ನಿಮಗೆ ಎಲ್ಲವನ್ನೂ ಅದು ಇದ್ದ ಹಾಗೇ ನೋಡೋದಿಕ್ಕಾಗ್ಬೇಕು, ಏನೂ ತಿರುಚುವಿಕೆ ಇಲ್ದೆ. ನಿಮಗೆ ಎಲ್ಲವನ್ನೂ ಅದು ಇದ್ದ ಹಾಗೆ ನೋಡೋದಿಕ್ಕಾದ್ರೆ, ಜೀವನ ಆಟದ ತರ ಆಗುತ್ತೆ. ಅದನ್ನ ಸಂತೋಷವಾಗಿ ಆಡಬಹುದು, ಖಂಡಿತವಾಗಿ ಚೆನ್ನಾಗಂತೂ ಆಡಬಹುದು. ಚೆನ್ನಾಗಿ ಆಡಿದರೆ, ಜನ ನಿಮ್ಮನ್ನು ಯಶಸ್ವಿ ಅಂತಾರೆ.

"ನಾನು ಯಶಸ್ವಿ ಆಗ್ಬೇಕು" ಅಂತ ನೀವು ಯಾವತ್ತೂ ಅನ್ಕೋಬಾರ್ದು. ಈ ಒಂದು ಜೀವವನ್ನ ಹೇಗೆ ಪರಿಪೂರ್ಣತೆಯ ಕಡೆ ತಗೊಂಡು ಹೋಗೋದು ಅನ್ನೋದನ್ನಷ್ಟೆ ನೋಡಿ. ಜನ ಒಂದು ದಿನ ಅಂತಾರೆ, "ಓಹ್, ಅವನು ಯಶಸ್ವಿ, ಅವನೊಬ್ಬ ಮಹಾ ಯಶಸ್ವಿ" ಅಂತ. ನೀವು ಯಶಸ್ಸನ್ನು ಹುಡುಕುತ್ತ ಹೋಗಬಾರದು, ಬದುಕಕ್ಕೆ ಅದೊಂದು ಶೋಚನೀಯವಾದ ವಿಧಾನ. ನೀವು ಸುಮ್ನೆ ದುಃಖ ಮತ್ತು ನೋವನ್ನುಂಟು ಮಾಡ್ತೀರಾ, ನಿಮಗೆ ಮತ್ತು ಎಲ್ಲರಿಗೂ, ಏಕೆಂದ್ರೆ, ನಿಮ್ಮ ಪ್ರಕಾರ ಯಶಸ್ಸು ಅಂದ್ರೆ ಮತ್ತೊಬ್ಬರ ಕುತ್ತಿಗೆ ಮೇಲೆ ಕೂತ್ಕೊಳೋದು. ಅಲ್ವಾ? ಹೌದೋ ಅಲ್ವೋ? ಈವಾಗ ನಿಮ್ಮ ಪ್ರಕಾರ ಯಶಸ್ಸು ಅಂದ್ರೆ, ಎಲ್ಲರು ನಿಮ್ಮ ಕೆಳಗಿರಬೇಕು, ನೀವು ಮೇಲೆ ಕೂತಿರಬೇಕು, ಇದೇ ನಿಮ್ಮ ಪ್ರಕಾರ ಯಶಸ್ಸು ಅಂದ್ರೆ. ಇದು ಯಶಸ್ಸಲ್ಲ, ಇದೊಂದು ಖಾಯಿಲೆ. ಆದ್ರಿಂದ, ಎಂದಿಗೂ ಯಶಸ್ಸಿನ ಬಗ್ಗೆ ಯೋಚಿಸ್ಬೇಡಿ. ಇದನ್ನ ಹೇಗೆ ಪರಿಪೂರ್ಣವಾಗಿಸೋದು ಅನ್ನೋದನ್ನಷ್ಟೆ ನೋಡಿ. ಆಮೇಲೆ ಅದೇ ವ್ಯಕ್ತಗೊಳ್ಳುತ್ತೆ. ಅದು ಒಳ್ಳೆ ಅಭಿವ್ಯಕ್ತಿಯನ್ನ ಪಡೆದ್ರೆ, ಸುತ್ಲಿರೋ ಜನ ಹೇಳ್ತಾರೆ, "ಓಹ್ ಅವ್ನು ಒಬ್ಬ ಮಹಾಯಶಸ್ವಿ". ಅದು ಒಳ್ಳೇದು. ಜನ ಗುರುತಿಸ್ಬೇಕು, ನೀವು ಯಶಸ್ವಿ ಅಂತ. ನೀವೇ ಯೋಚಿಸ್ತಿರಬಾರ್ದು ಹೇಗೆ ಯಶಸ್ವಿ ಆಗೋದು ಅಂತ, ಬದುಕೋದಿಕ್ಕೆ ಅದು ಬಹಳ ತಪ್ಪಾದ ದಾರಿ.