ಪ್ರಶ್ನೆ: ಸದ್ಗುರುಗಳೆ, ಯಾರಾದರೂ ಧ್ಯಾನವನ್ನು ಮಾಡಲು ನಿರ್ಧರಿಸಿದರೆ, ಅದು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಅವರಿಗೆ ಹೇಗೆ ಗೊತ್ತಾಗುತ್ತದೆ? ಅದಕ್ಕೆ ಯಾವುದಾದರೂ ಮಾನಸಿಕ ಅಥವಾ ದೈಹಿಕ ಅಭಿವ್ಯಕ್ತಿಗಳಿವೆಯೇ?

ಸದ್ಗುರು: ಧ್ಯಾನದಿಂದಾಗುವ ದೈಹಿಕ ಅಭಿವ್ಯಕ್ತಿಗಳು ಬಹುಶಃ ಯಾವಾಗಲೂ ಕಣ್ಣಿಗೆ ಕಾಣುವಂತಿರುತ್ತವೆ. ಅದಕ್ಕೆ ಅನೇಕ ದೈಹಿಕ ಮತ್ತು ಮಾನಸಿಕ ಅಭಿವ್ಯಕ್ತಿಗಳಿವೆಯಾದರೂ ಸಹ, ಇವುಗಳಿಂದ ಆಚೆಗಿರುವ ಇತರ ಹಲವಾರು ಅಭಿವ್ಯಕ್ತಿಗಳು ಧ್ಯಾನಕ್ಕಿವೆ. ಇವೆಲ್ಲವನ್ನೂ ಪ್ರಶ್ನಿಸಬಹುದು, ಆದರೆ ಇದನ್ನು ಪ್ರಶ್ನಿಸುವವರು ಯಾರು? ಯಾರಿಗೆ ಕೇವಲ ಭೌತಿಕತೆ ಮತ್ತು ಮಾನಸಿಕತೆಯಷ್ಟೆ ತಿಳಿದಿರುತ್ತದೆಯೋ, ಯಾರು ಹೆಚ್ಚಾಗಿ ಯಂತ್ರಗಳನ್ನು ಅವಲಂಬಿಸಿರುತ್ತಾರೋ, ಯಾರು ಮನುಷ್ಯರಿಗಿಂತ ಅವರು ನಿರ್ಮಿಸಿದ ಯಂತ್ರಗಳೇ ಹೆಚ್ಚು ವಿಶ್ವಾಸಾರ್ಹವೆಂದು ನಂಬುತ್ತಾರೋ, ಅಂತಹ ಜನರು ಇದನ್ನು ಯಾವಾಗಲೂ ಪ್ರಶ್ನಿಸುತ್ತಾರೆ.

ಸತ್ತಿರುವಿರೋ ಅಥವಾ ಮೆದುಳು ನಿಷ್ಕ್ರಿಯವಾಗಿದೆಯೋ?!

ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಯೋಗ ಮತ್ತು ಯೋಗಿಗಳ ಮೇಲೆ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದ ಒಂದು ಸ್ಥಳಕ್ಕೆ ನಾನು ಹೋಗಿದ್ದೆ. ಅವರು ನನ್ನನ್ನು ಪ್ರಯೋಗಕ್ಕೊಳಪಡಿಸಲು ಸಿಕ್ಕ ಒಳ್ಳೆಯ ನಮೂನೆ ಎಂದುಕೊಂಡರು. ಸಾಮಾನ್ಯವಾಗಿ ಇಂತಹ ಅನುಚಿತ ವರ್ತನೆಗಳಿಗೆ ನನ್ನನ್ನು ನಾನು ಒಡ್ಡಿಕೊಳ್ಳವುದಿಲ್ಲ, ಆದರೆ, ಅದೊಂದು ಅನಿವಾರ್ಯದ ಸಂದರ್ಭವಾಗಿದ್ದರಿಂದ ನಾನು ಸರಿ ಎಂದು ಒಪ್ಪಿಕೊಂಡೆ.

ಜಗತ್ತಿನಲ್ಲಿ ಕಾರ್ಯನಿರ್ವಹಿಸುವ ನಿಮ್ಮ ಸಾಮರ್ಥ್ಯವನ್ನು ಅಪಾರವಾಗಿ ವರ್ಧಿಸಬಹುದಾಗಿದೆ – ಅಚ್ಚರಿ ಎನಿಸುವಷ್ಟು ವರ್ಧಿಸಬಹುದು. ಯೌಗಿಕ ಅಭ್ಯಾಸಗಳಿಗೆ ನಿಮ್ಮನ್ನು ನೀವು ಸಮರ್ಪಸಿಕೊಂಡರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಅದು ನಿಮ್ಮನ್ನು ಬೇರೆಯವರಿಗಿಂತ ವೈಶಿಷ್ಟಪೂರ್ಣರನ್ನಾಗಿ ಮಾಡುತ್ತದೆ.

ನನ್ನ ಮೆದುಳಿನಲ್ಲಿನ ಗಾಮಾ ತರಂಗಗಳನ್ನು ಪರೀಕ್ಷಿಸಬೇಕೆಂದು ಅವರು ಹೇಳಿದರು. ನನ್ನ ಮೆದುಳಿನಲ್ಲಿ ಅಂತಹ ತರಂಗಗಳಿವೆ ಎಂದು ನನಗೆ ತಿಳಿದೇ ಇರಲಿಲ್ಲ. ಅವರು ನನ್ನ ದೇಹದ ವಿವಿಧ ಜಾಗಗಳಲ್ಲಿ ಮತ್ತು ಮುಖ್ಯವಾಗಿ ತಲೆಯ ಭಾಗದಲ್ಲಿ ಹದಿನಾಲ್ಕು ಎಲೆಕ್ಟ್ರೋಡ್‌ಗಳನ್ನು ಹಾಕಿ, "ಈಗ ಧ್ಯಾನ ಮಾಡಿ." ಎಂದರು. ಅದಕ್ಕೆ ನಾನು, "ನನಗೆ ಯಾವ ಧ್ಯಾನವೂ ಗೊತ್ತಿಲ್ಲ." ಎಂದೆ. ಇದನ್ನು ಕೇಳಿ ಅವರು, "ಇಲ್ಲ, ನೀವು ಎಲ್ಲರಿಗೂ ಧ್ಯಾನವನ್ನು ಕಲಿಸುತ್ತೀರ." ಎಂದರು. "ಜನರಿಗೆ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳಲು ಆಗದಿರುವ ಕಾರಣ ನಾನು ಅವರಿಗೆ ಧ್ಯಾನವನ್ನು ಕಲಿಸುತ್ತೇನೆ. ಅವರನ್ನು ಸುಮ್ಮನೆ ಕುಳಿತುಕೊಳ್ಳುವಂತೆ ಮಾಡಲು ಅವರಿಗೆ ಏನನ್ನಾದರೂ ಕಲಿಸಲೇಬೇಕು." ಎಂದು ನಾನೆಂದೆ. ಆಗ ಅವರು, "ಸರಿ, ನಿಮಗೇನು ಮಾಡುವುದಕ್ಕೆ ಸಾಧ್ಯ?" ಎಂದು ಕೇಳಿದರು. ಅದಕ್ಕೆ ನಾನು, "ನಿಮಗೆ ಬೇಕಿದ್ದರೆ, ನಾನು ಸುಮ್ಮನೆ ಕುಳಿತುಕೊಳ್ಳುತ್ತೇನೆ." ಎಂದೆ. ಅದಕ್ಕವರು ಒಪ್ಪಿದರು, ಹಾಗಾಗಿ ನಾನು ಕುಳಿತುಕೊಂಡೆ.

ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ನಂತರ, ಯಾರೋ ನನ್ನ ಮೊಣಕಾಲಿಗೆ ಲೋಹದ ವಸ್ತುವಿನಿಂದ ಹೊಡೆಯುತ್ತಿರುವಂತೆ ಭಾಸವಾಯಿತು. ನಂತರ ನನ್ನ ಮೊಣಕೈ ಮತ್ತು ಹಿಮ್ಮಡಿಯ ಗಂಟಿನ ಮೇಲೆ ಮತ್ತು ಇನ್ನೂ ಅನೇಕ ಕಡೆಗಳಲ್ಲಿ ಹೊಡೆಯಲು ಆರಂಭಿಸಿದರು. ನನ್ನ ಕೀಲುಗಳ ಮೇಲೆ ಅವರಿಗೇಕೆ ಅಷ್ಟೊಂದು ಆಸಕ್ತಿ ಎಂದು ನನಗೆ ಅರ್ಥವಾಗಲಿಲ್ಲ. ಹೀಗೆ ಸತತವಾಗಿ ಮಾಡುತ್ತ ನನ್ನ ಬೆನ್ನಿನವರೆಗೆ ಬಂದರು. ನನ್ನ ಬೆನ್ನುಮೂಳೆಯು ಬಹಳ ಸೂಕ್ಷ್ಮ. ಅವರು ನನ್ನ ಬೆನ್ನನ್ನು ಮುಟ್ಟಿದ ತಕ್ಷಣ ಅವರನ್ನು ತಡೆಯುವ ಸಮಯ ಬಂತೆಂದು ನಿಶ್ಚಯಿಸಿದೆ. ಅವರಿಗೆ ನನ್ನನು ಎಬ್ಬಿಸಬೇಕಾಗಿದ್ದರೆ, ಸುಮ್ಮನೆ ಎಚ್ಚರಿಸಬಹುದಾಗಿತ್ತು. ನಾನು ಒಂದು ನಿಮಿಷ ತೆಗೆದುಕೊಂಡು ಹೊರಬರುತ್ತಿದ್ದೆ. ಈ ತಟ್ಟುವುದು ಬಡಿಯುವುದು ಎಲ್ಲಾ ಏತಕ್ಕಾಗಿ ಎಂದು ನನಗರ್ಥವಾಗಲಿಲ್ಲ.

ನಾನು ಕಣ್ಣು ತೆರೆದಾಗ, ಅವರೆಲ್ಲ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. "ನನ್ನಿಂದ ಏನಾದರೂ ತಪ್ಪಾಯಿತೇ?" ಎಂದು ಕೇಳಿದೆ. ಅದಕ್ಕವರು, "ಇಲ್ಲ, ನಮ್ಮ ಯಂತ್ರಗಳೆಲ್ಲ ನೀವು ಸತ್ತಿದ್ದೀರಿ ಎಂದು ಹೇಳುತ್ತಿವೆ." ಎಂದರು. ನಾನು, "ಸರಿ, ಅದು ಅದ್ಭುತವಾದ ತೀರ್ಮಾನ." ಎಂದೆ. ಅವರು ತಮ್ಮಲ್ಲೇ ಚರ್ಚಿಸಿಕೊಂಡು, "ಒಂದೋ, ನೀವು ಸತ್ತಿದ್ದೀರಿ ಅಥವಾ ನಿಮ್ಮ ಮೆದುಳು ನಿಷ್ಕ್ರಿಯವಾಗಿದೆ." ಎಂದು ಹೇಳಿದರು. "ಎರಡನೇ ನಿರೂಪಣೆ ತೀರ ಅವಮಾನಕಾರಿಯಾಗಿದೆ, ನಾನು ಮೊದಲನೆಯದ್ದನ್ನೇ ಒಪ್ಪಿಕೊಳ್ಳುತ್ತೇನೆ. ನೀವು ಏನಾದರೂ ಹೇಳಿ, ನಾನು ಮಾತ್ರ ಜೀವಂತವಾಗಿದ್ದೇನೆ. ಮೆದುಳು ನಿಷ್ಕ್ರಿಯವಾಗಿದೆ ಎನ್ನವುದು ಒಳ್ಳೆಯ ದೃಢೀಕರಣವಲ್ಲ." ಎಂದು ಹೇಳಿದೆ.

ನಿಮ್ಮಲ್ಲಿ ಇರುವಂತಹ ಅಷ್ಟೋ ಇಷ್ಟೋ ಮಾಹಿತಿ ಮತ್ತು ಜ್ಞಾನದ ಆಧಾರದ ಮೇಲೆ ಜೀವನವನ್ನು ನೀವು ಈ ರೀತಿಯಲ್ಲಿ ಪರಿಶೀಲಿಸುತ್ತ ಹೋದರೆ, ನೀವು ಸಹಜವಾಗಿಯೇ ತಪ್ಪು ತೀರ್ಮಾನಕ್ಕೆ ಬರುತ್ತೀರಿ. ಆದರೆ, ಜಗತ್ತು ಇಂದು ಈ ರೀತಿಯಲ್ಲೇ ನಡೆಯುತ್ತಿರುವ ಕಾರಣ ಹಾಗೆ ಮಾಡುವುದು ಮುಖ್ಯವಾಗಿದೆ. ಪುನಃ ನನ್ನನ್ನು ನಾನು ಈ ರೀತಿಯ ಪ್ರಯೋಗಗಳಿಗೆ ಒಳಪಡಿಸಿಕೊಳ್ಳಲು ಸಿದ್ಧವಿರದಿದ್ದ ಕಾರಣ, ಧ್ಯಾನ ಮಾಡುವ ಕೆಲವರಿಗೆ ಅವರ ಮೆದುಳನ್ನು ಸ್ಕ್ಯಾನ್ ಮಾಡಿಸಿಕೊಳ್ಳಲು ಕೇಳಿಕೊಂಡೆ. ಇದರ ಸಂಸ್ಕರಣೆಯು ನಮ್ಮ ದೇಶದ ಪ್ರಧಾನ ಸಂಸ್ಥೆಯೊಂದರಲ್ಲಿ ನಡೆಯಿತು. ಎಡ ಮತ್ತು ಬಲ ಮೆದುಳಿನ ನಡುವೆ ಅಪೂರ್ವವಾದ ಸಾಮರಸ್ಯ ಇರುವುದನ್ನು ಅವರು ಕಂಡುಕೊಂಡರು. ಇದನ್ನು ಗಮನಿಸಿದವರು, "ನಾವು ಇಂತಹುದನ್ನು ಯಾವತ್ತೂ ನೋಡಿಲ್ಲ." ಎಂದು ಹೇಳಿದರು. ಆ ಪ್ರಯೋಗಗಳಿಗೆ ಒಳಗಾದವರು ಯೌಗಿಕ ಅಭ್ಯಾಸಗಳನ್ನು ಕೇವಲ ಮೂರು ತಿಂಗಳು ಅಥವಾ ಸ್ವಲ್ಪ ಹೆಚ್ಚಿನ ಕಾಲವಷ್ಟೇ ಮಾಡಿದವರಾಗಿದ್ದರು.

ಎಡ ಮತ್ತು ಬಲ ಮೆದುಳಿನ ಸಾಮರಸ್ಯ

ಇದರ ಅರ್ಥವೇನೆಂದರೆ, ನಿಮ್ಮ ಐದು ಇಂದ್ರಿಯಗಳ ಮೂಲಕ ನೀವು ಸ್ವೀಕರಿಸುವ ಮತ್ತು ಸಂಸ್ಕರಿಸುವ ಯಾವುದೇ ಮಾಹಿತಿಯು ಸಾಮಾನ್ಯವಾಗಿ ಎಡ ಮೆದುಳಿಗೆ ಹೋಗುತ್ತದೆ. ದೇಹದ ಉಳಿದ ಭಾಗಗಳಿಂದ ಗ್ರಹಿಸುವ ಮಾಹಿತಿ - ಯಾವುದು ತಾರ್ಕಿಕವಲ್ಲವೋ, ಯಾವುದು ಬಿಡಿಬಿಡಿಯಾಗಿಲ್ಲವೋ, ಯಾವುದು ನಿಮ್ಮ ಜೀವಕ್ಕೆ ಬಹು ಅಗತ್ಯವಿರುವ ಏಕರೂಪದ ಮಾಹಿತಿಯೋ, ಆ ಮಾಹಿತಿಯನ್ನು ತಾರ್ಕಿಕವಲ್ಲದ ನಿಮ್ಮ ಬಲ ಮೆದುಳು ಸಂಸ್ಕರಿಸುತ್ತದೆ. ನಿಮಗೆ ಇದರ ಬಗ್ಗೆ ಅರಿವಿಲ್ಲದಿರಬಹುದು, ಆದರೆ ನೀವು ಈ ಮಾಹಿತಿಯನ್ನು ಸದಾ ಕಾಲ ಬಳಸುತ್ತಿರುವಿರಿ. ಇಲ್ಲದಿದ್ದರೆ ನಿಮಗೆ ಇಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಎಡ ಮೆದುಳು ಮತ್ತು ಬಲ ಮೆದುಳಿನ ನಡುವೆ ಸಕ್ರಿಯವಾದ ಲಯಬದ್ಧತೆ ಇರದ ಹೊರತು, ನಿಮಗೆ ಈ ಮಾಹಿತಿಯನ್ನು ಪ್ರಜ್ಞಾಪೂರ್ವಕವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮೊಳಗಿರುವ ಆ ಜೀವದ ಭಾಗವನ್ನು ನೀವು ಪ್ರಜ್ಞಾಪೂರ್ವಕವಾಗಿ ಪಡೆಯುವಂತಾದರೆ, ನಿಮ್ಮೊಳಗಿನ ಆ ಮಾಹಿತಿ ಮತ್ತು ಜ್ಞಾನವು ನಿಮ್ಮನ್ನು ನೀವು ಕಲ್ಪಿಸಿಕೊಂಡಿರದಂತಹ ಸ್ಥಳಗಳಿಗೆ ಕರೆದೊಯ್ಯಬಹುದಾಗಿದೆ. ಹಾಗಾದಾಗ ಜೀವನದಲ್ಲಿ ನೀವು ಏನನ್ನು ತೀವ್ರವಾದ ಶ್ರಮದಿಂದ ಮಾಡುತ್ತಿರುವಿರೋ, ಅದನ್ನು ಸಲೀಸಾಗಿ ಮಾಡಬಹುದು.

ಬಹಳಷ್ಟು ಜನರಲ್ಲಿ, ಧ್ಯಾನ ಮತ್ತು ಯೋಗವು ಅವರ ಜೀವನದಲ್ಲಿ ಅವರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ಹೇಗೆ ಬಾಳುತ್ತಾರೆ ಎನ್ನುವುದರಲ್ಲಿ ಬಿಂಬಿತವಾಗುತ್ತದೆ. ಉದಾಹರಣೆಗೆ, ಇಂದಿನ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮೂವತ್ತು ದಿನಗಳಲ್ಲಿ ಮಾಡುವ ಯಾವುದೇ ಚಟುವಟಿಕೆಯನ್ನು, ಕೇವಲ ಆರು ತಿಂಗಳ ಅಭ್ಯಾಸದಿಂದ, ಕಡಿಮೆ ಸಮಯದಲ್ಲಿ ಬಹಳ ಸಲೀಸಾಗಿ ಮಾಡಿ ಮುಗಿಸಬಹುದು. ಆದರೆ, ಅದನ್ನವರು ಒಪ್ಪಂದದ ಉದ್ದೇಶಗಳಿಂದಾಗಿ ವಿಸ್ತರಿಸುತ್ತಿದ್ದರೆ, ಅದು ಅವರಿಗೆ ಬಿಟ್ಟಿದ್ದು. ಜಗತ್ತಿನಲ್ಲಿ ಕಾರ್ಯನಿರ್ವಹಿಸುವ ನಿಮ್ಮ ಸಾಮರ್ಥ್ಯವನ್ನು ಅಪಾರವಾಗಿ ವರ್ಧಿಸಬಹುದಾಗಿದೆ – ಅಚ್ಚರಿ ಎನಿಸುವಷ್ಟು ವರ್ಧಿಸಬಹುದು. ಯೌಗಿಕ ಅಭ್ಯಾಸಗಳಿಗೆ ನಿಮ್ಮನ್ನು ನೀವು ಸಮರ್ಪಸಿಕೊಂಡರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಅದು ನಿಮ್ಮನ್ನು ಬೇರೆಯವರಿಗಿಂತ ವೈಶಿಷ್ಟಪೂರ್ಣರನ್ನಾಗಿ ಮಾಡುತ್ತದೆ. ನಿಮ್ಮ ಆರೋಗ್ಯದ ವಿಷಯದಲ್ಲೂ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ ಎಂದು ಹೇಳುವುದಕ್ಕಿಂದು ಸಾಕಷ್ಟು ವೈದ್ಯಕೀಯ ಸಂಶೋಧನೆಗಳಿವೆ.

ನಿಜವಾದ ಪರಿಣಾಮವು ನಿಧಾನವಾಗಿ ಬೆಳೆಯುತ್ತಿರುತ್ತದೆ

ಆದರೆ, ಈ ಎಲ್ಲಾ ಲಾಭಗಳು - ದೈಹಿಕ ಆರೋಗ್ಯ, ಮಾನಸಿಕ ಸಾಮರ್ಥ್ಯಗಳು, ಜೀವನವನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ - ಇವೆಲ್ಲವು ಕೇವಲ ಉಪ-ಪರಿಣಾಮಗಳಷ್ಟೆ. ನಿಜವಾದ ಲಾಭವು ನಿಧಾನವಾಗಿ ಬೆಳೆಯುತ್ತಿರುತ್ತದೆ. ಅದು ಅರಳಿದಾಗ ಮಾತ್ರ ನಿಮಗೆ ತಿಳಿಯುತ್ತದೆ. ಅಲ್ಲಿಯವರೆಗು, ಏನೂ ಆಗುತ್ತಿಲ್ಲವೆಂದು ನೀವು ಯೋಚಿಸುತ್ತೀರಿ. ಇದು ನಿಮ್ಮ ಮನೆಯಲ್ಲಿ ನೀವು ಹೂವಿನ ಗಿಡ ನೆಟ್ಟ ಹಾಗೆ. ಅದು ಬೆಳಯುತ್ತಿದ್ದಂತೆ, ಕೇವಲ ಎಲೆಗಳು ಚಿಗುರುತ್ತಿರುತ್ತವೆ. ನಿಮ್ಮ ಪಕ್ಕದ ಮನೆಯವರು ಬಂದು, “ಈ ಗಿಡ ಸರಿಯಿದ್ದ ಹಾಗೆ ಕಾಣುವುದಿಲ್ಲ. ಹೂವು ಬಿಡುತ್ತದೆ ಎಂದುಕೊಂಡರೆ, ಬರೀ ಎಲೆಗಳು ಬರುತ್ತಿವೆ. ನಾಳೆ ಇದನ್ನು ಕಡಿದು ಹಾಕಿ, ಸೌದೆಯಾಗಿ ಬಳಸೋಣ." ಎನ್ನುತ್ತಾರೆ. ನೀವು ಅದಕ್ಕೆ, "ಸರಿ, ಬಹುಶಃ ನಾಳೆ ಹೂ ಬಿಡಬಹುದೇನೋ ನೋಡೋಣ." ಎಂದು ಹೇಳುತ್ತೀರಿ. ನಾಳೆ, ನಾಳೆ, ನಾಳೆ ಎಂದು ಹೇಳುತ್ತ ವರ್ಷಗಳೇ ಉರುಳುತ್ತವೆ. ಹೂವಾಗಲು ಎಷ್ಟು ವರ್ಷಗಳು ಬೇಕು ಎನ್ನುವುದು ನಿಮಗೆ ತಿಳಿದಿಲ್ಲದಿದ್ದರೆ, ನೀವು ಆ ಮರವನ್ನು ಬಹುಶಃ ಸಾವಿರಾರು ಬಾರಿ ಕಡಿದಿರುತ್ತಿದ್ದಿರಿ. ಆದರೆ, ನೀವು ಅದನ್ನು ಪೋಷಿಸುತ್ತ ಬಂದರೆ, ಒಂದು ದಿನ ಅದು ಹೂ ಬಿಟ್ಟಾಗ, ಅದು ಸಂಪೂರ್ಣವಾಗಿ ಅರಳಿ ನಿಂತಾಗ, ಆ ಮರವಿರುವುದು ಎಲೆಗಳ ಬಗ್ಗೆಯಾಗಲಿ, ಅದು ನೀಡುವ ನೆರಳಿನ ಬಗ್ಗೆಯಾಗಲಿ, ಅಥವಾ ಅದು ಕೊಡುವ ಆಮ್ಲಜನಕದ ಬಗ್ಗೆಯಾಗಲಿ ಅಲ್ಲ, ಆದರೆ ಅದು ಆ ಹೂಗಳ ಅದ್ಭುತವಾದ ಸೌಂದರ್ಯದ ಬಗ್ಗೆ ಎಂದು ನಿಮಗೆ ಮನವರಿಕೆಯಾಗುತ್ತದೆ. ಅಂತೆಯೇ ನೀವೂ ಸಹ ಅರಳಿ ಹೂವಾದಾಗ, ಅದು ಅತ್ಯದ್ಭುತವಾಗಿ ಸುಂದರವಾಗಿರುತ್ತದೆ.

ಸಂಪಾದಕರ ಟಿಪ್ಪಣಿ:  ವೈದ್ಯಕೀಯ ಸಂಶೋಧನೆಯ ಪ್ರಕಾರ ಈಶ ಫೌಂಡೇಶನ್ನಲ್ಲಿ ನಡೆಯುವ ಶಾಂಭವಿ ಮಹಾಮುದ್ರ ಕ್ರಿಯೆಯ "ಉಪ-ಪ್ರಯೋಜನಗಳ" ಪಟ್ಟಿಯನ್ನು ಇಲ್ಲಿ ನೀಡಲಾಗಿದೆ list of the “side-benefits”. ಈ ಉಚಿತ 5-ನಿಮಿಷಗಳ ಉಪ-ಯೋಗ ವಿಧಾನಗಳನ್ನು ಸಹ ನೀವು ಪ್ರಯತ್ನಿಸಬಹುದು.
5-minute Upa-Yoga practices.