೨೦೧೭, ಜನವರಿ ೧೧ರಂದು ಬರುವ ಅರುದ್ರ ದರ್ಶನವು ಚಿದಂಬರಂ ದೇವಾಲಯದ ವಿಶೇಷವಾದ ದಿನವಾಗಿದೆ. ಸದ್ಗುರುಗಳು ಚಿದಂಬರಂ ದೇವಾಲಯವನ್ನು ಹೇಗೆ ಮತ್ತು ಏಕೆ ನಿರ್ಮಿಸಲಾಯಿತು ಎಂದು ನೋಡುತ್ತಾ, ಆಧುನಿಕ ಯೋಗದ ಪಿತಾಮಹರಾದ ಪತಂಜಲಿಯವರೊಂದಿಗೆ ಅದರ ಸಂಬಂಧವನ್ನು ಸವಿಸ್ತಾರವಾಗಿ ಚರ್ಚಿಸುತ್ತಾರೆ.

ಸದ್ಗುರು: ಪಂಚಭೂತಗಳಾದ ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶಕ್ಕೆ, ದಕ್ಷಿಣ ಭಾರತದಲ್ಲಿ  ಐದು ದೇವಾಲಯಗಳನ್ನು ನಿರ್ಮಿಸಲಾಗಿತ್ತು. ಇವನ್ನು “ಪಂಚ ಭೂತ ಸ್ಥಳಗಳು” ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ, ಇವುಗಳೆಲ್ಲ ದಕ್ಷಿಣದ ಪ್ರಸ್ಥಭೂಮಿಯ (Deccan Plateau) ಒಳಗಿದೆ - ತಮಿಳುನಾಡಿನಲ್ಲಿ ನಾಲ್ಕು ಮತ್ತು ಆಂಧ್ರ ಪ್ರದೇಶದಲ್ಲಿ ಒಂದು. ’ಜಲ’ ದೇವಾಲಯವು ತಿರುವನೈಕಾದಲ್ಲಿದೆ, ಅಗ್ನಿಯ ಕ್ಷೇತ್ರವು ತಿರುವಣ್ಣಾಮಲೈನಲ್ಲಿದೆ, ಕಾಳಹಸ್ತಿಯಲ್ಲಿರುವುದು ವಾಯುವಿನ ಕ್ಷೇತ್ರ ಹಾಗೂ ಕಾಂಚಿಪುರದಲ್ಲಿರುವುದು ಪೃಥ್ವಿಯ ದೇವಾಲಯ. ಚಿದಂಬರಂನಲ್ಲಿರುವ ದೇವಾಲಯ ಆಕಾಶದ ಕ್ಷೇತ್ರವಾಗಿದೆ.

ಚಿದಂಬರಂ ದೇವಸ್ಥಾನವು ನಂಬಿಕೆಗೆ ನಿಲುಕದ ಸ್ಥಳವಾಗಿದೆ. ದೇವಾಲಯದ ಹೊಸ ಭಾಗವು ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾಗಿದೆ, ಆದರೆ ದೇವಾಲಯದ ಹಳೆಯ ಭಾಗವು ಎಷ್ಟು ಹಳೆಯದು ಎಂಬುದು ಯಾರಿಗೂ ತಿಳಿದಿಲ್ಲ. ೩,೫೦೦ ವರ್ಷ ಅಥವಾ ಅದಕ್ಕಿಂತ ಹೆಚ್ಚು ಎಂದು ಜನರು ಹೇಳುತ್ತಾರೆ. ಭಾರತೀಯ ಸಂಸ್ಕೃತಿಯು ಇದ್ದದ್ದು ಹೀಗೆ. ಪ್ರಾಚೀನ ಕಾಲದಲ್ಲಿಯೂ ಸಹ, ಅವರು ನಿರ್ಮಿಸಿದಂತಹ ದೇವಾಲಯಗಳನ್ನು ನೋಡಿ. ರಾಮೇಶ್ವರಂ ದೇವಾಲಯ, ಚಿದಂಬರಂ ದೇವಸ್ಥಾನ, ಅಥವಾ ಮಧುರೈ ದೇವಸ್ಥಾನ ಆಗಿರಬಹುದು, ಇವೆಲ್ಲವೂ ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಿದ ವಿಶಾಲ ಸ್ಥಾಪನೆಗಳು. ಆ ಕಾಲದಲ್ಲಿ, ರಾಜನನ್ನು ಹೊರತುಪಡಿಸಿ ಬೇರೆಯವರೆಲ್ಲರೂ ಗುಡಿಸಲಿನಲ್ಲಿರುತ್ತಿದ್ದರು. ಯಾವುದೇ ಯಂತ್ರೋಪಕರಣಗಳು, ಹೊರುವ ಲಾರಿಗಳು ಅಥವಾ ಕ್ರೇನುಗಳು (cranes) ಇರುತ್ತಿರಲಿಲ್ಲ, ಆದರೂ, ಒಮ್ಮನಸಿನ ಉದ್ದೇಶದಿಂದ, ಈ ದೇವಾಲಯಗಳಲ್ಲಿ ಒಂದೆರಡು ತಲೆಮಾರಿನವರವಿಗೂ ಕೆಲಸ ಮಾಡಿದರು. ಈ ದೇವಾಲಯಗಳು ಎಷ್ಟು ಮಹತ್ವವನ್ನು ಹೊಂದಿತ್ತೆಂದರೆ, ಇದನ್ನು ನಿರ್ಮಿಸಲು ಈ ಜನರು ತಮ್ಮ ಬದುಕನ್ನೇ ಸವೆಸಿದರು, ತಮ್ಮ ಇಡಿ ಜೀವಮಾನವನ್ನು ಸಮರ್ಪಿಸಿದರು. 

ನಟರಾಜ – ನೃತ್ಯದ ಅಧಿದೇವತೆ

ಚಿದಂಬರಂ ದೇವಸ್ಥಾನದಲ್ಲಿ, ಶಿವನು, ನಟರಾಜನ ರೂಪದಲ್ಲಿ ನೆಲೆಸಿದ್ದಾನೆ. ನಟೇಶ ಅಥವಾ ನಟರಾಜ, ಶಿವನ ಪ್ರಮುಖ ಸ್ವರೂಪಗಳಲ್ಲಿ ಒಂದಾಗಿದೆ. ಸ್ವಿಟ್ಜರ್‌ಲ್ಯಾಂಡ್ ದೇಶದ ಜಿನಿವಾ ನಗರದಲ್ಲಿರುವ CERN, ಭೂಮಿಯ ಮೇಲಿನ ಮಹತ್ತರದ ಭೌತಶಾಸ್ತ್ರದ ಪ್ರಯೋಗಾಲಯ, ಪರಮಾಣುಗಳ ಸಂಘರ್ಷಣೆ (atom smashing) ನಡೆಯುವ ಸ್ಥಳವಿದು - ಅಲ್ಲಿಗೆ ನಾನು ಭೇಟಿ ನೀಡಿದಾಗ, ಮುಂಭಾಗದಲ್ಲಿ ನಟರಾಜನ ಲೋಹದ ಮೂರ್ತಿ ಇರುವುದನ್ನು ನೋಡಿದೆ. ಅವರು ಈಗ ಮಾಡುತ್ತಿರುವ ಸಂಶೋಧನೆಗೆ ಹತ್ತಿರವಾದದ್ದು ಮಾನವ ಸಂಸ್ಕೃತಿಯಲ್ಲಿ ಬೇರೇನೂ ಇಲ್ಲ ಎಂದು ಅವರು ಗುರುತಿಸಿದ್ದಾರೆ. 

ನಟರಾಜನ ಸ್ವರೂಪವು ದಕ್ಷಿಣ ಭಾರತದ ತಮಿಳುನಾಡಿನಿಂದ ಬಂದದ್ದಾಗಿದೆ. ಇದು ಸೃಷ್ಟಿಯ ಉತ್ಕೃಷ್ಟತೆಯನ್ನು ಪ್ರತಿನಿಧಿಸುತ್ತದೆ. ಸೃಷ್ಟಿಯ ನೃತ್ಯವು ಸ್ವತಃ ತಾನೆ ಅನಂತವಾದ ಶೂನ್ಯತೆಯಿಂದ ಸೃಷ್ಟಿಯಾಯಿತೆನ್ನುವುದನ್ನು ಪ್ರತಿನಿಧಿಸುತ್ತದೆ. ಚಿದಂಬರಂನಲ್ಲಿ ನಿಂತಿರುವ ನಟರಾಜನ ಸ್ವರೂಪವು ಬಹಳ ಸಾಂಕೇತಿಕವಾಗಿದ್ದು – “ಚಿದಂಬರ” ಎಂದರೆ ಪರಿಪೂರ್ಣ ಸ್ಥಿರತೆಯಷ್ಟೆ. ಇದನ್ನೆ ದೇವಸ್ಥಾನದ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಮಾನವರಲ್ಲಿ, ಈ ಸಂಪೂರ್ಣ ಸ್ಥಿರತೆಯನ್ನು ತರಲಿಕ್ಕಾಗಿಯೇ ಶಾಸ್ತ್ರೀಯ ಕಲೆಗಳಿರುವುದು. ಸ್ಥಿರತೆ ಇಲ್ಲದೆ, ನಿಜವಾದ ಕಲೆ ಬರಲು ಸಾಧ್ಯವಿಲ್ಲ.

ಆಕಾಶ

ಚಿದಂಬರಂ ದೇವಾಲಯದಲ್ಲಿ ನಟರಾಜನ ಸ್ವರೂಪವು ಒಂದು ಸಂಗತಿ, ಆದರೆ, ಈ ಸ್ಥಳದ ಮುಖ್ಯ ದೇವತೆಯೆಂದರೆ ಖಾಲಿಯಾದ ಆಕಾಶ. ಈ ದೇವಾಲಯವನ್ನು ಸ್ವತಃ ಪತಂಜಲಿಯೇ ಪ್ರತಿಷ್ಠಾಪಿಸಿದರು. ಪತಂಜಲಿಯನ್ನು "ಆಧುನಿಕ ಯೋಗದ ಪಿತಾಮಹ" ಎಂದು ಕರೆಯಲಾಗುತ್ತದೆ. ಅವರು ಯೋಗವನ್ನು ಕಂಡುಹಿಡಿಯಲಿಲ್ಲ, ಯೋಗವು ವಿವಿಧ ರೂಪಗಳಲ್ಲಿ ಆಗಲೇ ಅಸ್ತಿತ್ವದಲ್ಲಿತ್ತು, ಅವರು ಅದನ್ನು ಒಂದು ವ್ಯವಸ್ಥೆಯಡಿಯಲ್ಲಿ ಸಮೀಕರಿಸಿದರು, ಯೋಗಸೂತ್ರಗಳು ಬರೆಯಲ್ಪಟ್ಟಿದ್ದು ಅವರಿಂದಲೆ. ಪತಂಜಲಿಯನ್ನು ನಾವು ನೋಡಿದರೆ - ಅವರು ಜ್ಞಾನೋದಯವನ್ನು ಪಡೆದ ಪ್ರಬುದ್ಧರಾಗಿದ್ದರು. ಬೇರೆಯವರಿಗಿಂತ ಪ್ರಬುದ್ಧರಾಗಿದ್ದರು ಅಂತಲ್ಲ. ಅಂತಹದೇನು ಇಲ್ಲ. ಜ್ಞಾನೋದಯವೆಂದರೆ ಜ್ಞಾನೋದಯ. ಆದರೆ, ಪತಂಜಲಿಯನ್ನು; ಒಬ್ಬ ವ್ಯಕ್ತಿ, ಅದಕ್ಕಿಂತ ಮಿಗಿಲಾಗಿ ಒಬ್ಬ ಬುದ್ಧಿಜೀವಿ ಎಂದು ಪರಿಗಣಿಸಿದರೆ, ಜೀವನದ ಬಗ್ಗೆ ಅವರ ಗ್ರಹಿಕೆಯ ವಿಸ್ತಾರವು ಎಷ್ಟು ವಿಶಾಲವಾಗಿತ್ತೆಂದರೆ, ಇದು ಒಬ್ಬ ವ್ಯಕ್ತಿಯಲ್ಲಿ ಇರಲು ಸಾಧ್ಯವೆಂದು ನಂಬಲಾಗದು. ಅವರೊಬ್ಬ ಅಸಾಮಾನ್ಯರು, ಅವರನ್ನು ನೋಡಿದರೆ ಅವರು ಮನುಷ್ಯರೇ ಅಲ್ಲವೇನೋ ಎಂದೆನಿಸುತ್ತದೆ.

ಚಿದಂಬರಂ ದೇವಸ್ಥಾನದ ಚಿತ್ರಕಲೆಯಲ್ಲಿ ನಟರಾಜ. ನಟರಾಜನ ಎಡಕ್ಕೆ - ಪಾರ್ವತಿ, ಬಲಕ್ಕೆ - ವ್ಯಗ್ರಹಪಾದ, ಪತಾಂಜಲಿ

ಪತಂಜಲಿಯು ಒಬ್ಬ ಭಕ್ತರಿಗಿಂತ ವಿಜ್ಞಾನಿಯಾಗಿದ್ದ ಕಾರಣ, ಈ ದೇವಾಲಯದ ಹಿಂದೆ ಒಂದು ನಿರ್ದಿಷ್ಟ ವಿಜ್ಞಾನವನ್ನು ಬಳಸಿ ಇದನ್ನು ಪ್ರತಿಷ್ಠಾಪಿಸಿದ್ದಾರೆ. ಅವರೊಬ್ಬ ವಿಜ್ಞಾನಿ, ಹಾಗಾಗಿ, ದೇವಸ್ಥಾನವನ್ನು ನಡೆಸಲು ತಕ್ಕದಾದ ಮಾರ್ಗವನ್ನು ಸ್ಥಾಪಿಸಿದರು. ನಿರ್ದಿಷ್ಟ ಮಟ್ಟದ ಸಾಧನೆ ಮತ್ತು ಶಿಸ್ತುಗಳನ್ನು ಕಾಯ್ದುಕೊಳ್ಳಬೇಕಾದ, ದೇವಾಲಯದ ದೈನಂದಿನ ಧಾರ್ಮಿಕ ಕ್ರಿಯೆಯನ್ನು ನಿರ್ವಹಿಸುವ ಜನರ ಗುಂಪನ್ನು ಅವರು ಸಿದ್ಧಪಡಿಸಿದರು. ಆ ಕುಟುಂಬಗಳು ಬೆಳೆದು, ದೇವಸ್ಥಾನವನ್ನು ನೆಡೆಸುವುದನ್ನು ಮುಂದುವರೆಸಿದರು. ಇಂದಿಗೂ ಕೂಡ, ಅವರುಗಳು ದೇವಸ್ಥಾನವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಪತಂಜಲಿಯು ಸೂಚಿಸಿದ ಸಂಕೇತಗಳು ಮತ್ತು ಧಾರ್ಮಿಕ ಸಂಸ್ಕಾರದ ಆಚರಣೆಗಳನ್ನು ಕಾಪಾಡಿಕೊಳ್ಳುತ್ತಿದ್ದಾರೆ. 

ಅರುದ್ರ ದರ್ಶನ

ಚಿದಂಬರಂನಲ್ಲಿ ಪ್ರಸಿದ್ಧವಾದ ಒಂದು ಅಂಶವೆಂದರೆ ಮಾರ್ಗಜಿ ತಿಂಗಳಲ್ಲಿ ಬರುವ ಅರದ್ರ ದರ್ಶನ. ರುದ್ರ ಎಂದರೆ ಗರ್ಜನೆ ಮಾಡುವವನು ಎಂದು, ಅಥವಾ ಯಾರು ಉತ್ಸಾಹಭರಿತರಾಗಿರುವರೋ ಅಂತಹವರು - ಉತ್ಸಾಹಕ್ಕಿಂತ ಹೆಚ್ಚು, ಗರ್ಜನೆ ಎಂದು. ಅರುದ್ರ ಎಂದರೆ ಸ್ಥಿರ ಎಂದು; ಗರ್ಜನೆ ಮಾಡುವ ಪರಿ ಅಲ್ಲ ಅದರೆ ಸಂಪೂರ್ಣವಾಗಿ ಸ್ಥಿರ. ರುದ್ರ ಚಲನೆ ಮತ್ತು ಸೃಷ್ಟಿಯನ್ನು ಸೂಚಿಸುತ್ತದೆ. ಅರುದ್ರ ಒಂದು ರೀತಿಯ ಸ್ಥಿರತೆಯನ್ನು ಸೂಚಿಸುತ್ತದೆ.

ಚಿದಂಬರಂ ದೇವಾಲಯದ ಪುನಶ್ಚೇತನ

ಚಿದಂಬರಂ ದೇವಾಲಯದ ಕಟ್ಟಡಗಳನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಭವ್ಯವಾದ ಈ ಕಟ್ಟಡಗಳು ಸುಮಾರು ಮೂವತ್ತೈದು ಎಕರೆಗಳನ್ನು ಆವರಿಸಿದೆ. ಇದಲ್ಲದೆ, ವಿಶಾಲವಾದ ದೇವಾಲಯವನ್ನು ನಡೆಸಿಕೊಂಡು ಬರುವುದಕ್ಕೆ, ಆಭರಣಗಳ ಜೊತೆಗೆ ನೂರಾರು ಎಕರೆ ಭೂಮಿಯನ್ನು ಅದರೊಂದಿಗೆ ಲಗತ್ತಿಸಲಾಗಿತ್ತು. ಆದರೆ ಬ್ರಿಟೀಷರ ಕಾಲದಲ್ಲಿ ದೇವಾಲಯದೊಂದಿಗೆ ಲಗತ್ತಿಸಲಾದ ಅಗಾಧ ಸಂಪತ್ತಿನ ಕಾರಣದಿಂದಾಗಿ ಅವುಗಳನ್ನೆಲ್ಲ ಬ್ರಿಟೀಷರು ವಹಿಸಿಕೊಂಡರು - ಎಲ್ಲಾ ಆಭರಣಗಳು ಇಂದು ಸಂಪೂರ್ಣವಾಗಿ ಕಣ್ಮರೆಯಾಗಿವೆ. ಎರಡನೆಯ ಮಹಾಯುದ್ಧಕ್ಕಾಗಿ, ಬ್ರಿಟಿಷ್ ಸಾಮ್ರಾಜ್ಯದ ಬೃಹತ್ ಮೊತ್ತದ ಬಂಡವಾಳವು ಭಾರತದ ದೇವಾಲಯಗಳಿಂದ ಬಂದವು ಎಂದು ಹೇಳಲಾಗುತ್ತದೆ. ದೇವಾಲಯದ ಜಮೀನಿನ ನಿಯಂತ್ರಣ ಪಡೆದು, ಅದನ್ನು ವಿತರಿಸಿ ಬಿಟ್ಟರು. ಹಾಗಾಗಿ, ಈಗ ದುಡ್ಡಿಲ್ಲದೆ, ದೇವಾಲಯವನ್ನು ನಿರ್ವಹಿಸಲಾಗದ ಸ್ಥಿತಿ ಬಂದಿದೆ.

ಇಂದು ಸುಮಾರು ೩೬೦ ಕುಟುಂಬಗಳು ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿವೆ ಮತ್ತು ಅದರ ಫಲಾನುಭವಿಗಳಾಗಿದ್ದಾರೆ. ಆದರೆ ಅವರಿಗೆ ಅದನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ - ಅನೇಕ ವಿಷಯಗಳು ಕಳೆದು ಹೋಗುತ್ತಿವೆ. ಚಾವಣಿಯಲ್ಲಿರುವ ಸಾವಿರ ವರ್ಷ ಹಳೆಯ ತರಕಾರಿ ವರ್ಣಚಿತ್ರಗಳು ಶೇ. ೬೦ರಷ್ಟು ಮಾಸಿಹೋಗಿದೆ. ಮೆತುಗಾರೆಯೆಲ್ಲ (plaster) ಕುಸಿದುಹೋಗುತ್ತಿದೆ, ಇದನ್ನು ನೋಡಿಕೊಳ್ಳುವವರು ಯಾರು ಇಲ್ಲ. ಅದಲ್ಲದೆ ಈ ಸ್ಥಳದ ವೈಶಿಷ್ಟ್ಯತೆಯನ್ನು ಅರಿಯದೆ, ಸಂಪೂರ್ಣವಾದ ಕಲ್ಲಿನ ದೇವಸ್ಥಾನದಲ್ಲಿ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇದರಿಂದಾಗಿ, ದೇವಾಲಯದ ಸೌಂದರ್ಯ ಹಾಗೂ ವಿಜ್ಞಾನ ಗಲಿಬಿಲಿಗೊಂಡಿದೆ.

ಪತಂಜಲಿಯವರು ಈ ದೇವಸ್ಥಾನವನ್ನು ನಿರ್ಮಿಸಿದಾಗ, ಅವರೇನು ಅದನ್ನು ಅಲಂಕಾರಕ್ಕಾಗಿ ನಿರ್ಮಿಸಲಿಲ್ಲ. ಸಂಪೂರ್ಣವಾಗಿ ಅಗತ್ಯವಾದವುಗಳನ್ನು ಮಾತ್ರ ನಿರ್ಮಿಸಿದರು. ಇದೊಂದು ಅಸಾಮಾನ್ಯ ಸ್ಥಳವಾಗಿದೆ. ಈ ಜಾಗವನ್ನು ರಕ್ಷಿಸಿ, ಪೋಷಿಸಬೇಕು, ಹಾಗೂ ಇಡೀ ಮಾನವಕುಲಕ್ಕೆ ಲಭ್ಯವಾಗುವಂತೆ ಮಾಡಬೇಕು. ನಾವು ಇದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ, ದೇವಾಲಯದ ಪುನಶ್ಚೇತನಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಸುತ್ತಮುತ್ತಲಿನ ಪ್ರದೇಶವನ್ನು ತೆರವುಗೊಳಿಸಬೇಕು, ಏಕೆಂದರೆ ಮೇಲೆದ್ದಿರುವ ಎಲ್ಲಾ ತರಹದ ಅಂಗಡಿಗಳಿಂದ ಈ ಸ್ಥಳವು ಹಾಳಾಗಿದೆ. ಇದರ ಬಗ್ಗೆ ಏನಾದರೂ ಮಾಡಲಿಕ್ಕಾಗುವುದೆ ಎಂದು ನಾವು ನೋಡುತ್ತಿದ್ದೇವೆ. ಅವುಗಳ ಬದಲು ಸರಿಯಾದ ಅಂಗಡಿಗಳು, ಹೋಟೆಲ್-ಗಳನ್ನು ನಿರ್ಮಿಸಬಹುದೆ ಎಂದು ನೋಡುತ್ತಿದ್ದೇವೆ. ಆದರೆ, ಇದಿನ್ನೂ ಒಂದು ಕಲ್ಪನೆ ಮಾತ್ರ. ನಾವು ಭಾರತದಲ್ಲಿ Corporate ಬೆಂಬಲದ ಹುಡುಕಾಟದಲ್ಲಿದ್ದೀವಿ. ಅದೇನಾದರು ಸಿಕ್ಕರೆ, ನಾವು ಇದನ್ನು ಪೂರ್ವಸ್ಥಿತಿಗೆ ತರಲು ಬಯಸುತ್ತೀವಿ, ಏಕೆಂದರೆ, ನಿಮ್ಮ ಮನೆ ೧೦,೦೦೦ ಚದರಡಿ ಇದೆಯೋ ಅಥವಾ ೧೦೦೦ ಚದರಡಿ ಇದೆಯೋ, ನಿಮ್ಮ ಜೀವನದಲ್ಲಿ, ಅದು ಅಂತಹ ದೊಡ್ಡದಾದ ವ್ಯತ್ಯಾಸವನ್ನೇನು ಮಾಡುವುದಿಲ್ಲ, ಆದರೆ, ಒಂದು ಪ್ರಾನಪ್ರತಿಷ್ಠಾಪಿತ ಜಾಗದ ಸುತ್ತ ಇದ್ದರೆ, ನಿಮ್ಮ ಜೀವನದಲ್ಲಿ ಅದೊಂದು ಅದ್ಭುತವಾದ ವ್ಯತ್ಯಾಸವನ್ನು ಮಾಡುತ್ತದೆ. ಈ ತಿಳುವಳಿಕೆಯೊಂದಿಗೆ, ಭಾರತೀಯ ಸಂಸ್ಕೃತಿಯಲ್ಲಿ, ಈ ರೀತಿಯ ವಾಸಸ್ಥಾನಗಳನ್ನು ನಿರ್ಮಿಸಿದ್ದರು: ೨೫ ಮನೆಗಳಿದ್ದರೆ, ಅದಕ್ಕೆ ಒಂದು ದೇವಾಲಯ ಇರಬೇಕು. ನೀವು ಅಲ್ಲಿಗೆ ಹೋಗ್ತೀರೋ, ಬಿಡ್ತೀರೋ; ನೀವು ಪ್ರಾರ್ಥಿಸ್ತೀರೋ, ಇಲ್ಲವೋ; ನಿಮಗೆ ಮಂತ್ರ ಗೊತ್ತಿದೆಯೋ, ಇಲ್ಲವೋ; ಅದು ಮುಖ್ಯ ಆಗಲ್ಲ. ನಿಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲಿ ನೀವು ಪ್ರಾಣಪ್ರತಿಷ್ಠಾಪಿತ ಸ್ಥಳದಲ್ಲಿ ಇರಬೇಕು. 

ಜೀವನದ ಈ ಆಯಾಮದ ಬಗ್ಗೆ ಅತೀವವಾದ ಜ್ಞಾನವನ್ನು ವಿಶೇಷವಾಗಿ ಈ ಸಂಸ್ಕೃತಿಯಲ್ಲಿ ಜೀವಂತವಾಗಿ ಇರಿಸಲಾಗಿತ್ತು ಹಾಗೂ ಇದು ಅತ್ಯಂತ ಮುಖ್ಯವಾದ ವಿಷಯವೆಂದು ಪರಿಗಣಿಸಲಾಗಿತ್ತು. ನೀವು ಏನನ್ನು ತಿನ್ನುತ್ತೀರ, ಹೇಗೆ ಇದ್ದೀರ, ಎಷ್ಟು ಕಾಲ ಬದುಕಿರುತ್ತೀರ ಅನ್ನುವುದು ಅಷ್ಟು ಮುಖ್ಯವಲ್ಲ. ಬದುಕಿನ ಒಂದು ಹಂತದಲ್ಲಿ, ನೀವು ಸೃಷ್ಟಿಯ ಮೂಲದೊಂದಿಗೆ ಸಂಪರ್ಕ ಹೊಂದುವ ಅಗತ್ಯವನ್ನು ಕಾಣುವಿರಿ. ಆ ಸಾಧ್ಯತೆಯನ್ನು ಜಗತ್ತಿನಾದ್ಯಂತ ಸೃಷ್ಟಿಸದಿದ್ದರೆ ಹಾಗೂ ಸಾಧಕರಾಗಲು ಬಯಸುವ ಪ್ರತಿಯೊಬ್ಬರಿಗೂ ಇದು ಲಭ್ಯವಾಗದಿದ್ದರೆ, ಸಮಾಜವು ಮನುಷ್ಯರಿಗೆ ನಿಜವಾದ ಯೋಗಕ್ಷೇಮವನ್ನು ಒದಗಿಸಲು ವಿಫಲವಾಗುತ್ತದೆ. 

ಸಂಪಾದಕರ ಟಿಪ್ಪಣಿ: ಸದ್ಗುರುಗಳ E-book, Shiva - Ultimate Outlaw ಅನ್ನು ಡೌನ್ಲೋಡ್ ಮಾಡಿ. ಈ ಪುಸ್ತಕವು ಸೊಗಸಾದ ಗ್ರಾಫಿಕ್ಸ್ ಹಾಗೂ ಸದ್ಗುರುಗಳ ಬುದ್ಧಿವಂತಿಕೆಯ ಮುತ್ತುಗಳಿಂದ ತುಂಬಿರುತ್ತದೆ. ಇದು ನಾವು “ಶಿವ”ಎಂದು ಕರೆಯುವವನ ಬಗ್ಗೆ ಇರುವ ಅನೇಕ ಅಜ್ಞಾತ ಅಂಶಗಳನ್ನು ಬಹಿರಂಗಪಡಿಸುತ್ತದೆ. ಶಿವನನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ನೋಡಿ!