ಪ್ರಶ್ನೆ: ಸದ್ಗುರು, ನಿಮ್ಮ ಬೋಧನೆಯು ಬಹಳಷ್ಟು ಶಕ್ತಿಯುತವಾಗಿದೆ, ಹಾಗಿರುವಾಗ, ಧ್ಯಾನಲಿಂಗದ ಆವಶ್ಯಕತೆ ಏಕೆ?

ಸದ್ಗುರು: ನಾವು ನಿಮಗೆ ಬಹಳಷ್ಟು ವಿಧಾನಗಳಲ್ಲಿ ವಿಷಯಗಳನ್ನು ಹೇಳಿಕೊಡಬಹುದು ಅಥವಾ ತಲುಪಿಸಬಹುದು. ಜನಗಳು ವಿವಿಧ ರೀತಿಗಳಲ್ಲಿ ನನ್ನ ಬಳಿಗೆ ಬರುತ್ತಾರೆ. ಕೆಲವರು ಪತ್ತೇದಾರರಾಗಿ ಬರುತ್ತಾರೆ, ಕೆಲವರು ವಿದ್ಯಾರ್ಥಿಗಳಾಗಿ ಬರುತ್ತಾರೆ, ಕೆಲವರು ಶಿಷ್ಯರಾಗಿ ಬರುತ್ತಾರೆ ಮತ್ತು ಕೆಲವರು ಭಕ್ತರಾಗಿ ಬರುತ್ತಾರೆ. ಪತ್ತೇದಾರಿಗಳು ತಪ್ಪೇನಾಗಿದೆ ಎಂದು ಹುಡುಕಲು ಬಯಸುತ್ತಾರೆ. ಇಲ್ಲಿ ತಪ್ಪೇನಿಲ್ಲ, ಆದರೆ ಅವರು ತಪ್ಪನ್ನು ಕಂಡುಹಿಡಿಯಲು ಬರುತ್ತಾರೆ. ಅನೇಕ ಪತ್ತೇದಾರಿಗಳು ಬಂದರು ಮತ್ತು ಅವರಲ್ಲಿಂದು ಸಾಕಷ್ಟು ಜನ ನಿಧಾನವಾಗಿ ಭಕ್ತರಾಗಿ ರೂಪುಗೊಂಡಿದ್ದಾರೆ.

"ಸಂಗ್ರಹಿಸುವ ಅಗತ್ಯತೆ"

ವಿದ್ಯಾರ್ಥಿಗಳು ಕಲಿಯಲು ಬಯಸುವುದರಿಂದಾಗಿ ಬರುತ್ತಾರೆ. ಅವರು ಏನನ್ನಾದರೂ ತೆಗೆದುಕೊಂಡು ಹೋಗಲು ಬಯಸುತ್ತಾರೆ. ನಾನು ಪತ್ತೇದಾರಿಗಳನ್ನು ಹೊಲಸು-ಆಯುವವರು ಎಂದು ಕರೆಯುತ್ತೇನೆ. ಅವರು ಯಾವಾಗಲೂ ಯಾವುದೇ ಸಂದರ್ಭದಿಂದಲೂ ಸಹ ತುಚ್ಛವಾದುದ್ದನ್ನು ತೆಗೆದುಕೊಳ್ಳಲು ಬರುತ್ತಾರೆ. ಅವರು ತಪ್ಪಾಗಿರುವುದನ್ನು ಆರಿಸಿಕೊಳ್ಳಲು ಬಯಸುತ್ತಾರೆ. ವಿದ್ಯಾರ್ಥಿಗಳೂ ಸಹ ಆಯುವವರೆ ಆದರೆ ಅವರು ಒಳ್ಳೆಯದನ್ನು ಆರಿಸಿಕೊಳ್ಳಲು ಬಯಸುತ್ತಾರೆ. ಇದು ನಮ್ಮ ಬೇಟೆ ಮತ್ತು ಸಂಗ್ರಹಣಾ ಕಾಲದಿಂದ ಬಂದಿರುವಂತಹ ಒಂದು ಹಳೆಯ ಅಭ್ಯಾಸ. ಮನುಷ್ಯನು ಎಂದಿಗೂ ಸಹ ಸಂಗ್ರಹಿಸುತ್ತಲೇ ಬಂದಿದ್ದಾನೆ, ಅದು ವಸ್ತುಗಳನ್ನಾಗಿರಬಹುದು, ಜನರನ್ನಾಗಿರಬಹುದು ಅಥವಾ ಜ್ಞಾನವನ್ನಾಗಿರಬಹುದು. ಸಂಗ್ರಹಿಸುವ ಅಗತ್ಯತೆಯು ಬಂದಿರುವುದು ನಮ್ಮಲ್ಲಿರುವ ದೌರ್ಬಲ್ಯ ಮತ್ತು ಅಪೂರ್ಣತೆಯ ಭಾವದಿಂದ. ನೀವು ಸದಾಕಾಲ ಏನನ್ನಾದರೂ ಸಂಗ್ರಹಿಸುತ್ತಲೇ ಇರಬೇಕು, ಅದು ಹಣವಾಗಿರಬಹುದು. ಆಸ್ತಿಯಾಗಿರಬಹುದು, ಸಂಬಂಧಗಳಾಗಿರಬಹುದು, ಜ್ಞಾನವಾಗಿರಬಹುದು.

ಸಾಮಾಜಿಕವಾಗಿ, ಒಂದನ್ನು ಇನ್ನೊಂದಕ್ಕಿಂತ ಉನ್ನತವೆಂದು ಪರಿಗಣಿಸಲಾಗುತ್ತದೆ, ಆದರೆ ವಾಸ್ತವದಲ್ಲಿ, ಜ್ಞಾನವನ್ನು ಸಂಗ್ರಹಿಸುವುದು, ಹಣ, ಆಸ್ತಿ, ಜನ ಅಥವಾ ಮತ್ತಿನ್ಯಾವುದನ್ನೋ ಸಂಗ್ರಹಿಸುವುದಕ್ಕಿಂತ ತೀರ ಹೆಚ್ಚಿನಷ್ಟು ಸಿಕ್ಕಿಹಾಕಿಸುತ್ತದೆ.

ಜ್ಞಾನವನ್ನು ಸಂಪಾದಿಸುವ ಜನರು ತಮ್ಮನ್ನು ತಾವು, ಹಣ ಅಥವಾ ವಸ್ತುಗಳನ್ನು ಸಂಗ್ರಹಿಸುವ ಜನರಿಗಿಂತ ಉತ್ತಮರೆಂದು ಯಾವಾಗಲೂ ಭಾವಿಸುತ್ತಾರೆ, ಆದರೆ ಅದು ಹಾಗೇನಲ್ಲ. ಅದು ಕೇವಲ ಒಬ್ಬರ ಅಭಿರುಚಿಯ ಪ್ರಶ್ನೆ – ಕೆಲವರು ಬೆಳಗಿನ ತಿಂಡಿಗೆ ಟೋಸ್ಟ್-ಅನ್ನು ಇಷ್ಟಪಡುತ್ತಾರೆ, ಕೆಲವರು ಮಸಾಲೆ ದೋಸೆಯನ್ನು ಇಷ್ಟಪಡುತ್ತಾರೆ, ಕೆಲವರು ಬೆಳಗ್ಗೆಯೇ ಇಡೀ ಊಟವನ್ನು ಮಾಡಲು ಇಷ್ಟಪಡುತ್ತಾರೆ. ಎಲ್ಲರೂ ಸಹ ತಮ್ಮಲ್ಲಿ ಏನು ಪ್ರಬಲವಾಗಿದೆಯೋ ಅದನ್ನು ಸಂಗ್ರಹಿಸುತ್ತಿದ್ದಾರಷ್ಟೆ.

ಸಾಮಾಜಿಕವಾಗಿ, ಒಂದನ್ನು ಇನ್ನೊಂದಕ್ಕಿಂತ ಉನ್ನತವೆಂದು ಪರಿಗಣಿಸಲಾಗುತ್ತದೆ, ಆದರೆ ವಾಸ್ತವದಲ್ಲಿ, ಜ್ಞಾನವನ್ನು ಸಂಗ್ರಹಿಸುವುದು, ಹಣ, ಆಸ್ತಿ, ಜನ ಅಥವಾ ಮತ್ತಿನ್ಯಾವುದನ್ನೋ ಸಂಗ್ರಹಿಸುವುದಕ್ಕಿಂತ ತೀರ ಹೆಚ್ಚಿನಷ್ಟು ಸಿಕ್ಕಿಹಾಕಿಸುತ್ತದೆ. ಜ್ಞಾನವು ನಿಮ್ಮನ್ನು ಅತ್ಯಂತ ಹೆಚ್ಚು ಸಿಲುಕಿಸಿಬಿಡುವ ವಿಷಯ, ಏಕೆಂದರೆ ನೀವು ಯೋಚಿಸುವ ಮತ್ತು ಭಾವಿಸುವ ರೀತಿಗಳು ನಿಮ್ಮೊಳಗೆ ಆಳವಾಗಿ ಬೇರೂರಿರುತ್ತವೆ. ಜನರು ಯಾವಾಗಲೂ ವೈರಾಗ್ಯವೆಂದರೆ ನಿಮ್ಮ ಹೆಂಡತಿ ಅಥವಾ ಗಂಡನನ್ನು ಬಿಟ್ಟುಬಿಡುವುದು ಎಂದು ತಿಳಿದಿದ್ದಾರೆ. ಆದರೆ ನೀವು ಆಳವಾಗಿ ಅಂಟಿಕೊಂಡಿರುವುದು ನಿಮ್ಮದೇ ಯೋಚಿಸುವ ಮತ್ತು ಭಾವಿಸುವ ರೀತಿಗಳಿಗೆ. ನಿಮ್ಮ ಯೋಚಿಸುವ ಮತ್ತು ಅನುಭವಿಸುವ ರೀತಿಗಳಿಗೆ ಅಡ್ಡಿಯುಂಟಾದರೆ, ನಿಮ್ಮ ಗಂಡ, ಹೆಂಡತಿ, ಮಗು, ಅಪ್ಪ, ಅಮ್ಮ, ಯಾರನ್ನಾದರೂ ಬಿಟ್ಟುಬಿಡಲು ನೀವು ತಯಾರಿರುತ್ತೀರಿ. ನಿಮ್ಮದೇ ಯೋಚಿಸುವ ಮತ್ತು ಭಾವಿಸುವ ರೀತಿಗಳು – ಬಲೆಯನ್ನು ಹೆಣೆಯಲಾಗಿರುವುದು ಅಲ್ಲೇ. ಹಾಗಾಗಿ ಜ್ಞಾನವನ್ನು ಸಂಪಾದಿಸುವುದು ಯಾವುದೇ ರೀತಿಯಿಂದ ಉತ್ತಮವೇನಲ್ಲ, ಆದರೆ ವಿದ್ಯಾರ್ಥಿಗಳು ಜ್ಞಾನವನ್ನು ಸಂಗ್ರಹಿಸಲು ಬಯಸುತ್ತಾರೆ, ಅದು ಅವರ ದಾರಿ.

ಮೂರನೇ ಥರದಲ್ಲಿ ಬರುವವರು ಶಿಷ್ಯರು. ಶಿಷ್ಯನಾದವನು ತನ್ನನ್ನು ತಾನು ಪರಿವರ್ತಿಸಿಕೊಳ್ಳಲು ಬಂದಿರುತ್ತಾನೆ, ಅವನು ಸದ್ಯಕ್ಕಿರುವ ರೀತಿಗಿಂತ ಬೇರೆಯದ್ದೇ ರೀತಿಯಲ್ಲಿ ಬದಲಾಗಲು ಬಯಸುತ್ತಾನೆ. ಇದೊಂದು ಒಳ್ಳೆಯ ಪ್ರಾರಂಭ. ಆದರೆ ಒಬ್ಬ ಭಕ್ತನಾದವನು ಇದೆಲ್ಲವುಗಳಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ಅವನು ಕೇವಲ ವಿಲೀನವಗಲು ಬಯಸುತ್ತಾನೆ. ಅವನಿನ್ನು ಅವನಾಗಿ ಅಸ್ತಿತ್ವದಲ್ಲಿರಲು ಬಯಸುವುದಿಲ್ಲ, ಅವನು ಎಲ್ಲದರೊಂದಿಗೆ ಒಂದಾಗಲು ಅಪೇಕ್ಷಿಸುತ್ತಿರುತ್ತಾನೆ. ನೀವಿಲ್ಲಿಗೆ ಇವೇ ನಾಲ್ಕು ವಿಧಗಳಲ್ಲಿ ಬರಬಹುದಾಗಿದೆ.

ದೇಹ, ಮನಸ್ಸು, ಚೈತನ್ಯವನ್ನು ಪರಿವರ್ತಿಸುವುದು

ನೀವು ಯಾರು ಮತ್ತು ನಿಮ್ಮ ಅಗತ್ಯತೆಗಳೇನು ಎನ್ನುವ ಆಧಾರದ ಮೇಲೆ, ನಾವು ಬಹಳಷ್ಟು ವಿವಿಧ ರೀತಿಗಳಲ್ಲಿ ವಿಷಯಗಳನ್ನು ಹೇಳಿಕೊಡಲು ಪ್ರಾರಂಭಿಸುತ್ತೇವೆ. ನಾವು ನಿಮ್ಮ ದೇಹವನ್ನು ಮಾರ್ಪಾಡು ಮಾಡಬಹುದು. ಪ್ರತಿದಿನ ಬೆಳಗ್ಗೆ ನೀವು ನಿಮ್ಮ ದೇಹವನ್ನು ಬಾಗಿಸಿ ಮತ್ತು ತಿರುಗಿಸಿ. ಆರು ತಿಂಗಳುಗಳವರೆಗೆ ನೀವು ಯೋಗಾಸನವನ್ನು ಮಾಡಿದರೆ, ಅಚಾನಕ್ಕಾಗಿ, ನೀವು ಬಹಳಷ್ಟು ಶಾಂತಿ ಮತ್ತು ಆರೋಗ್ಯದಿಂದಿರುವುದನ್ನು ಗಮನಿಸುತ್ತೀರಿ. ಕೇವಲ ಸರಳವಾದ ದೈಹಿಕ ಆಸನಗಳನ್ನು ನೀವು ಮಾಡುವ ಕಾರಣಕ್ಕಾಗಿ, ನಿಮ್ಮ ದೇಹ ಮತ್ತು ಮನಸ್ಸುಗಳಲ್ಲಿ ಅಗಾಧವಾದ ಬದಲಾವಣೆಯನ್ನು ನೀವು ನೋಡುತ್ತೀರ. ನೀವು ಆರು ತಿಂಗಳು ಅಥವಾ ಒಂದು ವರ್ಷ ಕಾಲ ಅಭ್ಯಾಸ ಮಾಡಿ, ನಂತರದ ಆರು ತಿಂಗಳುಗಳು ಅಭ್ಯಾಸಿಸುವುದನ್ನು ಬಿಟ್ಟುಬಿಡುತ್ತೀರೆಂದಾದರೆ, ನೀವು ಪುನಃ ಮೊದಲಿನ ಹಂತಕ್ಕೆ ಬಂದುಬಿಡುತ್ತೀರ. ನಾವು ನಿಮ್ಮ ಮನಸ್ಸನ್ನು ಪರಿವರ್ತಿಸಿದರೆ, ಮುಂದಿನ ಆರು ತಿಂಗಳುಗಳು, ನೀವು ಜಾಗೃತಾವಸ್ಥೆಯಲ್ಲಿ ಬದುಕಿದರೆ, ನಿಮ್ಮಲ್ಲಿ ಅಪಾರವಾದ ಬದಲಾವಣೆ ಉಂಟಾಗುತ್ತದೆ, ಆದರೆ ಮುಂದಿನ ಎರಡು ವರ್ಷಗಳಲ್ಲಿ ನೀವು ಇದರ ಅರಿವಿಲ್ಲದೆ ಬದುಕಿದರೆ, ಪುನಃ ನೀವು ಮೊದಲಿನ ಹಂತಕ್ಕೆ ಮರಳುತ್ತೀರ. ನಾವು ಪರಿವರ್ತಿಸಲು ಪ್ರಯತ್ನಿಸುತ್ತಿರುವ ಮುಂದಿನ ಸಂಗತಿಯೆಂದರೆ, ನಿಮ್ಮ ಪ್ರಾಣ ಅಥವಾ ಪರಮ ಚೈತನ್ಯವನ್ನು ಕ್ರಿಯೆಗಳ ಮೂಲಕ ಮಾರ್ಪಡಿಸುವುದಾಗಿದೆ. ಆರು ತಿಂಗಳುಗಳು ನೀವಿದನ್ನು ಅಭ್ಯಾಸ ಮಾಡಿ, ಮುಂದಿನ ಐದು ವರ್ಷಗಳು ನಿಲ್ಲಿಸಿಬಿಟ್ಟರೆ, ನೀವು ಪುನಃ ಮೊದಲಿನ ಹಂತವನ್ನು ತಲುಪುತ್ತೀರ. ಈ ಹಿಂದಿರುಗುವ ಸಮಯವು, ವ್ಯಕ್ತಿಯಿಂದ ವ್ಯಕ್ತಿಗೆ, ಅವರ ಜೀವನಶೈಲಿ, ಕರ್ಮಬಂಧನಗಳು ಮತ್ತಿತರ ಅಂಶಗಳ ಆಧಾರದ ಮೇಲೆ ಬೇರೆ ಬೇರೆಯಾಗಿರಬಹುದು.

ಆದರೆ ಪ್ರಾಣ ಅಥವಾ ದೈಹಿಕ ಚೈತನ್ಯಗಳಿಂದಾಚೆಗಿರುವಂತಹ ಒಂದು ಸತ್ವವಾಗಿರುವ ನಿಮ್ಮ ಸೂಕ್ಷ್ಮಶರೀರದ ಮೇಲೆ ಏನನ್ನಾದರೂ ಅಚ್ಚೊತ್ತಲು ನಿಮಗೆ ಸಾಧ್ಯವಾದರೆ, ಅದನ್ನು ನಾಶಪಡಿಸಲು ನಿಮಗೆಂದಿಗೂ ಸಾಧ್ಯವಾಗುವುದಿಲ್ಲ. ಅದಿನ್ನು ನಿಮ್ಮ ಕೈಯಲ್ಲಿರುವುದಿಲ್ಲ. ದೀಕ್ಷೆ ಕೊಡುವುದು ಎಂದರೆ ಅದೇ. ದೀಕ್ಷೆ ಎಂದರೆ ಕೇವಲ ಕೆಲವು ನಿರ್ದಿಷ್ಟವಾದ ಸೂಚನೆಗಳಲ್ಲ. ಇದನ್ನು ಸ್ವೀಕರಿಸಲು ಬೇಕಾದ ಗ್ರಹಣ ಶಕ್ತಿಯ ಸರಿಯಾದ ಮಟ್ಟದಲ್ಲಿ ನೀವಿದ್ದೇರೆಂದು ಆಶಿಸುತ್ತಾ, ನಿಮ್ಮನ್ನು ಕೆಲವು ನಿಮಿಷಗಳ ಧ್ಯಾನದ ದೀಕ್ಷೆಗೆ ಒಳಪಡಿಸಲು, ಬಹಳಷ್ಟು ವಿಸ್ತಾರವಾದ ಗಮನವನ್ನು ತೆಗೆದುಕೊಳ್ಳಲಾಗಿದೆ. ಅದರ ಬೀಜವು ಒಮ್ಮೆ ನಿಮ್ಮೊಳಗೆ ಬಿತ್ತನೆಯಾದರೆ, ನಿಮಗದನ್ನು ನಾಶಪಡಿಸಲಾಗುವುದಿಲ್ಲ. ನೀವೇನು ಮಾಡುತ್ತೀರ ಎನ್ನುವುದು ಗಣ್ಯವಾಗುವುದಿಲ್ಲ, ನೀವೆಷ್ಟೇ ಹೀನಾಯವಾದ ಬದುಕನ್ನು ಬದುಕಿದರೂ ಸಹ, ನಿಮಗೆ ಆ ಬೀಜವನ್ನು ನಾಶಮಾಡಲಾಗುವುದಿಲ್ಲ. ನೀವದಕ್ಕೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿ ಮಾಡಿದರೆ, ಅದು ಬೆಳೆದು ಹೂ ಬಿಡುತ್ತದೆ. ನೀವು ಹಾಗೆ ಮಾಡದಿದ್ದಲ್ಲಿ, ಅದು ಸುಮ್ಮನೆ ಕಾಯುತ್ತದೆ.

ಆಧ್ಯಾತ್ಮಿಕ ಮುಕ್ತಿಯ ಬೀಜ

ಬೇಸಿಗೆಯಲ್ಲಿ ಹೇಗೆ ಎಲ್ಲವೂ ಸಹ ಒಣಗಿದಂತೆ ಕಾಣುತ್ತದೆಯೆಂದು ನೀವು ನೋಡಿದ್ದೀರ? ನೀವು ಭೂಮಿಯನ್ನು ನೋಡಿದಾಗ, ಅದು ನಿರಾಶಾದಾಯಕವಾಗಿ ಕಾಣುತ್ತದೆ. ಬಹುಶಃ ಒಂದು ದೀರ್ಘಕಾಲದ ಬೇಸಿಗೆಯು, ಬದುಕಿನ ಅಂತ್ಯದಂತೆ ತೋರುತ್ತದೆ. ಆದರೆ ಒಂದೆರಡು ಹನಿ ಮಳೆ ಬಿದ್ದಾಕ್ಷಣ, ಹೇಗೆ ಎಲ್ಲವೂ ಸಹ ಚಿಗುರೊಡೆಯುತ್ತದೆಯೆಂದು ನೀವು ನೋಡಿದ್ದೀರ? ಅವೆಲ್ಲವೂ ಸಹ ಕಾದು ಕುಳಿತಿರುತ್ತವೆ. ಒಂದು ಹನಿ ಮಳೆ ಬಿದ್ದೊಡನೆ ಅವೆಲ್ಲವೂ ಮೇಲೇಳುತ್ತವೆ. ಅದೇ ರೀತಿ, ಒಮ್ಮೆ ನಿಮ್ಮ ಸೂಕ್ಷ್ಮಶರೀರದ ಮೇಲೆ ಏನನ್ನಾದರೂ ಅಚ್ಚೊತ್ತಿದರೆ, ನಿಮಗದನ್ನು ನಾಶಪಡಿಸಲಾಗುವುದಿಲ್ಲ. ಅದೇ ದೀಕ್ಷೆ ನೀಡುವುದರ ಅರ್ಥ. ಆದ್ದರಿಂದಾಗಿಯೇ, ಅದರ ಬಗ್ಗೆ ಬಹಳಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗುತ್ತಿರುವುದು.

ಈ ರೀತಿಯಾಗಿ ನಾನು ಜನರಿಗೆ ದೀಕ್ಷೆಯನ್ನು ನೀಡಬೇಕೆಂದಾದರೆ, ಒಂದೇ ಸಮಯದಲ್ಲಿ, ನಾನು ಕೇವಲ ಒಂದು ಸೀಮಿತ ಸಂಖ್ಯೆಯ ಜನರನ್ನು ಮಾತ್ರ ದೀಕ್ಷೆಗೆ ಒಳಪಡಿಸಬಹುದು. ಅದಕ್ಕಾಗಿಯೇ, ನಾವೊಂದು ಉಪಕರಣವನ್ನು ಸೃಷ್ಟಿಮಾಡಿದೆವು – ನಾನದನ್ನು ಒಂದು ಸಾಧನವೆಂದು ಕರೆಯುತ್ತೇನೆ. ಧ್ಯಾನಲಿಂಗವು ಒಂದು ಸಾಧನ. ಧ್ಯಾನಲಿಂಗದ ಆವರಣದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡರೆ, ನೀವೊಬ್ಬ ಭಕ್ತನಾಗಿ ಆರಂಭವನ್ನು ಪಡೆಯುತ್ತೀರಿ ಮತ್ತಿದು ಈಶ ಯೋಗ ಕಾರ್ಯಕ್ರಮಗಳಿಗೆ ಮಹತ್ತರವಾದ ಅನುಕೂಲವನ್ನು ಸೃಷ್ಟಿಸುತ್ತದೆ. ಹೊರಗಿನ ಸನ್ನಿವೇಶಗಳ ಪ್ರಭಾವಕ್ಕೊಳಗಾಗದ ಕಡೆಯಿಂದ ಅದು ಶುರುವಾಗುತ್ತದೆ. ನೀವು ನಿಮ್ಮ ಆಧ್ಯಾತ್ಮಿಕ ಶರೀರವನ್ನು ಪರಿವರ್ತಿಸಿದರೆ, ಆ ಪರಿವರ್ತನೆಯು ಶಾಶ್ವತವಾದುದ್ದೆಂಬುದನ್ನು ನೀವು ಮನಗಾಣುವಿರಿ. ಒಮ್ಮೆ ನೀವು ಧ್ಯಾನಲಿಂಗದ ಕಾರ್ಯಕ್ಷೇತ್ರದಲ್ಲಿದ್ದಿರಿ ಎಂದಾದರೆ, ನಿಮ್ಮಲ್ಲಿ ಆಧ್ಯಾತ್ಮಿಕತೆಯ ಬೀಜವನ್ನು ಬಿತ್ತಲಾಗಿದೆ ಎಂದರ್ಥ. ನೀವು ಇಷ್ಟಪಡುತ್ತೀರೋ ಇಲ್ಲವೋ, ನಂಬುತ್ತೀರೋ ಇಲ್ಲವೋ, ನೀವು ಪತ್ತೇದಾರಿ ಮಾಡಲು ಬಂದಿರುತ್ತೀರೋ ಅಥವಾ ಶರಣಾಗಲು ಬಂದಿರುತ್ತೀರೋ, ಅದೆಲ್ಲಾ ಮುಖ್ಯವಾಗುವುದಿಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ, ಜನರು ಧ್ಯಾನಲಿಂಗದ ಕ್ಷೇತ್ರದಲ್ಲಿ ಕುಳಿತಾಗ, ಈ ಆಧ್ಯಾತ್ಮಿಕತೆಯ ಛಾಪು ಅವರಲ್ಲಿ ಖಂಡಿತವಾಗಿಯೂ ಮುದ್ರಿತವಾಗುತ್ತದೆ.

ಧ್ಯಾನದ ಬಗ್ಗೆ ಏನೂ ತಿಳಿಯದ ಒಬ್ಬ ವ್ಯಕ್ತಿಯು ಬಂದು ಅಲ್ಲಿ ಕುಳಿತುಕೊಂಡರೂ ಸಹ, ಅವನು, ಅವನ ಸಹಜ ಸ್ವಭಾವದಿಂದಲೇ ಧ್ಯಾನಸ್ಥನಾಗುತ್ತಾನೆ. ಧ್ಯಾನಲಿಂಗದ ವೈಶಿಷ್ಟ್ಯವೇ ಅಂತಹುದ್ದು.

ಈ ಬೀಜವು ಕಾಯುತ್ತದೆ. ಒಬ್ಬ ವ್ಯಕ್ತಿಯು ಅದಕ್ಕೆ ಸಹಾಯಕವಾದ ವಾತಾವರಣವನ್ನು ಸೃಷ್ಟಿಸಿದರೆ, ಅದು ಬಹಳ ಬೇಗನೆ ಅರಳಿ ಹೂವಾಗುತ್ತದೆ. ಇಲ್ಲದಿದ್ದರೆ, ಅದು ಕಾಯುತ್ತದೆ. ಅದು ಹತ್ತು ಅಥವಾ ನೂರು ಜನ್ಮಗಳವರೆಗಾದರೂ ಸಹ ಕಾಯುತ್ತದೆ, ಆದರೆ ನಿಮಗದನ್ನು ನಾಶಮಾಡಲಾಗುವುದಿಲ್ಲ. ನಾವು ಧ್ಯಾನಲಿಂಗವನ್ನು ಸೃಷ್ಟಿಮಾಡಲು ಬಹಳಷ್ಟು ಶ್ರಮವನ್ನು ವಿನಿಯೋಗಿಸಿರುವುದು ಇದೇ ಕಾರಣಕ್ಕಾಗಿ. ಈ ಪರಿವರ್ತನೆಯು ನಿಮ್ಮೊಳಗೆ ಸಂಪೂರ್ಣವಾಗಿ ಒಂದು ಬೇರೆಯೇ ಮಟ್ಟದಲ್ಲಿ ಕೆಲಸ ಮಾಡುತ್ತದೆ – ನಾಶಪಡಿಸಲು ಅಥವಾ ರದ್ದುಗೊಳಿಸಲು ಸಾಧ್ಯವಾಗದಂತಹುದ್ದು. 

ನಾವು ಹೋದ ನಂತರ ಈಶ ಯೋಗವು ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಯಾವುದೇ ರೀತಿಯ ವಿಪರ್ಯಾಸಗಳಾಗಬಾರದೆಂದು ನಾವು ಬಹಳಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಶಿಕ್ಷಕರಲ್ಲಿ ಅಸಾಧಾರಣವಾದ ಶಿಸ್ತು ಮತ್ತು ಸಮರ್ಪಣಾ ಮನೋಭಾವದ ಬೇಡಿಕೆಯನ್ನು ನಾವಿಡುತ್ತಿದ್ದೇವೆ. ವಿಪರ್ಯಾಸಗಳು ನಡೆಯಬಾರದೆಂದು ನಾವವರ ಮೇಲೆ ಬಹಳಷ್ಟು ಕಠಿಣವಾದ ನಿರ್ಬಂಧಗಳನ್ನು ಹೇರುತ್ತಿದ್ದೇವೆ. ಆದರೆ ಸಾವಿರ ವರ್ಷಗಳಲ್ಲಿ, ಗೌತಮ ಬುದ್ಧ ಅಥವಾ ಕೃಷ್ಣ ಹೇಳಿದ್ದೆಲ್ಲವನ್ನೂ ಸಹ ತಿರುಚಲಾಗಿದೆ ಎಂದಾದರೆ, ನಾನೇನು ಹೇಳಿದ್ದೇನೆಯೋ ಅದು ಸಹ ಖಂಡಿತವಾಗಿಯೂ ತಿರುಚು-ಮುರುಚಾಗುತ್ತದೆ. ಧ್ಯಾನಲಿಂಗವು ಶಕ್ತಿಯ ಮೂಲ ಏಕೆಂದರೆ ಅದನ್ನು ತಿರುಚಲು ಸಾಧ್ಯವಿಲ್ಲ. ಇಡೀ ಈಶ ಯೋಗವೇ ವಿರೂಪಗೊಂಡರೂ ಸಹ, ಅದು ಗಣ್ಯವಾಗುವುದಿಲ್ಲ. ಸುಮ್ಮನೆ ನೀವು ಧ್ಯಾನಲಿಂಗದ ಮುಂದೆ ಹೋಗಿ ಕುಳಿತುಕೊಂಡರೆ, ಒಂದು ಮಾತನ್ನೂ ಸಹ ಆಡದೆ, ನಡೆಯಬೇಕಾದುದ್ದೆಲ್ಲವೂ ಸಹ ನಿಮ್ಮ ಅನುಭವದಲ್ಲಿ ನಡೆಯುತ್ತದೆ – ಧ್ಯಾನಲಿಂಗದ ಸಹಜಗುಣವೇ ಅಂತಹುದ್ದು. ಧ್ಯಾನದ ಬಗ್ಗೆ ಏನೂ ತಿಳಿಯದ ಒಬ್ಬ ವ್ಯಕ್ತಿಯು ಬಂದು ಅಲ್ಲಿ ಕುಳಿತುಕೊಂಡರೂ ಸಹ, ಅವನು, ಅವನ ಸಹಜ ಸ್ವಭಾವದಿಂದಲೇ ಧ್ಯಾನಸ್ಥನಾಗುತ್ತಾನೆ. ಧ್ಯಾನಲಿಂಗದ ವೈಶಿಷ್ಟ್ಯವೇ ಅಂತಹುದ್ದು. ಆ ಥರಹದ ಒಂದು ಸಾಧನವೇ ಧ್ಯಾನಲಿಂಗ.

ಧ್ಯಾನಲಿಂಗವನ್ನು ಸೃಷ್ಟಿಸಲು ಅಗಾಧವಾದ ಶ್ರಮವನ್ನು ವಿನಿಯೋಗಿಸಲಾಗಿದೆ. ಅದಕ್ಕೆ ನನಗೆ ಮೂರು ಜನ್ಮಗಳೇ ಬೇಕಾಯಿತು. ಇದನ್ನು ನಂಬಲು ನಿಮಗೆ ತುಂಬ ಕಷ್ಟವಾಗುತ್ತದೆ. ಧ್ಯಾನಲಿಂಗವನ್ನು ಸ್ಥಾಪಿಸಲು ನಾನು ಪಟ್ಟ ಪಾಡುಗಳ ಪೂರ್ತಿ ಕಥೆಯನ್ನು ನಿಮಗೆ ಹೇಳಿದರೆ ಅದು ನಂಬಲಸಾಧ್ಯವಾಗಿ ತೋರಬಹುದು. ನನ್ನ ಸುತ್ತಲಿದ್ದ ಜನಗಳು ನಡೆದಿದ್ದೆಲ್ಲವನ್ನೂ ಕಂಡಿದ್ದಾರೆ. ಈ ಸಾಧನದ ಲಕ್ಷಣವೇ ಅಂತಹುದ್ದು. ಪ್ರಸ್ತುತವಾಗಿ ಹೇಳಿಕೊಡುತ್ತಿರುವ ರೀತಿಯಲ್ಲೇ ನಾವು ಮುಂದುವರೆದರೆ, ನಾವು ತೆಗೆದುಕೊಂಡಿರುವಂತಹ ಎಚ್ಚರಿಕೆಗಳೊಂದಿಗೆ, ಸಾಕಷ್ಟು ಜನರನ್ನು ತಲುಪಲು ನಮಗೆಂದಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ ಧ್ಯಾನಲಿಂಗವು ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಲುವಾಗಾಗಿದೆ. ಆಧ್ಯಾತ್ಮಿಕತೆಯನ್ನು ಎಲ್ಲರಿಗೂ ತಲುಪಿಸುವ ನಮ್ಮ ಉತ್ಸಾಹದಲ್ಲಿ, ನಾವು ಧ್ಯಾನಲಿಂಗವನ್ನು ಸೃಷ್ಟಿಸಿದ್ದೇವೆ.

Editor’s Note: “Mystic’s Musings” ಪುಸ್ತಕವು ಧ್ಯಾನಲಿಂಗದ ವಿಜ್ಞಾನ ಮತ್ತು ಪ್ರಾಮುಖ್ಯತೆಯ ಬಗ್ಗೆ ಸದ್ಗುರುಗಳ ಮತ್ತಷ್ಟು ಒಳನೋಟಗಳನ್ನು ಹೊಂದಿದೆ. Read the free sample or purchase the ebook