ಸದ್ಗುರು: ನಾನು ಪ್ರಾಣಾಯಾಮ ಎಂದು ಹೇಳಿದಾಗ, ಜನರು ಇದನ್ನು ಆಂಗ್ಲಭಾಷೆಯಲ್ಲಿ ಅನುವಾದ ಮಾಡಿ ಉಸಿರಾಟದ ವಿವಿಧ ಬಗೆ ಅಥವಾ ಉಸಿರಾಟಕ್ಕಾದ ವ್ಯಾಯಾಮ ಎಂದು ಅರ್ಥೈಸುತ್ತಾರೆ, ಅದು ಸರಿಯಲ್ಲ. “ಪ್ರಾಣ” ಎಂದರೆ “ಜೀವ ಶಕ್ತಿ”, “ಯಾಮ” ಎಂದರೆ ಅದರ ಮೇಲೆ ನಿಯಂತ್ರಣ ಸಾಧಿಸುವುದು. ಆದ್ದರಿಂದ, ಇದು ಒಂದು ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಒಬ್ಬರು ತಮ್ಮ ಆಂತರಿಕ ಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಬಹುದು. ದೇಹ ಮತ್ತು ಮನಸ್ಸನ್ನು ಸ್ಥಿರಗೊಳಿಸುವ ನಿಟ್ಟಿನಲ್ಲಿ ನಿಮ್ಮ ಆಂತರಿಕ ಶಕ್ತಿಗಳ ಪರಿವರ್ತನೆ ಬಹಳ ಮುಖ್ಯ. ಆದ್ದರಿಂದಲೇ, ಈ ಪ್ರಕ್ರಿಯೆಗಳನ್ನು ಸೂಕ್ಷ್ಮ ರೀತಿಯಲ್ಲಿ ಕಲಿಸಲಾಗುತ್ತದೆ. 

ಒಬ್ಬ ವ್ಯಕ್ತಿಯ ಕರ್ಮದ ನೆನಪುಗಳ ಛಾಪನ್ನು ಪ್ರಾಣ ಹೊಂದಿರುತ್ತದೆ. ಆದ್ದರಿಂದಲೇ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅದು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ನೀವು ಜೀವನದಲ್ಲಿ ಏನನ್ನೇ ಮಾಡಿದರೂ ಸಹ, ನಿಮ್ಮ ದೇಹ, ನಿಮ್ಮ ಮನಸ್ಸು ಮತ್ತು ನಿಮ್ಮ ಇಡೀ ವ್ಯವಸ್ಥೆಯ ಕಾರ್ಯವನ್ನು ಅಂತಿಮವಾಗಿ ನಿಮ್ಮ ಪ್ರಾಣ ನಿರ್ಧರಿಸುತ್ತದೆ . ಪ್ರಾಣ ಎಂಬುದು ಒಂದು ಬುದ್ಧಿವಂತ (ಅರಿವು ತುಂಬಿದ) ಶಕ್ತಿಯಾಗಿದೆ. ಒಬ್ಬ ವ್ಯಕ್ತಿಯ ಕರ್ಮದ ನೆನಪುಗಳ ಛಾಪನ್ನು ಪ್ರಾಣ ಹೊಂದಿರುತ್ತದೆ. ಆದ್ದರಿಂದಲೇ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅದು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ವಿದ್ಯುತ್ ಶಕ್ತಿಗೆ ತನ್ನದೇ ಸ್ಮರಣೆ ಅಥವಾ ಬುದ್ಧಿವಂತಿಕೆ ಇರುವುದಿಲ್ಲ. ಅದರ ಶಕ್ತಿಯಿಂದ ಬಲ್ಬ್ಅನ್ನು ಬೆಳಗಿಸಬಹುದು, ಕ್ಯಾಮೆರಾವನ್ನು ಚಲಾಯಿಸಬಹುದು ಇನ್ನೂ ಇತರ ಹತ್ತು ಹಲವು ಕೆಲಸಗಳನ್ನು ಮಾಡಬಹುದು, ಇವೆಲ್ಲ ಅದರ ಬುದ್ಧಿವಂತಿಕೆಯಿಂದಾಗಿ ಸಾದ್ಶ್ಯವಾಗುತ್ತಿಲ್ಲ, ಬದಲಾಗಿ ನಿರ್ದಿಷ್ಟ ರೀತಿಯಲ್ಲಿ ಒಂದು ಸಾಧನವನ್ನು ಸಶಕ್ತಗೊಳಿಸುವುದರಿಂದ ಸಾಧ್ಯವಾಗುತ್ತಿದೆ. ಭವಿಷ್ಯದಲ್ಲಿ, ವಿದ್ಯುತ್ ಸ್ವಯಂ ಚಾಲಿತ ರೀತಿಯಲ್ಲಿ ಕೂಡ ಬಳಕೆಗೆ ಬರಬಹುದು. ನೀವು ಒಂದು ನಿರ್ದಿಷ್ಟ ಸ್ಮರಣೆಯ ಛಾಪಿನೊಂದಿಗೆ ಶಕ್ತಿಯನ್ನು ನಿರ್ವಹಿಸಿದರೆಂದರೆ, ಅದನ್ನು ಬಯಸಿದ ರೀತಿಯಲ್ಲಿ ವರ್ತಿಸುವಂತೆ ಮಾಡಬಹುದು.

ಐದು ಬಗೆಯ ಪ್ರಾಣ 

ದೇಹದಲ್ಲಿ ಪ್ರಾಣ ಐದು ವಿಧಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಈ ಪಂಚ ವಾಯು ಅಂದರೆ ಪ್ರಾಣ ವಾಯು, ಸಮಾನ ವಾಯು, ಉದಾನ ವಾಯು, ಅಪಾನ ವಾಯು, ಹಾಗೂ ವ್ಯಾನ ವಾಯು- ಮಾನವ ಕಾರ್ಯವಿಧಾನದ ವಿಭಿನ್ನ ಅಂಶಗಳನ್ನು ನಿರ್ದೇಶಿಸುತ್ತವೆ. ಶಕ್ತಿ ಚಲನಾ ಕ್ರಿಯಾದಂತಹ ಯೋಗಾಭ್ಯಾಸಗಳ ಮೂಲಕ ನೀವು ಪಂಚ ವಾಯುಗಳ ಮೇಲೆ ನಿಯಂತ್ರಣ ಹೊಂದಬಹುದು. ಈ ಐದು ವಾಯುಗಳ ಮೇಲೆ ನೀವು ಪಾಂಡಿತ್ಯವನ್ನು ಗಳಿಸಿದರೆಂದರೆ, ನೀವು ಹೆಚ್ಚಾಗಿ ಕಾಯಿಲೆಗಳಿಂದ, ವಿಶೇಷವಾಗಿ ಮಾನಸಿಕ ರೋಗಗಳಿಂದ ಮುಕ್ತರಾಗಬಹುದು. ಇದು ಇಂದಿನ ಜಗತ್ತಿಗೆ ಅಗತ್ಯವಿರುವ ವಿಷಯವಾಗಿದೆ.

ನಾವು ಈಗ ಕಾರ್ಯೋನ್ಮುಖರಾಗದಿದ್ದರೆ, ಮುಂದಿನ ಐವತ್ತು ವರ್ಷಗಳಲ್ಲಿ, ನಮ್ಮ ಜೀವನಶೈಲಿಯಲ್ಲಿನ ವಿವಿಧ ಅಂಶಗಳಿಂದಾಗಿ, ಮಾನಸಿಕವಾಗಿ ಅಸಮತೋಲನ, ತೊಂದರೆ ಅಥವಾ ಗೊಂದಲಕ್ಕೊಳಗಾದ ಜನರ ಸಂಖ್ಯೆ ಹಲವು ಪಟ್ಟು ಹೆಚ್ಚಾಗುತ್ತದೆ. ನಾವು ನಮ್ಮ ಜೀವನದ ಹಲವು ಅಂಶಗಳನ್ನು ತೀವ್ರ ನಿರ್ಲಕ್ಷ್ಯದಿಂದ ನಿರ್ವಹಿಸುತ್ತಿದ್ದೇವೆ, ಅದಕ್ಕಾಗಿ ನಾವು ಬೆಲೆತೆರಲಿದ್ದೇವೆ. ನಿಮ್ಮ ಪ್ರಾಣಶಕ್ತಿಯ ಹೊಣೆಯನ್ನು ನೀವು ವಹಿಸಿಕೊಂಡರೆ, ಬಾಹ್ಯ ಪರಿಸ್ಥಿತಿ ಏನೇ ಇರಲಿ, ನೀವು ಮಾನಸಿಕವಾಗಿ ಸಮತೋಲನದಲ್ಲಿರುತ್ತೀರಿ. ಈಗಿನ ಪರಿಸ್ಥಿತಿಯಲ್ಲಿ, ವೈದ್ಯಕೀಯವಾಗಿ ನಿರ್ಣಯಿಸಲಾಗದಿದ್ದರೂ, ಬಹಳಷ್ಟು ಜನರು ಮಾನಸಿಕವಾಗಿ ಅಸಮತೋಲನದಲ್ಲಿದ್ದಾರೆ. 

 

ಪ್ರಾಣಾಯಾಮದ ಉಪಯೋಗಗಳು 

ಒಂದು ವೇಳೆ, ನಿಮ್ಮ ಕೈಗಳು ತನ್ನದೇ ಆದ ರೀತಿ ಕೆಲಸಗಳನ್ನು ಮಾಡುವುದರ ಮೂಲಕ ನಿಮ್ಮ ಕಣ್ಣುಗಳನ್ನೇ ಚುಚ್ಚಿತೆಂದರೆ, ನಿಮ್ಮನ್ನೆ ಗೀರಿತೆಂದರೆ ಅಥವಾ ಗಾಯಗೊಳಿಸಿತೆಂದರೆ, ಅದು ಒಂದು ಬಗೆಯ ಖಾಯಿಲೆಯೇ ಸರಿ. ಇದೀಗ ಜನರ ಮನಸ್ಸು ಕೂಡ ಹೀಗೆಯೇ ವರ್ತಿಸುತ್ತಿದೆ. ನಿತ್ಯವೂ ಅದು ಒಳಗಿನಿಂದ ಕೆಣಕುವುದರ ಮೂಲಕ ನಿಮ್ಮ ಅಳುವಿಗೆ, ಗೊಂದಲಕ್ಕೆ, ಚಿಂತೆಗೆ ಕಾರಣವಾಗುತ್ತಿದೆ. ನಮ್ಮ ಸುತ್ತಲಿನ ಸಮಾಜದಲ್ಲಿ ಅದು ಸಮಂಜಸವಾಗಿ ತೋರಿದರೂ ಸಹ ಇದೊಂದು ಖಾಯಿಲೆಯೇ. ಮಾನವನು ದಿನೇ ದಿನೇ ಅನುಭವಿಸುತ್ತಿರುವ ಪ್ರತಿಯೊಂದು ದುಃಖಗಳೂ ಅವನ ಮನಸ್ಸಿನಲ್ಲಿಯೇ ಸೃಷ್ಟಿಯಾಗುತ್ತದೆ. ಈ ಖಾಯಿಲೆ ಒಬ್ಬರ ಒಳಗಿನಿಂದಲೇ ಪ್ರಾರಂಭವಾಗುತ್ತಿದ್ದು, ಸಾಮಾಜಿಕ ನೆಲೆ, ಸುತ್ತಲಿನ ತಂತ್ರಜ್ಞಾನ ಇಂತಹ ಹಲವಾರು ಪ್ರಭಾವಗಳಿಂದ ಹೆಚ್ಚಾಗುತ್ತಿದೆ.

ಶಕ್ತಿ ಚಲನಾ ಕ್ರಿಯಾದಂತಹ ಯೋಗಾಭ್ಯಾಸಗಳ ಮೂಲಕ ನೀವು ಪಂಚ ವಾಯುಗಳ ಮೇಲೆ ನಿಯಂತ್ರಣ ಹೊಂದಬಹುದು.

ಒಮ್ಮೆ ಪ್ರಾಣದ ಮೇಲೆ ನಿಯಂತ್ರಣ ಹೊಂದಿದರೆಂದರೆ, ಅವರು ನೂರು ಪ್ರತಿಶತ ಮಾನಸಿಕ ಸಮತೋಲನ ಹೊಂದಿರುತ್ತಾರೆ. ಇದರಿಂದ ನಿಮ್ಮ ದೈಹಿಕ ಕಾಯಿಲೆಗಳನ್ನೂ ಬಹಳಷ್ಟು ಮಟ್ಟಕ್ಕೆ ನಿಯಂತ್ರಿಸಬಹುದು. ಆದರೂ ನಾವು ದಿನನಿತ್ಯ ಪ್ರಭಾವಕ್ಕೊಳಗಾಗುವ ಸೋಂಕು ಮತ್ತು ಹಲವು ರೀತಿಯ ರಾಸಾಯನಿಕಗಳು ಮತ್ತು ವಿಷಗಳು ಸೇರಿದಂತೆ ವಿವಿಧ ರೀತಿಯ ಅಪಾಯ ಇದ್ದೇ ಇರುತ್ತದೆ. ಗಾಳಿ, ನೀರು ಮತ್ತು ಆಹಾರದ ಮೂಲಕ ನಾವೇನು ನಮ್ಮೊಳಗೆ ತೆಗೆದುಕೊಳ್ಳುತ್ತೇವೆ ಎಂಬುದರ ಕುರಿತು ಪೂರ್ಣ ನಿಯಂತ್ರಣ ಅಸಾಧ್ಯ. ಆದರೆ, ಈ ಅಂಶಗಳು ನಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವಲಂಬಿಸುತ್ತದೆ.   

ಹಲವು ಬಾಹ್ಯ ಕಾರಣಗಳಿಂದಾಗಿ ಶಾರೀರಿಕ ಸುಸ್ಥಿರ ಆರೋಗ್ಯವನ್ನು ನೂರು ಪ್ರತಿಶತ ಖಾತರಿಪಡಿಸಲಾಗುವುದಿಲ್ಲ. ಆದರೆ ನಿಮ್ಮ ಪ್ರಾಣವನ್ನು ನೀವು ವಹಿಸಿಕೊಂಡರೆ ನಿಮ್ಮ ಮಾನಸಿಕ ಯೋಗಕ್ಷೇಮವು ನೂರು ಪ್ರತಿಶತದಷ್ಟು ಖಾತರಿಯಾಗುತ್ತದೆ. ನೀವು ಮಾನಸಿಕವಾಗಿ ಅತ್ಯಂತ ಉತ್ತಮ ಸ್ಥಿತಿಯಲ್ಲಿದ್ದರೆ, ಕೆಲವು ಶಾರೀರಿಕ ಕಾಯಿಲೆಗಳು ಸಮಸ್ಯೆಯಾಗುವುದಿಲ್ಲ. ಹೆಚ್ಚಿನ ಸಮಯ ಸರಿಯಾಗಿ ಗಮನಿಸಿದರೆ, ದೈಹಿಕ ಕಾಯಿಲೆಗಳು ಸಣ್ಣ ಪುಟ್ಟದ್ದಾದರೂ ಸಹ ಅದರ ಕಾರಣದಿಂದ ನಿಮ್ಮ ಮನಸ್ಸಿನಲ್ಲಿ ಸಂಭವಿಸುವ ಪ್ರತಿಕ್ರಿಯೆಗಳು ದೊಡ್ಡದಾಗಿರುತ್ತದೆ. ನಿಮ್ಮೊಳಗೆ ಪ್ರಾಣಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಅದು ಸೃಷ್ಟಿಯ ಉಳಿದ ಅಂಶಗಳೊಂದಿಗೆ ಹೇಗೆ ವ್ಯವಹರಿಸುತ್ತದೆ, ಅದು ನವಜಾತ ಶಿಶುವನ್ನು ಹೇಗೆ ಪ್ರವೇಶಿಸುತ್ತದೆ, ಮತ್ತು ಅವರು ಸತ್ತ ಮೇಲೆ ಹೇಗೆ ಬಿಡಲ್ಪಡುತ್ತದೆ, ಇವೆಲ್ಲ ಅಂಶಗಳೂ ಅದರದೇ ಆದ ಬುದ್ಧಿವಂತಿಕೆಯನ್ನು ಹೊಂದಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಶಕ್ತಿ ಚಲನ ಕ್ರಿಯಾ - ಪ್ರಾಣವನ್ನು ಕುರಿತು ಮಾಡುವ ಕ್ರಿಯೆ 

ಈ ಐದು ಪ್ರಾಣಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಯಲು ಒಂದು ಸೂಕ್ಷ್ಮ ಮಟ್ಟದ ಗಮನ ಮತ್ತು ಅರಿವು ಬೇಕಾಗುತ್ತದೆ. ಶಕ್ತಿ ಚಲನಾ ಕ್ರಿಯಾ ಒಂದು ಅದ್ಭುತ ಪ್ರಕ್ರಿಯೆ, ಆದರೆ ನಿಮ್ಮ ಪೂರ್ಣ ಗಮನ ಅದರಲ್ಲಿಯೇ ಇರಬೇಕು. ನಲವತ್ತರಿಂದ ಅರವತ್ತು ನಿಮಿಷಗಳ ಕಾಲ ನೀವು ಗಮನದಲ್ಲಿರಬೇಕಾಗುತ್ತದೆ . ಹೆಚ್ಚಿನ ಜನರಿಗೆ ಪೂರ್ಣ ಒಳ ಉಸಿರಲ್ಲಿರುವಾಗ ಗಮನವಿರುವುದಿಲ್ಲ. ಮಧ್ಯದಲ್ಲೇ, ಅವರಲ್ಲಿ ಆಲೋಚನೆಗಳು ಅಲೆದಾಡುತ್ತಿರುತ್ತವೆ, ಅಥವಾ ಅವರು ಎಣಿಕೆ ಅಥವಾ ಟ್ರ್ಯಾಕ್ ಅನ್ನು ಕಳೆದುಕೊಳ್ಳುತ್ತಾರೆ. ಅಭ್ಯಾಸದುದ್ದಕ್ಕೂ ನಿಮ್ಮ ಗಮನವನ್ನು ಉಸಿರಾಟದಲ್ಲಿ ಕೇಂದ್ರೀಕರಿಸಲು ತಿಂಗಳುಗಳ ಅಥವಾ ವರ್ಷಗಳ ನಿರಂತರ ಅಭ್ಯಾಸದ ಅಗತ್ಯವಿರುತ್ತದೆ.

ಅದಕ್ಕಾಗಿಯೇ ಶಕ್ತಿ ಚಲನಾವನ್ನು ಯಾವಾಗಲೂ ಶೂನ್ಯ ಧ್ಯಾನದ ಜೊತೆಗೂಡಿ ಕಲಿಸಲಾಗುತ್ತದೆ. ಶೂನ್ಯ ಧ್ಯಾನ, ನಿಮ್ಮ ಕಣ್ಣುಗಳನ್ನು ಮುಚ್ಚಿದರೆ ಸಾಕು, ನಿಮ್ಮ ಅನುಭವದಲ್ಲಿ ಜಗತ್ತು ಕಳೆದುಹೋಗುವಂತಹ ಸ್ಥಳಕ್ಕೆ ನಿಮ್ಮನ್ನು ಕರೆದೊಯ್ಯುವುದು. ನೀವೆಲ್ಲರೂ ಒಂದು ಹಂತದಲ್ಲಿ ಸಂಪಾದಿಸಬೇಕಾದ ಅನುಗ್ರಹ ಇದಾಗಿದೆ. ನೀವು ಈ ರೀತಿ ಮಾಡಿದರೆ ಮಾತ್ರ, ನೀವು ಯಾವುದನ್ನಾದರೂ ಕೇಂದ್ರೀಕರಿಸುವಲ್ಲಿ ಸಮರ್ಥರಾಗುತ್ತೀರಿ. ಬಲವಂತದ ಏಕಾಗ್ರತೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ.  

ನೀವು ಕಣ್ಣು ಮುಚ್ಚಿದರೆ, ನಿಮ್ಮ ಉಸಿರು, ನಿಮ್ಮ ಹೃದಯ ಬಡಿತ, ನಿಮ್ಮ ದೇಹದಲ್ಲಿನ ಪ್ರಕ್ರಿಯೆಗಳು ಮತ್ತು ನಿಮ್ಮ ಪ್ರಾಣದ ಕಾರ್ಯಗಳು ಮಾತ್ರ ನೆಲಸಬೇಕು. ಒಳಗೆ ನಡೆಯುತ್ತಿರುವುದು ಮಾತ್ರ ಜೀವನ. ಹೊರಗಡೆ ನಡೆಯುತ್ತಿರುವುದು ಕೇವಲ ಚಿತ್ರಣ.

ಗಮನವನ್ನು ಕೇಂದ್ರೀಕರಿಸುವುದು ಮುಖ್ಯ 

ಶೂನ್ಯ ಮತ್ತು ಇತರ ಸಾಧನೆಗಳು ಈ ನಿಟ್ಟಿನಲ್ಲಿ ಇವೆ. ನೀವು ಎಷ್ಟು ದೂರ ಸಾಗಬಲ್ಲಿರಿ ಎಂಬುದು ಒಬ್ಬರ ವಯ್ಯಕ್ತಿಕ ಪ್ರಶ್ನೆಯಾಗಿದೆ, ವಿಶೇಷವಾಗಿ ಇಂದಿನ ಜಗತ್ತಿನ ಪರಿಸ್ಥಿತಿಯಲ್ಲಿ. ಇದರ ಅರ್ಥ ನಾನು ಸುತ್ತಮುತ್ತಲಿನ ಜೀವನದಲ್ಲಿ ಇಂದು ಏನೆಲ್ಲಾ ನಡೆಯುತ್ತಿದೆಯೋ ಅವೆಲ್ಲದುದರ ವಿರೋಧಿ ಎಂದಲ್ಲ. ಆದರೆ ದುರದೃಷ್ಟವಶಾತ್, ಇಂದು ಕೇವಲ ಮೇಲ್ಪದರದಲ್ಲಿರುವುದೇ ಫ್ಯಾಶನ್ ಆಗಿ ಮಾರ್ಪಟ್ಟಿದೆ - ಆಳವಾದದ್ದನ್ನು ಯಾರೂ ಬಯಸುತ್ತಿಲ್ಲ. ಇಂತಹ ಮನೋಭಾವ ಇರುವವರೆಗೂ, ನಿಮ್ಮೊಳಗಿನ ಜೀವನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ನಿಮ್ಮ ಗಮನವನ್ನು ಸರಿಸಲು ಸಾಧ್ಯವಾಗುವುದಿಲ್ಲ. ಇದರರ್ಥ ಪ್ರತಿಯೊಬ್ಬ ಮನುಷ್ಯನಿಗೂ ಇದು ಸಾಧ್ಯವಿಲ್ಲ ಎಂದಲ್ಲ – ಅದು ಸಾಧ್ಯವಿದೆ. ಇದು ನೀವು ಯಾವುದರ ಕುರಿತು ಪ್ರಾಮುಖ್ಯತೆ ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆಯಷ್ಟೇ. ನೀವು ಯಾವುದನ್ನು ನಿಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳುತ್ತೀರೋ, ನಿಮ್ಮೊಳಗಿನ ಎಲ್ಲವೂ ಅದಕ್ಕೆ ತಕ್ಕಂತೆ ಸಂಘಟಿತವಾಗುತ್ತದೆ. 

ನಿಮ್ಮೊಳಗಿನ ಜೀವನ ಮಾತ್ರ ನಿಜವಾದ ವಿಷಯ - ಉಳಿದವು ಕೇವಲ ಪ್ರಕ್ಷೇಪಗಳು. ಆದರೆ ಇದೀಗ, ಹೆಚ್ಚಿನ ಗಮನವು ಪ್ರಕ್ಷೇಪಗಳ ಮೇಲೆ ಇದೆ, ನಿಜವಾದ ವಿಷಯದಲ್ಲಲ್ಲ.

ನಿಮ್ಮ ಆದ್ಯತೆಗಳು ಬೇರೆ ಬೇರೆ ದಿಕ್ಕುಗಳಲ್ಲಿದ್ದರೆ, ಮೂಲಭೂತ ಮಟ್ಟದಲ್ಲಿ ಜೀವನದ ದೃಷ್ಟಿಯಿಂದ ನೀವು ಎಲ್ಲ ಕಡೆ ಅಲೆದಾಡಿಯೂ, ಎಲ್ಲಿಯೂ ತಲುಪಲಾಗುವುದಿಲ್ಲ, ಸಾಮಾಜಿಕ ಮಟ್ಟದಲ್ಲಿ, ನೀವು ಯಾವುದೋ ಒಂದು ದಿಕ್ಕಿನಲ್ಲಿ ಸಾಗುತ್ತಿರಬಹುದು. ಭೌತಿಕ ಮಟ್ಟದಲ್ಲಿ, ನಿಮ್ಮ ದೇಹವು ಸಾವಿನ ಕಡೆಗಷ್ಟೇ ಹೋಗಬಲ್ಲದು - ಹೆಚ್ಚೆಂದರೆ, ನೀವು ಅದಕ್ಕಾಗುವ ಮಾರ್ಗವನ್ನು ಸ್ವಲ್ಪ ವಿಸ್ತರಿಸಿಕೊಳ್ಳಬಹುದು. ನಿಮ್ಮ ಮನಸ್ಸಿಗೆ ಸಂಬಂಧಪಟ್ಟಂತೆ, ಅದು ಮತ್ತೆ ಮತ್ತೆ ಸುತ್ತಲೂ ತಿರುಗುತ್ತಲೇ ಇದೆ. ನೀವು ಜೀವನದ ಮೂಲಭೂತ ಸ್ವರೂಪದೆಡೆ ಗಮನ ಕೇಂದ್ರೀಕರಿಸಿದರಷ್ಟೇ ಮಾತ್ರ ನೀವು ನಿಜವಾಗಿಯೂ ಒಂದೆಡೆ ತಲುಪಬಹುದು. ನಿಮ್ಮೊಳಗಿನ ಜೀವನ ಮಾತ್ರ ನಿಜವಾದ ವಿಷಯ - ಉಳಿದವು ಕೇವಲ ಪ್ರಕ್ಷೇಪಗಳು. ಆದರೆ ಇದೀಗ, ಹೆಚ್ಚಿನ ಗಮನವು ಪ್ರಕ್ಷೇಪಗಳ ಮೇಲೆ ಇದೆ, ನಿಜವಾದ ವಿಷಯದಲ್ಲಲ್ಲ. 

ಶಕ್ತಿ ಚಲನಾ ಕ್ರಿಯೆಯಿಂದ, ಪರಿವರ್ತನೆ ಕ್ರಮೇಣ ಸಂಭವಿಸುತ್ತದೆ. ನಿಮ್ಮ ಪ್ರಾಣ ಮತ್ತು ನಿಮ್ಮ ವ್ಯವಸ್ಥೆಯಲ್ಲಿನ ವಿಭಿನ್ನ ಚಟುವಟಿಕೆಗಳ ಉಸ್ತುವಾರಿ ವಹಿಸುವುದು ಅದ್ಭುತ ಪ್ರಕ್ರಿಯೆ. ಶಕ್ತಿ ಚಲನಾ ಕ್ರಿಯಾ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಅದನ್ನು ಅಭ್ಯಾಸ ಮಾಡಿದರೆ, ನಿಮ್ಮ ವ್ಯವಸ್ಥೆಯ ಅಡಿಪಾಯವನ್ನು ನೀವು ಬಲಪಡಿಸಿಕೊಳ್ಳಬಹುದು. 

ಶಾಂಭವಿ ಮಹಾಮುದ್ರಾ - ಪ್ರಾಣವನ್ನೂ ಮೀರಿದುದು 

ಶಾಂಭವಿ ಮಹಾಮುದ್ರದಲ್ಲಿನ ಮುಖ್ಯ ವಿಷಯವೆಂದರೆ ಅದು ಸೃಷ್ಟಿಯ ಮೂಲವನ್ನು ಸ್ಪರ್ಶಿಸುವ ಸಾಧನವಾಗಿದೆ, ಅದು ಪ್ರಾಣವನ್ನೂ ಮೀರಿದುದು.

ನಿಮ್ಮನ್ನು ಎಲ್ಲದಕ್ಕೂ ಮೂಲ ಆಧಾರವಾಗಿರುವ ಆಯಾಮವನ್ನು ಸ್ಪರ್ಶಿಸುವಂತೆ ಮಾಡಲು ಶಾಂಭವಿ ಮಹಾಮುದ್ರ ಸಾಮರ್ಥ್ಯವನ್ನು ಹೊಂದಿದೆ. ಆದರೆ ನೀವು ಅದನ್ನು ಸಕ್ರಿಯವಾಗಿ ಸಾಧಿಸಲು ಸಾಧ್ಯವಿಲ್ಲ. ನೀವು ಅದಕ್ಕಾದ ಸೂಕ್ತ ಪರಿಸರವನ್ನು ಮಾತ್ರ ಹೊಂದಿಸಬಹುದು. ನಾವು ಯಾವಾಗಲೂ ಶಾಂಭವಿಯನ್ನು “ಅವಳು” ಎಂದು ಸಂಭೋಧಿಸುತ್ತೇವೆ. ಶಾಂಭವಿ ಫಲ ಕೊಡಬೇಕೆಂದರೆ ಭಕ್ತಿ ಇರಬೇಕು. ನೀವು ಸೃಷ್ಟಿಯ ಮೂಲದೊಂದಿಗೆ ಸಂಪರ್ಕಕ್ಕೆ ಮಾತ್ರ ಬರಬಹುದು - ಮತ್ತೇನೂ ನಿಮಗೆ ಮಾಡಲಿಕ್ಕಿಲ್ಲ. ಶಾಂಭವಿಯಲ್ಲಿ ಪ್ರಾಣಾಯಾಮದ ಒಂದು ಅಂಶವೂ ಇದೆ, ಇದು ಅನೇಕ ಪ್ರಯೋಜನಗಳನ್ನು ತರುತ್ತದೆ.

ಶಾಂಭವಿ ಮಹಾಮುದ್ರದಲ್ಲಿನ ಮುಖ್ಯ ವಿಷಯವೆಂದರೆ ಅದು ಸೃಷ್ಟಿಯ ಮೂಲವನ್ನು ಸ್ಪರ್ಶಿಸುವ ಸಾಧನವಾಗಿದೆ, ಅದು ಪ್ರಾಣವನ್ನೂ ಮೀರಿದುದು. ಇದು ಮೊದಲ ದಿನ ಸಂಭವಿಸಬಹುದು, ಅಥವಾ ನೀವು ಇದನ್ನು ಆರು ತಿಂಗಳವರೆಗೆ ಮಾಡುತ್ತಿದ್ದರೂ, ಏನೂ ಆಗದಿರಬಹುದು. ಆದರೆ ನೀವು ಅದನ್ನು ಮುಂದುವರಿಸಿದರೆಂದರೆ, ನೀವು ಈ ಆಯಾಮವನ್ನು ಸ್ಪರ್ಶಿಸುವ ದಿನ ಬರುತ್ತದೆ. ನೀವು ಅದನ್ನು ಸ್ಪರ್ಶಿಸಿದರೆಂದರೆ, ಇದ್ದಕ್ಕಿದ್ದಂತೆ ಎಲ್ಲವೂ ಪರಿವರ್ತನೆಗೊಳ್ಳುತ್ತದೆ.

ಸಂಪಾದಕರ ಟಿಪ್ಪಣಿ: ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಕನ್ನಡದಲ್ಲಿ ಲಭ್ಯ. ಸವಾಲಿನ ಸಮಯಕ್ಕಾಗಿ 50%ಗೆ ಅರ್ಪಿಸಲಾಗುತ್ತಿದೆ. ಈಗಲೇ ನೋಂದಾಯಿಸಿ.

IEO

A version of this article was originally published in Isha Forest Flower - June 2017.