ಸದ್ಗುರುಗಳು, ’ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವುದು ಹೇಗೆ’ ಎಂಬ ಒಂದು ಪ್ರಶ್ನೆಗೆ ಉತ್ತರಿಸುತ್ತಾ, ಆಸನಗಳು ದೇಹ ಮತ್ತು ಮನಸ್ಸಿನ ಕಾರ್ಯರೀತಿಯನ್ನು ಅನ್ವೇಷಿಸುವ ಒಂದು ಪ್ರಕ್ರಿಯೆ ಎಂಬುದನ್ನು ವಿವರಿಸುತ್ತಾರೆ.

ಪ್ರಶ್ನೆ: ಸದ್ಗುರುಗಳಿಗೆ ನಮಸ್ಕಾರ. ಕೋಪ ಮತ್ತಿತರ ನಕರಾತ್ಮಕ ಭಾವನೆಗಳನ್ನು ನಿಲ್ಲಿಸಲು ನಾನು ಪ್ರಯತ್ನಿಸಿದಾಗ, ಅದು ಪ್ರಬಲವಾಗುತ್ತದೆ. ನನ್ನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ನಾನು ಹೇಗೆ ಹಿಡಿತ ಸಾಧಿಸುವುದು?

ಸದ್ಗುರು: ನಿಮಗೆ ಇಷ್ಟವಿಲ್ಲದ್ದನ್ನು ನೀವು ನಿಲ್ಲಿಸಲು ಯತ್ನಿಸಿದರೆ, ಅದೇ ನಡೆಯುತ್ತದೆ. ಇದು ನಿಮ್ಮ ಮನಸ್ಸಿನ ಸ್ವರೂಪ ಮತ್ತು ಮಾನವ ಮನಸ್ಸಿನ ಸ್ವರೂಪವಾಗಿದೆ. ಯೋಗದ ಇಡೀ ವಿಜ್ಞಾನವಿರುವುದು ನಿಮ್ಮ ದೇಹ ಮತ್ತು ಮನಸ್ಸಿನ ಸ್ವರೂಪವನ್ನು ಅನುಭವಾತ್ಮಕವಾಗಿ ಪರಿಶೋಧಿಸುವ ಬಗ್ಗೆ. ನೀವು ಬೆಳಿಗ್ಗೆ ಎದ್ದಾಗ ನಿಮ್ಮ ಆಸನಗಳನ್ನು ಮಾಡುವುದು - ಜಗತ್ತಿನಲ್ಲಿ ಹಲವಾರು ಮೂರ್ಖರು ವರ್ಣಿಸುವ ಹಾಗೆ - ಮೈಬಗ್ಗಿಸುವ ಅಭ್ಯಾಸವೆಂಬ ಕಾರಣಕ್ಕಲ್ಲ. ಹೌದು, ಅದನ್ನು ಮಾಡಲು ನಿಮ್ಮ ಮೈಯನ್ನು ಬಗ್ಗಿಸಬೇಕು, ಆದರೆ ಮೂಲತಃ ಅದು ನಿಮ್ಮ ದೇಹ ಮತ್ತು ಮನಸ್ಸಿನ ಪರಿಶೋಧನೆ. ನಿಮ್ಮ ಜೀವನದಲ್ಲಿನ ಅತಿ ದೊಡ್ಡ ಸಮಸ್ಯೆ ಇದು: ಭೌತಿಕ ದೇಹ ಮತ್ತು ಮನಸ್ಸು -  ಜೀವನದಲ್ಲಿ ಅತ್ಯಂತ ಮುಖ್ಯವಾದ ಈ ಎರಡು ಆಧಾರಪ್ರಾಯವಾದ ಸಾಧನಗಳ ಬಗ್ಗೆ ಯಾವುದೇ ಗ್ರಹಿಕೆಯಿಲ್ಲದೆ ನೀವು ಜೀವಿಸಲು ಪ್ರಯತ್ನಿಸುತ್ತಿರುವುದು.

ನಿಮ್ಮ ಜೀವನದ ಮೂಲಕ ನೀವೆಷ್ಟು ಸರಾಗವಾಗಿ ಸಾಗುವಿರಿ ಎನ್ನುವುದು ನೀವು ನಿಮ್ಮ ದೇಹ ಮತ್ತು ಮನಸ್ಸನ್ನು ಎಷ್ಟು ಆಳವಾಗಿ ಅರ್ಥ ಮಾಡಿಕೊಂಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆರಾಮದಾಯಕವಾದ ಪ್ರಯಾಣಕ್ಕಾಗಿ, ವಾಹನವು ಉತ್ತಮವಾಗಿರಬೇಕು ಮತ್ತು ಅದು ಹೇಗೆ ವರ್ತಿಸುತ್ತದೆ, ಅದೇನು ಮಾಡುತ್ತದೆ, ಯಾಕದನ್ನು ಮಾಡುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಂಡಿರಬೇಕು. ಇದು ಜ್ಞಾನೋದಯವಲ್ಲ - ನೀವು ಅಜ್ಞಾನದ ಜೀವನವನ್ನು ನಡೆಸಬೇಕಿದ್ದರೂ ಇದು ಅವಶ್ಯಕ. "ಅಜ್ಞಾನವೇ ಆನಂದ" ಎಂದು ಹಿಂದೆ ಹೇಳುತ್ತಿದ್ದರು - ಇದು ನಿಜವಾಗಿದ್ದಲ್ಲಿ, ಜಗತ್ತು ಈಗಾಗಲೇ ಆನಂದದಲ್ಲಿ ತೇಲಾಡುತ್ತಿರಬೇಕಿತ್ತು.

ಅಜ್ಞಾನವೇ ಆನಂದ ಎಂದುಕೊಂಡಿರುವ ಕಾರಣಕ್ಕೆ ನೀವು ಅಜ್ಞಾನದಿಂದಿರಲು ಆಯ್ಕೆ ಮಾಡಿಕೊಂಡಿದ್ದರೂ, ಜೀವನವನ್ನು ಸಾಗಿಸಲು ನೀವು ಈ ದೇಹ ಮತ್ತು ಮನಸ್ಸನ್ನು ಅರ್ಥ ಮಾಡಿಕೊಂಡಿರಬೇಕು. ಇಲ್ಲದಿದ್ದರೆ, ಏನು ಮಾಡುವುದೂ ಸಮಸ್ಯೆಯೇ. ಭೌದ್ಧಿಕವಾಗಿ ನಾನಿದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಹಾಗೆ ಮಾಡಿದರೆ ನಿಮಗೆ ಕಿರುಕುಳವಾಗುತ್ತದೆ. ಅದಕ್ಕಾಗಿಯೇ, ಯೋಗದ ವ್ಯವಸ್ಥೆಯು ಅನುಭವಾತ್ಮಕ ಪರಿಶೋಧನೆಯಾಗಿದೆ. ಇದು ಭೌದ್ಧಿಕವಾಗಿ ಅದರೊಳಗೆ ಹೋಗಲು ಪ್ರಯತ್ನಿಸುವುದಿಲ್ಲ.

ಆಸನಗಳು - ದೇಹ ಮತ್ತು ಮನಸ್ಸಿನ ಕಾರ್ಯ ನಿರ್ವಹಣೆಯ ಪರಿಶೋಧನ

ನೀವು ಆಸನಗಳನ್ನು ಮಾಡಿದಾಗ, ನಿಮ್ಮ ದೇಹ ಮತ್ತು ನಿಮ್ಮ ಮನಸ್ಸಿನ ಸ್ವರೂಪವನ್ನು ಪರಿಶೋಧಿಸುತ್ತೀರಿ. ನಿಮ್ಮ ಬೆರಳುಗಳನ್ನು ನಿರ್ದಿಷ್ಟ ರೀತಿಯಲ್ಲಿ ನೀವು ಚಲಿಸಿದರೆ, ನಿಮ್ಮ ಮನಸ್ಸು ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ನೀವು ನಿಮ್ಮ ದೇಹದೊಂದಿಗೆ ಏನನ್ನು ಮಾಡಿದರೂ ಅದು ನಿಮ್ಮ ಮನಸ್ಸಿನಲ್ಲಿ ಏನನ್ನಾದರೂ ಮಾಡುತ್ತದೆ. ನಿಮಗೆ ಈ ತಿಳುವಳಿಕೆ ಪುಸ್ತಕವನ್ನು ಓದಿ ಬರುವುದಿಲ್ಲ. ಇದು ಪರಿಶೋಧನೆಯಿಂದ ಮಾತ್ರ ನಿಮಗೆ ಅರ್ಥವಾಗುತ್ತದೆ. ನಿಮ್ಮ ಕಣ್ಣುನ್ನು ಮುಚ್ಚಿ, ನಿಮ್ಮ ಮನಸ್ಸಿನಿಂದ ಬಲವಂತವಾಗಿ ಏನನ್ನಾದರೂ ತೆಗೆಯಲು ಪ್ರಯತ್ನಿಸಿದರೆ, ನೀವು ಎಂದಿಗೂ ಯಶಸ್ವಿಯಾಗುವುದಿಲ್ಲ.

ಇದು ಅತ್ಯಂತ ಮೂಲಭೂತವಾದ ಮತ್ತದೇ ಸಮಯದಲ್ಲಿ ಪ್ರತಿಯೊಬ್ಬರಿಗೂ ಮನವರಿಕೆಯಾಗಬೇಕಾದ ಪ್ರಮುಖ ವಿಷಯ. ಈ ಮನವರಿಕೆ ಆಗದಿದ್ದರೆ, ನಿಮ್ಮ ಜೀವನವೂ ಸಂಪೂರ್ಣವಾಗಿ ಅಸ್ತವ್ಯಸ್ತವಾಗುವುದು. ನೀವಷ್ಟು ಚುರುಕಾಗಿಲ್ಲದಿದ್ದರೆ, ಅಷ್ಟೇನೂ ಸಮಸ್ಯೆಯಾಗುವುದಿಲ್ಲ. ಆದರೆ ನೀವು ಚುರುಕಾಗಿದ್ದರೆ, ನೀವು ಎಲ್ಲಾ ರೀತಿಯಲ್ಲೂ ಗಾಯಗೊಳ್ಳುವಿರಿ. ಬೇರೆಯವರು ಬಂದು ನಿಮ್ಮನ್ನು ಕಾಪಾಡುವ ಮುನ್ನ ನೀವು ತುಂಡು ತುಂಡಾಗಿರುವಿರಿ. ಪ್ರತಿದಿನ, ಇಂತಹ ತುಂಡು ತುಂಡಾದ ವ್ಯಕ್ತಿಗಳು ನನ್ನ ಬಳಿ ಬಂದು, "ಸದ್ಗುರುಗಳೇ, ನಾನು ಜ್ಞಾನೋದಯದ ಬಗ್ಗೆ ಆಸಕ್ತನಾಗಿದ್ದೇನೆ." ಎನ್ನುತ್ತಾರೆ. ಮೊದಲು ಆ ಗಾಯಗಳನ್ನು ಗುಣಪಡಿಸಿಕೊಳ್ಳಿ, ಅಥವಾ ಕನಿಷ್ಠಪಕ್ಷ ಹೆಚ್ಚು ಗಾಯ ಮಾಡಿಕೊಳ್ಳುವುದನ್ನು ನಿಲ್ಲಿಸಿ ಏಕೆಂದರೆ ನಿಮ್ಮ ಬಳಿ ಬಹಳ ಚೂಪಾದ ಚಾಕು ಇದೆ.

ಶೇವ್ ಮಾಡಿಕೊಳ್ಳುವಾಗಲೂ ಸಹ, ಹಲವಾರು ಪುರುಷರು ತಮ್ಮ ಮುಖಕ್ಕೆ ಗಾಯಮಾಡಿಕೊಳ್ಳುತ್ತಾರೆ. ಬಹಳ ಚೊಕ್ಕವಾಗಿ ಶೇವ್ ಮಾಡಿಕೊಳ್ಳಲು ಪ್ರಯತ್ನಿಸಿ, ಅದು ಅಗತ್ಯಕ್ಕಿಂತ ಹೆಚ್ಚು ಚೊಕ್ಕವಾಗಿ, ಜನರ ಮುಖದಲ್ಲಿ ರಕ್ತ ಬರುವುದನ್ನು ನಾನು ಕಂಡಿದ್ದೀನಿ. ಮೂಲಭೂತ ಅಂಶಗಳ ತಿಳುವಳಿಕೆ, ನಿಮ್ಮ ಮನಸ್ಸಿನ ಕಾರ್ಯ ವೈಖರಿ - ಭೌದ್ಧಿಕ ವಿಶ್ಲೇಷಣೆಯಿಂದ ಬರುವುದಿಲ್ಲ - ಅದೊಂದು ಪರಿಶೋಧನೆ. ನೀವು ಮಾಡಬೇಕಿರುವುದು ಇದು: ದೇಹವನ್ನು ಒಂದು ಭಂಗಿಯಲ್ಲಿರಿಸಿ, ನಿಮ್ಮ ಮನಸ್ಸು ನಿರ್ದಿಷ್ಟವಾಗಿ ಕಾರ್ಯ ನಿರ್ವಹಿಸುವುದನ್ನು ನೋಡಿ. ದೇಹವನ್ನು ಇನ್ನೊಂದು ಭಂಗಿಯಲ್ಲಿರಿಸಿ, ನಿಮ್ಮ ಮನಸ್ಸು ಬೇರೆ ರೀತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಗಮನಿಸಿ.

ನೀವು ಆಸನಗಳನ್ನು ಮಾಡಿದಾಗ, ನಿಮ್ಮ ದೇಹ ಮತ್ತು ಮನಸ್ಸಿನ ಸ್ವರೂಪವನ್ನು ಪರಿಶೋಧಿಸುತ್ತೀರಿ.

ನೀವು ಒಂದು ಆಸನದ ಭಂಗಿಯಲ್ಲಿದ್ದು ಸರಿಯಾಗಿ ಉಸಿರಾಡುತ್ತಿದ್ದರೆ, ಮನಸ್ಸು ವಿವಿಧ ಹಂತಗಳ ಮೂಲಕ ಸಾಗುತ್ತದೆ. ಈ ಪರಿಶೋಧನೆಯು ಯೋಗದ ಅತ್ಯಂತ ಮೂಲಭೂತ ಅಂಶ. ಹಠಯೋಗವು ಉತ್ತುಂಗವಲ್ಲ, ಅದೊಂದು ಪೂರ್ವಸಿದ್ಧತೆ. ಪೂರ್ವಸಿದ್ಧತೆಯಿಲ್ಲದೆಯೇ ನೀವು ಉತ್ತುಂಗಕ್ಕೇರಲು ಪ್ರಯತ್ನಿಸಿದರೆ, ನೀವು ಕುಸಿದು ಬೀಳಬಹುದು. 80% ರಷ್ಟು ವ್ಯಕ್ತಿಗಳಿಗೆ, ಅವರು ಯಾವುದಾದರೊಂದು ರೀತಿಯ ದೈಹಿಕ ಪೂರ್ವಸಿದ್ಧತೆ ಮಾಡಿಕೊಳ್ಳದ ಹೊರತು ಯಾವುದೇ ರೀತಿಯ ಧ್ಯಾನವನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವರು ಕೂರುವ ರೀತಿ ಮತ್ತು ಅವರ ದೇಹವು ಚಲಿಸುವ ರೀತಿಯನ್ನು ನೋಡಿದರೆ, ಅವರೆಷ್ಟೇ ಪ್ರಯತ್ನಿಸಲಿ, ಅವರು ಧ್ಯಾನಾಸಕ್ತರಾಗಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಕಾಣುತ್ತದೆ.ಯಾವುದಾದರೊಂದು ರೀತಿಯ ದೈಹಿಕ ಪೂರ್ವಸಿದ್ಧತೆಯು ಅವಶ್ಯಕ - ಅಥವಾ ನಿಮ್ಮ ಮೆದುಳು ನಿಮ್ಮ ದೇಹದ ಹೊರಗಿದೆಯೇ?

ನಿಮ್ಮ ಕಿರುಬೆರಳಿಗೆ ಏನಾಗುತ್ತದೆಯೋ, ಅದು ನಿಮ್ಮ ಮೆದುಳಿಗೂ ಆಗುತ್ತದೆ. ನಿಮ್ಮ ಮೆದುಳಿಗೆ ಏನಾಗುತ್ತದೆಯೋ, ಅದು ನಿಮ್ಮ ಕಿರುಬೆರಳಿಗೂ ಆಗುತ್ತದೆ. ಅದು ಎರಡು ರೀತಿಯಲ್ಲೂ ಕೆಲಸ ಮಾಡುತ್ತದೆ. ಮೆದುಳು ಸ್ವತಃ ತಾನೇ ಒಂದು ಘಟಕವಲ್ಲ. ಮೃತದೇಹವನ್ನು ಕತ್ತರಿಸುವ ಮೂಲಕ ವೈದ್ಯರುಗಳು ದೇಹದ ಬಗ್ಗೆ ತಿಳಿದುಕೊಂಡಿದ್ದಾರೆ. ನೀವು ಮೃತ ದೇಹವನ್ನು ಕತ್ತರಿಸಿ, ಬೇರೆ ಬೇರೆ ಅಂಗಗಳನ್ನು  ಬೇರೆ ಬೇರೆ ಜಾಗದಲ್ಲಿಟ್ಟರೆ, ಅದು ಪ್ರತ್ಯೇಕವಾಗಿರುತ್ತವೆ. ಆದರೆ ನಿಮ್ಮ ದೇಹವಿರುವುದು ಹಾಗಲ್ಲ - ಅದೆಲ್ಲವೂ ಒಟ್ಟಿಗಿರುತ್ತವೆ. ತಾರತಮ್ಯ ಮಾಡುವ ಒಂದು ಚಿಕ್ಕ ಚಾಕುವಿಗಷ್ಟೇ ಅದು ಪ್ರತ್ಯೇಕ, ಆದರೆ ಒಂದು ಜೀವಂತ ಮಾನವನಲ್ಲಿ ಅದೆಲ್ಲವೂ ಒಟ್ಟಿಗಿರುತ್ತವೆ. ಅದಕ್ಕಾಗಿಯೇ ಯೋಗ ವ್ಯವಸ್ಥೆಯನ್ನು ಅದಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿರುವುದು.

ಒಂದು ಪ್ರಯೋಗ ಮಾಡಿ ನೋಡಿ, ನಿಮಗೆ ಇಷ್ಟವಿರುವ ವಿಷಯಗಳನ್ನು ವಿರೋಧಿಸಲು ಪ್ರಯತ್ನಿಸಿ. ಅವುಗಳು ನಿಮ್ಮೊಳಗೆ ಪ್ರಬಲವಾಗಿ ಅಭಿವ್ಯಕ್ತವಾಗುವುದನ್ನು ನೀವು ನೋಡುವಿರಿ. ನಿಮಗೆ ಏನಾದರು ಆಗಬೇಕಿದ್ದರೆ, ಅದಾಗದಂತೆ ಪ್ರಯತ್ನಿಸಿ. ಅದು ಖಂಡಿತವಾಗಿಯೂ ಆಗುತ್ತದೆ. ಏಕೆಂದರೆ ನೀವೆಂತಹ ಸ್ಥಿತಿಯಲ್ಲಿರುತ್ತೀರಿ ಎಂದರೆ, ನಿಮಗೆ ಫರ್ಸ್ಟ್ ಗೇರ್ ಹಾಕಬೇಕಿದ್ದರೂ, ಅದು ರಿವರ್ಸ್ ಗೇರ್-ಗೆ ಹೋಗುತ್ತದೆ. ಕೆಲಸಗಳನ್ನು ಮಾಡಲು ಅದು ಉತ್ತಮವಾದ ದಾರಿಯಲ್ಲ, ಆದರೆ ನೀವಿದನ್ನು ಅರ್ಥಮಾಡಿಕೊಳ್ಳಲು ಈ ತರಹದ ಒಂದು ಪ್ರಯೋಗವನ್ನು ಮಾಡಿ ನೋಡಬಹುದು - ನೀವು ಏನನ್ನಾದರೂ ವಿರೋಧಿಸಿದರೆ, ಅದೇ ಸಂಭವಿಸುತ್ತದೆ.

ನಿಮ್ಮ ಯೋಗ-ಸಾಧನೆಯನ್ನು ಮಾಡಿ – ಅದರ ಫಲಿತಾಂಶವನ್ನು ನೋಡಿ!

ನಾಳೆಯಿಂದ ಬೆಳಿಗ್ಗೆ ಐದು ಗಂಟೆಗೆ ಎದ್ದು, ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿ, ನಿಮ್ಮ ಸಾಧನೆಯನ್ನು 5:30 ಕ್ಕೆ ಪ್ರಾರಂಭಿಸಿ. ಕೆಲ ಸಮಯದ ನಂತರ, ನಿಮ್ಮ ಮನಸ್ಸಿನಲ್ಲಿ ನೀವು ಸಮಸ್ಯೆಯೆಂದುಕೊಂಡಿದ್ದ ಹಲವಾರು ಸಂಗತಿಗಳು ಇಲ್ಲವಾಗುತ್ತವೆ. ಒಂದು ಗಂಟೆಯ ಕಾಲ ಹಠಯೋಗವನ್ನು ಮಾಡಿ - ಅದು ಫಲಿತಾಂಶವನ್ನು ನೀಡುತ್ತದೆ. ಆದರೆ ಅದು ಹೇಗೆ ಕೆಲಸ ಮಾಡುತ್ತದೆ, ಅದರ ಕಾರ್ಯ ವೈಖರಿ ಮತ್ತು ಪ್ರಕ್ರಿಯೆಗಳೇನು ಎಂದು ಅರ್ಥ ಮಾಡಿಕೊಳ್ಳಬೇಕಿದ್ದರೆ, ಅದಕ್ಕೆ ತುಂಬಾ ಪರಿಶ್ರಮ ಮತ್ತು ಸಮಯ ಬೇಕಾಗುತ್ತದೆ. ಆದರೆ ಫಲಿತಾಂಶವನ್ನು ನೀಡಲು ಅಷ್ಟೇನೂ ಬೇಕಿರುವುದಿಲ್ಲ. ಅದನ್ನು ಫಲಕಾರಿಯಾಗಿ ಮಾಡುವುದೇನು, ಅದು ಏಕೆ ಹಾಗಾಗುತ್ತದೆ, ಏಕೆ ಒಂದು ನಿರ್ದಿಷ್ಟ ಆಸನ ನಿರ್ದಿಷ್ಟವಾದ ಪರಿಣಾಮವನ್ನು ನೀಡುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದ್ದರೆ, ಅದು ಇಡೀ ಜೀವಮಾನದ ಆಧ್ಯಯನವಾಗುತ್ತದೆ.

ತಂತ್ರಜ್ಞಾನದಿಂದ ಲಾಭ ಪಡೆಯ ಬಯಸುವವರು ಅದನ್ನು ಬಳಸಲು ಕಲಿಯಬೇಕಷ್ಟೆ. ತಂತ್ರಜ್ಞಾನದ ತಳಹದಿ ಮತ್ತು ಅದರ ಹಿಂದಿನ ವಿಜ್ಞಾನವನ್ನು ತಿಳಿದುಕೊಳ್ಳ ಬಯಸುವವರಿಗೆ, ಜನ್ಮಾಂತರಗಳ ಆಧ್ಯಯನ ಮಾಡಬೇಕಾಗುತ್ತದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಮೂರು ಜನ್ಮಗಳು ಬೇಕಾದವು. ನೀವು ನನ್ನ ಬಳಿಗೆ ಬಂದಿರುವುದರಿಂದ ನೀವು ಜಾಣರು ಎಂದು ನಾನು ಊಹಿಸುತ್ತೇನೆ. ಯಾವುದೇ ಮಾಧುರ್ಯವಿಲ್ಲ, ಸ್ವರ್ಗದ ಭರವಸೆ ಇಲ್ಲ, ಪವಾಡಗಳಿಲ್ಲ, ಒಂದು ಸಿಹಿ ಮಾತೂ ಇಲ್ಲ, ಅಪ್ಪುಗೆಯೂ ಇಲ್ಲ – ನಾನು ಹೀಗೆಲ್ಲ ಮಾಡಿಯೂ ನೀವಿಲ್ಲಿಯೇ ಇದ್ದೀರಿ. ಹಾಗಾಗಿ, ನೀವು ಜಾಣರೆಂದುಕೊಂಡರೆ, ಇದು ಒಂದು ಜೀವಿತಾವಧಿಯ ಕೆಲಸ.

ಸಂಪಾದಕರ ಟಿಪ್ಪಣಿ: ’ಈಶ ಹಠ ಯೋಗ’ - 21 ವಾರಗಳ ಹಠ ಯೋಗ ಶಿಕ್ಷಕ ತರಬೇತಿ ಕಾರ್ಯಕ್ರಮದ ಸದ್ಗುರು ಅವರ ಉಪನ್ಯಾಸದಿಂದ ವಿವರಿಸಲಾಗಿದೆ. ಈ ಕಾರ್ಯಕ್ರಮವು ಯೋಗದ ವ್ಯವಸ್ಥೆಯ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಹಠ ಯೋಗವನ್ನು ಕಲಿಸುವ ಪ್ರಾವೀಣ್ಯತೆಯನ್ನು ಪಡೆದುಕೊಳ್ಳಲು ಒಂದು ಸರಿಸಾಟಿಯಿಲ್ಲದ ಅವಕಾಶವನ್ನು ನೀಡುತ್ತದೆ. ಮುಂದಿನ 21 ವಾರಗಳ ಅವಧಿಯು ಜುಲೈ 16 ರಿಂದ ಡಿಸೆಂಬರ್ 11, 2019 ರವರೆಗೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ www.ishahathayoga.com ಅಥವಾ ಇ-ಮೇಲ್  info@ishahatayoga.com ಗೆ ಭೇಟಿ ನೀಡಿ.

ಡಿಸೆಂಬರ್ 2014 ರ ಫಾರೆಸ್ಟ್ ಫ್ಲವರ್ December 2014 issue of Forest Flower ಸಂಚಿಕೆಯಿಂದ ಈ ಲೇಖನವು ಆಧರಿಸಿದೆ. ನಿಮಗೆ ಬೇಕಾದುದನ್ನು ಮತ್ತು ಡೌನ್ಲೋಡ್ ಮಾಡಿ. (ಉಚಿತವಾದ ಪ್ರತಿಗೆ '0' ಅನ್ನು ನಮೂದಿಸಿ). ಮುದ್ರಣ ಚಂದಾದಾರಿಕೆಗಳು ಸಹ ಲಭ್ಯವಿವೆ Print subscriptions.