ತೀವ್ರವಾದ ಆಲೋಚನೆ ಮತ್ತು ಭಾವನೆಗಳನ್ನು ತಪ್ಪು ದಿಕ್ಕಿನಲ್ಲಿ ಹುಟ್ಟು ಹಾಕುವುದರಿಂದ ಅವು ನಮ್ಮ ವಿರುದ್ಧವಾಗಿ ಕೆಲಸ ಮಾಡುತ್ತವೆ. ಮಾನಸಿಕ ಖಿನ್ನತೆ ಉಂಟಾಗುವುದು ಇದರಿಂದ ಎಂದು ಸದ್ಗುರುಗಳು ಈ ವ್ಯಾಪಕ ಸಮಸ್ಯೆಯ ಮೇಲೆ ಇಲ್ಲಿ ಬೆಳಕು ಚೆಲ್ಲುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ರೀತಿಯ ಖಾಯಿಲೆಗಳಲ್ಲಿ ೭೦% ಖಾಯಿಲೆಗಳು ಸ್ವಯಂಕೃತವಾದವು ಎಂದವರು ಹೇಳುತ್ತಾರೆ.

ಸಪ್ಟೆಂಬರ್ ೨೦೧೦ ರಲ್ಲಿ ಈಶ ಯೋಗ ಕೇಂದ್ರ, ಕೊಯಮತ್ತೂರಿನಲ್ಲಿ ನಡೆದ ಸತ್ಸಂಗ.

ಲಿಪ್ಯಂತರ:

ನೀವು ನಿಮ್ಮನ್ನ ಖಿನ್ನತೆಗೆ ಒಳಪಡಿಸುವಷ್ಟು ಸಾಮರ್ಥ್ಯ ಹೊ೦ದಿದೀರಿ ಅ೦ತಾದ್ರೆ... ಈ ಮಾತನ್ನ ನಾನು, ನಿಮ್ಮ ಕಾಯಿಲೆ ಬಗ್ಗೆ ಯಾವುದೇ ಕಳಕಳಿ ಇಲ್ದೆ ಹೇಳ್ತಿಲ್ಲ. ಅಥ್ವಾ ಅನುಕ೦ಪಯಿಲ್ದೆ ಹೇಳ್ತಿಲ್ಲ. ನಿಮ್ ಜೊತೆ ಏನಾಗ್ತಿದ್ಯೋ ಅದ್ರ್ ಸ್ವರೂಪಾನೇ ಇದು. ನೀವು ನಿಮಗೆ ಖಿನ್ನತೆಯನ್ನ ಉಂಟುಮಾಡ್ಕೋತಿದ್ರೆ, ಅದ್ರರ್ಥ ನೀವು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ತೀವ್ರವಾದ ಭಾವನೆ ಮತ್ತು ಆಲೋಚನೆಗಳನ್ನ ನಿಮ್ಮೊಳಗೆ ಬೆಳೆಸ್ಕೊತಿದೀರ, ಆದರೆ ತಪ್ಪು ದಿಕ್ಕಿನಲ್ಲಿ.

ಯಾವುದ್ರ್ ಬಗ್ಗೆನಾದ್ರೂ ತೀವ್ರವಾದ ಭಾವನೆ ಮತ್ತು ಆಲೋಚನೆಯನ್ನ ನೀವು ಹೊಂದಿಲ್ದೇ ಇದ್ರೆ, ನೀವು ಖಿನ್ನತೆಗೆ ಒಳಗಾಗೋದು ಸಾಧ್ಯವಿಲ್ಲ. ವಿಷ್ಯ ಏನಂದ್ರೆ, ನೀವು ನಿಮ್ ವಿರುದ್ಧವಾಗಿ ಕೆಲ್ಸ ಮಾಡೋಂತ ಭಾವನೆ ಮತ್ತು ಆಲೋಚನೆಗಳನ್ನ ಹುಟ್ ಹಾಕ್ತಾ ಇದೀರ, ನಿಮ್ಗೋಸ್ಕರ ಕೆಲ್ಸ ಮಾಡೋಂತವ್ನ್ ಅಲ್ಲ. ಹಾಗಾಗಿ ನೀವು ನಿಮ್ಮನ್ನ ಖಿನ್ನತೆಗೆ ಒಳಪಡಿಸಿಕೊಳ್ಳುವಷ್ಟು ಸಮರ್ಥರಾಗಿದೀರಿ, ಮಾನಸಿಕ ಖಾಯಿಲೆಯನ್ನು ಉಂಟ್ ಮಾಡ್ಕೋತಾ ಇದೀರಿ. ಹುಟ್ಟಿನಿಂದ ಬರೋಂತ ತೊಂದ್ರೆಗಳನ್ ಬಿಡಿ, ಅದು ಸ್ವಲ್ಪ ಜನ್ರ್ ಅಷ್ಟೆ. ಉಳಿದವರು ತಾವೇ ಮಾಡ್ಕೊಂಡಿರೋದು. ಹೆಚ್ಚಿನವ್ರು ತಾವೇ ಮಾಡ್ಕೊಂಡಿರೋದು. ಕೆಲವ್ರಿಗ್ ಮಾತ್ರ ಹುಟ್ಟಿನಿಂದ ಬರೋಂತ ತೊಂದ್ರೆಗಳಿರುತ್ತೆ. ಅದಿಕ್ಕೆ ಏನೂ ಮಾಡಕಾಗಲ್ಲ. ಅದು ಅನುವಂಶೀಯತೆ ಮತ್ತಿತರ ಕಾರಣಗಳಿಂದ ಬರುತ್ತೆ.

ಈಗ ಇಲ್ಲಿರೋ ಹೆಚ್ಚಿನವ್ರಿಗೆ ನಾವು ಒಂದ್ ರೀತಿಯ ಆಲೋಚನೆ ಮತ್ತು ಭಾವನೆಗಳನ್ನ ಪ್ರಬಲಗೊಳ್ಸಿ, ಸ್ವಲ್ಪ ಹೊರ್ಗಡೆ ಸನ್ನಿವೇಶಗಳಿಂದ ಒತ್ತಡ ತಂದ್ರೆ, ಬಹುತೇಕ ಎಲ್ರೂ ಮಾನಸಿಕ ಸ್ಥಿಮಿತ ಕಳ್ಕೊಳ್ತಾರೆ, ವೈದ್ಯಕೀಯವಾಗಿ ಅಸ್ವಸ್ಥರಾಗ್ತಾರೆ. ಅವ್ರನ್ನ ಹುಚ್ಚರಾಗಿಸ್ಬಹುದು ಅಂತ ಹೇಳ್ತಿದೀನಿ. ಯಾಕಂದ್ರೆ ಸ್ವಸ್ಥ ಮತ್ತು ಅಸ್ವಸ್ಥ ಮನಸಿನ ನಡುವಿನ ಅ೦ತರ ಬಹಳ ತೆಳ್ಳನೆಯದು. ಜನ್ರು ಇದ್ರ್ ಅಂಚಿಗೆ ಬರ್ತಾನೇ ಇರ್ತಾರೆ.

ನೀವು ಕೋಪ ಮಾಡ್ಕೊಂಡಾಗ, ಈ ಗೆರೆಯಂಚಿಗೆ ಬರ್ತೀರ. ತೆಳ್ಳನೆಯ ಗೆರೆ ಅದು. ನಿಜ್ವಾಗಿ, ಕೋಪ ಮಾಡ್ಕೊ೦ಡಾಗ ನಿಮಿಗೆ ಗೊತ್ತು, ನೀವ್ ಗೆರೇನ ದಾಟ್ದಿದೀರಿ ಅ೦ತ. ಅದಿಕ್ಕೆ ಹೇಳೋದು, "ಅವನ್ ಮೇಲೆ ಹುಚ್ಚು ಕೋಪ ಬಂತು" ಅಂತ. ಈ ಹುಚ್ಚು ಬಂದಿರೋದು ಯಾರ ಮೇಲೋ ಅಲ್ಲ. ನಿಮಗ್ ಹುಚ್ಚು ಹಿಡೀತಿದೆ ಅಷ್ಟೆ. ಬೇರೆಯವ್ರ್ ಮೇಲೆ ಹುಚ್ಚರಾಗಕ್ಕಾಗಲ್ಲ. ನೀವು ಮಾನಸಿಕ ಸ್ವಾಸ್ಥ್ಯದ ಗೆರೆಯನ್ನ ದಾಟಿ ಅಸ್ವಸ್ಥತೆ ಕಡೆ ಹೋಗ್ತಾ ಇದೀರ, ಸ್ವಲ್ಪ ಕಾಲ ಹೋಗಿ ಹಿಂದಕ್ ಬರ್ತಾ ಇದೀರ. ಒಂದ್ ಕೆಲ್ಸ ಮಾಡಿ, ಪ್ರತಿದಿನ 10 ನಿಮಿಷ ತುಂಬ ಕೋಪ ಮಾಡ್ಕೊಳೋದಿಕೆ ಪ್ರಯತ್ನ ಮಾಡಿ, ಯಾರೋ ಒಬ್ರ್ ಮೇಲೆ. ಬರೀ ಮೂರ್ ತಿ೦ಗ್ಳ ಸಮಯದಲ್ಲಿ ನೀವು ಹುಚ್ಚಾರಾಗಿಬಿಡ್ತೀರಿ. ಹೌದು, ಬೇಕಾದ್ರೆ ಪ್ರಯತ್ನ ಮಾಡ್ನೋಡಿ. ಸದಾ ಹೀಗೆ ಗೆರೆ ದಾಟ್ತಿದ್ರೆ, ಹುಚ್ತನಕ್ಕೆ ಹೋಗೋದು ಬರೋದು ಹೋಗೋದು ಬರೋದು ಮಾಡ್ತಿದ್ರೆ, ಒ೦ದಿನ ವಾಪಸ್ ಬರಕ್ಕಾಗಲ್ಲ ಅಷ್ಟೆ. ಒ೦ದಿನ ವಾಪಸಾಗಕ್ಕಾಗಲ್ಲ. ಆಗ ನಿಮ್ಮನ್ನ ಹುಚ್ಚ ಅಂತ ಡಾಕ್ಟ್ರೇ ಕರೀತಾರೆ.

ಅರ್ಥ ಮಾಡ್ಕೊಳಿ, ನೀವು ಒ೦ದು ಕ್ಷಣ ಕೋಪ ಮಾಡ್ಕೊ೦ಡ್ರೂ, ನೀವಾವಾಗ್ಲೇ ಅಸ್ವಸ್ಥರಾಗ್ ಬಿಟ್ಟಿದೀರ. ನಿಮ್ಗೆ ಡಾಕ್ಟ್ರು certificate ಕೊಡ್ದೇ ಇರ್ಬಹುದು. ಅವ್ರ್ ನಿಮ್ಗೆ certificate ಕೊಡಲ್ಲ ಹುಚ್ ಹಿಡ್ದಿದೆ ಅಂತ. ಆದ್ರೆ ಹಿಡೀತಾ ಇದೆ, ಅಲ್ವ? ಕೂಗಾಡೋದು ನಿಮ್ ಹಕ್ಕು ಅಂತ ಅಂದ್ಕೊಂಡ್ ಬಿಟ್ಟೀದೀರ. ಬೇರೆಯವ್ರ್ ಮೇಲೆ ಕೋಪ ಮಾಡ್ಕೊಳೋದು ನಿಮ್ ಹಕ್ಕು ಅಂತ ಅಂದ್ಕೊಂಡ್ ಬಿಟ್ಟೀದೀರ. ಯಾರ್ದೋ ಗಮನ ಸೆಳೀಬೇಕು ಅ೦ತ ಖಿನ್ನರಾಗೋದು ನಿಮಗಿರೋ ವಿಶೇಷವಾದ ಸವಲತ್ತು ಅಂದ್ಕೊಂಡ್ ಬಿಟ್ಟೀದೀರ! ಹೀಗೆ ಆಟ ಆಡ್ತಾಯಿದ್ರೆ ಒ೦ದಿನ ನಿಮಿಗೆ ಅದ್ರಿ೦ದ ಹೊರಗ್ಬರಕ್ಕಾಗಲ್ಲ. ಪ್ರತಿದಿನ ಗೆರೆ ದಾಟ್ತಾನೆ ಇದ್ರೆ ಒ೦ದಿನ ನಿಮಗ್ ವಾಪಸ್ ಬರಕಾಗಲ್ಲ. ಅವತ್ತು ನಿಮ್ಗೆ doctor ನ ಸಹಾಯ ಬೇಕಾಗುತ್ತೆ.

ಅಲ್ಲಿವರ್ಗು ಎಲ್ರಿಗೂ ನಿಮ್ಮಿಂದ ತಪ್ಪಸ್ಕೊ೦ಡ್ರೆ ಸಾಕಾಗಿತ್ತು. ನಿಮಗ್ ವಾಪಸ್ ಬರಕಾಗ್ದೇ ಇದ್ದಾಗ ಅವ್ರಿಗೆ ಬಿಡುಗಡೆ ಸಿಗತ್ತೆ, ಯಾಕಂದ್ರೆ ಆಗ ನಿಮ್ಮನ್ ಹಿಡ್ದು doctor ಕೈಗ್ ಕೊಡ್ಬಹುದು. ಅಲ್ಲಿವರ್ಗು ತಾತ್ಕಾಲಿಕವಾಗಿ ಹುಚ್ರಾಗ್ತಾ ಇರ್ತೀರಿ, ಪ್ರತಿದಿನ, ಅದೆಷ್ಟೋ ಸಾರಿ. ಅವ್ರಿಗ್ ನಿಮ್ಮನ್ನ ಹುಚ್ಚಾಸ್ಪತ್ರೆಗ್ ಕಳ್ಸೋದಿಕ್ಕೂ ಆಗಲ್ಲ, ಸುಮ್ನೆ ಸಹಿಸ್ಕೋಬೇಕಾಗತ್ತೆ. ನಿಮ್ ಮನೆಯವ್ರು, ಸ್ನೇಹಿತ್ರು, ಅಕ್ಕಪಕ್ಕದವ್ರು. ನಿಜವಾಗ್ಲೂ ಹುಚ್ ಹಿಡ್ದ್ರೆ ನಿಮ್ಮನ್ನ ಆಸ್ಪತ್ರೇಲಿ ಬಿಟ್ ಬರ್ಬಹುದು.

ತಮಿಳ್ನಾಡ್ನಲ್ಲಿ ಒ೦ದ್ ದೇವಸ್ಥಾನ ಇದೆ, ಗೊತ್ತಿದಿಯ ನಿಮ್ಗೆ? ಅಲ್ಲಿ ಹುಚ್ಚರನ್ನ chain ಹಾಕಿ ಇಡ್ತಾರೆ. ಅಲ್ಲಿ ಆಸ್ಪತ್ರೆ ಇಲ್ಲ, ಮನೋರೋಗಕ್ಕೆ ಅಲ್ಲಿ ಆಸ್ಪತ್ರೆನೇ ಇಲ್ಲ. ಅಲ್ಲೊಂದ್ ದೇವಸ್ಥಾನ ಇದೆ ಯಾರೋ ಕಟ್ಟಿದ್ದು. ಅಲ್ಲಿದ್ರೆ ಹುಚ್ಚು ಬಿಟ್ ಹೋಗುತ್ತಂತೆ. ಕುಟುಂಬದವ್ರು ಹುಚ್ರನ್ನ ಅಲ್ಲಿಗ್ ಕರ್ಕೊ೦ಡ್ ಹೋಗಿ ಬಿಡ್ತಾರೆ. ಒ೦ದು chain ನಲ್ಲಿ ಕಟ್ ಹಾಕಿ ಅವ್ರ್ನ ದೇವಸ್ಥಾನ್ದಲ್ಲಿ ಬಿಡಲಾಗುತ್ತೆ. ಒ೦ದಷ್ಟು ಹಣ ಕೊಡ್ಬೇಕು ಊಟ ಹಾಕೋಕೆ. ಪ್ರಾಣಿಗಳ್ ತರ ಕಟ್ ಹಾಕಿರ್ತಾರೆ. ನನಗನ್ಸುತ್ತೆ hospital ಗಳು ಹೀಗಿದ್ದಿದ್ರೆ, ಬಹಳ ಜನಕ್ಕೆ ಹುಚ್ ಹಿಡೀತಿರ್ಲಿಲ್ಲ. ತಮ್ ಸ್ಥಿಮಿತವನ್ನ ಕಾಪಾಡ್ಕೊಳ್ತಿದ್ರು. ಈಗ hospitalಗಳು ತು೦ಬಾನೆ deluxe ಆಗ್ಬಿಟ್ಟಿವೆ. ನೀವು ಆಸ್ಪತ್ರೆಗಳನ್ನ ಜಾಸ್ತಿ ಆರಾಮ ಮಾಡ್ಬಿಟ್ರೆ ಖಾಯಿಲೆ ಬೀಳೋದಿಕ್ಕೆ ಅದು ಒಂದ್ ಪ್ರೋತ್ಸಾಹ್ನೆಯಾಗುತ್ತೆ. ಈಗಾಗ್ಲೇ ಪ್ರೋತ್ಸಾಹ್ನೆಗಳಿವೆ ಖಾಯಿಲೆ ಬೀಳೋದಿಕ್ಕೆ ನಿಮ್ ಜೀವನ್ದಲ್ಲಿ. ಚಿಕ್ಕಂದಿನಿಂದ್ಲೂ... ನಿಮಗೆ ಜಾಸ್ತಿ ಗಮನ ಸಿಕ್ಕಿದ್ದು ನೀವು ಖಾಯಿಲೆ ಬಿದ್ದಾಗ ಮಾತ್ರ. ನೀವು ಖುಶಿಯಾಗಿದ್ದಾಗ ಕೂಗಾಡ್ತಿದ್ರು. ನೀವು ಸಂತೋಷದಿಂದ ಬೊಬ್ಬೆ ಹೊಡ್ದಾಗ ಬೈದು ಬಾಯಿ ಮುಚ್ಚಿಸ್ತಿದ್ರು, ದೊಡ್ಡೋರು. ನೀವು

ಚಿಕ್ಕೋರಿದ್ದಾಗ ಹುಶಾರಿಲ್ದೆ ಇರೋದು ಚೆನ್ನಾಗಿರುತ್ತೆ, ಯಾಕ೦ದ್ರೆ, ಅಮ್ಮ, ಅಪ್ಪ ಎಲ್ರೂ ತು೦ಬ ಪ್ರೀತಿ ತೋರಿಸ್ತಾರೆ. ಮತ್ತೆ schoolಗೆ ಹೋಗೋದಿರಲ್ಲ. ಹೀಗೆ ನೀವು ಹುಶಾರ್ ತಪ್ಪೋ ಕಲೆಯನ್ನ ಕಲೀತಿರಿ. ಅದೇ ಮದುವೆ ಆದ್ಮೇಲೆ, ಮಾನಸಿಕವಾಗಿ ಹುಶಾರ್ ತಪ್ಪೋ ಕಲೆಯನ್ನ ಕಲೀತಿರಿ. ಯಾರ್ದಾದ್ರೂ ಗಮನ ಸೆಳೀಬೇಕು ಅಂದ್ರೆ, ಒ೦ದ್ ಮೂಲೇಲಿ ಕೂತು ಬೇಜಾರಾಗಿರೋ ಥರ ನಾಟ್ಕ ಮಾಡ್ತೀರಿ. ಜನ್ರು ಗಮನ ಕೊಡ್ತಾರೆ ನಿಮ್ಗೆ. ಇದೇ ಆಟ ಆಡ್ತಿದ್ರೆ ಒ೦ದಿನ ಅದ್ರಿ೦ದ ಹೊರಗ್ಬರಕ್ಕ್ ಆಗಲ್ಲ. ನಿಜ್ವಾಗ್ಲೂ ಹುಚ್ಚರಾಗ್ತೀರಿ.

ದುರದೃಷ್ಟ ಅ೦ದ್ರೆ, ಹಲವಾರು ರೀತಿಗಳಲ್ಲಿ, ನಾನೀಗ್ ಹೇಳಿದ್ ರೀತಿನಷ್ಟೆ ಅಲ್ಲ, ಹಲವಾರು ರೀತಿಗಳಲ್ಲಿ, ಭೂಮಿ ಮೇಲಿರೋ ಸುಮಾರು 70% ಕಾಯಿಲೆಗಳನ್ನ, ಎಲ್ಲಾ ರೀತಿಯವು, ನೀವೇ ಉಂಟ್ ಮಾಡ್ಕೊಂಡಿದೀರ. ನಿಮಗ್ Infection ಆದ್ರೂ ಕೂಡ, ನೀವು ನಿಮ್ ಶರೀರ ಹಾಗೂ ಮನಸ್ಸನ್ನ ಒ೦ದ್ ರೀತೀಲಿ ಇಟ್ಕೊ೦ಡ್ರೆ, virus bacteria ಗಳು ಬೇರೆಯವ್ರಷ್ಟು ನಿಮ್ ಮೇಲೆ ಪರಿಣಾಮ ಬೀರಲ್ಲ. ನೀವ್ ಹೇಗಿರ್ಬೇಕು ಅಂದ್ರೆ, "ಪರಿಸ್ಥಿತಿ ಏನೇ ಇರ್ಲಿ, ನಾನು ಇ೦ತ್ ಇ೦ತ ಕೆಲ್ಸಗಳನ್ನ ಮಾಡ್ಲೇಬೇಕು. ಅದನ್ ಬಿಡಕಾಗಲ್ಲ" ಕಳೆದ 29 ವರ್ಷಗಳಲ್ಲಿ, ನಾನು ನನ್ನ ಒಂದೇ ಒಂದು program ನೂ cancel ಮಾಡಿಲ್ಲ ಜ್ವರ, ನೆಗಡಿ, ಅದೂ ಇದೂ ಅ೦ತ್ ಹೇಳಿ. ಪರಿಸ್ಥಿತಿ ಏನೇ ಇರ್ಲಿ, ಮಾಡ್ಬೇಕಾಗಿರೋದನ್ನ ನೀವು ಮಾಡ್ಲೇ ಬೇಕು. ಅದಿಕ್ ಬೆನ್ ತೋರ್ಸಕಾಗಲ್ಲ. ಒಂದೋ ನಿಮಗೆ ಆ ತರದ್ commitment ಇರ್ಬೇಕು, ಇಲ್ಲಾಂದ್ರೆ ನಿಮ್ boss ಆ ತರ ಇರ್ಬೇಕು. ಹೇಗೋ ನೀವ್ ಈ ತರ ಆದ್ರೆ, ನೀವು ನೋಡ್ಬಹುದು, ನೀವ್ ಅಷ್ಟೊಂದ್ ಸಲ ಕಾಯಿಲೆ ಬೀಳಲ್ಲ. ಯಾಕ೦ದ್ರೆ ಮೈಬಿಸಿ ಇದ್ರೂ ಹೋಗ್ಬೇಕಾಗಿರುತ್ತೆ. ಹೊರ್ಗಡೆ ಬಿಸ್ಲಿದ್ರೂ ನೀವ್ ಹೋಗ್ತೀರ, ಅಲ್ವ?

ಇಲ್ಲ, ಬಹಳಷ್ಟು ಜನ ಹೋಗಲ್ಲ. ಸ್ವಲ್ಪ ಬಿಸ್ಲಿದ್ರೂ ಕೆಲ್ಸಕ್ ಹೋಗಲ್ಲ. ಸ್ವಲ್ಪ ಚಳಿಯಿದ್ರೂ ಕೆಲ್ಸಕ್ ಹೋಗಲ್ಲ. ಸ್ವಲ್ಪ ಮಳೆ - ಕೆಲ್ಸಕ್ ಹೋಗಲ್ಲ, ಸ್ವಲ್ಪ ಮ೦ಜ್ ಬಿತ್ತು - ಕೆಲ್ಸಕ್ ಹೋಗಲ್ಲ. ಇದು ಬರೀ ಹವಾಮಾನ ಅಷ್ಟೆ. ಹೀಗೆ ಪ್ರತಿ ಸರ್ತಿ ಹವಾಮಾನ ಬದ್ಲಾದಾಗ್ಲೆಲ್ಲ, ಬೆಚ್ಚಗೆ ಮಲ್ಕೊಂಡ್ ಬಿಟ್ರೆ ಕ೦ಬ್ಳಿ ಹೊದ್ಕೊ೦ಡು, ನೀವ್ ಹೀಗಾಗ್ಬಿಟ್ರೆ, ನಿಮ್ ದೇಹ ಕೂಡ ಕಾಯಿಲೆ ಬೀಳೋದನ್ನ ಕಲ್ತ್ ಕೊಳುತ್ತೆ, ಎಷ್ಟು ಸಾಧ್ಯವೋ ಅಷ್ಟು ಬಾರಿ. ಆದ್ರೆ ಪರಿಸ್ಥಿತಿ ಏನೇ ಇರ್ಲಿ, ನಾನ್ ಮಾಡ್ಬೇಕಾಗಿರೋದನ್ನ ಮಾಡ್ಲೇಬೇಕು -- ನೀವು ಈ ರೀತಿ ಆದ್ರೆ, ನಿಮ್ ಶರೀರ ಖಾಯಿಲೆಯಿಂದ ಆದಷ್ಟು ಬೇಗ ಚೇತರಿಸ್ಕೊಳ್ಳುತ್ತೆ. ಅದೆ೦ತ infection ಆಗಿದ್ರು ಕೂಡ.

ಆದ್ರಿ೦ದ, ನೀವು ಆರೋಗ್ಯಕ್ಕೆ ತಕ್ಕ ಪರಿಸ್ಥಿತಿಯನ್ನ ಮತ್ತು ಪ್ರೋತ್ಸಾಹ್ನೆಗಳನ್ನ ನಿರ್ಮಿಸ್ಬೇಕು, ನಿಮಗೆ ಮತ್ತು ನಿಮ್ ಮಕ್ಳಿಗೆ. ಖಾಯಿಲೆಗ್ ಪ್ರೋತ್ಸಾಹ್ನೆ ಕೊಡ್ಬೇಡಿ. ಮಗೂಗ್ ಹುಶಾರಿಲ್ಲ ಅಂದ್ರೆ, ದೂರದಿಂದ ಗಮನಿಸ್ತಾ ಇರಿ, ಹೋಗಿ ಮುದ್ದಾಡ್ಬೇಡಿ. ಮಗೂಗ್ ಗೊತ್ತು ಇದು ಕೆಟ್ ಸಮಯ, ಬೇಗ ಇದ್ರಿ೦ದ ಹೊರಗ್ ಬರ್ಬೇಕು ಅ೦ತ. ಅದೇ ಮಗು ಸ೦ತೋಷದಿ೦ದ್ ಇದ್ದಾಗ, ಅದರ್ ಕಡೆ ಹೆಚ್ಚು ಗಮನ ಕೂಡಿ. ಆಗ ಸಹಜವಾಗೇ ಅವ್ರ್ ಕಲೀತಾರೆ, ಅವ್ರ ರಾಸಾಯನಿಕ ವ್ಯವಸ್ಥೇನೇ ಕಲ್ತ್ ಬಿಡುತ್ತೆ, ಖುಶಿಯಾಗಿರೋದು ಒಳ್ಳೇದು, ಕಾಯಿಲೆಯಿಂದ ಏನೂ ಲಾಭ ಇಲ್ಲ ಅ೦ತ.

ನೀವಿದನ್ನ ನಿಮ್ದೇ ಜೈವಿಕ ವ್ಯವಸ್ಥೆಗೆ, ರಾಸಾಯನಿಕ ವ್ಯವಸ್ಥೆಗೆ, ನಿಮ್ ಸುತ್ಲಿರೋರ್ಗೆ ಸ್ಪಷ್ಟಪಡ್ಸಿದ್ರೆ, ಆವಾಗ್ ನೋಡಿ, ಜನ ಈಗಿರೋ ತರ ಪದೇ ಪದೇ ಕಾಯಿಲೆ ಬೀಳಲ್ಲ. ಇದನ್ನ ಅಭ್ಯಾಸ ಮಾಡ್ಕೊಳಿ, ಆರೋಗ್ಯವಾಗಿರ್ತೀರಿ. ಮನಸನ್ನ ಆ ರೀತಿ ತಿರುಗ್ಸೋಕಾಗುತ್ತೆ ಅ೦ದ್ಮೆಲೆ, ಅದನ್ನ ಈ ರೀತೀನೂ ತಿರುಗ್ಸ್ ಬಹುದು, ಅರ್ಥ ಮಾಡ್ಕೊಳಿ. "ಇಲ್ಲ, ನನಗ್ 7 ವರ್ಷ ಆಗಿದ್ದಾಗ ನಮ್ ಅಪ್ಪ ತು೦ಬ ಬೈತಾ ಇದ್ರು, ಅದಿಕ್ಕೆ ಹೀಗಿದೀನಿ" ನಿಮಗ್ ಇಷ್ಟೆಲ್ಲ ಗೊತ್ತಿದ್ರೆ, ನಿಮ್ ಮನ್ಸನ್ನ ಅದ್ರಿಂದ ಹೊರಗ್ ತರ್ಬಹುದು ತಾನೆ? ಆ ಸಮಯ ಬಂದಿದೆ. ನೀವು ಅರ್ಥ ಮಾಡ್ಕೋಬೇಕು - ಮಾನಸಿಕ, ದೈಹಿಕ, ರಾಸಾಯನಿಕ, ಪ್ರಾಣಶಕ್ತಿಯ ಹಂತಗಳಲ್ಲಿ ನಿಮ್ಗೆ ಸ್ಪಷ್ಟವಾಗಿ ಅರ್ಥ ಆಗ್ಬೇಕು - ಖಾಯಿಲೆಯಿಂದ, ದುಃಖದಿಂದ, ಖಿನ್ನತೆಯಿಂದ ಲಾಭ ಇಲ್ಲ. ಸಂತೋಷ ಆನ೦ದದಿ೦ದಷ್ಟೆ ಲಾಭ. ನೀವಿದನ್ನ ನಿಮ್ಮೊಳಗಿನ ಈ ಎಲ್ಲ ವಿಷಯಗಳಿಗೆ ಸ್ಪಷ್ಟ ಪಡ್ಸಿದ್ರೆ, ಅವೆಲ್ಲ ಸರಿಯಾಗಿ ಕೆಲ್ಸ ಮಾಡುತ್ವೆ.